ವಿದ್ಯೆ ನೀಡುವ ಗುರುವೆ, ನಿನಗಿದು ತರವೆ?

     ಬೆಳಗ್ಗೆ ಬೇಗನೆ ಎದ್ದು, ಗಡಿಬಿಡಿಯಲ್ಲಿ ತಿಂಡಿ ತಿಂದು, ದೂರದಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಮಕ್ಕಳು ತರಗತಿಯಲ್ಲಿ ಕುಳಿತು ಗುರುಗಳ ಬರುವಿಗೆ ಕಾದಿದ್ದರು. ಬೆಲ್ ಹೊಡೆದು ಬಹಳ ಹೊತ್ತಾಗಿತ್ತು. ಇನ್ನೇನು ಮೇಷ್ಟ್ರು ಬರ್‍ತಾರೆ, ಪಾಠ ಮಾಡ್ತಾರೆ ಎಂದು ಮಕ್ಕಳು ಕಾಯುತ್ತಿದ್ದರೆ ಅವರು ಬರಲೇ ಇಲ್ಲ. ಸ್ವಲ್ಪ ಹೊತ್ತು ಬಿಟ್ಟು ಸ್ಟಾಪ್ ರೂಮಿಗೆ ತೆರಳಿ ನೋಡಿದರೆ ಮೇಷ್ಟ್ರು ಗೊರಕೆ ಹೊಡೆಯುತ್ತಿದ್ದರು. "ಮೇಷ್ಟ್ರೇ.. ಎದ್ದೇಳಿ ಪಾಠಮಾಡಿ" ಎಂದು ಮಕ್ಕಳು ಗೋಗರೆದರೆ ಪುಣ್ಯಾತ್ಮ ಏಳಲೇ ಇಲ್ಲ. ಹತ್ತಿರ ಹೋದರೆ ಮದ್ಯದ ವಾಸನೆ, ಮೂಗು ಮುಚ್ಚಿಸುವ ಘಮಲು. ವಿಷಯ ತಿಳಿದು ಮಾಧ್ಯಮದವರೂ ಬಂದರು. ಫೋಟೊ ಕ್ಲಿಕ್ಕಿಸಿದರು. ಆದರೆ, ಇದ್ಯಾವುದರ ಪರಿವೆಯೇ ಇಲ್ಲದ ಶಾಲೆಯ ಮುಖ್ಯಾಧ್ಯಾಪಕರು ಬೆಳ್ಳಂ ಬೆಳಗೆ ನಿದ್ರಾಲೋಕದಲ್ಲಿ ತೇಲುತ್ತಿದ್ದರು.
     ಹಾಸನ ತಾಲೂಕಿನ ಉಗನೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯಿದು.
ಹರಿಹರ ತಾಲೂಕು ರಾಮತೀರ್ಥ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು. ಇದು ಕೆಲವು ತಿಂಗಳ ಹಿಂದೆ ನಡೆದ ಘಟನೆ. ಇವು ಕೆಲವು ಉದಾಹರಣೆಗಳು ಮಾತ್ರ. ಇಂತಹ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.
     ಈ ವರ್ಷದ ಆರಂಭದ ದಿನವೇ ರಾಜ್ಯದಲ್ಲಿ ನಾಲ್ವರು ಶಿಕ್ಷಕ/ಶಿಕ್ಷಕಿಯರು ಅಮಾನತುಗೊಂಡಿದ್ದಾರೆ. ಶಾಲೆಯ ಪುನರಾರಂಭ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಸರಕಾರದ ಆದೇಶ ಕಡೆಗಣಿಸಿ, ನಿರ್ಲಕ್ಷ್ಯ ತೋರಿದ ಆಪಾದನೆ ಮೇಲೆ ಇವರೆಲ್ಲಾ ಅಮಾನತುಗೊಂಡವರು.
     ಶಿಸ್ತನ್ನು ಕಲಿಸಬೇಕಾದ ಗುರುವೇ ಅಶಿಸ್ತಿನಿಂದ ವರ್ತಿಸಿದರೆ ಬದುಕಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕಾದ ಮಕ್ಕಳ ಗತಿಯೇನು. "ಸುರಾಪಾನ, ಬದುಕಿನ ಅಂತ್ಯಕ್ಕೆ ಸೋಪಾನ" ಎಂದು ಬೋದಿಸುವ ಗುರುವೇ ಮದ್ಯ ಸೇವಿಸಿ ಶಾಲೆಗೆ ಬಂದರೆ, "ಧೂಮಪಾನ ಆರೋಗ್ಯಕ್ಕೆ ಹಾನಿಕರ" ಎಂದು ಉಪದೇಶಿಸುವ ಶಿಕ್ಷಕನೇ ಮಕ್ಕಳೆದುರು ಧೂಮಪಾನ ಮಾಡಿದರೆ, ಶಿಸ್ತನ್ನು ಕಲಿಸಬೇಕಾದ ಶಿಕ್ಷಕ/ಶಿಕ್ಷಕಿಯೇ ಅಶಿಸ್ತಿನಿಂದ ವರ್ತಿಸಿದರೆ, " ಹೆಣ್ಣನ್ನು ಗೌರವಿಸಿ, ದೇವತೆಯೆಂದು ಪೂಜಿಸಿ" ಎಂದು ತಿಳಿ ಹೇಳುವ ಉಪಾಧ್ಯಾಯನೇ ಶಾಲೆಗೆ ಬರುವ ಹೆಣ್ಣು ಮಕ್ಕಳ ಜತೆ ಅಸಭ್ಯವಾಗಿ ವರ್ತಿಸಿದರೆ ಏನನ್ನೋಣ.
     ಮಕ್ಕಳ ಹತ್ತಿರ ಬೀಡಿ, ಸಿಗರೇಟು ತರಿಸಿಕೊಂಡು ಅವರ ಮುಂದೆಯೇ ಹೊಗೆಯುಗುಳುವ ಕೆಲವು ಶಿಕ್ಷಕರು ನಮ್ಮಲ್ಲಿದ್ದಾರೆ. ತರಗತಿಯಲ್ಲಿ ಕುಳಿತೇ ನಿದ್ದೆ ಹೋಗುವ ಪ್ರವೃತ್ತಿ ನಮ್ಮಲ್ಲಿನ ಕೆಲವು ಶಿಕ್ಷಕರಲ್ಲಿದೆ. ಪಾಠ ಮಾಡುವಾಗ ಗುಟ್ಕಾ ಜಗಿಯುವ, ತಂಬಾಕು ಅಗಿಯುವ, ಮೂಗಿಗೆ ನಶ್ಯಾ ಏರಿಸುವ ಪರಿಪಾಠ ಕೆಲವು ಶಿಕ್ಷಕರಿಗಿದೆ. ಹಾಗೆಯೇ ತಮಗೆ ಗೊತ್ತಿಲ್ಲದ ವಿಷಯವನ್ನು ಗೊತ್ತಿಲ್ಲ ಎಂದು ಹೇಳಲು ಸಂಕೋಚಪಟ್ಟುಕೊಂಡು ಸುಳ್ಳು ಹೇಳುವ ಮನೋಭಾವವೂ ಕೆಲವು ಶಿಕ್ಷಕರಲ್ಲಿದೆ. ಗುರುಗಳು ಸುಳ್ಳು ಹೇಳುತ್ತಿದ್ದಾರೆ ಎಂಬುದು ಮಕ್ಕಳಿಗೆ ಗೊತ್ತಾದರೆ ಅವರಿಗೆ ಗುರುಗಳ ಬಗ್ಗೆ ಇರುವ ಗೌರವ ಕಡಿಮೆಯಾಗದೇ ಇರದು.
ಹಳ್ಳಿಗಳ ಕಡೆ ಎಷ್ಟೋ ಶಾಲೆಗಳಲ್ಲಿ ಶಿಕ್ಷಕರು ಬರುವುದೇ ತಡವಾಗಿ. ಬಂದರೂ ಪಾಠ ಮಾಡುವುದು ಕಡಿಮೆಯೇ. ಇನ್ನು ಎಷ್ಟೋ ಶಾಲೆಗಳಲ್ಲಿ ಮಕ್ಕಳ ಹತ್ತಿರ ತಮ್ಮ ಸ್ವಂತ ಕೆಲಸಗಳನ್ನು ಮಾಡಿಸಿಕೊಳ್ಳುವ ಪದ್ಧತಿಯೂ ಕೆಲವು ಶಿಕ್ಷಕರಲ್ಲಿದೆ. ವಾರಕ್ಕೆ ಆರು ದಿನ ಶಾಲೆಗೆ ಬಂದು ಪಾಠ ಮಾಡಬೇಕಾದ ಶಿಕ್ಷಕರು ಎರಡು-ಮೂರು ದಿನಗಳಷ್ಟೇ ಪಾಠ ಮಾಡುವ ಉದಾಹರಣೆಗಳೂ ಸಾಕಷ್ಟಿವೆ. ಆ ಪಾಠವೂ ಕೆಲವೇ ಗಂಟೆಗಳಿಗೆ ಸೀಮಿತ.
     ಕೆಲವು ಶಿಕ್ಷಕರು ಮಕ್ಕಳಿಗೆ ಹೊಡೆಯುವುದೇ ಪಾಠ ಕಲಿಸುವ ವಿಧಾನ ಎಂದು ತಿಳಿಯುತ್ತಾರೆ. ಹಾಗಾಗಿ, ತಿಳಿ ಹೇಳಿ, ಬೋಧನೆ ಮೂಲಕ ಜ್ಞಾನ ಎರೆಯುವುದರ ಬದಲು, ಛಡಿಯೇಟು ನೀಡಿ ಮಕ್ಕಳಲ್ಲಿ ಒಂದು ರೀತಿಯ ಭಯದ ಮನಸ್ಥಿತಿ ನಿರ್ಮಿಸುತ್ತಾರೆ. ಆ ಮೂಲಕ ಮಕ್ಕಳಲ್ಲಿ ಪಾಠದ ಬಗ್ಗೆ ಆಸಕ್ತಿ ಕೆರಳಿಸುವ ಬದಲು, ನಿರುತ್ಸಾಹದ ಮನೋಭಾವ ಮೂಡಿಸುತ್ತಾರೆ. ಮಕ್ಕಳು ಪ್ರಶ್ನೆ ಕೇಳಿದರೆ, ಹೊಸತನ್ನು ಕಲಿಯಲು ಉತ್ಸಾಹ ತೋರಿದರೆ ಪ್ರೋತ್ಸಾಹಿಸುವ ಬದಲು, ಗದರಿಸಿ ಸುಮ್ಮನಿರಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ.
     ಪಾಠ ಮಾಡುವ ಶಿಕ್ಷಕರನ್ನು ಮಕ್ಕಳು ಸದಾ ಗಮನಿಸುತ್ತಿರುತ್ತಾರೆ. ಸೂಕ್ಷ್ಮವಾಗಿ ಅವಲೋಕಿಸುತ್ತಿರುತ್ತಾರೆ. ನಡವಳಿಕೆಗಳನ್ನು ಅನುಸರಿಸಲು ಯತ್ನಿಸುತ್ತಾರೆ. ಅವರ ಬದುಕಿನ ರೀತಿ-ನೀತಿಗಳನ್ನು ಮೈಗೂಡಿಸಿಕೊಳ್ಳಲು ತವಕಿಸುತ್ತಾರೆ. ಅವರ ಹಾವ-ಭಾವಗಳ ಬಗ್ಗೆ ಉತ್ಸುಕರಾಗಿರುತ್ತಾರೆ.
     ಮಕ್ಕಳನ್ನು ತಿದ್ದಿ, ತೀಡಿ, ಬುದ್ಧಿ ಹೇಳಿ, ಪಾಠ ಮಾಡುವ ಶಿಕ್ಷಕ/ಶಿಕ್ಷಕಿಯರನ್ನು ಮಕ್ಕಳು ದೇವರೆಂದು ಪೂಜಿಸುತ್ತಾರೆ. ತಮ್ಮ ಮಕ್ಕಳಿಗೆ ಜ್ಞಾನ ಧಾರೆ ಏರೆಯುವ ಶಿಕ್ಷಕ ವೃಂದದ ಮೇಲೆ ಪಾಲಕರಿಗೆ ವಿಶೇಷ ಗೌರವವಿರುತ್ತದೆ. ಆದರೆ, ಕೆಲವೇ ಕೆಲವು ದುರ್ನಡತೆಯ ಶಿಕ್ಷಕ/ಶಿಕ್ಷಕರಿಂದಾಗಿ ಇಡೀ ಶಿಕ್ಷಕ ಸಮುದಾಯದ ಮೇಲೆಯೇ ಕೆಟ್ಟ ಹೆಸರು ಬರುತ್ತದೆ. ಎಲ್ಲೋ, ಏನೋ, ಎಂದೋ ಮಾಡುವ ತಪ್ಪಿಗೆ ಜೀವನಪೂರ್ತಿ ನಡೆಸಿಕೊಂಡು ಬಂದ ಆದರ್ಶ ಜೀವನ ಹಾಳಾಗಿ ಬಿಡುತ್ತದೆ. ಹಾಗಾಗಿ ಶಿಕ್ಷಕ/ಶಿಕ್ಷಕಿಯರು ಸದಾ ಎಚ್ಚರದಿಂದ ಇರಬೇಕಾದುದು ಅನಿವಾರ್ಯ. ವೃತ್ತಿಯ ಅಗತ್ಯ ಕೂಡ.