ಮಗ್ಗುಲ ಮುಳ್ಳು ಚುಚ್ಚದೆ ಇದ್ದೀತೇ?


     " ನಮ್ಮ ಸದಾಕಾಲದ ಮಿತ್ರ, ಆತ್ಮೀಯ ರಾಷ್ಟ್ರ ಚೀನಾ ಇದೇ ಮೊದಲ ಬಾರಿಗೆ ನಮ್ಮತ್ತ ಬೊಟ್ಟು ಮಾಡುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಿರ್ಜಿಕಿಸ್ತಾನ, ಉಜ್ಬೇಕಿಸ್ತಾನ ಗಡಿಯಾಗುಳ್ಳ ಚೀನಾದ ಜಿಂಜಿಯಾಂಗ್ ಪ್ರಾಂತ್ಯದಲ್ಲಿ ಹಿಂಸಾಚಾರ ಭುಗಿಲೆದ್ದಾಗ, ಬೀಜಿಂಗ್ ನಮ್ಮತ್ತ ಕ್ರೂರದೃಷ್ಠಿ ಹಾಯಿಸಿದೆ. ಹಿಂಸಾಚಾರ ನಡೆಸಿದ ಮುಸ್ಲಿಂ ಭಯೋತ್ಪಾದಕರು ಪಾಕಿಸ್ತಾನದಿಂದ ತರಬೇತಿ ಪಡೆದಿದ್ದಾರೆ ಎಂದು ಹರಿಹಾಯ್ದಿದೆ. ಇದು ಪಾಕ್ ಸರಕಾರ ಗಂಭೀರವಾಗಿ ಯೋಚಿಸಬೇಕಾದ ವಿಚಾರ". ಇದು ಪಾಕ್‌ನ ಪ್ರಮುಖ ದಿನಪತ್ರಿಕೆ "ಟೈಮ್ಸ್ ಆಫ್ ಪಾಕಿಸ್ತಾನ" ತನ್ನ ಮುಖಪುಟದಲ್ಲಿ ಇತ್ತೀಚೆಗೆ ಪ್ರಮುಖವಾಗಿ ಪ್ರಕಟಿಸಿದ ವರದಿ.
     ನಿಜ, ಇದೇ ಮೊದಲ ಬಾರಿಗೆ ಚೀನಾಕ್ಕೆ ಮಗ್ಗುಲ ಮುಳ್ಳು ಚುಚ್ಚಿದ ಅನುಭವವಾಗಿದೆ. ಭಾರತವನ್ನು ದ್ವೇಷಿಸುವುದಕ್ಕಾಗಿಯೇ ಪಾಕಿಸ್ತಾನವನ್ನು ಓಲೈಸುತ್ತಾ ಬಂದ ಚೀನಾಕ್ಕೆ ಕಾಲಿಗೆ ಚೇಳು ಚುಚ್ಚಿದ ಅನುಭವವಾಗಿದೆ. ಶತ್ರುವಿನ ಶತ್ರು ಪರಮ ಮಿತ್ರ ಎಂಬ ಕಾರಣಕ್ಕಾಗಿ ಪಾಕ್‌ನ್ನು ಅಪ್ಪಿದ ತಪ್ಪಿನ ಅರಿವಾಗತೊಡಗಿದೆ. ತನ್ನದೇ ತಪ್ಪಿಗೆ ತನ್ನದೇ ನೆಲದಲ್ಲಿ ಭಯೋತ್ಪಾದನೆಯ ಅಟ್ಟಹಾಸವನ್ನು ಅನುಭವಿಸಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.
     ಜುಲೈ ಕೊನೆಯ ಹಾಗೂ ಆಗಸ್ಟ್ ತಿಂಗಳ ಮೊದಲ ವಾರಗಳ ಅವಧಿಯಲ್ಲಿ ಚೀನಾದ ಜಿಂಜಿಯಾಂಗ್ ಪ್ರಾಂತ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತು. ೨೫ಕ್ಕೂ ಹೆಚ್ಚು ಮಂದಿ ಕೋಮು ದಳ್ಳುರಿಗೆ ಆಹುತಿಯಾದರು. ಹಿಂಸೆಯ ಸರಮಾಲೆಯೇ ನಡೆದು ಹೋಯಿತು. ಕಶ್ಗರ್ ನಗರಕ್ಕೆ ಧಾವಿಸಿ ಬಂದ ಉಗ್ರರು ನೋಡ ನೋಡುತ್ತಿದ್ದಂತೆಯೇ ಮಾರುಕಟ್ಟೆ ಪ್ರದೇಶವೊಂದರಲ್ಲಿ ಲಾರಿಯೊಂದನ್ನು ಅಪಹರಿಸಿ, ಜನರ ಗುಂಪಿನ ಮೇಲೆ, ಹೋಟೆಲ್‌ಗಳ ಮೇಲೆ ಮುಗಿ ಬಿದ್ದರು. ಜನ ಕಕ್ಕಾಬಿಕ್ಕಿಯಾದರು. ರಕ್ತದ ಓಕುಳಿಯೇ ಹರಿಯಿತು. ಉಗ್ರರು ಎರಡು ವಾರಗಳ ಕಾಲ ಅಟ್ಟಹಾಸ ಮೆರೆದರು. ಈ ಹಿಂಸಾಚಾರ ಆರಂಭಕ್ಕೂ ಮುನ್ನ ಎರಡು ವಾರಗಳ ಹಿಂದೆ ಜಿಂಜಿಯಾಂಗ್ ನಗರದ ಹಾಟನ್ ಪ್ರದೇಶದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಲು ಬಂದಿದ್ದ ೧೪ ಯೂಗರ್ ಉಗ್ರರು, ಇಬ್ಬರು ಪೊಲೀಸ್ ಅಧಿಕಾರಿಗಳನ್ನು, ಇಬ್ಬರು ನಾಗರಿಕರನ್ನು ಗುಂಡಿಕ್ಕಿ ಕೊಂದಿದ್ದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು. ಪ್ರತಿ ದಾಳಿಯಲ್ಲಿ ಪೊಲೀಸರು ಎಲ್ಲಾ ಉಗ್ರರನ್ನು ಹತ್ಯೆ ಮಾಡಿದ್ದರು.
     ಹಾಗೆ ನೋಡಿದರೆ, ಈ ಪ್ರಾಂತ್ಯದಲ್ಲಿ ಜನಾಂಗೀಯ ಕಲಹ ಹೊಸದೇನಲ್ಲ. ಅದು ಮಾಮೂಲಿಯೇ. ಈ ಹಿಂದೆ ೨೦೦೯ರಲ್ಲಿ ಯೂಗರ್ ಹಿಂಸಾಚಾರಕ್ಕೆ ಪ್ರತಿಯಾಗಿ ಹ್ಯಾನ್‌ರು ಪ್ರತಿದಾಳಿ ನಡೆಸಿದಾಗ ೨೦೦ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಆದರೆ, ಇದೇ ಮೊದಲ ಬಾರಿಗೆ ಇಲ್ಲಿನ ಹಿಂಸಾಚಾರಕ್ಕೆ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಭಯೋತ್ಪಾದಕ  ಸಂಘಟನೆಯತ್ತ ಚೀನಾ ಬೊಟ್ಟು ಮಾಡಿದೆ. ಅಷ್ಟರ ಮಟ್ಟಿಗೆ "ಪಾಕಿಸ್ತಾನ ಭಯೋತ್ಪಾದಕರ ತವರು" ಎಂಬ ಭಾರತದ ರೋಧನಕ್ಕೆ ಬೆಲೆ ಬಂದಿದೆ.
ಜಿಂಜಿಯಾಂಗ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸ್ವಾಯತ್ತ ವಲಯ. ಚೀನಾದ ದೊಡ್ಡ ರಾಜ್ಯಗಳಲ್ಲೊಂದು. ರಷ್ಯಾ, ಮಾಂಗೋಲಿಯಾ, ಕಜಕಸ್ತಾನ, ಕಿರ್ಜಕಿಸ್ತಾನ, ತಜಕಿಸ್ತಾನ , ಅಪಘಾನಿಸ್ತಾನ, ಪಾಕಿಸ್ತಾನ ಹಾಗೂ ಭಾರತದ ಗಡಿ ಹೊಂದಿರುವ ಜಿಂಜಿಯಾಂಗ್, ಚೀನಾದ ಅತಿ ದೊಡ್ಡ ನೈಸರ್ಗಿಕ ತೈಲ ಉತ್ಪಾದನಾ ವಲಯಗಳಲ್ಲೊಂದು. ಇಲ್ಲಿನ ಜನಸಂಖ್ಯೆಯಲ್ಲಿ ಯೂಗರ್‌ಗಳ ಪಾಲು ಅಧಿಕ. ಶೇ. ೪೫ರಷ್ಟು ಮಂದಿ ಅವರೇ. ಬಿಟ್ಟರೆ ಹ್ಯಾನ್ ಜನಾಂಗದವರ ಪಾಲು ಶೇ. ೪೧. ಯೂಗರ್ ಮೂಲತ: ಟರ್ಕಿ ಜನಾಂಗೀಯ ಮೂಲದವರು. ಶತಮಾನಗಳ ಹಾದಿಯಲ್ಲಿ ನೆಲೆಸಲು ಬಂದ ಮುಸ್ಲಿಂ ಜನಾಂಗೀಯರು. ಹ್ಯಾನ್‌ರು ಮೂಲತ: ಚೀನಿಯರು. ಯೂಗರ್ ಜನಾಂಗ ಪಾಶವೀ ಕೃತ್ಯಕ್ಕೆ ಹೆಸರಾದ ಜನಾಂಗ. ಈ ಹಿಂದೆ ನಡೆದ ಅನೇಕ ಹಿಂಸಾಚಾರ ಪ್ರಕರಣಗಳಲ್ಲಿ ಹ್ಯಾನ್‌ರ ಕತ್ತನ್ನು ಕೊಯ್ದ ನಿದರ್ಶನಗಳೂ ಇವೆ. ಹಾಗಾಗಿ, ಈ ಎರಡೂ ಜನಾಂಗದ ನಡುವೆ ಜನಾಂಗೀಯ ಕಲಹ ಇಲ್ಲಿ ಸಾಮಾನ್ಯ. ಈ ಬಗ್ಗೆ ಸ್ವತ; ಚೀನಾ ಈ ಹಿಂದೆ ಪಾಕ್‌ಗೆ ಸೂಚನೆ ನೀಡಿತ್ತು. ಈ ಜನಾಂಗೀಯ ಕಲಹದಲ್ಲಿ ಭಯೋತ್ಪಾದಕರು ಒಳನುಸುಳದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿತ್ತು.
ಆದರೆ, ಪಾಕ್ ಕಿವಿಗೊಡಲಿಲ್ಲ. ಈಗ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಶ್ಗರ್‌ನ ಬೀದಿ ಬೀದಿಗಳಲ್ಲಿ ನೆತ್ತರು ಹರಿದಿದೆ. ಚೀನಾ ಪಾಕ್‌ನತ್ತ ಬೊಟ್ಟು ಮಾಡಿದೆ. "ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವ್‌ಮೆಂಟ್‌ನ ಉಗ್ರರು ಈ ಹಿಂಸಾಚಾರ ನಡೆಸುತ್ತಿದ್ದಾರೆ. ಪಾಕಿಸ್ತಾನದ ಬುಡಕಟ್ಟು ವಲಯದಲ್ಲಿನ ಭಯೋತ್ಪಾದಕರ ಶಿಬಿರಗಳಲ್ಲಿ ಇವರಿಗೆ ಬಾಂಬ್ ತಯಾರಿಕಾ ತರಬೇತಿ ನೀಡಲಾಗುತ್ತಿದೆ. ಜೀಹಾದ್ ಬೋಧನೆ ಮೂಲಕ ಇವರನ್ನು ಹಿಂಸಾಚಾರಕ್ಕೆ ಪ್ರಚೋದಿಸಲಾಗುತ್ತಿದೆ" ಎಂದು ಸ್ಪಷ್ಟ ಮಾತುಗಳಲ್ಲಿ ಚೀನಾ ಪ್ರತಿಭಟನೆ ಸೂಚಿಸಿದೆ. ಇಟಿಐಎಂ ಎಂದು ಸಂಕ್ಷಿಪ್ತವಾಗಿ ಕರೆಯಲಾಗುವ ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವ್‌ಮೆಂಟ್, ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡಲು ಯೂಗರ್ ಜನಾಂಗೀಯರನ್ನು ಪ್ರಚೋದಿಸುತ್ತಿದೆ. ಅಲ್ ಖಾಯಿದಾ ಹಾಗೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳ ಜತೆ ನಂಟು ಹೊಂದಿದೆ ಎಂಬ ಅಂಶವನ್ನು ಚೀನಾ ಈ ಹಿಂದೆಯೂ ಪ್ರತಿಪಾದಿಸಿತ್ತು. ಜಿಂಜಿಯಾಂಗ್ ಹಿಂಸಾಚಾರದ ನಂತರ ಉಗ್ರರು ಬಿಟ್ಟು ಪರಾರಿಯಾದ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಪಾಕ್‌ನತ್ತ ನೆಲೆ ತೋರಿಸಿವೆ. ಕಾರ್ಯಾಚರಣೆ ವೇಳೆ ಸೆರೆ ಸಿಕ್ಕ ಉಗ್ರ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಕೂಡ ಇದನ್ನೇ ಪ್ರತಿಪಾದಿಸುತ್ತದೆ ಎಂದು ಕುಶ್ಗಾರ್‌ನ ಸ್ಥಳೀಯ ಆಡಳಿತ ಹೇಳಿದೆ.
     ಚೀನಾದ ಈ ಆರೋಪ ಪಾಕಿಸ್ತಾನಕ್ಕೆ ನುಂಗಲಾರದ ತುಪ್ಪವಾಗಿದೆ. ಅಮೆರಿಕ ಜತೆಗಿನ ಸಂಬಂಧ ಹಳಸುತ್ತಿದ್ದಂತೆಯೇ ಚೀನಾದ ಜತೆ ಮತ್ತಷ್ಟು ಆತ್ಮೀಯತೆ ಬೆಳೆಸಲು ಅದು ಹವಣಿಸುತ್ತಿತ್ತು. ನಾಗರಿಕ ಹಾಗೂ ಸೇನಾ ನೆರವಿಗೆ ಚೀನಾ ಪರ್ಯಾಯ ರಾಷ್ಟ್ರವಾಗಿ ರೂಪುಗೊಳ್ಳತೊಡಗಿತ್ತು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಚೀನಾ ಜತೆ ಕೈಜೋಡಿಸುವ ನಾಟಕವಾಡುತ್ತಿತ್ತು. ಅಷ್ಟೇಕೆ, ಪಾಕಿಸ್ತಾನದ ಆಹ್ವಾನದ ಮೇರೆಗೆ ಗ್ವದಾರ್ ಬಂದರಿನಲ್ಲಿ ನೌಕಾ ನೆಲೆ ಸ್ಥಾಪಿಸಲು ಚೀನಾ ಮುಂದಾಗಿದೆ. ಚೀನಾಕ್ಕೂ ಅಷ್ಟೇ. ಅರುಣಾಚಲ ನಮ್ಮದು ಎಂದು ಕ್ಯಾತೆ ತೆಗೆಯುತ್ತಾ, ಜಮ್ಮು ಕಾಶ್ಮೀರ ವಿವಾದಿತ ಪ್ರದೇಶ ಎಂದು ಹಳಿಯುತ್ತಾ ಭಾರತದ ವಿರುದ್ಧ ಕತ್ತಿ ಮಸೆಯಲು ಪಾಕಿಸ್ತಾನದ ಸ್ನೇಹ ಅತ್ಯಗತ್ಯವಾಗಿತ್ತು. ಆದರೆ, ಭಯೋತ್ಪಾದನೆ ತನ್ನ ಕಾಲ ಬುಡಕ್ಕೇ ಬಂದು ನಿಂತಿರುವಾಗ, ಚೀನಾಕ್ಕೆ ಶತ್ರುವಿನ ಶತ್ರುವಿನ ಮಿತ್ರತ್ವಕ್ಕಿಂತ, ತನ್ನ ನೆಲದ ರಕ್ಷಣೆ ಮುಖ್ಯ ಎನಿಸತೊಡಗಿದೆ. ಮಗ್ಗುಲ ಮುಳ್ಳು ಚುಚ್ಚಿದ ಅನುಭವವಾಗಿದೆ.

( ಆಗಸ್ಟ್ ೧೧, ೨೦೧೧ ರಂದು "ವಿಜಯ ಕರ್ನಾಟಕ''ದ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ಲೇಖನ).