ಇದುವೇ ಸಕಾಲ, ತೆರಿಗೆ ವಿನಾಯಿತಿ ಕೋರುವ ಕಾಲ


     ಕಷ್ಟಪಟ್ಟು ದುಡಿದು, ಗಳಿಸಿದ ಆದಾಕ್ಕೆ ತೆರಿಗೆ ಕಟ್ಟಬೇಕಾದುದು ಕಾನೂನಿನ ಪ್ರಕಾರ ಅನಿವಾರ್ಯ ಕರ್ತವ್ಯ. ನೀವು ಗಳಿಸಿದ ಆದಾಯಕ್ಕೆ ಒಂದು ಮಿತಿಯವರೆಗೆ ಮಾತ್ರ ವಿನಾಯಿತಿ ದೊರೆಯುತ್ತದೆ. ಇದರ ಮಿತಿಯನ್ನು ಸರಕಾರ ಪ್ರತಿವರ್ಷ ಬಜೆಟ್ ಮಂಡನೆ ವೇಳೆ ಘೋಷಿಸುತ್ತದೆ. ಬಜೆಟ್ ಮಂಡನೆ ವೇಳೆ ಘೋಷಣೆಯಾಗುವ ಆದಾಯ ತೆರಿಗೆಯ ಈ ಮಿತಿ ತದನಂತರದ ಆರ್ಥಿಕ ವರ್ಷದಿಂದ ಚಾಲ್ತಿಗೆ ಬರುತ್ತದೆ. ಹಾಗಾಗಿ, ಈ ಮಿತಿಗಿಂತಲೂ ನಿಮ್ಮ ಆದಾಯ ಹೆಚ್ಚಿದ್ದರೆ, ಹೆಚ್ಚಿರುವ ಆದಾಯಕ್ಕೆ ತೆರಿಗೆ ಕಟ್ಟಲೇ ಬೇಕಾಗುತ್ತದೆ.
     ಈಗ ೨೦೧೦-೧೧ರ ಆರ್ಥಿಕ ವರ್ಷದ ಅಂತ್ಯ ಸಮೀಪಿಸುತ್ತಿದೆ. ಮಾರ್ಚ್ ೩೧ಕ್ಕೆ ಅಂತ್ಯಗೊಳ್ಳುವ ಈ ಆರ್ಥಿಕ ವರ್ಷಕ್ಕೆ ಮುನ್ನ ನೀವು ಗಳಿಸಿದ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಪಡೆಯಲು ಯೋಜನೆ ರೂಪಿಸಬೇಕಾದ ಕಾಲ ಸಮೀಪಿಸುತ್ತಿದೆ. ಈ ವಿನಾಯಿತಿ ಕೋರಿಕೆಗೆ ತಕ್ಕ ಯೋಜನೆಗಳನ್ನು ರೂಪಿಸಿಕೊಂಡು, ಸಮರ್ಪಕ ದಾಖಲೆಗಳನ್ನು ಸಲ್ಲಿಸಲು ಸಕಾಲ. ನಿಮ್ಮ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಕೋರಲು ಹಲವು ಅವಕಾಶಗಳು ನಿಮ್ಮ ಮುಂದಿವೆ. ನೀವು ಸಂಸ್ಥೆಯೊಂದರ ಉದ್ಯೋಗಿಯಾಗಿದ್ದರೆ, ಸಾಧಾರಣವಾಗಿ ಆ ಸಂಸ್ಥೆಯವರೇ ನಿಮ್ಮ ಸಂಬಳ ಹಾಗೂ ಇನ್ನಿತರ ಭತ್ಯೆಗಳ ಲೆಕ್ಕ ಹಾಕಿ, ನಿಮ್ಮ ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಬಹುದಾದ ಮೊತ್ತದ ಮಾಹಿತಿ ನೀಡುತ್ತಾರೆ. ಸಾಧಾರಣವಾಗಿ ನಿಮ್ಮ ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಲು ನೀವು ಮನೆ ಬಾಡಿಗೆ ಭತ್ಯೆ, ಗೃಹಸಾಲದ ಮೇಲಿನ ಬಡ್ಡಿ, ವಿಮೆ, ರಾಷ್ಟ್ರೀಯ ಉಳಿತಾಯ ಪತ್ರ ಮತ್ತಿತರ ಉಳಿತಾಯ ಯೋಜನೆಗಳು, ನಿಮ್ಮ, ನಿಮ್ಮ ಪತ್ನಿ/ಗಂಡ, ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಶುಲ್ಕ ಮುಂತಾದವುಗಳ ದಾಖಲೆಗಳನ್ನು ಸಮರ್ಪಕ ರೀತಿಯಲ್ಲಿ ಸಲ್ಲಿಸುವ ಮೂಲಕ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ಈ ಬಗ್ಗೆ ನಿಮ್ಮ ಉದ್ಯೋಗದಾತರು ಮಾಹಿತಿ ಒದಗಿಸುತ್ತಾರೆ.


ಮನೆ ಬಾಡಿಗೆ ಭತ್ಯೆ: 
ನೀವು ಪ್ರತಿ ತಿಂಗಳು ಕಟ್ಟುವ ಮನೆ ಬಾಡಿಗೆ, ನಿಮ್ಮ ಆದಾಯ ತೆರಿಗೆಯ ವಿನಾಯಿತಿ ವ್ಯಾಪ್ತಿಗೆ ಬರುತ್ತದೆ. ಇದಕ್ಕಾಗಿ ನೀವು ಬಾಡಿಗೆ ಕಟ್ಟಿದ ರಸೀದಿಯ ಮೂಲ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ. ಜತೆಗೆ ಖಾತರಿಯಾಗಿ ನಿಮ್ಮ ವಾಸದ ಮನೆಯ ಯಜಮಾನನ ಹಕ್ಕುಪತ್ರದ ದಾಖಲೆಯನ್ನು ನೀಡಬೇಕಾಗುತ್ತದೆ.
ಗೃಹಸಾಲ: 
ನೀವು ಬ್ಯಾಂಕ್‌ಗಳಿಂದ ಪಡೆದ ಗೃಹಸಾಲದ ಮೇಲಿನ ಬಡ್ಡಿಗೂ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ಇದಕ್ಕಾಗಿ ನೀವು ಪಡೆದ ಸಾಲದ ಬಗ್ಗೆ ಸಂಬಂದಿತ ಬ್ಯಾಂಕ್‌ನಿಂದ ಸ್ಟೇಟ್‌ಮೆಂಟ್ ಅಥವಾ ಪತ್ರವೊಂದನ್ನು ನೀಡಬೇಕಾಗುತ್ತದೆ.
ಇನ್ನು ವಿಮೆ, ರಾಷ್ಟ್ರೀಯ ಉಳಿತಾಯ ಪತ್ರ, ಶಿಕ್ಷಣ ಶುಲ್ಕವಾಗಿ ನೀವು ಪಾವತಿಸಿದ ಹಣದ ರಸೀದಿಯ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ, ಇವುಗಳಿಂದಲೂ ಆದಾಯ ತೆರಿಗೆಗೆ ವಿನಾಯಿತಿ ಪಡೆಯಬಹುದು.
ನಿಮ್ಮ ವೈದ್ಯಕೀಯ ವೆಚ್ಚದ ಬಿಲ್ಲನ್ನು ಕೂಡ ಪಾವತಿಸಿ ವಿನಾಯಿತಿ ಕೋರಬಹುದು. ಇದಕ್ಕೂ ಮುನ್ನ ನಿಮ್ಮ ವೈದ್ಯಕೀಯ ವೆಚ್ಚದ ಮಿತಿ ಎಷ್ಟು ಎಂಬುದನ್ನು ಉದ್ಯೋಗದಾತರಿಂದ ಕೇಳಿ ತಿಳಿದುಕೊಳ್ಳಿ.
ಗೃಹಸಾಲದ ಮೇಲಿನ ಬಡ್ಡಿ:
     ಗ್ರಾಹಕ ಗೃಹಸಾಲವನ್ನು ಪಡೆದಾಗ ಸಾಲದ ಮರುಪಾವತಿ ವೇಳೆ ಆತ ಪ್ಲೋಟಿಂಗ್ ಇಲ್ಲವೇ ಫಿಕ್ಸೆಡ್ (ನಿಶ್ಚಿತ) ಬಡ್ಡಿದರಗಳ ಪೈಕಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಮಾರುಕಟ್ಟೆಯ ಸ್ಥಿತಿಗತಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನ ನೀತಿ, ನಿಯಮಗಳಿಗೆ ಅನುಗುಣವಾಗಿ ಬ್ಯಾಂಕ್‌ಗಳು ಗೃಹಸಾಲದ ಮೇಲಿನ ಬಡ್ಡಿದರವನ್ನು ಆಗಾಗ ಬದಲಾಯಿಸುತ್ತಲೇ ಇರುತ್ತವೆ. ಈ ಬದಲಾವಣೆ ಸಾಧಾರಣವಾಗಿ ಪ್ಲೋಟಿಂಗ್ (ಚಲಾವಣೆಯ)ಬಡ್ಡಿದರಕ್ಕೆ ಹೆಚ್ಚು ಅನ್ವಯವಾಗುತ್ತದೆ. ಕಾರಣ, ಪ್ಲೋಟಿಂಗ್ ದರಗಳು ಮಾರುಕಟ್ಟೆ ಸ್ಥಿತಿಗತಿ ಹಾಗೂ ರಿಸರ್ವ್ ಬ್ಯಾಂಕ್‌ನ ನೀತಿಗೆ ಅನುಗುಣವಾಗಿ ಬದಲಾಗುವ ದರಗಳು. ಇದು ಗ್ರಾಹಕನ ಮೇಲೆ ಹೆಚ್ಚಿನ ಹೊರೆ ಬೀಳಲು ಕಾರಣವಾಗಬಹುದು.
     ಉದಾಹರಣೆಗೆ ನೀವು ಮನೆಯೊಂದರ ಖರೀದಿಗಾಗಿ ಬ್ಯಾಂಕ್‌ನಿಂದ ೨೦ ಲಕ್ಷ ರೂ. ತೆಗೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳೋಣ. ಶೇ. ೯ರ ಪ್ಲೋಟಿಂಗ್ ಬಡ್ಡಿದರದನ್ವಯ ೧೫ ವರ್ಷಗಳ ಕಾಲಾವದಿಯಲ್ಲಿ ಈ ಸಾಲವನ್ನು ತೀರಿಸುವ ಯೋಜನೆ ನಿಮ್ಮದು. ಇದಕ್ಕಾಗಿ ನೀವು ತಿಂಗಳಿಗೆ ೨೦,೦೦೦ ರೂ.ಗಳ ಕಂತು ಕಟ್ಟುತಿದ್ದೀರಿ ಎಂದಿಟ್ಟುಕೊಳ್ಳೋಣ. ಒಂದು ವೇಳೆ ಪ್ಲೋಟಿಂಗ್ ಬಡ್ಡಿದರ ಶೇ. ೧೨ಕ್ಕೆ ಏರಿದರೆ ನೀವು ತಿಂಗಳಿಗೆ ಸರಿ ಸುಮಾರು ೨೪,೦೦೦ರೂ. ಕಟ್ಟಬೇಕಾಗಿ ಬರಬಹುದು. ಒಂದು ವೇಳೆ ಬಡ್ಡಿದರ ಶೇ. ೭ಕ್ಕೆ ಇಳಿದರೆ, ತಿಂಗಳ ಕಂತು ೧೮,೦೦೦ ರೂ.ಗಳಿಗೆ ಇಳಿಯಬಹುದು.
ಆಗ ಎರಡು ಆಯ್ಕೆಗಳು ನಿಮ್ಮ ಮುಂದಿರುತ್ತವೆ. ಮೊದಲನೆಯ ಆಯ್ಕೆಯಾಗಿ ತಿಂಗಳ ಕಂತನ್ನು ಅಷ್ಟೇ ಪ್ರಮಾಣದಲ್ಲಿ ಇಟ್ಟುಕೊಂಡು ಸಾಲ ತೀರಿಸುವ ಅವದಿಯನ್ನು ಹೆಚ್ಚಿಸಿಕೊಳ್ಳಬಹುದು. ಅಂದರೆ ೧೫ ವರ್ಷಗಳ ಅವದಿಯನ್ನು ೧೬ ಅಥವಾ ೧೭ ವರ್ಷಗಳಿಗೆ ವಿಸ್ತರಿಸಿಕೊಳ್ಳಬಹುದು. ಇಲ್ಲವೇ ಎರಡನೆಯ ಆಯ್ಕೆಯಾಗಿ ಸಾಲ ತೀರಿಸುವ ಅವದಿಯನ್ನು ಹಾಗೆಯೇ ಇಟ್ಟುಕೊಂಡು, ತಿಂಗಳ ಕಂತಾಗಿ ಹೆಚ್ಚಿನ ಹಣವನ್ನು ಕಟ್ಟಬಹುದು. ಈ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ನಿಮ್ಮ ಬ್ಯಾಂಕ್‌ನ ಸಲಹೆ ಸೂಚನೆ ಪಡೆದುಕೊಳ್ಳುವುದು ಉತ್ತಮ.
ಸ್ವ-ಉದ್ಯೋಗಿಗಳಿಗೆ: 
ಸ್ವ-ಉದ್ಯೋಗಿಗಳು ವ್ಯವಹಾರಕ್ಕೆ ಸಂಬಂಧಪಟ್ಟ ಎಲ್ಲಾ ಖರ್ಚುಗಳಿಗೂ ಆದಾಯ ತೆರಿಗೆಯಿಂದ ವಿನಾಯಿತಿ ಕೋರಬಹುದು. ಕಚೇರಿ ಬಾಡಿಗೆ, ಉದ್ಯೋಗಿಗಳಿಗೆ ನೀಡುವ ಸಂಬಳ, ಉದ್ಯೋಗ ನಡೆಸಲು ಬೇಕಾದ ಕಚ್ಚಾ ಪದಾರ್ಥಗಳು, ನಿರ್ವಹಣಾ ವೆಚ್ಛ ಸೇರಿದಂತೆ ವ್ಯವಹಾರಕ್ಕೆ ಸಂಬಂಧಪಟ್ಟ ಎಲ್ಲಾ ವೆಚ್ಚಗಳು ವಿನಾಯಿತಿ ವ್ಯಾಪ್ತಿಗೆ ಬರುತ್ತವೆ. ಆದರೆ, ಇದಕ್ಕೆಲ್ಲಾ ಸೂಕ್ತ ದಾಖಲೆ ಪತ್ರಗಳನ್ನು ಇಟ್ಟಿರಬೇಕು. ಒಂದು ವೇಳೆ ಉದ್ಯೋಗದಲ್ಲಿ ನಷ್ಟ ಉಂಟಾಗುತ್ತಿದ್ದರೆ ದಾಖಲೆ ಸಮೇತ ಆ ನಷ್ಟವನ್ನೂ ತೋರಿಸಿ ತೆರಿಗೆಯಿಂದ ವಿನಾಯಿತಿ ಕೋರಬಹುದು.
ನೇರ ತೆರಿಗೆ ನಿಯಮಾವಳಿ: 
ಮುಂಬರುವ ಬಜೆಟ್ ಅವೇಶನದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಪಿಎ ಸರಕಾರ ಡೈರೆಕ್ಟ್ ಟ್ಯಾಕ್ಸ್ ಕೋಡ್ (ನೇರ ತೆರಿಗೆ ನಿಮಾವಳಿ)
ವಿಧೇಯಕವನ್ನು ಮಂಡಿಸುವ ಸಾಧ್ಯತೆಯಿದೆ. ಪರಿಷ್ಕೃತ ನೇರ ತೆರಿಗೆ ಸಂಕೇತ ಎಂದು ಕರೆಯಲಾಗುವ ಈ ನಿಯಮಾವಳಿ ರಿಯಾಲ್ಟಿ ವಲಯಕ್ಕೆ ಸಾಕಷ್ಟು ಅನುಕೂಲಕರವಾಗಿದೆ ಎಂದೇ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಮನೆ ಖರೀದಿಸುವವರಿಗೆ ಇದೊಂದು ಸರಕಾರದ ಸಹಾಯ ಹಸ್ತ ಎಂದೇ ಭಾವಿಸಲಾಗಿದೆ. ಈ ನಿಯಮಾವಳಿ ಜಾರಿಗೆ ಬಂದರೆ ಸ್ವಂತಕ್ಕಾಗಿ ಮನೆ ಖರೀದಿ ಮಾಡುವವರಿಗೆ ಗೃಹಸಾಲದ ಮೇಲಿನ ಬಡ್ಡಿದರದ ಮೇಲೆ ೧.೫ ಲಕ್ಷ ರೂ.ಗಳವರೆಗೆ ತೆರಿಗೆ ವಿನಾಯಿತಿ ದೊರಕುತ್ತದೆ. ಆದರೆ, ಈ ವಿನಾಯಿತಿ ವಿಮೆ, ಭವಿಷ್ಯ ನಿದಿ ಸೇರಿದಂತೆ ತೆರಿಗೆದಾರ ಕೋರುವ ಒಟ್ಟಾರೆ ವಿನಾಯಿತಿ ವ್ಯಾಪ್ತಿಯಾದ ೩ ಲಕ್ಷ ರೂ.ಗಳ ಮಿತಿಯೊಳಗೇ ಸೇರಿಕೊಳ್ಳುತ್ತದೆ.