ರಾಮೋತ್ಸವ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮೋತ್ಸವ

ವಸಂತ ಋತುವಿನ ಆಗಮನದೊಂದಿಗೆ ಆರಂಭವಾಗುವ ಚೈತ್ರ ನವರಾತ್ರಿ ಅಥವಾ ವಸಂತೋತ್ಸವ 9 ದಿನಗಳ ಹಬ್ಬ. ಶ್ರೀರಾಮ ನವರಾತ್ರಿ ಅಥವಾ ರಾಮೋತ್ಸವ ಎಂದೇ ಇದು ಪ್ರಸಿದ್ಧಿ. ಚೈತ್ರ ಶುಕ್ಲಪಕ್ಷ ಪಾಡ್ಯ ಯುಗಾದಿಯಿಂದ ಆರಂಭಗೊಳ್ಳುವ ಹಬ್ಬದ ಆಚರಣೆ ರಾಮನವಮಿಯಂದು ಮುಕ್ತಾಯಗೊಳ್ಳುತ್ತದೆ. ರಾಮನವಮಿ, ಆದರ್ಶ ಪುರುಷೋತ್ತಮ ಶ್ರೀರಾಮಚಂದ್ರನ ಜನುಮದಿನ.
ಶ್ರೀರಾಮನ ಅವತಾರ, ಮಹಾವಿಷ್ಣುವಿನ ದಶಾವತಾರಗಳ ಪೈಕಿ 7ನೆಯದು ಎನ್ನುತ್ತವೆ ಪುರಾಣ ಗ್ರಂಥಗಳು. ರಘುವಂಶದ ರಾಜ ದಶರಥನಿಗೆ ಮೂವರು ಪತ್ನಿಯರಿದ್ದರೂ ಮಕ್ಕಳಿರಲಿಲ್ಲ. ಪುತ್ರಪ್ರಾಪ್ತಿಗಾಗಿ ಪುತ್ರಕಾಮೇಷ್ಠಿಯಾಗ ಮಾಡುವಂತೆ ಋಷಿ ವಸಿಷ್ಠರು ಸಲಹೆ ನೀಡಿದರು. ಅವರ ಸಲಹೆಯಂತೆ ರಾಜ ಯಾಗ ಮಾಡಿದ. ಯಾಗದಿಂದ ಸಂಪ್ರೀತನಾದ ಸೂರ್ಯದೇವ ಪ್ರತ್ಯಕ್ಷನಾಗಿ ಪಾಯಸವನ್ನು ಪ್ರಸಾದವನ್ನಾಗಿ ನೀಡಿದ. ಈ ಪ್ರಸಾದ ಸ್ವೀಕರಿಸಿದ ದಶರಥನ ಮಡದಿಯರು ನಾಲ್ವರು ಪುತ್ರರಿಗೆ ಜನ್ಮ ನೀಡಿದರು. ಕೌಸಲ್ಯೆಯ ಜ್ಯೇಷ್ಠ ಪುತ್ರನಾಗಿ ಶ್ರೀರಾಮ ಜನಿಸಿದ. ಚೈತ್ರ ಶುಕ್ಲಪಕ್ಷದ ನವಮಿಯಂದು ಬ್ರಾಹ್ಮಿ ಮುಹೂರ್ತದಲ್ಲಿ  ಶ್ರೀರಾಮನ ಜನನವಾಯಿತು ಎನ್ನುತ್ತದೆ ರಾಮಾಯಣ. ಹಾಗಾಗಿ, ರಾಮನ ಜನ್ಮದಿನವನ್ನಾಗಿ ರಾಮನವಮಿಯನ್ನು ಆಚರಿಸುವ ಪದ್ಧತಿ ಬೆಳೆದು ಬಂದಿದೆ.
ರಾಮ ಬೆಳಕಿನ, ಜ್ಞಾನದ ಸಂಕೇತ. ರಾಮನ ಮೊದಲ ಅಕ್ಷರ 'ರಾ'ಗೂ ಸೂರ್ಯನಿಗೂ ಅವಿನಾಭಾವ ಸಂಬಂಧವಿದೆ. ರಾಮ ಎಂಬ ಪದ ಸೂರ್ಯನ ಸಾಕ್ಷಾತ್ ರೂಪ ಎನ್ನುವ ಮಾತಿದೆ. ರಾಮನ ವಂಶ ಸೂರ್ಯವಂಶ ಅಂದರೆ ರಘುವಂಶ ಎಂಬುದು ಈ ವಾದಕ್ಕೆ ಪೂರಕ. ಕಾಕತಾಳೀಯವೆಂಬಂತೆ ಸೂರ್ಯ ಉತ್ತರ ಧ್ರುವದತ್ತ ತನ್ನ ಚಲನೆ ಆರಂಭಿಸಿದ ಫಲವಾಗಿ ಆರಂಭವಾಗುವ ಬೇಸಿಗೆ ಕಾಲದಲ್ಲಿಯೇ ರಾಮೋತ್ಸವ ಜರುಗುತ್ತದೆ. ಹಲವು ಭಾಷೆಗಳಲ್ಲಿ 'ರಾ' ಅಕ್ಷರ ಬೆಳಕು ಎಂಬರ್ಥದಲ್ಲಿ ಬಳಕೆಯಾಗುತ್ತಿದೆ. ಪುರಾತನ ಈಜೀಪ್ತಿಯನ್ನರು ಸೂರ್ಯನನ್ನು 'ಅಮೋನ್ ರಾ' ಅಥವಾ 'ರಾ' ಎಂದು ಸಂಬೋಧಿಸುತ್ತಿದ್ದರು. ಲ್ಯಾಟಿನ್ನಲ್ಲಿ 'ರಾ' ಎಂಬುದು ಬೆಳಕಿಗೆ ಪರ್ಯಾಯ ಪದ. ಇಂಗ್ಲೀಷ್ನಲ್ಲಿ ರೇಡಿಯನ್ಸ್, ರೇ, ರೇಡಿಯಂ ಎಂಬ ಪದಗಳು ಬೆಳಕಿನ ಕಿರಣದ ಹೊರಸೂಸುವಿಕೆ ಎಂಬರ್ಥ ನೀಡುತ್ತವೆ. 'ರಾಬಿ' ಎನ್ನುವುದಕ್ಕೆ ಸಂಸ್ಕೃತದಲ್ಲಿ ಸೂರ್ಯ ಎಂಬ ಅರ್ಥವಿದೆ.
 
ಅಯೋಧ್ಯೆಯಲ್ಲಿ ಭಕ್ತರ ಸಡಗರ, ಸಂಭ್ರಮ:
ಹಬ್ಬದ ದಿನ ಮನೆಗಳನ್ನು ಸ್ವಚ್ಛಗೊಳಿಸಿ, ತಳಿರು-ತೋರಣಗಳಿಂದ ಶೃಂಗರಿಸುವುದು ಸಾಮಾನ್ಯ. ಮನೆಯ ಹಿರಿಯರು ಬೆಳಗ್ಗೆಯೇ ಸ್ನಾನ ಮಾಡಿ, ದೇವರ ಪೂಜೆ ನೆರವೇರಿಸಿದರೆ, ಕಿರಿಯರು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಾರೆ. ನೀರು ಮಜ್ಜಿಗೆ, ಕೋಸಂಬರಿ ಪಾನಕಗಳನ್ನು ರಾಮನಿಗೆ ನೈವೇದ್ಯ ಮಾಡಿ, ಪ್ರಸಾದವಾಗಿ ವಿತರಿಸುವುದು ಹಬ್ಬದ ಆಚರಣೆಗಳಲ್ಲೊಂದು. ಕೆಲವೆಡೆ ಹೋಳಿಗೆ, ಗುಳಪಾಟಿಗಳನ್ನೂ ಖಾದ್ಯವಾಗಿ ತಯಾರಿಸುತ್ತಾರೆ. 
ರಾಮಭಕ್ತರಿಗಿದು ಪರ್ವಕಾಲ. ಒಂಬತ್ತು ದಿನಗಳ ಕಾಲ 'ರಾಮಚರಿತಮಾನಸ'ದ ಪಠಣ, ರಾಮ ನಾಮ ಜಪ, ರಾಮನ ಕುರಿತಾದ ಭಜನೆ, ಪೂಜೆಗಳ ಮೂಲಕ ರಾಮನ ಅನುಗ್ರಹಕ್ಕೆ ಮೊರೆ ಹೋಗುತ್ತಾರೆ. ರಾಮನವಮಿಯಂದು ಶ್ರೀರಾಮನ ದೇವಾಲಯಗಳಿಗೆ ತೆರಳುವ ಭಕ್ತರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಕೆಲವೆಡೆ ರಾಮ, ಸೀತೆ, ಲಕ್ಷ್ಮಣ ಹಾಗೂ ರಾಮಭಕ್ತ ಹನುಮನ ಶೋಭಾಯಾತ್ರೆಯೂ ಜರುಗುತ್ತದೆ.
ಶ್ರೀರಾಮ ಜನಿಸಿದನೆನ್ನಲಾದ ಅಯೋಧ್ಯೆಯಲ್ಲಿ ಈ ದಿನ ಭಕ್ತರ ಸಡಗರ, ಸಂಭ್ರಮ ಎಲ್ಲೆ ಮೀರಿರುತ್ತದೆ. ಇಲ್ಲಿನ ಪವಿತ್ರ ಸರಯೂ ನದಿಯಲ್ಲಿ ಸ್ನಾನ ಮಾಡುವ ಭಕ್ತರು, ಶ್ರೀರಾಮನ ದರ್ಶನ ಮಾಡಿ ಪುನೀತರಾಗುತ್ತಾರೆ. ಆಂಧ್ರದ ಭದ್ರಾಚಲಂನಲ್ಲಿ ರಾಮನವಮಿಯಂದು ನಡೆಯುವ 'ಸೀತಾಕಲ್ಯಾಣ ಉತ್ಸವ' ಜಗದ್ವಿಖ್ಯಾತ. ರಾಮ-ಸೀತೆಯರ ವಿವಾಹ ವಾರ್ಷಿಕೋತ್ಸವ ನಿಮಿತ್ತ ಇಲ್ಲಿ ಉತ್ಸವ ಜರುಗುತ್ತದೆ. ಆದರೆ, ಮಿಥಿಲಾ ಹಾಗೂ ಅಯೋಧ್ಯೆಯಲ್ಲಿ 'ಸೀತಾಕಲ್ಯಾಣ ಮಹೋತ್ಸವ' ಜರುಗುವುದು ವಿವಾಹ ಪಂಚಮಿಯಂದು. ಅಂದರೆ ಮಾರ್ಗಶೀರ್ಷ ಶುಕ್ಲ ಪಂಚಮಿಯಂದು. ವಾಲ್ಮೀಕಿ ರಾಮಾಯಣದ ಪ್ರಕಾರ ಸೀತಾ-ರಾಮರ ವಿವಾಹ ನಡೆದುದು ವಿವಾಹ ಪಂಚಮಿಯಂದು ಎಂಬುದು ಇದಕ್ಕೆ ಆಧಾರ.

ರಜಪೂತರಿಂದ ಶಸ್ತ್ರಾಸ್ತ್ರ ಪೂಜೆ:
ರಾವಣನ ವಿರುದ್ಧ ರಾಮ ಜಯ ಸಾಧಿಸಿದ ಕುರುಹಾಗಿ ರಜಪೂತರು ರಾಮನವಮಿಯಂದು ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳ ಪೂಜೆ ಮಾಡುತ್ತಾರೆ. ಯುದ್ಧದಲ್ಲಿ ಬಳಸಲಾಗುವ ಕುದುರೆಗಳು, ಆನೆಗಳ ಪೂಜೆಯೂ ನಡೆಯುತ್ತದೆ. ಚೈತ್ರ ನವರಾತ್ರಿ ಎಂಬ ಹೆಸರಿನಿಂದ ಆಚರಿಸಲ್ಪಡುವ ಮಹಾರಾಷ್ಟ್ರದಲ್ಲಿ ಈ ದಿನ ದೇವಿಯ ವಿಶೇಷ ಆರಾಧನೆ ಕೂಡ ನಡೆಯುತ್ತದೆ. ಕಾಂಗ್ರಾ ಜಿಲ್ಲೆಯಲ್ಲಿ ರಾಮನವಮಿ ದಿನ 'ರಾಲಿ ಮೇಳ' ಅಥವಾ 'ರಾಲಿ-ಕಾ-ಮೇಳ' ಎಂಬ ಹೆಸರಿನಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಜೇಡಿಮಣ್ಣಿನಿಂದ 'ರಾಲಿ' ಪ್ರತಿಮೆ ತಯಾರಿಸಿ, ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಮದುವೆಯಾಗದ ಹೆಣ್ಣು ಮಕ್ಕಳು ಅನುರೂಪ ವರನಿಗಾಗಿ ರಾಮನಲ್ಲಿ ಪ್ರಾರ್ಥಿಸುತ್ತಾರೆ. ಉಜ್ಜಯಿನಿ, ರಾಮೇಶ್ವರದ ರಾಮನಾಥಸ್ವಾಮಿ ದೇವಾಲಯಗಳಲ್ಲಿ ಭಕ್ತರು ಈ ದಿನ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಿಹಾರ, ಉತ್ತರ ಪ್ರದೇಶಗಳಲ್ಲಿ ಭಕ್ತರು ಸತ್ಸಂಗಗಳಲ್ಲಿ ಪಾಲ್ಗೊಳ್ಳುತ್ತಾರೆ.
ಮೈಸೂರಿನ ಸಿದ್ಧರಾಮನ ಹುಂಡಿಯಲ್ಲಿ ಊರಿನ ಪ್ರತಿ ಮನೆಯ ಮುಂದೆ ಗ್ರಾಮಸ್ಥರು ಓಕುಳಿಯಾಟ ಆಡುತ್ತಾರೆ. ಈ ಊರಿನಲ್ಲಿ 9 ಬುಡಕಟ್ಟು ಜನಾಂಗಗಳಿದ್ದು, ರಾಮನವಮಿ ಉತ್ಸವದ ಒಂದೊಂದು ದಿನ ಒಂದೊಂದು ಜನಾಂಗದ ಸದಸ್ಯರು ಪೂಜೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಹಬ್ಬದ ದಿನ ಊರಿನಾಚೆ 2 ಕಿ.ಮೀ. ದೂರವಿರುವ ನದಿಯಿಂದ ನಾಲ್ವರು ಬಾಲಕರು ಮಡಿ ನೀರು ತರುತ್ತಾರೆ. ಇವರಿಗೆ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ವೇಷ ಹಾಕಲಾಗುತ್ತದೆ. ಈ ನೀರಿನಿಂದಲೇ ಊರಿನ ಶ್ರೀರಾಮನಿಗೆ ಅಭಿಷೇಕ ಮಾಡಲಾಗುತ್ತದೆ.
ರಾಮನವಮಿ ಪ್ರಯುಕ್ತ ನಾಡಿನ ವಿವಿಧೆಡೆ ಸಂಗೀತೋತ್ಸವಗಳು ಜರುಗುವುದು ಮತ್ತೊಂದು ವಿಶೇಷ. ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಪ್ರೌಢಶಾಲಾ ಆವರಣದಲ್ಲಿ ಪ್ರತಿವರ್ಷ ನಡೆಯುವ 'ರಾಮನವಮಿ ಸಂಗೀತೋತ್ಸವ' ಸಂಗೀತಾಸಕ್ತರ ಪಾಲಿಗೆ ರಸದೂಟವಿದ್ದಂತೆ. ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ಖ್ಯಾತ ಕಲಾವಿದರಿಗೂ ಪ್ರತಿಷ್ಠೆಯ ಸಂಕೇತ.
ಆದರ್ಶ ಪುರುಷೋತ್ತಮ ಎಂದೇ ಬಿಂಬಿತನಾಗಿರುವ ಶ್ರೀರಾಮ, ಏಕಪತ್ನಿ ವ್ರತಸ್ಥ. ಪಿತೃವಾಕ್ಯ ಪರಿಪಾಲಕ. ತಂದೆಯ ವಚನ ಪಾಲನೆಗಾಗಿ ಒಲಿದು ಬಂದಿದ್ದ ರಾಜ್ಯವನ್ನೇ ತೊರೆದು, ವನವಾಸಗೈದ ಆದರ್ಶ ವ್ಯಕ್ತಿ. ಪತ್ನಿಯ ಶೀಲದ ಬಗ್ಗೆ ಅಪನಿಂದೆ ಕೇಳಿ ಬಂದಾಗ ಕೈಹಿಡಿದ ಪತ್ನಿಯನ್ನು ತುಂಬು ಗರ್ಭಿಣಿಯಿದ್ದಾಗಲೇ ಕಾಡಿಗೆ ಕಳುಹಿಸಿದ ಮಾನವಂತ. ಪ್ರಜೆಗಳನ್ನು ತನ್ನ ಮಕ್ಕಳಂತೆ ಪರಿಪಾಲಿಸಿದ ರಾಜಧರ್ಮ ಪರಿಪಾಲಕ. ಮಾನವೀಯ, ಕೌಟುಂಬಿಕ ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಆತನ ಆದರ್ಶ ಅನುಕರಣೀಯ.


ಸುಖ, ಸಂಪತ್ತು, ನೆಮ್ಮದಿಗಳಿಂದ ಕೂಡಿದ್ದ ರಾಮರಾಜ್ಯ ಧರ್ಮದ ಬೀಡಾಗಿತ್ತು ಎನ್ನುತ್ತದೆ ವಾಲ್ಮೀಕಿ ವಿರಚಿತ ರಾಮಾಯಣ ಗ್ರಂಥ. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಕೂಡ ರಾಮರಾಜ್ಯದ ಕನಸು ಕಂಡಿದ್ದರು. ಶಾಂತಿ, ಸೌಹಾರ್ದತೆಯ ಬೀಜ ಬಿತ್ತಿದ್ದರು. ಗಾಂಧೀಜಿಯ ರಾಮರಾಜ್ಯದ ಕನಸು ನನಸಾಗಲಿ, ನಾಡು ಸುಭೀಕ್ಷವಾಗಲಿ ಎಂದು ಆಶಿಸೋಣ.