ಯುಗಾದಿ, ಹೊಸ ಸಂವತ್ಸರಕ್ಕೆ ನಾಂದಿ


ಶಾಲಿವಾಹನ ಗತಶಕ 1934ನೇ ನಂದನ ನಾಮ ಸಂವತ್ಸರ, ಚೈತ್ರ ಶುಕ್ಲ ಪಕ್ಷ, ತಿಥಿ ಪಾಡ್ಯ. 

ಹಿಂದೂ ಧಾರ್ಮಿಕ ಪಂಚಾಗದ ಪ್ರಕಾರ ನೂತನ ಸಂವತ್ಸರದ ಮೊದಲ ದಿನ ಯುಗಾದಿ. ಪ್ರತಿ ವರುಷ ಚೈತ್ರ ಮಾಸ, ಶುಕ್ಲ ಪಕ್ಷದ ಪಾಡ್ಯದ ತಿಥಿಯಂದು ಈ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ವಸಂತ ಋತು ಆರಂಭವಾಗುವುದು ಇದೇ ದಿನ. ಹಿಂದೂಗಳಲ್ಲಿ ಯುಗಾದಿಯ ಆಚರಣೆ ಪ್ರಮುಖವಾಗಿ ಎರಡು ವಿಧ. ಮೊದಲನೆಯದು ಚಾಂದ್ರಮಾನ ಯುಗಾದಿ, ಎರಡನೆಯದು ಸೌರಮಾನ ಯುಗಾದಿ. ಚಂದ್ರನ ಚಲನೆಯನ್ನಾಧರಿಸಿ ಆಚರಿಸುವ ಯುಗಾದಿ ಚಾಂದ್ರಮಾನ ಯುಗಾದಿ. ಅಂದರೆ ಚಾಂದ್ರಮಾನ ಮಾಸರೀತ್ಯಾ ಚೈತ್ರ ಶುಕ್ಲಪಕ್ಷದ ಪಾಡ್ಯದಂದು ಯುಗಾದಿ. ಸೂರ್ಯನ ಚಲನೆಯ ಗತಿ ಆಧರಿಸಿ ಆಚರಿಸುವ ಯುಗಾದಿ ಸೌರಮಾನ ಯುಗಾದಿ. ಅಂದರೆ ಸೌರಮಾನ ಮಾಸರೀತ್ಯಾ ಮೇಷ ರಾಶಿಯ ಮೊದಲ ದಿನ.
ಇದು ಸುಗ್ಗಿ ಕಾಲದ ಕೊನೆಯಲ್ಲಿ ಬರುವ ಹಬ್ಬ. ಎಲೆಗಳನ್ನೆಲ್ಲ ಕಳಚಿಕೊಂಡು ಮತ್ತೆ ಚಿಗುರೊಡೆದು ಮರು ಜೀವ ಪಡೆಯುವ ಮರಗಳು ಪ್ರಕೃತಿಗೆ ಹೊಸ ರೂಪ, ನವೋಲ್ಲಾಸ ನೀಡುವ ಕಾಲವಿದು. ಪ್ರಕೃತಿಯಲ್ಲಿನ ಚಿಗುರಿನ ಮೋಹಕತೆ ಎಲ್ಲರ ಮನದಲ್ಲಿ, ಮನೆಗಳಲ್ಲಿ ಮೊಳಕೆ ಒಡೆಯುವ ಗಳಿಗೆ. ಚೈತ್ರ-ವಸಂತರ ಆಗಮನದ ಈ ಕಾಲ ಜನಸಾಮಾನ್ಯರಿಗೆ ಒಂಥರಾ ಖುಷಿ, ಕಚಗುಳಿ ನೀಡುವ ಕಾಲ. ಸಡಗರ, ಸಂಭ್ರಮ, ಉಲ್ಲಾಸ ನೀಡುವ ಸಮಯ.

ಪಂಚಾಂಗ ಶ್ರವಣ, ರಾಶಿಫಲದ ಹೂರಣ
ಹಬ್ಬದ ದಿನ ಮನೆಯನ್ನು ಸ್ವಚ್ಛಗೊಳಿಸಿ, ತಳಿರು-ತೋರಣ ಕಟ್ಟಿ, ಮನೆಯ ಮುಂದಿನ ಅಂಗಳದಲ್ಲಿ ರಂಗೋಲಿ ಹಾಕಲಾಗುತ್ತದೆ. ಮುಂಜಾನೆಯೇ ಅಭ್ಯಂಜನ ಸ್ನಾನ ಮಾಡಿ, ಪುಣ್ಯಾಹ ಮಂತ್ರಗಳನ್ನು ಉಚ್ಛರಿಸಿ, ಮಾವಿನೆಲೆಯಿಂದ ಕಳಸದ ನೀರನ್ನು ಎಲ್ಲಾ ಕಡೆ ಸಿಂಪಡಿಸಲಾಗುತ್ತದೆ. ದೇವಸ್ಥಾನಗಳಲ್ಲಿ ಈ ದಿನ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಮಕ್ಕಳು ಹೊಸ ಬಟ್ಟೆ ಧರಿಸಿ, ಸಂಭ್ರಮದಿಂದ ನಲಿಯುವುದು ಹಬ್ಬದ ಆಚರಣೆಗಳಲ್ಲೊಂದು. ಸೂರ್ಯ ನಮಸ್ಕಾರ, ನೂತನ ಪಂಚಾಂಗ ಶ್ರವಣ, ಬೇವು-ಬೆಲ್ಲ ಹಂಚುವುದು ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಪ್ರಮುಖ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನೂತನ ಪಂಚಾಂಗ ಶ್ರವಣ ಹಬ್ಬದ ಆಚರಣೆಯ ಆಕರ್ಷಣೆ. ಪಂಚಾಗ ಎಂಬುದು ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ನೂತನ ಸಂವತ್ಸರದಲ್ಲಿ ಸಂಭವಿಸಬಹುದಾದ ಪ್ರಮುಖ ಘಟನಾವಳಿಗಳು, ಮಳೆ-ಬೆಳೆ ಹೇಗಿದೆ, ರಾಶಿಫಲ, ಮದುವೆ-ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಬೆಳೆ ಧಾರಣೆ ಕುರಿತಾಗಿ ಪಂಚಾಂಗದಲ್ಲಿ ನಮೂದಿಸಲಾಗಿರುವ ಭವಿಷ್ಯ ಕುರಿತು ವಿದ್ವಾಂಸರು ಸಾರ್ವಜನಿಕರಿಗೆ ಓದಿ ಹೇಳುತ್ತಾರೆ. ಈ ಬಗ್ಗೆ ಸ್ವಾರಸ್ಯಕರವಾದ ಚರ್ಚೆ-ವಿಚರ್ಚೆಗಳು ನಡೆಯುವುದು ಇಲ್ಲಿ ಸಾಮಾನ್ಯ.

ಬೇವು-ಬೆಲ್ಲ, ಹೋಳಿಗೆ ಖಾದ್ಯ
ಜೀವನದಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಯುಗಾದಿಯಂದು ಬೇವು-ಬೆಲ್ಲದ ಮಿಶ್ರಣವನ್ನು ಪ್ರಸಾದವಾಗಿ ಸ್ವೀಕರಿಸಲಾಗುತ್ತದೆ. "ಶತಾಯು: ವಜ್ರದೇಹಾಯ ಸರ್ವ ಸಂಪತ್ಕರಾಯಚ. ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ (ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಯಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ)" ಎಂಬ ಸಂಸ್ಕೃತದ ಶ್ಲೋಕ ಹೇಳುತ್ತಾ ಬೇವು-ಬೆಲ್ಲ ತಿನ್ನುವುದು ಸಂಪ್ರದಾಯ. ಹಬ್ಬದ ದಿನದಂದು ತೆಂಗಿನ ಕಾಯಿಯ ಒಬ್ಬಟ್ಟು (ಹೋಳಿಗೆ) ಮಾಡುವುದು ವಿಶೇಷ. ಇದನ್ನೇ ಮರಾಠಿಯಲ್ಲಿ "ಪೂರಣಪೋಳಿ" ಎಂದು ಕರೆಯುತ್ತಾರೆ. ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿ ಮಾಡುವ ಪದ್ಧತಿಯೂ ಕೆಲವೆಡೆ ಇದೆ. ಆಂಧ್ರ ಪ್ರದೇಶದಲ್ಲಿ ಹುಣಿಸೆಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವುಗಳ ಮಿಶ್ರಣವನ್ನು ಪ್ರಸಾದವಾಗಿ ಸ್ವೀಕರಿಸಲಾಗುತ್ತದೆ. ಇದಕ್ಕೆ ಯುಗಾದಿ ಪಚ್ಚಡಿ ಎಂದೇ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಈ ದಿನ ಶ್ರೀಖಂಡ ಮತ್ತು ಪೂರಿಯನ್ನು ತಯಾರಿಸುವ ಪದ್ಧತಿಯಿದೆ. ಕೊಂಕಣಿಗರು ಯುಗಾದಿಯಂದು ಕನಾಂಗಚಿ ಖೀರ್ ತಯಾರಿಸುತ್ತಾರೆ. ಇದು ಸಿಹಿ ಗೆಣಸು, ತೆಂಗಿನಕಾಯಿ ಹಾಲು, ಬೆಲ್ಲ, ಅಕ್ಕಿ ಹಿಟ್ಟನ್ನು ಬಳಸಿ ತಯಾರಿಸುವ ಪಾಯಸ.

ಬ್ರಹ್ಮಸೃಷ್ಟಿಯ ದಿನವಿದು
ಪುರಾಣಗಳು ಪ್ರತಿಪಾದಿಸುವಂತೆ, ಮಹಾ ಜಲಪ್ರಳಯದ ನಂತರ ಬ್ರಹ್ಮದೇವ ಯುಗಾದಿಯಂದೇ ಲೋಕದ ಸೃಷ್ಟಿ ಕಾರ್ಯ ಆರಂಭಿಸಿದನಂತೆ. ಈ ದಿನವೇ ಸೂರ್ಯ ತನ್ನ ಮೊದಲ ಕಿರಣವನ್ನು ಭೂಮಿಗೆ ಹರಿಸಿದ ಎಂಬ ಮಾತೂ ಇದೆ. ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ, ರಾವಣನನ್ನು ಯುದ್ಧದಲ್ಲಿ ಸೋಲಿಸಿ, ಅಯೋಧ್ಯೆಗೆ ಮರಳಿ, ಯುಗಾದಿಯ ದಿನದಂದೇ ಪುನ: ರಾಜ್ಯಭಾರ ಆರಂಭಿಸಿದ ಎಂಬ ಹೇಳಿಕೆಯೂ ಇದೆ. ಅದೇ ರೀತಿ ಮಹಾವಿಷ್ಣು ಮತ್ಸಾವತಾರ ತಾಳಿದ್ದು ಇದೇ ದಿನ. ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆಯನ್ನು ಇಂದೇ ಆರಂಭಿಸಿದ ಎನ್ನುತ್ತವೆ ಚರಿತ್ರೆಯ ಪುಟಗಳು. ಮರಾಠಿಗರು ಈ ದಿನವನ್ನು ಛತ್ರಪತಿ ಶಿವಾಜಿಯ ವಿಜಯದ ಸಂಕೇತ ದಿನವನ್ನಾಗಿಯೂ ಆಚರಿಸುತ್ತಾರೆ.

ಮರಾಠಿಗರ ಗುಡಿ ಪಾಡ್ವ, ಕೊಂಕಣಿಗರಿಗೆ ಪಾಡ್ವೊ
ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಗೋವಾಗಳಲ್ಲಿ ಈ ಹಬ್ಬವನ್ನು ಯುಗಾದಿಯಾಗಿ ಆಚರಿಸಿದರೆ, ಮಹಾರಾಷ್ಟ್ರದಲ್ಲಿ ಇದನ್ನು ಗುಡಿ ಪಾಡ್ವ ಎಂದು ಕರೆಯುತ್ತಾರೆ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವ ಪದ್ಧತಿ ಇಲ್ಲಿ ಜಾರಿಯಲ್ಲಿದೆ. ಒಂದು ಕೋಲಿಗೆ ನೂತನ ವಸ್ತ್ರ ಕಟ್ಟಿ, ಹೂವಿನ ಹಾರ ಏರಿಸಿ, "ಗುಡಿ" ಎಂದು ಮೂಲೆಯಲ್ಲಿ ಇರಿಸುತ್ತಾರೆ. ಇದು ಹೊಸ ವರ್ಷದ ಆಗಮನಕ್ಕೆ ಬಾವುಟ ಹಾರಿಸುವುದರ ಸಂಕೇತ. ಕೇಡನ್ನು ಕೊನೆಗೊಳಿಸಿ ಸಮೃದ್ಧಿ, ಈ ದಿನದಂದು ಮಹಾರಾಷ್ಟ್ರದ ಸಾಂಪ್ರದಾಯಿಕ ಮನೆಗಳಲ್ಲಿ ಕಿಟಕಿಯ ಹೊರಗೆ ನೇತು ಹಾಕಿರುವ ಗುಡಿಗಳನ್ನು ಕಾಣಬಹುದು.
ಗೋವಾದ ಹಿಂದೂ ಕೊಂಕಣಿಗರು ಇದನ್ನು ಸಂವತ್ಸರ ಪಾಡ್ವೊ ಎಂದೂ ಕರೆಯುತ್ತಾರೆ. ಸಿಂಧಿಗಳು ಈ ಹಬ್ಬವನ್ನು "ಚೀತಿ ಚಾಂದ್" ಎಂಬ ಹೆಸರಿನಿಂದ ಕರೆಯುತ್ತಾರೆ. ಸಿಂಧಿಗಳು ತಮ್ಮ ಪೂಜ್ಯ ಸಂತ "ಜುಲೆಲಾಲ್"ನ ಜನ್ಮದಿನವನ್ನಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಭಜನೆ, ಮಂಗಳಾರತಿಗಳ ಮೂಲಕ ವರುಣದೇವನನ್ನು ಪೂಜಿಸುತ್ತಾರೆ. ಆ ಮೂಲಕ ನೀರಿನ ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಯುಗಾದಿಯನ್ನು ಮಕರ ಸಂಕ್ರಮಣ ಹಬ್ಬವನ್ನಾಗಿ ವನ ವರ್ಷ ಸಂವತ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

ತುಳುವರ "ಬಿಸು",  ಕೇರಳಿಗರ "ವಿಶು"
ಸೌರಮಾನ ಪದ್ಧತಿಯ ಕಾಲಗಣನೆ ಅಳವಡಿಸಿಕೊಂಡಿರುವ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನ ಈ ಹಬ್ಬವನ್ನು "ವಿಶು" ಹಬ್ಬವನ್ನಾಗಿ ಆಚರಿಸುತ್ತಾರೆ. ಇದು ಸೌರಮಾನ ಯುಗಾದಿ. "ತುಳುವರ ಬಿಸು". ಏಪ್ರಿಲ್ 14ರಂದು ತುಳುವರು ಸಡಗರ, ಸಂಭ್ರಮದಿಂದ ಈ ಹಬ್ಬ ಆಚರಿಸುತ್ತಾರೆ. ನೆರೆಯ ಕೇರಳ ಅಲ್ಲದೆ, ಪಂಜಾಬ್ ಹಾಗೂ ಉತ್ತರ ಭಾರತದ ಹಲವೆಡೆ ವಿಶು ಹಬ್ಬದ ಆಚರಣೆ ಜಾರಿಯಲ್ಲಿದೆ. ತಮಿಳರಿಗೆ ಇದು ಬೈಸಾಕಿ ಅಥವಾ ಪುಥಾಂದು. ಪಂಜಾಬಿಗಳಲ್ಲಿ ಸಾಂಪ್ರದಾಯಿಕ ಬಾಂಗ್ಡಾ ನೃತ್ಯ ಬೈಸಾಕಿಯ ಪ್ರಮುಖ ಆಕರ್ಷಣೆ. ಸಿಖ್ಖರ ಸಹೋದರ ಪಂಥ ಖಾಲ್ಸಾ ಅನುಯಾಯಿಗಳು ಈ ದಿನವನ್ನು ಧರ್ಮ ಸಂಸ್ಥಾಪನಾ ದಿನವನ್ನಾಗಿ ಆಚರಿಸುತ್ತಾರೆ. ಗುರು ಗೋವಿಂದ ಸಿಂಗ್ ಈ ದಿನವೇ ಖಾಲ್ಸಾ ಪಂಥ ಹುಟ್ಟುಹಾಕಿದರೆಂಬುದು ಪ್ರತೀತಿ. ಬಂಗಾಳಿಗಳು ಈ ದಿನ ಲಕ್ಷ್ಮೀ ದೇವಿಯ ವಿಶೇಷ ಆರಾಧನೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಈ ದಿನದಿಂದ ಹೊಸ ಲೆಕ್ಕಪಟ್ಟಿ ಬರೆಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ನೆರೆಯ ಬಾಂಗ್ಲಾದೇಶದಲ್ಲಿ ಈ ದಿನ ರಾಷ್ಟ್ರೀಯ ರಜಾ ದಿನ.

ಪುರುಷರಿಗೆ ಮಹಿಳೆಯರ ಆರತಿ: 
ಉತ್ತರ ಕರ್ನಾಟಕ ಭಾಗದ ಕೆಲವೆಡೆ ಈ ಹಬ್ಬವನ್ನು ಹಿರಿಯರ ದಿನವನ್ನಾಗಿ ಆಚರಿಸುವ ಪದ್ಧತಿ ರೂಢಿಯಲ್ಲಿದೆ. ಈ ದಿನ ಬೆಳಗ್ಗೆ ಸ್ನಾನದ ಹಂಡೆಗೆ ಬೇವಿನ ಎಲೆಗಳನ್ನು ಹಾಕಿ, ಬಿಸಿ ಮಾಡಿ, ಆ ನೀರಿನಿಂದ ಸ್ನಾನ ಮಾಡುವ ಪದ್ಧತಿಯಿದೆ. ನಂತರ ಮೃತಪಟ್ಟ ಕುಟುಂಬದ ಹಿರಿಯರ ಪೋಟೊಗಳಿಗೆ ಪೂಜೆ ಸಲ್ಲಿಸುವ ಪದ್ಧತಿ ಚಾಲ್ತಿಯಲ್ಲಿದೆ. ಮನೆಯ ಮಕ್ಕಳು ಹಿರಿಯರಿಗೆ ನಮಸ್ಕರಿಸಿ, ಅವರ ಆಶೀರ್ವಾದ ಪಡೆಯುವುದು ಆಚರಣೆಯಲ್ಲಿ ಬಂದಿರುವ ರೂಢಿ. ಮನೆಯಲ್ಲಿನ ಮಹಿಳೆಯರು ಪುರುಷರಿಗೆ ಆರತಿ ಬೆಳಗುವ, ಇದಕ್ಕೆ ಪ್ರತಿಯಾಗಿ ಪುರುಷರು ಅವರಿಗೆ ಬಹುಮಾನ ಕೊಡುವ ಪದ್ಧತಿಯೂ ಕೆಲವೆಡೆ ಇದೆ.

ಚಾಂದ್ರಮಾನ ಯುಗಾದಿಯ ಆಚರಣೆ: ಆಂಧ್ರ ಪ್ರದೇಶ, ಕರ್ನಾಟಕ, ಗೋವಾ, ಮಹಾರಾಷ್ಟ್ರ.
ಸೌರಮಾನ ಯುಗಾದಿಯ ಆಚರಣೆ: ತಮಿಳುನಾಡು ( ಪುಥಾಂದು/ವರ್ಷ ಪಿರಪ್ಪು /ಬೈಸಾಕಿ). ಕೇರಳ (ವಿಶು). ಪಶ್ಚಿಮ ಬಂಗಾಳ (ಪೈಲಾ ಬೈಸಾಕ್/ನವ ವರ್ಷ). ಅಸ್ಸಾಂ (ಗೊರು ಬಿಹು). ಪಂಜಾಬ್ (ಬೈಸಾಕಿ ).ಕಾಶ್ಮೀರ (ನೌ ರೋಝ್).

ಇತರ ಕ್ಯಾಲೆಂಡರ್ಗಳಲ್ಲಿ ನೂತನ ವರ್ಷ
ಕ್ರಿಶ್ಚಿಯನ್- ಗ್ರಾಗೊಲಿಯನ್ (ಜನವರಿ 1)
ಪ್ರಾಚೀನ ರೋಮ್ -ಜ್ಯೂಲಿಯನ್ (ಜನವರಿ 1)
ನೇಪಾಳಿ- ನವವರ್ಷ/ ಲೋಸಾರ್ ( ಏಪ್ರಿಲ್ 13/14)
ಚೀನಿ - ಚುಂಜೈ - (ಜನವರಿ 20 ರಿಂದ ಫೆ. 19ರವರೆಗೆ ಒಂದು ದಿನ)
ಥೈಲ್ಯಾಂಡ್ - ಸಾಂಗ್ಕ್ರಾನ್ (ಏಪ್ರಿಲ್ 13/15)
ಮಾಂಗೋಲಿಯಾ - ತ್ಸಾಗ್ಗಾನ್ ಸಾರ್ (ಫೆ. 3/5)
ಟಿಬೆಟಿಯನ್ - ಲೋಸಾರ್ (ಮಾರ್ಚ್ 5)
ಕೊರಿಯಾ - ಸಿಯೊಲ್ನಾಲ್ (ಫೆ. 3/5)
ಲಾಯೊಸ್ - ಬಿಪಿ ಮಾಯಿ/ಸಾಂಗ್ಕಾನ್ (ಏಪ್ರಿಲ್ 13/14)
ವಿಯೆಟ್ನಾಂ - ಟೆಟ್ ನಗುಯೆನ್ ಡ್ಯಾನ್ (ಫೆಬ್ರವರಿ 3/5)
ಸಿಂಹಳೀಯ - ಅಲುತ್ ಅವುರುದ್ದಾ (ಏಪ್ರಿಲ್ 13/14)
ಇರಾನ್ - ನೌರುಜ್ (ಮಾರ್ಚ್ 21)
ಇಸ್ಲಾಮಿಕ್ - ಹಿಜ್ರಿ (ಮೊಹರಂ ಹಬ್ಬದ ಮೊದಲ ದಿನ)
ಇಥಿಯೋಪಿಯಾ -ಎಂಕುಟಾಟಾಶ್  (ಸೆಪ್ಟಂಬರ್ 11/12)

ಮಲೆನಾಡಲ್ಲಿ ಸಂಭ್ರಮ ಬಲು ಜೋರು: 
ಮಲೆನಾಡಿನ ಹಳ್ಳಿಗಳಲ್ಲಿ ಯುಗಾದಿಯ ಸಂಭ್ರಮ ಬಲು ಜೋರು. ಹೊಸ ವರ್ಷದ ಶುಭ ಕೋರುವ ಹಬ್ಬವಿದು. ಕೆಲವರು ಹೊಸ ವರ್ಷಕ್ಕಾಗಿ ತಮ್ಮ ಪ್ರತಿಜ್ಞೆ ಕೈಗೊಳ್ಳುವ ಪರಿಪಾಠ ಬೆಳೆಸಿಕೊಂಡಿರುತ್ತಾರೆ. ಹಳ್ಳಿಗಳಲ್ಲಿ ಎತ್ತುಗಳನ್ನು ಸಿಂಗರಿಸಿ, ಬಂಡಿ ಕಟ್ಟಿ ಊರಿನಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮಲೆನಾಡಿನ ಹಳ್ಳಿಗಾಡಿನಲ್ಲಿ ಹಬ್ಬಕ್ಕಾಗಿ ಒಂದು ವಾರದಿಂದಲೇ ಪೂರ್ವ ತಯಾರಿ ನಡೆದಿರುತ್ತದೆ. ಮನೆಯ ಬಾಗಿಲುಗಳನ್ನು ಮಾವಿನ ಎಲೆ, ಕಡಲೆ, ಹೆಸರು, ಅಗಸಿ, ತುಂಬೆ ಹೂಗಿಡ, ಬೇವಿನ ಹರಿ, ಕೆಂಪು ಹೂ ಸೇರಿದಂತೆ ಪ್ರಕೃತಿದತ್ತವಾಗಿ ದೊರೆಯುವ ವಸ್ತುಗಳಿಂದ ಸಿಂಗರಿಸಲಾಗುತ್ತದೆ.
ಹಬ್ಬದ ದಿನ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಮನೆಯ ಹೆಣ್ಣು ಮಕ್ಕಳು ಅಥವಾ ಸೊಸೆಯಂದಿರಿಂದ ಆರತಿ ಮಾಡಿಸಿಕೊಳ್ಳಬೇಕು. ನಂತರ ಅವರು ಕೊಟ್ಟ ಬೇವು-ಬೆಲ್ಲ , ಶಾವಿಗೆ ತಿನ್ನಬೇಕು. ದೇವಸ್ಥಾನಗಳಲ್ಲಿ ಪೂಜೆ ಮಾಡಿ, ಬೆಲ್ಲದ ಪಾನಕ, ಬೇಯಿಸಿ ಒಗ್ಗರಣೆ ಮಾಡಿದ ಕಡಲೆಕಾಳನ್ನು ಪ್ರಸಾದವಾಗಿ ತಿನ್ನುವುದು ಸಂಪ್ರದಾಯ ಎನ್ನುತ್ತಾರೆ ಹಿರಿಯರಾದ ಗಂಗಮ್ಮ ಬಾನಪ್ಪನವರ(86). ಮನೆಯ ಹಿರಿಯರು ಗದ್ದೆ ಅಥವಾ ವ್ಯವಸಾಯ ಮಾಡುವ ಭೂಮಿಯನ್ನು ಯುಗಾದಿಯಂದು ಬೆಳಗ್ಗೆ ಉಳುಮೆ ಮಾಡಿ ಪೂಜೆ ಮಾಡುವ ಶಾಸ್ತ್ರ ಮಲೆನಾಡಿನ ಕೆಲವೆಡೆ ಪ್ರಚಲಿತದಲ್ಲಿದೆ. ದೇವರ ನೈವೇದ್ಯಕ್ಕೆಂದು ಎಣ್ಣೆ ಹೋಳಿಗೆ, ಬೇವು, ಶಾವಿಗೆ, ಅಕ್ಕಿ ಪಾಯಸ ಮಾಡುವುದು ಸಾಮಾನ್ಯ.ಗಡಿ ನಾಡವರ ಗುಡಿ ಪಾಡವಾ
ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದ ಬೆಳಗಾವಿ ಜಿಲ್ಲೆ ಬಹು ಭಾಷೆ, ಬಹು ಸಂಸ್ಕೃತಿಯ ಪ್ರದೇಶ. ಕನ್ನಡ-ಮರಾಠಿಗರ ಬಾಂಧವ್ಯದ ನೆಲ. ಇಲ್ಲಿ ಎಲ್ಲ ಹಬ್ಬಗಳನ್ನು ವಿಶಿಷ್ಟವಾಗಿ, ವಿಭಿನ್ನವಾಗಿ ಆಚರಿಸುವುದಕ್ಕೆ ತನ್ನದೇ ಆದ ಸಂಪ್ರದಾಯವಿದೆ. ಕರ್ನಾಟಕದ ಮಹಾರಾಷ್ಟ್ರ ಸಂಸ್ಕೃತಿಯ ಪ್ರಭಾವವೂ ಇಲ್ಲಿದೆ.
ಯುಗಾದಿ ಗಡಿ ಜಿಲ್ಲೆ ಬೆಳಗಾವಿಯವರಿಗೆ ಗುಡಿ ಪಾಡವಾ. ಇಲ್ಲಿನ ಜನರಿಗೆ ಇದು ವರ್ಷದ ಮಹಾ ಹಬ್ಬ. ಮುಂದಿನ ವರ್ಷಕ್ಕೆ ಇದೇ ನಾಂದಿ. ಎಲೆಗಳನ್ನೆಲ್ಲ ಕಳಚಿಕೊಂಡು ಮತ್ತೆ ಚಿಗುರೊಡೆದು ಮರು ಜೀವ ಪಡೆಯುವ ಪ್ರಕೃತಿಯ ಸೊಬಗಿನ ಈ ಹಬ್ಬ ಯುಗದ ಆದಿಯೂ ಹೌದು. ಹಿಂದೂ ಪರಂಪರೆಯಲ್ಲಿ ನವ ವರ್ಷದ ಆರಂಭ. ಈ ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲರ ಮೊಗದಲ್ಲೂ ನವೋಲ್ಲಾಸ. ಪ್ರಕೃತಿಯಲ್ಲಿನ ಚಿಗುರಿನ ಮೋಹಕತೆ ಎಲ್ಲರ ಮನದಲ್ಲಿ, ಮನೆಗಳಲ್ಲಿ ಮೊಳಕೆ ಒಡೆಯುವ ಗಳಿಗೆ. ಚೈತ್ರ ವಸಂತರ ನೆನಹೆಂದರೇ ಏನೋ ಒಂಥರಾ ಖುಷಿ, ಕಚಗುಳಿ. ಸಡಗರ- ಸಂಭ್ರಮ-ಉಲ್ಲಾಸಭರಿತ ಸಮಯ.
ಈ ಭಾಗದಲ್ಲಿ ಇದನ್ನು ಗುಡಿ ಪಾಡವಾ ಎಂತಲೇ ಆಚರಿಸಲಾಗುತ್ತದೆ. ಗುಡಿ ಪಾಡವಾ ಮರಾಠಿಯಿಂದ ಎರವಲಾಗಿ ಬಂದ ಶಬ್ದಗಳು. ಇಲ್ಲಿನ ಕನ್ನಡಿಗರೆಲ್ಲ ಯುಗಾದಿ ಎಂದು ಕರೆದು ಆಚರಿಸಿದರೆ, ಮರಾಠಿಗರು ಗುಡಿ ಪಾಡವಾ ಎಂದೇ ಸಂಬೋಧಿಸಿ ಆಚರಿಸುವುದುಂಟು. ಗುಡಿ ಎಂದರೆ ಬ್ರಹ್ಮ ಧ್ವಜ ಎಂದರ್ಥ. ಕೆಲವೊಂದು ಕಡೆ ಇದಕ್ಕೆ ಇಂದ್ರ ಧ್ವಜ ಎಂತಲೂ ಕರೆಯಲಾಗುತ್ತದೆ. ಇದೊಂದು ವಿಜಯದ ಸಂಕೇತ. ಯುದ್ಧದಲ್ಲಿ ಗೆದ್ದು ಸಂಭ್ರಮಿಸುವಾಗ ವಿಜಯ ಪತಾಕೆ ಹಾರಿಸುವಂತೆ ಗುಡಿ ಪಾಡವಾದ ಸಂದರ್ಭದಲ್ಲಿ ಈ ಸಂಪ್ರದಾಯ ಆಚರಿಸುವುದು ಬೆಳೆದು ಬಂದಿದೆ. ಹೆಚ್ಚಾಗಿ ಮರಾಠಿ ಸಂಪ್ರದಾಯ ಉಳ್ಳವರು ಹಾಗೂ ಮರಾಠಾ ಸಮುದಾಯದವರು ಮನೆ ಎದುರು ಈ ಧ್ವಜವನ್ನು ನಿಲ್ಲಿಸುತ್ತಾರೆ.
ಉದ್ದವಾದ ಬಿದಿರಿನ ಕೋಲಿಗೆ ಅರಿಷಿಣ-ಕುಂಕುಮ-ಸುಣ್ಣ ಹಾಗೂ ಗಂಧ ಲೇಪಿಸಲಾಗುತ್ತದೆ. ಕೋಲಿನ ಮೇಲ್ಭಾಗದ ತುದಿಯಲ್ಲಿ ಬೆಳ್ಳಿ ಅಥವಾ ತಾಮ್ರದ ತಂಬಿಗೆಯನ್ನು ಕೆಳ ಮುಖ ಮಾಡಿ ಹಾಕಲಾಗುತ್ತದೆ. ಸಾಮಾನ್ಯವಾಗಿ ಬಿಂದಿಗೆ ಅಥವಾ ತಂಬಿಗೆಯನ್ನು ಪೂರ್ಣ ಕುಂಭವೆಂದು ಪೂಜಿಸಲಾಗುತ್ತದೆ. ಆದರೆ ಇಲ್ಲಿ ಕೋಲಿಗೆ ಕೆಲಮುಖ ಮಾಡಿ ಹಾಕುವುದು ವಿಶೇಷ. ಇದಕ್ಕೆ ಹೂವು ಮೂಡಿದ ಬೇವಿನ ತೊಪ್ಪಲು ಹಾಗೂ ಮಾವಿನ ಎಲೆ, ಹಸಿರು ಅಥವಾ ಹಳದಿ ಬಣ್ಣದ ರವಿಕೆ ಬಟ್ಟೆ ಕಟ್ಟಲಾಗುತ್ತದೆ. ಸ್ವಸ್ತಿಕ್ ಆಕಾರದಲ್ಲಿ ಕುಂಕುಮ, ಅರಿಷಿಣ, ಸುಣ್ಣ ಹಾಗೂ ಗಂಧ ಹಚ್ಚಲಾಗುತ್ತದೆ. ಹೀಗೆ ಅಲಂಕರಿಸಲಾದ ಕೋಲನ್ನು ಮನೆಯ ಬಾಗಿಲಿನ ಬಲಭಾಗದಲ್ಲಿ ನಿಲ್ಲಿಸಲಾಗುತ್ತದೆ. ಕೋಲು ನಿಲ್ಲಿಸಿದ ಭಾಗದಲ್ಲಿ ರಂಗವಲ್ಲಿ ಹಾಕಿ ಚಿತ್ತಾರಗೊಳಿಸಿ ಹೋಳಿಗೆ, ಬೇವು, ಬೆಲ್ಲದ ನೈವೇದ್ಯ ಮಾಡಲಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಧ್ವಜವನ್ನು ಪೂಜಿಸಿ ಕೆಳಗಿಳಿಸಲಾಗುತ್ತದೆ.
ಬೇವು-ಬೆಲ್ಲ ಗುಡಿ ಪಾಡವಾದ ವಿಶೇಷ. ಇದನ್ನು ಆಧರಿಸಿಯೇ ಸಿಹಿಯನ್ನು ಸುಖವೆಂತಲೂ ಕಹಿಯನ್ನು ದುಃಖವೆಂತಲೂ ಸಂಕೇತಿಸಲಾಗುತ್ತದೆ. ಬೇವಿನ ಹೂ, ಒಂದಿಷ್ಟು ಎಲೆಗಳನ್ನು ಬೆಲ್ಲ, ಬದಾಮ, ಒಣ ದ್ರಾಕ್ಷಿ, ಶೇಂಗಾ, ಪುಟಾಣಿಗಳನ್ನು ಮಿಶ್ರ ಮಾಡಿ ಬೇವು-ಬೆಲ್ಲದ ಖಾದ್ಯ ತಯಾರಿಸಲಾಗುತ್ತದೆ.

ಹೊನ್ನೇರು ಬಂಡಿ ಕಟ್ಟುವರು ಇಲ್ಲಿ
ಹೊಸ ವರ್ಷದ ಕೃಷಿಗೆ ಚಾಲನೆ ನೀಡಲು ಬಹು ಹಿಂದಿನಿಂದಲೂ ರೈತರು ಆಯ್ದುಕೊಂಡಿರುವ ದಿನ ಯುಗಾದಿ. ಅಂದು ಭವಿಷ್ಯದ ಜೀವನದಲ್ಲಿ ಸಿಹಿ-ಕಹಿ ಯಾವುದೇ ಒಟ್ಟಿಗೆ ಬರಲಿ ಸಮಚಿತ್ತದ ಬಾಳ್ವೆಗೆ ನೆರವಾಗಪ್ಪ ದೇವರೇ ಎಂದು ನಾಡೇ ಪ್ರಾರ್ಥಿಸುವಂತಹ ಶುಭ  ಸಂದರ್ದಲ್ಲಿ ಹಳೇ ಮೈಸೂರು ಪ್ರಾಂತದ ರೈತರು ತಮ್ಮ ಕೃಷಿ ಹಸನಾಗಲಿ, ಬಾಳು ಬಂಗಾರವಾಗಲಿ ಎಂದು ಆಶಿಸಿ ಹೊನ್ನೇರು ಕಟ್ಟುವ ಪದ್ಧತಿಯನ್ನು ಪುರಾತನ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಯುಗಾದಿ ದಿನಂದು ಮಳೆ ಬಂದೇ ಬರುತ್ತದೆ ಎಂಬ ನಂಬಿಕೆಯನ್ನು ಆಧರಿಸಿ ಅಂದು ಬೇಸಾಯಕ್ಕೆ ಚಾಲನೆ ನೀಡಲಾಗುತ್ತದೆ.
ಇದಕ್ಕಾಗಿ ಭೂಮಿಗೆ ಗೊಬ್ಬರ ಹಾಕಬೇಕು. ಅನ್ನ ಕೊಡುವ ಭೂಮಿ ತಾಯಿಗೆ ಹಾಕುವ ಗೊಬ್ಬರ ಚಿನ್ನಕ್ಕೆ ಸಮಾನ. ಆದ್ದರಿಂದ ಇಂತಹ ಚಿನ್ನ ಅಥವಾ ಹೊನ್ನನ್ನು ಹೇರಿಕೊಂಡು ಹೋಗುವ ಗಾಡಿ(ಏರು)ಗೆ ಹೊನ್ನೇರು ಎಂದು ಕರೆಯುವ ವಾಡಿಕೆ ಇದೆ.
ದೇವಾಲಯದ ಬಳಿ ಅಲಕೃಂತ ಐದು ಗಾಡಿಗಳಲ್ಲಿ, ತಲಾ ಒಂದು ಗಾಡಿಗೆ ಐದು ಬುಟ್ಟಿ ಗೊಬ್ಬರವನ್ನು ಹೇರಿಕೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯಲ್ಲಿ ಜಮೀನುಗಳಿಗೆ ಕೊಂಡೊಯ್ದು ಗೊಬ್ಬರ ಚೆಲ್ಲುವುದು ರೂಢಿ. ಈ ಸಂದರ್ಭದಲ್ಲಿ ಗ್ರಾಮದ ಧಾರ್ಮಿಕ ಮುಖಂಡನ ಗಾಡಿ ಮುಂದೆ ಇರಬೇಕು. ಗ್ರಾಮದ ಮುಖಂಡನ ಜಮೀನಿನಲ್ಲಿ ಉತ್ತಮ ಬೆಳೆ ಬಂದರೆ ಗ್ರಾಮಕ್ಕೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇದೆ ಎನ್ನುತ್ತಾರೆ ಮಲೆಯೂರು ಗುರುಸ್ವಾಮಿ.
ಸುತ್ತೂರಲ್ಲಿ ಇಂತಹ ಆಚರಣೆ ಅನೇಕ ವರ್ಷಗಳಿಂದ ಶ್ರೀಗಳ ಸಾನ್ನಿಧ್ಯದಲ್ಲಿ ಚಾಚೂ ತಪ್ಪದೆ ನಡೆದುಕೊಂಡು ಬಂದಿದೆ. ಶ್ರೀಮಠಕ್ಕೆ ಸೇರಿದ ಹಾಗೂ ಗ್ರಾಮದ ಹೊನ್ನೇರು ಬಂಡಿಗಳು ಸುತ್ತೂರು ಮಠದಿಂದ ಮಂಗಳವಾದ್ಯ ಹಾಗೂ ಕಲಾತಂಡಗಳೊಂದಿಗೆ ಹೊರತು ಗದ್ದಿಗೆ ತೆರಳುತ್ತವೆ. ಈ ಸಂದರ್ಭದಲ್ಲಿ ಬೇಸಿಗೆ ಕೃಷಿಗೆ ಚಾಲನೆ ನೀಡಲಾಗುತ್ತದೆ. ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಗದ್ದುಗೆ ಸೇರಿದಂತೆ ನಾನಾ ದೇವಾಲಯಗಳಲ್ಲೂ ಪೂಜೆ ನೆರವೇರುತ್ತದೆ.

ತಪೋಬಲದಿಂದ ಸಿಹಿಯಾದ ಬೇವು
ನಂಬಿದದೂ ಸರಿ, ಬಿಟ್ಟರೂ ಸರಿ. ಐಗಳಿಯಲ್ಲಿರುವ ಬೇವಿನ ಮರಕ್ಕೆ ವಿಶೇಷ ಮಹತ್ವವಿದೆ. ಯೋಗಿಯ ಮಹಿಮೆ ಇದ್ದರೆ ಕೊರಡು ಕೊನರುವುದು, ಬರಡು ನೆಲದಲ್ಲಿ ಜೀವಜಲ ಉಕ್ಕುವುದು ಎಂಬಂತೆ ಇಲ್ಲಿನ ಕಹಿ ಬೇವು ಸಿಹಿ ಗುಣ ಹೊಂದಿದೆ.
ಅಥಣಿ-ವಿಜಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಐಗಳಿ ಕ್ರಾಸ್ನಲ್ಲಿರುವ ಮಾಣಿಕ ಪ್ರಭು ದೇವಾಲಯದ ಆವರಣದಲ್ಲಿ ಬೆಳೆದ ನಿಂತಿರುವ ಬೇವಿನ ಮರಕ್ಕೆ ತನ್ನದೇ ಇತಿಹಾಸ ಇದೆ. ಐಗಳಿಯ ಜಂಗಮ ಜ್ಯೋತಿ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು ಇಲ್ಲಿ ಅನೇಕ ಪವಾಡಗಳನ್ನು ಮಾಡಿದ್ದಾರೆ.
ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದ ಜಗದೀಶ್ವರ ಮಠದಿಂದ ಐಗಳಿ ಗ್ರಾಮಕ್ಕೆ ಆಗಮಿಸಿದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು ಇಲ್ಲಿಯ ಗುಲಗಂಜಿ ಗುಡ್ಡದಲ್ಲಿ  ಕುಳಿತು ತಪಸ್ಸು ಪ್ರಾರಂಭಿಸಿದರು. ಯುಗಾದಿ ಹಬ್ಬದಂದು ಬೇವಿನ ಸಸಿ ನೆಟ್ಟರು. ಅವರ ತಪಸ್ಸಿನ ಬಲದಿಂದ ಬೇವಿನ ಮರ ಹೆಮ್ಮರವಾಯಿತು. ಆದರೆ ಲ ಕಹಿಯಾಗಲಿಲ್ಲ. ಬೇವಿನ ಮರ ಹೂವು, ತಪ್ಪಲು ಹಾಗೂ ಕಾಯಿ ಕಹಿಯನ್ನು ಕಳೆದುಕೊಂಡಿದೆ. ಜನರಿಗೆ ವಿಷ ಜಂತು ಕಚ್ಚಿದಾಗ ಆ ಮರದ ಪ್ರದಕ್ಷಿಣೆ ಹಾಕಿದರೆ ವಿಷ ಕಡಿಮೆಯಾಗುತ್ತದೆಂಬ ಪ್ರತೀತಿಯಿದೆ.
ತಲೆ ನೋವು, ಕೆಮ್ಮು, ನೆಗಡಿಗೆ ಈ ಬೇವಿನ ಮರದ ತಪ್ಪಲಿನ ಕಷಾಯ ಬಳಸುತ್ತಾರೆ. ಮೊಳಕಾಲಿನ ನೋವು, ಬೆನ್ನು ನೋವುಗಳಿಗೆ ತಪ್ಪಲಿನ ರಸ ಹಚ್ಚುತ್ತಾರೆ. ಸಿದ್ಧಿ ಪುರುಷದ ಸಂಗದಲ್ಲಿ ಕಹಿಯು ಸಿಹಿಯಾಗುತ್ತದೆ. ದುಃಖದ ಲವಲೇಶವು ಇರುವುದಿಲ್ಲ. ಎಂಬ ಮಾತಿಗೆ ಉದಾಹರಣೆಯಂತೆ ಬೇವಿನ ಮರ ಇಲ್ಲಿ ಸಾಕ್ಷಿಯಾಗಿದೆ.

ಯುಗಾದಿಯಂದು ಜೂಜು, ಮರುದಿನ ಮದ್ಯ, ಮಾಂಸದ ಮೋಜು
ಗುಡಿಬಂಡೆ ಸುತ್ತಮುತ್ತಲ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಹಳ್ಳಿಗಾಡಿನಲ್ಲಿ ಯುಗಾದಿಯನ್ನು ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತದೆ. ಅಗ್ರಹಾರಗಳಲ್ಲಿನ ಪುರೋಹಿತರು, ಪಂಡಿತರು ಯುಗಾದಿಯಂದು ಸ್ನಾನ ಸಂಧ್ಯಾವಂದನೆ ಮುಗಿಸಿ, ಬಳಿಕ ಕುಲದೇವರನ್ನು, ಪಂಚಾಗವನ್ನು ಪೂಜಿಸಿಸುತ್ತಾರೆ. ನಂತರ ಅಗಲ ಬಾಯಿಯ ಪಾತ್ರೆಯಲ್ಲಿ ತುಪ್ಪ ಹಾಕಿ, ಮನೆಮಂದಿಯೆಲ್ಲ ಅದರಲ್ಲಿ ಮುಖ ನೋಡಿಕೊಳ್ಳುತ್ತಾರೆ. ನಂತರ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಸರ್ವದೋಷ ಪರಿಹಾರ ಆಗುತ್ತೆ ಎಂಬುದು ನಂಬಿಕೆ. ಸಂಜೆ ಊರಿನ ಅರಳಿ ಕಟ್ಟೆಯಲ್ಲಿ ಊರಿನವರೆಲ್ಲಾ ಸೇರುತ್ತಾರೆ. ಪಂಡಿತರು ಊರಿನ ಜನಕ್ಕೆ ಪಂಚಾಂಗ ಓದಿ ಹೇಳುತ್ತಾರೆ. ವರ್ಷಫಲ ಕೇಳುವ ಸಂಪ್ರದಾಯ ಹಳ್ಳಿಗಳ ಕಡೆ ಇನ್ನೂ ಜೀವಂತವಾಗಿದೆ.
ಯುಗಾದಿಯ ದಿನ ಜೂಜಾಡುವುದೂ ಒಂದು ಸಂಪ್ರದಾಯವಾಗಿ ಬೆಳೆದು ಬಿಟ್ಟಿದೆ. ಯುಗಾದಿಯ ಮಾರನೇ ದಿನವನ್ನು ವರ್ಷತೊಡಕು ಎಂದೂ ಆಚರಿಸುತ್ತಾರೆ.ಅಂದು ಮಾಂಸಾಹಾರಿಗಳು ಕಡ್ಡಾಯವಾಗಿ ಮಾಂಸದ ಊಟ ಮಾಡುತ್ತಾರೆ. ಜೊತೆಗೆ ಮದ್ಯ ಸೇವನೆಯೂ ಈ ವರ್ಷತೊಡಗಿನ ಆಚರಣೆಗಳಲ್ಲೊಂದು.


ಯುಗಾದಿಯ ಬಿರು ಬಿಸಿಲಿಗೆ ಪಾನಕ ಆರಾಮದಾಯಕ. ಇದಕ್ಕಾಗಿ ಸವಿಯಿರಿ ಬೇವು-ಬೆಲ್ಲದ ಪಾನಕ.
ಬೇಕಾಗುವ ಸಾಮಗ್ರಿ:
* ಹುರಿಗಡಲೆ-1 ಕಪ್ 
* ನೀರು
*ಕಲ್ಲು ಸಕ್ಕರೆ - ಸ್ವಲ್ಪ
* ಕರ್ಜೂರ, ಉತ್ತುತ್ತೆ -2-3
*ಉಪ್ಪು - ಚಿಟಿಕೆ
* ನಿಂಬೆ ರಸ - 2 ಚಮಚ
* ಹುಣಿಸೆ ಹಣ್ಣಿನ ರಸ-ಕಾಲು ಕಪ್ 
* ತುರಿದ ಮಾವಿನ ಕಾಯಿ-ಕಾಲು ಕಪ್ 
* ತುರಿದ ಕೊಬ್ಬರಿ- 2 ಚಮಚ
* ಪುಡಿ ಬೆಲ್ಲ - ಅರ್ಧ ಕಪ್
* ಏಲಕ್ಕಿ ಪುಡಿ - ರುಚಿಗೆ ತಕ್ಕಷ್ಟು
* ದ್ರಾಕ್ಷಿ, ಗೋಡಂಬಿ, ಬಾದಾಮಿ, ಗಸಗಸೆ, ಪಿಸ್ಟಾ ಎಲ್ಲಾ ಸೇರಿ ಅರ್ಧ ಕಪ್

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು ಹಾಕಿ. ಅದಕ್ಕೆ ಪುಡಿ ಮಾಡಿದ ಹುರಿಗಡಲೆ ಹಿಟ್ಟು, ಹುಣಿಸೆ ಹಣ್ಣಿನ ರಸ, ತುರಿದ ಮಾವಿನ ಕಾಯಿ, ಬೆಲ್ಲ ಪುಡಿ ಸೇರಿಸಿ ಕಲಸಿ. ಇದಕ್ಕೆ ದ್ರಾಕ್ಷಿ, ಕರ್ಜೂರ, ಉತ್ತುತ್ತೆ, ಗೋಡಂಬಿ, ಗಸಗಸೆ, ಏಲಕ್ಕಿ, ಕಲ್ಲು ಸಕ್ಕರೆ, ಕೊಬ್ಬರಿ, ಬಾದಾಮಿ, ಪಿಸ್ಟಾ ಎಲ್ಲಾ ಸೇರಿಸಿ ಪುಡಿ ಮಾಡಿದ ದ್ರಾವಣ ಸೇರಿಸಿ. ಇದಕ್ಕೆ ನಿಂಬೆ ರಸ, ಉಪ್ಪಿನ ಪುಡಿ ಮಿಶ್ರಣ ಮಾಡಿ. ಇದಕ್ಕೆ ಬೇವಿನ ಕುಡಿ ಹಾಗೂ ಹೂವನ್ನು ಮುರಿದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಬೇವು-ಬೆಲ್ಲದ ಪಾನಕ ಕುಡಿಯಲು ರೆಡಿ. ಇದನ್ನು ಬೇಯಿಸಿದ ಶಾವಿಗೆ ಮೇಲೆ ಕೂಡ ಹಾಕಿಕೊಂಡು ಸವಿಯಬಹುದು. 


ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ 
ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲ್ಲಿ ಭೃಂಗದ 
ಸಂಗೀತ ಕೇಳಿ ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ ಹೂವಿನ
ನಸುಗಂಪು ಸೂಸಿ ಜೀವಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ಹರುಷಕೊಂದು 
ಹೊಸತು ನೆಲೆಯು ಅಖಿಲ ಜೀವಜಾತಕೆ
ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರೆಯ 
ನಮಗದಷ್ಟೇ ಏತಕೆ 
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ
ಎಲೇ ಸನತ್ಕುಮಾರದೇವ ಎಲೇ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ 
ಹೊಸತು ಹೊಸತು ತರುತಿದೆ
ನಮ್ಮನಷ್ಟೇ ಮರೆತಿದೆ.