ಕಾಕಣ್ಣಾ, ಎಲ್ಲಿ ಹೋದೆಯಣ್ಣಾ...


ಹಿಂದೆ ನಮ್ಮ ಸುತ್ತಮುತ್ತಾ ಕಾ....ಕಾ....ಎಂದು ಬೊಬ್ಬಿಡುತ್ತಿದ್ದ ಕಾಗೆಗಳು ಮಾಯವಾಗಿವೆ. ಎಲ್ಲಿ ನೋಡಿದರಲ್ಲಿ ಹಿಂಡು, ಹಿಂಡಾಗಿ ಕಾ...ಕಾ... ಎನ್ನುತ್ತಿದ್ದ ಕಾಗಕ್ಕನ ಹಿಂಡು ಇತ್ತೀಚೆಗೆ ಕಡಿಮೆಯಾಗಿದೆ. ಮಾನವ ತನ್ನ ಸ್ವಾರ್ಥಕ್ಕಾಗಿ ಮರಗಳನ್ನು ಕಡಿದು ಭೂಮಿ ಬರಡು ಮಾಡುತ್ತಿದ್ದಂತೆ ಕಾಗೆಗಳ ನಾಶ, ವಲಸೆ ಆರಂಭವಾಯಿತು. ಮೊಬೈಲ್ ಟವರ್ಗಳಿಂದ ಹೊರಸೂಸುವ ತರಂಗಗಳು ಕೂಡಾ ಕಾಗೆಗಳ ಪಲಾಯನಕ್ಕೆ ಕಾರಣವಾಗಿರಬಹುದು.
ಕಾಗೆಗಳು ಪಕ್ಷಿ ಸಂತತಿಯ ಕುಲವಾದ ಕೊರ್ವಾಸ್ ಗುಂಪಿಗೆ ಸೇರಿದವುಗಳು. ಅಮೆರಿಕ, ಕೆನಡಾಗಳಲ್ಲಿ ಕಾಗೆ ಅನ್ನುವ ಶಬ್ಧವನ್ನು ಅಮೇರಿಕನ್ ಕ್ರೌ ಅಥವಾ ಕಾಗೆ ಎನ್ನಲಾಗುತ್ತದೆ. ಕೂಗುವಾಗ ಇವುಗಳು ವಿವಿಧ ಪ್ರಕಾರದ ಧ್ವನಿ ಹೊರಡಿಸುತ್ತವೆ. ಗಡಸು ಧ್ವನಿಯ ಕಾ...ಕಾ... ಉಚ್ಛಾರಣೆ ಅದರ ಹಸಿವು ಅಥವಾ ಅದರ ವಾಸಸ್ಥಳವನ್ನು ಪ್ರಸ್ತುತ ಪಡಿಸುತ್ತದೆ. ಕೆಲವೊಮ್ಮೆ ಮೆದು, ಮಧುರ ಶಬ್ಧಗಳು ತಮ್ಮ ಕರೆಯ ಅಕ್ಕರೆಯನ್ನು ಪ್ರದರ್ಶಿಸುತ್ತವೆ.
ಕಾಗೆಗೆ ಹಿಂದೂ ಸಂಸ್ಕೃತಿಯಲ್ಲಿ ಒಂದು ವಿಶೇಷ ಸ್ಥಾನಮಾನವಿದೆ. ಬೌದ್ಧ ಧರ್ಮದಲ್ಲಿ ಧರ್ಮಪಾಲ, ಮಹಾಕಾಲನನ್ನು ಕಾಗೆಯ ರೂಪದಲ್ಲಿ ಪ್ರತಿಬಿಂಬಿಸಲಾಗುತ್ತದೆ. ಭಾರತೀಯ ಹಿಂದೂ ತತ್ವದ ಪುರಾಣಗಳಲ್ಲಿ ಕಾಗೆಗಳು ಹಿರಿಯರ ರೂಪದಲ್ಲಿ ಬಂದು ಅವರ ಪರವಾಗಿ ನಾವು ನೀಡುವ ಆಹಾರ ಸೇವಿಸುತ್ತವೆ ಎನ್ನುವ ಪ್ರತೀತಿಯಿದೆ. ಇವುಗಳನ್ನು ಬಲಿ ಎನ್ನುತ್ತಾರೆ. ಪ್ರತಿ ವರ್ಷ ಹಿಂದೂಗಳು ತಮ್ಮ ಪೂರ್ವಜರ ನೆನಪಿಗಾಗಿ ಅನ್ನಾಹಾರವನ್ನು ಶ್ರಾದ್ಧದ ದಿನ ಕಾಗೆಗಳಿಗೆ ಅರ್ಪಿಸುವ ಪದ್ಧತಿ ಇಟ್ಟುಕೊಂಡಿದ್ದಾರೆ.
ಕಾಗೆಗಳು ಮುಖ್ಯವಾಗಿ ನಮ್ಮ ಪರಿಸರ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆಯ ಸುತ್ತ ಚೆಲ್ಲಿದ ಅನ್ನದಿಂದ ಹಿಡಿದು ಸತ್ತು ಹೋದ ಇಲಿಯ ದೇಹವನ್ನು ತಿನ್ನುವ ಮೂಲಕ ಸ್ವಚ್ಛ ಮಾಡುವ ಇವುಗಳ ಪಾತ್ರ ಹಿರಿದು. ಇಂದಿನ ಯಾಂತ್ರಿಕ ಜೀವನದಲ್ಲಿ ಕಾಗೆಗಳು ಎಲ್ಲೋ ಮಾಯವಾಗುತ್ತಿರುವಂತೆ ಭಾಸವಾಗುತ್ತಿವೆ. ಪೇಟೆ, ಹಳ್ಳಿ, ಓಣಿಗಳಲ್ಲಿ ಕಾ...ಕಾ.... ಎನ್ನುತ್ತಿದ್ದ ಕೂಗು ಈಗ ಕೇಳಿಸುತ್ತಿಲ್ಲ.