ತುಳುವರ ಬಿಸುಪರ್ವ ಇಂದು

   ವಸಂತ ಋತುವಿನ ಬಿನ್ನಾಣದೊಂದಿಗೆ ಕಾಲ ನಿಯಾಮಕ ಸೂರ್ಯ ಮೇಷ ರಾಶಿ ಪ್ರವೇಶಿಸಿ ಹೊಸ ಕ್ರಮಣ ಆರಂಭಿಸುವ ಪರ್ವ ಕಾಲ ‘ಸೌರಯುಗಾದಿ’. ಗೌಜಿ - ಗದ್ದಲಗಳಿಲ್ಲದ, ಸಂಭ್ರಮದ ವಿಧಿಯಾಚರಣೆಗಳಿಲ್ಲದ ‘ಇಗಾದಿ’ ಸೌರಮಾನಿಗಳಿಗೆ ‘ವರ್ಷಾರಂಭ’. ಕೃಷಿಯನ್ನು ಆಧರಿಸಿ ಜೀವನ ರೂಪಿಸಿಕೊಂಡ ಮಣ್ಣಿನ ಮಕ್ಕಳಿಗೆ ಕೃಷಿ ಕಾರ್ಯವನ್ನು ಆರಂಭಿಸುವ ದಿನ. ಸೌರಪದ್ಧತಿಯಂತೆ ತುಳುವರ ಮೊದಲ ತಿಂಗಳು ‘ಪಗ್ಗು’. ಪಗ್ಗು ತಿಂಗಳ ಹದಿನೆಂಟು ಅಥವಾ ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಸಂಪೂರ್ಣ ತೊಡಗಿಕೊಳ್ಳುವ ಕೃಷಿಕನಿಗೆ ಸೌರ ಯುಗಾದಿಯಂದು ಸಾಂಕೇತಿಕವಾಗಿ ತನ್ನ ಚಟುವಟಿಕೆಗಳನ್ನು ಆರಂಭಿಸುವ ನಿಷ್ಠೆ ಈ ದಿನದ ಆಚರಣೆ. ‘ವಿಷು’ ಎಂಬುದು ‘ಸೌರಯುಗಾದಿ’. ಇದು ತುಳುವರಲ್ಲಿ ‘ಬಿಸು’ ಆಯಿತು. ಈ ಹೆಸರಿನಲ್ಲಿ ವಿವಿಧ ಸಾಮೂಹಿಕ ಆಚರಣೆಗಳು ಇತ್ತೀಚೆಗೆ ನಡೆಯುತ್ತಿವೆ. ದಕ್ಷಿಣ ತುಳುನಾಡಿನತ್ತ ಗಮನಿಸಿದರೆ ನಾಲ್ಕೈದು ವಿಧದ ಸೌರ ಯುಗಾದಿಯ ಆಚರಣಾ ವೈವಿಧ್ಯವಿದೆ.ಾತ್ರೆ-ನೇಮಗಳ ಸಹಿತ ಶುಭ ಶೋಭನಾದಿಗಳ ಗುಂಗಿನಿಂದ ಹೊರಬಂದು ಕೃಷಿಗೆ ತೊಡಗು ಎಂಬ ಆಶಯವೂ ‘ಸೌರಯುಗಾದಿ’ಯ ಆಚರಣೆಯಲ್ಲಿದೆ. ಹೊಸ ವರ್ಷಾರಂಭವಾಗಿರುವುದರಿಂದ ಶುಭ ಪ್ರತೀಕ್ಷೆಯೂ ಸೌರಯುಗಾದಿಯ ಆಶಯವಾಗಿದೆ. ಕೃಷಿ ಮತ್ತು ಮುಂದಿನ ವರ್ಷದ ಜೀವನ ನಿರಾತಂಕವಾಗಿ ನಡೆಯಲಿ ಎಂಬ ಹರಕೆಯೊಂದಿಗೆ ‘ಕಣಿ’ ದರ್ಶನ. ಈ ಮೂಲಕ ನೂತನ ವರ್ಷದ ಮೊದಲ ದಿನ ಮಂಗಲದ್ರವ್ಯಗಳನ್ನು ಹೊಂದಿರುವ ‘ಕಣಿ’ಯನ್ನು ನೋಡುವುದು ಹಲವೆಡೆ ಪ್ರಧಾನ ವಿಧಿಯಾಗಿ ನಡೆಯುತ್ತದೆ. ‘ಕಣಿ’ ಎಂಬುದು ಹಣ್ಣು, ಕಾಯಿ, ಅಕ್ಕಿ, ಕನ್ನಡಿ, ಚಿನ್ನಾಭರಣ ಇತ್ಯಾದಿ ಮಂಗಳ ದ್ರವ್ಯಗಳನ್ನು ದೇವರ ಮುಂದೆ ಜೋಡಿಸಿಟ್ಟು ಯುಗಾದಿಯಂದು ಬೆಳಗ್ಗೆ ಎದ್ದೊಡನೆ ನೋಡುವ ಮಂಗಲದ್ರವ್ಯ ದರ್ಶನ ಪ್ರಕ್ರಿಯೆ. ‘ಕಣಿ’ಯಿಂದ ಶುಭಫಲ ನಿರೀಕ್ಷೆ ಇದೆ. ‘ಕಣಿ’ಯೊಂದಿಗೆ ಅಟ್ಟದ ಮೇಲಿನ ‘ತಾಳೆಗರಿ’ಯ ಗ್ರಂಥಗಳನ್ನು ಸ್ವಚ್ಛಗೊಳಿಸಿ ಇಡುವ ಕ್ರಮವಿದೆ. ಇತ್ತೀಚೆಗೆ ಪಂಚಾಂಗ (ಹೊಸ)ವನ್ನು ಇಡುವುದು ರೂಢಿಯಾಗಿದೆ.
ದೇವಾಲಯಗಳಿಗೆ ಹೋಗುವುದು, ದೈವಗಳಿಗೆ ಸೇವೆ ಸಲ್ಲಿಸುವುದು ಮುಖ್ಯ ಆಚರಣೆಯಾಗುವ ಕ್ರಮವೂ ಚಾಲ್ತಿಯಲ್ಲಿದೆ. ತುಳುನಾಡಿನ ಉದ್ದಕ್ಕೂ ವೈವಿಧ್ಯದಿಂದ ನಡೆಯುವ ‘ಇಗಾದಿ’ ಅಥವಾ ‘ಯುಗಾದಿ’ ‘ವಿಷು’ ಎಂದಾಗಿ ‘ಬಿಸು’ವಾಗಿ ಆಚರಿಸಲ್ಪಡುತ್ತದೆ. ಈ ವರ್ಷದ ಮಳೆ ಹೇಗೆ ಎಂದು ಪಂಚಾಂಗ ವಿವರಿಸುವ ‘ಯುಗಾದಿಫಲ’ವು ಮಳೆಯ ಪ್ರಮಾಣವನ್ನು ತಿಳಿಸುತ್ತದೆ. ಯಾವ ಬಣ್ಣದ ಧಾನ್ಯಗಳ ಬೆಳೆ ಹುಲುಸಾಗಿ ಬೆಳೆದೀತು ಎಂಬ ಭವಿಷ್ಯವನ್ನು ತಿಳಿಯುವ ಕುತೂಹಲವು ರೈತನದ್ದಾಗಿರುತ್ತದೆ. ‘ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ’ (ಕಪ್ಪು ಬಣ್ಣದ ಧಾನ್ಯ ಅಥವಾ ಅಕ್ಕಿಯಾಗುವ ಭತ್ತದ ತಳಿ ಆದೀತೋ ಬಿಳಿ ಬಣ್ಣದವು ಆದೀತೊ ಅಥವಾ ಯಾವುದು ಒಳ್ಳೆಯದಾದೀತು) ಎಂಬ ನಿರ್ಧಾರಕ್ಕೆ ಬಂದು ‘ಕಜೆಬಿದೆ’ ಅಥವಾ ‘ಮಡಿಬಿದೆ’ಯನ್ನು ‘ಕೈಬಿತ್ತ್’ ಪಾಡುನಿ ಎಂಬ ಯುಗಾದಿಯಂದು ನಡೆಸಲಾಗುವ ಕೃಷಿ ಆರಂಭದ ಪ್ರಕ್ರಿಯೆಯಲ್ಲಿ ಅನುಷ್ಠಾನಿಸುವ ಪದ್ಧತಿ ಇತ್ತು ಎನ್ನುತ್ತಾರೆ ಹಿರಿಯರು.
ಭೂ ಸುಧಾರಣೆಯ ಪೂರ್ವದಲ್ಲಿ ‘ಬೆನ್ನಿಬುಡ್ಪುನಿ ಮತ್ತು ಮಲ್ಪುನಿ’ ಎಂಬ ನಿರ್ಣಯಕ್ಕೆ ಯಗಾದಿ ನಿಗದಿತ ದಿನವಾಗಿತ್ತು. ಕೃಷಿ ಆರಂಭವೇ ಇಲ್ಲಿಂದ ಆಗಿರುವುದರಿಂದ. ಭೂ ಒಡೆತನ ಉಳುವವನದ್ದಾಗಿರುವುದರಿಂದ ಭೂ ಒಡೆಯನಿಗೆ ಮುಂದಿನ ವರ್ಷದ ಅಥವಾ ಹೊಸ ವರ್ಷದಲ್ಲಿ ಕೃಷಿ ಮುಂದುವರಿಸಲು ‘ಬುಳೆಪು ಕಾಣಿಕೆ’ ಸಲ್ಲಿಸಿ ಅಪ್ಪಣೆ ಕೇಳುವ ಕ್ರಮವಿತ್ತು. ಈ ಆಚರಣೆಯ ಕುರುಹಾಗಿ ಊರ ದೇವಾಲಯಕ್ಕೆ ಈ ಕಾಣಿಕೆ ಸಂದಾಯದ ಸಂಪ್ರದಾಯ ಇಂದಿಗೂ ಕೆಲವೆಡೆ ಇದೆ.
ಹಳೆಯ ಕಹಿಯನ್ನು ಮರೆತು ಮುಂದೆ ಅಡಿ ಇಡುವ ಸಂಭ್ರಮದ ನಡುವೆಯೂ ‘ಬಾಗುವ’ (ನಮಸ್ಕರಿಸುವ) ಸಂದೇಶವಿದೆ. ಇದರಂಗವಾಗಿ ಮನೆಯ ಹಿರಿಯರಿಗೆ ಕಿರಿಯರು ತಲೆಬಾಗಿ ನಮಸ್ಕರಿಸುತ್ತಾರೆ. ಮನೆಮಂದಿಗೆ ಹಾಗೂ ಕೆಲಸದಾಳುಗಳಿಗೆ ಹೊಸಬಟ್ಟೆ ಕೊಡುವ ಕ್ರಮವು ‘ಇಗಾದಿ’ಯಂದು ನಡೆಯುತ್ತದೆ. ಇಗಾದಿಯ ಅಂಗವಾಗಿ ‘ತಾರಾಯಿ ಕುಟ್ಟುನಿ’ ಒಂದು ಜನಪದ ಆಟವಾಗಿ, ‘ಬಿಸುತ ಕಟ್ಟ’ ಎಂಬ ಕೋಳಿ ಅಂಕವೂ ‘ಬಿಸು’ ಅಂಗವಾಗಿ ನಡೆಯುವುದಿದೆ.