ತೂಗುಸೇತುವೆ ತೂಗುತಿದೆ, ನೋಡು ಬಾರಾ


ಅಘನಾಶಿನಿ ನದಿಯ ಒಂದು ನೋಟ

     ಒಂದು ಕಾಲದಲ್ಲಿ ತೆಪ್ಪದಲ್ಲಿ ಹೊಳೆದಾಟಿ ಹೋಗಿ ಕುಂಬ್ರಿ ಕೃಷಿ ಮಾಡಿ ಜೀವನ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲೂಕಿನ ಸೊಪ್ಪಿನ ಹೊಸಳ್ಳಿ ಪಕ್ಕದ ಬಂಗಣೆ ಗ್ರಾಮಕ್ಕೆ ಇದೀಗ ಹೊಸತೊಂದು ತೂಗುಸೇತುವೆ ನಿರ್ಮಾಣವಾಗಿದೆ.
ಜಿಲ್ಲೆಯ ಕರಾವಳಿಯಲ್ಲಿ ಅತಿದೊಡ್ಡದು ಎಂಬ ಹೆಗ್ಗಳಿಕೆಯ ಸದೃಢ ತೂಗು ಸೇತುವೆ ಹಳ್ಳಿಗರ ಜೀವನ ಶೈಲಿಗೆ ಪೂರಕವಾಗುವಂತೆ ಬಳಕೆಗೆ ಸಜ್ಜಾಗಿದೆ. ಕುಮಟಾ- ಸಿದ್ದಾಪುರ ಮಾರ್ಗದ ಸಂತೇಗುಳಿಯಿಂದ 9 ಕಿಮೀ ದೂರದ ಮಾಸ್ತಿಕಟ್ಟೆ ದೇವಾಲಯದಿಂದ ಬಂಗಣೆ ಕ್ರಾಸ್‌ನಲ್ಲಿ ಒಳ ಸರಿದರೆ ಹೊಸ ತೂಗು ಸೇತುವೆ ಕಾಣುತ್ತದೆ. ಕನಿಷ್ಟವೆಂದರೂ 200 ಮೀಟರುಗಳಷ್ಟು ಉದ್ದದ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ.
     ಆದರೆ ಹೊಳೆಯ ಮಧ್ಯ ನಿಂತು ಕುಣಿದರೂ ಭಯಹುಟ್ಟಿಸದಂತೆ ಭದ್ರವಾಗಿ ನಿರ್ಮಿಸಿದ್ದು ವಿಶೇಷ. ಚಿಕ್ಕ ಮಕ್ಕಳು ಕೂಡಾ ಸುರಕ್ಷಿತವಾಗಿ ನಡೆದುಕೊಂಡು ಹೊಳೆ ದಾಟಬಹುದು. ಬೈಕ್‌ಗಳನ್ನು ಕೂಡಾ ಸಾಗಿಸಬಹುದು. ಈ ತೂಗುಸೇತುವೆಗಾಗಿ 10 ವರ್ಷದ ಹಿಂದೆಯೇ ಹೊಳೆಯ ಎರಡೂ ಬದಿಗಳಲ್ಲಿ ಕಂಬಗಳನ್ನು ನಿರ್ಮಿಸಲಾಗಿತ್ತು. ಅಂದು ಸ್ಥಳೀಯ ಮುಖಂಡ ಮದನ ನಾಯಕ ನೇತೃತ್ವದಲ್ಲಿ ಜನರಿಂದಲೂ ಒಂದಷ್ಟು ದೇಣಿಗೆ ಸೇರಿಸಿ, ಕೈಯಿಂದಲೂ ಲಕ್ಷಾಂತರ ಹಣ ಹಾಕಿ ತೂಗು ಸೇತುವೆಯ ಕನಸು ಕಂಡಿದ್ದರು. ಆದರೆ ನಿರೀಕ್ಷೆಗೆ ಮೀರಿದ ವೆಚ್ಚದಿಂದಾಗಿ ಸ್ಥಳೀಯ ಹಣದ ಮೂಲದಿಂದ ಇಷ್ಟು ದೊಡ್ಡ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗದೇ ನೆನೆಗುದಿಗೆ ಬಿದ್ದಿತ್ತು.
     2004 ರಲ್ಲಿ ಸಂತೇಗುಳಿ ಬಳಿ ನಿಲ್ಕುಂದ ರಸ್ತೆಯಲ್ಲಿ ಮೊರಸೆಯಲ್ಲಿ ಅಘನಾಶಿನಿ ನದಿಗೆ ದೊಡ್ಡ ಸೇತುವೆ ನಿರ್ಮಾಣವಾಗಿತ್ತು. ಕಣ್ಣಳತೆಯಲ್ಲಿ ಹೊಳೆಯಾಚೆ ಕಾಣುವ ಸಿದ್ದಾಪುರ ರಸ್ತೆಗೆ ಬರಬೇಕಾದರೆ ಸಂತೇಗುಳಿ ಬಳಿಯ ಸೇತುವೆಯ ಮೇಲಿಂದ ಹತ್ತಾರು ಕಿ.ಮೀ. ಸುತ್ತುಬಳಸಿ ಬರಬೇಕಿತ್ತು. ಬಂಗಣೆ ಭಾಗದವರಿಗೆ ಪ್ರತ್ಯೇಕ ತೂಗು ಸೇತುವೆಯ ಅಗತ್ಯ ಮೊದಲಿಗಿಂತ ಹೆಚ್ಚಾಯಿತು.
ಇದೆಲ್ಲವನ್ನು ಮನಗಂಡು ಮೊದಲಿದ್ದ ತೂಗು ಸೇತುವೆಯ ಯೋಜನೆಯನ್ನು ಜನ ಕೈಬಿಡಲಿಲ್ಲ. ಸ್ಥಳೀಯ ಮುಖಂಡರ, ಜನಪ್ರತಿನಿಧಿಗಳ, ಅಧಿಕಾರಿಗಳೆಲ್ಲರ ನಿರಂತರ ಪ್ರಯತ್ನದಿಂದ ಬಂಗಣೆಯ ತೂಗು ಸೇತುವೆಯ ಕೆಲಸ ಪೂರ್ಣಗೊಂಡಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗಾದ ವಿಶೇಷ ಯೋಜನೆಯಡಿ ಅನುದಾನ ಪಡೆದು ಉತ್ತಮ ತಾಂತ್ರಿಕತೆಯೊಂದಿಗೆ ಕಾಳಿ ನಿರ್ಮಿತಿಯವರ ಮಾರ್ಗದರ್ಶನದಲ್ಲಿ ಸೇತುವೆಯನ್ನು ಸಿದ್ಧಪಡಿಸಲಾಗಿದೆ.
     ಬಂಗಣೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ ನೂರಕ್ಕೂ ಹೆಚ್ಚು ಕುಂಬ್ರಿ ಮರಾಠಿ ಕುಟುಂಬಗಳಿವೆ. ಒಂದು ಬೆಂಕಿಪೆಟ್ಟಿಗೆ, ಬ್ಲೇಡು ಬೇಕಾಗಿದ್ದರೂ ಹೊಳೆ ದಾಟದೇ ವಿಧಿಯಿರಲಿಲ್ಲ. ಕುಮಟಾ, ಹೊನ್ನಾವರ ಅಥವಾ ಸಿದ್ದಾಪುರದೆಡೆಗೆ ಹೋದವರು ರಾತ್ರಿಯಾದರೆ ಹೊಳೆ ದಾಟುವುದೇ ದೊಡ್ಡ ಸಮಸ್ಯೆಯಾಗಿತ್ತು. ಎಷ್ಟೋ ದಿನ ಹೊಳೆಯಾಚೆಯ ಮಾಸ್ತಿ ಮಂದಿರದಲ್ಲೇ ಬೆಳಗು ಮಾಡಿ ನಂತರ ಮನೆಗೆ ಬಂದಿದ್ದಿದೆ. ಹೆಂಗಸರು ಮಕ್ಕಳಿಗೆ ತೀರಾ ಸಮಸ್ಯೆಯಾಗಿತ್ತು.
     ಈ ಮಧ್ಯೆ, ಪಕ್ಕದ ಬೆಣ್ಣೆ ಹೊಳೆ ಚಿಕ್ಕದಾದರೂ ತೀರಾ ಅಪಾಯಕಾರಿ, ಬೆಣ್ಣೆ ಹೊಳೆಯಾಚೆಗೆ ಮೊರಸೆ ಎಂಬ ಇನ್ನೊಂದು ಕುಗ್ರಾಮ ಇದೆ. ಇಲ್ಲಿಯ ಜನತೆ ಅಘನಾಶಿನಿ ನದಿಯನ್ನು ದಾಟಿ, ಬೆಣ್ಣೆ ಹೊಳೆಯನ್ನೂ ದಾಟಬೇಕಾಗುತ್ತದೆ ಆದ್ದರಿಂದ ಮತ್ತೂಂದು ತೂಗು ಸೇತುವೆ ಅತ್ಯಗತ್ಯವಿದೆ.


ಭೂ ವ್ಯವಹಾರದ ವೇಳೆ ಕಾನೂನಿನ ಅರಿವಿರಲಿ


     ನೀವು ಯಾವುದಾದರೂ ಭೂಮಿ ಅಥವಾ ಅಪಾರ್ಟ್‌ಮೆಂಟ್ ಕೊಳ್ಳಲು ಮುಂದಾದರೆ, ರಿಯಲ್ ಎಸ್ಟೇಟ್ ಏಜೆಂಟರು ನಿಮಗೆ ಪವರ್ ಆಫ್ ಅಟಾರ್ನಿ ಮಾಡಿಸಿಕೊಳ್ಳಲು ಸಲಹೆ ನೀಡಬಹುದು. ಅದರ ಬಗೆಗಿನ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿ ನಿಮ್ಮ ಹಾದಿ ತಪ್ಪಿಸಬಹುದು. ಅವರ ಮಾತು ಕೇಳಿ ನೀವು ಇದೇ ಸರಿ ಎಂದು ತಲೆಯಾಡಿಸಲೂಬಹುದು. ಆ ಮೂಲಕ ನೀವು ತೋಡಿಕೊಂಡ ಬಾವಿಗೆ ನೀವೇ ಬೀಳುವ ಸ್ಥಿತಿಯನ್ನು ತಂದುಕೊಳ್ಳಬಹುದು. ಕಾನೂನಿನ ಬಗ್ಗೆ ಅರಿವಿಲ್ಲದ ನೀವು ಕಾನೂನು ಬಾಹಿರವಾಗಿ ಇವುಗಳನ್ನು ಖರೀದಿಸಿ, ಮುಂದೆ ತೊಂದರೆ ಎದುರಿಸಬಹುದು. ಭೂಮಿ ಅಥವಾ ಅಪಾರ್ಟ್‌ಮೆಂಟ್ ಮೇಲೆ ನಿಮ್ಮ ಪ್ರಭುತ್ವ ಸ್ಥಾಪಿಸಲು ಹಿಂದಿನ ಬಾಗಿಲ ದಾರಿ ಹಿಡಿಯುವ ಮೂಲಕ ಅಪಾಯಕ್ಕೆ ನಿಮ್ಮನ್ನು ಒಡ್ಡಿಕೊಳ್ಳಬಹುದು.
     ಪವರ್ ಆಫ್ ಅಟಾರ್ನಿ, ನಿಮ್ಮ ಪರವಾಗಿ ಬೇರೊಂದು ವ್ಯಕ್ತಿಗೆ ವ್ಯವಹಾರ ನಡೆಸಲು ನೀಡುವ ಕಾನೂನುಬದ್ಧ ಅಧಿಕಾರ. ಸಮರ್ಪಕ ಪರಿಭಾಷೆ ಬಳಸಿ, ಉದ್ದೇಶ ಹಾಗೂ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ನಮೂದಿಸಿ, ನಿಮ್ಮ ಪರವಾಗಿ ವ್ಯವಹಾರ ನಡೆಸಲು ನಾಮಕರಣಗೊಂಡ ವ್ಯಕ್ತಿಗೆ ನೀವು ನೀಡುವ ಕಾನೂನು ಬದ್ಧ ದಾಖಲೆಯಿದು. ಹೀಗೆ ನಾಮಕರಣಗೊಂಡ ವ್ಯಕ್ತಿ ನಿಮ್ಮ ಪರವಾಗಿ ಎಲ್ಲಾ ರೀತಿಯ ವ್ಯವಹಾರ ನಿರ್ವಹಿಸುತ್ತಾನೆ.
     ಈ ದಾಖಲೆಗೆ ಪ್ರಮಾಣೀಕೃತ ನೋಟರಿಯ ವಕೀಲರು ಸಹಿ ಮಾಡಬೇಕಾಗುತ್ತದೆ. ನಾಮಕರಣಗೊಂಡ ವ್ಯಕ್ತಿ ನಿಮ್ಮ ಪರವಾಗಿ ಕೆಲಸ ನಿರ್ವಹಿಸಲು ನೀವು ಕಾನೂನುಬದ್ಧವಾಗಿ ಒಪ್ಪಿಗೆ ನೀಡಿದ್ದೀರಿ ಎಂದು ವಕೀಲರು ಪ್ರಮಾಣೀಕರಿಸಬೇಕಾಗುತ್ತದೆ. ಅದಕ್ಕೆ ಅಗತ್ಯವಿರುವಷ್ಟು ಮುಖಬೆಲೆಯ ಸ್ಟಾಂಪ್ ಲಗತ್ತಿಸಬೇಕಾಗುತ್ತದೆ. ಈ ವೇಳೆ ನಿಮ್ಮ ಅಧಿಕೃತ ಗುರುತು ಪತ್ರವನ್ನು ಅವರ ಮುಂದೆ ಹಾಜರುಪಡಿಸಬೇಕಾಗುತ್ತದೆ.
     ದೇಶದ ಹಲವು ಕಡೆ ಮಾರ್ಪಡಿಸಲಾಗದ ಪವರ್ ಆಫ್ ಅಟಾರ್ನಿ ಮೂಲಕವೇ ಆಸ್ತಿಗಳ ಮಾರಾಟ/ಖರೀದಿ ವ್ಯವಹಾರ ನಡೆಯುತ್ತದೆ. ಆಸ್ತಿಯನ್ನು ಖರೀದಿ ಮಾಡಿದ ವ್ಯಕ್ತಿಗೆ ಮಾರಾಟಗಾರ ಆಸ್ತಿಯ ಸಂಪೂರ್ಣ ಹಕ್ಕನ್ನು ವರ್ಗಾಯಿಸುತ್ತಾನೆ. ನಂತರದಲ್ಲಿ ವಿಲ್ ಮೂಲಕ ಖರೀದಿದಾರನಿಗೆ ಹಕ್ಕುಸ್ವಾಮ್ಯ ವರ್ಗಾಯಿಸಲಾಗುತ್ತದೆ.
ಪವರ್ ಆಫ್ ಅಟಾರ್ನಿ ಕಾರ್ಯ ವಿಧಾನ ಬಹಳ ಸುಲಭ ಹಾಗೂ ವೆಚ್ಚದಾಯಕವಲ್ಲ. ಇದು ಆತನಿಗೆ/ಆಕೆಗೆ ನಿಮ್ಮ ಆಸ್ತಿಯ ಮೇಲೆ ಕಾನೂನಿನ ಅಧಿಕಾರ ನೀಡುವುದಿಲ್ಲ. ಆತ/ಆಕೆ ತನ್ನ ಸ್ವಂತಕ್ಕೆ ನಿಮ್ಮ ಆಸ್ತಿಯನ್ನು ಬಳಸಿಕೊಳ್ಳುವಂತಿಲ್ಲ. ಬದಲಾಗಿ, ನಿಮ್ಮ ಅನುಕೂಲಕ್ಕಾಗಿಯೇ ಬಳಸಿಕೊಳ್ಳಬೇಕು. ಅಲ್ಲದೆ, ನಿಮ್ಮ ಜೀವಿತಾವಧಿಯ ನಂತರ ನಿಮ್ಮ ಆಸ್ತಿ ಕೈತಪ್ಪಿ ಹೋಗುವ ಅಪಾಯವಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಜನ ಪವರ್ ಆಫ್ ಅಟಾರ್ನಿ ಮೊರೆ ಹೋಗುತ್ತಾರೆ.
     ಆದರೆ, ಪವರ್ ಆಫ್ ಅಟಾರ್ನಿ ಮೂಲಕ ಮಾಡಲಾದ ಭೂ ಖರೀದಿ ಹಾಗೂ ಮಾರಾಟ ಊರ್ಜಿತವಲ್ಲ. ಇದನ್ನು ನ್ಯಾಯಾಲಯವೇ ಸ್ಪಷ್ಟಪಡಿಸಿದೆ. "ಜನರಲ್ ಪವರ್ ಆಫ್ ಅಟಾರ್ನಿ" ಮೂಲಕ ನಡೆಸಲಾಗುವ ವಿಕ್ರಯ ವ್ಯವಹಾರಗಳು ಕಾನೂನು ಸಿಂಧುವಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಸಾಕಷ್ಟು ಮೌಲ್ಯದ ಸ್ಟಾಂಪ್‌ಗಳನ್ನು ಲಗತ್ತಿಸಿ, ಕಾನೂನು ಪ್ರಕಾರ ನೋಂದಣಿ ಮಾಡಲಾದ ಚಿರಾಸ್ತಿಯ ಮಾರಾಟ ಪ್ರಕ್ರಿಯೆ ಮಾತ್ರ ಊರ್ಜಿತ ಎಂದಿದೆ. ಇದರಿಂದಾಗಿಯೇ ಬ್ಯಾಂಕ್‌ಗಳು ಸಾಲ ನೀಡುವಾಗ ಪವರ್ ಆಫ್ ಅಟಾರ್ನಿ ಮೂಲಕ ಮಾಡಲಾದ ವ್ಯವಹಾರವನ್ನು ಮಾನ್ಯ ಮಾಡುವುದಿಲ್ಲ. ಹಾಗಾಗಿ, ಕಾನೂನಿನ ಅರಿವಿರುವವರು ಪವರ್ ಆಫ್ ಅಟಾರ್ನಿ ಮೂಲಕ ವ್ಯವಹಾರ ನಡೆಸಲು ಹಿಂದೇಟು ಹಾಕುತ್ತಾರೆ.
ಅಜ್ಞಾನಕ್ಕೆ ಕಾನೂನು ರಿಯಾಯಿತಿಯಿಲ್ಲ 
ಸಾಧಾರಣವಾಗಿ, ರಿಯಲ್ ಎಸ್ಟೇಟ್ ಏಜೆಂಟರು ಈಗಲೂ ಭೂ ಖರೀದಿ ಅಥವಾ ಅಪಾರ್ಟ್‌ಮೆಂಟ್‌ಗಳ ಮಾರಾಟದ ವೇಳೆ ೧೦ ರೂ. ಮುಖಬೆಲೆಯ ಸ್ಟಾಂಪ್ ಪೇಪರ್ ಅಥವಾ ಇನ್ನೊಂದು ಸ್ಟಾಂಪ್ ಪೇಪರ್ ಮೇಲೆ ಪವರ್ ಆಫ್ ಅಟಾರ್ನಿ ಮೂಲಕ ವ್ಯವಹಾರ ನಡೆಸುತ್ತಾರೆ. ಕಾನೂನು ಅರಿಯದ ಮುಗ್ಧ ನಾಗರಿಕರು ಈ ಬಗ್ಗೆ ಏನು ಮಾಡಬೇಕೆಂಬುದನ್ನು ತಿಳಿದಿರುವುದಿಲ್ಲ. ಆದರೆ, ಅಜ್ಞಾನಕ್ಕೆ ಕಾನೂನಿನಲ್ಲಿ ರಿಯಾಯಿತಿಯಿಲ್ಲ ಈ ಸಂಗತಿ ನಿಮಗೆ ನೆನಪಿರಲಿ. ಹಾಗಾಗಿಯೇ, ಮುಗ್ಧ ನಾಗರಿಕರು ನಿವಾಸ ರಹಿತ ಭೂಮಿಯ ಮೇಲೆ ಕಾನೂನುಬಾಹಿರವಾಗಿ ವ್ಯವಹಾರ ನಡೆಸಿಕೊಂಡು ಬಂದಾಗ ಸರಕಾರಿ ನೌಕರರು ಅಸಹಾಯಕರಾಗಿ ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ.
     ಜನಸಾಮಾನ್ಯರ ಅಜ್ಞಾನಕ್ಕೆ, ಮೂರ್ಖತನಕ್ಕೆ ಸರಕಾರ ಜವಾಬ್ದಾರಿಯಾಗುವುದಿಲ್ಲ. ಜನಸಾಮಾನ್ಯರ ಸುರಕ್ಷತೆಯ ದೃಷ್ಟಿಯಿಂದ ಸರಕಾರ ಸಾಕಷ್ಟು ಉತ್ತಮ ಕೆಲಸ ಮಾಡುತ್ತದೆ. ಉತ್ತಮ ಕಾನೂನುಗಳನ್ನು ರೂಪಿಸುತ್ತದೆ. ಈ ಬಗ್ಗೆ ಅರಿವು ಪಡೆಯುವುದು ಜನಸಾಮಾನ್ಯರ ಜವಾಬ್ದಾರಿ. ಭೂಮಿ ಅಥವಾ ಅಪಾರ್ಟ್‌ಮೆಂಟ್ ಕೊಡು-ಕೊಳ್ಳುವ ವ್ಯವಹಾರದ ವೇಳೆ ಪವರ್ ಆಫ್ ಅಟಾರ್ನಿ ಮೂಲಕ ವ್ಯವಹಾರದ ನಡೆಸುವುದು ಕಾನೂನಿನ ಹಿತದೃಷ್ಟಿಯಿಂದ ಒಳಿತಲ್ಲ. ವ್ಯವಹಾರವನ್ನು ಒಂದಕ್ಕಿಂತ ಹೆಚ್ಚು ವಿಧದಲ್ಲಿ ನೋಂದಣಿ ಮಾಡಿಸಲು ಕಾನೂನಿನಲ್ಲಿ ಅವಕಾಶವಿದೆ. ಒಂದು ವೇಳೆ ನೀವು ನಿಮ್ಮ ಭೂಮಿಯನ್ನು ಮಾರಾಟ ಮಾಡಿ, ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇದನ್ನು ದಾಖಲೆ ಸಹಿತ ನೋಂದಣಿ ಮಾಡಿಸಿಕೊಳ್ಳಲು ಇಷ್ಟಪಟ್ಟರೆ ಈ ಬಗೆಗಿನ ಮಾರಾಟದ ಲಿಖಿತ ಒಪ್ಪಂದಕ್ಕೆ ಸಹಿ ಹಾಕಲು ಭಾರತೀಯ ಗುತ್ತಿಗೆ ನೋಂದಣಿ ಕಾಯಿದೆ ಅವಕಾಶ ಕಲ್ಪಿಸಿಕೊಡುತ್ತದೆ.          ಒಬ್ಬ ವ್ಯಕ್ತಿ (ಖರೀದಿದಾರ ಅಥವಾ ಮಾರಾಟಗಾರ) ತನ್ನ ಪಾಲಿನ ವ್ಯವಹಾರವನ್ನು ಅರ್ಧ ಅಥವಾ ಪೂರ್ಣವಾಗಿ ಮುಗಿಸಿದ ನಂತರ, ಇನ್ನೊಬ್ಬ ವ್ಯಕ್ತಿ ತನ್ನ ಪಾಲಿನ ವ್ಯವಹಾರ ಮುಗಿಸಲು ಈ ಕಾಯಿದೆ ಅವಕಾಶ ಕಲ್ಪಿಸುತ್ತದೆ. ಒಪ್ಪಂದದ ನಂತರ ಇದರ ಪ್ರತಿಯನ್ನು ರಿಜಿಸ್ಟ್ರಾರ್ ಅವರಿಗೆ ಸಲ್ಲಿಸಿ, ಅದರ ಜತೆಗೆ ಅಗತ್ಯ ಮಾಹಿತಿಗಳನ್ನು ಪೂರೈಸಿ ನೋಂದಣಿ ಮಾಡಿಸಿಕೊಳ್ಳಬಹುದು.
ಭೂ ಮಾರಾಟ ಪ್ರಕ್ರಿಯೆ ಕಾನೂನಿಗೆ ಅನುಗುಣವಾಗಿ ನಡೆದಿದೆ ಎಂಬುದನ್ನು ಸರಕಾರಕ್ಕೆ ಸ್ಪಷ್ಟಪಡಿಸಲು ಇದು ಕಾನೂನುರೀತ್ಯಾ ಸಲ್ಲಿಸಲಾದ ನೋಟಿಸ್ ಆಗಿರುತ್ತದೆ. ಅಗತ್ಯ ಬಿದ್ದರೆ, ಇದಕ್ಕೆ ಸ್ಟಾಂಪ್ ಡ್ಯೂಟಿ ಕಟ್ಟುವಂತೆ ಸರಕಾರ ಆದೇಶ ನೀಡಬಹುದು. ಭಾರತೀಯ ಗುತ್ತಿಗೆ ಕಾಯಿದೆ ಪ್ರಕಾರ ಯಾವುದೇ ಗುತ್ತಿಗೆ ನೋಂದಣಿಗೆ ಮುಕ್ತ. ಭಾರತೀಯ ನಿರ್ಮಾಣ ಗುತ್ತಿಗೆ ಕಾಯಿದೆ ಯಾವುದೇ ಪ್ರಕಾರದ ಗುತ್ತಿಗೆಯನ್ನು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ಭೂಮಿ ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಭಾರತೀಯ ಆಸ್ತಿ ಕಾಯಿದೆ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳೂ ಗಮನ ಹರಿಸುವುದು ಒಳಿತು. ಸಹಜವಾಗಿ ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ಅರಿವು ಇರುವುದಿಲ್ಲ. ಇದಕ್ಕಾಗಿ ಸಾವಿರಾರು ರೂಪಾಯಿಗಳನ್ನು ಚೆಲ್ಲಿ ವಕೀಲರ ಜತೆ ವ್ಯವಹರಿಸುವ ಮೂಲಕ ಆರ್ಥಿಕ ಹೊರೆ ಹೊರಿಸುವ ಬದಲು, ಸರಕಾರ ಜನರಿಗೆ ತಿಳುವಳಿಕೆ ನೀಡುವ ಕೆಲಸ ಹಮ್ಮಿಕೊಳ್ಳಬೇಕು. ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಕನಿಷ್ಠ ಜ್ಞಾನ ಮೂಡಿಸುವ ಕೆಲಸ ಮಾಡಬೇಕು. ಚಿತ್ರ ಸಹಿತ ಪುಸ್ತಕ ಅಥವಾ ಕಿರುಹೊತ್ತಿಗೆಗಳನ್ನು ನಿರ್ಮಿಸಿ, ಜನರಿಗೆ ಸೂಕ್ತ ಮಾಹಿತಿ ಒದಗಿಸುವ ಕೆಲಸ ಹಮ್ಮಿಕೊಳ್ಳಬೇಕು. ಯಾವ ರೀತಿಯ ವ್ಯವಹಾರ ಕಾನೂನು ಬದ್ಧ, ಯಾವ ರೀತಿಯ ವ್ಯವಹಾರ ಕಾನೂನುಬಾಹಿರ ಎಂಬ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಈ ಕಾರ್ಯ ತುರ್ತು ಅಗತ್ಯ.( ೨೦೧೧ ಡಿಸೆಂಬರ್ ಮೂರರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ ).

ಗಣಿತದಲ್ಲಿ ಉತ್ತಮ ಅಂಕ ಬೇಕೆ? ಚೆನ್ನಾಗಿ ನಿದ್ದೆ ಮಾಡಿ


ಗಣಿತದಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕಿದ್ದರೆ ಪರೀಕ್ಷೆಯ ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ ಎಂಬುದು ವಿಜ್ಞಾನಿಗಳು ಮಕ್ಕಳಿಗೆ ನೀಡುವ ಸಲಹೆ. ಗಣಿತದಲ್ಲಿ ಉತ್ತಮ ಅಂಕ ಪಡೆಯಬೇಕೆ? ಹಾಗಾದರೆ, ನಾಳೆ ನೀವು ಪರೀಕ್ಷೆ ಬರೆಯಬೇಕು ಎಂದಾಗ ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ. ರಾತ್ರಿ ಮಾಡುವ ಉತ್ತಮ ನಿದ್ದೆ ಪರೀಕ್ಷೆಯಲ್ಲಿ ಫಲಿತಾಂಶ ಉತ್ತಮಗೊಳ್ಳಲು ನೆರವಾಗುತ್ತದೆ ಎಂಬುದು ಪಿಟ್ಸ್‌ಬರ್ಗ್ ವಿವಿಯ ಹೊಸ ಅಧ್ಯಯನ ವರದಿಯ ಸಾರ.
ವಿಶೇಷವಾಗಿ ಗಣಿತ ಪರೀಕ್ಷೆಯಲ್ಲಿ ರಾತ್ರಿಯ ಸುಖ ನಿದ್ದೆ ಹೆಚ್ಚು ಪರಿಣಾಮಕಾರಿ ಎಂಬ ಅಂಶವನ್ನು ಒತ್ತಿ ಹೇಳುವ ಸಂಶೋಧನೆಗಳು ನಿದ್ದೆಯ ಮಹತ್ವವನ್ನು ಇನ್ನಿಲ್ಲದಂತೆ ಸಾರಿವೆ. ಇದಕ್ಕಾಗಿ ಅವರು ಸುಮಾರು ೫೬ ಹದಿಹರೆಯದ ವಿದ್ಯಾರ್ಥಿಗಳ ನಿದ್ದೆ ಮಾಡುವ ವಿಧಾನ ಹಾಗೂ ಅವರು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ತುಲನೆ ಮಾಡಿದರು. ಉತ್ತಮವಾಗಿ ನಿದ್ದೆ ಮಾಡಿ ಪರೀಕ್ಷೆ ಬರೆದವರು ಉತ್ತಮ ಅಂಕಗಳನ್ನು ಪಡೆದಿರುವುದು ಸಂಶೋಧನೆ ವೇಳೆ ಕಂಡು ಬಂದಿದೆ.
ಪರೀಕ್ಷೆಯ ಹಿಂದಿನ ರಾತ್ರಿ ಗಾಢವಾಗಿ, ಯಾವುದೇ ಅಡಚಣೆ ಇಲ್ಲದ ನಿದ್ದೆ ಮಾಡಿದವರು ಪರೀಕ್ಷೆಯಲ್ಲಿ ಹೆಚ್ಚು ಯಶಸ್ವಿಯಾಗುತ್ತಾರೆ. ಬಹಳ ಬೇಗ ನಿದ್ದೆಗೆ ಜಾರುವವರು ಮತ್ತು ಬೇಗನೆ ಎಚ್ಚರಗೊಳ್ಳುವ ಪ್ರವೃತ್ತಿಯವರು ಹೆಚ್ಚು ಅಂಕಗಳನ್ನು ಗಳಿಸಲು ಸಫಲರಾಗುತ್ತಾರೆ.
ಆಗಾಗ ಎಚ್ಚರವಾಗದೇ ಇಡೀ ರಾತ್ರಿ ಸುಖ ನಿದ್ದೆ ಮಾಡುವವರು, ನಿದ್ದೆ ಬಾರದಿದ್ದಾಗ ಹಾಸಿಗೆಯಲ್ಲಿ ಹೆಚ್ಚು ಸಮಯ ಕಳೆಯುವವರು, ಉತ್ತಮ ಗುಣಮಟ್ಟದ ನಿದ್ದೆ ಮಾಡುವ ಸಾಮರ್ಥ್ಯ ಇರುವವರು ಅಂಕಗಳಿಕೆಯಲ್ಲಿ ಮುಂದಿರುತ್ತಾರೆ. ಹಾಗಾಗಿ, ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಳದಲ್ಲಿ ನಿದ್ದೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಇತ್ತೀಚೆಗೆ ಮಂಡಿಸಲಾದ ಅಸೋಸಿಯೇಟೆಡ್ ಪ್ರೊಫೆಷನಲ್ ಸ್ಲೀಪ್ ಸೊಸೈಟಿಸ್‌ನ ವಾರ್ಷಿಕ ಸಭೆಯಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳ ಸಾರ.
ಹಾಗೆಂದ ಮಾತ್ರಕ್ಕೆ ಪರೀಕ್ಷೆಯ ಹಿಂದಿನ ರಾತ್ರಿ ಉತ್ತಮ ನಿದ್ದೆ ಮಾಡಿದಾಕ್ಷಣ ಗಣಿತ ವಿಷಯದಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂಬ ಭ್ರಮೆ ಬೇಡ. ಸಂಶೋಧನಾ ವರದಿಯ ಅರ್ಥವೂ ಅದಲ್ಲ. ಅಂದರೆ, ಪರೀಕ್ಷೆಯ ಹಿಂದಿನ ರಾತ್ರಿಯಿಡಿ ಕಷ್ಟಪಟ್ಟು ಓದಿ, ಗಣಿತದ ಸಮಸ್ಯೆಗಳನ್ನು ಬಿಡಿಸಿ, ಅತಿಯಾಗಿ ನಿದ್ದೆಗೆಡಬೇಡಿ. ನಿದ್ದೆ ಸರಿ ಮಾಡದಿದ್ದರೆ ಮಾನಸಿಕವಾಗಿ ನೀವು ಬಳಲುತ್ತೀರಿ. ಪರೀಕ್ಷೆ ಬರೆಯಲು ಬೇಕಾದ ಲವಲವಿಕೆ ನಿಮ್ಮಲ್ಲಿ ಇರಲಾರದು. ಪರೀಕ್ಷೆ ಬರೆಯುವ ವೇಳೆ ನಿಮ್ಮಲ್ಲಿ ನಿದ್ದೆಯ ಮಂಪರು ಆವರಿಸಬಹುದು. ಮಾನಸಿಕವಾಗಿ ನೀವು ತುಂಬಾ ಬಳಲಿದರೆ ಪ್ರಶ್ನೆಗೆ ತಕ್ಕ ಉತ್ತರ ಹೊಳೆಯದಿರಬಹುದು. ಪರೀಕ್ಷೆಗೆ ಮಾಡಿಕೊಂಡ ಸಿದ್ಧತೆ ವ್ಯರ್ಥವಾಗಬಹುದು ಎಂಬುದು ವಿಜ್ಞಾನಿಗಳ ಕಳಕಳಿ.
ಈ ಸಂಗತಿ ಗಣಿತಕ್ಕೆ ಮಾತ್ರವಲ್ಲ. ಇತರ ವಿಷಯಗಳಿಗೂ ಅನ್ವಯವಾಗುತ್ತದೆ. ಆದರೆ, ಸಾಧಾರಣವಾಗಿ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸಿದ ಗಣಿತಕ್ಕೆ ಈ ಸಂಗತಿ ಹೆಚ್ಚು ಅನ್ವಯ ಅಷ್ಟೆ.
ಆಧುನಿಕ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಗಣಿತಕ್ಕೆ ಮಹತ್ವ ಹೆಚ್ಚುತ್ತಲೇ ಇದೆ. ಆದರೆ, ವಿಜ್ಞಾನಲೋಕದ ರಾಣಿ ಎಂದೇ ಕರೆಸಿಕೊಳ್ಳುವ ಗಣಿತ ಅಷ್ಟು ಸುಲಭವಾಗಿ ತಲೆಗೆ ಹತ್ತುವಂತಹದ್ದಲ್ಲ. ಮಹಾನ್ ಮೇಧಾವಿಗಳೂ ಗಣಿತದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದುಂಟು. ಮೇಧಾವಿಗಳೂ ಗಣಿತವನ್ನು ಕರಗತ ಮಾಡಿಕೊಳ್ಳಬೇಕಿದ್ದರೆ ಸಾಕಷ್ಟು ಅಭ್ಯಾಸ ನಡೆಸಲೇ ಬೇಕು.
ಆದರೂ, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಗಣಿತಜ್ಞರು ಮಕ್ಕಳಿಗೆ ಕೆಲವು ಸಾಮಾನ್ಯ ಸಲಹೆ, ಸೂಚನೆಗಳನ್ನು ನೀಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಸಾಮರ್ಥ್ಯವಿದ್ದರೆ ಕೇವಲ ಸೂತ್ರ (ಫಾರ್ಮೂಲಾ) ಅಥವಾ ನಿಯಮಗಳನ್ನು ಅಭ್ಯಾಸ ಮಾಡಿಕೊಂಡರೆ ಸಾಕು. ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು ಈ ಸೂತ್ರ ಅಥವಾ ನಿಯಮ ಅನುಸರಿಸಿಯೇ ಇರುತ್ತವೆ. ಇದು ಗಣಿತ ವಿಷಯದಲ್ಲಿ ಉತ್ತಮ ಅಂಕ ಗಳಿಸಲು ಉತ್ತಮ ಮಾರ್ಗ.
ಸೂತ್ರ ಅಥವಾ ನಿಯಮ ಆಧರಿಸಿ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವಲ್ಲಿ ನೀವು ದುರ್ಬಲರಾಗಿದ್ದರೆ, ಪುಸ್ತಕದಲ್ಲಿರುವ ಪ್ರಮುಖ ಉದಾಹರಣೆಗಳ ಅಭ್ಯಾಸ ಮಾಡಿಕೊಳ್ಳಿ. ಕಠಿಣ ಅಧ್ಯಾಯಗಳ ಮೇಲೆ ಹೆಚ್ಚು ಸಮಯ ವ್ಯಯ ಮಾಡಿ. ಅವುಗಳನ್ನು ಹೆಚ್ಚೆಚ್ಚು ಅಧ್ಯಯನ ಮಾಡಿ.ಆದರೆ, ಇದು ಹೆಚ್ಚು ಅಂಕ ಗಳಿಸುವಲ್ಲಿ ಅಷ್ಟೊಂದು ಸಹಕಾರಿ ಆಗಲಾರದು. ಹೆಚ್ಚೆಂದರೆ ೧೦೦ಕ್ಕೆ ೭೫-೮೦ ಅಂಕಗಳನ್ನು ಪಡೆಯಲು ಸಹಾಯ ಮಾಡಬಹುದು ಎಂಬುದು ತಜ್ಞರ ಅಭಿಮತ.
ಇನ್ನೊಂದು ಪ್ರಮುಖ ಅಂಶವೆಂದರೆ, ಸೂತ್ರ ಅಥವಾ ನಿಯಮಗಳನ್ನು ಆಧರಿಸಿ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಸಾಮರ್ಥ್ಯವುಳ್ಳವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಕಂಪನಿಗಳು ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಅಂಶಗಳ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಾರೆ.
ಗಣಿತದಲ್ಲಿ ಪರಿಣಿತಿ ಸಾಸಲು ಇರುವ ಸುಲಭ ಸೂತ್ರವಿದು. ಆಸಕ್ತಿ + ಅಭ್ಯಾಸ + ಆನ್ವಯಿಕ ಸಾಮರ್ಥ್ಯ = ಗಣಿತದಲ್ಲಿ ಪರಿಣಿತಿ.
ಗಣಿತ ಇತರ ವಿಷಯಗಳಂತಲ್ಲ. ಇದರ ಅಧ್ಯಯನ ಹಾಗೂ ಅಧ್ಯಾಪನ ಮನಕ್ಕೆ ಮುದ ನೀಡುತ್ತದೆ. ಮನಸ್ಸನ್ನು ಕ್ರಿಯಾಶೀಲಗೊಳಿಸುತ್ತದೆ. ಗಣಿತದ ಅಧ್ಯಯನ ಬದುಕಲ್ಲಿ ಶಿಸ್ತನ್ನು ರೂಢಿಸುತ್ತದೆ. ಸಂಗೀತಾಭ್ಯಾಸಕ್ಕೂ ಇದು ಅನುಕೂಲಕರ ಎನ್ನುವುದು ಹಲವರ ಅಭಿಮತ. ಕೈಗಾರಿಕಾ ವಲಯದಲ್ಲಿ ಗಣಿತಜ್ಞರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಸಾಮರ್ಥ್ಯ ಇವರಲ್ಲಿ ಇರುತ್ತದೆ ಎನ್ನುವುದು ಇದಕ್ಕೆ ಕಾರಣ. ಇದೇ ಉದ್ದೇಶಕ್ಕಾಗಿಯೇ ಸಾಫ್ಟ್‌ವೇರ್ ಉದ್ಯಮದಲ್ಲೂ ಇವರಿಗೆ ಬೇಡಿಕೆ ಹೆಚ್ಚು.ಕ್ಷಮೆಯಿರಲಿ ತಾಯಿ


ಅಚ್ಚ ಹಸಿರಲಿ ಮೆರೆದ ಭೂತಾಯಿ ನೀನಿಂದು
ಬರಡು ಬಿಸಿಲಲ್ಲಿ ಬೆಂದು ಬೆಂಡಾಗಿರುವೆ
ಗರ್ಭ ಸಿರಿಯನೆ ತೋರಿ ನೀನಿಂದು ನಲುಗಿರುವೆ
ಮದದುಂಬಿದ ಶ್ರೀಮಂತ ಹುಡುಗಿ ಹಾದರಕ್ಕೆ ಬಿದ್ದಂತೆ
ವಸುಂಧರೆ, ಆ ನಿನ್ನ ವೈಭವ ಮರೆಮಾಚುತ್ತಲಿದೆ ಇಂದು
ರಕ್ಷಕರೇ ಇರದ ಭಕ್ಷಕರ ಎದುರು
ಮೋಜು ಮಜದ ಮದದಿ ನಿನ್ನ ಇರುವನ್ನೇ ಮರೆತಿಹರು
ಹೆತ್ತ ಕರುಳಿನ ಕೂಗು ಮಾರ್ದನಿಸುವ ಹಾಗೆ
ಕಣ ಕಣದ ರಸವ ಹೀರಿ ಜಗಿದ ಈ ಮನುಜ
ಹಿಂಡಿ ಹೀರಿ ಎಸೆದ, ಹಿಪ್ಪೆಯಾಗಿಸಿದ
ಅಮೃತದ ಎದೆಹಾಲ ಕುಡಿಸಿ ಬೆಳಸಿದ ನಿನಗೆ
ವಿಷವನ್ನೇ ಕಕ್ಕುತ್ತ ನಿನ್ನ ಬರಡಾಗಿಸಿದ
ಶಿವನನ್ನು ಕೆಣಕಿ ಕಾಮ ಬಲಿಯಾದ್ದು ಒಂದು ಕಥೆ
ನಮಗೂ ಬರಬಹುದು ಆ ದಿನಗಳು ಎನ್ನುವುದೇ ವ್ಯಥೆ
ನಿನ್ನ ಹುಸಿಗೋಪ ನಮಗೆ ಒಳಿತಲ್ಲ ತಾಯಿ
ನೀನು ತಿರುಗಿದರೆ ನಮಗೆ ಬದುಕು ಇನ್ನೇಲ್ಲಿ
ಕ್ಷಮೆ ಇರಲಿ ತಾಯಿ
ಕ್ಷಮೆಯಾಧರಿತ್ರಿಯ ಆ ನಿನ್ನ ಗುಣ ಸದಾಕಾಲ ಹೀಗೆ ನಮ್ಮ ನೆರಳಾಗಿ ಇರಲಿ.


( ಇದು ನನ್ನ ' ಪೈರು ಪಚ್ಚೆ ತೆನೆ ' ಕವನ ಸಂಕಲನದಿಂದ ಆಯ್ದ ಕವನ ).
ಖಭೌತ ವಿಜ್ಞಾನದಲ್ಲಿ ಛಾಪು ಮೂಡಿಸಿದ ಬಾಪು


ಅದು ೧೯೪೨, ಇಸ್ಲಾಮಿಯಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಗಿಸಿದ ಬಾಲಕ, ಹೈದರಾಬಾದ್‌ನ ಪ್ರತಿಷ್ಠಿತ ನಿಜಾಮ್ ಕಾಲೇಜು ಸೇರಲು ತವಕಿಸುತ್ತಿದ್ದ. ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ ಯುವಕನಿಗೆ ಕಾಲೇಜು ಸೇರಲು ಅಗತ್ಯವಾದ ಕನಿಷ್ಠ ವಯಸ್ಸು ಆಗಿಲ್ಲ ಎಂಬ ಉತ್ತರ ಬಂತು. ಇದಕ್ಕಾಗಿ ಆತ ವಿಶೇಷ ಪರೀಕ್ಷೆ ಬರೆಯಬೇಕಾಯಿತು. ಪರೀಕ್ಷೆ ಪಡೆದ, ಉತ್ತಮ ಅಂಕ ಗಳಿಸಿದ, ಪ್ರವೇಶ ಗಿಟ್ಟಿಸಿದ.
ಕಾಲೇಜು ಸೇರಿದ ಯುವಕ ಸುಮ್ಮನೆ ಕೂರಲಿಲ್ಲ. ಸಂಶೋಧನೆಯ ಗೀಳು ಆತನನ ಬಹುವಾಗಿ ಆವರಿಸಿತ್ತು. ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಬಂಧ ಪ್ರಕಟಿಸಿದ. ಇದರ ಅಧ್ಯಯನಕ್ಕೆ ಅಗತ್ಯವಾದ "ರೋಹಿತ ಮಾಪಕ" ಎಂಬ ಉಪಕರಣವನ್ನು ತಾನೇ ತಯಾರಿಸಿ, ಮಲಗುವ ಕೊಠಡಿಯಿಂದ ಸಂಶೋಧನೆ ನಡೆಸಿದ. ಆ ಪ್ರಬಂಧ ಅಂದಿನ ಪ್ರತಿಷ್ಠಿತ ವಿಜ್ಞಾನ ನಿಯತಕಾಲಿಕ "ಕರೆಂಟ್ ಸೈನ್ಸ್"ನಲ್ಲಿ ಪ್ರಕಟವಾಯಿತು. ಈ ಸಾಧನೆ ಮಾಡಿದಾಗ ಆ ಯುವಕನ ವಯಸ್ಸು ಕೇವಲ ೧೯ ವರ್ಷಗಳು. ಈ ಸಾಧನೆ ಮಾಡಿದಾತ ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಎಂದೇ ಖ್ಯಾತರಾದ ಪ್ರೊ. ವೇಣು ಬಾಪು.
ಭಾರತದಲ್ಲಿ ದೂರದರ್ಶಕ ಆಧರಿತ ಖಗೋಳ ವಿಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ವೇಣು ಅವರ ಸಾಧನೆ ಅಪಾರ. ಭಾರತೀಯ ಖಗೋಳ ವಿಜ್ಞಾನದ ಇತಿಹಾಸದಲ್ಲಿ ಹೊಸ ಪರ್ವಕ್ಕೆ ನಾಂದಿ ಹಾಡಿದ ವೇಣು ಅವರ ಜೀವನ ಚರಿತ್ರೆ ಪ್ರಕಟವಾಗಿದೆ. ಡಾ. ಎಂ.ಎಸ್.ಎಸ್. ಮೂರ್ತಿ ಈ ಪುಸ್ತಕ ಬರೆದಿದ್ದಾರೆ.
ಇಂದಿನ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲೂ ವಿಜ್ಞಾನ, ವಿಜ್ಞಾನಿಗಳು ಹಾಗೂ ವೈಜ್ಞಾನಿಕ ಸಾಧನೆ, ಸಂಗತಿಗಳ ಬಗ್ಗೆ ಕನ್ನಡದಲ್ಲಿ ಬರುತ್ತಿರುವ ಪುಸ್ತಕಗಳು ಕಡಿಮೆಯೇ. ಎಂ.ಎಸ್.ಎಸ್. ಮೂರ್ತಿ ಅವರು ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ. ಸಮಾಜವನ್ನು ರೂಪಿಸುವುದರಲ್ಲಿ ಅದರ ಶ್ರೇಷ್ಠ ವ್ಯಕ್ತಿಗಳ ಜೀವನ, ಚರಿತ್ರೆಗಳ ಪಾತ್ರ ಮಹತ್ವದ್ದು. ಅವರ ಜೀವನಾನುಭವಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬಲ್ಲವು. ಈ ನಿಟ್ಟಿನಲ್ಲಿ ಪ್ರೊ. ವೇಣು ಅವರ ಜೀವನ ಚರಿತ್ರೆ, ವಿಜ್ಞಾನಾಸಕ್ತರಿಗೆ ಒಂದು ಉಪಯುಕ್ತ ಗ್ರಂಥ. ವಿಜ್ಞಾನದಲ್ಲಿ ಅದರಲ್ಲೂ ವಿಶೇಷವಾಗಿ ಖಗೋಳ ವಿಜ್ಞಾನದಲ್ಲಿ ಸಾಧನೆ ಮಾಡಬೇಕೆಂಬ ಹೆಬ್ಬಯಕ್ಕೆ ಹೊಂದಿದ ಯುವಕ-ಯುವತಿಯರಿಗೆ ಇದೊಂದು ಮಾರ್ಗದರ್ಶಕ ಪುಸ್ತಕ.
ವೇಣು ಅವರ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿರುವ ಲೇಖಕರು, ಅದನ್ನು ಅಷ್ಟೇ ಅಚ್ಚುಕಟ್ಟಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೇಣು ಜೀವನ ಚರಿತ್ರೆಯ ನಿರೂಪಣೆ ಜತೆಗೆ ಭಾರತದಲ್ಲಿ ಖಗೋಳ ವಿಜ್ಞಾನದ ಪರಂಪರೆ, ಅದು ಬೆಳೆದು ಬಂದ ರೀತಿಗಳನ್ನು ಸಾದ್ಯಂತವಾಗಿ ವರ್ಣಿಸುವ ಪ್ರಯತ್ನ ಮಾಡಿದ್ದಾರೆ. ಪುರಾತನ ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿಗೆ ಬಂದಿದ್ದ ಖಗೋಳ ವಿಜ್ಞಾನ ಹಾಗೂ ಆಧುನಿಕ ಖಗೋಳ ವಿಜ್ಞಾನಗಳ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಭಾರತದಲ್ಲಿ ಖಗೋಳ ವೀಕ್ಷಣಾಲಯಗಳು ಅಸ್ತಿತ್ವಕ್ಕೆ ಬಂದ ಪರಿಯನ್ನು ಸಾದ್ಯಂತವಾಗಿ ವರ್ಣಿಸುವ ಪ್ರಯತ್ನ ಮಾಡಿದ್ದಾರೆ. ವೇಣು ಮನಸ್ಸು ಮಾಡಿದ್ದರೆ ಅಮೆರಿಕದಲ್ಲಿಯೇ ನೆಲೆಸಿ, ಉತ್ತಮ ಜೀವನ ನಡೆಸಬಹುದಿತ್ತು. ಆದರೆ, ತವರಿನಲ್ಲಿ ಸಾಧನೆ ಮಾಡಲು ಅವರ ಮನಸ್ಸು ಹಾತೊರೆಯುತ್ತಿತ್ತು. ಭಾರತದ ಕೀರ್ತಿಯನ್ನು ಹೆಚ್ಚಿಸುವ ಇರಾದೆ ಅವರದ್ದಾಗಿತ್ತು. ಭಾರತದಲ್ಲಿ ಖಗೋಳ ವಿಜ್ಞಾನದ ಮುನ್ನಡೆಗೆ ಸೂಕ್ತ ವಾತಾವರಣ ಸೃಷ್ಟಿಸಿ, ಭಾರತವನ್ನು ಮತ್ತೊಮ್ಮೆ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಬೇಕೆಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಇದಕ್ಕಾಗಿ ವಿದೇಶದಲ್ಲಿ ದೊರೆಯುತ್ತಿದ್ದ ವಿಶೇಷ ಸೌಲಭ್ಯ ನಿರಾಕರಿಸಿ, ಸ್ವದೇಶಕ್ಕೆ ಮರಳಿದರು. ಆಗ ಅವರಿಗೆ ಸ್ವದೇಶದಲ್ಲಿ ಯಾವ ನೌಕರಿಯ ಖಾತರಿಯೂ ಇರಲಿಲ್ಲ. ಅವರಲ್ಲಿದ್ದುದು ಕೇವಲ ಆತ್ಮವಿಶ್ವಾಸ.
ಅಮೆರಿಕಕ್ಕೆ ತೆರಳಲು ಅಂದಿನ ಹೈದರಾಬಾದ್ ಸರಕಾರ ಸಹಾಯ ಮಾಡಿತ್ತು. ಇದಕ್ಕೆ ಪ್ರತಿಯಾಗಿ ೧೦ ವರ್ಷಗಳ ಕಾಲ ಸರಕಾರಕ್ಕೆ ಸೇವೆ ಸಲ್ಲಿಸುವ ಕರಾರು ಪತ್ರ ಬರೆದುಕೊಟ್ಟರು. ಆದರೆ, ಅವರ ಯೋಗ್ಯತೆಗೆ ತಕ್ಕ ಹುದ್ದೆ ನೀಡಲು ಸರಕಾರದ ಬಳಿ ಅವಕಾಶ ಇರಲಿಲ್ಲ. ಉಸ್ಮಾನಿಯಾ ವಿ.ವಿ.ಯ ಭೌತಶಾಸ್ತ್ರ ಉಪನ್ಯಾಸಕ ಹುದ್ದೆ ನೀಡಲಾಯಿತು. ಆದರೆ, ಸಂಶೋಧನೆ ಕಡೆ ಗುರಿ ಹೊಂದಿದ್ದ ವೇಣು ಈ ಹುದ್ದೆ ನಿರಾಕರಿಸಿದರು. ವೈಯಕ್ತಿಕ ಯಶಸ್ಸಿನ ಗೀಳಿನಲ್ಲಿ ದೇಶಪ್ರೇಮ ಮರೆಯುತ್ತಿರುವ ಇಂದಿನ ಯುವಜನಾಂಗಕ್ಕೆ ವೇಣು ಅವರ ದೇಶಪ್ರೇಮ ಆದರ್ಶಪ್ರಾಯ.
ಕೊಡೈಕೆನಾಲ್‌ನಲ್ಲಿ ಸೌರ ದೂರದರ್ಶಕ ಸ್ಥಾಪಿಸುವಲ್ಲಿ, ಭಾರತೀಯ ಖಭೌತ ವಿಜ್ಞಾನ ಸಂಸ್ಥೆ ಹುಟ್ಟುಹಾಕುವಲ್ಲಿ ಅವರ ಪಾತ್ರ ಮಹತ್ವದ್ದು. ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ಸ್ಥಾಪನೆ ಖಗೋಳ ವಿಜ್ಞಾನದ ಬೆಳವಣಿಗೆಗೆ ಅವಶ್ಯಕ ವಾತಾವರಣ ನಿರ್ಮಿಸಿತು. ಭಟ್ನಾಗರ್, ಪದ್ಮಭೂಷಣ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದವು.
ನಿವೃತ್ತಿಯ ನಂತರ ಭಾರತೀಯ ಖಗೋಳ ವಿಜ್ಞಾನದ ಇತಿಹಾಸ ಕುರಿತು ಪುಸ್ತಕ ಬರೆಯುವ ಅದಮ್ಯ ಆಸೆ ವೇಣು ಅವರಲ್ಲಿತ್ತು. ಅದು ಈಡೇರಲೇ ಇಲ್ಲ. ಆದರೆ, ಅವರ ಜೀವನ ಪರಿಚಯಿಸುವ ಕೆಲಸವನ್ನು ಮೂರ್ತಿ ಮಾಡಿದ್ದಾರೆ. ಬಾಪು ಜೀವನಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅಧ್ಯಯನ ನಡೆಸಿ, ಸಮಗ್ರ ಮಾಹಿತಿ ಒದಗಿಸುವ ಕೆಲಸವನ್ನು ಲೇಖಕರು ಮಾಡಬಹುದಿತ್ತು. ಬಾಪು ಕೈಗೊಂಡ ಯೋಜನೆಗಳು ನಂತರದ ದಿನಗಳಲ್ಲಿ ಭಾರತೀಯ ಖಭೌತ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಯಾವ ರೀತಿಯಲ್ಲಿ ಸಹಕಾರಿಯಾದವು ಎಂಬ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಬಹುದಿತ್ತು. ಈ ಕೊರತೆಯ ನಡುವೆಯೂ ೫೫ ವರ್ಷಗಳ ಸಾರ್ಥಕ ಜೀವನ ನಡೆಸಿದ ವೇಣು ಅವರ ಜೀವನ ಚರಿತ್ರೆ ಉತ್ತಮವಾಗಿ ಮೂಡಿಬಂದಿದೆ. ವಿಜ್ಞಾನ ಸಾಧಕರಿಗೊಂದು ಪ್ರೇರಕ ಗ್ರಂಥವಾಗುವ ಭರವಸೆ ಮೂಡಿಸಿದೆ.

ಭಾರತೀಯ ಖಭೌತ ವಿಜ್ಞಾನದ
ಪಿತಾಮಹ ವೇಣು ಬಾಪು
ಲೇ: ಡಾಎಂ.ಎಸ್.ಎಸ್. ಮೂರ್ತಿ
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು-೦೧
ಪುಟ: ೧೦೪, ಬೆಲೆ: ರೂ.೬೫/-

ಜ್ಞಾನದ ಕೋಶವಾಗಿ ಒಡಮೂಡಿದ ಭಾಷೆ ಸಂಸ್ಕೃತ     ಸಂಸ್ಕೃತ ಭಾಷೆ ಅತಿ ಪ್ರಾಚೀನ ಮಾತ್ರವಲ್ಲ, ಅಚ್ಚುಕಟ್ಟಾದ ಪದಪುಂಜಗಳ ಭಾಷೆ ಕೂಡ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಭಾಷೆ ಇದು. ಬಹುಶ: ಈ ಭಾಷೆಯಲ್ಲಿನ ವ್ಯಾಕರಣ, ಭಾಷಾ ಶುದ್ಧತೆ, ಅಲಂಕಾರ, ಛಂದಸ್ಸುಗಳ ಬಳಕೆಯಲ್ಲಿನ ಬದ್ಧತೆಯಿಂದಾಗಿ ಇದು ಜನಸಾಮಾನ್ಯರಿಂದ ದೂರ ಉಳಿಯಬೇಕಾಗಿ ಬಂದಿರಬಹುದು. ಇಂಗ್ಲೀಷ್ ಭಾಷೆ ಇಂದು ಜಾಗತಿಕ ಭಾಷೆಯಾಗಿ ಬಳಕೆಯಾಗುತ್ತಿದೆ ಎಂದರೆ ಅದಕ್ಕೆ ಕಾರಣ ಪಾಶ್ಚಿಮಾತ್ಯರ ಪ್ರಭಾವ. ತಮ್ಮ ಭಾಷೆಯ ಅಭಿವೃದ್ಧಿಗಾಗಿ ಲಾಭಿ ನಡೆಸುವ ಅವರ ಸಾಮರ್ಥ್ಯ. ಭಾರತ ಜಾಗತೀಕರಣಕ್ಕೆ, ಉದಾರೀಕರಣಕ್ಕೆ ತನ್ನನ್ನು ತೆರೆದುಕೊಂಡ ನಂತರ ಭಾರತದಲ್ಲಿ ಇಂಗ್ಲೀಷ್ ಭಾಷೆಯ ಬೆಳವಣಿಗೆ ಚುರುಕಾಯಿತು ಎಂಬುದನ್ನು ನಾವು ಮರೆಯುವಂತಿಲ್ಲ. ಅಲ್ಲದೆ, ಅದು ಬೆಳವಣಿಗೆಯ ಹಾದಿಯಲ್ಲಿ ಇತರ ಭೌಗೋಳಿಕ ಪ್ರದೇಶಗಳ, ಇತರ ಭಾಷೆಗಳ ಪದಗಳನ್ನು ತನ್ನ ಒಡಲೊಳಗೆ ಸೇರಿಸಿಕೊಳ್ಳುತ್ತಾ ಬೆಳೆಯಿತು. ಈ ಗುಣವನ್ನು ಸಂಸ್ಕೃತ ಭಾಷೆಯ ಪಂಡಿತರು ಒಪ್ಪಿಕೊಳ್ಳದೇ ಹೋದುದು ಸಂಸ್ಕೃತದ ಬೆಳವಣಿಗೆಗೆ ಮಾರಕವಾಗಿರಬಹುದು. ಹಾಗಾಗಿ ವ್ಯಾವಹಾರಿಕವಾಗಿ ಭಾಷೆ ಸೊರಗಿರಬಹುದೇ ವಿನ: ಅದನ್ನು ಮೃತಭಾಷೆ ಎನ್ನಲಾಗದು.
     ಹಲವು ಶತಮಾನಗಳ ಹಿಂದೆಯೇ ರಚಿತವಾದ ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಇತರ ಭಾಷೆಗಳ ಅದೆಷ್ಟೊ ಸಾಹಿತ್ಯ ಕೃತಿಗಳಿಗೆ ಪ್ರೇರಣೆಯಾಗಿವೆ. ಈ ಕೃತಿಗಳಲ್ಲಿನ ನೀತಿ ಬೋಧನೆ ಇಂದಿಗೂ ನಮಗೆ ಪ್ರೇರಕ ಶಕ್ತಿ. ಕೌಟಿಲ್ಯನ ಅರ್ಥಶಾಸ್ತ್ರ, ಕಾಳಿದಾಸನ ಅಭಿಜ್ಞಾನ ಶಾಕುಂತಲಾದಂತಹ ಕೃತಿಗಳು ಇಂದಿಗೂ ನಮ್ಮ ಜನಮಾನಸದಲ್ಲಿ ನೆಲೆ ನಿಂತಿವೆ. ಇಂತಹ ಜನ್ಯ ಭಾಷೆ ಮಾತ್ರ ಇತರ ಭಾಷೆಯ ಜನಕ ಕೃತಿಗಳಿಗೆ ಪ್ರೇರಕವಾಗಬಲ್ಲದು. ಒಂದು ಭಾಷೆಯಲ್ಲಿನ ವ್ಯಾಕರಣ, ಛಂದಸ್ಸು, ಶುದ್ಧತೆಗಳಲ್ಲಿನ ಬದ್ಧತೆ ಮಾತ್ರ ಬಹುಕಾಲದವರೆಗೆ ಇಂತಹ ಕೃತಿಗಳನ್ನು ನೀಡಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ, ಬೆಳವಣಿಗೆಯ ಹಾದಿಯಲ್ಲಿ ಗುಣಮಟ್ಟ ಕಾಪಾಡಿಕೊಂಡು ಬರುತ್ತದೆ. ಇಲ್ಲದಿದ್ದರೆ ಬೆಳವಣಿಗೆಯ ಹಾದಿಯಲ್ಲಿ ಭಾಷೆಯ ಗುಣಮಟ್ಟ ಸೊರಗುತ್ತದೆ.
     ಸಂಸ್ಕೃತ ಭಾಷೆಯಲ್ಲಿರುವಷ್ಟು ಸುಭಾಷಿತಗಳು ಬಹುಶ: ಬೇರಾವ ಭಾಷೆಯಲ್ಲೂ ನಮಗೆ ಸಿಗುವುದು ಕಷ್ಟ. ವ್ಯಕ್ತಿಯ, ಆ ಮೂಲಕ ಸಮಾಜದ ಒಳ್ಳೆಯತನಕ್ಕೆ ಮಾರ್ಗದರ್ಶನ ನೀಡಬಲ್ಲ ಕೈಪಿಡಿಗಳಿವು. ಗಣಿತಶಾಸ್ತ್ರದಲ್ಲಿ ಬರುವ ಆರಂಭಿಕ ಅಂಕೆ ಸೊನ್ನೆಯನ್ನು ಕೊಟ್ಟವರು ಭಾರತೀಯರು ಎಂದು ಬೀಗುವ ನಾವು, ಅದನ್ನು ಕೊಡುಗೆಯಾಗಿ ನೀಡಿದ ಭಾಷೆಯನ್ನು ತಾತ್ಸಾರವಾಗಿ ನೋಡುವುದು ತರವೇ?
     ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ ಅವರಂತಹ ಮಹಾನ್ ಗಣಿತಜ್ಞರು, ಖಗೋಳಶಾಸ್ತ್ರಜ್ಞರು ನೀಡಿದ ಕೊಡುಗೆ ನಮಗೆ ಪಥ್ಯವಲ್ಲವೇ? ಇವೆಲ್ಲವೂ ನಮಗೆ ದೊರೆತಿದ್ದು ಸಂಸ್ಕೃತ ಭಾಷೆಯಲ್ಲಿ. ಜ್ಯೋತಿಷ್ಯಶಾಸ್ತ್ರ ಒಂದು ವಿಜ್ಞಾನ. ಅದರ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ವಾದ ಕೇಳಿ ಬರುತ್ತಿದೆ. ಈ ಜ್ಯೋತಿಷ್ಯಶಾಸ್ತ್ರದ ಹುಟ್ಟಿಗೆ ಕಾರಣವಾದ ಭಾಷೆ ಸಂಸ್ಕೃತ. ಇಂದಿನ ಅದೆಷ್ಟೊ ಮಾರಕ ರೋಗಗಳನ್ನು ಗುಣಪಡಿಸಬಲ್ಲ, ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಬಲ್ಲ ಆಯುರ್ವೇದ ಗ್ರಂಥಗಳು ಹುಟ್ಟಿದ್ದು ಸಂಸ್ಕೃತದಲ್ಲಿ. ಇತರ ಭಾಷೆಗಳಲ್ಲಿ ಇವು ಇಂದು ಲಭ್ಯ ಎಂತಾದರೆ, ಅವು ಸಂಸ್ಕೃತದಿಂದ ಭಾಷಾಂತರಗೊಂಡಂತವು. ಅಂದರೆ ಇಂದಿನ ರಿಮೇಕ್ ಸಿನಿಮಾಗಳ ಹಾಗೆ.
     ಸಂಸ್ಕೃತ ಭಾಷೆಯಲ್ಲಿದ್ದ ವೇದ-ಮಂತ್ರಗಳು ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲೂ ಈಗ ಲಭ್ಯ. ಆದರೆ, ಸಂಸ್ಕೃತ ಭಾಷೆಯಲ್ಲಿ ಉಚ್ಛಾರಣೆ ಮಾಡಿದಾಗ ಅದು ಮಾನವನ ಮೆದುಳಿನ ಮೇಲೆ ಉಂಟು ಮಾಡುವ ಪರಿಣಾಮಕ್ಕೂ, ಇತರ ಭಾಷೆಗಳಲ್ಲಿ ಉಚ್ಛಾರಣೆ ಮಾಡಿದಾಗ ಉಂಟು ಮಾಡುವ ಪರಿಣಾಮಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ರಚಿತವಾದ ವೇದಗಳು, ಪುರಾಣಗಳು, ಉಪನಿಷತ್ತುಗಳು ಭಾಷೆಯ ಸಾಹಿತ್ಯದ ಮಾಧುರ್‍ಯತೆಯನ್ನು ಎತ್ತಿ ತೋರಿಸಿವೆ. ಪುರಾತನ ಗ್ರೀಕ್, ಲ್ಯಾಟಿನ್ ಸೇರಿದಂತೆ ಹಲವು ಭಾಷೆಗಳ ಮೇಲೂ ಸಂಸ್ಕೃತ ಪದಗಳ ಬಳಕೆಯಾಗಿವೆ.
     ದೇಹದ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಹಾಗೂ ಪ್ರಾಣಾಯಾಮ ಪೂರಕ ಎನ್ನುವ ಸಂಗತಿಯನ್ನು ಬಹಳಷ್ಟು ಮಂದಿ ಇಂದು ಒಪ್ಪುತ್ತಾರೆ. ಆರೋಗ್ಯತಜ್ಞರು ಈ ದಿಸೆಯಲ್ಲಿ ಸಲಹೆ ನೀಡುತ್ತಿದ್ದಾರೆ. ಪಾಶ್ಚಿಮಾತ್ಯರೂ ಯೋಗ, ಪ್ರಾಣಾಯಾಮಗಳನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಈ ಯೋಗ, ಪ್ರಾಣಾಯಾಮ, ಆಸನಗಳ ಉಲ್ಲೇಖಗಳು ನಮಗೆ ಮೊದಲಿಗೆ ದೊರೆತದ್ದು ಸಂಸ್ಕೃತ ಭಾಷೆಯಲ್ಲಿ. ಇವುಗಳನ್ನು ನಮಗೆ ಕೊಡುಗೆಯಾಗಿ ನೀಡಿದ ಋಷಿ-ಮುನಿಗಳ ಸಂವಹನ ಭಾಷೆ ಸಂಸ್ಕೃತವಾಗಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ.
     ಸಂಸ್ಕೃತದಲ್ಲಿನ ಓಲೆಗರಿಗಳು, ಹಸ್ತಪ್ರತಿಗಳಲ್ಲಿ ಅದೆಷ್ಟೊ ಉತ್ತಮ ವಿಚಾರಗಳು ಅಡಗಿವೆ. ಪರಿಷ್ಕೃತಗೊಳ್ಳದೆ ಮೂಲೆಯಲ್ಲಿ ಬಿದ್ದು ಧೂಳು ತಿನ್ನುತ್ತಿವೆ. ಇವು ಪರಿಷ್ಕೃತಗೊಂಡು ಅಧ್ಯಯನಕ್ಕೆ ಬಳಕೆಯಾದರೆ ಸಮಾಜಕ್ಕೆ ಇನ್ನಷ್ಟು ಉತ್ತಮ ಜ್ಞಾನ ದೊರೆಯಲು ಸಾಧ್ಯ.
     ಸಂಸ್ಕೃತ ಕೇವಲ ಒಂದು ಭಾಷೆಯಾಗಿ ಬೆಳೆಯಲಿಲ್ಲ. ಬದಲಾಗಿ ಜ್ಞಾನದ ಕೋಶವಾಗಿ ಒಡಮೂಡಿತು. ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆಯಿತು. ಆದರೆ, ಮುಂದೆ ಸೂಕ್ತ ಬೆಂಬಲ ಸಿಗದೆ ಸೊರಗಿತು. ಇತಿಹಾಸದ ಮೇಲೆ ಬೆಳಕು ಚೆಲ್ಲಿದಾಗ ನಮಗೆ ಕಂಡು ಬರುವ ಸತ್ಯವಿದು. ಈ ಭಾಷಾ ಸಂಪತ್ತಿನ ಮೇಲೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಜನಸಾಮಾನ್ಯರಿಗೂ ಭಾಷಾಜ್ಞಾನದ ಪರಿಚಯ ಸಿಗಬೇಕು ಎಂದಾದರೆ ಭಾಷೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಠಿಯಾಗಬೇಕು.

ಕಾನೂನು ಸೇವೆ ಹೊರಗುತ್ತಿಗೆ, ಬೆಳೆಯುತ್ತಿದೆ ಹೆಚ್ಚಿಗೆ


"ಹೊರಗುತ್ತಿಗೆ", ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕೇಳಿ ಬರುತ್ತಿರುವ ಪದ. ಅದರಲ್ಲೂ ಅಮೆರಿಕ ಸಾಫ್ಟ್‌ವೇರ್ ಅಭಿವೃದ್ಧಿ ಕೆಲಸವನ್ನು ಭಾರತಕ್ಕೆ ಹೊರಗುತ್ತಿಗೆ ನೀಡಲು ಆರಂಭಿಸಿದ ಮೇಲೆ ಈ ಪದಕ್ಕಿರುವ ಆರ್ಥಿಕ ಮಹತ್ವ ಇನ್ನೂ ಹೆಚ್ಚಿದೆ. ಅಮೆರಿಕದ ಕಂಪನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಲು ಆರಂಭಿಸುತ್ತಿದ್ದಂತೆ, ಆ ರಾಷ್ಟ್ರಕ್ಕೆ ಭಾರತ ಪ್ರಮುಖ ಹೊರಗುತ್ತಿಗೆ ದೇಶವಾಗಿದೆ.
ಇದೆಲ್ಲಾ ಹಳೆಯ ಕಥೆಯಾಯಿತು. ಈಗ ಪರಿಸ್ಥಿತಿ ಅದಲು ಬದಲಾಗಿದೆ. ಭಾರತವೇ ಅಮೆರಿಕಕ್ಕೆ ಕೆಲಸಗಳನ್ನು ಹೊರಗುತ್ತಿಗೆ ನೀಡುವ ಪ್ರವೃತ್ತಿ ಚಾಲ್ತಿಗೆ ಬಂದಿದೆ. ಇದು ದೇಶದ ಕಾನೂನು ವಿಭಾಗದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನ. ಇದರಿಂದಾಗಿ ಅಮೆರಿಕದ ಯುವ ವಕೀಲರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಇತ್ತೀಚಿನ ಆರ್ಥಿಕ ಹಿಂಜರಿತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ, ಭವಿಷ್ಯದಲ್ಲಿ ಮತ್ತೊಮ್ಮೆ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಎದುರಿಸಬೇಕಾದ ಭಯದ ನೆರಳಲ್ಲಿರುವ ಅಮೆರಿಕದಲ್ಲಿ ಯುವ ವಕೀಲರಿಗೆ ವರದಾನವಾಗಿದೆ. ಆರ್ಥಿಕ ಕುಸಿತದ ಅಂಚಿನಲ್ಲಿರುವ ಅಮೆರಿಕದಲ್ಲಿ ಯುವ ವಕೀಲರಿಗೆ ಸಿಗುವ ಶುಲ್ಕ ಕಡಿಮೆಯಾಗುತ್ತಿದೆ. ಅಲ್ಲದೆ, ವ್ಯಾಜ್ಯಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದರಿಂದಾಗಿ ಅವರು ಉತ್ತಮ ಆದಾಯವಿಲ್ಲದೆ ಪರಿತಪಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರಿಗೆ ಭಾರತದ ಹೊರಗುತ್ತಿಗೆ ಆಶಾದೀಪವಾಗಿ ಪರಿಣಮಿಸುತ್ತಿದೆ.
ಹೊರಗುತ್ತಿಗೆ ಉದ್ಯೋಗ ಗಿಟ್ಟಿಸಲು ಅಮೆರಿಕದ ವಕೀಲರು ಈಗ ಭಾರತೀಯ ಸಂಸ್ಥೆಗಳ ಮುಂದೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ರೀತಿ ಭಾರತೀಯ ಉದ್ಯಮಿಗಳಿಗೆ ಕಾನೂನು ಹೊರಗುತ್ತಿಗೆ ಸೇವೆ ನೀಡುವವರಲ್ಲಿ ಬಹುತೇಕರು ಆಗ ತಾನೆ ಪದವಿ ಮುಗಿಸಿ ವಿಶ್ವವಿದ್ಯಾಲಯಗಳಿಂದ ಹೊರಬಂದವರು ಹಾಗೂ ಕಾನೂನು ಸೇವೆ ನೀಡುವ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವವರು. ಹೊಸದಾಗಿ ಪದವಿ ಪಡೆದು ವಿಶ್ವವಿದ್ಯಾಲಯದಿಂದ ಹೊರ ಬಂದವರಿಗೆ ನಿಯಮಿತ ಕಾನೂನು ಸೇವೆಗಿಂತ ಕಾರ್ಪೊರೇಟ್ ವಲಯದ ಉದ್ಯೋಗ ಹೆಚ್ಚು ಆಕರ್ಷಕ ಹಾಗೂ ಲಾಭದಾಯಕ ಎನಿಸುತ್ತಿದೆ. ಕಂಪನಿ ವ್ಯವಹಾರಗಳಿಗೆ ಸಂಬಂಧಿಸಿದ ಕಾನೂನು ಸೇವೆಗಳೇ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕಂಪನಿಗಳು ತಮ್ಮ ಸಂಸ್ಥೆಗೆ ಅಗತ್ಯವಿರುವ ಕಾನೂನು ಸಲಹೆಯನ್ನು ಇತರ ಸಂಸ್ಥೆಗಳಿಂದ ಪಡೆಯುವ ಒಂದು ಪರಿಪಾಠವೇ ಕಾನೂನು ಹೊರಗುತ್ತಿಗೆ ಸೇವೆ. ಇದೇ ಸೇವೆಯನ್ನು ದೇಶದೊಳಗಿನ ಕಂಪನಿಯಿಂದ ಪಡೆದರೆ ಅದು "ಆನ್‌ಶೋರ್" ಸೌಲಭ್ಯವೆಂದಾಗುತ್ತದೆ. ಕಂಪನಿ ಈ ಸೇವೆಗಾಗಿ ವಿದೇಶದತ್ತ ಮುಖ ಮಾಡಿದರೆ ಅದನ್ನು "ಆಫ್ ಶೋರಿಂಗ್ (ಸಮುದ್ರದಾಚೆಯ)" ಸೇವೆ ಎನ್ನಲಾಗುತ್ತದೆ. ಕಾನೂನು ಸಲಹೆ ವಿಭಾಗಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರವೃತ್ತಿ ಭಾರತೀಯ ಸಂಸ್ಥೆಗಳಲ್ಲಿ ಹೆಚ್ಚುತ್ತಿದೆ. ಇದು ಉದ್ಯೋಗಿಗಳಲ್ಲಿ ಜಾಗತಿಕ ಮಟ್ಟದ ಸಂಸ್ಕೃತಿ ಬೆಳೆಸಿಕೊಳ್ಳುವಲ್ಲಿ ಸಹಕರಿಸುತ್ತದೆ. ಅವರಿಗೆ ಜಾಗತಿಕ ಜ್ಞಾನದ ಅನಾವರಣ ಮಾಡಿಸುತ್ತದೆ. ಇದರಿಂದಾಗಿ ಅಮೆರಿಕದ ಉದ್ಯೋಗಿಗಳು ಉತ್ತಮ ಉದ್ಯೋಗಾವಕಾಶಗಳಿಗಾಗಿ ಭಾರತೀಯ ಕಂಪನಿಗಳತ್ತ ಮುಖ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ.
ಜಾಗತಿಕ ಆರ್ಥಿಕ ಕುಸಿತದ ಸಮಯದಲ್ಲಿ ಕಾನೂನು ಸೇವಾ ವಿಭಾಗವೂ ಅದರ ಪ್ರಭಾವಕ್ಕೆ ಒಳಗಾಗಿತ್ತು. ಕಾನೂನು ಸೇವೆ ಒದಗಿಸುವ ಸಂಸ್ಥೆಗಳು ಯುವ ವಕೀಲರಿಗೆ ನೀಡುವ ಸಂಭಾವನೆಯನ್ನು ಕಡಿತಗೊಳಿಸಿದ್ದವು. ಕೆಲವು ಉದ್ಯೋಗಿಗಳಿಗಂತೂ ಗಂಟೆಯೊಂದಕ್ಕೆ ೨೦ ಅಮೆರಿಕನ್ ಡಾಲರ್‌ನಷ್ಟು ಕಡಿಮೆ ಸಂಭಾವನೆ ನೀಡಲಾಗುತ್ತಿತ್ತು. ಆದರೀಗ ಪರಿಸ್ಥಿತಿ ಸುಧಾರಿಸಿದೆ. ಅವರಿಗೂ ಅವಕಾಶಗಳು ಅರಸಿ ಬರುತ್ತಿವೆ. ಭಾರತೀಯ ಉದ್ಯಮಿಗಳು ಕಾನೂನು ಸೇವೆಯನ್ನು ಹೊರಗುತ್ತಿಗೆ ನೀಡುತ್ತಿರುವುದರಿಂದ ಅಮೆರಿಕದ ಯುವ ವಕೀಲರಿಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ಥಳೀಯರು ಈ ಬೆಳವಣಿಗೆಯನ್ನು ಮುಕ್ತ ಹೃದಯದಿಂದ ಸ್ವಾಗತಿಸುತ್ತಿದ್ದಾರೆ. ಇತರ ವಲಯದ ಕಂಪನಿಗಳು ಭಾರತಕ್ಕೆ ಉದ್ಯೋಗವನ್ನು ಹೊರಗುತ್ತಿಗೆ ನೀಡುತ್ತಿರುವುದಕ್ಕೆ ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿದೆ. ಸಾಧಾರಣವಾಗಿ ಕಾನೂನು ಸೇವೆಯನ್ನು ಹೊರಗುತ್ತಿಗೆ ನೀಡುವಾಗ ಅದರ ಸ್ವರೂಪದ ಬಗ್ಗೆ ಮೊದಲು ಗಮನಿಸಲಾಗುತ್ತದೆ. ಉದಾಹರಣೆಗೆ ವಿವಾಹ ವಿಚ್ಛೇದನದಂತಹ ವಿಷಯಗಳು ಸೂಕ್ಷ್ಮ ಸ್ವರೂಪದ ವಿಭಾಗಕ್ಕೆ ಸೇರುತ್ತವೆ. ಗೇಣಿಗೆ ಸಂಬಂಧಿಸಿದ ವಿಷಯಗಳನ್ನು ಅಷ್ಟೊಂದು ಸೂಕ್ಷ್ಮ ವಿಷಯಗಳೆಂದು ಪರಿಗಣಿಸಲಾಗುವುದಿಲ್ಲ. ಸಾಧಾರಣವಾಗಿ ಸೂಕ್ಷ್ಮ ವಿಷಯಗಳ ಕಾನೂನು ಸೇವೆಯನ್ನು ವಿದೇಶಗಳಿಗೆ ಹೊರಗುತ್ತಿಗೆ ನೀಡುವ ಪ್ರವೃತ್ತಿ ಕಡಿಮೆ ಎನ್ನುತ್ತಾರೆ ಕಾನೂನು ಪರಿಣತರು.

ಬೆಂಗಳೂರಿಗರಿಗೆ ಸೂರು, ಬಿಡಿಎ ಕಾರ್ಯ ಬಲು ಜೋರು
ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ತಮ್ಮದೇ ಆದ ಸೂರಿಗಾಗಿ ಎದುರು ನೋಡುತ್ತಿದ್ದಾರೆ. ಸ್ವಂತ ನೆಲದಲ್ಲಿ ಮನೆ ಕಟ್ಟಿ ನೆಮ್ಮದಿಯಿಂದ ಬದುಕುವ ಕನಸು ಕಾಣುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂತನ ಲೇ ಔಟ್‌ಗಳ ನಿರ್ಮಾಣಕ್ಕೆ ಮುಂದಾಗಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಸುಮಾರು ೨.೫ ಲಕ್ಷಕ್ಕೂ ಹೆಚ್ಚು ಮಂದಿಗೆ ಬಿಡಿಎ ಸೈಟುಗಳಿಲ್ಲ ಎಂಬುದು ಬಿಡಿಎಯ ಒಂದು ಅಂದಾಜು.
ನಗರವಾಸಿಗಳಿಗೆ ಸೂರು ಒದಗಿಸಲು ಯೋಜಿಸಿರುವ ಬಿಡಿಎ ಐದು ನೂತನ ಲೇ ಔಟ್‌ಗಳ ಅಭಿವೃದ್ಧಿಗೆ ಮುಂದಾಗಿದೆ. ಡಾ. ಕೆ. ಶಿವರಾಮ ಕಾರಂತ ಲೇಔಟ್, ನಾಡಪ್ರಭು ಕೆಂಪೆಗೌಡ ಲೇ ಔಟ್, ಡಿ. ದೇವರಾಜ ಅರಸು ಲೇ ಟ್, ಕ್ಯಾಸಂಬಹಳ್ಳಿ ಚಂಗಲರಾಯ ರೆಡ್ಡಿ ಲೇ ಔಟ್ ಹಾಗೂ ಎಸ್. ನಿಜಲಿಂಗಪ್ಪ ಲೇ ಔಟ್‌ಗಳೇ ಈ ನೂತನ ಲೇ ಔಟ್‌ಗಳು. ಈ ಸಂಬಂಧ ಕಳೆದ ವರ್ಷವೇ ಬಿಡಿಎ ಯೋಜನೆ ರೂಪುಗೊಂಡಿತ್ತು. ಆದರೆ, ಹಲವಾರು ಕಾರಣಗಳಿಗಾಗಿ ಈ ನೂತನ ಲೇ ಔಟ್‌ಗಳ ಅಭಿವೃದ್ಧಿ ವಿಳಂಬವಾಗುತ್ತಲೇ ಬಂತು. ಈಗ ಮತ್ತೆ ಇವುಗಳಿಗೆ ಚಾಲನೆ ನೀಡಲಾಗುತ್ತಿದೆ. ಇಷ್ಟಾಗಿಯೂ ನೂತನ ಲೇ ಔಟ್‌ಗಳ ನಿರ್ಮಾಣ ಅಗತ್ಯ ಭೂಮಿ ಹಾಗೂ ನೀರಿನ ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಇವೆಲ್ಲವೂ ಪರಿಷ್ಕೃತ "ಬಿಡಿಎ-ಮಾಸ್ಟರ್ ಪ್ಲ್ಯಾನ್ -೨೦೧೫"ರ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವ ಲೇ ಔಟ್‌ಗಳು. ಸಿಡಿಪಿ ಮಾರ್ಗಸೂಚಿಯನ್ವಯ ಈ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು.
ಅವುಗಳ ಪೈಕಿ ನಾಡಪ್ರಭು ಕೆಂಪೇಗೌಡ ಲೇ ಔಟ್ ಅಭಿವೃದ್ಧಿಗೆ ಈಗಾಗಲೇ ಕಾರ್ಯಯೋಜನೆ ರೂಪುಗೊಂಡಿದೆ. ಆದರೆ, ಇದಿನ್ನೂ ಆರಂಭಿಕ ಹಂತದಲ್ಲಿದ್ದು, ನಗರದ ಮಂದಿ ಇಲ್ಲಿ ಸೈಟು ಪಡೆಯಲು ಇನ್ನೊಂದು ವರ್ಷ ಕಾಯಲೇ ಬೇಕು. ನೂತನ ಲೇ ಔಟ್‌ಗಳ ಅಭಿವೃದ್ಧಿಗೆ ಮುಂದಾದ ಬಿಡಿಎ, ಕೆಂಪೇಗೌಡ ಲೇ ಔಟ್ ಹಾಗೂ ಡಾ. ಶಿವರಾಮ ಕಾರಂತ ಲೆ ಔಟ್‌ಗಳ ಅನುಮತಿಗಾಗಿ ಪ್ರಸ್ತಾವ ಕಳಿಸಿತ್ತು. ಆದರೆ, ಅನುಮತಿ ದೊರಕಿದುದು ಕೆಂಪೇಗೌಡ ಲೇ ಔಟ್‌ಗೆ ಮಾತ್ರ. ಹಾಗಾಗಿ ಈ ಲೇ ಔಟ್‌ನ ಅಭಿವೃದ್ಧಿಗೆ ಬಿಡಿಎ ಮುಂದಾಗಿದೆ. ಕೆಂಪೇಗೌಡ ಲೇ ಔಟ್ ಅಭಿವೃದ್ಧಿಪಡಿಸಿ, ಫಲಾನುಭವಿಗಳಿಗೆ ವಿತರಿಸಲು ಬಿಡಿಎಗೆ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಸರ್ವೆ ನಂಬರುಗಳನ್ನು ಇನ್ನೂ ಗುರುತಿಸಬೇಕಾಗಿದೆ. ನಂತರ ಭೂ ಮಾಲೀಕರ ಜತೆ ಅದು ಒಪ್ಪಂದಕ್ಕೆ ಸಹಿ ಹಾಕಬೇಕು. ಅದಾದ ನಂತರ ಲೇ ಔಟ್ ಅಭಿವೃದ್ಧಿಪಡಿಸುವ ಸಂಬಂಧ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಒಪ್ಪಂದವೇರ್ಪಡಬೇಕು. ಭೂ ಸ್ವಾಧೀನ, ನೋಟಿಫಿಕೇಷನ್, ಟೆಂಡರ್ ಕರೆಯುವುದು ನಂತರದ ಪ್ರಕ್ರಿಯೆಗಳು ಎನ್ನುತ್ತಾರೆ ಅಧಿಕಾರಿಗಳು.
ಕೆಂಪೇಗೌಡ ಲೇ ಔಟ್ ಎಲ್ಲಿ?
ಬೆಂಗಳೂರು ಪಶ್ಚಿಮಕ್ಕೆ ಹೊಂದಿಕೊಂಡಂತೆ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಗಳ ನಡುವಿನ ೧೨ ಗ್ರಾಮಗಳ ವ್ಯಾಪ್ತಿಯಲ್ಲಿ, ೪,೮೧೪.೧೫ ಎಕ್ರೆ ಪ್ರದೇಶವ್ಯಾಪ್ತಿಯಲ್ಲಿ ಕೆಂಪೇಗೌಡ ಲೇ ಔಟ್ ತಲೆ ಎತ್ತಲಿದೆ. ಈ ಲೇ ಔಟ್ ಅಭಿವೃದ್ಧಿಗಾಗಿ ಬಿಡಿಎ ವ್ಯಯಿಸುತ್ತಿರುವ ವೆಚ್ಚ ಸರಿ ಸುಮಾರು ೨,೬೩೯ ಕೋಟಿ ರೂ.ಗಳು. ಲೇ ಔಟ್ ನಿರ್ಮಾಣದ ನಂತರ ಸರಿ ಸುಮಾರು ೬೦, ೮೭೯ ಸೈಟುಗಳು ನಾಗರಿಕರಿಗೆ ಲಭ್ಯವಾಗಲಿವೆ. ೨೦*೩೦, ೩೦*೪೦ ಹಾಗೂ ೫೦*೮೦ ಚದರಡಿ ಅಳತೆಯ ಪರಿಸರ ಪ್ರೇಮಿ ಸೈಟುಗಳಿವು. ಲೇ ಔಟ್ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲು ಎರಡು ಪೈಪ್‌ಲೈನ್ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ "ದಿಲ್ಲಿ ಮಾಸ್ಟರ್ ಪ್ಲ್ಯಾನ್" ಈಗಾಗಲೇ ಸಿದ್ಧವಾಗಿದೆ. ಸಿಡಿಪಿ ನಿಯಮಾನುಸಾರ ಸೈಟುಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
ಈ ನೂತನ ಲೇ ಔಟ್‌ಗಳ ನಿರ್ಮಾಣದ ಜತೆಗೆ ಸುಮಾರು ೧೦೦ ಎಕ್ರೆ ಪ್ರದೇಶ ವ್ಯಾಪ್ತಿಯಲ್ಲಿ ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ಯೋಜನೆಯೂ ಬಿಡಿಎ ಮುಂದಿದೆ. ಈ ಯೋಜನೆಯಡಿ ಪ್ರತಿ ಲೇ ಔಟ್‌ನಲ್ಲಿ ೧೫,೦೦೦ ಗುಂಪು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟಾರೆ ಮೂರು ವರ್ಷಗಳ ಅವಧಿಯಲ್ಲಿ ೬೫,೦೦೦ ಗುಂಪು ಮನೆಗಳನ್ನು ನಿರ್ಮಿಸುವುದು ಬಿಡಿಎಯ ಗುರಿ. ಇವು ಸಮಾಜದ ಎಲ್ಲಾ ವರ್ಗದ ಜನರಿಗೆ ಲಭ್ಯವಾಗುವ ವಸತಿ ನಿವೇಶನಗಳು. ಈ ಯೋಜನೆಯಡಿ ಕೆಂಗೇರಿ ಹಾಗೂ ಯಶವಂತಪುರ ಹೋಬಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೊಮ್ಮಘಟ್ಟ, ಕೃಷ್ಣಸಾಗರ, ಭೀಮನಕುಪ್ಪೆ, ರಾಮಸಾಗರ, ಸೂಲಿಕೆರೆ, ಕೆಂಚನಪುರ, ರಾಮಸಂಧ್ರ, ಛಲ್ಲಘಟ್ಟ, ಸ್ನೇಹಹಳ್ಳಿ, ಕನ್ನಹಳ್ಳಿ, ಕೋಡಿಗೆಹಳ್ಳಿ ಹಾಗೂ ಮಂಗನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಕೆಂಪೇಗೌಡ ಲೇ ಔಟ್: ಮಾಗಡಿ ಹಾಗೂ ಮೈಸೂರು ರಸ್ತೆಗಳಮದ್ಯೆ, ಕೆಂಗೇರಿ ಹಾಗೂ ಯಶವಂತಪುರ ಹೋಬಳಿ ಪ್ರದೇಶ ವ್ಯಾಪ್ತಿಯ ೧೨ ಗ್ರಾಮಗಳ ೪,೮೧೪ ಎಕ್ರೆ ೧೫ ಗುಂಟೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ. ಅಂದಾಜು ನಿರ್ಮಾಣ ವೆಚ್ಚ : ೨,೬೩೯ ಕೋಟಿ ರೂ.ಗಳು. ವಿವಿಧ ಅಳತೆಯ ೬೦,೮೭೯ಸೈಟುಗಳು ವಾಸಕ್ಕೆ ಲಭ್ಯ.
ಡಾ. ಶಿವರಾಮ ಕಾರಂತ ಲೇ ಔಟ್: ದೊಡ್ಡಬಳ್ಳಾಪುರ ಹಾಗೂ ಹೆಸರುಘಟ್ಟ ರಸ್ತೆಗಳ ಮಧ್ಯೆ, ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಉತ್ತರ ತಾಲೂಕಿನ ಹೆಸರುಘಟ್ಟ, ಯಲಹಂಕ, ಯಶವಂತಪುರ ಹೋಬಳಿ ಪ್ರದೇಶ ವ್ಯಾಪ್ತಿಯ ೧೭ ಗ್ರಾಮಗಳ ೩,೫೪೬ ಎಕ್ರೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ. ವಿವಿಧ ಅಳತೆಯ ೧೮,೯೭೫ ಸೈಟುಗಳು ವಾಸಕ್ಕೆ ಲಭ್ಯ. ಅಂದಾಜು ನಿರ್ಮಾಣ ವೆಚ್ಚ : ೧,೮೪೭ ಕೋಟಿ ರೂ.ಗಳು.
ಕೆ.ಸಿ. ರೆಡ್ಡಿ, ಎಸ್. ನಿಜಲಿಂಗಪ್ಪ  ಹಾಗೂ ಡಿ. ದೇವರಾಜ ಅರಸು ಲೇ ಔಟ್‌ಗಳ ನಿರ್ಮಾಣಕ್ಕೆ ೨೦೦೯ರ ಫೆಬ್ರವರಿಯಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹಾಗೂ ಗುಂಜೂರು ನಡುವೆ ಈ ಲೇ ಔಟ್‌ಗಳು ಅಸ್ತಿತ್ವಕ್ಕೆ ಬರಲಿವೆ.
ಡಿ. ದೇವರಾಜ್ ಅರಸು ಲೇ ಔಟ್: ವಿಮಾನ ನಿಲ್ದಾಣ ರಸ್ತೆ ಹಾಗೂ ವರ್ತೂರು ಗ್ರಾಮದ ನಡುವಿನ ೧೦ ಗ್ರಾಮಗಳ ೧,೯೭೬ ಎಕ್ರೆ ೧೦ ಗುಂಟೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ. ಅಂದಾಜು ನಿರ್ಮಾಣ ವೆಚ್ಚ : ೧,೧೦೮ ಕೋಟಿ ರೂ.ಗಳು. ವಿವಿಧ ಅಳತೆಯ ೨೪, ೯೦೪ ಸೈಟುಗಳು ವಾಸಕ್ಕೆ ಲಭ್ಯ.
ನಿಜಲಿಂಗಪ್ಪ ಲೇ ಔಟ್: ವರ್ತೂರು ಗ್ರಾಮ ಹಾಗೂ ಸರ್ಜಾಪುರ ರಸ್ತೆಗಳ ಮಧ್ಯೆ ಹರಡಿರುವ ೮ ಗ್ರಾಮಗಳ ೨,೮೦೬ ಎಕ್ರೆ ೯ ಗುಂಟೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ. ಅಂದಾಜು ನಿರ್ಮಾಣ ವೆಚ್ಚ : ೧,೫೫೦ ಕೋಟಿ ರೂ.ಗಳು. ವಿವಿಧ ಅಳತೆಯ ೩೫,೪೫೧ ಸೈಟುಗಳು ವಾಸಕ್ಕೆ ಲಭ್ಯ.
ಕೆ.ಸಿ. ರೆಡ್ಡಿ ಲೇ ಔಟ್: ಸರ್ಜಾಪುರ ರಸ್ತೆ ಮತ್ತು ಬೆಂಗಳೂರು ದಕ್ಷಿಣ ಪ್ರದೇಶಗಳ ನಡುವಿನ ೨,೧೩೪ ಎಕ್ರೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ.

* ಐದು ಲೇ ಔಟ್‌ಗಳಿಂದ ಒಟ್ಟು ೧.೭೬ ಲಕ್ಷ ಸೈಟುಗಳು ನಾಗರಿಕರಿಗೆ ಲಭ್ಯವಾಗಲಿವೆ.

( ಆಗಸ್ಟ್ ೨೭, ೨೦೧೧ರ್ "ವಿಜಯ ಕರ್ನಾಟಕದ- ವಿ.ಕೆ. ಪ್ರಾಪಟ್ರಿ" ಯಲ್ಲಿ ಪ್ರಕಟವಾದ ಲೇಖನ.)

ವಿದ್ಯೆ ನೀಡುವ ಗುರುವೆ, ನಿನಗಿದು ತರವೆ?

     ಬೆಳಗ್ಗೆ ಬೇಗನೆ ಎದ್ದು, ಗಡಿಬಿಡಿಯಲ್ಲಿ ತಿಂಡಿ ತಿಂದು, ದೂರದಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಮಕ್ಕಳು ತರಗತಿಯಲ್ಲಿ ಕುಳಿತು ಗುರುಗಳ ಬರುವಿಗೆ ಕಾದಿದ್ದರು. ಬೆಲ್ ಹೊಡೆದು ಬಹಳ ಹೊತ್ತಾಗಿತ್ತು. ಇನ್ನೇನು ಮೇಷ್ಟ್ರು ಬರ್‍ತಾರೆ, ಪಾಠ ಮಾಡ್ತಾರೆ ಎಂದು ಮಕ್ಕಳು ಕಾಯುತ್ತಿದ್ದರೆ ಅವರು ಬರಲೇ ಇಲ್ಲ. ಸ್ವಲ್ಪ ಹೊತ್ತು ಬಿಟ್ಟು ಸ್ಟಾಪ್ ರೂಮಿಗೆ ತೆರಳಿ ನೋಡಿದರೆ ಮೇಷ್ಟ್ರು ಗೊರಕೆ ಹೊಡೆಯುತ್ತಿದ್ದರು. "ಮೇಷ್ಟ್ರೇ.. ಎದ್ದೇಳಿ ಪಾಠಮಾಡಿ" ಎಂದು ಮಕ್ಕಳು ಗೋಗರೆದರೆ ಪುಣ್ಯಾತ್ಮ ಏಳಲೇ ಇಲ್ಲ. ಹತ್ತಿರ ಹೋದರೆ ಮದ್ಯದ ವಾಸನೆ, ಮೂಗು ಮುಚ್ಚಿಸುವ ಘಮಲು. ವಿಷಯ ತಿಳಿದು ಮಾಧ್ಯಮದವರೂ ಬಂದರು. ಫೋಟೊ ಕ್ಲಿಕ್ಕಿಸಿದರು. ಆದರೆ, ಇದ್ಯಾವುದರ ಪರಿವೆಯೇ ಇಲ್ಲದ ಶಾಲೆಯ ಮುಖ್ಯಾಧ್ಯಾಪಕರು ಬೆಳ್ಳಂ ಬೆಳಗೆ ನಿದ್ರಾಲೋಕದಲ್ಲಿ ತೇಲುತ್ತಿದ್ದರು.
     ಹಾಸನ ತಾಲೂಕಿನ ಉಗನೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯಿದು.
ಹರಿಹರ ತಾಲೂಕು ರಾಮತೀರ್ಥ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು. ಇದು ಕೆಲವು ತಿಂಗಳ ಹಿಂದೆ ನಡೆದ ಘಟನೆ. ಇವು ಕೆಲವು ಉದಾಹರಣೆಗಳು ಮಾತ್ರ. ಇಂತಹ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.
     ಈ ವರ್ಷದ ಆರಂಭದ ದಿನವೇ ರಾಜ್ಯದಲ್ಲಿ ನಾಲ್ವರು ಶಿಕ್ಷಕ/ಶಿಕ್ಷಕಿಯರು ಅಮಾನತುಗೊಂಡಿದ್ದಾರೆ. ಶಾಲೆಯ ಪುನರಾರಂಭ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಸರಕಾರದ ಆದೇಶ ಕಡೆಗಣಿಸಿ, ನಿರ್ಲಕ್ಷ್ಯ ತೋರಿದ ಆಪಾದನೆ ಮೇಲೆ ಇವರೆಲ್ಲಾ ಅಮಾನತುಗೊಂಡವರು.
     ಶಿಸ್ತನ್ನು ಕಲಿಸಬೇಕಾದ ಗುರುವೇ ಅಶಿಸ್ತಿನಿಂದ ವರ್ತಿಸಿದರೆ ಬದುಕಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕಾದ ಮಕ್ಕಳ ಗತಿಯೇನು. "ಸುರಾಪಾನ, ಬದುಕಿನ ಅಂತ್ಯಕ್ಕೆ ಸೋಪಾನ" ಎಂದು ಬೋದಿಸುವ ಗುರುವೇ ಮದ್ಯ ಸೇವಿಸಿ ಶಾಲೆಗೆ ಬಂದರೆ, "ಧೂಮಪಾನ ಆರೋಗ್ಯಕ್ಕೆ ಹಾನಿಕರ" ಎಂದು ಉಪದೇಶಿಸುವ ಶಿಕ್ಷಕನೇ ಮಕ್ಕಳೆದುರು ಧೂಮಪಾನ ಮಾಡಿದರೆ, ಶಿಸ್ತನ್ನು ಕಲಿಸಬೇಕಾದ ಶಿಕ್ಷಕ/ಶಿಕ್ಷಕಿಯೇ ಅಶಿಸ್ತಿನಿಂದ ವರ್ತಿಸಿದರೆ, " ಹೆಣ್ಣನ್ನು ಗೌರವಿಸಿ, ದೇವತೆಯೆಂದು ಪೂಜಿಸಿ" ಎಂದು ತಿಳಿ ಹೇಳುವ ಉಪಾಧ್ಯಾಯನೇ ಶಾಲೆಗೆ ಬರುವ ಹೆಣ್ಣು ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದರೆ ಏನನ್ನೋಣ.
     ಮಕ್ಕಳ ಹತ್ತಿರ ಬೀಡಿ, ಸಿಗರೇಟು ತರಿಸಿಕೊಂಡು ಅವರ ಮುಂದೆಯೇ ಹೊಗೆಯುಗುಳುವ ಕೆಲವು ಶಿಕ್ಷಕರು ನಮ್ಮಲ್ಲಿದ್ದಾರೆ. ತರಗತಿಯಲ್ಲಿ ಕುಳಿತೇ ನಿದ್ದೆ ಹೋಗುವ ಪ್ರವೃತ್ತಿ ನಮ್ಮಲ್ಲಿನ ಕೆಲವು ಶಿಕ್ಷಕರಲ್ಲಿದೆ. ಪಾಠ ಮಾಡುವಾಗ ಗುಟ್ಕಾ ಜಗಿಯುವ, ತಂಬಾಕು ಅಗಿಯುವ, ಮೂಗಿಗೆ ನಶ್ಯಾ ಏರಿಸುವ ಪರಿಪಾಠ ಕೆಲವು ಶಿಕ್ಷಕರಿಗಿದೆ. ಹಾಗೆಯೇ ತಮಗೆ ಗೊತ್ತಿಲ್ಲದ ವಿಷಯವನ್ನು ಗೊತ್ತಿಲ್ಲ ಎಂದು ಹೇಳಲು ಸಂಕೋಚಪಟ್ಟುಕೊಂಡು ಸುಳ್ಳು ಹೇಳುವ ಮನೋಭಾವವೂ ಕೆಲವು ಶಿಕ್ಷಕರಲ್ಲಿದೆ. ಗುರುಗಳು ಸುಳ್ಳು ಹೇಳುತ್ತಿದ್ದಾರೆ ಎಂಬುದು ಮಕ್ಕಳಿಗೆ ಗೊತ್ತಾದರೆ ಅವರಿಗೆ ಗುರುಗಳ ಬಗ್ಗೆ ಇರುವ ಗೌರವ ಕಡಿಮೆಯಾಗದೇ ಇರದು.
ಹಳ್ಳಿಗಳ ಕಡೆ ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಬರುವುದೇ ತಡವಾಗಿ. ಬಂದರೂ ಪಾಠ ಮಾಡುವುದು ಕಡಿಮೆಯೇ. ಇನ್ನು ಎಷ್ಟೋ ಶಾಲೆಗಳಲ್ಲಿ ಮಕ್ಕಳ ಹತ್ತಿರ ತಮ್ಮ ಸ್ವಂತ ಕೆಲಸಗಳನ್ನು ಮಾಡಿಸಿಕೊಳ್ಳುವ ಪದ್ಧತಿಯೂ ಕೆಲವು ಶಿಕ್ಷಕರಲ್ಲಿದೆ. ವಾರಕ್ಕೆ ಆರು ದಿನ ಶಾಲೆಗೆ ಬಂದು ಪಾಠ ಮಾಡಬೇಕಾದ ಶಿಕ್ಷಕರು ಎರಡು-ಮೂರು ದಿನಗಳಷ್ಟೇ ಪಾಠ ಮಾಡುವ ಉದಾಹರಣೆಗಳೂ ಸಾಕಷ್ಟಿವೆ. ಆ ಪಾಠವೂ ಕೆಲವೇ ಗಂಟೆಗಳಿಗೆ ಸೀಮಿತ.
     ಕೆಲವು ಶಿಕ್ಷಕರು ಮಕ್ಕಳಿಗೆ ಹೊಡೆಯುವುದೇ ಪಾಠ ಕಲಿಸುವ ವಿಧಾನ ಎಂದು ತಿಳಿಯುತ್ತಾರೆ. ಹಾಗಾಗಿ, ತಿಳಿ ಹೇಳಿ, ಬೋಧನೆ ಮೂಲಕ ಜ್ಞಾನ ಎರೆಯುವುದರ ಬದಲು, ಛಡಿಯೇಟು ನೀಡಿ ಮಕ್ಕಳಲ್ಲಿ ಒಂದು ರೀತಿಯ ಭಯದ ಮನಸ್ಥಿತಿ ನಿರ್ಮಿಸುತ್ತಾರೆ. ಆ ಮೂಲಕ ಮಕ್ಕಳಲ್ಲಿ ಪಾಠದ ಬಗ್ಗೆ ಆಸಕ್ತಿ ಕೆರಳಿಸುವ ಬದಲು, ನಿರುತ್ಸಾಹದ ಮನೋಭಾವ ಮೂಡಿಸುತ್ತಾರೆ. ಮಕ್ಕಳು ಪ್ರಶ್ನೆ ಕೇಳಿದರೆ, ಹೊಸತನ್ನು ಕಲಿಯಲು ಉತ್ಸಾಹ ತೋರಿದರೆ ಪ್ರೋತ್ಸಾಹಿಸುವ ಬದಲು, ಗದರಿಸಿ ಸುಮ್ಮನಿರಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ.
     ಪಾಠ ಮಾಡುವ ಶಿಕ್ಷಕರನ್ನು ಮಕ್ಕಳು ಸದಾ ಗಮನಿಸುತ್ತಿರುತ್ತಾರೆ. ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ. ನಡವಳಿಕೆಗಳನ್ನು ಅನುಸರಿಸಲು ಯತ್ನಿಸುತ್ತಾರೆ. ಅವರ ಬದುಕಿನ ರೀತಿ-ನೀತಿಗಳನ್ನು ಮೈಗೂಡಿಸಿಕೊಳ್ಳಲು ತವಕಿಸುತ್ತಾರೆ. ಅವರ ಹಾವ-ಭಾವಗಳ ಬಗ್ಗೆ ಉತ್ಸುಕರಾಗಿರುತ್ತಾರೆ.
     ಮಕ್ಕಳನ್ನು ತಿದ್ದಿ, ತೀಡಿ, ಬುದ್ಧಿ ಹೇಳಿ, ಪಾಠ ಮಾಡುವ ಶಿಕ್ಷಕ/ಶಿಕ್ಷಕಿಯರನ್ನು ಮಕ್ಕಳು ದೇವರೆಂದು ಪೂಜಿಸುತ್ತಾರೆ. ತಮ್ಮ ಮಕ್ಕಳಿಗೆ ಜ್ಞಾನ ಧಾರೆ ಏರೆಯುವ ಶಿಕ್ಷಕ ವೃಂದದ ಮೇಲೆ ಪಾಲಕರಿಗೆ ವಿಶೇಷ ಗೌರವವಿರುತ್ತದೆ. ಆದರೆ, ಕೆಲವೇ ಕೆಲವು ದುರ್ನಡತೆಯ ಶಿಕ್ಷಕ/ಶಿಕ್ಷಕರಿಂದಾಗಿ ಇಡೀ ಶಿಕ್ಷಕ ಸಮುದಾಯದ ಮೇಲೆಯೇ ಕೆಟ್ಟ ಹೆಸರು ಬರುತ್ತದೆ. ಎಲ್ಲೋ, ಏನೋ, ಎಂದೋ ಮಾಡುವ ತಪ್ಪಿಗೆ ಜೀವನಪೂರ್ತಿ ನಡೆಸಿಕೊಂಡು ಬಂದ ಆದರ್ಶ ಜೀವನ ಹಾಳಾಗಿ ಬಿಡುತ್ತದೆ. ಹಾಗಾಗಿ ಶಿಕ್ಷಕ/ಶಿಕ್ಷಕಿಯರು ಸದಾ ಎಚ್ಚರದಿಂದ ಇರಬೇಕಾದುದು ಅನಿವಾರ್ಯ. ವೃತ್ತಿಯ ಅಗತ್ಯ ಕೂಡ.
ಮಳೆಯ ಜನ್ಯ ಪರ್ಜನ್ಯ


ಪರ್ಜನ್ಯ ಎಂಬುದು ಮೂಲತ: ಸಂಸ್ಕ್ರತ ಪದ. ಪರ್ಜನ್ಯ ಎಂಬುದು ಮಳೆಗಾಗಿ ಮಳೆಯ ದೇವತೆಯನ್ನು ಆರಾದಿಸುವ ಒಂದು ಪೂಜಾ ಕ್ರಮ. ಹಿಂದೂ ಪುರಾಣಗಳಲ್ಲಿ ಪರ್ಜನ್ಯದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಪುರಾಣಗಳ ಪ್ರಕಾರ ಮಳೆಯ ಅದಿದೇವತೆ ವರುಣ. ಆತ ನೀರಿನ, ಮಳೆಯ, ಆಗಸದ ದೇವತೆ. ಹಾಗಾಗಿ, ದೇಶದ ಯಾವುದಾದರೂ ಒಂದು ಪ್ರದೇಶದಲ್ಲಿ ಬರಗಾಲ ಸಂಭವಿಸಿದಾಗ, ಮಳೆಯ ತೀವ್ರ ಕೊರತೆ ಉಂಟಾದಾಗ ಅಥವಾ ಸಕಾಲಕ್ಕೆ ಬರಬೇಕಾದ ಮಳೆ ಬಾರದೇ ಇದ್ದಾಗ ಆಸ್ತಿಕರು ಪರ್ಜನ್ಯದ ಮೊರೆ ಹೋಗುತ್ತಾರೆ. ತಮ್ಮ ನೆಚ್ಚಿನ ದೇವರಿಗೆ ಪರ್ಜನ್ಯ ನೆರವೇರಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಾರೆ. ಪರ್ಜನ್ಯ ನಡೆಸುವ ವಿಧಾನ, ಶಾಸ್ತ್ರ, ಪದ್ಧತಿಗಳು ಸಾಧಾರಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಅದೇ ರೀತಿ ಜನರ ಆಚರಣೆಯ ಪದ್ಧತಿಯೂ ವಿಭಿನ್ನ.
ಕೆಲವು ಪ್ರದೇಶಗಳಲ್ಲಿ ಭಕ್ತರು ತಮ್ಮ ಇಷ್ಟದೇವರಿಗೆ ಪ್ರಿಯವಾದ ಮಂತ್ರ ಪಠಿಸುತ್ತಾ, ತಲೆ ಮೇಲಿಂದ ನೀರು, ಇನ್ನಿತರ ದ್ರವ್ಯಗಳಿಂದ ಅಭಿಷೇಕ ಮಾಡುತ್ತಾರೆ. ಹೀಗೆ ಅಭಿಷೇಕ ಮಾಡಿದ ನೀರು ದೇವರ ತಲೆ ಮೇಲಿಂದ ಹರಿದು ಬಂದು ಸಮೀಪದ ಕೆರೆ, ನದಿಗಳನ್ನು ಸೇರಿದರೆ ದೇವ ಸಂಪ್ರೀತನಾಗಿ ಮಳೆ ಸುರಿಸುತ್ತಾನೆ ಎಂಬುದು ನಂಬಿಕೆ. ಗುಜರಾತ, ಮದ್ಯಪ್ರದೇಶ ಸೇರಿದಂತೆ ದೇಶದ ಇನ್ನಿತರ ಕೆಲವು ಭಾಗಗಳಲ್ಲಿ ಪರ್ಜನ್ಯದ ಆಚರಣೆ ಸ್ವಲ್ಪ ವಿಭಿನ್ನ. ದೊಡ್ಡ ತಾಮ್ರದ ಪಾತ್ರೆಯಲ್ಲಿ ಪನ್ನೀರನ್ನು ತುಂಬಿ, ಅದಕ್ಕೆ
ಹೂವು, ಗಂಧ, ಕುಂಕುಮ, ಅರಿಷಿಣಗಳನ್ನು ಹಾಕಿ ಪೂಜಿಸುತ್ತಾರೆ. ನಂತರ ಆ ನೀರಿನಲ್ಲಿ ಕೂರುವ ವೈದಿಕರು ವರುಣದೇವನನ್ನು ಸ್ತುತಿಸುತ್ತಾರೆ. ಈ ಪೂಜೆಯಿಂದ ಸಂಪ್ರೀತನಾಗುವ ವರುಣದೇವ ಮಳೆ ಸುರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.
ಸಾಧಾರಣವಾಗಿ ಆಯಾ ದೇವತೆಗಳಿಗೆ ಇಷ್ಟವೆಂದು ವೈದಿಕ ಪುರಾಣಗಳಲ್ಲಿ ಉಲ್ಲೇಖವಾಗಿರುವ ಮಂತ್ರಗಳನ್ನೇ ವೈದಿಕರು ಪಠಿಸುತ್ತಾರೆ. ಉದಾಹರಣೆಗೆ ಶಿವನಿಗೆ ರುದ್ರಪಠಣ, ದೇವಿಗೆ ಶ್ರೀ ಸೂಕ್ತ, ದುರ್ಗಾ ಸೂಕ್ತ ಹಾಗೂ ದೇವಿ ಸೂಕ್ತ. ವಿಷ್ಣುವಿಗೆ ಪುರುಷ ಸೂಕ್ತ, ಗಣಪತಿಗೆ ಉಪನಿಷತ್ತು ಇತ್ಯಾದಿ.
ಹಿಂದಿನ ವೇದ, ಪುರಾಣಗಳ ಕಾಲದಿಂದಲೂ ಪರ್ಜನ್ಯದ ಆಚರಣೆ ಅಸ್ತಿತ್ವದಲ್ಲಿದೆ. ಶತ, ಶತಮಾನಗಳಿಂದ ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಶಾಸ್ತ್ರ, ಪುರಾಣಗಳು ಪರ್ಜನ್ಯಕ್ಕೆ ವಿವಿಧ ರೀತಿಯ ಅರ್ಥ, ವ್ಯಾಖ್ಯಾನ ನೀಡಿವೆ. ಋಗ್ವೇದದ ಪ್ರಕಾರ, ಪರ್ಜನ್ಯವೆಂದರೆ ಮಳೆಯ ದೇವರು ಎಂದರ್ಥ. ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸುವ ಮಂತ್ರಗಳು ಅಥರ್ವಣ ವೇದದಲ್ಲಿ ನಮಗೆ ಕಾಣ ಸಿಗುತ್ತವೆ.
ಐದನೇ ಮನ್ವಂತರದ ಪ್ರಕಾರ ಪರ್ಜನ್ಯ ಎಂಬಾತ ಸಪ್ತ ಋಷಿಗಳಲ್ಲಿ ಒಬ್ಬ. ಹರಿವಂಶ ಹೇಳುವಂತೆ ಈತ ಒಬ್ಬ ಗಂಧರ್ವ. ೭೨ ರಶ್ಮಿಗಳ ಪೈಕಿ ಪರ್ಜನ್ಯ ಕೂಡ ಒಂದು ಹಾಗೂ ಇದು ಶ್ರವಣ ತಿಂಗಳಿನಲ್ಲಿ ಪ್ರಕಾಶಿಸುತ್ತದೆ. ವಿಷ್ಣು ಪುರಾಣದ ಪ್ರಕಾರ, ಈತ ೧೨ ಮಾಸಗಳಲ್ಲಿ ಒಂದಾದ ಕಾರ್ತಿಕದ ಪೋಷಕನಾದ ಆದಿತ್ಯ. ಪರ್ಜನ್ಯನನ್ನು ಪೃಥ್ವಿಯ ಪತಿ ಎಂದೂ ಸಾಂಕೇತಿಕವಾಗಿ ಗುರುತಿಸಲಾಗುತ್ತದೆ. ಈತ ಲೋಕರಕ್ಷಕನಾದ ಲೋಕಪಾಲನೂ ಹೌದು.
ಈ ಮದ್ಯೆ, ಅಖಿಲ ಭಾರತೀಯ ಜ್ಯೋತಿಷಿಗಳ ವೇದಿಕೆ, ಮಳೆಯ ಮುನ್ಸೂಚನೆ ನೀಡಲು "ಪರ್ಜನ್ಯ" ಎಂಬ ಸಾಪ್ತವೇರ್ ನ್ನು ಅಭಿವ್ರದ್ದಿಪಡಿಸಿದೆ. ನಿಗದಿಪಡಿಸಿದ ಪ್ರದೇಶದಲ್ಲಿ, ಮಳೆ ಬೀಳಬಹುದಾದ ದಿನಾಂಕ ಹಾಗೂ ಪ್ರಮಾಣವನ್ನು ತಿಳಿಸಲು ಸಾದ್ಯ ಎನ್ನುತ್ತಾರೆ ತಂತ್ರಜ್ನರು.


ಅಣ್ಣಾ ಹೋರಾಟ, ಸರಕಾರದ ಪರದಾಟ     ಮೂಗಿನ ತುದಿಗೆ ತುಪ್ಪ ಬಳಿದು, ಅದರ ವಾಸನೆಯನ್ನು ಆಘ್ರಾಣಿಸುವಂತೆ  ಪ್ರೇರೇಪಿಸುವ ಸರಕಾರದ ಲೋಕಪಾಲ ವಿಧೇಯಕಕ್ಕೂ, ಸರಕಾರದ ಮಟ್ಟದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಡುತ್ತಿರುವ ನಾಗರಿಕ ಸಮಿತಿ ಸದಸ್ಯರ ಜನ ಲೋಕಪಾಲ ವಿಧೇಯಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಭ್ರಷ್ಟಾಚಾರದ ಬಿಸಿಗೆ ಜನಸಾಮಾನ್ಯನಿಂದು ತತ್ತರಿಸಿದ್ದಾನೆ. ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಈ ಆಕ್ರೋಶವೇ ಇಂದು ಅಣ್ಣಾ ಹೋರಾಟಕ್ಕೆ ಬೆಂಬಲದ ರೂಪವಾಗಿ ಹರಿದು ಬರುತ್ತಿದೆ.
     ಇದಕ್ಕೆ ವ್ಯತಿರಿಕ್ತವಾಗಿ ಜನಪ್ರತಿನಿಧಿಗಳಿಗೆ ಭ್ರಷ್ಟಾಚಾರ ತೊಲಗುವುದು ಇಷ್ಟವಿಲ್ಲ. ಚುನಾವಣೆ ಎದುರಿಸಲು ಹಣ ಬೇಕು. ಅಧಿಕಾರದಲ್ಲಿ ಮುಂದುವರಿಯಲೂ ಹಣ ಬೇಕು. ತಮಗೆ ಬೇಕಾದ ಅಧಿಕಾರಿಗಳು ಸೂಕ್ತ ಸ್ಥಾನದಲ್ಲಿರಬೇಕಾದರೆ ಭ್ರಷ್ಟಾಚಾರಿಗಳು ಇರಬೇಕು. ಅವರ ಮೂಲಕ ತಮಗೂ ಹಣ ಸಂದಾಯವಾಗುತ್ತಿರಬೇಕು. ಹಾಗಾಗಿಯೇ, ಹಲ್ಲಿಲ್ಲದ ಲೋಕಪಾಲ ವಿಧೇಯಕ ಮಂಡನೆಗೆ ಸರಕಾರ ಮುಂದಾಗಿದೆ. ಸರಕಾರದ ವಿರುದ್ಧ ಪ್ರತಿಪಕ್ಷಗಳು, ಪ್ರತಿಪಕ್ಷಗಳ ವಿರುದ್ಧ ಅಧಿಕಾರ ನಡೆಸುತ್ತಿರುವವರು ಆಪಾದನೆ ಮಾಡುತ್ತಲೇ ಇರಬೇಕು. ಆ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿರಬೇಕು ಎಂಬುದು ಅಧಿಕಾರಸ್ಥರ ಹಂಬಲ.
     ಇಂದಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಅಕ್ರಮ ಸಂಪತ್ತು ಗಳಿಕೆ ಹಾಗೂ ದುರ್ನಡತೆ ಆರೋಪದ ಹಿನ್ನೆಲೆಯಲ್ಲಿ ಕೋಲ್ಕೊತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮಿತ್ರಾ ಸೇನ್ ವಿರುದ್ಧ ರಾಜ್ಯಸಭೆ ಮಹಾಭಿಯೋಗ ವಿಧೇಯಕ ಅಂಗೀಕರಿಸಿರುವುದು, ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ವಿರುದ್ಧ ಭ್ರಷ್ಟಾಚಾರದ ಆರೋಪ ಇರುವುದು ಈ ಅಂಶವನ್ನು ಪುಷ್ಠೀಕರಿಸುತ್ತದೆ. ಹಾಗಾಗಿ, ನ್ಯಾಯಾಧೀಶರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ಲೋಕಪಾಲಗೆ ಇರಬೇಕು ಎನ್ನುವುದು ನಾಗರಿಕ ಸಮಿತಿ ಸದಸ್ಯರ ವಾದ. ಆದರೆ, ನ್ಯಾಯಾಂಗ ವ್ಯವಸ್ಥೆಯನ್ನು ಲೋಕಪಾಲ ವ್ಯಾಪ್ತಿಗೆ ತರುವುದಕ್ಕೆ ಸರಕಾರದ ಸಹಮತವಿಲ್ಲ. ಇದಕ್ಕಾಗಿಯೇ ನ್ಯಾಯಾಂಗ ಉತ್ತರದಾಯಿತ್ವ ವಿಧೇಯಕ ಮಂಡಿಸುವುದು ಸರಕಾರದ ಉದ್ದೇಶ. ಆದರೆ, ನ್ಯಾಯಾಧೀಶರ ವಿರುದ್ಧ ಇರುವ ಗಂಭೀರ ಅಪರಾಧ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ನ್ಯಾಯಾಂಗ ಉತ್ತರದಾಯಿತ್ವ ವಿಧೇಯಕಕ್ಕೆ ಇಲ್ಲ ಎಂಬುದು ಅಣ್ಣಾ ತಂಡದ ಅಳಲು.
     ಪ್ರಧಾನಿ, ಸಚಿವರು, ಸಂಸದರು ಲೋಕಪಾಲ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪ ಬಂದರೆ ತನಿಖೆಗೆ ಸರಕಾರ ಮಂಡಿಸಿರುವ ಲೋಕಪಾಲದಲ್ಲಿ ಅವಕಾಶವಿಲ್ಲ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರವಷ್ಟೇ ತನಿಖೆಗೆ ಅವಕಾಶ. ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ಯುಪಿಎ ಪರ ಮತ ಹಾಕಲು ಲಂಚ ಸ್ವೀಕರಿಸಿದ ಆರೋಪ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈಗಲಾದರೂ, ಈ ಬಗ್ಗೆ ಗಮನ ಹರಿಸದಿದ್ದರೆ, ಸಂಸದರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರಸ್ತುತ ಪ್ರಧಾನಿ ವಿರುದ್ಧ ಆರೋಪ ಕೇಳಿ ಬಂದರೆ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಸಿಬಿಐ ತನಿಖೆ ನಡೆಸುತ್ತದೆ. ಅಂತಿಮವಾಗಿ ವರದಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸುತ್ತದೆ. ಪ್ರಧಾನಿ ಕಾರ್ಯಾಲಯಕ್ಕೆ ಅಧೀನವಾಗಿ ಕೆಲಸ ನಿರ್ವಹಿಸುವ ಸಿಬಿಐ, ಪ್ರಧಾನಿ ವಿರುದ್ಧದ ತನಿಖೆಯನ್ನು ಅದೆಷ್ಟು ಸಮರ್ಥವಾಗಿ ನಿರ್ವಹಿಸಬಲ್ಲುದು ಎಂಬುದು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.
     ಹಲವು ರಾಜ್ಯಗಳಲ್ಲಿ ಲೋಕಾಯುಕ್ತ ಇಲ್ಲ. ಹಾಗಾಗಿ, ಕೇಂದ್ರ ಮಟ್ಟದಲ್ಲಿ ಸಮರ್ಥ ಲೋಕಪಾಲ ಹಾಗೂ ರಾಜ್ಯಗಳ ಮಟ್ಟದಲ್ಲಿ ಲೋಕಾಯುಕ್ತ ರಚನೆಯಾಗಬೇಕು ಎಂಬುದು ಜನ ಲೋಕಪಾಲ ವಿಧೇಯಕದ ಆಗ್ರಹ. ಲೋಕಾಯುಕ್ತ ಸಮರ್ಥವಾಗಿ ಕೆಲಸ ನಿರ್ವಹಿಸಿದರೆ, ಭ್ರಷ್ಟಾಚಾರವನ್ನು ಅದೆಷ್ಟು ಸಮರ್ಥವಾಗಿ ತಡೆಯಬಹುದು ಎಂಬುದನ್ನು ರಾಜ್ಯದಲ್ಲಿ ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಮರ್ಥವಾಗಿ ನಿರೂಪಿಸಿದ್ದಾರೆ.
     ಇವೆಲ್ಲಕ್ಕಿಂತ ಮುಖ್ಯವಾಗಿ ಸರಕಾರ ಮಂಡಿಸುತ್ತಿರುವ ವಿಧೇಯಕ ಸರಕಾರಿ ನೌಕರರ ಪರವಾಗಿದೆ. ಭ್ರಷ್ಟಾಚಾರದ ವಿರುದ್ಧ ದೂರು ನೀಡುವವರ ವಿರುದ್ಧವಾಗಿದೆ. ಇದು ನಾಗರಿಕ ಸಮಿತಿ ಸದಸ್ಯರ ಕೋಪಕ್ಕೆ ಪ್ರಮುಖ ಕಾರಣ. ಸರಕಾರದಲ್ಲಿ ಸಾರ್ವಜನಿಕರ ಕೆಲಸ ಸಕಾಲಕ್ಕೆ ಆಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಭ್ರಷ್ಟಾಚಾರ. ಲಂಚ ನೀಡಿದರೆ ಮಾತ್ರ ಸಾರ್ವಜನಿಕರ ಕೆಲಸ ಬೇಗನೆ ಆಗುತ್ತದೆ. ಲಂಚ ನೀಡದಿದ್ದರೆ ಸತಾಯಿಸಿ, ಸತಾಯಿಸಿ, ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಾರೆ. ಎಷ್ಟೊ ಸಂದರ್ಭಗಳಲ್ಲಿ ಲಂಚ ನೀಡದಿದ್ದರೆ ಕೆಲಸವೇ ಆಗುವುದಿಲ್ಲ. ಹಾಗಾಗಿ, ಸಾರ್ವಜನಿಕರ ಕೆಲಸ ಮಾಡಿಕೊಡಲು ವಿಫಲನಾದ ಅಧಿಕಾರಿಗೆ ದಂಡ ವಿಧಿಸಲು ಅವಕಾಶ ಮಾಡಿಕೊಡುವುದು ಜನಲೋಕಪಾಲ ವಿಧೇಯಕದ ಧ್ಯೇಯ. ಅಲ್ಲದೆ, ಸರಕಾರಿ ಅಧಿಕಾರಿಯ ವಿರುದ್ಧ ದೂರು ಸಲ್ಲಿಸುವ ಜನಸಾಮಾನ್ಯನಿಗೆ, ಲಂಚ ನೀಡಿದ್ದಕ್ಕೆ ಸಾಕ್ಷಿಯಾದವರಿಗೆ ಹಾಗೂ ಭ್ರಷ್ಟಾಚಾರಕ್ಕೆ ಬಲಿಪಶುಗಳಾದವರಿಗೆ ರಕ್ಷಣೆ ಒದಗಿಸಬೇಕು ಎಂಬುದು ನಾಗರಿಕ ಸಮಿತಿ ಸದಸ್ಯರ ಬೇಡಿಕೆ.
     ವಿಪರ್‍ಯಾಸದ ಸಂಗತಿಯೆಂದರೆ, ಒಂದು ವೇಳೆ ಅಧಿಕಾರಿಯ ವಿರುದ್ಧದ ಆರೋಪ ಸಾಬೀತಾಗದಿದ್ದರೆ, ಭ್ರಷ್ಟಾಚಾರದ ದೂರು ನೀಡಿದಾತ ಕನಿಷ್ಠ ೨ ವರ್ಷಗಳ ಸೆರೆಮನೆವಾಸ ಅನುಭವಿಸಬೇಕಾಗುತ್ತದೆ. ಅದೇ ಆರೋಪ ಸಾಬೀತಾದರೆ, ಆರೋಪಿಗೆ ಕೇವಲ ೬ ತಿಂಗಳ ಸಜೆ. ಜತೆಗೆ ತನ್ನ ವಿರುದ್ಧ ಲಂಚದ ಆರೋಪ ಹೊರಿಸಿದ ವ್ಯಕ್ತಿಯ ವಿರುದ್ಧ ಆತ ವಿಶೇಷ ನ್ಯಾಯಾಲಯದಲ್ಲಿ ಪ್ರತಿ ದೂರು ಸಲ್ಲಿಸಬಹುದು. ಆಪಾದಿತ ಅಧಿಕಾರಿಯ ಪರ ವಕಾಲತ್ತು ವಹಿಸುವ ವಕೀಲನ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಅಲ್ಲದೆ, ಅಧಿಕಾರಿ ಮೂರು ಪ್ರತ್ಯೇಕ ವಿಚಾರಣೆ ಎದುರಿಸುತ್ತಾನೆ. ಈ ಮೂರರಲ್ಲಿ ಒಂದರ ವಿಚಾರಣೆ ವೇಳೆ ಆರೋಪ ಸಾಬೀತಾಗದಿದ್ದರೂ ಆತ ಬಚಾವ್. ಹೇಗಿದೆ ನೋಡಿ, ಸರಕಾರ ಮಂಡಿಸುತ್ತಿರುವ ಲೋಕಪಾಲ ವಿಧೇಯಕ !.
ಇಷ್ಟಾಗಿಯೂ ಎಲ್ಲಾ ಸರಕಾರಿ ನೌಕರರೂ ಲೋಕಪಾಲ ವ್ಯಾಪ್ತಿಗೆ ಬರುವುದಿಲ್ಲ. ೧.೨ ಕೋಟಿ ಸರಕಾರಿ ನೌಕರರ ಪೈಕಿ ಲೋಕಪಾಲ ವ್ಯಾಪ್ತಿಗೆ ಬರುವವರು ಕೇವಲ ೬೫,೦೦೦ ನೌಕರರು.  ಗ್ರೂಪ್ "ಎ' ಕೆಳಗಿನ ನೌಕರರನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಎಲ್ಲಾ ನೌಕರರನ್ನೂ ಲೋಕಪಾಲ ವ್ಯಾಪ್ತಿಗೆ ಸೇರಿಸಿದರೆ, ಹೆಚ್ಚಿನ ಹೊರೆ ಬೀಳುತ್ತದೆ. ಕಾರ್ಯ ನಿರ್ವಹಣೆ ಅಸಾಧ್ಯವಾಗಲಿದೆ ಎಂಬುದು ಸರಕಾರ ನೀಡುವ ಕಾರಣ.
     ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಟ್ಟಿರುವ ಹಜಾರೆ ಹಾಗೂ ಮತ್ತವರ ತಂಡ ಮತ್ತು ಭ್ರಷ್ಟಾಚಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಸರಕಾರದ ನಡುವೆ ಕದನ ಆರಂಭವಾಗಿದೆ. ಇಂದು ಅಣ್ಣಾ ಹೋರಾಟದಿಂದ ಭ್ರಷ್ಟಾಚಾರ ವಿರೋಧಿ ಕೂಗಿಗೆ ಬೆಲೆ ಬಂದಿದೆ. ಸೂಕ್ತ ವೇದಿಕೆಯೂ ಸಿದ್ಧವಾಗಿದೆ. ಬನ್ನಿ ಹಜಾರೆ ಅವರ ಹೋರಾಟವನ್ನು ನಾವೂ ಬೆಂಬಲಿಸೋಣ. ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕೈ ಜೋಡಿಸೋಣ.

ಜ್ಞಾನದ ಬೋಧನೆಗೆ ಕೋಮುವಾದದ ಲೇಪನವೇಕೆ?ಶಾಲೆಗೆ ಹೊರಟ ಮಗು ಕಾಲಿಗೆರಗಿ ನಮಸ್ಕರಿಸಿದರೆ ಹಿಂದೆ ಹಿರಿಯರು, "ನೀ ಏನಾದರಾಗು, ಮೊದಲು ಮಾನವನಾಗು. ದೇಶ ಸೇವೆ ಮಾಡಿ, ಭಾರತಮಾತೆಯ ಹೆಮ್ಮೆಯ ಪುತ್ರನಾಗು" ಎಂದು ಹಾರೈಸುತ್ತಿದ್ದರು. ಈಗ ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಹಿರಿಯರ ಆಶೀರ್ವಾದದ ವೈಖರಿಯು ಬದಲಾಗಿದೆ. ಕಾಲಿಗೆರಗುವ ಮಕ್ಕಳಿಗೆ " ನೀನು ಎಂಜಿನಿಯರ್ ಆಗಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಸುಖವಾಗಿರು. ವೈದ್ಯನಾಗು, ವಿದೇಶಕ್ಕೆ ಹೋಗಿ ಹೇರಳ ಹಣ ಸಂಪಾದಿಸು" ಎನ್ನುವ ಹಾರೈಕೆ ಅವರ ಬಾಯಿಂದ ಬರುತ್ತದೆ. ಇದಕ್ಕೆ ಪೂರಕವಾಗಿ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದುತ್ತಿರುವ ಮಕ್ಕಳು ಬುದ್ಧಿವಂತ ವಿಜ್ಞಾನಿಗಳಾಗುತ್ತಿದ್ದಾರೆ. ಚಾಣಾಕ್ಷ ಎಂಜಿನಿಯರ್ ಆಗುತ್ತಿದ್ದಾರೆ. ಖ್ಯಾತ ವೈದ್ಯರಾಗುತ್ತಿದ್ದಾರೆ. ಆದರೆ, ಮನುಷ್ಯರಾಗುವುದನ್ನು ಮರೆಯುತ್ತಿದ್ದಾರೆ.
ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮಕ್ಕಳಿಗೆ ಬಯಸಿದ್ದೆಲ್ಲವೂ ಸಿಗುತ್ತಿವೆ. ವಿಜ್ಞಾನದ ಸವಲತ್ತುಗಳು, ಆರ್ಥಿಕ ಅನುಕೂಲತೆಗಳು, ಮನೋರಂಜನೆಯ ಸಾಮಗ್ರಿಗಳು ಎಲ್ಲವೂ ಲಭ್ಯ. ಕಂಪ್ಯೂಟರ್ ಬಳಕೆ, ಸಿನಿಮಾ ಮಾಧ್ಯಮಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಸ್ವೇಚ್ಚಾಚಾರದ ಪ್ರವೃತ್ತಿ ಹೆಚ್ಚುತ್ತಿದೆ.ರಾಗಿಂಗ್, ಅಪರಾಧ ಪ್ರಕರಣಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯ ಪ್ರಮಾಣ ಅಧಿಕವಾಗುತ್ತಿದೆ. ಇದಕ್ಕೆ ಮೂಲ ಕಾರಣ ನೈತಿಕ ತರಬೇತಿಯ ಕೊರತೆ ಎಂಬುದನ್ನು ನಾವು ಮರೆಯುವಂತಿಲ್ಲ. ಹಣ ಸಂಪಾದನೆಯೊಂದೆ ಶಿಕ್ಷಣದ ಗುರಿಯಾದರೆ, ಸಮಾಜದ ಸ್ವಾಸ್ಥ್ಯ ಉಳಿಯಲು ಸಾಧ್ಯವಿಲ್ಲ. ನೈತಿಕ ಬೋಧನೆಯ ಅವಶ್ಯಕತೆ ಇಂದಿನ ಶಿಕ್ಷಣದ ಮೂಲಭೂತ ಅಗತ್ಯಗಳಲ್ಲಿ ಒಂದು ಎನ್ನುವುದನ್ನು ನಾವು ಮನಗಾಣಬೇಕಿದೆ. ಇದನ್ನು ಗೀತೆಯ ಬೋಧನೆ ನೀಗಿಸಬಲ್ಲದು.
" ನನ್ನಲ್ಲಿ ಜ್ಞಾನವು ಎಲ್ಲಾ ಕಡೆಯಿಂದಲೂ ಹರಿದು ಬರಲಿ" ಎಂಬುದು ಶಿಕ್ಷಣದ ಮುಖ್ಯ ಧ್ಯೇಯ. ಗೀತೆಯ ಸಾರವೂ ಇದೆ ಆಗಿದೆ. ವಿದ್ಯಾರ್ಥಿಯಾದವನಿಗೆ ಚರಿತ್ರೆ, ರಾಜಕೀಯ, ಪ್ರಸಕ್ತ ವಿದ್ಯಮಾನ, ನೈತಿಕ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ...ಹೀಗೆ ಎಲ್ಲದರ ತಿಳುವಳಿಕೆ ಅಗತ್ಯ. ಇಂದಿನ ವಿದ್ಯಾರ್ಥಿಗಳು ಶೇಕ್ಸ್‌ಪಿಯರ್‌ನ ಕಾವ್ಯ ಓದುತ್ತಿಲ್ಲವೇ?. ಬುದ್ಧನ ಬೋಧನೆ ಬಗ್ಗೆ ತಿಳಿಯುತ್ತಿಲ್ಲವೇ?. ಮೊಘಲ್ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡುತ್ತಿಲ್ಲವೇ?. ಎಲ್ಲದರ ಅಧ್ಯಯನದ ತಿರುಳೇ ನಿಜವಾದ ಶಿಕ್ಷಣ. ಹಾಗಾಗಿ ನಮ್ಮ ನೆಲದ ಜ್ಞಾನದ ಸಾರವನ್ನು ಮಕ್ಕಳಿಗೆ ಬೋಸುವುದರಲ್ಲಿ ತಪ್ಪೇನಿದೆ?. ಅಷ್ಟಕ್ಕೂ ಭಗವದ್ಗೀತೆಯಲ್ಲಿ ಹೇಳಿರುವುದೇನು?. ಇಡೀ ಭಗವದ್ಗೀತೆ ನಿಂತಿರುವುದು ಕರ್ಮ, ಭಕ್ತಿ ಹಾಗೂ ಜ್ಞಾನ ಎಂಬ ಮೂರು ಯೋಗಗಳಿಂದ. ಚರಿತ್ರೆಯ ಒಂದು ಭಾಗವೇ ಗೀತೆ . ಮನಸ್ಸಿನಲ್ಲಿ ಅಧೈರ್ಯ ಮೂಡಿದಾಗ ಧೈರ್ಯ ತುಂಬುವ ಸಾಧನ. ಜೀವನದ ಗುರಿಯ ಬಗ್ಗೆ ತಿಳಿ ಹೇಳುವ ಗ್ರಂಥ.
ಗೀತೆಯ ದೃಷ್ಟಿಯಲ್ಲಿ ಧರ್ಮ ಎಂದರೆ ಆಚರಣೆ ಎಂದರ್ಥ. " ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು" ಎಂದು ತಿಳಿ ಹೇಳುವ ಕರ್ಮಯೋಗದ ಬೋಧನೆ ವಿದ್ಯಾರ್ಥಿಗಳಲ್ಲಿ ಕರ್ತವ್ಯದ ಪ್ರಜ್ಞೆ ಮೂಡಿಸಲು ಅನುವು ಮಾಡಿಕೊಡುತ್ತದೆ. ಜ್ಞಾನ ಯೋಗ ಜ್ಞಾನದ ಮಹತ್ವವನ್ನು ತಿಳಿ ಹೇಳುತ್ತದೆ. ಯಾವುದು ಸತ್ಯ,ಯಾವುದು ಮಿಥ್ಯ ಎಂಬುದರ ಬಗ್ಗೆ ತಿಳಿ ಹೇಳುವ ಕೆಲಸವನ್ನು ಅದು ಮಾಡುತ್ತದೆ. ಭಕ್ತಿ ಯೋಗ, ಭಕ್ತಿಯ ಮಹತ್ವದ ಬಗ್ಗೆ ಅರಿವನ್ನು ಮೂಡಿಸುತ್ತದೆ. ಮನಸ್ಸಿನ ನಿಯಂತ್ರಣ, ಮಾನಸಿಕ ಶುದ್ಧತೆ, ಜೀವನದ ವಾಸ್ತವಿಕತೆ, ಸ್ವ ಸಾಮರ್ಥ್ಯದ ಬಗ್ಗೆ ಅರಿವು, ಕರ್ತವ್ಯ ನಿಷ್ಠೆಯ ಬಗ್ಗೆ ತಿಳಿ ಹೇಳುವುದೆ ಗೀತೆಯ ಸಾರ.
ಗೀತೆ ಮನುಷ್ಯರ ನಡುವೆ ಭೇದ-ಭಾವ ಎಣಿಸಿಲ್ಲ. ಬದಲಾಗಿ ಅದರ ಭೇದ-ಭಾವ ಇರುವುದು ಧರ್ಮ ಹಾಗೂ ಅಧರ್ಮಗಳ ನಡುವೆ. ಕರ್ತವ್ಯದ ಪ್ರಜ್ಞೆಯನ್ನು ಎಚ್ಚರಿಸುವುದು ಅದರ ಬೋಧನೆಯ ತಿರುಳು. ಒಬ್ಬ ಜವಾಬ್ಧಾರಿ ಮನುಷ್ಯನನ್ನಾಗಿ ರೂಪಿಸುವುದು ಅದರ ಧ್ಯೇಯ. ಕೋಮುಭಾವನೆಯನ್ನು ಪ್ರಚೋದಿಸುವ ಯಾವುದೇ ಅಂಶ ಗೀತೆಯಲ್ಲಿಲ್ಲ. ಅಷ್ಟಕ್ಕೂ ಕೇವಲ ಒಂದೇ ಮಿನವರು ಇದರ ಅಧ್ಯಯನ ನಡೆಸಬೇಕು ಎಂದು ಗೀತೆಯಲ್ಲಿ ಎಲ್ಲೂ ಹೇಳಿಲ್ಲ. ಗೀತೆಯಲ್ಲಿ ಮೂಡಿಬಂದಿರುಹುದು ವಿಶಾಲ ದೃಷ್ಠಿಕೋನವೆ ಹೊರತು ಸೀಮಿತ ದೃಷ್ಠಿಕೋನವಲ್ಲ. ಜೀವನ ದರ್ಶನವಾಗಬಲ್ಲ ಗೀತೆಯನ್ನು ನಮ್ಮ ಮಕ್ಕಳು ಓದಬೇಕು ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ. " ನನ್ನನ್ನು ಯಾರೇ ಆರಾಧಿಸಲಿ, ನಾನವರನ್ನು ಸ್ವೀಕರಿಸುತ್ತೇನೆ. ಅವರು ಯಾವ ದಾರಿಯನ್ನು ಅನುಸರಿಸಿದರೂ ನನಗದು ಇಷ್ಟವಾಗುತ್ತದೆ" ಗೀತೆಯಲ್ಲಿ ಕೃಷ್ಣ ಹೇಳಿದ ಮಾತಿದು (ಗೀತೆ ೪:೧೧). ಬಹುಶ: ಇಂದಿನ ಜಾತ್ಯಾತೀತ ವಾದಕ್ಕೆ ಪುಷ್ಠಿ ನೀಡುವ ಮಾತಿದು.
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಗೆಲ್ಲಬೇಕೆಂಬುದೇ ಗೀತೆಯ ಸಾರ. ಗೀತೆಯ ಈ ಬೋಧನೆಯನ್ನು ಮಕ್ಕಳಿಗೆ ಬೋಧಿಸಿದರೆ  ತಪ್ಪೆ?. ಈ ಅರಿಷಡ್ವರ್ಗಗಳೇ ಮನುಷ್ಯನ ಏಳ್ಗೆಗೆ ಅಡ್ಡಗಾಲು ಎಂಬ ಬೋಧನೆಯನ್ನು ಎಲ್ಲಾ ಮಹಾತ್ಮರೂ ಬೋಧಿಸುತ್ತಲೇ ಬಂದಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಾ ಗಾಂಧಿಯವರ ಸತ್ಯಾಗ್ರಹಕ್ಕೆ ಪ್ರೇರಣೆಯಾಗಿದ್ದು ಅಥವಾ ಗಾಂಧಿಯ ಪ್ರಭಾವಕ್ಕೆ ಮೂಲಕಾರಣವಾಗಿದ್ದು ಗೀತೆ ಎನ್ನುವುದನ್ನು ಅವರ ಆತ್ಮಕಥೆಯೇ ಸಾರುತ್ತದೆ. " ನಾನು ಗೀತೆಯಿಂದ ಮಾನಸಿಕ ಶಾಂತಿಯನ್ನು ಕಂಡುಕೊಂಡೆ. ನನ್ನ ಮನಸ್ಸಿನಲ್ಲಿ ನಿರಾಶೆಯ ಕಾರ್ಮೋಡ ಕಾಣಿಸಿಕೊಂಡಾಗ, ಗೀತೆ ನನಗೆ ಬೆಳಕಿನ ಆಶಾಕಿರಣವಾಗಿ ಕಂಡು ಬಂತು". ೧೯೨೯ರಲ್ಲಿ ಯರವಾಡಾ ಜೈಲಿನಲ್ಲಿ ಬಂಧಿಯಾಗಿದ್ದಾಗ ತಮಗಾದ ಅನುಭವವನ್ನು ಗಾಂಧೀಜಿ ಹಂಚಿಕೊಂಡಿದ್ದು ಹೀಗೆ. ಬಾಲ ಗಂಗಾಧರ ನಾಥ ತಿಲಕ್‌ಗೂ  ಗೀತೆಯೇ ಜೀವನಸ್ಪೂರ್ತಿಯಾಗಿ ಪರಿಣಮಿಸಿತು ಎಂಬ ಅಂಶ ೧೯೧೦-೧೧ರ ಸಾಲಿನಲ್ಲಿ ಅವರು ಜೈಲಿನಲ್ಲಿದ್ದಾಗ ಬರೆದ ಲೇಖನದಿಂದ ಕಂಡು ಬರುತ್ತದೆ.
ಜೀವನದ ಬದ್ಧತೆ ಹಾಗೂ ಕರ್ತವ್ಯವನ್ನು ಎಚ್ಚರಿಸುವುದೇ ಗೀತೆಯ ಸಾರ ಎಂದಿದ್ದಾರೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ. ವಿಶ್ವಖ್ಯಾತಿಯ ವಿಜ್ಞಾನಿ ಐನ್‌ಸ್ಟೀನ್ ಗೀತೆಯಿಂದ ಪ್ರಭಾವಿತನಾಗಿದ್ದ ಎಂಬುದು ಆತನ ಜೀವನ ಚರಿತ್ರೆಯಿಂದ ತಿಳಿದು ಬರುತ್ತದೆ. ೨೦೦೬ರ ವರದಿ ಪ್ರಕಾರ, ಗೀತೆ ಪಾಶ್ಚಿಮಾತ್ಯ ರಾಷ್ಟ್ರಗಳ ವಾಣಿಜ್ಯೋದ್ಯಮಿಗಳ ಸಮುದಾಯದಲ್ಲಿ ಪ್ರಮುಖ ಪ್ರಭಾವಿ ಗ್ರಂಥವಾಗಿ ಹೊರಹೊಮ್ಮಿದೆ. ಇದು ಪ್ರಾಚೀನ ಚೈನಿ ಗ್ರಂಥವಾದ " ದಿ ಆರ್ಟ್ ಆಫ್ ವಾರ್" ಗ್ರಂಥದ ಪ್ರಭಾವವನ್ನು ಕಡಿಮೆಗೊಳಿಸಿದೆ. ವಿಶ್ವದ ಅನೇಕ ಭಾಷೆಗಳಿಗೆ ಅನುವಾದಗೊಂಡ ಗೀತೆ, ವಿದೇಶಿಯರ ಅಧ್ಯಯನದ ಗ್ರಂಥವಾಗಿಯೂ ಬಳಕೆಯಾಗುತ್ತಿದೆ.
ದೇಶಕಾಲದಲ್ಲಿ ಗತಿಸಿಹೋದ ಮಹಾತ್ಮರಿಗೆ ಪ್ರೇರಣೆಯಾದ ಗೀತೆ ನಮ್ಮ ಮಕ್ಕಳಿಗೆ ಪ್ರೇರಣೆಯಾದರೆ ತಪ್ಪೇನು?. ಮಹಾತ್ಮರ, ಸಾಧಕರ ಬದುಕಿನ ಮೇಲೆ ಪ್ರಭಾವ ಬೀರಿದ ಗೀತೆ ನಮ್ಮ ವಿದ್ಯಾರ್ಥಿಗಳ ಬದುಕಿನ ಮೇಲೆ ಪ್ರಭಾವ ಬೀರಿ, ನಮ್ಮ ಮಕ್ಕಳು ಸುಸಂಸ್ಕೃತ, ಸಚ್ಚಾರಿತ್ರ್ಯ, ಸ್ವಾಭಿಮಾನಿ ಪ್ರಜೆಗಳಾಗಿ ರೂಪುಗೊಳ್ಳಲು ಸಹಕರಿಸಲಿ. ಅವರ ಜೀವನದ ಗುರಿ ತಲುಪುವಲ್ಲಿ ಗೀತೆಯ ಬೋಧನೆ ಮಾರ್ಗದರ್ಶನವಾಗಲಿ. ನಮ್ಮ ಮಕ್ಕಳ ಸಾಧನೆಗೆ ಪ್ರೇರಣೆಯಾಗಲಿ.