ಅಪ್ಪೆ ದರ ದುಪ್ಪಟ್ಟು


ಉಪ್ಪಿನಕಾಯಿ ಪ್ರಿಯ ಹವ್ಯಕರಿಗೆ ಕಹಿ ಸಿದ್ದಿ. ಹವಾಮಾನ ವೈಪರೀತ್ಯದಿಂದ ಉಪ್ಪಿನಕಾಯಿಗೆ ಬಳಸುವ ಮಾವಿನ ಮಿಡಿಗೆ ಬರ ಉಂಟಾಗಿದ್ದು, ಈ ಬಾರಿ ಊಟಕ್ಕೂ ಉಪ್ಪಿನಕಾಯಿ ಮಿಡಿ ಸಿಗದ ಪರಿಸ್ಥಿತಿ ಇದೆ.
ಮಲೆನಾಡು, ಕರಾವಳಿ ಭಾಗದಲ್ಲಿ ಹೊಳೆ ಅಂಚಿನಲ್ಲಿ ಅಪ್ಪೆ, ಜೀರಿಗೆ ವಾಸನೆಯ ಮಾವಿನ ಮಿಡಿಯ ಬೆಳೆ ಇಳುವರಿ ಕುಂಠಿತವಾಗಿದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಬಾರಿ ಹುಳಿಮಾವಿಗೆ ‘ಬರ’ ಬಂದಿದೆ. ಶಿರಸಿ ಮತ್ತು ಸಾಗರ ಸೀಮೆಗಳಲ್ಲಿ ಮಿಡಿ ಮಾವು ಅಥವಾ ಹುಳಿ ಮಾವಿನ ಮರಗಳಿಂದ ಎಳೆ ಮಾವಿನ ಕಾಯಿ ಮಿಡಿಗಳನ್ನು ಕೊಯ್ದು ಊಟದ ಮೊದಲ ಉಪ್ಪಿನ ಕಾಯಿ ತಯಾರಿಕೆ ನಡೆಸುವವರಿಗೆ ಈ ಬಾರಿ ಮಿಡಿ ಮಾವಿನ ಕೊರತೆ ಉಂಟಾಗಿದೆ. ಮಾವಿನ ಮಿಡಿ ಕೊಯ್ಯುವ, ಅದನ್ನು ಉಪ್ಪಿನಲ್ಲಿ ಕೆಡದಂತೆ ಚಿಟ್ಟು ಹಾಕುವ, ಬಳಿಕ ಉಪ್ಪಿನಕಾಯಿ ತಯಾರಿಸುವ ಸಂಭ್ರಮ ಕಳೆಗುಂದಿದೆ. ಮಲೆನಾಡಿನಲ್ಲಿ ಹೊಳೆದಂಡೆಯ ಮೇಲೆ ಹುಳಿ ಮಾವಿನ ಮರಗಳಿದ್ದು, ಒಂದೊಂದು ಊರಿನಲ್ಲಿನ ಮಿಡಿ ಮಾವುಗಳು ಒಂದೊಂದು ರೀತಿಯಲ್ಲಿ ಸಿಗುತ್ತವೆ.ಈ ಬಾರಿ ಎಲ್ಲ ಮರಗಳೂ ಚಿಗುರಿ ನಿಂತಿದ್ದು, ಸಲು ಕಚ್ಚದೇ ಗ್ರಾಹಕನಿಗೆ, ಮನೆಯೊಡತಿಗೆ ನಿರಾಸೆ ಉಂಟು ಮಾಡಿದೆ.

ಅನಂತ ಭಟ್ಟನ ಅಪ್ಪೆ, ಹೊಳೆಸಾಲ ಅಪ್ಪೆ, ಕರ್ಪೂರ ಅಪ್ಪೆ, ನಾರ್ಲ ಅಪ್ಪೆ, ಕಂಚಿಹುಳಿ ಅಪ್ಪೆ, ಕುಂಬಳಗಜ್ಜಿಕಾಯಿ, ಮಾಳಂಜಿ ಅಪ್ಪೆ, ಕಾರೇಮನೆ ಅಪ್ಪೆ, ಬಾವಾಜಿ ಅಪ್ಪೆ, ಲಿಂಬು ಅಪ್ಪೆ, ಗುಂಡಪ್ಪೆ, ವೆಂಕಪ್ಪೆ, ಗಿಳಿಸುಂಡಿ ಅಪ್ಪೆ, ಹಳದೋಟ ಅಪ್ಪೆ, ಸೋಮನಳ್ಳಿ ಅಪ್ಪೆ, ಕೆಶನಿಮನೆ ಅಪ್ಪೆ, ಕರಿ ಅಪ್ಪೆ, ಬಿಳೆ ಅಪ್ಪೆ, ಗೆಣಸಿನಕುಣಿ ಅಪ್ಪೆ, ಮಟ್ಟಿನಮನೆ ಅಪ್ಪೆ, ನಾಗರಮನೆ ಅಪ್ಪೆ, ಸಾಗರ ಅಪ್ಪೆ, ಆನಂದಪುರ ಅಪ್ಪೆ, ದಂಟಕಲ್ ಅಪ್ಪೆ, ಜೀರಿಗೆ ಮಿಡಿ... ಹೀಗೆ ನೂರಕ್ಕೂ ಅಧಿಕ ತಳಿ ವೈವಿಧ್ಯಗಳು ಇಲ್ಲಿ ಸಿಗುತ್ತವೆ. ಆದರೆ, ಹವಾಮಾನ ವತ್ಯಾಸದಿಂದ ಮಾವಿನ ಕಸ ಬಾರದೇ ಎಲೆಗಳು ಚಿಗುರಿವೆ.
ವಾರ್ಷಿಕವಾಗಿ ಎರಡು, ಎರಡೂವರೆ ಸಾವಿರ ಮಿಡಿ ಮಾವು ಬಿಡುವ ಮರಗಳಲ್ಲಿ ಈ ಬಾರಿ ಎರಡನೂರು ಮಿಡಿಗಳೂ ಇಲ್ಲವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಮಿಡಿ ಮಾವಿನ ದರ ಗಗನಕ್ಕೇರಿದೆ. ಕಳೆದ ವರ್ಷ ಹೆಚ್ಚೆಂದರೆ 1 ಮಿಡಿ ಮಾವಿಗೆ 1 ರೂ. ಇತ್ತು. ಈ ವರ್ಷ ಅದೇ ಗುಣಮಟ್ಟದ ಮಿಡಿಗೆ 3 ರೂ. ಆಗಿದೆ. ಜೀರಿಗೆ ವಾಸನೆಯ ಒಂದು ಸಣ್ಣ ಮಿಡಿ ಎರಡರಿಂದ ಮೂರು ರೂ. ಬೆಲೆಗೆ ಮಾರಾಟವಾಗುತ್ತಿದೆ.