ಗಣಿತದಲ್ಲಿ ಉತ್ತಮ ಅಂಕ ಬೇಕೆ? ಚೆನ್ನಾಗಿ ನಿದ್ದೆ ಮಾಡಿ


ಗಣಿತದಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕಿದ್ದರೆ ಪರೀಕ್ಷೆಯ ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ ಎಂಬುದು ವಿಜ್ಞಾನಿಗಳು ಮಕ್ಕಳಿಗೆ ನೀಡುವ ಸಲಹೆ. ಗಣಿತದಲ್ಲಿ ಉತ್ತಮ ಅಂಕ ಪಡೆಯಬೇಕೆ? ಹಾಗಾದರೆ, ನಾಳೆ ನೀವು ಪರೀಕ್ಷೆ ಬರೆಯಬೇಕು ಎಂದಾಗ ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ. ರಾತ್ರಿ ಮಾಡುವ ಉತ್ತಮ ನಿದ್ದೆ ಪರೀಕ್ಷೆಯಲ್ಲಿ ಫಲಿತಾಂಶ ಉತ್ತಮಗೊಳ್ಳಲು ನೆರವಾಗುತ್ತದೆ ಎಂಬುದು ಪಿಟ್ಸ್‌ಬರ್ಗ್ ವಿವಿಯ ಹೊಸ ಅಧ್ಯಯನ ವರದಿಯ ಸಾರ.
ವಿಶೇಷವಾಗಿ ಗಣಿತ ಪರೀಕ್ಷೆಯಲ್ಲಿ ರಾತ್ರಿಯ ಸುಖ ನಿದ್ದೆ ಹೆಚ್ಚು ಪರಿಣಾಮಕಾರಿ ಎಂಬ ಅಂಶವನ್ನು ಒತ್ತಿ ಹೇಳುವ ಸಂಶೋಧನೆಗಳು ನಿದ್ದೆಯ ಮಹತ್ವವನ್ನು ಇನ್ನಿಲ್ಲದಂತೆ ಸಾರಿವೆ. ಇದಕ್ಕಾಗಿ ಅವರು ಸುಮಾರು ೫೬ ಹದಿಹರೆಯದ ವಿದ್ಯಾರ್ಥಿಗಳ ನಿದ್ದೆ ಮಾಡುವ ವಿಧಾನ ಹಾಗೂ ಅವರು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ತುಲನೆ ಮಾಡಿದರು. ಉತ್ತಮವಾಗಿ ನಿದ್ದೆ ಮಾಡಿ ಪರೀಕ್ಷೆ ಬರೆದವರು ಉತ್ತಮ ಅಂಕಗಳನ್ನು ಪಡೆದಿರುವುದು ಸಂಶೋಧನೆ ವೇಳೆ ಕಂಡು ಬಂದಿದೆ.
ಪರೀಕ್ಷೆಯ ಹಿಂದಿನ ರಾತ್ರಿ ಗಾಢವಾಗಿ, ಯಾವುದೇ ಅಡಚಣೆ ಇಲ್ಲದ ನಿದ್ದೆ ಮಾಡಿದವರು ಪರೀಕ್ಷೆಯಲ್ಲಿ ಹೆಚ್ಚು ಯಶಸ್ವಿಯಾಗುತ್ತಾರೆ. ಬಹಳ ಬೇಗ ನಿದ್ದೆಗೆ ಜಾರುವವರು ಮತ್ತು ಬೇಗನೆ ಎಚ್ಚರಗೊಳ್ಳುವ ಪ್ರವೃತ್ತಿಯವರು ಹೆಚ್ಚು ಅಂಕಗಳನ್ನು ಗಳಿಸಲು ಸಫಲರಾಗುತ್ತಾರೆ.
ಆಗಾಗ ಎಚ್ಚರವಾಗದೇ ಇಡೀ ರಾತ್ರಿ ಸುಖ ನಿದ್ದೆ ಮಾಡುವವರು, ನಿದ್ದೆ ಬಾರದಿದ್ದಾಗ ಹಾಸಿಗೆಯಲ್ಲಿ ಹೆಚ್ಚು ಸಮಯ ಕಳೆಯುವವರು, ಉತ್ತಮ ಗುಣಮಟ್ಟದ ನಿದ್ದೆ ಮಾಡುವ ಸಾಮರ್ಥ್ಯ ಇರುವವರು ಅಂಕಗಳಿಕೆಯಲ್ಲಿ ಮುಂದಿರುತ್ತಾರೆ. ಹಾಗಾಗಿ, ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಳದಲ್ಲಿ ನಿದ್ದೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ಇತ್ತೀಚೆಗೆ ಮಂಡಿಸಲಾದ ಅಸೋಸಿಯೇಟೆಡ್ ಪ್ರೊಫೆಷನಲ್ ಸ್ಲೀಪ್ ಸೊಸೈಟಿಸ್‌ನ ವಾರ್ಷಿಕ ಸಭೆಯಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳ ಸಾರ.
ಹಾಗೆಂದ ಮಾತ್ರಕ್ಕೆ ಪರೀಕ್ಷೆಯ ಹಿಂದಿನ ರಾತ್ರಿ ಉತ್ತಮ ನಿದ್ದೆ ಮಾಡಿದಾಕ್ಷಣ ಗಣಿತ ವಿಷಯದಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂಬ ಭ್ರಮೆ ಬೇಡ. ಸಂಶೋಧನಾ ವರದಿಯ ಅರ್ಥವೂ ಅದಲ್ಲ. ಅಂದರೆ, ಪರೀಕ್ಷೆಯ ಹಿಂದಿನ ರಾತ್ರಿಯಿಡಿ ಕಷ್ಟಪಟ್ಟು ಓದಿ, ಗಣಿತದ ಸಮಸ್ಯೆಗಳನ್ನು ಬಿಡಿಸಿ, ಅತಿಯಾಗಿ ನಿದ್ದೆಗೆಡಬೇಡಿ. ನಿದ್ದೆ ಸರಿ ಮಾಡದಿದ್ದರೆ ಮಾನಸಿಕವಾಗಿ ನೀವು ಬಳಲುತ್ತೀರಿ. ಪರೀಕ್ಷೆ ಬರೆಯಲು ಬೇಕಾದ ಲವಲವಿಕೆ ನಿಮ್ಮಲ್ಲಿ ಇರಲಾರದು. ಪರೀಕ್ಷೆ ಬರೆಯುವ ವೇಳೆ ನಿಮ್ಮಲ್ಲಿ ನಿದ್ದೆಯ ಮಂಪರು ಆವರಿಸಬಹುದು. ಮಾನಸಿಕವಾಗಿ ನೀವು ತುಂಬಾ ಬಳಲಿದರೆ ಪ್ರಶ್ನೆಗೆ ತಕ್ಕ ಉತ್ತರ ಹೊಳೆಯದಿರಬಹುದು. ಪರೀಕ್ಷೆಗೆ ಮಾಡಿಕೊಂಡ ಸಿದ್ಧತೆ ವ್ಯರ್ಥವಾಗಬಹುದು ಎಂಬುದು ವಿಜ್ಞಾನಿಗಳ ಕಳಕಳಿ.
ಈ ಸಂಗತಿ ಗಣಿತಕ್ಕೆ ಮಾತ್ರವಲ್ಲ. ಇತರ ವಿಷಯಗಳಿಗೂ ಅನ್ವಯವಾಗುತ್ತದೆ. ಆದರೆ, ಸಾಧಾರಣವಾಗಿ ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸಿದ ಗಣಿತಕ್ಕೆ ಈ ಸಂಗತಿ ಹೆಚ್ಚು ಅನ್ವಯ ಅಷ್ಟೆ.
ಆಧುನಿಕ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ದಿನಗಳಲ್ಲಿ ಗಣಿತಕ್ಕೆ ಮಹತ್ವ ಹೆಚ್ಚುತ್ತಲೇ ಇದೆ. ಆದರೆ, ವಿಜ್ಞಾನಲೋಕದ ರಾಣಿ ಎಂದೇ ಕರೆಸಿಕೊಳ್ಳುವ ಗಣಿತ ಅಷ್ಟು ಸುಲಭವಾಗಿ ತಲೆಗೆ ಹತ್ತುವಂತಹದ್ದಲ್ಲ. ಮಹಾನ್ ಮೇಧಾವಿಗಳೂ ಗಣಿತದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಂಡಿದ್ದುಂಟು. ಮೇಧಾವಿಗಳೂ ಗಣಿತವನ್ನು ಕರಗತ ಮಾಡಿಕೊಳ್ಳಬೇಕಿದ್ದರೆ ಸಾಕಷ್ಟು ಅಭ್ಯಾಸ ನಡೆಸಲೇ ಬೇಕು.
ಆದರೂ, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಗಣಿತಜ್ಞರು ಮಕ್ಕಳಿಗೆ ಕೆಲವು ಸಾಮಾನ್ಯ ಸಲಹೆ, ಸೂಚನೆಗಳನ್ನು ನೀಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಸಾಮರ್ಥ್ಯವಿದ್ದರೆ ಕೇವಲ ಸೂತ್ರ (ಫಾರ್ಮೂಲಾ) ಅಥವಾ ನಿಯಮಗಳನ್ನು ಅಭ್ಯಾಸ ಮಾಡಿಕೊಂಡರೆ ಸಾಕು. ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು ಈ ಸೂತ್ರ ಅಥವಾ ನಿಯಮ ಅನುಸರಿಸಿಯೇ ಇರುತ್ತವೆ. ಇದು ಗಣಿತ ವಿಷಯದಲ್ಲಿ ಉತ್ತಮ ಅಂಕ ಗಳಿಸಲು ಉತ್ತಮ ಮಾರ್ಗ.
ಸೂತ್ರ ಅಥವಾ ನಿಯಮ ಆಧರಿಸಿ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವಲ್ಲಿ ನೀವು ದುರ್ಬಲರಾಗಿದ್ದರೆ, ಪುಸ್ತಕದಲ್ಲಿರುವ ಪ್ರಮುಖ ಉದಾಹರಣೆಗಳ ಅಭ್ಯಾಸ ಮಾಡಿಕೊಳ್ಳಿ. ಕಠಿಣ ಅಧ್ಯಾಯಗಳ ಮೇಲೆ ಹೆಚ್ಚು ಸಮಯ ವ್ಯಯ ಮಾಡಿ. ಅವುಗಳನ್ನು ಹೆಚ್ಚೆಚ್ಚು ಅಧ್ಯಯನ ಮಾಡಿ.ಆದರೆ, ಇದು ಹೆಚ್ಚು ಅಂಕ ಗಳಿಸುವಲ್ಲಿ ಅಷ್ಟೊಂದು ಸಹಕಾರಿ ಆಗಲಾರದು. ಹೆಚ್ಚೆಂದರೆ ೧೦೦ಕ್ಕೆ ೭೫-೮೦ ಅಂಕಗಳನ್ನು ಪಡೆಯಲು ಸಹಾಯ ಮಾಡಬಹುದು ಎಂಬುದು ತಜ್ಞರ ಅಭಿಮತ.
ಇನ್ನೊಂದು ಪ್ರಮುಖ ಅಂಶವೆಂದರೆ, ಸೂತ್ರ ಅಥವಾ ನಿಯಮಗಳನ್ನು ಆಧರಿಸಿ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಸಾಮರ್ಥ್ಯವುಳ್ಳವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು. ಕಂಪನಿಗಳು ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಅಂಶಗಳ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಾರೆ.
ಗಣಿತದಲ್ಲಿ ಪರಿಣಿತಿ ಸಾಸಲು ಇರುವ ಸುಲಭ ಸೂತ್ರವಿದು. ಆಸಕ್ತಿ + ಅಭ್ಯಾಸ + ಆನ್ವಯಿಕ ಸಾಮರ್ಥ್ಯ = ಗಣಿತದಲ್ಲಿ ಪರಿಣಿತಿ.
ಗಣಿತ ಇತರ ವಿಷಯಗಳಂತಲ್ಲ. ಇದರ ಅಧ್ಯಯನ ಹಾಗೂ ಅಧ್ಯಾಪನ ಮನಕ್ಕೆ ಮುದ ನೀಡುತ್ತದೆ. ಮನಸ್ಸನ್ನು ಕ್ರಿಯಾಶೀಲಗೊಳಿಸುತ್ತದೆ. ಗಣಿತದ ಅಧ್ಯಯನ ಬದುಕಲ್ಲಿ ಶಿಸ್ತನ್ನು ರೂಢಿಸುತ್ತದೆ. ಸಂಗೀತಾಭ್ಯಾಸಕ್ಕೂ ಇದು ಅನುಕೂಲಕರ ಎನ್ನುವುದು ಹಲವರ ಅಭಿಮತ. ಕೈಗಾರಿಕಾ ವಲಯದಲ್ಲಿ ಗಣಿತಜ್ಞರಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಸಮಸ್ಯೆಗಳನ್ನು ಸುಲಭವಾಗಿ ಬಿಡಿಸುವ ಸಾಮರ್ಥ್ಯ ಇವರಲ್ಲಿ ಇರುತ್ತದೆ ಎನ್ನುವುದು ಇದಕ್ಕೆ ಕಾರಣ. ಇದೇ ಉದ್ದೇಶಕ್ಕಾಗಿಯೇ ಸಾಫ್ಟ್‌ವೇರ್ ಉದ್ಯಮದಲ್ಲೂ ಇವರಿಗೆ ಬೇಡಿಕೆ ಹೆಚ್ಚು.