ತೂಗುಸೇತುವೆ ತೂಗುತಿದೆ, ನೋಡು ಬಾರಾ


ಅಘನಾಶಿನಿ ನದಿಯ ಒಂದು ನೋಟ

     ಒಂದು ಕಾಲದಲ್ಲಿ ತೆಪ್ಪದಲ್ಲಿ ಹೊಳೆದಾಟಿ ಹೋಗಿ ಕುಂಬ್ರಿ ಕೃಷಿ ಮಾಡಿ ಜೀವನ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲೂಕಿನ ಸೊಪ್ಪಿನ ಹೊಸಳ್ಳಿ ಪಕ್ಕದ ಬಂಗಣೆ ಗ್ರಾಮಕ್ಕೆ ಇದೀಗ ಹೊಸತೊಂದು ತೂಗುಸೇತುವೆ ನಿರ್ಮಾಣವಾಗಿದೆ.
ಜಿಲ್ಲೆಯ ಕರಾವಳಿಯಲ್ಲಿ ಅತಿದೊಡ್ಡದು ಎಂಬ ಹೆಗ್ಗಳಿಕೆಯ ಸದೃಢ ತೂಗು ಸೇತುವೆ ಹಳ್ಳಿಗರ ಜೀವನ ಶೈಲಿಗೆ ಪೂರಕವಾಗುವಂತೆ ಬಳಕೆಗೆ ಸಜ್ಜಾಗಿದೆ. ಕುಮಟಾ- ಸಿದ್ದಾಪುರ ಮಾರ್ಗದ ಸಂತೇಗುಳಿಯಿಂದ 9 ಕಿಮೀ ದೂರದ ಮಾಸ್ತಿಕಟ್ಟೆ ದೇವಾಲಯದಿಂದ ಬಂಗಣೆ ಕ್ರಾಸ್‌ನಲ್ಲಿ ಒಳ ಸರಿದರೆ ಹೊಸ ತೂಗು ಸೇತುವೆ ಕಾಣುತ್ತದೆ. ಕನಿಷ್ಟವೆಂದರೂ 200 ಮೀಟರುಗಳಷ್ಟು ಉದ್ದದ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ.
     ಆದರೆ ಹೊಳೆಯ ಮಧ್ಯ ನಿಂತು ಕುಣಿದರೂ ಭಯಹುಟ್ಟಿಸದಂತೆ ಭದ್ರವಾಗಿ ನಿರ್ಮಿಸಿದ್ದು ವಿಶೇಷ. ಚಿಕ್ಕ ಮಕ್ಕಳು ಕೂಡಾ ಸುರಕ್ಷಿತವಾಗಿ ನಡೆದುಕೊಂಡು ಹೊಳೆ ದಾಟಬಹುದು. ಬೈಕ್‌ಗಳನ್ನು ಕೂಡಾ ಸಾಗಿಸಬಹುದು. ಈ ತೂಗುಸೇತುವೆಗಾಗಿ 10 ವರ್ಷದ ಹಿಂದೆಯೇ ಹೊಳೆಯ ಎರಡೂ ಬದಿಗಳಲ್ಲಿ ಕಂಬಗಳನ್ನು ನಿರ್ಮಿಸಲಾಗಿತ್ತು. ಅಂದು ಸ್ಥಳೀಯ ಮುಖಂಡ ಮದನ ನಾಯಕ ನೇತೃತ್ವದಲ್ಲಿ ಜನರಿಂದಲೂ ಒಂದಷ್ಟು ದೇಣಿಗೆ ಸೇರಿಸಿ, ಕೈಯಿಂದಲೂ ಲಕ್ಷಾಂತರ ಹಣ ಹಾಕಿ ತೂಗು ಸೇತುವೆಯ ಕನಸು ಕಂಡಿದ್ದರು. ಆದರೆ ನಿರೀಕ್ಷೆಗೆ ಮೀರಿದ ವೆಚ್ಚದಿಂದಾಗಿ ಸ್ಥಳೀಯ ಹಣದ ಮೂಲದಿಂದ ಇಷ್ಟು ದೊಡ್ಡ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗದೇ ನೆನೆಗುದಿಗೆ ಬಿದ್ದಿತ್ತು.
     2004 ರಲ್ಲಿ ಸಂತೇಗುಳಿ ಬಳಿ ನಿಲ್ಕುಂದ ರಸ್ತೆಯಲ್ಲಿ ಮೊರಸೆಯಲ್ಲಿ ಅಘನಾಶಿನಿ ನದಿಗೆ ದೊಡ್ಡ ಸೇತುವೆ ನಿರ್ಮಾಣವಾಗಿತ್ತು. ಕಣ್ಣಳತೆಯಲ್ಲಿ ಹೊಳೆಯಾಚೆ ಕಾಣುವ ಸಿದ್ದಾಪುರ ರಸ್ತೆಗೆ ಬರಬೇಕಾದರೆ ಸಂತೇಗುಳಿ ಬಳಿಯ ಸೇತುವೆಯ ಮೇಲಿಂದ ಹತ್ತಾರು ಕಿ.ಮೀ. ಸುತ್ತುಬಳಸಿ ಬರಬೇಕಿತ್ತು. ಬಂಗಣೆ ಭಾಗದವರಿಗೆ ಪ್ರತ್ಯೇಕ ತೂಗು ಸೇತುವೆಯ ಅಗತ್ಯ ಮೊದಲಿಗಿಂತ ಹೆಚ್ಚಾಯಿತು.
ಇದೆಲ್ಲವನ್ನು ಮನಗಂಡು ಮೊದಲಿದ್ದ ತೂಗು ಸೇತುವೆಯ ಯೋಜನೆಯನ್ನು ಜನ ಕೈಬಿಡಲಿಲ್ಲ. ಸ್ಥಳೀಯ ಮುಖಂಡರ, ಜನಪ್ರತಿನಿಧಿಗಳ, ಅಧಿಕಾರಿಗಳೆಲ್ಲರ ನಿರಂತರ ಪ್ರಯತ್ನದಿಂದ ಬಂಗಣೆಯ ತೂಗು ಸೇತುವೆಯ ಕೆಲಸ ಪೂರ್ಣಗೊಂಡಿದೆ. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗಾದ ವಿಶೇಷ ಯೋಜನೆಯಡಿ ಅನುದಾನ ಪಡೆದು ಉತ್ತಮ ತಾಂತ್ರಿಕತೆಯೊಂದಿಗೆ ಕಾಳಿ ನಿರ್ಮಿತಿಯವರ ಮಾರ್ಗದರ್ಶನದಲ್ಲಿ ಸೇತುವೆಯನ್ನು ಸಿದ್ಧಪಡಿಸಲಾಗಿದೆ.
     ಬಂಗಣೆಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ ನೂರಕ್ಕೂ ಹೆಚ್ಚು ಕುಂಬ್ರಿ ಮರಾಠಿ ಕುಟುಂಬಗಳಿವೆ. ಒಂದು ಬೆಂಕಿಪೆಟ್ಟಿಗೆ, ಬ್ಲೇಡು ಬೇಕಾಗಿದ್ದರೂ ಹೊಳೆ ದಾಟದೇ ವಿಧಿಯಿರಲಿಲ್ಲ. ಕುಮಟಾ, ಹೊನ್ನಾವರ ಅಥವಾ ಸಿದ್ದಾಪುರದೆಡೆಗೆ ಹೋದವರು ರಾತ್ರಿಯಾದರೆ ಹೊಳೆ ದಾಟುವುದೇ ದೊಡ್ಡ ಸಮಸ್ಯೆಯಾಗಿತ್ತು. ಎಷ್ಟೋ ದಿನ ಹೊಳೆಯಾಚೆಯ ಮಾಸ್ತಿ ಮಂದಿರದಲ್ಲೇ ಬೆಳಗು ಮಾಡಿ ನಂತರ ಮನೆಗೆ ಬಂದಿದ್ದಿದೆ. ಹೆಂಗಸರು ಮಕ್ಕಳಿಗೆ ತೀರಾ ಸಮಸ್ಯೆಯಾಗಿತ್ತು.
     ಈ ಮಧ್ಯೆ, ಪಕ್ಕದ ಬೆಣ್ಣೆ ಹೊಳೆ ಚಿಕ್ಕದಾದರೂ ತೀರಾ ಅಪಾಯಕಾರಿ, ಬೆಣ್ಣೆ ಹೊಳೆಯಾಚೆಗೆ ಮೊರಸೆ ಎಂಬ ಇನ್ನೊಂದು ಕುಗ್ರಾಮ ಇದೆ. ಇಲ್ಲಿಯ ಜನತೆ ಅಘನಾಶಿನಿ ನದಿಯನ್ನು ದಾಟಿ, ಬೆಣ್ಣೆ ಹೊಳೆಯನ್ನೂ ದಾಟಬೇಕಾಗುತ್ತದೆ ಆದ್ದರಿಂದ ಮತ್ತೂಂದು ತೂಗು ಸೇತುವೆ ಅತ್ಯಗತ್ಯವಿದೆ.