ಕಾನೂನು ಸೇವೆ ಹೊರಗುತ್ತಿಗೆ, ಬೆಳೆಯುತ್ತಿದೆ ಹೆಚ್ಚಿಗೆ


"ಹೊರಗುತ್ತಿಗೆ", ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕೇಳಿ ಬರುತ್ತಿರುವ ಪದ. ಅದರಲ್ಲೂ ಅಮೆರಿಕ ಸಾಫ್ಟ್‌ವೇರ್ ಅಭಿವೃದ್ಧಿ ಕೆಲಸವನ್ನು ಭಾರತಕ್ಕೆ ಹೊರಗುತ್ತಿಗೆ ನೀಡಲು ಆರಂಭಿಸಿದ ಮೇಲೆ ಈ ಪದಕ್ಕಿರುವ ಆರ್ಥಿಕ ಮಹತ್ವ ಇನ್ನೂ ಹೆಚ್ಚಿದೆ. ಅಮೆರಿಕದ ಕಂಪನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಲು ಆರಂಭಿಸುತ್ತಿದ್ದಂತೆ, ಆ ರಾಷ್ಟ್ರಕ್ಕೆ ಭಾರತ ಪ್ರಮುಖ ಹೊರಗುತ್ತಿಗೆ ದೇಶವಾಗಿದೆ.
ಇದೆಲ್ಲಾ ಹಳೆಯ ಕಥೆಯಾಯಿತು. ಈಗ ಪರಿಸ್ಥಿತಿ ಅದಲು ಬದಲಾಗಿದೆ. ಭಾರತವೇ ಅಮೆರಿಕಕ್ಕೆ ಕೆಲಸಗಳನ್ನು ಹೊರಗುತ್ತಿಗೆ ನೀಡುವ ಪ್ರವೃತ್ತಿ ಚಾಲ್ತಿಗೆ ಬಂದಿದೆ. ಇದು ದೇಶದ ಕಾನೂನು ವಿಭಾಗದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನ. ಇದರಿಂದಾಗಿ ಅಮೆರಿಕದ ಯುವ ವಕೀಲರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ. ಇತ್ತೀಚಿನ ಆರ್ಥಿಕ ಹಿಂಜರಿತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ, ಭವಿಷ್ಯದಲ್ಲಿ ಮತ್ತೊಮ್ಮೆ ಆರ್ಥಿಕ ಹಿಂಜರಿತದ ಪರಿಣಾಮಗಳನ್ನು ಎದುರಿಸಬೇಕಾದ ಭಯದ ನೆರಳಲ್ಲಿರುವ ಅಮೆರಿಕದಲ್ಲಿ ಯುವ ವಕೀಲರಿಗೆ ವರದಾನವಾಗಿದೆ. ಆರ್ಥಿಕ ಕುಸಿತದ ಅಂಚಿನಲ್ಲಿರುವ ಅಮೆರಿಕದಲ್ಲಿ ಯುವ ವಕೀಲರಿಗೆ ಸಿಗುವ ಶುಲ್ಕ ಕಡಿಮೆಯಾಗುತ್ತಿದೆ. ಅಲ್ಲದೆ, ವ್ಯಾಜ್ಯಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದರಿಂದಾಗಿ ಅವರು ಉತ್ತಮ ಆದಾಯವಿಲ್ಲದೆ ಪರಿತಪಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರಿಗೆ ಭಾರತದ ಹೊರಗುತ್ತಿಗೆ ಆಶಾದೀಪವಾಗಿ ಪರಿಣಮಿಸುತ್ತಿದೆ.
ಹೊರಗುತ್ತಿಗೆ ಉದ್ಯೋಗ ಗಿಟ್ಟಿಸಲು ಅಮೆರಿಕದ ವಕೀಲರು ಈಗ ಭಾರತೀಯ ಸಂಸ್ಥೆಗಳ ಮುಂದೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ರೀತಿ ಭಾರತೀಯ ಉದ್ಯಮಿಗಳಿಗೆ ಕಾನೂನು ಹೊರಗುತ್ತಿಗೆ ಸೇವೆ ನೀಡುವವರಲ್ಲಿ ಬಹುತೇಕರು ಆಗ ತಾನೆ ಪದವಿ ಮುಗಿಸಿ ವಿಶ್ವವಿದ್ಯಾಲಯಗಳಿಂದ ಹೊರಬಂದವರು ಹಾಗೂ ಕಾನೂನು ಸೇವೆ ನೀಡುವ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವವರು. ಹೊಸದಾಗಿ ಪದವಿ ಪಡೆದು ವಿಶ್ವವಿದ್ಯಾಲಯದಿಂದ ಹೊರ ಬಂದವರಿಗೆ ನಿಯಮಿತ ಕಾನೂನು ಸೇವೆಗಿಂತ ಕಾರ್ಪೊರೇಟ್ ವಲಯದ ಉದ್ಯೋಗ ಹೆಚ್ಚು ಆಕರ್ಷಕ ಹಾಗೂ ಲಾಭದಾಯಕ ಎನಿಸುತ್ತಿದೆ. ಕಂಪನಿ ವ್ಯವಹಾರಗಳಿಗೆ ಸಂಬಂಧಿಸಿದ ಕಾನೂನು ಸೇವೆಗಳೇ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕಂಪನಿಗಳು ತಮ್ಮ ಸಂಸ್ಥೆಗೆ ಅಗತ್ಯವಿರುವ ಕಾನೂನು ಸಲಹೆಯನ್ನು ಇತರ ಸಂಸ್ಥೆಗಳಿಂದ ಪಡೆಯುವ ಒಂದು ಪರಿಪಾಠವೇ ಕಾನೂನು ಹೊರಗುತ್ತಿಗೆ ಸೇವೆ. ಇದೇ ಸೇವೆಯನ್ನು ದೇಶದೊಳಗಿನ ಕಂಪನಿಯಿಂದ ಪಡೆದರೆ ಅದು "ಆನ್‌ಶೋರ್" ಸೌಲಭ್ಯವೆಂದಾಗುತ್ತದೆ. ಕಂಪನಿ ಈ ಸೇವೆಗಾಗಿ ವಿದೇಶದತ್ತ ಮುಖ ಮಾಡಿದರೆ ಅದನ್ನು "ಆಫ್ ಶೋರಿಂಗ್ (ಸಮುದ್ರದಾಚೆಯ)" ಸೇವೆ ಎನ್ನಲಾಗುತ್ತದೆ. ಕಾನೂನು ಸಲಹೆ ವಿಭಾಗಕ್ಕೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರವೃತ್ತಿ ಭಾರತೀಯ ಸಂಸ್ಥೆಗಳಲ್ಲಿ ಹೆಚ್ಚುತ್ತಿದೆ. ಇದು ಉದ್ಯೋಗಿಗಳಲ್ಲಿ ಜಾಗತಿಕ ಮಟ್ಟದ ಸಂಸ್ಕೃತಿ ಬೆಳೆಸಿಕೊಳ್ಳುವಲ್ಲಿ ಸಹಕರಿಸುತ್ತದೆ. ಅವರಿಗೆ ಜಾಗತಿಕ ಜ್ಞಾನದ ಅನಾವರಣ ಮಾಡಿಸುತ್ತದೆ. ಇದರಿಂದಾಗಿ ಅಮೆರಿಕದ ಉದ್ಯೋಗಿಗಳು ಉತ್ತಮ ಉದ್ಯೋಗಾವಕಾಶಗಳಿಗಾಗಿ ಭಾರತೀಯ ಕಂಪನಿಗಳತ್ತ ಮುಖ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ.
ಜಾಗತಿಕ ಆರ್ಥಿಕ ಕುಸಿತದ ಸಮಯದಲ್ಲಿ ಕಾನೂನು ಸೇವಾ ವಿಭಾಗವೂ ಅದರ ಪ್ರಭಾವಕ್ಕೆ ಒಳಗಾಗಿತ್ತು. ಕಾನೂನು ಸೇವೆ ಒದಗಿಸುವ ಸಂಸ್ಥೆಗಳು ಯುವ ವಕೀಲರಿಗೆ ನೀಡುವ ಸಂಭಾವನೆಯನ್ನು ಕಡಿತಗೊಳಿಸಿದ್ದವು. ಕೆಲವು ಉದ್ಯೋಗಿಗಳಿಗಂತೂ ಗಂಟೆಯೊಂದಕ್ಕೆ ೨೦ ಅಮೆರಿಕನ್ ಡಾಲರ್‌ನಷ್ಟು ಕಡಿಮೆ ಸಂಭಾವನೆ ನೀಡಲಾಗುತ್ತಿತ್ತು. ಆದರೀಗ ಪರಿಸ್ಥಿತಿ ಸುಧಾರಿಸಿದೆ. ಅವರಿಗೂ ಅವಕಾಶಗಳು ಅರಸಿ ಬರುತ್ತಿವೆ. ಭಾರತೀಯ ಉದ್ಯಮಿಗಳು ಕಾನೂನು ಸೇವೆಯನ್ನು ಹೊರಗುತ್ತಿಗೆ ನೀಡುತ್ತಿರುವುದರಿಂದ ಅಮೆರಿಕದ ಯುವ ವಕೀಲರಿಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ಥಳೀಯರು ಈ ಬೆಳವಣಿಗೆಯನ್ನು ಮುಕ್ತ ಹೃದಯದಿಂದ ಸ್ವಾಗತಿಸುತ್ತಿದ್ದಾರೆ. ಇತರ ವಲಯದ ಕಂಪನಿಗಳು ಭಾರತಕ್ಕೆ ಉದ್ಯೋಗವನ್ನು ಹೊರಗುತ್ತಿಗೆ ನೀಡುತ್ತಿರುವುದಕ್ಕೆ ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿದೆ. ಸಾಧಾರಣವಾಗಿ ಕಾನೂನು ಸೇವೆಯನ್ನು ಹೊರಗುತ್ತಿಗೆ ನೀಡುವಾಗ ಅದರ ಸ್ವರೂಪದ ಬಗ್ಗೆ ಮೊದಲು ಗಮನಿಸಲಾಗುತ್ತದೆ. ಉದಾಹರಣೆಗೆ ವಿವಾಹ ವಿಚ್ಛೇದನದಂತಹ ವಿಷಯಗಳು ಸೂಕ್ಷ್ಮ ಸ್ವರೂಪದ ವಿಭಾಗಕ್ಕೆ ಸೇರುತ್ತವೆ. ಗೇಣಿಗೆ ಸಂಬಂಧಿಸಿದ ವಿಷಯಗಳನ್ನು ಅಷ್ಟೊಂದು ಸೂಕ್ಷ್ಮ ವಿಷಯಗಳೆಂದು ಪರಿಗಣಿಸಲಾಗುವುದಿಲ್ಲ. ಸಾಧಾರಣವಾಗಿ ಸೂಕ್ಷ್ಮ ವಿಷಯಗಳ ಕಾನೂನು ಸೇವೆಯನ್ನು ವಿದೇಶಗಳಿಗೆ ಹೊರಗುತ್ತಿಗೆ ನೀಡುವ ಪ್ರವೃತ್ತಿ ಕಡಿಮೆ ಎನ್ನುತ್ತಾರೆ ಕಾನೂನು ಪರಿಣತರು.