ಪತ್ನಿಯ ಶವ ನೋಡುತ್ತಾ ಒಂದು ವಾರ ಕಳೆದಿದ್ದ


ಪತ್ನಿ ಕುಳಿತಲ್ಲೇ ಜೀವ ಬಿಟ್ಟಿದ್ದರೂ ಹಾಸಿಗೆಯಲ್ಲಿ ಮಲಗಿದ್ದ ಪತಿಗೆ ಮೇಲೇಳಲಾಗಲಿಲ್ಲ. ಹೊರ ಜಗತ್ತಿಗೆ ಪತ್ನಿಯ ಸಾವಿನ ಸುದ್ದಿಯನ್ನು ಕೂಗಿ ಹೇಳಲಾಗಲಿಲ್ಲ. ವಾರದಿಂದ ಅನ್ನವಿಲ್ಲ, ನೀರಿಲ್ಲ. ಸುತ್ತಮುತ್ತಲ ಜನ ಏನಾಯಿತೆಂದು ಕುತೂಹಲಕ್ಕೂ ಮಾತನಾಡಿಕೊಳ್ಳಲಿಲ್ಲ. ಅಕ್ಕ ಪಕ್ಕದವರಿಗೆ, ಕೊನೆಯ ಪಕ್ಷ ನಾಲ್ಕು ಜನ ನಿಲ್ಲುವ ಅಂಗಡಿಯವರಿಗೆ ವಾರದಿಂದ ಮನೆಯೊಂದರ ಬಾಗಿಲು ತೆರೆದಿಲ್ಲ ಎಂಬುದು ಗಮನಕ್ಕೆ ಬರಲಿಲ್ಲ. ಇದು ನಮ್ಮ ಸುತ್ತಲಿನ ಸಮಾಜದಲ್ಲಿ ಮರೆಯಾಗುತ್ತಿರುವ ಮಾನವೀಯತೆಗೆ ಹಿಡಿದ ಕನ್ನಡಿ ಎನ್ನಬಹುದು.
ಇಂತಹ ಹೃದಯವಿದ್ರಾವಕ ಘಟನೆ ನಡೆದದ್ದು ಕಾರವಾರ ನಗರದ ನ್ಯೂ ಕೆಎಚ್‌ಬಿ ಕಾಲೋನಿಯಲ್ಲಿ. ಕೆಎಚ್‌ಬಿ ಕಾಲೋನಿಯಲ್ಲಿರುವ ಸ್ವಂತ ಮನೆಯಲ್ಲಿ ಆನಂದ್ ಮತ್ತು ಗಿರಿಜಾ ದಂಪತಿ ವಾಸವಿದ್ದರು. ಹೊನ್ನಾವರದ ನಗರೆ ಗ್ರಾಮದ ಗಿರಿಜಾರನ್ನು ಚಿತ್ತಾಕುಲ ಕಣಸಗೇರಿಯ ಆನಂದ್ ಮಡಿವಾಳಗೆ ಮೂರು ದಶಕಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಮಧ್ಯೆ, ಈಚೆಗೆ ಪತಿ ಆನಂದ್, ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದ. ಬಳಿಕ, ಮನೆ ಗೆಲಸ ಮಾಡಿ ಪತಿಯನ್ನು ಸಾಕುತ್ತಿದ್ದಳು ಗಿರಿಜಾ.
ಅದೇನಾಯಿತೋ ಗೊತ್ತಿಲ್ಲ, ವಾರದಿಂದ ಗಿರಿಜಾ ಸಹ ಮನೆಯಿಂದ ಹೊರ ಬಂದಿರಲಿಲ್ಲ. ಮನೆ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಮನೆ ಮಾಲಿಕರು ಕರೆ ಮಾಡಿದರು. ಆಕೆಯ ಮೊಬೈಲ್ ರಿಂಗಾಗುತ್ತಿತ್ತು. ಎತ್ತುತ್ತಿರಲಿಲ್ಲ. ಕಾರಣ, ಮೊಬೈಲ್ ಎತ್ತಲು ಗಿರಿಜಾ ಬದುಕಿರಲಿಲ್ಲ. ಪತಿ ಆನಂದ್‌ಗೆ ಮೊಬೈಲ್ ಸದ್ದು ಕೇಳಿಸುತ್ತಿತ್ತು. ಆದರೆ, ಮೊಬೈಲ್ ಕರೆಗೆ ಪ್ರತಿಕ್ರಿಯಿಸುವಷ್ಟು ಶಕ್ತಿ ಇರಲಿಲ್ಲ. ಹಾಗಾಗಿ, ಹೊರ ಜಗತ್ತಿಗೆ ಆ ಮನೆಯಲ್ಲಿನ ಸಂಗತಿಗಳು ಗೊತ್ತಾಗಲೇ ಇಲ್ಲ.
ಪತಿಯ ಆರೈಕೆಯಲ್ಲಿ ನಿರತರಾಗಿದ್ದ ಗಿರಿಜಾ, ಪತಿ ಮಲಗಿದ್ದ ಮಂಚದ ಪಕ್ಕದಲ್ಲಿ ಖುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಳು. ಗಿರಿಜಾ ಸಾವನ್ನಪ್ಪಿ ಸರಿಸುಮಾರು ವಾರ ಕಳೆದಿತ್ತು. ಗಿರಿಜಾಳ ಸಹೋದರ ಹೊನ್ನಾವರದ ನಗರೆ ಗ್ರಾಮದ ಸುಬ್ರಮಣ್ಯ ಮಡಿವಾಳ, ವಾರದ ಹಿಂದೆ ಕರೆ ಮಾಡಿದ್ದ. ಪೋನ್ ಕರೆ ಸ್ವೀಕರಿಸಿರಲಿಲ್ಲ. ನಂತರ ಎರಡು-ಮೂರು ಬಾರಿ ಕರೆ ಮಾಡಿದ, ಪೋನ್ ಸ್ವಿಚ್‌ಆ್ ಇತ್ತು. ಭಾನುವಾರ ನೇರವಾಗಿ ಸಹೋದರಿಯ ಮನೆಗೆ ಬಂದ. ಮನೆಯ ಕದ ಬಡಿದ. ಮನೆಯ ಬಾಗಿಲು ತೆರೆಯಲಿಲ್ಲ. ಒಳಗಿನಿಂದ ಸದ್ದೂ ಕೇಳಿ ಬರಲಿಲ್ಲ. ಮನೆಯ ಮೇಲಕ್ಕೆ ಹತ್ತಿ, ತಗಡು ಸರಿಸಿ ನೋಡಿದ. ಮನೆಯಲ್ಲಿ ಸಾವಾಗಿದೆ ಎಂಬ ಅನುಮಾನ ಬಂತು. ಪೊಲೀಸರಿಗೆ ಸುದ್ದಿ ಮುಟ್ಟಿಸಿದ. ಪೊಲೀಸರು ಬಂದರು. ಮನೆಯ ಬಾಗಿಲನ್ನು ಒಡೆದು ತೆಗೆದರು.

ಸಹೋದರಿ, ಗಿರಿಜಾ ಸಾವನ್ನಪ್ಪಿ ವಾರ ಮೀರಿತ್ತು. ಹಾಸಿಗೆ ಹಿಡಿದಿದ್ದ ಪತಿಯ ಪಕ್ಕದಲ್ಲೇ ಆಕೆ ಶವವಾಗಿದ್ದಳು. ಪತಿ ಆನಂದ್, ಅರೆಪ್ರಜ್ಞಾವಸ್ಥೆಯಲ್ಲಿದ್ದ. ಗಿರಿಜಾಳ ಮೃತದೇಹ ಕೊಳೆತು ಹೋಗಿತ್ತು. ಆಹಾರ-ನೀರು ಇಲ್ಲದೇ ಹಾಸಿಗೆಯಲ್ಲೇ ಮಲಗಿದ್ದ ಆನಂದ್ ಕಣಜಗೇರಿಯನ್ನು ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಪೊಲೀಸರು ದಾಖಲಿಸಿದರು.