ಮಳೆಯ ಜನ್ಯ ಪರ್ಜನ್ಯ


ಪರ್ಜನ್ಯ ಎಂಬುದು ಮೂಲತ: ಸಂಸ್ಕ್ರತ ಪದ. ಪರ್ಜನ್ಯ ಎಂಬುದು ಮಳೆಗಾಗಿ ಮಳೆಯ ದೇವತೆಯನ್ನು ಆರಾದಿಸುವ ಒಂದು ಪೂಜಾ ಕ್ರಮ. ಹಿಂದೂ ಪುರಾಣಗಳಲ್ಲಿ ಪರ್ಜನ್ಯದ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಹಿಂದೂ ಪುರಾಣಗಳ ಪ್ರಕಾರ ಮಳೆಯ ಅದಿದೇವತೆ ವರುಣ. ಆತ ನೀರಿನ, ಮಳೆಯ, ಆಗಸದ ದೇವತೆ. ಹಾಗಾಗಿ, ದೇಶದ ಯಾವುದಾದರೂ ಒಂದು ಪ್ರದೇಶದಲ್ಲಿ ಬರಗಾಲ ಸಂಭವಿಸಿದಾಗ, ಮಳೆಯ ತೀವ್ರ ಕೊರತೆ ಉಂಟಾದಾಗ ಅಥವಾ ಸಕಾಲಕ್ಕೆ ಬರಬೇಕಾದ ಮಳೆ ಬಾರದೇ ಇದ್ದಾಗ ಆಸ್ತಿಕರು ಪರ್ಜನ್ಯದ ಮೊರೆ ಹೋಗುತ್ತಾರೆ. ತಮ್ಮ ನೆಚ್ಚಿನ ದೇವರಿಗೆ ಪರ್ಜನ್ಯ ನೆರವೇರಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಾರೆ. ಪರ್ಜನ್ಯ ನಡೆಸುವ ವಿಧಾನ, ಶಾಸ್ತ್ರ, ಪದ್ಧತಿಗಳು ಸಾಧಾರಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಅದೇ ರೀತಿ ಜನರ ಆಚರಣೆಯ ಪದ್ಧತಿಯೂ ವಿಭಿನ್ನ.
ಕೆಲವು ಪ್ರದೇಶಗಳಲ್ಲಿ ಭಕ್ತರು ತಮ್ಮ ಇಷ್ಟದೇವರಿಗೆ ಪ್ರಿಯವಾದ ಮಂತ್ರ ಪಠಿಸುತ್ತಾ, ತಲೆ ಮೇಲಿಂದ ನೀರು, ಇನ್ನಿತರ ದ್ರವ್ಯಗಳಿಂದ ಅಭಿಷೇಕ ಮಾಡುತ್ತಾರೆ. ಹೀಗೆ ಅಭಿಷೇಕ ಮಾಡಿದ ನೀರು ದೇವರ ತಲೆ ಮೇಲಿಂದ ಹರಿದು ಬಂದು ಸಮೀಪದ ಕೆರೆ, ನದಿಗಳನ್ನು ಸೇರಿದರೆ ದೇವ ಸಂಪ್ರೀತನಾಗಿ ಮಳೆ ಸುರಿಸುತ್ತಾನೆ ಎಂಬುದು ನಂಬಿಕೆ. ಗುಜರಾತ, ಮದ್ಯಪ್ರದೇಶ ಸೇರಿದಂತೆ ದೇಶದ ಇನ್ನಿತರ ಕೆಲವು ಭಾಗಗಳಲ್ಲಿ ಪರ್ಜನ್ಯದ ಆಚರಣೆ ಸ್ವಲ್ಪ ವಿಭಿನ್ನ. ದೊಡ್ಡ ತಾಮ್ರದ ಪಾತ್ರೆಯಲ್ಲಿ ಪನ್ನೀರನ್ನು ತುಂಬಿ, ಅದಕ್ಕೆ
ಹೂವು, ಗಂಧ, ಕುಂಕುಮ, ಅರಿಷಿಣಗಳನ್ನು ಹಾಕಿ ಪೂಜಿಸುತ್ತಾರೆ. ನಂತರ ಆ ನೀರಿನಲ್ಲಿ ಕೂರುವ ವೈದಿಕರು ವರುಣದೇವನನ್ನು ಸ್ತುತಿಸುತ್ತಾರೆ. ಈ ಪೂಜೆಯಿಂದ ಸಂಪ್ರೀತನಾಗುವ ವರುಣದೇವ ಮಳೆ ಸುರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.
ಸಾಧಾರಣವಾಗಿ ಆಯಾ ದೇವತೆಗಳಿಗೆ ಇಷ್ಟವೆಂದು ವೈದಿಕ ಪುರಾಣಗಳಲ್ಲಿ ಉಲ್ಲೇಖವಾಗಿರುವ ಮಂತ್ರಗಳನ್ನೇ ವೈದಿಕರು ಪಠಿಸುತ್ತಾರೆ. ಉದಾಹರಣೆಗೆ ಶಿವನಿಗೆ ರುದ್ರಪಠಣ, ದೇವಿಗೆ ಶ್ರೀ ಸೂಕ್ತ, ದುರ್ಗಾ ಸೂಕ್ತ ಹಾಗೂ ದೇವಿ ಸೂಕ್ತ. ವಿಷ್ಣುವಿಗೆ ಪುರುಷ ಸೂಕ್ತ, ಗಣಪತಿಗೆ ಉಪನಿಷತ್ತು ಇತ್ಯಾದಿ.
ಹಿಂದಿನ ವೇದ, ಪುರಾಣಗಳ ಕಾಲದಿಂದಲೂ ಪರ್ಜನ್ಯದ ಆಚರಣೆ ಅಸ್ತಿತ್ವದಲ್ಲಿದೆ. ಶತ, ಶತಮಾನಗಳಿಂದ ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿವಿಧ ಶಾಸ್ತ್ರ, ಪುರಾಣಗಳು ಪರ್ಜನ್ಯಕ್ಕೆ ವಿವಿಧ ರೀತಿಯ ಅರ್ಥ, ವ್ಯಾಖ್ಯಾನ ನೀಡಿವೆ. ಋಗ್ವೇದದ ಪ್ರಕಾರ, ಪರ್ಜನ್ಯವೆಂದರೆ ಮಳೆಯ ದೇವರು ಎಂದರ್ಥ. ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸುವ ಮಂತ್ರಗಳು ಅಥರ್ವಣ ವೇದದಲ್ಲಿ ನಮಗೆ ಕಾಣ ಸಿಗುತ್ತವೆ.
ಐದನೇ ಮನ್ವಂತರದ ಪ್ರಕಾರ ಪರ್ಜನ್ಯ ಎಂಬಾತ ಸಪ್ತ ಋಷಿಗಳಲ್ಲಿ ಒಬ್ಬ. ಹರಿವಂಶ ಹೇಳುವಂತೆ ಈತ ಒಬ್ಬ ಗಂಧರ್ವ. ೭೨ ರಶ್ಮಿಗಳ ಪೈಕಿ ಪರ್ಜನ್ಯ ಕೂಡ ಒಂದು ಹಾಗೂ ಇದು ಶ್ರವಣ ತಿಂಗಳಿನಲ್ಲಿ ಪ್ರಕಾಶಿಸುತ್ತದೆ. ವಿಷ್ಣು ಪುರಾಣದ ಪ್ರಕಾರ, ಈತ ೧೨ ಮಾಸಗಳಲ್ಲಿ ಒಂದಾದ ಕಾರ್ತಿಕದ ಪೋಷಕನಾದ ಆದಿತ್ಯ. ಪರ್ಜನ್ಯನನ್ನು ಪೃಥ್ವಿಯ ಪತಿ ಎಂದೂ ಸಾಂಕೇತಿಕವಾಗಿ ಗುರುತಿಸಲಾಗುತ್ತದೆ. ಈತ ಲೋಕರಕ್ಷಕನಾದ ಲೋಕಪಾಲನೂ ಹೌದು.
ಈ ಮದ್ಯೆ, ಅಖಿಲ ಭಾರತೀಯ ಜ್ಯೋತಿಷಿಗಳ ವೇದಿಕೆ, ಮಳೆಯ ಮುನ್ಸೂಚನೆ ನೀಡಲು "ಪರ್ಜನ್ಯ" ಎಂಬ ಸಾಪ್ತವೇರ್ ನ್ನು ಅಭಿವ್ರದ್ದಿಪಡಿಸಿದೆ. ನಿಗದಿಪಡಿಸಿದ ಪ್ರದೇಶದಲ್ಲಿ, ಮಳೆ ಬೀಳಬಹುದಾದ ದಿನಾಂಕ ಹಾಗೂ ಪ್ರಮಾಣವನ್ನು ತಿಳಿಸಲು ಸಾದ್ಯ ಎನ್ನುತ್ತಾರೆ ತಂತ್ರಜ್ನರು.


ಅಣ್ಣಾ ಹೋರಾಟ, ಸರಕಾರದ ಪರದಾಟ     ಮೂಗಿನ ತುದಿಗೆ ತುಪ್ಪ ಬಳಿದು, ಅದರ ವಾಸನೆಯನ್ನು ಆಘ್ರಾಣಿಸುವಂತೆ  ಪ್ರೇರೇಪಿಸುವ ಸರಕಾರದ ಲೋಕಪಾಲ ವಿಧೇಯಕಕ್ಕೂ, ಸರಕಾರದ ಮಟ್ಟದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಡುತ್ತಿರುವ ನಾಗರಿಕ ಸಮಿತಿ ಸದಸ್ಯರ ಜನ ಲೋಕಪಾಲ ವಿಧೇಯಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಭ್ರಷ್ಟಾಚಾರದ ಬಿಸಿಗೆ ಜನಸಾಮಾನ್ಯನಿಂದು ತತ್ತರಿಸಿದ್ದಾನೆ. ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಈ ಆಕ್ರೋಶವೇ ಇಂದು ಅಣ್ಣಾ ಹೋರಾಟಕ್ಕೆ ಬೆಂಬಲದ ರೂಪವಾಗಿ ಹರಿದು ಬರುತ್ತಿದೆ.
     ಇದಕ್ಕೆ ವ್ಯತಿರಿಕ್ತವಾಗಿ ಜನಪ್ರತಿನಿಧಿಗಳಿಗೆ ಭ್ರಷ್ಟಾಚಾರ ತೊಲಗುವುದು ಇಷ್ಟವಿಲ್ಲ. ಚುನಾವಣೆ ಎದುರಿಸಲು ಹಣ ಬೇಕು. ಅಧಿಕಾರದಲ್ಲಿ ಮುಂದುವರಿಯಲೂ ಹಣ ಬೇಕು. ತಮಗೆ ಬೇಕಾದ ಅಧಿಕಾರಿಗಳು ಸೂಕ್ತ ಸ್ಥಾನದಲ್ಲಿರಬೇಕಾದರೆ ಭ್ರಷ್ಟಾಚಾರಿಗಳು ಇರಬೇಕು. ಅವರ ಮೂಲಕ ತಮಗೂ ಹಣ ಸಂದಾಯವಾಗುತ್ತಿರಬೇಕು. ಹಾಗಾಗಿಯೇ, ಹಲ್ಲಿಲ್ಲದ ಲೋಕಪಾಲ ವಿಧೇಯಕ ಮಂಡನೆಗೆ ಸರಕಾರ ಮುಂದಾಗಿದೆ. ಸರಕಾರದ ವಿರುದ್ಧ ಪ್ರತಿಪಕ್ಷಗಳು, ಪ್ರತಿಪಕ್ಷಗಳ ವಿರುದ್ಧ ಅಧಿಕಾರ ನಡೆಸುತ್ತಿರುವವರು ಆಪಾದನೆ ಮಾಡುತ್ತಲೇ ಇರಬೇಕು. ಆ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿರಬೇಕು ಎಂಬುದು ಅಧಿಕಾರಸ್ಥರ ಹಂಬಲ.
     ಇಂದಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಅಕ್ರಮ ಸಂಪತ್ತು ಗಳಿಕೆ ಹಾಗೂ ದುರ್ನಡತೆ ಆರೋಪದ ಹಿನ್ನೆಲೆಯಲ್ಲಿ ಕೋಲ್ಕೊತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮಿತ್ರಾ ಸೇನ್ ವಿರುದ್ಧ ರಾಜ್ಯಸಭೆ ಮಹಾಭಿಯೋಗ ವಿಧೇಯಕ ಅಂಗೀಕರಿಸಿರುವುದು, ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ವಿರುದ್ಧ ಭ್ರಷ್ಟಾಚಾರದ ಆರೋಪ ಇರುವುದು ಈ ಅಂಶವನ್ನು ಪುಷ್ಠೀಕರಿಸುತ್ತದೆ. ಹಾಗಾಗಿ, ನ್ಯಾಯಾಧೀಶರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ಲೋಕಪಾಲಗೆ ಇರಬೇಕು ಎನ್ನುವುದು ನಾಗರಿಕ ಸಮಿತಿ ಸದಸ್ಯರ ವಾದ. ಆದರೆ, ನ್ಯಾಯಾಂಗ ವ್ಯವಸ್ಥೆಯನ್ನು ಲೋಕಪಾಲ ವ್ಯಾಪ್ತಿಗೆ ತರುವುದಕ್ಕೆ ಸರಕಾರದ ಸಹಮತವಿಲ್ಲ. ಇದಕ್ಕಾಗಿಯೇ ನ್ಯಾಯಾಂಗ ಉತ್ತರದಾಯಿತ್ವ ವಿಧೇಯಕ ಮಂಡಿಸುವುದು ಸರಕಾರದ ಉದ್ದೇಶ. ಆದರೆ, ನ್ಯಾಯಾಧೀಶರ ವಿರುದ್ಧ ಇರುವ ಗಂಭೀರ ಅಪರಾಧ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ನ್ಯಾಯಾಂಗ ಉತ್ತರದಾಯಿತ್ವ ವಿಧೇಯಕಕ್ಕೆ ಇಲ್ಲ ಎಂಬುದು ಅಣ್ಣಾ ತಂಡದ ಅಳಲು.
     ಪ್ರಧಾನಿ, ಸಚಿವರು, ಸಂಸದರು ಲೋಕಪಾಲ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪ ಬಂದರೆ ತನಿಖೆಗೆ ಸರಕಾರ ಮಂಡಿಸಿರುವ ಲೋಕಪಾಲದಲ್ಲಿ ಅವಕಾಶವಿಲ್ಲ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರವಷ್ಟೇ ತನಿಖೆಗೆ ಅವಕಾಶ. ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ಯುಪಿಎ ಪರ ಮತ ಹಾಕಲು ಲಂಚ ಸ್ವೀಕರಿಸಿದ ಆರೋಪ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈಗಲಾದರೂ, ಈ ಬಗ್ಗೆ ಗಮನ ಹರಿಸದಿದ್ದರೆ, ಸಂಸದರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರಸ್ತುತ ಪ್ರಧಾನಿ ವಿರುದ್ಧ ಆರೋಪ ಕೇಳಿ ಬಂದರೆ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಸಿಬಿಐ ತನಿಖೆ ನಡೆಸುತ್ತದೆ. ಅಂತಿಮವಾಗಿ ವರದಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸುತ್ತದೆ. ಪ್ರಧಾನಿ ಕಾರ್ಯಾಲಯಕ್ಕೆ ಅಧೀನವಾಗಿ ಕೆಲಸ ನಿರ್ವಹಿಸುವ ಸಿಬಿಐ, ಪ್ರಧಾನಿ ವಿರುದ್ಧದ ತನಿಖೆಯನ್ನು ಅದೆಷ್ಟು ಸಮರ್ಥವಾಗಿ ನಿರ್ವಹಿಸಬಲ್ಲುದು ಎಂಬುದು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.
     ಹಲವು ರಾಜ್ಯಗಳಲ್ಲಿ ಲೋಕಾಯುಕ್ತ ಇಲ್ಲ. ಹಾಗಾಗಿ, ಕೇಂದ್ರ ಮಟ್ಟದಲ್ಲಿ ಸಮರ್ಥ ಲೋಕಪಾಲ ಹಾಗೂ ರಾಜ್ಯಗಳ ಮಟ್ಟದಲ್ಲಿ ಲೋಕಾಯುಕ್ತ ರಚನೆಯಾಗಬೇಕು ಎಂಬುದು ಜನ ಲೋಕಪಾಲ ವಿಧೇಯಕದ ಆಗ್ರಹ. ಲೋಕಾಯುಕ್ತ ಸಮರ್ಥವಾಗಿ ಕೆಲಸ ನಿರ್ವಹಿಸಿದರೆ, ಭ್ರಷ್ಟಾಚಾರವನ್ನು ಅದೆಷ್ಟು ಸಮರ್ಥವಾಗಿ ತಡೆಯಬಹುದು ಎಂಬುದನ್ನು ರಾಜ್ಯದಲ್ಲಿ ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಮರ್ಥವಾಗಿ ನಿರೂಪಿಸಿದ್ದಾರೆ.
     ಇವೆಲ್ಲಕ್ಕಿಂತ ಮುಖ್ಯವಾಗಿ ಸರಕಾರ ಮಂಡಿಸುತ್ತಿರುವ ವಿಧೇಯಕ ಸರಕಾರಿ ನೌಕರರ ಪರವಾಗಿದೆ. ಭ್ರಷ್ಟಾಚಾರದ ವಿರುದ್ಧ ದೂರು ನೀಡುವವರ ವಿರುದ್ಧವಾಗಿದೆ. ಇದು ನಾಗರಿಕ ಸಮಿತಿ ಸದಸ್ಯರ ಕೋಪಕ್ಕೆ ಪ್ರಮುಖ ಕಾರಣ. ಸರಕಾರದಲ್ಲಿ ಸಾರ್ವಜನಿಕರ ಕೆಲಸ ಸಕಾಲಕ್ಕೆ ಆಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಭ್ರಷ್ಟಾಚಾರ. ಲಂಚ ನೀಡಿದರೆ ಮಾತ್ರ ಸಾರ್ವಜನಿಕರ ಕೆಲಸ ಬೇಗನೆ ಆಗುತ್ತದೆ. ಲಂಚ ನೀಡದಿದ್ದರೆ ಸತಾಯಿಸಿ, ಸತಾಯಿಸಿ, ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಾರೆ. ಎಷ್ಟೊ ಸಂದರ್ಭಗಳಲ್ಲಿ ಲಂಚ ನೀಡದಿದ್ದರೆ ಕೆಲಸವೇ ಆಗುವುದಿಲ್ಲ. ಹಾಗಾಗಿ, ಸಾರ್ವಜನಿಕರ ಕೆಲಸ ಮಾಡಿಕೊಡಲು ವಿಫಲನಾದ ಅಧಿಕಾರಿಗೆ ದಂಡ ವಿಧಿಸಲು ಅವಕಾಶ ಮಾಡಿಕೊಡುವುದು ಜನಲೋಕಪಾಲ ವಿಧೇಯಕದ ಧ್ಯೇಯ. ಅಲ್ಲದೆ, ಸರಕಾರಿ ಅಧಿಕಾರಿಯ ವಿರುದ್ಧ ದೂರು ಸಲ್ಲಿಸುವ ಜನಸಾಮಾನ್ಯನಿಗೆ, ಲಂಚ ನೀಡಿದ್ದಕ್ಕೆ ಸಾಕ್ಷಿಯಾದವರಿಗೆ ಹಾಗೂ ಭ್ರಷ್ಟಾಚಾರಕ್ಕೆ ಬಲಿಪಶುಗಳಾದವರಿಗೆ ರಕ್ಷಣೆ ಒದಗಿಸಬೇಕು ಎಂಬುದು ನಾಗರಿಕ ಸಮಿತಿ ಸದಸ್ಯರ ಬೇಡಿಕೆ.
     ವಿಪರ್‍ಯಾಸದ ಸಂಗತಿಯೆಂದರೆ, ಒಂದು ವೇಳೆ ಅಧಿಕಾರಿಯ ವಿರುದ್ಧದ ಆರೋಪ ಸಾಬೀತಾಗದಿದ್ದರೆ, ಭ್ರಷ್ಟಾಚಾರದ ದೂರು ನೀಡಿದಾತ ಕನಿಷ್ಠ ೨ ವರ್ಷಗಳ ಸೆರೆಮನೆವಾಸ ಅನುಭವಿಸಬೇಕಾಗುತ್ತದೆ. ಅದೇ ಆರೋಪ ಸಾಬೀತಾದರೆ, ಆರೋಪಿಗೆ ಕೇವಲ ೬ ತಿಂಗಳ ಸಜೆ. ಜತೆಗೆ ತನ್ನ ವಿರುದ್ಧ ಲಂಚದ ಆರೋಪ ಹೊರಿಸಿದ ವ್ಯಕ್ತಿಯ ವಿರುದ್ಧ ಆತ ವಿಶೇಷ ನ್ಯಾಯಾಲಯದಲ್ಲಿ ಪ್ರತಿ ದೂರು ಸಲ್ಲಿಸಬಹುದು. ಆಪಾದಿತ ಅಧಿಕಾರಿಯ ಪರ ವಕಾಲತ್ತು ವಹಿಸುವ ವಕೀಲನ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಅಲ್ಲದೆ, ಅಧಿಕಾರಿ ಮೂರು ಪ್ರತ್ಯೇಕ ವಿಚಾರಣೆ ಎದುರಿಸುತ್ತಾನೆ. ಈ ಮೂರರಲ್ಲಿ ಒಂದರ ವಿಚಾರಣೆ ವೇಳೆ ಆರೋಪ ಸಾಬೀತಾಗದಿದ್ದರೂ ಆತ ಬಚಾವ್. ಹೇಗಿದೆ ನೋಡಿ, ಸರಕಾರ ಮಂಡಿಸುತ್ತಿರುವ ಲೋಕಪಾಲ ವಿಧೇಯಕ !.
ಇಷ್ಟಾಗಿಯೂ ಎಲ್ಲಾ ಸರಕಾರಿ ನೌಕರರೂ ಲೋಕಪಾಲ ವ್ಯಾಪ್ತಿಗೆ ಬರುವುದಿಲ್ಲ. ೧.೨ ಕೋಟಿ ಸರಕಾರಿ ನೌಕರರ ಪೈಕಿ ಲೋಕಪಾಲ ವ್ಯಾಪ್ತಿಗೆ ಬರುವವರು ಕೇವಲ ೬೫,೦೦೦ ನೌಕರರು.  ಗ್ರೂಪ್ "ಎ' ಕೆಳಗಿನ ನೌಕರರನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಎಲ್ಲಾ ನೌಕರರನ್ನೂ ಲೋಕಪಾಲ ವ್ಯಾಪ್ತಿಗೆ ಸೇರಿಸಿದರೆ, ಹೆಚ್ಚಿನ ಹೊರೆ ಬೀಳುತ್ತದೆ. ಕಾರ್ಯ ನಿರ್ವಹಣೆ ಅಸಾಧ್ಯವಾಗಲಿದೆ ಎಂಬುದು ಸರಕಾರ ನೀಡುವ ಕಾರಣ.
     ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಟ್ಟಿರುವ ಹಜಾರೆ ಹಾಗೂ ಮತ್ತವರ ತಂಡ ಮತ್ತು ಭ್ರಷ್ಟಾಚಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಸರಕಾರದ ನಡುವೆ ಕದನ ಆರಂಭವಾಗಿದೆ. ಇಂದು ಅಣ್ಣಾ ಹೋರಾಟದಿಂದ ಭ್ರಷ್ಟಾಚಾರ ವಿರೋಧಿ ಕೂಗಿಗೆ ಬೆಲೆ ಬಂದಿದೆ. ಸೂಕ್ತ ವೇದಿಕೆಯೂ ಸಿದ್ಧವಾಗಿದೆ. ಬನ್ನಿ ಹಜಾರೆ ಅವರ ಹೋರಾಟವನ್ನು ನಾವೂ ಬೆಂಬಲಿಸೋಣ. ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕೈ ಜೋಡಿಸೋಣ.

ಜ್ಞಾನದ ಬೋಧನೆಗೆ ಕೋಮುವಾದದ ಲೇಪನವೇಕೆ?ಶಾಲೆಗೆ ಹೊರಟ ಮಗು ಕಾಲಿಗೆರಗಿ ನಮಸ್ಕರಿಸಿದರೆ ಹಿಂದೆ ಹಿರಿಯರು, "ನೀ ಏನಾದರಾಗು, ಮೊದಲು ಮಾನವನಾಗು. ದೇಶ ಸೇವೆ ಮಾಡಿ, ಭಾರತಮಾತೆಯ ಹೆಮ್ಮೆಯ ಪುತ್ರನಾಗು" ಎಂದು ಹಾರೈಸುತ್ತಿದ್ದರು. ಈಗ ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಹಿರಿಯರ ಆಶೀರ್ವಾದದ ವೈಖರಿಯು ಬದಲಾಗಿದೆ. ಕಾಲಿಗೆರಗುವ ಮಕ್ಕಳಿಗೆ " ನೀನು ಎಂಜಿನಿಯರ್ ಆಗಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಸುಖವಾಗಿರು. ವೈದ್ಯನಾಗು, ವಿದೇಶಕ್ಕೆ ಹೋಗಿ ಹೇರಳ ಹಣ ಸಂಪಾದಿಸು" ಎನ್ನುವ ಹಾರೈಕೆ ಅವರ ಬಾಯಿಂದ ಬರುತ್ತದೆ. ಇದಕ್ಕೆ ಪೂರಕವಾಗಿ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದುತ್ತಿರುವ ಮಕ್ಕಳು ಬುದ್ಧಿವಂತ ವಿಜ್ಞಾನಿಗಳಾಗುತ್ತಿದ್ದಾರೆ. ಚಾಣಾಕ್ಷ ಎಂಜಿನಿಯರ್ ಆಗುತ್ತಿದ್ದಾರೆ. ಖ್ಯಾತ ವೈದ್ಯರಾಗುತ್ತಿದ್ದಾರೆ. ಆದರೆ, ಮನುಷ್ಯರಾಗುವುದನ್ನು ಮರೆಯುತ್ತಿದ್ದಾರೆ.
ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮಕ್ಕಳಿಗೆ ಬಯಸಿದ್ದೆಲ್ಲವೂ ಸಿಗುತ್ತಿವೆ. ವಿಜ್ಞಾನದ ಸವಲತ್ತುಗಳು, ಆರ್ಥಿಕ ಅನುಕೂಲತೆಗಳು, ಮನೋರಂಜನೆಯ ಸಾಮಗ್ರಿಗಳು ಎಲ್ಲವೂ ಲಭ್ಯ. ಕಂಪ್ಯೂಟರ್ ಬಳಕೆ, ಸಿನಿಮಾ ಮಾಧ್ಯಮಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಸ್ವೇಚ್ಚಾಚಾರದ ಪ್ರವೃತ್ತಿ ಹೆಚ್ಚುತ್ತಿದೆ.ರಾಗಿಂಗ್, ಅಪರಾಧ ಪ್ರಕರಣಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯ ಪ್ರಮಾಣ ಅಧಿಕವಾಗುತ್ತಿದೆ. ಇದಕ್ಕೆ ಮೂಲ ಕಾರಣ ನೈತಿಕ ತರಬೇತಿಯ ಕೊರತೆ ಎಂಬುದನ್ನು ನಾವು ಮರೆಯುವಂತಿಲ್ಲ. ಹಣ ಸಂಪಾದನೆಯೊಂದೆ ಶಿಕ್ಷಣದ ಗುರಿಯಾದರೆ, ಸಮಾಜದ ಸ್ವಾಸ್ಥ್ಯ ಉಳಿಯಲು ಸಾಧ್ಯವಿಲ್ಲ. ನೈತಿಕ ಬೋಧನೆಯ ಅವಶ್ಯಕತೆ ಇಂದಿನ ಶಿಕ್ಷಣದ ಮೂಲಭೂತ ಅಗತ್ಯಗಳಲ್ಲಿ ಒಂದು ಎನ್ನುವುದನ್ನು ನಾವು ಮನಗಾಣಬೇಕಿದೆ. ಇದನ್ನು ಗೀತೆಯ ಬೋಧನೆ ನೀಗಿಸಬಲ್ಲದು.
" ನನ್ನಲ್ಲಿ ಜ್ಞಾನವು ಎಲ್ಲಾ ಕಡೆಯಿಂದಲೂ ಹರಿದು ಬರಲಿ" ಎಂಬುದು ಶಿಕ್ಷಣದ ಮುಖ್ಯ ಧ್ಯೇಯ. ಗೀತೆಯ ಸಾರವೂ ಇದೆ ಆಗಿದೆ. ವಿದ್ಯಾರ್ಥಿಯಾದವನಿಗೆ ಚರಿತ್ರೆ, ರಾಜಕೀಯ, ಪ್ರಸಕ್ತ ವಿದ್ಯಮಾನ, ನೈತಿಕ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ...ಹೀಗೆ ಎಲ್ಲದರ ತಿಳುವಳಿಕೆ ಅಗತ್ಯ. ಇಂದಿನ ವಿದ್ಯಾರ್ಥಿಗಳು ಶೇಕ್ಸ್‌ಪಿಯರ್‌ನ ಕಾವ್ಯ ಓದುತ್ತಿಲ್ಲವೇ?. ಬುದ್ಧನ ಬೋಧನೆ ಬಗ್ಗೆ ತಿಳಿಯುತ್ತಿಲ್ಲವೇ?. ಮೊಘಲ್ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡುತ್ತಿಲ್ಲವೇ?. ಎಲ್ಲದರ ಅಧ್ಯಯನದ ತಿರುಳೇ ನಿಜವಾದ ಶಿಕ್ಷಣ. ಹಾಗಾಗಿ ನಮ್ಮ ನೆಲದ ಜ್ಞಾನದ ಸಾರವನ್ನು ಮಕ್ಕಳಿಗೆ ಬೋಸುವುದರಲ್ಲಿ ತಪ್ಪೇನಿದೆ?. ಅಷ್ಟಕ್ಕೂ ಭಗವದ್ಗೀತೆಯಲ್ಲಿ ಹೇಳಿರುವುದೇನು?. ಇಡೀ ಭಗವದ್ಗೀತೆ ನಿಂತಿರುವುದು ಕರ್ಮ, ಭಕ್ತಿ ಹಾಗೂ ಜ್ಞಾನ ಎಂಬ ಮೂರು ಯೋಗಗಳಿಂದ. ಚರಿತ್ರೆಯ ಒಂದು ಭಾಗವೇ ಗೀತೆ . ಮನಸ್ಸಿನಲ್ಲಿ ಅಧೈರ್ಯ ಮೂಡಿದಾಗ ಧೈರ್ಯ ತುಂಬುವ ಸಾಧನ. ಜೀವನದ ಗುರಿಯ ಬಗ್ಗೆ ತಿಳಿ ಹೇಳುವ ಗ್ರಂಥ.
ಗೀತೆಯ ದೃಷ್ಟಿಯಲ್ಲಿ ಧರ್ಮ ಎಂದರೆ ಆಚರಣೆ ಎಂದರ್ಥ. " ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು" ಎಂದು ತಿಳಿ ಹೇಳುವ ಕರ್ಮಯೋಗದ ಬೋಧನೆ ವಿದ್ಯಾರ್ಥಿಗಳಲ್ಲಿ ಕರ್ತವ್ಯದ ಪ್ರಜ್ಞೆ ಮೂಡಿಸಲು ಅನುವು ಮಾಡಿಕೊಡುತ್ತದೆ. ಜ್ಞಾನ ಯೋಗ ಜ್ಞಾನದ ಮಹತ್ವವನ್ನು ತಿಳಿ ಹೇಳುತ್ತದೆ. ಯಾವುದು ಸತ್ಯ,ಯಾವುದು ಮಿಥ್ಯ ಎಂಬುದರ ಬಗ್ಗೆ ತಿಳಿ ಹೇಳುವ ಕೆಲಸವನ್ನು ಅದು ಮಾಡುತ್ತದೆ. ಭಕ್ತಿ ಯೋಗ, ಭಕ್ತಿಯ ಮಹತ್ವದ ಬಗ್ಗೆ ಅರಿವನ್ನು ಮೂಡಿಸುತ್ತದೆ. ಮನಸ್ಸಿನ ನಿಯಂತ್ರಣ, ಮಾನಸಿಕ ಶುದ್ಧತೆ, ಜೀವನದ ವಾಸ್ತವಿಕತೆ, ಸ್ವ ಸಾಮರ್ಥ್ಯದ ಬಗ್ಗೆ ಅರಿವು, ಕರ್ತವ್ಯ ನಿಷ್ಠೆಯ ಬಗ್ಗೆ ತಿಳಿ ಹೇಳುವುದೆ ಗೀತೆಯ ಸಾರ.
ಗೀತೆ ಮನುಷ್ಯರ ನಡುವೆ ಭೇದ-ಭಾವ ಎಣಿಸಿಲ್ಲ. ಬದಲಾಗಿ ಅದರ ಭೇದ-ಭಾವ ಇರುವುದು ಧರ್ಮ ಹಾಗೂ ಅಧರ್ಮಗಳ ನಡುವೆ. ಕರ್ತವ್ಯದ ಪ್ರಜ್ಞೆಯನ್ನು ಎಚ್ಚರಿಸುವುದು ಅದರ ಬೋಧನೆಯ ತಿರುಳು. ಒಬ್ಬ ಜವಾಬ್ಧಾರಿ ಮನುಷ್ಯನನ್ನಾಗಿ ರೂಪಿಸುವುದು ಅದರ ಧ್ಯೇಯ. ಕೋಮುಭಾವನೆಯನ್ನು ಪ್ರಚೋದಿಸುವ ಯಾವುದೇ ಅಂಶ ಗೀತೆಯಲ್ಲಿಲ್ಲ. ಅಷ್ಟಕ್ಕೂ ಕೇವಲ ಒಂದೇ ಮಿನವರು ಇದರ ಅಧ್ಯಯನ ನಡೆಸಬೇಕು ಎಂದು ಗೀತೆಯಲ್ಲಿ ಎಲ್ಲೂ ಹೇಳಿಲ್ಲ. ಗೀತೆಯಲ್ಲಿ ಮೂಡಿಬಂದಿರುಹುದು ವಿಶಾಲ ದೃಷ್ಠಿಕೋನವೆ ಹೊರತು ಸೀಮಿತ ದೃಷ್ಠಿಕೋನವಲ್ಲ. ಜೀವನ ದರ್ಶನವಾಗಬಲ್ಲ ಗೀತೆಯನ್ನು ನಮ್ಮ ಮಕ್ಕಳು ಓದಬೇಕು ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ. " ನನ್ನನ್ನು ಯಾರೇ ಆರಾಧಿಸಲಿ, ನಾನವರನ್ನು ಸ್ವೀಕರಿಸುತ್ತೇನೆ. ಅವರು ಯಾವ ದಾರಿಯನ್ನು ಅನುಸರಿಸಿದರೂ ನನಗದು ಇಷ್ಟವಾಗುತ್ತದೆ" ಗೀತೆಯಲ್ಲಿ ಕೃಷ್ಣ ಹೇಳಿದ ಮಾತಿದು (ಗೀತೆ ೪:೧೧). ಬಹುಶ: ಇಂದಿನ ಜಾತ್ಯಾತೀತ ವಾದಕ್ಕೆ ಪುಷ್ಠಿ ನೀಡುವ ಮಾತಿದು.
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಗೆಲ್ಲಬೇಕೆಂಬುದೇ ಗೀತೆಯ ಸಾರ. ಗೀತೆಯ ಈ ಬೋಧನೆಯನ್ನು ಮಕ್ಕಳಿಗೆ ಬೋಧಿಸಿದರೆ  ತಪ್ಪೆ?. ಈ ಅರಿಷಡ್ವರ್ಗಗಳೇ ಮನುಷ್ಯನ ಏಳ್ಗೆಗೆ ಅಡ್ಡಗಾಲು ಎಂಬ ಬೋಧನೆಯನ್ನು ಎಲ್ಲಾ ಮಹಾತ್ಮರೂ ಬೋಧಿಸುತ್ತಲೇ ಬಂದಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಾ ಗಾಂಧಿಯವರ ಸತ್ಯಾಗ್ರಹಕ್ಕೆ ಪ್ರೇರಣೆಯಾಗಿದ್ದು ಅಥವಾ ಗಾಂಧಿಯ ಪ್ರಭಾವಕ್ಕೆ ಮೂಲಕಾರಣವಾಗಿದ್ದು ಗೀತೆ ಎನ್ನುವುದನ್ನು ಅವರ ಆತ್ಮಕಥೆಯೇ ಸಾರುತ್ತದೆ. " ನಾನು ಗೀತೆಯಿಂದ ಮಾನಸಿಕ ಶಾಂತಿಯನ್ನು ಕಂಡುಕೊಂಡೆ. ನನ್ನ ಮನಸ್ಸಿನಲ್ಲಿ ನಿರಾಶೆಯ ಕಾರ್ಮೋಡ ಕಾಣಿಸಿಕೊಂಡಾಗ, ಗೀತೆ ನನಗೆ ಬೆಳಕಿನ ಆಶಾಕಿರಣವಾಗಿ ಕಂಡು ಬಂತು". ೧೯೨೯ರಲ್ಲಿ ಯರವಾಡಾ ಜೈಲಿನಲ್ಲಿ ಬಂಧಿಯಾಗಿದ್ದಾಗ ತಮಗಾದ ಅನುಭವವನ್ನು ಗಾಂಧೀಜಿ ಹಂಚಿಕೊಂಡಿದ್ದು ಹೀಗೆ. ಬಾಲ ಗಂಗಾಧರ ನಾಥ ತಿಲಕ್‌ಗೂ  ಗೀತೆಯೇ ಜೀವನಸ್ಪೂರ್ತಿಯಾಗಿ ಪರಿಣಮಿಸಿತು ಎಂಬ ಅಂಶ ೧೯೧೦-೧೧ರ ಸಾಲಿನಲ್ಲಿ ಅವರು ಜೈಲಿನಲ್ಲಿದ್ದಾಗ ಬರೆದ ಲೇಖನದಿಂದ ಕಂಡು ಬರುತ್ತದೆ.
ಜೀವನದ ಬದ್ಧತೆ ಹಾಗೂ ಕರ್ತವ್ಯವನ್ನು ಎಚ್ಚರಿಸುವುದೇ ಗೀತೆಯ ಸಾರ ಎಂದಿದ್ದಾರೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ. ವಿಶ್ವಖ್ಯಾತಿಯ ವಿಜ್ಞಾನಿ ಐನ್‌ಸ್ಟೀನ್ ಗೀತೆಯಿಂದ ಪ್ರಭಾವಿತನಾಗಿದ್ದ ಎಂಬುದು ಆತನ ಜೀವನ ಚರಿತ್ರೆಯಿಂದ ತಿಳಿದು ಬರುತ್ತದೆ. ೨೦೦೬ರ ವರದಿ ಪ್ರಕಾರ, ಗೀತೆ ಪಾಶ್ಚಿಮಾತ್ಯ ರಾಷ್ಟ್ರಗಳ ವಾಣಿಜ್ಯೋದ್ಯಮಿಗಳ ಸಮುದಾಯದಲ್ಲಿ ಪ್ರಮುಖ ಪ್ರಭಾವಿ ಗ್ರಂಥವಾಗಿ ಹೊರಹೊಮ್ಮಿದೆ. ಇದು ಪ್ರಾಚೀನ ಚೈನಿ ಗ್ರಂಥವಾದ " ದಿ ಆರ್ಟ್ ಆಫ್ ವಾರ್" ಗ್ರಂಥದ ಪ್ರಭಾವವನ್ನು ಕಡಿಮೆಗೊಳಿಸಿದೆ. ವಿಶ್ವದ ಅನೇಕ ಭಾಷೆಗಳಿಗೆ ಅನುವಾದಗೊಂಡ ಗೀತೆ, ವಿದೇಶಿಯರ ಅಧ್ಯಯನದ ಗ್ರಂಥವಾಗಿಯೂ ಬಳಕೆಯಾಗುತ್ತಿದೆ.
ದೇಶಕಾಲದಲ್ಲಿ ಗತಿಸಿಹೋದ ಮಹಾತ್ಮರಿಗೆ ಪ್ರೇರಣೆಯಾದ ಗೀತೆ ನಮ್ಮ ಮಕ್ಕಳಿಗೆ ಪ್ರೇರಣೆಯಾದರೆ ತಪ್ಪೇನು?. ಮಹಾತ್ಮರ, ಸಾಧಕರ ಬದುಕಿನ ಮೇಲೆ ಪ್ರಭಾವ ಬೀರಿದ ಗೀತೆ ನಮ್ಮ ವಿದ್ಯಾರ್ಥಿಗಳ ಬದುಕಿನ ಮೇಲೆ ಪ್ರಭಾವ ಬೀರಿ, ನಮ್ಮ ಮಕ್ಕಳು ಸುಸಂಸ್ಕೃತ, ಸಚ್ಚಾರಿತ್ರ್ಯ, ಸ್ವಾಭಿಮಾನಿ ಪ್ರಜೆಗಳಾಗಿ ರೂಪುಗೊಳ್ಳಲು ಸಹಕರಿಸಲಿ. ಅವರ ಜೀವನದ ಗುರಿ ತಲುಪುವಲ್ಲಿ ಗೀತೆಯ ಬೋಧನೆ ಮಾರ್ಗದರ್ಶನವಾಗಲಿ. ನಮ್ಮ ಮಕ್ಕಳ ಸಾಧನೆಗೆ ಪ್ರೇರಣೆಯಾಗಲಿ.