ಅಣ್ಣಾ ಹೋರಾಟ, ಸರಕಾರದ ಪರದಾಟ     ಮೂಗಿನ ತುದಿಗೆ ತುಪ್ಪ ಬಳಿದು, ಅದರ ವಾಸನೆಯನ್ನು ಆಘ್ರಾಣಿಸುವಂತೆ  ಪ್ರೇರೇಪಿಸುವ ಸರಕಾರದ ಲೋಕಪಾಲ ವಿಧೇಯಕಕ್ಕೂ, ಸರಕಾರದ ಮಟ್ಟದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಹೋರಾಡುತ್ತಿರುವ ನಾಗರಿಕ ಸಮಿತಿ ಸದಸ್ಯರ ಜನ ಲೋಕಪಾಲ ವಿಧೇಯಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಭ್ರಷ್ಟಾಚಾರದ ಬಿಸಿಗೆ ಜನಸಾಮಾನ್ಯನಿಂದು ತತ್ತರಿಸಿದ್ದಾನೆ. ಜನರಲ್ಲಿ ಆಕ್ರೋಶ ಮಡುಗಟ್ಟಿದೆ. ಈ ಆಕ್ರೋಶವೇ ಇಂದು ಅಣ್ಣಾ ಹೋರಾಟಕ್ಕೆ ಬೆಂಬಲದ ರೂಪವಾಗಿ ಹರಿದು ಬರುತ್ತಿದೆ.
     ಇದಕ್ಕೆ ವ್ಯತಿರಿಕ್ತವಾಗಿ ಜನಪ್ರತಿನಿಧಿಗಳಿಗೆ ಭ್ರಷ್ಟಾಚಾರ ತೊಲಗುವುದು ಇಷ್ಟವಿಲ್ಲ. ಚುನಾವಣೆ ಎದುರಿಸಲು ಹಣ ಬೇಕು. ಅಧಿಕಾರದಲ್ಲಿ ಮುಂದುವರಿಯಲೂ ಹಣ ಬೇಕು. ತಮಗೆ ಬೇಕಾದ ಅಧಿಕಾರಿಗಳು ಸೂಕ್ತ ಸ್ಥಾನದಲ್ಲಿರಬೇಕಾದರೆ ಭ್ರಷ್ಟಾಚಾರಿಗಳು ಇರಬೇಕು. ಅವರ ಮೂಲಕ ತಮಗೂ ಹಣ ಸಂದಾಯವಾಗುತ್ತಿರಬೇಕು. ಹಾಗಾಗಿಯೇ, ಹಲ್ಲಿಲ್ಲದ ಲೋಕಪಾಲ ವಿಧೇಯಕ ಮಂಡನೆಗೆ ಸರಕಾರ ಮುಂದಾಗಿದೆ. ಸರಕಾರದ ವಿರುದ್ಧ ಪ್ರತಿಪಕ್ಷಗಳು, ಪ್ರತಿಪಕ್ಷಗಳ ವಿರುದ್ಧ ಅಧಿಕಾರ ನಡೆಸುತ್ತಿರುವವರು ಆಪಾದನೆ ಮಾಡುತ್ತಲೇ ಇರಬೇಕು. ಆ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿರಬೇಕು ಎಂಬುದು ಅಧಿಕಾರಸ್ಥರ ಹಂಬಲ.
     ಇಂದಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ಅಕ್ರಮ ಸಂಪತ್ತು ಗಳಿಕೆ ಹಾಗೂ ದುರ್ನಡತೆ ಆರೋಪದ ಹಿನ್ನೆಲೆಯಲ್ಲಿ ಕೋಲ್ಕೊತಾ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮಿತ್ರಾ ಸೇನ್ ವಿರುದ್ಧ ರಾಜ್ಯಸಭೆ ಮಹಾಭಿಯೋಗ ವಿಧೇಯಕ ಅಂಗೀಕರಿಸಿರುವುದು, ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ವಿರುದ್ಧ ಭ್ರಷ್ಟಾಚಾರದ ಆರೋಪ ಇರುವುದು ಈ ಅಂಶವನ್ನು ಪುಷ್ಠೀಕರಿಸುತ್ತದೆ. ಹಾಗಾಗಿ, ನ್ಯಾಯಾಧೀಶರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧವೂ ತನಿಖೆ ನಡೆಸುವ ಅಧಿಕಾರ ಲೋಕಪಾಲಗೆ ಇರಬೇಕು ಎನ್ನುವುದು ನಾಗರಿಕ ಸಮಿತಿ ಸದಸ್ಯರ ವಾದ. ಆದರೆ, ನ್ಯಾಯಾಂಗ ವ್ಯವಸ್ಥೆಯನ್ನು ಲೋಕಪಾಲ ವ್ಯಾಪ್ತಿಗೆ ತರುವುದಕ್ಕೆ ಸರಕಾರದ ಸಹಮತವಿಲ್ಲ. ಇದಕ್ಕಾಗಿಯೇ ನ್ಯಾಯಾಂಗ ಉತ್ತರದಾಯಿತ್ವ ವಿಧೇಯಕ ಮಂಡಿಸುವುದು ಸರಕಾರದ ಉದ್ದೇಶ. ಆದರೆ, ನ್ಯಾಯಾಧೀಶರ ವಿರುದ್ಧ ಇರುವ ಗಂಭೀರ ಅಪರಾಧ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ನ್ಯಾಯಾಂಗ ಉತ್ತರದಾಯಿತ್ವ ವಿಧೇಯಕಕ್ಕೆ ಇಲ್ಲ ಎಂಬುದು ಅಣ್ಣಾ ತಂಡದ ಅಳಲು.
     ಪ್ರಧಾನಿ, ಸಚಿವರು, ಸಂಸದರು ಲೋಕಪಾಲ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪ ಬಂದರೆ ತನಿಖೆಗೆ ಸರಕಾರ ಮಂಡಿಸಿರುವ ಲೋಕಪಾಲದಲ್ಲಿ ಅವಕಾಶವಿಲ್ಲ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರವಷ್ಟೇ ತನಿಖೆಗೆ ಅವಕಾಶ. ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ಯುಪಿಎ ಪರ ಮತ ಹಾಕಲು ಲಂಚ ಸ್ವೀಕರಿಸಿದ ಆರೋಪ ಕುರಿತಂತೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈಗಲಾದರೂ, ಈ ಬಗ್ಗೆ ಗಮನ ಹರಿಸದಿದ್ದರೆ, ಸಂಸದರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರಸ್ತುತ ಪ್ರಧಾನಿ ವಿರುದ್ಧ ಆರೋಪ ಕೇಳಿ ಬಂದರೆ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಸಿಬಿಐ ತನಿಖೆ ನಡೆಸುತ್ತದೆ. ಅಂತಿಮವಾಗಿ ವರದಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಸಲ್ಲಿಸುತ್ತದೆ. ಪ್ರಧಾನಿ ಕಾರ್ಯಾಲಯಕ್ಕೆ ಅಧೀನವಾಗಿ ಕೆಲಸ ನಿರ್ವಹಿಸುವ ಸಿಬಿಐ, ಪ್ರಧಾನಿ ವಿರುದ್ಧದ ತನಿಖೆಯನ್ನು ಅದೆಷ್ಟು ಸಮರ್ಥವಾಗಿ ನಿರ್ವಹಿಸಬಲ್ಲುದು ಎಂಬುದು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.
     ಹಲವು ರಾಜ್ಯಗಳಲ್ಲಿ ಲೋಕಾಯುಕ್ತ ಇಲ್ಲ. ಹಾಗಾಗಿ, ಕೇಂದ್ರ ಮಟ್ಟದಲ್ಲಿ ಸಮರ್ಥ ಲೋಕಪಾಲ ಹಾಗೂ ರಾಜ್ಯಗಳ ಮಟ್ಟದಲ್ಲಿ ಲೋಕಾಯುಕ್ತ ರಚನೆಯಾಗಬೇಕು ಎಂಬುದು ಜನ ಲೋಕಪಾಲ ವಿಧೇಯಕದ ಆಗ್ರಹ. ಲೋಕಾಯುಕ್ತ ಸಮರ್ಥವಾಗಿ ಕೆಲಸ ನಿರ್ವಹಿಸಿದರೆ, ಭ್ರಷ್ಟಾಚಾರವನ್ನು ಅದೆಷ್ಟು ಸಮರ್ಥವಾಗಿ ತಡೆಯಬಹುದು ಎಂಬುದನ್ನು ರಾಜ್ಯದಲ್ಲಿ ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಮರ್ಥವಾಗಿ ನಿರೂಪಿಸಿದ್ದಾರೆ.
     ಇವೆಲ್ಲಕ್ಕಿಂತ ಮುಖ್ಯವಾಗಿ ಸರಕಾರ ಮಂಡಿಸುತ್ತಿರುವ ವಿಧೇಯಕ ಸರಕಾರಿ ನೌಕರರ ಪರವಾಗಿದೆ. ಭ್ರಷ್ಟಾಚಾರದ ವಿರುದ್ಧ ದೂರು ನೀಡುವವರ ವಿರುದ್ಧವಾಗಿದೆ. ಇದು ನಾಗರಿಕ ಸಮಿತಿ ಸದಸ್ಯರ ಕೋಪಕ್ಕೆ ಪ್ರಮುಖ ಕಾರಣ. ಸರಕಾರದಲ್ಲಿ ಸಾರ್ವಜನಿಕರ ಕೆಲಸ ಸಕಾಲಕ್ಕೆ ಆಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಭ್ರಷ್ಟಾಚಾರ. ಲಂಚ ನೀಡಿದರೆ ಮಾತ್ರ ಸಾರ್ವಜನಿಕರ ಕೆಲಸ ಬೇಗನೆ ಆಗುತ್ತದೆ. ಲಂಚ ನೀಡದಿದ್ದರೆ ಸತಾಯಿಸಿ, ಸತಾಯಿಸಿ, ಕೆಲಸ ಮಾಡಿಕೊಡಲು ವಿಳಂಬ ಮಾಡುತ್ತಾರೆ. ಎಷ್ಟೊ ಸಂದರ್ಭಗಳಲ್ಲಿ ಲಂಚ ನೀಡದಿದ್ದರೆ ಕೆಲಸವೇ ಆಗುವುದಿಲ್ಲ. ಹಾಗಾಗಿ, ಸಾರ್ವಜನಿಕರ ಕೆಲಸ ಮಾಡಿಕೊಡಲು ವಿಫಲನಾದ ಅಧಿಕಾರಿಗೆ ದಂಡ ವಿಧಿಸಲು ಅವಕಾಶ ಮಾಡಿಕೊಡುವುದು ಜನಲೋಕಪಾಲ ವಿಧೇಯಕದ ಧ್ಯೇಯ. ಅಲ್ಲದೆ, ಸರಕಾರಿ ಅಧಿಕಾರಿಯ ವಿರುದ್ಧ ದೂರು ಸಲ್ಲಿಸುವ ಜನಸಾಮಾನ್ಯನಿಗೆ, ಲಂಚ ನೀಡಿದ್ದಕ್ಕೆ ಸಾಕ್ಷಿಯಾದವರಿಗೆ ಹಾಗೂ ಭ್ರಷ್ಟಾಚಾರಕ್ಕೆ ಬಲಿಪಶುಗಳಾದವರಿಗೆ ರಕ್ಷಣೆ ಒದಗಿಸಬೇಕು ಎಂಬುದು ನಾಗರಿಕ ಸಮಿತಿ ಸದಸ್ಯರ ಬೇಡಿಕೆ.
     ವಿಪರ್‍ಯಾಸದ ಸಂಗತಿಯೆಂದರೆ, ಒಂದು ವೇಳೆ ಅಧಿಕಾರಿಯ ವಿರುದ್ಧದ ಆರೋಪ ಸಾಬೀತಾಗದಿದ್ದರೆ, ಭ್ರಷ್ಟಾಚಾರದ ದೂರು ನೀಡಿದಾತ ಕನಿಷ್ಠ ೨ ವರ್ಷಗಳ ಸೆರೆಮನೆವಾಸ ಅನುಭವಿಸಬೇಕಾಗುತ್ತದೆ. ಅದೇ ಆರೋಪ ಸಾಬೀತಾದರೆ, ಆರೋಪಿಗೆ ಕೇವಲ ೬ ತಿಂಗಳ ಸಜೆ. ಜತೆಗೆ ತನ್ನ ವಿರುದ್ಧ ಲಂಚದ ಆರೋಪ ಹೊರಿಸಿದ ವ್ಯಕ್ತಿಯ ವಿರುದ್ಧ ಆತ ವಿಶೇಷ ನ್ಯಾಯಾಲಯದಲ್ಲಿ ಪ್ರತಿ ದೂರು ಸಲ್ಲಿಸಬಹುದು. ಆಪಾದಿತ ಅಧಿಕಾರಿಯ ಪರ ವಕಾಲತ್ತು ವಹಿಸುವ ವಕೀಲನ ವೆಚ್ಚವನ್ನು ಸರಕಾರವೇ ಭರಿಸುತ್ತದೆ. ಅಲ್ಲದೆ, ಅಧಿಕಾರಿ ಮೂರು ಪ್ರತ್ಯೇಕ ವಿಚಾರಣೆ ಎದುರಿಸುತ್ತಾನೆ. ಈ ಮೂರರಲ್ಲಿ ಒಂದರ ವಿಚಾರಣೆ ವೇಳೆ ಆರೋಪ ಸಾಬೀತಾಗದಿದ್ದರೂ ಆತ ಬಚಾವ್. ಹೇಗಿದೆ ನೋಡಿ, ಸರಕಾರ ಮಂಡಿಸುತ್ತಿರುವ ಲೋಕಪಾಲ ವಿಧೇಯಕ !.
ಇಷ್ಟಾಗಿಯೂ ಎಲ್ಲಾ ಸರಕಾರಿ ನೌಕರರೂ ಲೋಕಪಾಲ ವ್ಯಾಪ್ತಿಗೆ ಬರುವುದಿಲ್ಲ. ೧.೨ ಕೋಟಿ ಸರಕಾರಿ ನೌಕರರ ಪೈಕಿ ಲೋಕಪಾಲ ವ್ಯಾಪ್ತಿಗೆ ಬರುವವರು ಕೇವಲ ೬೫,೦೦೦ ನೌಕರರು.  ಗ್ರೂಪ್ "ಎ' ಕೆಳಗಿನ ನೌಕರರನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಎಲ್ಲಾ ನೌಕರರನ್ನೂ ಲೋಕಪಾಲ ವ್ಯಾಪ್ತಿಗೆ ಸೇರಿಸಿದರೆ, ಹೆಚ್ಚಿನ ಹೊರೆ ಬೀಳುತ್ತದೆ. ಕಾರ್ಯ ನಿರ್ವಹಣೆ ಅಸಾಧ್ಯವಾಗಲಿದೆ ಎಂಬುದು ಸರಕಾರ ನೀಡುವ ಕಾರಣ.
     ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಟ್ಟಿರುವ ಹಜಾರೆ ಹಾಗೂ ಮತ್ತವರ ತಂಡ ಮತ್ತು ಭ್ರಷ್ಟಾಚಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಸರಕಾರದ ನಡುವೆ ಕದನ ಆರಂಭವಾಗಿದೆ. ಇಂದು ಅಣ್ಣಾ ಹೋರಾಟದಿಂದ ಭ್ರಷ್ಟಾಚಾರ ವಿರೋಧಿ ಕೂಗಿಗೆ ಬೆಲೆ ಬಂದಿದೆ. ಸೂಕ್ತ ವೇದಿಕೆಯೂ ಸಿದ್ಧವಾಗಿದೆ. ಬನ್ನಿ ಹಜಾರೆ ಅವರ ಹೋರಾಟವನ್ನು ನಾವೂ ಬೆಂಬಲಿಸೋಣ. ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕೈ ಜೋಡಿಸೋಣ.