ಭಾನ್ಕುಳಿಗೆ ಬನ್ನಿ, ರಾಮನ ಕೃಪೆಗೆ ಪಾತ್ರರಾಗಿ

ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗದರ್ಶನದಲ್ಲಿ ಏ. 25ರಿಂದ 4 ದಿನಗಳ ಕಾಲ ಭಾನ್ಕುಳಿಯ ರಾಮದೇವ ಮಠದಲ್ಲಿ ಶಂಕರಪಂಚಮೀ ಕಾರ್ಯಕ್ರಮ ನಡೆಯಲಿದೆ.

ಗೋಕರ್ಣ ಮಂಡಲಾಧೀಶ್ವರ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಭಾನ್ಕುಳಿ ಮಠ, ಉತ್ತರ ಕನ್ನಡ ಜಿಲ್ಲೆ, ಸಿದ್ದಾಪುರ ತಾಲೂಕಿನಲ್ಲಿದೆ. ಆದಿಗುರು ಶಂಕರಾಚಾರ್ಯರು ಸುಸ್ಥಿರಗೊಳಿಸಿದ ಅದ್ವೈತ ಸಿದ್ಧಾಂತ ಪರಿಪಾಲಿಸಿಕೊಂಡು ಬರುತ್ತಿರುವ ಸಿದ್ಧಾಪುರ ತಾಲೂಕಿನ ಬಿಳಗಿ ಸೀಮೆಯ ಭಾನ್ಕುಳಿ ಶ್ರೀ ರಾಮದೇವ ಮಠ ಹವ್ಯಕರ ಧಾರ್ಮಿಕ ಶ್ರದ್ಧಾಕೇಂದ್ರವಾಗಿ ಹಲವು ಶತಮಾನಗಳಿಂದ ನಡೆದುಕೊಂಡು ಬಂದಿದೆ.
ನಿಸರ್ಗದ ಸುಂದರ ಮಡಿಲಲ್ಲಿ ನೆಲೆನಿಂತಿರುವ ಪರಿವಾರಸಹಿತ ಶ್ರೀರಾಮದೇವರು ಇಲ್ಲಿ ಅನಾದಿಕಾಲದಿಂದ ಪೂಜಿಸಲ್ಪಡುತ್ತಿದ್ದು ಸರ್ವಸಂಗಪರಿತ್ಯಾಗಿಗಳಾದ ಅನೇಕ ಯತಿವರ್ಯರು ಇಲ್ಲಿ ದಿವ್ಯವಾದ ತಪಸ್ಸನ್ನು ಕೈಗೊಂಡಿದ್ದು ಇದೊಂದು ಪವಿತ್ರ ತಾಣವಾಗಿ ಬೆಳಗುತ್ತಿದೆ.
ಶ್ರೀಮಠದ ಇತಿಹಾಸದ ಕುರಿತು ನಿರ್ದಿಷ್ಟ ದಾಖಲೆ ದೊರೆಯದಿದ್ದರೂ ಮಠದ ಆವರಣದಲ್ಲಿರುವ ಬ್ರಹ್ಮೀಭೂತರಾದ 9 ಶ್ರೀಗಳ ಪವಿತ್ರ ಸಮಾಧಿಗಳು ಭಾನ್ಕುಳಿ ಮಠದ ಸುಧೀರ್ಘ ಇತಿಹಾಸಕ್ಕೆ ಸಾಕ್ಷಿ ಒದಗಿಸುವಂತಿದೆ. 13 ಯತಿವರ್ಯರು ಇಲ್ಲಿ ಜಪ-ತಪ ಅನುಷ್ಠಾನ ನಡೆಸಿದ್ದಾರೆಂದು ಹೇಳಲಾಗುತ್ತಿದ್ದು, ಕನಿಷ್ಠ ಐದು ಶತಮಾನಗಳಷ್ಟು ಹಿನ್ನೆಲೆಯನ್ನು ಈ ಮಠವು ಹೊಂದಿರಬಹುದೆಂದು ತಿಳಿದು ಬರುತ್ತದೆ. 1924ರ ಸುಮಾರಿಗೆ ಶ್ರೀ ಕೃಷ್ಣಾನಂದ ಭಾರತೀ ಸ್ವಾಮಿಗಳವರು ಇಲ್ಲಿ ಮಠಾಧೀಶರಾಗಿ ತಪಸ್ಸು, ಅನುಷ್ಠಾನಗಳನ್ನು ನಡೆಸಿಕೊಂಡುಬಂದ ಕುರಿತು ದಾಖಲೆ ಲಭ್ಯವಿದೆ.
ಕೃಷ್ಣಾನಂದ ಭಾರತೀಯವರು ಶಿಷ್ಯಪರಿಗ್ರಹ ಮಾಡದೇ 1942ರಲ್ಲಿ ಮುಕ್ತರಾದಾಗ ಕೆಲಕಾಲ ಮಠ ಗುರುಮಾರ್ಗದರ್ಶನದಿಂದ ವಂಚಿತವಾಗಿದ್ದು ಕಂಡು ಬರುತ್ತದೆ. 1954ರ ಅಮೃತಘಳಿಗೆಯಲ್ಲಿ ಭಾನ್ಕುಳಿ ಮಠ ಶಂಕರಾಚಾರ್ಯ, ಗೋಕರ್ಣ ಮಂಡಲಾಧೀಶ್ವರ ರಾಘವೇಂದ್ರ ಭಾರತೀ ಸ್ವಾಮಿಗಳು ವಿರಾಜಮಾನರಾಗಿದ್ದ ರಾಮಚಂದ್ರಾಪುರ ಮಠಕ್ಕೆ ಸಮರ್ಪಿಸಲ್ಪಟ್ಟಿತ್ತು. ಅಂದಿನಿಂದ ಭಾನ್ಕುಳಿ ಮಠಕ್ಕೆ ಶ್ರೀಗುರು ಸಾನ್ನಿಧ್ಯ ಒದಗಿ ಹೊಸ ಶಕೆಯೊಂದು ಪ್ರಾರಂಭವಾದಂತಾಯಿತು.
ಅಂದಿನ ಈ ಮಹತ್ವದ ಸಂದರ್ಭದಲ್ಲಿ ಶಿರಳಗಿ ಸುಬ್ರಾಯ ಭಟ್ಟರು, ಕೊಳಗಿ ಸುಬ್ರಾಯ ಹೆಗಡೆಯವರು ಕನ್ನಳ್ಳಿ ಶಿವರಾಮ ಹೆಗಡೆಯವರು, ಹೊಸಕೊಪ್ಪ ಗಣೇಶ ಹೆಗಡೆಯವರು, ದೊಡ್ಮನೆ ನಾಗೇಶ ಹೆಗಡೆಯವರು, ತಾರಖಂಡ ಸೀತಾರಾಮ ಹೆಗಡೆಯವರು ಹಾಗೂ ರಾಷ್ಟ್ರನಾಯಕರಾಗಿ ಕೀರ್ತಿ ತಂದಿರುವ ದೊಡ್ಮನೆ ರಾಮಕೃಷ್ಣ ಹೆಗಡೆಯವರು ಪಾಲ್ಗೊಂಡಿದ್ದರು.
ಶಂಕರಭಗವತ್ಪಾದರಿಂದ ಸ್ಥಾಪಿಸಲ್ಪಟ್ಟು ಅವಿಚ್ಛಿನ್ನ ಪರಂಪರೆಯಲ್ಲಿ 35ನೇ ಪೀಠಾಪತಿಗಳಾದ ರಾಘವೇಂದ್ರ ಭಾರತೀ ಸ್ವಾಮಿಗಳವರ ಅನುಗ್ರಹ, ಮಾರ್ಗದರ್ಶನದಿಂದಾಗಿ ಮಠದ ಪ್ರಧಾನ ಕಟ್ಟಡದ ಪುನರ್ ನಿರ್ಮಾಣ ನೆರವೇರಿತು.
1992ರಲ್ಲಿ ಶ್ರೀಗಳ ಆದೇಶದಂತೆ ಶ್ರೀರಾಮದೇವರಿಗೆ ನೂತನ ಗರ್ಭಗುಡಿ ನಿರ್ಮಿಸಲು ನಿರ್ಣಯಿಸಲಾಯಿತು. 1997ರಲ್ಲಿ ದೇವತಾಪ್ರತಿಷ್ಠೆ, ಶಿಖರ ಸ್ಥಾಪನೆ ಮುಂತಾದ ಕಾರ್ಯಕ್ರಮಗಳು ರಾಘವೇಂದ್ರ ಸ್ವಾಮಿಗಳವರಿಂದ ಯಶಸ್ವಿಯಾಗಿ ನಡೆಯುವಂತಾಯಿತು. ಇಂದು ವಿಶಾಲವಾದ ಕಟ್ಟಡ, ಸುಸಜ್ಜಿತವಾದ ಸಭಾಭವನ ಹೊಂದಿರುವ ಮಠವು ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ, ವಟುಶಿಕ್ಷಣ ಶಿಬಿರಕ್ಕೆ, ಸಾಂಸ್ಕೃತಿಕ, ಸಾಮಾಜಿಕ, ಕಾರ್ಯಕ್ರಮಗಳಿಗೆ ಒಂದು ಉತ್ತಮ ತಾಣವಾಗಿ ಗುರುತಿಸಲ್ಪಟ್ಟಿದೆ. ಮಲೆನಾಡು ಗಿಡ್ಡ ತಳಿಯ ಗೋಶಾಲೆಯು ಇಲ್ಲಿ ತಲೆಯೆತ್ತಿದೆ.