ಜ್ಞಾನದ ಬೋಧನೆಗೆ ಕೋಮುವಾದದ ಲೇಪನವೇಕೆ?ಶಾಲೆಗೆ ಹೊರಟ ಮಗು ಕಾಲಿಗೆರಗಿ ನಮಸ್ಕರಿಸಿದರೆ ಹಿಂದೆ ಹಿರಿಯರು, "ನೀ ಏನಾದರಾಗು, ಮೊದಲು ಮಾನವನಾಗು. ದೇಶ ಸೇವೆ ಮಾಡಿ, ಭಾರತಮಾತೆಯ ಹೆಮ್ಮೆಯ ಪುತ್ರನಾಗು" ಎಂದು ಹಾರೈಸುತ್ತಿದ್ದರು. ಈಗ ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಹಿರಿಯರ ಆಶೀರ್ವಾದದ ವೈಖರಿಯು ಬದಲಾಗಿದೆ. ಕಾಲಿಗೆರಗುವ ಮಕ್ಕಳಿಗೆ " ನೀನು ಎಂಜಿನಿಯರ್ ಆಗಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿ ಸುಖವಾಗಿರು. ವೈದ್ಯನಾಗು, ವಿದೇಶಕ್ಕೆ ಹೋಗಿ ಹೇರಳ ಹಣ ಸಂಪಾದಿಸು" ಎನ್ನುವ ಹಾರೈಕೆ ಅವರ ಬಾಯಿಂದ ಬರುತ್ತದೆ. ಇದಕ್ಕೆ ಪೂರಕವಾಗಿ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಓದುತ್ತಿರುವ ಮಕ್ಕಳು ಬುದ್ಧಿವಂತ ವಿಜ್ಞಾನಿಗಳಾಗುತ್ತಿದ್ದಾರೆ. ಚಾಣಾಕ್ಷ ಎಂಜಿನಿಯರ್ ಆಗುತ್ತಿದ್ದಾರೆ. ಖ್ಯಾತ ವೈದ್ಯರಾಗುತ್ತಿದ್ದಾರೆ. ಆದರೆ, ಮನುಷ್ಯರಾಗುವುದನ್ನು ಮರೆಯುತ್ತಿದ್ದಾರೆ.
ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮಕ್ಕಳಿಗೆ ಬಯಸಿದ್ದೆಲ್ಲವೂ ಸಿಗುತ್ತಿವೆ. ವಿಜ್ಞಾನದ ಸವಲತ್ತುಗಳು, ಆರ್ಥಿಕ ಅನುಕೂಲತೆಗಳು, ಮನೋರಂಜನೆಯ ಸಾಮಗ್ರಿಗಳು ಎಲ್ಲವೂ ಲಭ್ಯ. ಕಂಪ್ಯೂಟರ್ ಬಳಕೆ, ಸಿನಿಮಾ ಮಾಧ್ಯಮಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಸ್ವೇಚ್ಚಾಚಾರದ ಪ್ರವೃತ್ತಿ ಹೆಚ್ಚುತ್ತಿದೆ.ರಾಗಿಂಗ್, ಅಪರಾಧ ಪ್ರಕರಣಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯ ಪ್ರಮಾಣ ಅಧಿಕವಾಗುತ್ತಿದೆ. ಇದಕ್ಕೆ ಮೂಲ ಕಾರಣ ನೈತಿಕ ತರಬೇತಿಯ ಕೊರತೆ ಎಂಬುದನ್ನು ನಾವು ಮರೆಯುವಂತಿಲ್ಲ. ಹಣ ಸಂಪಾದನೆಯೊಂದೆ ಶಿಕ್ಷಣದ ಗುರಿಯಾದರೆ, ಸಮಾಜದ ಸ್ವಾಸ್ಥ್ಯ ಉಳಿಯಲು ಸಾಧ್ಯವಿಲ್ಲ. ನೈತಿಕ ಬೋಧನೆಯ ಅವಶ್ಯಕತೆ ಇಂದಿನ ಶಿಕ್ಷಣದ ಮೂಲಭೂತ ಅಗತ್ಯಗಳಲ್ಲಿ ಒಂದು ಎನ್ನುವುದನ್ನು ನಾವು ಮನಗಾಣಬೇಕಿದೆ. ಇದನ್ನು ಗೀತೆಯ ಬೋಧನೆ ನೀಗಿಸಬಲ್ಲದು.
" ನನ್ನಲ್ಲಿ ಜ್ಞಾನವು ಎಲ್ಲಾ ಕಡೆಯಿಂದಲೂ ಹರಿದು ಬರಲಿ" ಎಂಬುದು ಶಿಕ್ಷಣದ ಮುಖ್ಯ ಧ್ಯೇಯ. ಗೀತೆಯ ಸಾರವೂ ಇದೆ ಆಗಿದೆ. ವಿದ್ಯಾರ್ಥಿಯಾದವನಿಗೆ ಚರಿತ್ರೆ, ರಾಜಕೀಯ, ಪ್ರಸಕ್ತ ವಿದ್ಯಮಾನ, ನೈತಿಕ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ...ಹೀಗೆ ಎಲ್ಲದರ ತಿಳುವಳಿಕೆ ಅಗತ್ಯ. ಇಂದಿನ ವಿದ್ಯಾರ್ಥಿಗಳು ಶೇಕ್ಸ್‌ಪಿಯರ್‌ನ ಕಾವ್ಯ ಓದುತ್ತಿಲ್ಲವೇ?. ಬುದ್ಧನ ಬೋಧನೆ ಬಗ್ಗೆ ತಿಳಿಯುತ್ತಿಲ್ಲವೇ?. ಮೊಘಲ್ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡುತ್ತಿಲ್ಲವೇ?. ಎಲ್ಲದರ ಅಧ್ಯಯನದ ತಿರುಳೇ ನಿಜವಾದ ಶಿಕ್ಷಣ. ಹಾಗಾಗಿ ನಮ್ಮ ನೆಲದ ಜ್ಞಾನದ ಸಾರವನ್ನು ಮಕ್ಕಳಿಗೆ ಬೋಸುವುದರಲ್ಲಿ ತಪ್ಪೇನಿದೆ?. ಅಷ್ಟಕ್ಕೂ ಭಗವದ್ಗೀತೆಯಲ್ಲಿ ಹೇಳಿರುವುದೇನು?. ಇಡೀ ಭಗವದ್ಗೀತೆ ನಿಂತಿರುವುದು ಕರ್ಮ, ಭಕ್ತಿ ಹಾಗೂ ಜ್ಞಾನ ಎಂಬ ಮೂರು ಯೋಗಗಳಿಂದ. ಚರಿತ್ರೆಯ ಒಂದು ಭಾಗವೇ ಗೀತೆ . ಮನಸ್ಸಿನಲ್ಲಿ ಅಧೈರ್ಯ ಮೂಡಿದಾಗ ಧೈರ್ಯ ತುಂಬುವ ಸಾಧನ. ಜೀವನದ ಗುರಿಯ ಬಗ್ಗೆ ತಿಳಿ ಹೇಳುವ ಗ್ರಂಥ.
ಗೀತೆಯ ದೃಷ್ಟಿಯಲ್ಲಿ ಧರ್ಮ ಎಂದರೆ ಆಚರಣೆ ಎಂದರ್ಥ. " ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು" ಎಂದು ತಿಳಿ ಹೇಳುವ ಕರ್ಮಯೋಗದ ಬೋಧನೆ ವಿದ್ಯಾರ್ಥಿಗಳಲ್ಲಿ ಕರ್ತವ್ಯದ ಪ್ರಜ್ಞೆ ಮೂಡಿಸಲು ಅನುವು ಮಾಡಿಕೊಡುತ್ತದೆ. ಜ್ಞಾನ ಯೋಗ ಜ್ಞಾನದ ಮಹತ್ವವನ್ನು ತಿಳಿ ಹೇಳುತ್ತದೆ. ಯಾವುದು ಸತ್ಯ,ಯಾವುದು ಮಿಥ್ಯ ಎಂಬುದರ ಬಗ್ಗೆ ತಿಳಿ ಹೇಳುವ ಕೆಲಸವನ್ನು ಅದು ಮಾಡುತ್ತದೆ. ಭಕ್ತಿ ಯೋಗ, ಭಕ್ತಿಯ ಮಹತ್ವದ ಬಗ್ಗೆ ಅರಿವನ್ನು ಮೂಡಿಸುತ್ತದೆ. ಮನಸ್ಸಿನ ನಿಯಂತ್ರಣ, ಮಾನಸಿಕ ಶುದ್ಧತೆ, ಜೀವನದ ವಾಸ್ತವಿಕತೆ, ಸ್ವ ಸಾಮರ್ಥ್ಯದ ಬಗ್ಗೆ ಅರಿವು, ಕರ್ತವ್ಯ ನಿಷ್ಠೆಯ ಬಗ್ಗೆ ತಿಳಿ ಹೇಳುವುದೆ ಗೀತೆಯ ಸಾರ.
ಗೀತೆ ಮನುಷ್ಯರ ನಡುವೆ ಭೇದ-ಭಾವ ಎಣಿಸಿಲ್ಲ. ಬದಲಾಗಿ ಅದರ ಭೇದ-ಭಾವ ಇರುವುದು ಧರ್ಮ ಹಾಗೂ ಅಧರ್ಮಗಳ ನಡುವೆ. ಕರ್ತವ್ಯದ ಪ್ರಜ್ಞೆಯನ್ನು ಎಚ್ಚರಿಸುವುದು ಅದರ ಬೋಧನೆಯ ತಿರುಳು. ಒಬ್ಬ ಜವಾಬ್ಧಾರಿ ಮನುಷ್ಯನನ್ನಾಗಿ ರೂಪಿಸುವುದು ಅದರ ಧ್ಯೇಯ. ಕೋಮುಭಾವನೆಯನ್ನು ಪ್ರಚೋದಿಸುವ ಯಾವುದೇ ಅಂಶ ಗೀತೆಯಲ್ಲಿಲ್ಲ. ಅಷ್ಟಕ್ಕೂ ಕೇವಲ ಒಂದೇ ಮಿನವರು ಇದರ ಅಧ್ಯಯನ ನಡೆಸಬೇಕು ಎಂದು ಗೀತೆಯಲ್ಲಿ ಎಲ್ಲೂ ಹೇಳಿಲ್ಲ. ಗೀತೆಯಲ್ಲಿ ಮೂಡಿಬಂದಿರುಹುದು ವಿಶಾಲ ದೃಷ್ಠಿಕೋನವೆ ಹೊರತು ಸೀಮಿತ ದೃಷ್ಠಿಕೋನವಲ್ಲ. ಜೀವನ ದರ್ಶನವಾಗಬಲ್ಲ ಗೀತೆಯನ್ನು ನಮ್ಮ ಮಕ್ಕಳು ಓದಬೇಕು ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ. " ನನ್ನನ್ನು ಯಾರೇ ಆರಾಧಿಸಲಿ, ನಾನವರನ್ನು ಸ್ವೀಕರಿಸುತ್ತೇನೆ. ಅವರು ಯಾವ ದಾರಿಯನ್ನು ಅನುಸರಿಸಿದರೂ ನನಗದು ಇಷ್ಟವಾಗುತ್ತದೆ" ಗೀತೆಯಲ್ಲಿ ಕೃಷ್ಣ ಹೇಳಿದ ಮಾತಿದು (ಗೀತೆ ೪:೧೧). ಬಹುಶ: ಇಂದಿನ ಜಾತ್ಯಾತೀತ ವಾದಕ್ಕೆ ಪುಷ್ಠಿ ನೀಡುವ ಮಾತಿದು.
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಗೆಲ್ಲಬೇಕೆಂಬುದೇ ಗೀತೆಯ ಸಾರ. ಗೀತೆಯ ಈ ಬೋಧನೆಯನ್ನು ಮಕ್ಕಳಿಗೆ ಬೋಧಿಸಿದರೆ  ತಪ್ಪೆ?. ಈ ಅರಿಷಡ್ವರ್ಗಗಳೇ ಮನುಷ್ಯನ ಏಳ್ಗೆಗೆ ಅಡ್ಡಗಾಲು ಎಂಬ ಬೋಧನೆಯನ್ನು ಎಲ್ಲಾ ಮಹಾತ್ಮರೂ ಬೋಧಿಸುತ್ತಲೇ ಬಂದಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮಾ ಗಾಂಧಿಯವರ ಸತ್ಯಾಗ್ರಹಕ್ಕೆ ಪ್ರೇರಣೆಯಾಗಿದ್ದು ಅಥವಾ ಗಾಂಧಿಯ ಪ್ರಭಾವಕ್ಕೆ ಮೂಲಕಾರಣವಾಗಿದ್ದು ಗೀತೆ ಎನ್ನುವುದನ್ನು ಅವರ ಆತ್ಮಕಥೆಯೇ ಸಾರುತ್ತದೆ. " ನಾನು ಗೀತೆಯಿಂದ ಮಾನಸಿಕ ಶಾಂತಿಯನ್ನು ಕಂಡುಕೊಂಡೆ. ನನ್ನ ಮನಸ್ಸಿನಲ್ಲಿ ನಿರಾಶೆಯ ಕಾರ್ಮೋಡ ಕಾಣಿಸಿಕೊಂಡಾಗ, ಗೀತೆ ನನಗೆ ಬೆಳಕಿನ ಆಶಾಕಿರಣವಾಗಿ ಕಂಡು ಬಂತು". ೧೯೨೯ರಲ್ಲಿ ಯರವಾಡಾ ಜೈಲಿನಲ್ಲಿ ಬಂಧಿಯಾಗಿದ್ದಾಗ ತಮಗಾದ ಅನುಭವವನ್ನು ಗಾಂಧೀಜಿ ಹಂಚಿಕೊಂಡಿದ್ದು ಹೀಗೆ. ಬಾಲ ಗಂಗಾಧರ ನಾಥ ತಿಲಕ್‌ಗೂ  ಗೀತೆಯೇ ಜೀವನಸ್ಪೂರ್ತಿಯಾಗಿ ಪರಿಣಮಿಸಿತು ಎಂಬ ಅಂಶ ೧೯೧೦-೧೧ರ ಸಾಲಿನಲ್ಲಿ ಅವರು ಜೈಲಿನಲ್ಲಿದ್ದಾಗ ಬರೆದ ಲೇಖನದಿಂದ ಕಂಡು ಬರುತ್ತದೆ.
ಜೀವನದ ಬದ್ಧತೆ ಹಾಗೂ ಕರ್ತವ್ಯವನ್ನು ಎಚ್ಚರಿಸುವುದೇ ಗೀತೆಯ ಸಾರ ಎಂದಿದ್ದಾರೆ ಭಾರತದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ. ವಿಶ್ವಖ್ಯಾತಿಯ ವಿಜ್ಞಾನಿ ಐನ್‌ಸ್ಟೀನ್ ಗೀತೆಯಿಂದ ಪ್ರಭಾವಿತನಾಗಿದ್ದ ಎಂಬುದು ಆತನ ಜೀವನ ಚರಿತ್ರೆಯಿಂದ ತಿಳಿದು ಬರುತ್ತದೆ. ೨೦೦೬ರ ವರದಿ ಪ್ರಕಾರ, ಗೀತೆ ಪಾಶ್ಚಿಮಾತ್ಯ ರಾಷ್ಟ್ರಗಳ ವಾಣಿಜ್ಯೋದ್ಯಮಿಗಳ ಸಮುದಾಯದಲ್ಲಿ ಪ್ರಮುಖ ಪ್ರಭಾವಿ ಗ್ರಂಥವಾಗಿ ಹೊರಹೊಮ್ಮಿದೆ. ಇದು ಪ್ರಾಚೀನ ಚೈನಿ ಗ್ರಂಥವಾದ " ದಿ ಆರ್ಟ್ ಆಫ್ ವಾರ್" ಗ್ರಂಥದ ಪ್ರಭಾವವನ್ನು ಕಡಿಮೆಗೊಳಿಸಿದೆ. ವಿಶ್ವದ ಅನೇಕ ಭಾಷೆಗಳಿಗೆ ಅನುವಾದಗೊಂಡ ಗೀತೆ, ವಿದೇಶಿಯರ ಅಧ್ಯಯನದ ಗ್ರಂಥವಾಗಿಯೂ ಬಳಕೆಯಾಗುತ್ತಿದೆ.
ದೇಶಕಾಲದಲ್ಲಿ ಗತಿಸಿಹೋದ ಮಹಾತ್ಮರಿಗೆ ಪ್ರೇರಣೆಯಾದ ಗೀತೆ ನಮ್ಮ ಮಕ್ಕಳಿಗೆ ಪ್ರೇರಣೆಯಾದರೆ ತಪ್ಪೇನು?. ಮಹಾತ್ಮರ, ಸಾಧಕರ ಬದುಕಿನ ಮೇಲೆ ಪ್ರಭಾವ ಬೀರಿದ ಗೀತೆ ನಮ್ಮ ವಿದ್ಯಾರ್ಥಿಗಳ ಬದುಕಿನ ಮೇಲೆ ಪ್ರಭಾವ ಬೀರಿ, ನಮ್ಮ ಮಕ್ಕಳು ಸುಸಂಸ್ಕೃತ, ಸಚ್ಚಾರಿತ್ರ್ಯ, ಸ್ವಾಭಿಮಾನಿ ಪ್ರಜೆಗಳಾಗಿ ರೂಪುಗೊಳ್ಳಲು ಸಹಕರಿಸಲಿ. ಅವರ ಜೀವನದ ಗುರಿ ತಲುಪುವಲ್ಲಿ ಗೀತೆಯ ಬೋಧನೆ ಮಾರ್ಗದರ್ಶನವಾಗಲಿ. ನಮ್ಮ ಮಕ್ಕಳ ಸಾಧನೆಗೆ ಪ್ರೇರಣೆಯಾಗಲಿ.