ಬೆಂಗಳೂರಿಗರಿಗೆ ಸೂರು, ಬಿಡಿಎ ಕಾರ್ಯ ಬಲು ಜೋರು
ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ತಮ್ಮದೇ ಆದ ಸೂರಿಗಾಗಿ ಎದುರು ನೋಡುತ್ತಿದ್ದಾರೆ. ಸ್ವಂತ ನೆಲದಲ್ಲಿ ಮನೆ ಕಟ್ಟಿ ನೆಮ್ಮದಿಯಿಂದ ಬದುಕುವ ಕನಸು ಕಾಣುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂತನ ಲೇ ಔಟ್‌ಗಳ ನಿರ್ಮಾಣಕ್ಕೆ ಮುಂದಾಗಿದೆ. ಉದ್ಯಾನ ನಗರಿ ಬೆಂಗಳೂರಿನಲ್ಲಿ ಸುಮಾರು ೨.೫ ಲಕ್ಷಕ್ಕೂ ಹೆಚ್ಚು ಮಂದಿಗೆ ಬಿಡಿಎ ಸೈಟುಗಳಿಲ್ಲ ಎಂಬುದು ಬಿಡಿಎಯ ಒಂದು ಅಂದಾಜು.
ನಗರವಾಸಿಗಳಿಗೆ ಸೂರು ಒದಗಿಸಲು ಯೋಜಿಸಿರುವ ಬಿಡಿಎ ಐದು ನೂತನ ಲೇ ಔಟ್‌ಗಳ ಅಭಿವೃದ್ಧಿಗೆ ಮುಂದಾಗಿದೆ. ಡಾ. ಕೆ. ಶಿವರಾಮ ಕಾರಂತ ಲೇಔಟ್, ನಾಡಪ್ರಭು ಕೆಂಪೆಗೌಡ ಲೇ ಔಟ್, ಡಿ. ದೇವರಾಜ ಅರಸು ಲೇ ಟ್, ಕ್ಯಾಸಂಬಹಳ್ಳಿ ಚಂಗಲರಾಯ ರೆಡ್ಡಿ ಲೇ ಔಟ್ ಹಾಗೂ ಎಸ್. ನಿಜಲಿಂಗಪ್ಪ ಲೇ ಔಟ್‌ಗಳೇ ಈ ನೂತನ ಲೇ ಔಟ್‌ಗಳು. ಈ ಸಂಬಂಧ ಕಳೆದ ವರ್ಷವೇ ಬಿಡಿಎ ಯೋಜನೆ ರೂಪುಗೊಂಡಿತ್ತು. ಆದರೆ, ಹಲವಾರು ಕಾರಣಗಳಿಗಾಗಿ ಈ ನೂತನ ಲೇ ಔಟ್‌ಗಳ ಅಭಿವೃದ್ಧಿ ವಿಳಂಬವಾಗುತ್ತಲೇ ಬಂತು. ಈಗ ಮತ್ತೆ ಇವುಗಳಿಗೆ ಚಾಲನೆ ನೀಡಲಾಗುತ್ತಿದೆ. ಇಷ್ಟಾಗಿಯೂ ನೂತನ ಲೇ ಔಟ್‌ಗಳ ನಿರ್ಮಾಣ ಅಗತ್ಯ ಭೂಮಿ ಹಾಗೂ ನೀರಿನ ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಇವೆಲ್ಲವೂ ಪರಿಷ್ಕೃತ "ಬಿಡಿಎ-ಮಾಸ್ಟರ್ ಪ್ಲ್ಯಾನ್ -೨೦೧೫"ರ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವ ಲೇ ಔಟ್‌ಗಳು. ಸಿಡಿಪಿ ಮಾರ್ಗಸೂಚಿಯನ್ವಯ ಈ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು.
ಅವುಗಳ ಪೈಕಿ ನಾಡಪ್ರಭು ಕೆಂಪೇಗೌಡ ಲೇ ಔಟ್ ಅಭಿವೃದ್ಧಿಗೆ ಈಗಾಗಲೇ ಕಾರ್ಯಯೋಜನೆ ರೂಪುಗೊಂಡಿದೆ. ಆದರೆ, ಇದಿನ್ನೂ ಆರಂಭಿಕ ಹಂತದಲ್ಲಿದ್ದು, ನಗರದ ಮಂದಿ ಇಲ್ಲಿ ಸೈಟು ಪಡೆಯಲು ಇನ್ನೊಂದು ವರ್ಷ ಕಾಯಲೇ ಬೇಕು. ನೂತನ ಲೇ ಔಟ್‌ಗಳ ಅಭಿವೃದ್ಧಿಗೆ ಮುಂದಾದ ಬಿಡಿಎ, ಕೆಂಪೇಗೌಡ ಲೇ ಔಟ್ ಹಾಗೂ ಡಾ. ಶಿವರಾಮ ಕಾರಂತ ಲೆ ಔಟ್‌ಗಳ ಅನುಮತಿಗಾಗಿ ಪ್ರಸ್ತಾವ ಕಳಿಸಿತ್ತು. ಆದರೆ, ಅನುಮತಿ ದೊರಕಿದುದು ಕೆಂಪೇಗೌಡ ಲೇ ಔಟ್‌ಗೆ ಮಾತ್ರ. ಹಾಗಾಗಿ ಈ ಲೇ ಔಟ್‌ನ ಅಭಿವೃದ್ಧಿಗೆ ಬಿಡಿಎ ಮುಂದಾಗಿದೆ. ಕೆಂಪೇಗೌಡ ಲೇ ಔಟ್ ಅಭಿವೃದ್ಧಿಪಡಿಸಿ, ಫಲಾನುಭವಿಗಳಿಗೆ ವಿತರಿಸಲು ಬಿಡಿಎಗೆ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಸರ್ವೆ ನಂಬರುಗಳನ್ನು ಇನ್ನೂ ಗುರುತಿಸಬೇಕಾಗಿದೆ. ನಂತರ ಭೂ ಮಾಲೀಕರ ಜತೆ ಅದು ಒಪ್ಪಂದಕ್ಕೆ ಸಹಿ ಹಾಕಬೇಕು. ಅದಾದ ನಂತರ ಲೇ ಔಟ್ ಅಭಿವೃದ್ಧಿಪಡಿಸುವ ಸಂಬಂಧ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಒಪ್ಪಂದವೇರ್ಪಡಬೇಕು. ಭೂ ಸ್ವಾಧೀನ, ನೋಟಿಫಿಕೇಷನ್, ಟೆಂಡರ್ ಕರೆಯುವುದು ನಂತರದ ಪ್ರಕ್ರಿಯೆಗಳು ಎನ್ನುತ್ತಾರೆ ಅಧಿಕಾರಿಗಳು.
ಕೆಂಪೇಗೌಡ ಲೇ ಔಟ್ ಎಲ್ಲಿ?
ಬೆಂಗಳೂರು ಪಶ್ಚಿಮಕ್ಕೆ ಹೊಂದಿಕೊಂಡಂತೆ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಗಳ ನಡುವಿನ ೧೨ ಗ್ರಾಮಗಳ ವ್ಯಾಪ್ತಿಯಲ್ಲಿ, ೪,೮೧೪.೧೫ ಎಕ್ರೆ ಪ್ರದೇಶವ್ಯಾಪ್ತಿಯಲ್ಲಿ ಕೆಂಪೇಗೌಡ ಲೇ ಔಟ್ ತಲೆ ಎತ್ತಲಿದೆ. ಈ ಲೇ ಔಟ್ ಅಭಿವೃದ್ಧಿಗಾಗಿ ಬಿಡಿಎ ವ್ಯಯಿಸುತ್ತಿರುವ ವೆಚ್ಚ ಸರಿ ಸುಮಾರು ೨,೬೩೯ ಕೋಟಿ ರೂ.ಗಳು. ಲೇ ಔಟ್ ನಿರ್ಮಾಣದ ನಂತರ ಸರಿ ಸುಮಾರು ೬೦, ೮೭೯ ಸೈಟುಗಳು ನಾಗರಿಕರಿಗೆ ಲಭ್ಯವಾಗಲಿವೆ. ೨೦*೩೦, ೩೦*೪೦ ಹಾಗೂ ೫೦*೮೦ ಚದರಡಿ ಅಳತೆಯ ಪರಿಸರ ಪ್ರೇಮಿ ಸೈಟುಗಳಿವು. ಲೇ ಔಟ್ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸಲು ಎರಡು ಪೈಪ್‌ಲೈನ್ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ "ದಿಲ್ಲಿ ಮಾಸ್ಟರ್ ಪ್ಲ್ಯಾನ್" ಈಗಾಗಲೇ ಸಿದ್ಧವಾಗಿದೆ. ಸಿಡಿಪಿ ನಿಯಮಾನುಸಾರ ಸೈಟುಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
ಈ ನೂತನ ಲೇ ಔಟ್‌ಗಳ ನಿರ್ಮಾಣದ ಜತೆಗೆ ಸುಮಾರು ೧೦೦ ಎಕ್ರೆ ಪ್ರದೇಶ ವ್ಯಾಪ್ತಿಯಲ್ಲಿ ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ಯೋಜನೆಯೂ ಬಿಡಿಎ ಮುಂದಿದೆ. ಈ ಯೋಜನೆಯಡಿ ಪ್ರತಿ ಲೇ ಔಟ್‌ನಲ್ಲಿ ೧೫,೦೦೦ ಗುಂಪು ಮನೆಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟಾರೆ ಮೂರು ವರ್ಷಗಳ ಅವಧಿಯಲ್ಲಿ ೬೫,೦೦೦ ಗುಂಪು ಮನೆಗಳನ್ನು ನಿರ್ಮಿಸುವುದು ಬಿಡಿಎಯ ಗುರಿ. ಇವು ಸಮಾಜದ ಎಲ್ಲಾ ವರ್ಗದ ಜನರಿಗೆ ಲಭ್ಯವಾಗುವ ವಸತಿ ನಿವೇಶನಗಳು. ಈ ಯೋಜನೆಯಡಿ ಕೆಂಗೇರಿ ಹಾಗೂ ಯಶವಂತಪುರ ಹೋಬಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೊಮ್ಮಘಟ್ಟ, ಕೃಷ್ಣಸಾಗರ, ಭೀಮನಕುಪ್ಪೆ, ರಾಮಸಾಗರ, ಸೂಲಿಕೆರೆ, ಕೆಂಚನಪುರ, ರಾಮಸಂಧ್ರ, ಛಲ್ಲಘಟ್ಟ, ಸ್ನೇಹಹಳ್ಳಿ, ಕನ್ನಹಳ್ಳಿ, ಕೋಡಿಗೆಹಳ್ಳಿ ಹಾಗೂ ಮಂಗನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಕೆಂಪೇಗೌಡ ಲೇ ಔಟ್: ಮಾಗಡಿ ಹಾಗೂ ಮೈಸೂರು ರಸ್ತೆಗಳಮದ್ಯೆ, ಕೆಂಗೇರಿ ಹಾಗೂ ಯಶವಂತಪುರ ಹೋಬಳಿ ಪ್ರದೇಶ ವ್ಯಾಪ್ತಿಯ ೧೨ ಗ್ರಾಮಗಳ ೪,೮೧೪ ಎಕ್ರೆ ೧೫ ಗುಂಟೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ. ಅಂದಾಜು ನಿರ್ಮಾಣ ವೆಚ್ಚ : ೨,೬೩೯ ಕೋಟಿ ರೂ.ಗಳು. ವಿವಿಧ ಅಳತೆಯ ೬೦,೮೭೯ಸೈಟುಗಳು ವಾಸಕ್ಕೆ ಲಭ್ಯ.
ಡಾ. ಶಿವರಾಮ ಕಾರಂತ ಲೇ ಔಟ್: ದೊಡ್ಡಬಳ್ಳಾಪುರ ಹಾಗೂ ಹೆಸರುಘಟ್ಟ ರಸ್ತೆಗಳ ಮಧ್ಯೆ, ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಉತ್ತರ ತಾಲೂಕಿನ ಹೆಸರುಘಟ್ಟ, ಯಲಹಂಕ, ಯಶವಂತಪುರ ಹೋಬಳಿ ಪ್ರದೇಶ ವ್ಯಾಪ್ತಿಯ ೧೭ ಗ್ರಾಮಗಳ ೩,೫೪೬ ಎಕ್ರೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ. ವಿವಿಧ ಅಳತೆಯ ೧೮,೯೭೫ ಸೈಟುಗಳು ವಾಸಕ್ಕೆ ಲಭ್ಯ. ಅಂದಾಜು ನಿರ್ಮಾಣ ವೆಚ್ಚ : ೧,೮೪೭ ಕೋಟಿ ರೂ.ಗಳು.
ಕೆ.ಸಿ. ರೆಡ್ಡಿ, ಎಸ್. ನಿಜಲಿಂಗಪ್ಪ  ಹಾಗೂ ಡಿ. ದೇವರಾಜ ಅರಸು ಲೇ ಔಟ್‌ಗಳ ನಿರ್ಮಾಣಕ್ಕೆ ೨೦೦೯ರ ಫೆಬ್ರವರಿಯಲ್ಲಿ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ಪೂರ್ವ ತಾಲೂಕಿನ ವರ್ತೂರು ಹಾಗೂ ಗುಂಜೂರು ನಡುವೆ ಈ ಲೇ ಔಟ್‌ಗಳು ಅಸ್ತಿತ್ವಕ್ಕೆ ಬರಲಿವೆ.
ಡಿ. ದೇವರಾಜ್ ಅರಸು ಲೇ ಔಟ್: ವಿಮಾನ ನಿಲ್ದಾಣ ರಸ್ತೆ ಹಾಗೂ ವರ್ತೂರು ಗ್ರಾಮದ ನಡುವಿನ ೧೦ ಗ್ರಾಮಗಳ ೧,೯೭೬ ಎಕ್ರೆ ೧೦ ಗುಂಟೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ. ಅಂದಾಜು ನಿರ್ಮಾಣ ವೆಚ್ಚ : ೧,೧೦೮ ಕೋಟಿ ರೂ.ಗಳು. ವಿವಿಧ ಅಳತೆಯ ೨೪, ೯೦೪ ಸೈಟುಗಳು ವಾಸಕ್ಕೆ ಲಭ್ಯ.
ನಿಜಲಿಂಗಪ್ಪ ಲೇ ಔಟ್: ವರ್ತೂರು ಗ್ರಾಮ ಹಾಗೂ ಸರ್ಜಾಪುರ ರಸ್ತೆಗಳ ಮಧ್ಯೆ ಹರಡಿರುವ ೮ ಗ್ರಾಮಗಳ ೨,೮೦೬ ಎಕ್ರೆ ೯ ಗುಂಟೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ. ಅಂದಾಜು ನಿರ್ಮಾಣ ವೆಚ್ಚ : ೧,೫೫೦ ಕೋಟಿ ರೂ.ಗಳು. ವಿವಿಧ ಅಳತೆಯ ೩೫,೪೫೧ ಸೈಟುಗಳು ವಾಸಕ್ಕೆ ಲಭ್ಯ.
ಕೆ.ಸಿ. ರೆಡ್ಡಿ ಲೇ ಔಟ್: ಸರ್ಜಾಪುರ ರಸ್ತೆ ಮತ್ತು ಬೆಂಗಳೂರು ದಕ್ಷಿಣ ಪ್ರದೇಶಗಳ ನಡುವಿನ ೨,೧೩೪ ಎಕ್ರೆ ಪ್ರದೇಶ ವ್ಯಾಪ್ತಿಯಲ್ಲಿ ಲೇ ಔಟ್ ತಲೆ ಎತ್ತಲಿದೆ.

* ಐದು ಲೇ ಔಟ್‌ಗಳಿಂದ ಒಟ್ಟು ೧.೭೬ ಲಕ್ಷ ಸೈಟುಗಳು ನಾಗರಿಕರಿಗೆ ಲಭ್ಯವಾಗಲಿವೆ.

( ಆಗಸ್ಟ್ ೨೭, ೨೦೧೧ರ್ "ವಿಜಯ ಕರ್ನಾಟಕದ- ವಿ.ಕೆ. ಪ್ರಾಪಟ್ರಿ" ಯಲ್ಲಿ ಪ್ರಕಟವಾದ ಲೇಖನ.)