ಜ್ಞಾನದ ಕೋಶವಾಗಿ ಒಡಮೂಡಿದ ಭಾಷೆ ಸಂಸ್ಕೃತ     ಸಂಸ್ಕೃತ ಭಾಷೆ ಅತಿ ಪ್ರಾಚೀನ ಮಾತ್ರವಲ್ಲ, ಅಚ್ಚುಕಟ್ಟಾದ ಪದಪುಂಜಗಳ ಭಾಷೆ ಕೂಡ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ ಭಾಷೆ ಇದು. ಬಹುಶ: ಈ ಭಾಷೆಯಲ್ಲಿನ ವ್ಯಾಕರಣ, ಭಾಷಾ ಶುದ್ಧತೆ, ಅಲಂಕಾರ, ಛಂದಸ್ಸುಗಳ ಬಳಕೆಯಲ್ಲಿನ ಬದ್ಧತೆಯಿಂದಾಗಿ ಇದು ಜನಸಾಮಾನ್ಯರಿಂದ ದೂರ ಉಳಿಯಬೇಕಾಗಿ ಬಂದಿರಬಹುದು. ಇಂಗ್ಲೀಷ್ ಭಾಷೆ ಇಂದು ಜಾಗತಿಕ ಭಾಷೆಯಾಗಿ ಬಳಕೆಯಾಗುತ್ತಿದೆ ಎಂದರೆ ಅದಕ್ಕೆ ಕಾರಣ ಪಾಶ್ಚಿಮಾತ್ಯರ ಪ್ರಭಾವ. ತಮ್ಮ ಭಾಷೆಯ ಅಭಿವೃದ್ಧಿಗಾಗಿ ಲಾಭಿ ನಡೆಸುವ ಅವರ ಸಾಮರ್ಥ್ಯ. ಭಾರತ ಜಾಗತೀಕರಣಕ್ಕೆ, ಉದಾರೀಕರಣಕ್ಕೆ ತನ್ನನ್ನು ತೆರೆದುಕೊಂಡ ನಂತರ ಭಾರತದಲ್ಲಿ ಇಂಗ್ಲೀಷ್ ಭಾಷೆಯ ಬೆಳವಣಿಗೆ ಚುರುಕಾಯಿತು ಎಂಬುದನ್ನು ನಾವು ಮರೆಯುವಂತಿಲ್ಲ. ಅಲ್ಲದೆ, ಅದು ಬೆಳವಣಿಗೆಯ ಹಾದಿಯಲ್ಲಿ ಇತರ ಭೌಗೋಳಿಕ ಪ್ರದೇಶಗಳ, ಇತರ ಭಾಷೆಗಳ ಪದಗಳನ್ನು ತನ್ನ ಒಡಲೊಳಗೆ ಸೇರಿಸಿಕೊಳ್ಳುತ್ತಾ ಬೆಳೆಯಿತು. ಈ ಗುಣವನ್ನು ಸಂಸ್ಕೃತ ಭಾಷೆಯ ಪಂಡಿತರು ಒಪ್ಪಿಕೊಳ್ಳದೇ ಹೋದುದು ಸಂಸ್ಕೃತದ ಬೆಳವಣಿಗೆಗೆ ಮಾರಕವಾಗಿರಬಹುದು. ಹಾಗಾಗಿ ವ್ಯಾವಹಾರಿಕವಾಗಿ ಭಾಷೆ ಸೊರಗಿರಬಹುದೇ ವಿನ: ಅದನ್ನು ಮೃತಭಾಷೆ ಎನ್ನಲಾಗದು.
     ಹಲವು ಶತಮಾನಗಳ ಹಿಂದೆಯೇ ರಚಿತವಾದ ರಾಮಾಯಣ, ಮಹಾಭಾರತ, ಭಗವದ್ಗೀತೆಗಳು ಇತರ ಭಾಷೆಗಳ ಅದೆಷ್ಟೊ ಸಾಹಿತ್ಯ ಕೃತಿಗಳಿಗೆ ಪ್ರೇರಣೆಯಾಗಿವೆ. ಈ ಕೃತಿಗಳಲ್ಲಿನ ನೀತಿ ಬೋಧನೆ ಇಂದಿಗೂ ನಮಗೆ ಪ್ರೇರಕ ಶಕ್ತಿ. ಕೌಟಿಲ್ಯನ ಅರ್ಥಶಾಸ್ತ್ರ, ಕಾಳಿದಾಸನ ಅಭಿಜ್ಞಾನ ಶಾಕುಂತಲಾದಂತಹ ಕೃತಿಗಳು ಇಂದಿಗೂ ನಮ್ಮ ಜನಮಾನಸದಲ್ಲಿ ನೆಲೆ ನಿಂತಿವೆ. ಇಂತಹ ಜನ್ಯ ಭಾಷೆ ಮಾತ್ರ ಇತರ ಭಾಷೆಯ ಜನಕ ಕೃತಿಗಳಿಗೆ ಪ್ರೇರಕವಾಗಬಲ್ಲದು. ಒಂದು ಭಾಷೆಯಲ್ಲಿನ ವ್ಯಾಕರಣ, ಛಂದಸ್ಸು, ಶುದ್ಧತೆಗಳಲ್ಲಿನ ಬದ್ಧತೆ ಮಾತ್ರ ಬಹುಕಾಲದವರೆಗೆ ಇಂತಹ ಕೃತಿಗಳನ್ನು ನೀಡಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ, ಬೆಳವಣಿಗೆಯ ಹಾದಿಯಲ್ಲಿ ಗುಣಮಟ್ಟ ಕಾಪಾಡಿಕೊಂಡು ಬರುತ್ತದೆ. ಇಲ್ಲದಿದ್ದರೆ ಬೆಳವಣಿಗೆಯ ಹಾದಿಯಲ್ಲಿ ಭಾಷೆಯ ಗುಣಮಟ್ಟ ಸೊರಗುತ್ತದೆ.
     ಸಂಸ್ಕೃತ ಭಾಷೆಯಲ್ಲಿರುವಷ್ಟು ಸುಭಾಷಿತಗಳು ಬಹುಶ: ಬೇರಾವ ಭಾಷೆಯಲ್ಲೂ ನಮಗೆ ಸಿಗುವುದು ಕಷ್ಟ. ವ್ಯಕ್ತಿಯ, ಆ ಮೂಲಕ ಸಮಾಜದ ಒಳ್ಳೆಯತನಕ್ಕೆ ಮಾರ್ಗದರ್ಶನ ನೀಡಬಲ್ಲ ಕೈಪಿಡಿಗಳಿವು. ಗಣಿತಶಾಸ್ತ್ರದಲ್ಲಿ ಬರುವ ಆರಂಭಿಕ ಅಂಕೆ ಸೊನ್ನೆಯನ್ನು ಕೊಟ್ಟವರು ಭಾರತೀಯರು ಎಂದು ಬೀಗುವ ನಾವು, ಅದನ್ನು ಕೊಡುಗೆಯಾಗಿ ನೀಡಿದ ಭಾಷೆಯನ್ನು ತಾತ್ಸಾರವಾಗಿ ನೋಡುವುದು ತರವೇ?
     ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ ಅವರಂತಹ ಮಹಾನ್ ಗಣಿತಜ್ಞರು, ಖಗೋಳಶಾಸ್ತ್ರಜ್ಞರು ನೀಡಿದ ಕೊಡುಗೆ ನಮಗೆ ಪಥ್ಯವಲ್ಲವೇ? ಇವೆಲ್ಲವೂ ನಮಗೆ ದೊರೆತಿದ್ದು ಸಂಸ್ಕೃತ ಭಾಷೆಯಲ್ಲಿ. ಜ್ಯೋತಿಷ್ಯಶಾಸ್ತ್ರ ಒಂದು ವಿಜ್ಞಾನ. ಅದರ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ವಾದ ಕೇಳಿ ಬರುತ್ತಿದೆ. ಈ ಜ್ಯೋತಿಷ್ಯಶಾಸ್ತ್ರದ ಹುಟ್ಟಿಗೆ ಕಾರಣವಾದ ಭಾಷೆ ಸಂಸ್ಕೃತ. ಇಂದಿನ ಅದೆಷ್ಟೊ ಮಾರಕ ರೋಗಗಳನ್ನು ಗುಣಪಡಿಸಬಲ್ಲ, ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಬಲ್ಲ ಆಯುರ್ವೇದ ಗ್ರಂಥಗಳು ಹುಟ್ಟಿದ್ದು ಸಂಸ್ಕೃತದಲ್ಲಿ. ಇತರ ಭಾಷೆಗಳಲ್ಲಿ ಇವು ಇಂದು ಲಭ್ಯ ಎಂತಾದರೆ, ಅವು ಸಂಸ್ಕೃತದಿಂದ ಭಾಷಾಂತರಗೊಂಡಂತವು. ಅಂದರೆ ಇಂದಿನ ರಿಮೇಕ್ ಸಿನಿಮಾಗಳ ಹಾಗೆ.
     ಸಂಸ್ಕೃತ ಭಾಷೆಯಲ್ಲಿದ್ದ ವೇದ-ಮಂತ್ರಗಳು ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲೂ ಈಗ ಲಭ್ಯ. ಆದರೆ, ಸಂಸ್ಕೃತ ಭಾಷೆಯಲ್ಲಿ ಉಚ್ಛಾರಣೆ ಮಾಡಿದಾಗ ಅದು ಮಾನವನ ಮೆದುಳಿನ ಮೇಲೆ ಉಂಟು ಮಾಡುವ ಪರಿಣಾಮಕ್ಕೂ, ಇತರ ಭಾಷೆಗಳಲ್ಲಿ ಉಚ್ಛಾರಣೆ ಮಾಡಿದಾಗ ಉಂಟು ಮಾಡುವ ಪರಿಣಾಮಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಂಸ್ಕೃತದಲ್ಲಿ ರಚಿತವಾದ ವೇದಗಳು, ಪುರಾಣಗಳು, ಉಪನಿಷತ್ತುಗಳು ಭಾಷೆಯ ಸಾಹಿತ್ಯದ ಮಾಧುರ್‍ಯತೆಯನ್ನು ಎತ್ತಿ ತೋರಿಸಿವೆ. ಪುರಾತನ ಗ್ರೀಕ್, ಲ್ಯಾಟಿನ್ ಸೇರಿದಂತೆ ಹಲವು ಭಾಷೆಗಳ ಮೇಲೂ ಸಂಸ್ಕೃತ ಪದಗಳ ಬಳಕೆಯಾಗಿವೆ.
     ದೇಹದ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಹಾಗೂ ಪ್ರಾಣಾಯಾಮ ಪೂರಕ ಎನ್ನುವ ಸಂಗತಿಯನ್ನು ಬಹಳಷ್ಟು ಮಂದಿ ಇಂದು ಒಪ್ಪುತ್ತಾರೆ. ಆರೋಗ್ಯತಜ್ಞರು ಈ ದಿಸೆಯಲ್ಲಿ ಸಲಹೆ ನೀಡುತ್ತಿದ್ದಾರೆ. ಪಾಶ್ಚಿಮಾತ್ಯರೂ ಯೋಗ, ಪ್ರಾಣಾಯಾಮಗಳನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಈ ಯೋಗ, ಪ್ರಾಣಾಯಾಮ, ಆಸನಗಳ ಉಲ್ಲೇಖಗಳು ನಮಗೆ ಮೊದಲಿಗೆ ದೊರೆತದ್ದು ಸಂಸ್ಕೃತ ಭಾಷೆಯಲ್ಲಿ. ಇವುಗಳನ್ನು ನಮಗೆ ಕೊಡುಗೆಯಾಗಿ ನೀಡಿದ ಋಷಿ-ಮುನಿಗಳ ಸಂವಹನ ಭಾಷೆ ಸಂಸ್ಕೃತವಾಗಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ.
     ಸಂಸ್ಕೃತದಲ್ಲಿನ ಓಲೆಗರಿಗಳು, ಹಸ್ತಪ್ರತಿಗಳಲ್ಲಿ ಅದೆಷ್ಟೊ ಉತ್ತಮ ವಿಚಾರಗಳು ಅಡಗಿವೆ. ಪರಿಷ್ಕೃತಗೊಳ್ಳದೆ ಮೂಲೆಯಲ್ಲಿ ಬಿದ್ದು ಧೂಳು ತಿನ್ನುತ್ತಿವೆ. ಇವು ಪರಿಷ್ಕೃತಗೊಂಡು ಅಧ್ಯಯನಕ್ಕೆ ಬಳಕೆಯಾದರೆ ಸಮಾಜಕ್ಕೆ ಇನ್ನಷ್ಟು ಉತ್ತಮ ಜ್ಞಾನ ದೊರೆಯಲು ಸಾಧ್ಯ.
     ಸಂಸ್ಕೃತ ಕೇವಲ ಒಂದು ಭಾಷೆಯಾಗಿ ಬೆಳೆಯಲಿಲ್ಲ. ಬದಲಾಗಿ ಜ್ಞಾನದ ಕೋಶವಾಗಿ ಒಡಮೂಡಿತು. ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿ ಬೆಳೆಯಿತು. ಆದರೆ, ಮುಂದೆ ಸೂಕ್ತ ಬೆಂಬಲ ಸಿಗದೆ ಸೊರಗಿತು. ಇತಿಹಾಸದ ಮೇಲೆ ಬೆಳಕು ಚೆಲ್ಲಿದಾಗ ನಮಗೆ ಕಂಡು ಬರುವ ಸತ್ಯವಿದು. ಈ ಭಾಷಾ ಸಂಪತ್ತಿನ ಮೇಲೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ಜನಸಾಮಾನ್ಯರಿಗೂ ಭಾಷಾಜ್ಞಾನದ ಪರಿಚಯ ಸಿಗಬೇಕು ಎಂದಾದರೆ ಭಾಷೆಯ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಠಿಯಾಗಬೇಕು.