ವರುಣನ ಮುನಿಸಿಗೆ ಬಲಿಯಾಗದಿರಲಿ ಚಿಣ್ಣರು
ಅಂದು ಸೋಮವಾರ. ಸಮಯ ಬೆಳಗಿನ ೮ ಗಂಟೆ. ಶನಿವಾರ ಹಾಗೂ ಭಾನುವಾರಗಳಂದು ರಜೆಯ ಸಂಭ್ರಮದಲ್ಲಿದ್ದ ಹೊಸನಗರ ತಾಲೂಕು ಹಿರೇಜೇನಿಯ ಶರಾವತಿ ಸಮಯಕ್ಕೆ ಸರಿಯಾಗಿ ತರಗತಿ ಸೇರುವ ಆತುರದಲ್ಲಿದ್ದಳು. ೪ನೇ ತರಗತಿ ವಿದ್ಯಾರ್ಥಿನಿ ಆಕೆ. ಹೊರಗಡೆ ಮುಂಗಾರು ಮಳೆಯ ಆರ್ಭಟ ಜೋರಾಗಿತ್ತು. ಬಿರುಸಿನ ಮಳೆಗೆ ಕಾಲುವೆಗಳು ತುಂಬಿ ಹರಿಯುತ್ತಿದ್ದವು. ಶಾಲೆ ತಲುಪಲು ಮನೆ ಸಮೀಪದ ಕಾಲು ಸಂಕ ದಾಟಬೇಕಿತ್ತು. ತಂಗಿ ಹಾಗೂ ತಮ್ಮನೊಂದಿಗೆ ಸಂಕ ದಾಟುವಾಗ ಕಾಲು ಜಾರಿ ಮೂವರೂ ಹಳ್ಳಕ್ಕೆ ಬಿದ್ದು ಬಿಟ್ಟರು. ಅಲ್ಲಿಯೇ ಇದ್ದ ನೆರೆಮನೆಯಾತ ಇವರ ಕೂಗಾಟ ಕೇಳಿ ಮಕ್ಕಳನ್ನು ರಕ್ಷಿಸಲು ಹೋದ. ಜೀವದ ಹಂಗು ತೊರೆದು ಕಾಲುವೆಗೆ ಇಳಿದ. ಕಷ್ಟಪಟ್ಟು ಇಬ್ಬರು ಮಕ್ಕಳನ್ನು ಉಳಿಸಿದ. ಆದರೆ, ಶರಾವತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ನೋಡ, ನೋಡುತ್ತಿದ್ದಂತೆಯೇ ನೀರಿನಲ್ಲಿ ಕೊಚ್ಚಿ ಹೋಗೇ ಬಿಟ್ಟಳು.
ಅದೇ ದಿನ, ಸರಿಸುಮಾರು ಅದೇ ಸಮಯ. ಮೂಡಿಗೆರೆ ತಾಲೂಕು ಎಸ್ಟೇಟ್ ಕುಂದೂರಿನ ಬಾಲಕಿ ಪ್ರೇಮಾ, ಶಾಲೆಗೆ ಹೊರಟಿದ್ದಳು. ಮೂಡಿಗೆರೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವಾಕೆ. ದಾರಿ ಮಧ್ಯದ ಊಳಿಗೆ ಹೊಳೆ ದಾಟುತ್ತಿದ್ದಳು. ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ಒಂದಾಗಿ ಬಿಟ್ಟಳು.
ಇವೆರಡೂ ಒಂದೇ ದಿನ, ಒಂದೇ ಸಮಯದಲ್ಲಿ ಸಂಭವಿಸಿದ ದುರ್ಘಟನೆಗಳು. ಮಳೆಯ ರುದ್ರ ನರ್ತನಕ್ಕೆ ಮುದ್ದು ಕಂದಮ್ಮಗಳು ಬಲಿಯಾದ ಸನ್ನಿವೇಶಗಳು. ಪ್ರಕೃತಿ ವಿಕೋಪದ ಕರಾಳ ಮುಖಗಳು. ಮುಂಗಾರು ಮಳೆಯ ಆರ್ಭಟ ಜೋರಾಗಿಯೇ ಇದೆ. ಹಾಗಾಗಿ, ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ಶಾಲಾ ಮಕ್ಕಳಿಗೆ ಇದು ಸಂಕಷ್ಟದ ಸಮಯ. ಬಹುತೇಕ ಹಳ್ಳಿಗಳಲ್ಲಿ ಮಕ್ಕಳು ಶಾಲೆ ತಲುಪಲು ಕಿ.ಮೀ.ಗಳಷ್ಟು ದೂರ ನಡೆಯಬೇಕು. ಸರಿಯಾದ ರಸ್ತೆಗಳು ಇರುವುದಿಲ್ಲ. ಅದರಲ್ಲೂ ಮಳೆಗಾಲದಲ್ಲಿ ರಸ್ತೆಗಳು ಕೊರಕಲು ಬೀಳುತ್ತವೆ. ಮಳೆಯಲ್ಲಿ ನಡೆದು ಹೋಗುತ್ತಿದ್ದರೆ, ರಸ್ತೆಯಲ್ಲಿ ಎಲ್ಲಿ ಹೊಂಡ, ತಗ್ಗುಗಳಿವೆ ಎನ್ನುವುದೇ ತಿಳಿಯುವುದಿಲ್ಲ.
ಹರಿವ ನೀರಿನ ಜೊತೆ ತೇಲಿ ಬರುವ ಹಾವುಗಳು, ಕ್ರಿಮಿ-ಕೀಟಗಳು ದೇಹಕ್ಕೆ ಅಪಾಯ ತಂದೊಡ್ಡಬಹುದು. ಮಳೆಯ ನೀರಿಗೆ ಅಲ್ಲಲ್ಲಿ ಹೆಪ್ಪು ಗಟ್ಟಿ ನಿಂತ ಪಾಚಿಗಳ ಮೇಲೆ ಕಾಲಿಟ್ಟಾಗ ಮಕ್ಕಳು ಕಾಲು ಜಾರಿ ಬಿದ್ದು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಇನ್ನು ಕೆಲವು ಕಡೆ ಹೊಲ-ಗದ್ದೆಗಳಲ್ಲಿ ಜವುಳು ನೆಲ, ಕೆಸರು ಗದ್ದೆಗಳ ನಡುವೆ ನಡೆದುಕೊಂಡು ಹೋಗಬೇಕು. ಕಡಿದಾದ ಹೊಲದ ಪಟ್ಟಿಯ ಮೇಲೆ ನಡೆದು ಹೋಗುವಾಗ ದೇಹದ ಸಮತೋಲನ ಕಾಯ್ದುಕೊಳ್ಳಲು ಕಸರತ್ತು ಮಾಡಬೇಕು. ಮಳೆ ಜತೆ ಜೋರಾಗಿ ಗಾಳಿ ಬಂದರಂತೂ ಮಕ್ಕಳ ಪಾಡು ಹೇಳ ತೀರದು. ದೇಹದ ಸಮತೋಲನ ಕಾಯ್ದುಕೊಂಡು ಹೋಗುವುದರ ಜತೆ ಹಿಡಿದ ಛತ್ರಿ ಹಾರಿ ಹೋಗದಂತೆ ನೋಡಿಕೊಳ್ಳಬೇಕು. ಇದರ ನಡುವೆ ಪುಸ್ತಕಗಳು ಒದ್ದೆಯಾಗದಂತೆ ರಕ್ಷಿಸಿಕೊಳ್ಳಬೇಕು.
ಬಹುತೇಕ ಕಡೆಗಳಲ್ಲಿ ಹಳ್ಳ, ಕೊಳ್ಳಗಳಿಗೆ ಸೇತುವೆಗಳು ಇರುವುದೇ ಇಲ್ಲ. ಅಲ್ಲಿರುವುದು ಸಣ್ಣ ಸಂಕಗಳು. ಅಡಕೆ, ಇಲ್ಲವೇ ಇತರ ಮರಗಳನ್ನು ಬಳಸಿ ರಚಿಸಲಾಗುವ ಈ ಸಂಕಗಳು ಯಾವ ಸಂದರ್ಭದಲ್ಲಿ ಬೇಕಾದರೂ ಜೀವಕ್ಕೆ ಸಂಚಕಾರ ತರಬಹುದು. ತುಂಬಿ ಹರಿಯುತ್ತಿರುವ ಹಳ್ಳ-ನದಿಗಳ ಮಧ್ಯೆ ನಡೆಯುವಾಗ ಕೆಳಗಿನ ಪ್ರವಾಹ ನೋಡಿ, ಸಣ್ಣ ಮಕ್ಕಳು ತಲೆ ತಿರುಗಿ ಬೀಳುವ ಸಂಭವವೂ ಇರುತ್ತದೆ.
ಜೋರಾಗಿ ಮಳೆ ಬಂದಾಗ ಈ ಕಾಲು ಸಂಕ ಕೂಡ ಕೊಚ್ಚಿ ಹೋಗುತ್ತದೆ. ಆಗ ನದಿಯ ದಡದ ಎರಡೂ ಬದಿಗಳಲ್ಲಿರುವ ಮರಕ್ಕೆ ಕಟ್ಟಿದ ಹಗ್ಗದ ಮೇಲೆ ನಡೆದುಕೊಂಡು ಹೋಗುವ ಸಾಹಸಕ್ಕೆ ಮುಂದಾಗಬೇಕಾಗುತ್ತದೆ. ಇದು ಮಕ್ಕಳ ಜೀವಕ್ಕೆ ಸಂಚಕಾರವೇ ಸರಿ. ಕುಂದಾಪುರ ತಾಲೂಕಿನ ಮಾವಿನಕಾರು ಹಾಗೂ ಬಾವಡಿ ಗ್ರಾಮದಲ್ಲಿ ಬೆದ್ರಕಳಿ ನದಿಗೆ ಹಾಕಲಾಗಿದ್ದ ಕಾಲು ಸಂಕ ತೇಲಿ ಹೋದಾಗ ಶಾಲೆಗೆ ಹೋದ ಮಕ್ಕಳು ೨೫ ದಿನಗಳಾದರೂ ಮನೆಗೆ ಬರಲಾಗಲಿಲ್ಲ. ಪರಿಚಯಸ್ಥರ, ನೆಂಟರಿಷ್ಟರ ಮನೆಯಲ್ಲಿಯೇ ಉಳಿದುಕೊಳ್ಳಬೇಕಾಯಿತು.
ಇವೆಲ್ಲದರ ನಡುವೆ ತರಗತಿಗೆ ತೆರಳುವಷ್ಟರಲ್ಲಿ ಮೈಯೆಲ್ಲಾ ಒದ್ದೆಯಾಗಿರುತ್ತದೆ. ಮೈ ನಡುಗುವ ಸ್ಥಿತಿಯಲ್ಲಿ ಪಾಠ ಕೇಳುವುದು ದುಸ್ತರದ ಮಾತೇ ಸರಿ. ಹೇಳಿ, ಕೇಳಿ ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲ ರೋಗಗಳ ಕಾಲ. ಶೀತ, ಜ್ವರ ಸಾಮಾನ್ಯ. ಇನ್ನು ಕೆಲವು ಕಡೆ ಶಾಲಾ ಕಟ್ಟಡಗಳು ಇಂದೋ, ನಾಳೆಯೋ ಬಿದ್ದು ಹೋಗುವ ದುಸ್ಥಿತಿಯಲ್ಲಿರುತ್ತವೆ. ಪಾಠ ಕೇಳುತ್ತಿರುವಾಗಲೇ ಶಾಲೆಯ ಕಟ್ಟಡ ಕುಸಿದು ಬಿದ್ದು ಮಕ್ಕಳು ಜೀವ ತೆತ್ತ ಉದಾಹರಣೆಗಳೂ ನಮ್ಮಲ್ಲಿವೆ. ಅಲ್ಲದೆ ಶಾಲಾ ಕಟ್ಟಡಗಳು ಕುಸಿದು ಬೀಳುವ ಸನ್ನಿವೇಶ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಬಹುದು. ಕಲಿಕೆ ಬಗ್ಗೆ ವ್ಯತಿರಿಕ್ತ ಪರಿಣಾಮ ಬೀರಿ, ಶಾಲೆ ಬಗ್ಗೆ ಭಯದ ವಾತಾವರಣ ಸೃಷ್ಠಿಸಬಹುದು.
ಜೋರಾಗಿ ಮಳೆ ಬೀಳುವ ಸಂದರ್ಭದಲ್ಲಿ ಶಾಲಾ ವಾಹನಗಳು ಎಚ್ಚರ ತಪ್ಪಿದರೆ ಅಪಘಾತ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಕಳೆದ ವರ್ಷ ಮಂಗಳೂರಿನಲ್ಲಿ ಶಾಲಾ ವಾಹನ ಮಗುಚಿ ಬಿದ್ದು ೨೦ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟ ಘಟನೆ ನಮ್ಮ ಮುಂದೆ ಇದೆ. ಅಲ್ಲದೆ, ಎಷ್ಟೋ ಕಡೆ ಮಕ್ಕಳನ್ನು ಶಾಲೆಗೆ, ನಂತರ ಮರಳಿ ಮನೆಗೆ ಕರೆ ತರಲು ಪೋಷಕರಿಗೆ ಸಮಯ ಇರುವುದಿಲ್ಲ. ಕೂಲಿಗೆ ಹೋಗುವ, ತೋಟ, ಹೊಲ, ಗದ್ದೆಗಳಲ್ಲಿ ಕೆಲಸಕ್ಕೆ ತೆರಳುವ ಪೋಷಕರು ಮಕ್ಕಳು ಶಾಲೆಗೆ ತೆರಳುವ ಜಾಗೃತಿ ಕುರಿತು ಕಾಳಜಿ ವಹಿಸುವುದಿಲ್ಲ. ಸಹಪಾಠಿಗಳ ಜೊತೆ ಹೋಗುವ ಮಕ್ಕಳು ಕೀಟಲೆಗೆ ಒಳಗಾಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ಸಂಭವ ಇರುತ್ತದೆ.
ಮಳೆಗಾಲದ ವೇಳೆ ಅನುಸರಿಸಬೇಕಾದ ಸುರಕ್ಷಿತ ವಿಧಾನಗಳ ಬಗ್ಗೆ ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಿ. ಪ್ರವಾಹ, ನೆರೆಗಳಿಂದ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಸೂಕ್ತ ಮಾಹಿತಿ ಕೊಡಿ. ಸಂಭಾವ್ಯ ದುರಂತಗಳ ಬಗ್ಗೆ ಎಚ್ಚರಿಕೆ ನೀಡಿ. ಇದು ಪಾಲಕರಾದ ನಿಮ್ಮ, ಹಾಗೂ ಶಿಕ್ಷಕರ ಜವಾಬ್ದಾರಿ.

ಪಾಲಕರೆ,
*  ಮಕ್ಕಳ ಜೀವ ಅಮೂಲ್ಯ. ಕಳೆದು ಹೋಗಲು ಬಿಡಬೇಡಿ
*  ಚಿಕ್ಕ ಮಕ್ಕಳನ್ನು ಶಾಲೆಯವರೆಗೆ ಬಿಟ್ಟು ಬನ್ನಿ, ನಂತರ ಕರೆತನ್ನಿ
* ಉತ್ತಮ ಗುಣಮಟ್ಟದ ಛತ್ರಿ, ರೇನ್‌ಕೋಟ್‌ಗಳನ್ನು ಮಕ್ಕಳಿಗೆ ಒದಗಿಸಿ
*  ಊರಿನ ಹಳ್ಳ, ನದಿಗಳಿಗೆ ಗುಣಮಟ್ಟದ ಸಂಕ, ಸೇತುವೆ ನಿರ್ಮಾಣವಾಗುವಂತೆ ನೋಡಿಕೊಳ್ಳಿ
* ಮಳೆಗಾಲದಲ್ಲಿ ರೋಗಗಳು ಮಕ್ಕಳನ್ನು ಕಾಡುವುದು ಸಹಜ. ಅವರ ಆರೋಗ್ಯದ ಕಡೆ ಗಮನ ಕೊಡಿ
*  ಶಾಲೆಯ ಕಟ್ಟಡಗಳನ್ನು ಸುಸ್ಥಿತಿಯಲ್ಲಿಡುವಂತೆ ಅಕಾರಿಗಳ ಮೇಲೆ ಒತ್ತಡ ಹೇರಿ. ಇಲ್ಲದಿದ್ದರೆ ಮಳೆ, ಗಾಳಿಗೆ ಕುಸಿದು ಬಿದ್ದು ಅನಾಹುತ ಸಂಭವಿಸಬಹುದು
* ಮಕ್ಕಳಿಗೆ ಶೀತ, ಜ್ವರ ಬಂದರೆ ನಿರ್ಲಕ್ಷ್ಯ ಮಾಡಬೇಡಿ. ತಕ್ಷಣವೇ ಉಪಚಾರ ನೀಡಿ.