ಮಹಾ ಶಿವರಾತ್ರಿ, ರುದ್ರನ ಮಂಗಳಕರ ರಾತ್ರಿ


ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು.


ಶಿವರಾತ್ರಿಯ ಮಹಿಮೆ: 
ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ.
ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

ಬೇಡನ ಶಿವಭಕ್ತಿ: 
ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ.

ಜಾಗರಣೆ, ಹಬ್ಬದ ವಿಶೇಷ ಆಚರಣೆ:
ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ.
ಶಿವರಾತ್ರಿಯಂದು ಬೆಳಗ್ಗೆ ಬೇಗನೆ ಏಳುವ ಭಕ್ತರು, ಸ್ವಾನ ಮಾಡಿ, ಶುಚಿರ್ಭೂತರಾಗಿ ಶಿವದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ, ಮನೆಯಲ್ಲಿಯೇ ಶಿವನಿಗೆ ವಿಶೇಷ ಪೂಜೆ ನಡೆಸುತ್ತಾರೆ. ಗಂಗಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಸೇವಿಸಿದರೆ, ಕೆಲವು ಭಕ್ತರು ದಿನವಿಡಿ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸ ಇರುತ್ತಾರೆ. ಭಸ್ಮ ಲೇಪಿಸಿಕೊಂಡು, ಬಿಲ್ವಾರ್ಚನೆ ಮೂಲಕ ರುದ್ರ ಪಠಣ ಹಬ್ಬದ ಆಚರಣೆಯ ವಿಶೇಷ.
ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀ ಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ "ಓಂ ನಮ: ಶಿವಾಯ", ಹರ ಹರ ಮಹಾದೇವ, ಶಂಭೋ ಶಂಕರ...ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ. ನಾಲ್ಕು ಆಯಾಮಗಳ ರುದ್ರಪಠಣ, ಶಿವರಾತ್ರಿ ಪೂಜೆಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮೆಗಳ ಪಠಣ ಶಿವನಿಗೆ ಅಚ್ಚುಮೆಚ್ಚು. ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ. ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ.


ಥಂಡೈ ತೀರ್ಥ ಸೇವನೆ:
ಈ ದಿನ ಭಕ್ತರು ಭಂಗಿ, ಬಾದಾಮಿ ಹಾಗೂ ಹಾಲಿನಿಂದ ತಯಾರಿಸಿದ "ಥಂಡೈ" ಪಾನೀಯವನ್ನು ವಿರಾಗಿಯಾದ ಶಿವನಿಗೆ ಅರ್ಪಿಸಿ, ಪ್ರಸಾದವಾಗಿ ಸ್ವೀಕರಿಸುವ ಪದ್ಧತಿ ಉತ್ತರ ಭಾರತದ ಕೆಲವೆಡೆ ಇದೆ. ಭಕ್ತರು ಈ ದಿನದಂದು ನಟರಾಜ ಪ್ರತಿಮೆ, ಶಿವನ ಮುಖಪುಟ ಹೊಂದಿದ ಕ್ಯಾಲೆಂಡರ್, ಶಿವಲಿಂಗಗಳನ್ನು ಸ್ನೇಹಿತರಿಗೆ ಕಾಣಿಕೆಯಾಗಿ ನೀಡುತ್ತಾರೆ. ಈ ದಿನ ಉಪವಾಸ ಇರುವುದರಿಂದ ಹಣ್ಣುಗಳನ್ನು ಕಾಣಿಕೆಯಾಗಿ ನೀಡುವ ವಾಡಿಕೆಯೂ ಇದೆ. ಬದರಿನಾಥ, ಕೈಲಾಸನಾಥ, ಅಮರನಾಥಗಳಿಗೆ ಯಾತ್ರೆ ಕೈಗೊಳ್ಳಲು ಇದು ಸುಸಮಯ.ಜ್ಯೋತಿರ್ಲಿಂಗ, ಪರಶಿವನ ಅವಿಭಾಜ್ಯ ಅಂಗ:
ಸ್ವಯಂಭೂಗಳೆಂದು ಕರೆಯಲ್ಪಡುವ ಜ್ಯೋತಿರ್ಲಿಂಗಗಳ ಪೂಜೆ ಭಾರತದಲ್ಲಿನ ಶಿವರಾತ್ರಿ ಪೂಜೆಯ ಪ್ರಮುಖ ಆಕರ್ಷಣೆಗಳಲ್ಲೊಂದು. ಶಿವಪುರಾಣದ ಪ್ರಕಾರ 12 ಜ್ಯೋತಿರ್ಲಿಂಗಗಳು ಶ್ರೇಷ್ಠ, ಸಾಕ್ಷಾತ್ ಶಿವನ ಪ್ರತಿರೂಪ. ಆರಿದ್ರಾ ನಕ್ಷತ್ರದ ಶುಭಮುಹೂರ್ತದಲ್ಲಿ ಶಿವ ಮೊಟ್ಟ ಮೊದಲ ಬಾರಿಗೆ ಜ್ಯೋತಿರ್ಲಿಂಗಗಳ ರೂಪದಲ್ಲಿ ಕಾಣಿಸಿಕೊಂಡ ಎಂಬುದು ಪ್ರತೀತಿ. ಗುಜರಾತ್ನ ಸೋಮನಾಥ, ಆಂಧ್ರ ಪ್ರದೇಶದ ಶ್ರೀಶೈಲಂನ ಮಲ್ಲಿಕಾರ್ಜುನ, ಮಧ್ಯಪ್ರದೇಶ ಉಜ್ಜಯಿನಿಯ ಮಹಾಕಾಳೇಶ್ವರ, ಮಧ್ಯಪ್ರದೇಶದ ನರ್ಮದಾ ನದಿಯ ದ್ವೀಪದಲ್ಲಿ ನೆಲೆಗೊಂಡ ಓಂಕಾರೇಶ್ವರ, ಉತ್ತರಾಖಂಡ್ನ ಕೇದಾರನಾಥ, ಮಹಾರಾಷ್ಟ್ರದ ಪುಣೆ ಸಮೀಪದ ಭೀಮಾಶಂಕರ, ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ, ನಾಸಿಕ್ನ ತ್ರಯಂಬಕೇಶ್ವರ, ಜಾರ್ಖಂಡ್ನ ವೈದ್ಯನಾಥ, ಗುಜರಾತ್ನ ದ್ವಾರಕೆಯ ನಾಗೇಶ್ವರ, ತಮಿಳುನಾಡು ರಾಮೇಶ್ವರಂನ ರಾಮೇಶ್ವರ, ಮಹಾರಾಷ್ಟ್ರದ ಎಲ್ಲೋರಾ ಸಮೀಪದ ಗೃಷ್ಣೇಶ್ವರಗಳನ್ನು ಜ್ಯೋತಿರ್ಲಿಂಗಗಳೆಂದು ಕರೆಯಲಾಗುತ್ತದೆ.ಗೋಕರ್ಣ, ಸೋಮೇಶ್ವರ, ಮಹದೇಶ್ವರ, ಮುರ್ಡೇಶ್ವರಗಳಲ್ಲಿ ವಿಶೇಷ ಪೂಜೆ:
ದಕ್ಷಿಣದ ಕಾಶಿ ಎಂದೇ ಕರೆಯಲಾಗುವ ಗೋಕರ್ಣದ ಮಹಾಬಲೇಶ್ವರನಿಗೆ ಈ ದಿನ ವಿಶೇಷ ಪೂಜೆ ನಡೆಯುತ್ತದೆ. 9 ದಿನಗಳ ಪರ್ಯಂತ ಪಾಲ್ಕಿ ಉತ್ಸವ, ಯಂತ್ರೋತ್ಸವ, ಸಿಂಹೋತ್ಸವ, ಮಯೂರೋತ್ಸವ, ಜಲನೋತ್ಸವ ಹಾಗೂ 5 ಪುಷ್ಪರಥ ಮತ್ತು 2 ಚಿಕ್ಕ ರಥೋತ್ಸವಗಳು ನಡೆಯಲಿವೆ. ಶಿವರಾತ್ರಿಯಂದು ಮಹಾಕುಂಬಾಭಿಷೇಕ ಪೂರ್ವಕ ಪಂಚಾಮೃತ, ರುದ್ರಾಭಿಷೇಕ, ಮಯೂರ ಯಂತ್ರೋತ್ಸವ, ಜಲನೋತ್ಸವ, ದೀಪೋತ್ಸವ, ಪುಷ್ಪರಥೋತ್ಸವಗಳು ನಡೆಯಲಿವೆ. ಕೋಲಾರದ ಕೋಟಿ ಲಿಂಗೇಶ್ವರದಲ್ಲಿರುವ 108 ಅಡಿಗಳ ಶಿವಲಿಂಗ, ವಿಶ್ವದ ಬೃಹತ್ ಶಿವಲಿಂಗ ಎಂಬ ಖ್ಯಾತಿಗೆ ಒಳಗಾಗಿದೆ. ಶಿವರಾತ್ರಿಯಂದು ಇಲ್ಲಿನ ಸಹಸ್ರಲಿಂಗಕ್ಕೆ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ.ಅಂತಾರಾಷ್ಟ್ರೀಯ ಐಎಸ್ಓ ಮಾನ್ಯತೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ೆ. 19ರಿಂದ 23ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಮುರ್ಡೇಶ್ವರ ಸೇರಿದಂತೆ ರಾಜ್ಯದೆಲ್ಲೆಡೆಯ ಶಿವ ದೇವಾಲಯಗಳಲ್ಲಿ ಈ ದಿನದಂದು ವಿಶೇಷ ಪೂಜೆ ನಡೆಯುತ್ತದೆ.
ಶಿವರಾತ್ರಿಯಂದು ಧಾರವಾಡ ಸಮೀಪದ ಶ್ರೀಕ್ಷೇತ್ರ ಸೋಮೇಶ್ವರದಲ್ಲಿನ ಉದ್ಭವ ಲಿಂಗದ ದರ್ಶನ ಮಾಡಿ ಪ್ರಾರ್ಥಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಪ್ರತೀತಿ. ದೇವಾಲಯದ ಮುಂದಿರುವ ಆಗಸ್ತ್ಯ ಪುಷ್ಕರಣಿಯ ನೀರಿನಿಂದ ಉದ್ಭವ ಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಹಿಂದಕ್ಕೆ ಅಗಸ್ತ್ಯ ಮಹರ್ಷಿಗಳು ಧರ್ಮಪತ್ನಿ ಲೋಪಾಮುದ್ರೆ ಜತೆ ತೀರ್ಥಯಾತ್ರೆಗೆ ಹೊರಟು ಇಲ್ಲಿಗೆ ಬಂದಿದ್ದರಂತೆ. ಮರುದಿನವೇ ಮಹಾ ಶಿವರಾತ್ರಿ. ಅಂದು ಕಾಶಿ ವಿಶ್ವನಾಥನ ದರ್ಶನ ಮಾಡುವ ಅಪೇಕ್ಷೆ ಅವರದ್ದಾಗಿತ್ತು. ಆದರೆ, ಅಷ್ಟು ದೂರ ಒಂದೇ ದಿನ ಕ್ರಮಿಸಲು ಅಸಾಧ್ಯ ಎಂದರಿತ ಲೋಪಾಮುದ್ರೆ ಚಿಂತಿತಳಾಗುತ್ತಾಳೆ. ಇದನ್ನರಿತ ಅಗಸ್ತ್ಯರು ಶಾಲ್ಮಲಾ ನದಿಯಲ್ಲಿ ಸ್ನಾನ ಮಾಡಿ ಪರಮೇಶ್ವರನನ್ನು ಧ್ಯಾನಿಸುತ್ತಾರೆ. ಅಲ್ಲಿಯೇ ಈ ದಂಪತಿಗೆ ಕಾಶಿ ವಿಶ್ವನಾಥನ ದರ್ಶನವಾಗುತ್ತದೆ. ಇಷ್ಟೇ ಅಲ್ಲ, ಈಶ್ವರ ಲಿಂಗವೂ ಉದ್ಭವಿಸುತ್ತದೆ. ಕಾಶಿಗೆ ತೆರಳಲು ಸಾಧ್ಯವಾಗದವರು ಈ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಿದರೆ ಕಾಶಿಗೆ ಹೋದಷ್ಟೇ ಪುಣ್ಯ ಬರುತ್ತದೆ ಎಂಬುದು ಕ್ಷೇತ್ರ ಮಹಿಮೆ. ಶಾಲ್ಮಲಾ ನದಿಯ ಉಗಮ ಸ್ಥಾನವಾದ ಈ ಪುಣ್ಯಸ್ಥಳ ಅಗಸ್ತ್ಯ ಮಹರ್ಷಿಗಳು ತಪಸ್ಸುಗೈದ ಪುಣ್ಯಭೂಮಿ ಎನ್ನುತ್ತದೆ ಸ್ಥಳಪುರಾಣ.
ಬಾಗಲಕೋಟೆ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರ ಕೂಡಲಸಂಗಮದ ಸಂಗಮನಾಥನಿಗೆ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುವ ಕಾರಣ ಸಾವಿರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ ಕೆರೆಯ ಮಧ್ಯದಲ್ಲಿ ಭಾರಿ ಗಾತ್ರದ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಶಿವಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಕವಳಾ, ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಸುಂದರವಾದ ಅರಣ್ಯ ಪ್ರದೇಶದಲ್ಲಿರುವ ಗುಹೆ. ಸುತ್ತಲೂ ಅರಣ್ಯ ಪ್ರದೇಶದಿಂದ ಸುತ್ತುವರಿದ ದಟ್ಟ ಹಸಿರು, ಪಕ್ಕದಲ್ಲೇ ನಾಗಝರಿ ಕಣಿವೆಯ ಸುಂದರ ದೃಶ್ಯ, ನಿಸರ್ಗ ಪ್ರೇಮಿಗಳಿಗೆ ಉಲ್ಲಾಸದ ತಾಣವಿದು. ಇಂತಹ ಸುಂದರ ಪ್ರಕೃತಿ ಮಡಿಲಿನಲ್ಲಿ ಕವಳಾಗುಹೆ ಇದ್ದು,  ಶಿವರಾತ್ರಿಯಂದು ಈ ಗುಹೆಯಲ್ಲಿರುವ ಶಿವಲಿಂಗ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರು ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಶಿಲೆಗಳಿಂದ ಆವೃತವಾಗಿರುವ ಈ ಗುಹೆ ನೋಡಲು ಆಕರ್ಷಕವಾಗಿದೆ. ಗುಹೆಯ ಒಳಗಡೆ ಪ್ರವೇಶಿಸಿದಂತೆ ಬೃಹದಾಕಾರದ ಲಿಂಗ ದರ್ಶನವಾಗುತ್ತದೆ. ಸುತ್ತಲೂ ಗಣೇಶ, ಲಕ್ಷ್ಮೀ ಹಾಗೂ ಇನ್ನಿತರ ದೇವರ ಮೂರ್ತಿಗಳಿವೆ. ನಿಸರ್ಗ ನಿರ್ಮಿತ ಈ ಕವಳಾ ಗುಹೆಯನ್ನು ಒಂದು ದ್ವಾರದಿಂದ ಪ್ರವೇಶಿಸಿ ಇನ್ನೊಂದು ದ್ವಾರದಿಂದ  ಹೊರಬರಬಹುದು. ಈ ಗುಹೆಯಲ್ಲಿ ಗೋಕರ್ಣ, ಕಾಶಿ, ಗಯಾ ಹೀಗೆ ಹಲವು ಪುಣ್ಯ ಕ್ಷೇತ್ರಗಳನ್ನು ಸಂಪರ್ಕಿಸಲು ಪ್ರತ್ಯೇಕ ದಾರಿಗಳಿವೆ ಎನ್ನುತ್ತಾರೆ ಶಿವಭಕ್ತರು.
 ಕವಳಾ ಗುಹೆಯನ್ನು ಒಮ್ಮೆ ನೋಡಿ ಶಿವಲಿಂಗ ದರ್ಶನ ಪಡೆದರೆ ಸಾಲದು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮೂರು ಬಾರಿ ಈ ಗುಹೆಯ ದರ್ಶನ ಪಡೆಯಬೇಕೆಂಬ ಪ್ರತೀತಿ ಇದೆ. ನೂರಾರು ಮೆಟ್ಟಿಲುಗಳನ್ನು ಹತ್ತಿದರೆ ಮಾತ್ರ ದರ್ಶನ ಪಡೆಯಬಹುದಾದ ಈ ಗುಹೆಯಲ್ಲಿ ಸಂಪೂರ್ಣ ಕತ್ತಲು ಆವರಿಸಿದ್ದು, ಶಿವರಾತ್ರಿಯಂದು ಮಾತ್ರ ಕೆಪಿಸಿಯವರು ವಿದ್ಯುತ್ ಸೌಲಭ್ಯ ಒದಗಿಸುತ್ತಾರೆ. ಉಳಿದ ದಿನಗಳಲ್ಲಿ ವನ್ಯಜೀವಿ ಇಲಾಖೆಯಿಂದ ಪರವಾನಿಗೆ ಪಡೆದ ಪ್ರವಾಸಿಗರಿಗಷ್ಟೇ ಪ್ರವೇಶ. ಯಾವುದೇ ಊರಿನಿಂದ ಬಂದರೂ ಮುಖ್ಯವಾಗಿ ಪಣಸೋಲಿ ಗ್ರಾಮದ ಮೂಲಕವೇ ಸಾಗುವ ಕಚ್ಚಾ ರಸ್ತೆಯಲ್ಲಿ ಸಾಗಬೇಕು. 
ನದೀಶ್ವರನಿಗೆ ವಿಶೇಷ ಪೂಜೆ: ಅಂಕೋಲಾ ತಾಲೂಕಿನ ಹಟ್ಟಿಕೇರಿ ಬಳಿ ಸಮುದ್ರದ ಹಿನ್ನೀರಿನಿಂದ ಆವೃತವಾದ ಶಿವಲಿಂಗ ನದೀಶ್ವರ. ಇಲ್ಲಿ ಶಿವರಾತ್ರಿಯಂದು ಶಿವನಿಗೆ ವಿಶೇಷ ಪೂಜೆ ನಡೆಯುತ್ತದೆ. 

ವಿಶಿಷ್ಟ ಕೆಂಪು ಶಿಲೆ ಈಶ್ವರಲಿಂಗ
ಈಶ್ವರ ಲಿಂಗಗಳು ಸಾಮಾನ್ಯವಾಗಿ ಕಪ್ಪು ಶಿಲೆಗಳಿಂದ ಕೂಡಿದ್ದರೆ, ಧಾರವಾಡ ತಾಲೂಕಿನ ಐತಿಹಾಸಿಕ ಗ್ರಾಮ ಅಮ್ಮಿನಬಾವಿಯಲ್ಲಿನ ಕಲ್ಮೇಶ್ವರ ದೇವಾಲಯದ ಶಿವಲಿಂಗ ಕೆಂಪು ಶಿಲೆಯಿಂದ ರಚಿತವಾಗಿದೆ. ಕೆಳಗಿನ ಪೀಠ ಮತ್ತು ಪಾನಬಟ್ಟಲು ಕಪ್ಪು ಶಿಲೆಯಿಂದ ಕೂಡಿದ್ದು, ಮೇಲೆ ಇರುವ ಪೃಥ್ವಿ (ವಿಶ್ವದ) ಆಕಾರದ ಶಿವಲಿಂಗ ಮಾತ್ರ ಕೆಂಪು ಶಿಲೆಯಲ್ಲಿದೆ. ಶಿವಲಿಂಗದ ಕಪ್ಪು ಶಿಲೆಯ ಪೀಠದ ಮೇಲಿರುವ ಪಾನಬಟ್ಟಲದ ಮಧ್ಯದಲ್ಲಿ ಅಳವಡಿಸಲಾಗಿರುವ ಈ ಕೆಂಪು ಶಿಲೆಯ ಶಿವಲಿಂಗ ನೇರವಾಗಿರದೆ ಹಿಂಭಾಗದಲ್ಲಿ ಸಣ್ಣ ತಗ್ಗಿನಂತಿದ್ದು, ಸ್ವಲ್ಪ ವಕ್ರವಾಗಿದೆ. ಈ ರೀತಿಯ ಕೆಂಪು ಬಣ್ಣದ ಶಿಲೆಯ ಈಶ್ವರಲಿಂಗ ದೇಶದ ಇತರೆಡೆ ಎಲ್ಲಿಯೂ ಕಾಣಲಿಕ್ಕೆ ಸಿಗದು.
ಸಾವಿರಾರು ವರ್ಷಗಳ ಹಿಂದೆ ಓರ್ವ ಋಷಿ ಇಲ್ಲಿ ವಾಸವಾಗಿದ್ದ. ಆತ ತಪಸ್ಸು ಮಾಡುತ್ತಿದ್ದಾಗ ಕುಟೀರದ ಪಕ್ಕದಲ್ಲಿ ಒಂದು ಅಪೂರ್ವ ಕೆಂಪು ಬಣ್ಣದ ಶಿಲೆಯೊಂದನ್ನು ಗಮನಿಸಿ, ಇದು ದೈವಾಂಶ ಹೊಂದಿದೆ ಎಂದು ಗುರುತಿಸಿ ಅದನ್ನು ಪೂಜಿಸತೊಡಗಿದ. ಋಷಿಯಿಂದ ಪೂಜಿಸಲ್ಪಟ್ಟ ಶಿಲೆ ಕಾಲಾಂತರದಲ್ಲಿ ಇಷ್ಟಾರ್ಥ ನೇರವೇರಿಸುವ ಆರಾಧ್ಯದೈವವಾಗಿ ಮಾರ್ಪಟ್ಟು ಅಸಂಖ್ಯ ಭಕ್ತರನ್ನು ಸೆಳೆಯುತ್ತಿದೆ. ಒಂದು ಕೆಂಪು ಕಲ್ಲು  (ಶಿಲೆ) ಈಶ್ವರನ ರೂಪದಲ್ಲಿ ಕಂಡಿದ್ದರಿಂದ ಅದಕ್ಕೆ "ಕಲ್ಲ್ಮೇಶ್ವರ" ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಭಕ್ತರದ್ದು. ಮನಸ್ಸಿನ ಇಷ್ಟಗಳನ್ನು ಈಡೇರಿಸುವ ಶಕ್ತಿ ಸಂಚಯನ ಹೊಂದಿರುವ ಈ ಶಿವಲಿಂಗದ ಸಾನ್ನಿಧ್ಯದಲ್ಲಿ ಮಾಡಿಕೊಳ್ಳುವ ಸಂಕಲ್ಪಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ಶಿವರಾತ್ರಿಯಂದು ಇಲ್ಲಿ ಏಕಾದಶ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಅಲಂಕಾರ ಪೂಜೆ ಸೇರಿದಂತೆ ಭಜನಾ ಮಂಡಳಿ ಕಾರ್ಯಕ್ರಮ ನಡೆಯುತ್ತದೆ. 


ಅಭಿಷೇಕದ ನೀರಿಗಾಗಿ ಕಾಲ್ನಡಿಗೆಯಲ್ಲಿ 70 ಕಿ.ಮೀ. ಪಯಣಿಸುವ ಭಕ್ತರು
ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದ ಆರು ಕುಟುಂಬದವರು ಶಿವರಾತ್ರಿ ಆಚರಿಸೋದು ಬಲು ವಿಶಿಷ್ಟ. ಇಲ್ಲಿನ ಸಿದ್ಧರಾಮೇಶ್ವರ ದೇವಾಲಯದ ಶಿವಲಿಂಗಕ್ಕೆ ಶಿವರಾತ್ರಿಯಂದು ಅಭಿಷೇಕ ಮಾಡಲು ಅವರು ಕಪಿಲಾ ನದಿಯಿಂದ ನೀರು ತರುತ್ತಾರೆ. ತಮ್ಮೂರಿನಿಂದ ತಾಮ್ರದ ಬಿಂದಿಗೆ ತೆಗೆದುಕೊಂಡು ಬರಿಗಾಲಿನಲ್ಲೇ ನಡೆದು ಹೋಗಿ, ಅಲ್ಲಿ ನೀರು ತುಂಬಿಸಿಕೊಂಡು ತಲೆಯ ಮೇಲೆ ಬಿಂದಿಗೆ ಹೊತ್ತು ನೀರು ತರುತ್ತಾರೆ. ಹೀಗೆ ಹೋಗಿ ಬರುವ ಹಾದಿಯ ಒಟ್ಟು ದೂರ ಸರಿಸುಮಾರು 70 ಕಿ.ಮೀ.!
ಗ್ರಾಮದ ಕುಳ್ಳಮಾದಯ್ಯನ ಬಸಪ್ಪ, ಕರೇಗಾರ್ ವೀರಪ್ಪನ ಶಿವನಂಜಪ್ಪ, ದೇವನೂರು ಮಾದಯ್ಯನ ಸಿದ್ದಪ್ಪನ ಶಿವಮಲ್ಲಪ್ಪ, ಬುರುಗರಹುಂಡಿ ವೀರಪ್ಪನ ಶಿವಮಲ್ಲಪ್ಪ, ಅಂಗಾರಿಕೆ ಮಾದಪ್ಪನ ಬಸಪ್ಪ, ಹಿಂದಲಹಟ್ಟಿ ಬಸಪ್ಪನ ಗುರುಲಿಂಗಪ್ಪನವರ ಕುಟುಂಬಕ್ಕೆ ಸೇರಿದ ಆರು ಮಂದಿ ಈ ವಿಶಿಷ್ಟ ಆಚರಣೆಯನ್ನು ತಲಾತಲಾಂತರದಿಂದ ಆಚರಿಸಿಕೊಂಡು ಬಂದಿದ್ದಾರೆ.
ಹೊತ್ತು ಮೂಡುವ ಮುನ್ನವೇ ಕಾಲ್ನಡಿಗೆ ಮೂಲಕ ಇವರು ನಗರ್ಲೆ ಗ್ರಾಮದ ಬಳಿಯ ಕಪಿಲಾ ನದಿ ತೀರ ತಲುಪುತ್ತಾರೆ. ಅಲ್ಲಿ ಸ್ನಾನ, ಮಡಿ, ಪೂಜೆ ಮುಗಿಸಿ ತಾಮ್ರದ ಬಿಂದಿಗೆಯಲ್ಲಿ ಕಪಿಲಾ ನದಿ ನೀರು ಹೊತ್ತು ಊರಿನತ್ತ ಮರಳುತ್ತಾರೆ. ಅಲ್ಲಿಂದ ಹನಿಯಂಬಳ್ಳಿ ಎಂಬ ಗ್ರಾಮಕ್ಕೆ ಬಂದು ಅಲ್ಲಿ ನಿಂಗಮ್ಮ ಎಂಬುವರ ಮನೆಯಲ್ಲಿ ಪಾಯಸದ ಊಟದ ಪ್ರಸಾದ ಸ್ವೀಕರಿಸುತ್ತಾರೆ. ನಂತರ ಅಲ್ಲಿಂದ ಹೊರಟು ದೇವನೂರು ಮಠಕ್ಕೆ ಬಂದು ಅಲ್ಲಿ ಬಿಂದಿಗೆ ಇಳಿಸಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿಂದ ಕೌಲಂದೆ ಮೂಲಕ ಬೆಂಡರವಾಡಿಗೆ ಬಂದು ಅಲ್ಲಿ ಕಲ್ಲುಮಂಟಪದ ಬಳಿ ಬಿಂದಿಗೆ ಇಳಿಸಿ ಐದು ನಿಮಿಷ ವಿಶ್ರಮಿಸಿಕೊಳ್ಳುತ್ತಾರೆ. ಹೀಗೆ ಮೂರು ಕಡೆ ಮಾತ್ರ ತಲೆಯಿಂದ ಬಿಂದಿಗೆ ಇಳಿಸಲು ಅವಕಾಶ.
ಬೆಂಡರವಾಡಿಯಿಂದ ಹೊರಟು ಮುತ್ತಿಗೆ ಗ್ರಾಮದವರೆಗೆ ಮುಖ್ಯರಸ್ತೆಯಲ್ಲಿ ಬಂದು ಪಣ್ಯದಹುಂಡಿಗೂ ಮೊದಲೇ ಸಿಗುವ ಕಾಲುದಾರಿಯಲ್ಲಿ ಗ್ರಾಮಕ್ಕೆ ತೆರಳುತ್ತಾರೆ. ಬರಿಗಾಲಲ್ಲಿ ಹೊರಡುವ ಇವರು ಕಲ್ಲುಮುಳ್ಳು ತುಳಿದೇ ಸಾಗಬೇಕು. ಸಂಜೆಯ ವೇಳೆಗೆ ಗ್ರಾಮಕ್ಕೆ ಬಂದು ಸಿದ್ಧರಾಮೇಶ್ವರನ ಗುಡಿಯಲ್ಲಿ ಬಿಂದಿಗೆಗಳನ್ನು ಇರಿಸುತ್ತಾರೆ. ಗ್ರಾಮದ ಜನರು ಹಿರಿಯ ಕಿರಿಯ ಭೇದವಿಲ್ಲದೆ ಇವರ ಕಾಲಿಗೆ ನಮಸ್ಕರಿಸುತ್ತಾರೆ. ಶಿವರಾತ್ರಿಯ ಬೆಳಗಿನ ಜಾವ ಈ ನೀರಿನಲ್ಲಿ ಗ್ರಾಮದ ಸಿದ್ಧರಾಮೇಶ್ವರ ಲಿಂಗಕ್ಕೆ ಅಭಿಷೇಕ ನಡೆಯುತ್ತದೆ. ಅಭಿಷೇಕದ ನೀರನ್ನು ಸಣ್ಣ ಸಣ್ಣ ಚೊಂಬುಗಳಲ್ಲಿ ಮನೆಗಳಿಗೆ ತೆಗೆದುಕೊಂಡು ಹೋಗಿ ಗ್ರಾಮಸ್ಥರು ಶಿವಪೂಜೆ ಮಾಡುತ್ತಾರೆ.

ಶಿವಮಾಲೆ ಧಾರಣೆ, ನಿರಮುಡಿ ಸಮರ್ಪಣೆ:
ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ಹುಡಗಿ ಗ್ರಾಮದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಶಿವಮಾಲೆ ಧಾರಣೆ ವ್ರತ ಆಚರಣೆಯಲ್ಲಿದೆ. ನೆರೆಯ ಆಂಧ್ರದಲ್ಲಿ ಚಾಲ್ತಿಯಲ್ಲಿರುವ ವ್ರತಾಚರಣೆ ಈಗ ಜಿಲ್ಲೆಯ ಶಿವಭಕ್ತರ ಮನ ಸೆಳೆದಿದೆ. ಶಿವರಾತ್ರಿಗೂ 21 ದಿನಗಳ ಮೊದಲು ಈ ಕಠಿಣ ಮಾಲೆ ಧಾರಣೆ ವ್ರತ ಆರಂಭವಾಗುತ್ತದೆ. ಶ್ರೀಶೈಲದ ಮಂಜುನಾಥನಲ್ಲಿ ನಿರಮುಡಿಯನ್ನು ಸಮರ್ಪಣೆ ಮಾಡಲಾಗುತ್ತದೆ.
ಜನತಾ ನಗರ ಸಮೀಪದ ತೋಟದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಮಂದಿರದಲ್ಲಿ 21 ದಿನಗಳ ಶಿವಮಾಲೆ ಧಾರಣೆ ವ್ರತ ನಡೆಯುತ್ತದೆ. ದಿನವಿಡಿ ಶಿವಧಾನ್ಯದಲ್ಲಿ ಮುಳುಗಿದ್ದು, ವ್ರತವನ್ನು ಕಠಿಣವಾಗಿ ಆಚರಿಸುತ್ತಾರೆ. ಸೂರ್ಯೋದಯಕ್ಕೂ ಮೊದಲು ಸ್ನಾನ, ನಂತರ ಮಂತ್ರ ಪಠಣ ಮತ್ತು ಪೂಜೆ ನಡೆಸಿ ಲಾಹಾರ ಸೇವಿಸುತ್ತಾರೆ. ಸಂಜೆ ಸೂರ್ಯಾಸ್ತದ ನಂತರ ಮತ್ತೆ ಪೂಜೆ, ಮಂತ್ರ ಪಠಣ ಗೈದು ಉಪಹಾರ ಸೇವಿಸುತ್ತಾರೆ.
ಶಿವರಾತ್ರಿಯ ಆರು ದಿನಗಳ ಮೊದಲು "ಗಿರಿಜಾ ಕಲ್ಯಾಣ ಮಹೋತ್ಸವ" ಆಚರಿಸಲಾಗುತ್ತದೆ. ಶಿವ ಮತ್ತು ಪಾರ್ವತಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ತಾಳಿ-ಕಾಲುಂಗುರವನ್ನಿಟ್ಟು ವಿ ವಿಧಾನಗಳೊಂದಿಗೆ ಮಹೋತ್ಸವಾಚರಣೆಯನ್ನು ಆಚರಿಸಲಾಗುತ್ತದೆ. ಮಹೋತ್ಸವದ ಮರುದಿನ ಶ್ರೀಶೈಲಕ್ಕೆ ಯಾತ್ರೆ ಕೈಗೊಳ್ಳುವ ಮಾಲಾಧಾರಿಗಳು ಮೂರು ದಿನಗಳ ಕಾಲ ನಡೆಯುವ ಶಿವರಾತ್ರಿ ಮಹೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಸಂದರ್ಭದಲ್ಲಿ 21 ದಿನಗಳ ಕಾಲ ಧರಿಸಿದ ಶಿವ ಮಾಲೆಯನ್ನು ದೇವರಿಗೆ ಅರ್ಪಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ನಡೆಸುತ್ತಾರೆ.


ಯಾನಗುಂದಿಯಲ್ಲಿ ಮಾತಾ ಮಾಣಿಕೇಶ್ವರಿ ದರ್ಶನ
ಸೇಡಂ ತಾಲೂಕಿನ ಯಾನಗುಂದಿಯಲ್ಲಿ ಮಾತಾ ಮಾಣಿಕೇಶ್ವರಿಯ ದರ್ಶನ ಶಿವರಾತ್ರಿಯ ವಿಶೇಷ. ವರ್ಷವಿಡಿ ಗುಹೆಯೊಳಗಿದ್ದು, ಶಿವರಾತ್ರಿಯಂದು ದರ್ಶನ ನೀಡುವ ಮಾತಾ ಮಾಣಿಕೇಶ್ವರಿ ದರ್ಶನಕ್ಕಾಗಿ ಹೈದ್ರಾಬಾದ್ ಕರ್ನಾಟಕ, ನೆರೆಯ ಆಂಧ್ರ ಮಾತ್ರವಲ್ಲದೆ ಇತರೆಡೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶಿವರಾತ್ರಿಯಂದು ಬೆಳಗಿನ ಜಾವದಿಂದಲೇ ಭಕ್ತರು ಇಲ್ಲಿಗೆ ಬಂದು ಸೇರತೊಡಗುತ್ತಾರೆ. ಮಾಣಿಕೇಶ್ವರಿ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯೊಳಗೆ ಯಾವುದೇ ಸಮಯದಲ್ಲಾದರೂ ದರ್ಶನ ನೀಡಬಹುದು. ಮಾಣಿಕೇಶ್ವರಿ ವೈಯಕ್ತಿಕವಾಗಿ ದರ್ಶನ ನೀಡಲಿಲ್ಲವಾದರೂ ಲಕ್ಷಾಂತರ ಭಕ್ತರಿಗೆ ಏಕಕಾಲಕ್ಕೆ ಗುಡ್ಡದ ಮೇಲುಗಡೆ ನಿಂತು ದರ್ಶನ ನೀಡುತ್ತಾರೆ. ನಿತ್ಯ ಗುಹೆಯಲ್ಲಿ ಕುಳಿತು ತಪಸ್ಸು ಮಾಡುವ ಅಮ್ಮ ಯಾವುದೇ ಸಭೆ ಸಮಾರಂಭಗಳಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿರುವ ಉದಾಹರಣೆಗಳೇ ಇಲ್ಲ. ಹಾಗಾಗಿ ಅಮ್ಮನವರ ದರ್ಶನ ಒಂದು ಭಾಗ್ಯ ಎಂದು ಆಸ್ತಿಕರು ನಂಬಿಕೊಂಡಿದ್ದಾರೆ. ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಗುಹೆ ಬಿಟ್ಟು ಹೊರ ಬರುತ್ತಾರೆ. ಇತರ ದಿನಗಳಲ್ಲಿ ದರ್ಶನ ನೀಡದಿದ್ದರೂ, ಶಿವರಾತ್ರಿಯಂದು ಮಾತೆ ದರ್ಶನ ನೀಡದ ನಿದರ್ಶನಗಳಿಲ್ಲ ಎನ್ನುತ್ತಾರೆ ಭಕ್ತರು. ವಿಜಾಪುರ ಹೆದ್ರಾಬಾದ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸುಕ್ಷೇತ್ರಕ್ಕೆ ಸಾಕಷ್ಟು ಬಸ್ಸಿನ ವ್ಯವಸ್ಥೆಯಿದೆ.


ಹಿಮಾಚಲದಲ್ಲಿ ಮಂಡಿ ಶಿವರಾತ್ರಿ, ಕಾಶ್ಮೀರದಲ್ಲಿ ಹೈರತ್:
ಹಿಮಾಚಲ ಪ್ರದೇಶದ ಮಂಡಿ ಪಟ್ಟಣದಲ್ಲಿ ನಡೆಯುವ ಮಂಡಿ ಶಿವರಾತ್ರಿ ಜಾತ್ರೆ ವಿಶ್ವಪ್ರಸಿದ್ಧ. ಶಿವರಾತ್ರಿ ದಿನದಿಂದ ಮೊದಲ್ಗೊಂಡು 7 ದಿನಗಳ ಕಾಲ ಈ ಜಾತ್ರೆ ನಡೆಯುತ್ತದೆ. ಸುಮಾರು 81ಕ್ಕೂ ಹೆಚ್ಚು ದೇವಾಲಯಗಳ ತವರೂರಾದ ಮಂಡಿ ಬಿಯಾಸ್ ನದಿಯ ದಡದ ಮೇಲಿದೆ. ಮಂಡಿ ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಸುಮಾರು 200ಕ್ಕೂ ಹೆಚ್ಚು ದೇವತೆಗಳ ಸಂಗಮ ಇಲ್ಲಿನ ವಿಶೇಷ. ಇಲ್ಲಿನ ಭೂತನಾಥ ದೇವಾಲಯದ ಆವರಣದಲ್ಲಿ ಈ ಜಾತ್ರೆ ನಡೆಯುತ್ತದೆ.
ಮಧ್ಯಪ್ರದೇಶದ ಬುಂದೇಲ್ ಖಂಡ್ನ ಮಾತಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ 10 ದಿನಗಳ ಕಾಲ ನಡೆಯುವ ಜಾತ್ರೆ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು. ಒರಿಸ್ಸಾದ ಪುರಿಯಲ್ಲಿನ ಲೋಕನಾಥ ದೇವಾಲಯದಲ್ಲಿ ಈ ದಿನ ವಿಶೇಷ ಪೂಜೆ ನಡೆಯುತ್ತದೆ. ಕೋಲ್ಕೊತಾದಿಂದ 57 ಕಿ.ಮೀ. ದೂರವಿರುವ ತಾರಕೇಶ್ವರನಿಗೆ ಭಕ್ತರು ಕಾಲು ನಡಿಗೆಯಲ್ಲಿಯೇ ಗಂಗಾ ನೀರನ್ನು ಒಯ್ದು ಅಭಿಷೇಕ ಮಾಡುವುದು ಶಿವರಾತ್ರಿ ಆಚರಣೆಯ ವಿಶೇಷಗಳಲ್ಲೊಂದು. ಶಿವರಾತ್ರಿ ಪ್ರಯುಕ್ತ ಗುಜರಾತ್ನ ದಾಮೋದರ್ ಕುಂದ್ ಸಮೀಪ ನಡೆಯುವ ಭಾವನಾಥ ಮಹಾದೇವನ ಜಾತ್ರೆಯಲ್ಲಿ ನಾಗಾ ಸಾಧುಗಳು ಪ್ರಮುಖ ಆಕರ್ಷಣೆ. 
ಹೈರತ್ ಎಂದು ಕರೆಯಲಾಗುವ ಶಿವರಾತ್ರಿಯನ್ನು ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಬ್ರಾಹ್ಮಣರು ವಿಶಿಷ್ಠ ರೀತಿಯಲ್ಲಿ ಆಚರಿಸುತ್ತಾರೆ. ಇಲ್ಲಿನ ಆಚರಣೆ 21 ದಿನಗಳ ಕಾಲ ನಡೆಯುತ್ತದೆ. ಆಚರಣೆಯ ಅಂಗವಾಗಿ ಎರಡು ಮಡಿಕೆಗಳಲ್ಲಿ ನೀರು ತುಂಬಿಸಿ ಅದರಲ್ಲಿ ಆಕ್ರೋಟುಕಾಯಿಯನ್ನು ಇಡಲಾಗುತ್ತದೆ. ಅದನ್ನು ಪೂಜಿಸಿ, ಅಮವಾಸ್ಯೆಯಂದು ಅದನ್ನು ತೆಗೆದು ಪ್ರಸಾದವಾಗಿ ಸ್ನೇಹಿತರು, ಬಂಧು ಬಾಂಧವರಿಗೆ ಹಂಚುತ್ತಾರೆ. ಮಕ್ಕಳಿಗೆ, ಪತ್ನಿಗೆ, ಸಹೋದರರಿಗೆ ಕಾಣಿಕೆ ನೀಡುವುದು ಹಬ್ಬದ ಆಚರಣೆಯ ರೂಢಿ. ಹಬ್ಬದ ಮರುದಿನ ಸಾಗರದ ಚಿಪ್ಪುಗಳನ್ನು ಬಳಸಿ ಆಡುವ "ಹಾರ್" ಆಟ ಇಲ್ಲಿನ ವಿಶೇಷ. ಸೀಯರು ಕಾಣಿಕೆ ಪಡೆಯಲು ಈ ದಿನ ತವರು ಮನೆಗೆ ತೆರಳುವುದು ಹಬ್ಬದ ಆಚರಣೆಯ ಒಂದು ಸಂಪ್ರದಾಯ. 


ಮಾರಿಷಸ್ನ "ಗಂಗಾ ತಲೊವಾ"ದಲ್ಲಿ ಶಿವರಾತ್ರಿಯಂದು ಭಕ್ತರ ದಂಡು
ಶಿವರಾತ್ರಿ ನೇಪಾಳದ ಬಹು ದೊಡ್ಡ ಹಬ್ಬ. ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ಈ ದಿನ ವಿಶೇಷ ಪೂಜೆ ನಡೆಯುತ್ತದೆ. ಶಿವರಾತ್ರಿಯ ದಿನ ಮಕ್ಕಳು ರಸ್ತೆಗಳಲ್ಲಿ ಹಗ್ಗದ ತಡೆ ನಿರ್ಮಿಸಿ, ವಾಹನ ಚಾಲಕರಿಂದ, ಪಾದಚಾರಿಗಳಿಂದ ದಕ್ಷಿಣೆ ಪಡೆದು ಶಿವಪೂಜೆ ಮಾಡುವುದು ಇಲ್ಲಿನ ವಾಡಿಕೆ. ಹಸುಗಳ ಸಗಣಿ ಸುಟ್ಟು ಹವನ ಮಾಡುವುದು ಇಲ್ಲಿಗೆ ಆಗಮಿಸುವ ಸಾಧುಗಳ ಶಿವರಾತ್ರಿ ಆಚರಣೆಗಳಲ್ಲೊಂದು. 
ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಕಟಾಸ್ನ ಶಿವದೇವಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಶಿವರಾತ್ರಿ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಮಾರಿಷಸ್ನಲ್ಲಿ ಹಿಂದೂಗಳು ಮೂರು ದಿನಗಳ ಕಾಲ ಶಿವರಾತ್ರಿ ಆಚರಿಸುತ್ತಾರೆ. ಇಲ್ಲಿನ ದ್ವೀಪ ಪ್ರದೇಶ "ಗಂಗಾ ತಲೊವಾ"ದಲ್ಲಿನ ಉಮಾನಾಥ ಮಂದಿರದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ನಡೆಯುವ ಭಜನೆ, ಪೂಜೆಗಳು ಸಾವಿರಾರು ಸಂಖ್ಯೆಯ ಹಿಂದೂ ಭಕ್ತರನ್ನು ಸೆಳೆಯುತ್ತವೆ. 108 ವರ್ಷಗಳ ಹಿಂದೆ ಪಂಡಿತ್ ಗೊಸಾಯಿನ್ ನೈಪಾಲ್ ಕಂಡು ಹಿಡಿದ ಈ ದ್ವೀಪ "ಗಂಗಾ ತಲೊವಾ" ಎಂದೇ ಪ್ರಸಿದ್ಧ. ಇಡೀ ದ್ವೀಪ ಶಿವರಾತ್ರಿಯಂದು ಸಡಗರ, ಸಂಭ್ರಮಗಳಿಂದ ನಲಿಯುತ್ತದೆ. ರಾಷ್ಟ್ರದ ವಿವಿಧ ಭಾಗಗಳಿಂದ ಮೆರವಣಿಗೆಯಲ್ಲಿ ಸಾಗಿ ಬರುವ "ಕನ್ವಾರ್ಸ್" ರಥ ಇಲ್ಲಿಯೇ ಸಮ್ಮೀಳನಗೊಳ್ಳುತ್ತದೆ. ಶಿವರಾತ್ರಿಯಂದು ಶಿವನಿಗೆ ಬೆಲ್ಲ, ಕಬ್ಬು ಮತ್ತು ಲಾಡನ್ನು ನೈವೇದ್ಯ ಮಾಡುವ ಪದ್ಧತಿ ಫಿಜಿಯಲ್ಲಿದೆ.  

ಶಿವನಿಲ್ಲಿ ಅನಾಥ, ಪೂಜೆಯಿಂದ ವಂಚಿತ:
ಬಾಗಲಕೋಟೆ ಜಿಲ್ಲೆಯಲ್ಲಿ ಚಾಲುಕ್ಯರ ಕಾಲಕ್ಕೆ ಸೇರಿದ ನೂರಾರು ಶಿವಾಲಯಗಳಿದ್ದರೂ, ಬಹುತೇಕ ಶಿವಲಿಂಗಗಳು ಪೂಜೆ ಇಲ್ಲದೇ ಅನಾಥವಾಗಿವೆ. ಕಾಯಕಲ್ಪಕ್ಕಾಗಿ ಕಾದು ಕೂತಿವೆ. ಬಾದಾಮಿ ಚಾಲುಕ್ಯರ ಕಾಲದಲ್ಲಿ ಶ್ರೀಮಂತವಾಗಿದ್ದ ಈ ಭಾಗದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಹಾಕೂಟಗಳಂಥ ತಾಣಗಳಲ್ಲಿ ಹತ್ತು ಹಲವು ಶಿವಲಿಂಗಗಳು ಎಣ್ಣೆಬತ್ತಿಗೂ ಗತಿ ಇಲ್ಲದೇ ಬಳಲುತ್ತಿವೆ. ಸ್ವಾತಂತ್ರಾನಂತರ ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಗೆ ಬಂದಿರುವ ಇಲ್ಲಿನ ದೇವಾಲಯಗಳಲ್ಲಿ ನಿತ್ಯದ ಪೂಜೆಗೆ ನಿಷೇಧ ಹೇರಲಾಗಿದೆ. ಕೆಲವೇ ಕೆಲವು ದೇವಾಲಯಗಳ ಶಿವಲಿಂಗಗಳಿಗೆ ಪ್ರತಿದಿನ ಒಮ್ಮೆ ಪೂಜೆ ಕಾಣುವ ಭಾಗ್ಯವಿದ್ದರೆ, ಬಹುತೇಕ ಶಿವಲಿಂಗಗಳಿಗೆ ಈ ಭಾಗ್ಯವಿಲ್ಲ. ನಿತ್ಯವೂ ನಿರಂತರ ಪೂಜೆ ನಡೆಸಿದರೆ ಲಿಂಗಗಳಿಗೆ ಹಾನಿ ಎಂಬ ಕಾರಣಕ್ಕೆ ಇಲ್ಲಿನ ಶಿವ ಲಿಂಗಗಳಿಗೆ ಪೂಜೆ ಮಾಡಲಾಗುತ್ತಿಲ್ಲ ಎಂಬ ಅಳಲು ಶಿವಭಕ್ತರದು.
ಬಾದಾಮಿಯ ಮೇಣದ ಬಸದಿ ಎಂಬ ಗುಹಾಂತರ ದೇವಾಲಯದಲ್ಲಿ ಭಾರಿ ಗಾತ್ರದ ಶಿವಲಿಂಗವಿದ್ದು, ಕನಿಷ್ಠ ಬೆಳಕಿನ ವ್ಯವಸ್ಥೆಯೂ ಇಲ್ಲ. ವೀಕ್ಷಣೆಗೆ ಬರುವ ಪ್ರವಾಸಿಗರು ಚಪ್ಪಲಿ ಹಾಕಿಕೊಂಡೇ ಶಿವಾಲಯದ ಗರ್ಭಗುಡಿಗೆ ಒಳಹೋಗುವ ದು:ಸ್ಥಿತಿ ಇದೆ. ಇದೇ ದೇವಾಲಯದ ಹೊರವಲಯದಲ್ಲಿ ಕೇವಲ 3.5 ಇಂಚ್ನ ಅಪರೂಪದ ಶಿವಲಿಂಗವೂ ಇದೆ. 
ಮಹಾಕೂಟದ ಮಹಾಕೂಟೇಶ್ವರ ದೇವಾಲಯದ ಆವರಣದಲ್ಲಿ ಸುಮಾರು 10ಕ್ಕೂ ಹೆಚ್ಚು ಶಿವಲಿಂಗಗಳನ್ನು ಸಾಲಾಗಿ ನಿರ್ಮಿಸಿರುವುದು ಅಪರೂಪದ್ದು. ಮಹಾಕೂಟದಲ್ಲಿ ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ 25 ಶಿವದೇವಾಲಯಗಳು, ದೇವಾಲಯಗಳ ಹೊರಾವರಣದಲ್ಲಿ ಸುಮಾರು 8 ಶಿವಲಿಂಗಗಳು ಅನಾಥವಾಗಿ ಬಿದ್ದಿವೆ. ಕೆಲವು ಶಿವದೇವಾಲಯಗಳ ಗೊಡೆಗಳು ಭಾಗಶ: ಕುಸಿದು ಬಿದ್ದಿವೆ. ಮಹಾಕೂಟದಲ್ಲಿ ಮುದಿ ಮಲ್ಲಿಕಾರ್ಜುನ, ಮಹಾಕೂಟೇಶ್ವರ ಹಾಗೂ ಅತ್ಯಂತ ಅಪರೂಪದ ಚತುರ್ಮುಖ ಲಿಂಗಗಳಿಗೆ ಮಾತ್ರ ಪೂಜೆ ನಡೆಯುತ್ತವೆ. ಐಹೊಳೆಯಲ್ಲಿ ಒಂಬತ್ತು ಜ್ಯೋತಿರ್ಲಿಂಗಗಳಿದ್ದು, ಶಿವ ಭಕ್ತರಿಗೆ ಎಲ್ಲಾ ಲಿಂಗಗಳ ದರ್ಶನಕ್ಕೆ ಅವಕಾಶವಿದೆ.