ಗೋವಾದ ಕನ್ನಡ ಮಕ್ಕಳ ಗೋಳಿದು


ಕೊಂಕಣಿ, ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಗಳ ಪ್ರಾಬಲ್ಯ ಹೊಂದಿರುವ ಗೋವಾ ರಾಜ್ಯದ ಕೆಲವೆಡೆ ಕನ್ನಡ ಭಾಷೆಯ ಕಲರವ ಇದೆ. ವಾಸ್ಕೋದ ಜುವಾರಿ ನಗರ, ಬೈನಾ, ಪಣಜಿಯ ಪರವರಿಯಂ ಮುಂತಾದೆಡೆ ಸಾಕಷ್ಟು ಕನ್ನಡ ಕುಟುಂಬಗಳು ಹಲವಾರು ವರ್ಷಗಳಿಂದ ನೆಲೆಸಿವೆ. ಉತ್ತರ ಕರ್ನಾಟಕ ಭಾಗದಿಂದ ವಲಸೆ ಬಂದಿರುವ ಸಾಕಷ್ಟು ಕೂಲಿಕಾರ್ಮಿಕ ಕುಟುಂಬಗಳು ಇಲ್ಲಿ ವಾಸ್ತವ್ಯ ಹೂಡಿವೆ. ಜೀವನ ನಿರ್ವಹಣೆಗಾಗಿ ಗೋವಾಕ್ಕೆ ವಲಸೆ ಹೋಗಿ ಆಸರೆ ಪಡೆದುಕೊಂಡಿದ್ದರೂ ತಮ್ಮ ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎನ್ನುವುದು ಇವರ ಆಸೆ. ಹಾಗಾಗಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿದ್ದಾರೆ. ಆದರೆ, ಇವರ ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿದ್ದರೆ ಕರ್ನಾಟಕಕ್ಕೇ ಬರಬೇಕು. ಕಷ್ಟಪಟ್ಟು ಪರೀಕ್ಷೆ ತೆಗೆದುಕೊಳ್ಳಬೇಕು.
ಗೋವಾದಲ್ಲಿ ವಾಸ್ತವ್ಯವಿರುವ ಕನ್ನಡಿಗರ ಮಕ್ಕಳು ಮಾತೃಭಾಷಾ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆ 16 ವರ್ಷಗಳ ಹಿಂದೆ 1ರಿಂದ 10ನೇ ತರಗತಿವರೆಗೆ ಕನ್ನಡ ಶಾಲೆ ಪ್ರಾರಂಭಿಸಿದೆ. ಈ ವಿದ್ಯಾರ್ಥಿಗಳು ಕರ್ನಾಟಕದ ಪಠ್ಯಕ್ರಮದಲ್ಲೇ ಓದುತ್ತಾರೆ. 1ರಿಂದ 9ನೇ ತರಗತಿವರೆಗಿನ ಮಕ್ಕಳು ಗೋವಾದಲ್ಲಿಯೇ ಪರೀಕ್ಷೆ ಬರೆಯುತ್ತಾರೆ. ಆದರೆ ಎಸ್ಸೆಸ್ಸೆಲ್ಸಿ ಬೋರ್ಡ್ ಪರೀಕ್ಷೆಯಾಗಿರುವುದರಿಂದ ಪರೀಕ್ಷಾ ಕೇಂದ್ರದಲ್ಲಿಯೇ ಬರೆಯಬೇಕು. ಗೋವಾದಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರ ಇಲ್ಲ. ಹಾಗಾಗಿ ಪರೀಕ್ಷೆ ಬರೆಯಲು ಕರ್ನಾಟಕಕ್ಕೇ ಬರಬೇಕಾಗಿದೆ. ಇದಕ್ಕಾಗಿ ಅವರು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಉಳಗಾದ ಶಿವಾಜಿ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಬರುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಇಲ್ಲಿನ ಮಕ್ಕಳ ಪರಿಪಾಟಲು ಮುಂದುವರೆದಿದೆ.
ಪರೀಕ್ಷಾ ಕೇಂದ್ರದ ಜೊತೆ ಈ ಮಕ್ಕಳು ಪುಸ್ತಕ ಸಮಸ್ಯೆಯನ್ನೂ ಎದುರಿಸಬೇಕಾಗಿದೆ. ಹಿಂದೆ ಪುಸ್ತಕಗಳು ಅಂಗಡಿಗಳಲ್ಲಿ ಮಾರಾಟವಾಗುತ್ತಿತ್ತು. ಪಾಲಕರು ಕರ್ನಾಟಕಕ್ಕೆ ಬಂದು ಖರೀದಿಸುತ್ತಿದ್ದರು. ಆದರೀಗ ಸರಕಾರವೇ ನೇರವಾಗಿ ಶಾಲೆಗಳಿಗೆ ಪುಸ್ತಕ ವಿತರಿಸುತ್ತಿದೆ. ಇದರಿಂದ ಇಲ್ಲಿನ ಮಕ್ಕಳಿಗೆ ಪುಸ್ತಕ ಸಿಗುತ್ತಿಲ್ಲ. ಆದರೂ, ಇವರ ಮಾತೃಪ್ರೇಮ ಕಡಿಮೆಯಾಗಿಲ್ಲ. ಹಳೆಯ ವಿದ್ಯಾರ್ಥಿಗಳ ಪುಸ್ತಕಗಳನ್ನು ಎರವಲು ಪಡೆದು ಮಕ್ಕಳು ಕಲಿಯುತ್ತಿದ್ದಾರೆ. ಇದರ ಜೊತೆಗೆ ಮುಂದಿನ ವರ್ಷದಿಂದ 5 ಮತ್ತು 8ನೇ ತರಗತಿಯ ಪಠ್ಯಕ್ರಮವನ್ನು ಬದಲಾಯಿಸುವುದಾಗಿ ಸರಕಾರ ಹೇಳುತ್ತಿದೆ. ಇದರಿಂದ ಇಲ್ಲಿನ ಮಕ್ಕಳ ಸಮಸ್ಯೆ ಇನ್ನೂ ಹೆಚ್ಚಾಗಲಿದೆ.
ಕನ್ನಡದ ಬಗ್ಗೆ ಉದ್ದುದ್ದ ಮಾತಾಡುವ, ಕನ್ನಡ ಬೆಳೆಸುವ ಬಗ್ಗೆ ಹೋರಾಟ ನಡೆಸುವ ಮಂದಿ, ಸರಕಾರ ಇವರ ಸಮಸ್ಯೆಗಳನ್ನು ಆಲಿಸಬಹುದೇ?. ಇಲ್ಲಿನ ಶಾಲೆಗಳಿಗೂ ಪುಸ್ತಕಗಳನ್ನು ಪೂರೈಕೆ ಮಾಡಲಾಗದೇ?. ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗೋವಾದಲ್ಲಿಯೂ ಪರೀಕ್ಷಾ ಕೇಂದ್ರವನ್ನು ತೆರೆಯುವುದೇ? ಕಾದು ನೋಡೋಣ.