ಇಂಜೆಕ್ಷನ್, ಅದೆಷ್ಟು ಸುರಕ್ಷಿತ ?ದೇಶದಲ್ಲಿ ಈಗ ನೀಡಲಾಗುತ್ತಿರುವ ಇಂಜೆಕ್ಷನ್‌ಗಳ ಪೈಕಿ ಶೇ. ೬೩ರಷ್ಟು, ಅಂದರೆ ಅರ್ಧಕ್ಕಿಂತ ಹೆಚ್ಚು ಇಂಜೆಕ್ಷನ್‌ಗಳು ಸುರಕ್ಷಿತವಲ್ಲ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಿಶ್ವಬ್ಯಾಂಕ್ ಪ್ರಾಯೋಜಿತ "ಇಂಡಿಯಾ ಕ್ಲೀನ್ ಪ್ರೊಗ್ರಾಮ್  ಇವ್ಯಾಲ್ಯುಯೇಷನ್ ನೆಟ್‌ವರ್ಕ್'' ನಡೆಸಿದ ಸಮೀಕ್ಷೆ ಈ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಭಾರತದಲ್ಲಿ ನೀಡಲಾಗುವ ಇಂಜೆಕ್ಷನ್‌ಗಳ ಪೈಕಿ ಮೂರನೇ ಒಂದು ಭಾಗದಷ್ಟು ರಕ್ತ ಸಂಬಂಧಿ ವೈರಸ್‌ಗಳ ಹರಡುವಿಕೆಗೆ ಕಾರಣವಾಗುತ್ತಿದೆ. ಇದರಿಂದಾಗಿ ರೋಗಿಗಳಲ್ಲಿ ರಕ್ತ ಸಂಬಂಧಿ ರೋಗಗಳಾದ ಹೆಪಟಿಟಿಸ್ ಬಿ, ಹೆಪಟಿಟಿಸ್ ಸಿ ಹಾಗೂ ಏಡ್ಸ್‌ಗಳು ಹರಡುವ ಸಾಧ್ಯತೆಗಳಿವೆ. ಏಡ್ಸ್ ಹರಡುವಿಕೆಯಲ್ಲಿ ಅಸುರಕ್ಷಿತ ಲೈಂಗಿಕತೆ ಮಹತ್ವದ ಪಾತ್ರ ವಹಿಸಿದರೆ, ನಂತರದ ಸ್ಥಾನದಲ್ಲಿರುವುದು ಅಸುರಕ್ಷಿತ ಇಂಜೆಕ್ಷನ್‌ಗಳ ಬಳಕೆ. ಸರಕಾರಿ ಆಸ್ಪತ್ರೆಗಳಲ್ಲಿನ ಶೇ. ೬೮ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಇಂಜೆಕ್ಷನ್‌ಗಳ ಪೈಕಿ ಶೇ. ೫೯ ರಷ್ಟು ಅಸುರಕ್ಷಿತ.
ಅಸುರಕ್ಷಿತ ಇಂಜೆಕ್ಷನ್‌ಗಳ ಪ್ರಮಾಣ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು. ಗ್ರಾಮೀಣ ಭಾಗದಲ್ಲಿ ಗ್ಲಾಸ್ ಸಿರಿಂಜ್ ಹಾಗೂ ಕಲುಷಿತ ಸೂಜಿಯನ್ನು ಹೆಚ್ಚಾಗಿ ಬಳಸುವುದು ಇದಕ್ಕೆ ಪ್ರಮುಖ ಕಾರಣ ಎನ್ನುತ್ತದೆ ವರದಿ.


ಅಸುರಕ್ಷಿತ  ಇಂಜೆಕ್ಷನ್ ಎಂದರೆ...
ವೈದ್ಯರು ನೀಡಿದ ಇಂಜೆಕ್ಷನ್ ರೋಗಿಗೆ ಯಾವುದೇ ದುಷ್ಪರಿಣಾಮ ಉಂಟು ಮಾಡದಿದ್ದರೆ ವೈದ್ಯಕೀಯವಾಗಿ ಅದು ಸುರಕ್ಷಿತ. ರೋಗಿ ತೆಗೆದುಕೊಂಡ ಇಂಜೆಕ್ಷನ್ ರಕ್ತ ಸಂಬಂಧಿ ವೈರಸ್‌ಗಳನ್ನು ಹರಡುವ ಸಾಮರ್ಥ್ಯ ಪಡೆದಿದ್ದರೆ ಅಥವಾ ವೈದ್ಯರು ಇಂಜೆಕ್ಷನ್‌ಗಳನ್ನು ತಪ್ಪಾಗಿ ನೀಡಿ ಅದರಿಂದ ನಂಜು ಅಥವಾ ಅಡ್ಡ ಪರಿಣಾಮ ಉಂಟಾದರೆ ಆ ಇಂಜೆಕ್ಷನ್ ಅಸುರಕ್ಷಿತ.
ಸಿರಿಂಜ್, ಸೂಜಿಗಳ ಅಸಮರ್ಪಕ ವಿಲೇವಾರಿ, ಮರು ಬಳಕೆ, ಶುದ್ಧೀಕರಿಸದೆ ಇವುಗಳನ್ನು ಬಳಸುವುದು, ಸ್ಟೆರಿಲೈಸ್ ಮಾಡದಿರುವುದು, ಮಾತ್ರೆ ಇಲ್ಲವೇ ಔಷಧ ನೀಡಿ ರೋಗ ಗುಣಪಡಿಸಲು ಸಾಧ್ಯವಿರುವಾಗಲೂ ಇಂಜೆಕ್ಷನ್ ನೀಡುವುದು, ಇಂಜೆಕ್ಷನ್‌ನ್ನು ಸರಿಯಾದ ವಿಧಾನದಲ್ಲಿ ನೀಡದಿರುವುದು, ಒಂದೇ ಸೂಜಿ ಬಳಸಿ ಹಲವು ರೋಗಿಗಳಿಗೆ ಇಂಜೆಕ್ಷನ್ ನೀಡುವುದು,ಸಿರಿಂಜ್‌ನಲ್ಲಿ ಹಲವು ಡೋಸ್ ತುಂಬುವುದು ಇವೆಲ್ಲವೂ ಅಸುರಕ್ಷಿತ ವಿಧಾನಗಳೇ. ಇಂಜೆಕ್ಷನ್ ನೀಡುವಿಕೆಯಲ್ಲಿ ಗಾಜಿನ ಸಿರಿಂಜ್‌ಗಿಂತ ಪ್ಲ್ಯಾಸ್ಟಿಕ್ ಸಿರಿಂಜ್ ಬಳಕೆ ಹೆಚ್ಚು ಸುರಕ್ಷಿತ ಎನ್ನುವುದು ಆರೋಗ್ಯ ತಜ್ಞರ ಅಭಿಮತ.


ಭಾರತದಲ್ಲಿ ...
ಭಾರತದಲ್ಲಿ ವರ್ಷವೊಂದರಲ್ಲಿ ೩೦೦-೬೦೦ಕೋಟಿ ಇಂಜೆಕ್ಷನ್‌ಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಶೇ. ೮೨ ರಷ್ಟು ಇಂಜೆಕ್ಷನ್‌ಗಳನ್ನು ರೋಗ ಗುಣಪಡಿಸಲು ನೀಡಿದರೆ, ಇನ್ನುಳಿದ ಶೇ. ೧೮ರಷ್ಟನ್ನು ಲಸಿಕೆ ಹಾಗೂ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತದೆ.ಇಂಜೆಕ್ಷನ್ ಪಡೆಯುವವರ ಪ್ರಮಾಣದಲ್ಲಿ  ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಂಖ್ಯೆ ಹೆಚ್ಚು ಎನ್ನುವುದು ಗಮನಾರ್ಹ ಅಂಶ.


ಇದು ವಿಶ್ವವ್ಯಾಪಿ
ಹಾಗಂತ ಅಸುರಕ್ಷಿತ ಇಂಜೆಕ್ಷನ್ ಭಾರತಕ್ಕೆ ಮಾತ್ರ ಸೀಮಿತವಲ್ಲ.  ಇದು ವಿಶ್ವವ್ಯಾಪಿ. ವಿಶ್ವಸಂಸ್ಥೆಯ ವರದಿ ಹೇಳುವಂತೆ ವಿಶ್ವದಲ್ಲಿ ವರ್ಷವೊಂದಕ್ಕೆ ೧,೨೦೦-೧,೬೦೦ ಕೋಟಿ ಇಂಜೆಕ್ಷನ್ ನೀಡಲಾಗುತ್ತಿದ್ದು, ಅವುಗಳಲ್ಲಿ ಶೇ. ೫೦ ರಷ್ಟು ಅಸುರಕ್ಷಿತ. ಅನಾರೋಗ್ಯಕರ ಸಿರಿಂಜ್ ಹಾಗೂ ಸೂಜಿ ಬಳಸಿ ನೀಡಲಾಗುವ ಇಂಜೆಕ್ಷನ್ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಪ್ರತಿ ದಿವಸ ೪ ಸಾವಿರಕ್ಕೂ ಹೆಚ್ಚು ಮಕ್ಕಳು ಆರೋಗ್ಯ ಸಂಬಂಧಿ ನಂಜಿನಿಂದ ಸಾವನ್ನಪ್ಪುತ್ತಿದ್ದಾರೆ.
ಭಾರತದಲ್ಲಿ ಈ ಸಂಖ್ಯೆ ವಾರ್ಷಿಕ ೩ ಲಕ್ಷ.  ಸಮರ್ಪಕ, ಆರೋಗ್ಯಕರ ನಿರ್ವಹಣೆಯಿಂದ ಈ ಸಾವನ್ನು ತಡೆಗಟ್ಟಬಹುದು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಅಭಿಮತ. ನಮ್ಮಲ್ಲಿ ಈಗ ನೀಡಲಾಗುತ್ತಿರುವ ಇಂಜೆಕ್ಷನ್‌ಗಳ ಪೈಕಿ ಎರಡನೇ ಮೂರರಷ್ಟು ಅನಗತ್ಯ ಹಾಗೂ ಅಸಮರ್ಪಕ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ ವರದಿ. ಬಹುತೇಕ ಸಂದರ್ಭಗಳಲ್ಲಿ ಮಾತ್ರೆ ಹಾಗೂ ಔಷಧ ನೀಡಿಯೇ ರೋಗಿಯ ರೋಗವನ್ನು ಗುಣಪಡಿಸಬಹುದು. ಆದರೆ, ವೈದ್ಯರು ಇದರ ಬದಲು ಇಂಜಕ್ಷನ್ ನೀಡಲು ಮುಂದಾಗುತ್ತಾರೆ. ರೋಗ ಗುಣಪಡಿಸುವಲ್ಲಿ ಔಷಧಕ್ಕಿಂತ ಇಂಜೆಕ್ಷನ್ ಹೆಚ್ಚು ಪರಿಣಾಮಕಾರಿ ಹಾಗೂ ಇಂಜೆಕ್ಷನ್ ನೀಡಿದರೆ ರೋಗಿ ಬೇಗ ಗುಣಮುಖನಾಗುತ್ತಾನೆ ಎಂದು ವೈದ್ಯರು ಭಾವಿಸುವುದು ಇದಕ್ಕೆ ಕಾರಣ. ಇಮ್ಯೂನೈಜೇಷನ್ ಕಾರ್ಯಕ್ರಮಕ್ಕೆ ಆಟೊಡಿಸೆಬಲ್ ಸಿರಿಂಜ್ ಬಳಸಬೇಕು ಎಂಬುದಾಗಿ ೨೦೦೩ರಲ್ಲೇ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಹಾಗೂ ಯುಎನ್‌ಎಫ್‌ಪಿಎಗಳು ಎಲ್ಲಾ ದೇಶಗಳಿಗೆ ಸಲಹೆ ನೀಡಿವೆ. ಅಲ್ಲದೆ, ಚಿಕಿತ್ಸಾ ಉದ್ದೇಶಕ್ಕಾಗಿ ಒಂದೇ ಸಲ ಬಳಸಬಹುದಾದ ಇಂಜೆಕ್ಷನ್ ಉಪಕರಣಗಳನ್ನು ಬಳಸಬೇಕು ಎಂದಿವೆ.  ಅಂದರೆ ಒಮ್ಮೆ ಬಳಸಿದ ಉಪಕರಣಗಳನ್ನು ಮತ್ತೆ ಬಳಸುವಂತಿಲ್ಲ. ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಆರೋಗ್ಯ ಇಲಾಖೆ ಇದನ್ನು ಕಡ್ಡಾಯ ಮಾಡಿದೆ. ಆದರೆ, ಈ ಆದೇಶ ಕೇವಲ ಸರಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತ. ಹಾಗಾಗಿ ಖಾಸಗಿ ಆಸ್ಪತ್ರೆಗಳು ಈ ಆದೇಶದಿಂದ ಹೊರಗುಳಿದು ಬಿಡುತ್ತವೆ.
ಇಂಜೆಕ್ಷನ್ ನೀಡುವುದಕ್ಕೂ ಮೊದಲು ಬಳಸಲಾಗುವ ಸಿರಿಂಜ್ ಹಾಗೂ ಸೂಜಿಗಳನ್ನು ಶುದ್ಧಗೊಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳಿವೆ. ಆದರೆ, ಈ ಬಗೆಗಿನ ಲಿಖಿತ ಮಾರ್ಗಸೂಚಿ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವುದಿಲ್ಲ. ಅಲ್ಲದೆ, ಇಂಜೆಕ್ಷನ್ ನೀಡುವಾಗ ವೈದ್ಯರ ಪೈಕಿ ಅರ್ಧಕ್ಕಿಂತ ಹೆಚ್ಚು ಮಂದಿಗೆ ಈ ಮಾರ್ಗಸೂಚಿಗಳ ಬಗ್ಗೆ ಸೂಕ್ತ ತಿಳುವಳಿಕೆ ಇರುವುದಿಲ್ಲ. ಇಂಜೆಕ್ಷನ್ ಕೊಟ್ಟ ನಂತರ ಆಸ್ಪತ್ರೆಗಳು ಸಿರಿಂಜ್ ಹಾಗೂ ಸೂಜಿಗಳನ್ನು ನಾಶಗೊಳಿಸಬೇಕು. ಹಾಗೆ ಎಸೆಯುವುದರಿಂದ ಚಿಂದಿ ಆಯುವವರು ಆರಿಸಿಕೊಂಡು, ಮಾರುಕಟ್ಟೆಯಲ್ಲಿ ಮಾರುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಸೂಜಿ ಹಾಗೂ ಸಿರಿಂಜ್‌ಗಳ ಮರು ಬಳಕೆ ಹೆಚ್ಚುತ್ತದೆ. ಕಳ್ಳ ಮಾರುಕಟ್ಟೆಯಲ್ಲಿ ಸೂಜಿ ಹಾಗೂ ಸಿರಿಂಜ್‌ಗಳು ಮರು ಬಳಕೆಗೆ ಸುಲಭವಾಗಿ ಸಿಗುತ್ತವೆ. ಇದನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವ ಜಾಲವೇ ಹರಡಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಇಂಜೆಕ್ಷನ್‌ಗಳ ಪೈಕಿ ಶೇ. ೬೯ರಷ್ಟು ಅಸುರಕ್ಷಿತ ಎಂಬುದನ್ನು ಹಿಂದಿನ ಕೇಂದ್ರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಅಂಬುಮಣಿ ರಾಮ್‌ದಾಸ್ ಅವರೇ  ಒಪ್ಪಿಕೊಂಡಿದ್ದರು. "ಈ ಬಗ್ಗೆ ಗಮನ ಹರಿಸಲು ಭಾರತೀಯ ವೈದ್ಯಕೀಯ ಸಂಘಟನೆ ಹಾಗೂ ಭಾರತೀಯ ಪೆಡಿಯಾಟ್ರಿಕ್ಸ್ ಸಂಘಟನೆಗಳು ಜಂಟಿಯಾಗಿ ಕಾಯ೯ಕ್ರಮ ರೂಪಿಸಲಿವೆ. ಇನ್ನು ಮುಂದೆ ಕೇಂದ್ರೀಯ ಸರಕಾರಿ ಆಸ್ಪತ್ರೆಗಳಲ್ಲಿ ಆಟೊಡಿಸೆಬಲ್ಡ್ ಸಿರಿಂಜ್‌ಗಳನ್ನು ಮಾತ್ರ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ, ಈ ಸಂಬಂಧ ಎಲ್ಲಾ ರಾಜ್ಯಗಳಿಗೂ ಪತ್ರ ಬರೆಯಲಾಗುವುದು'' ಎಂದು ಭರವಸೆ ನೀಡಿದ್ದರು. ಆರೋಗ್ಯ ಭಾಗ್ಯ ನೀಡುವ ಇಂಜೆಕ್ಷನ್‌ಗಳೇ ರೋಗ ಹರಡಲು ಕಾರಣವಾದರೆ, ರೋಗಿಯ ಪಾಲಿಗೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಭವಿಷ್ಯದಲ್ಲಿ ಮಾರಣಾಂತಿಕ ರೋಗ ಬರದಿರಲಿ ಎಂಬ ಕಾರಣಕ್ಕಾಗಿ ನೀಡುವ ಚುಚ್ಚುಮದ್ದು ಮಕ್ಕಳಿಗೆ ರೋಗ ಹುಟ್ಟು ಹಾಕಿದರೆ ಅದಕ್ಕಿಂತ ದೊಡ್ಡ ಶಾಪ ಮತ್ತೊಂದಿಲ್ಲ. ಇದು ಗಂಭೀರ ವಿಷಯ ಎಂಬುದನ್ನು ವೈದ್ಯ ಸಮುದಾಯ ಮನಗಾಣಬೇಕು.