ಈ ಬಾರಿ ಮಾವು ಬಲು ದುಬಾರಿ


 ಹಣ್ಣುಗಳ ರಾಜಾ ಮಾವು ಈ ಬಾರಿ ಬಲು ದುಬಾರಿ. ಬಾಯಲ್ಲಿ ನೀರೂರಿಸುವ ಮಾವನ್ನು ಖರೀದಿಸಲು ಹೋದರೆ ಕೈ ಬಿಸಿಯಾಗುತ್ತದೆ. ಹಣ್ಣಿನ ದುಬಾರಿ ದರದಿಂದಾಗಿ ಈ ಬಾರಿ ರಸಪ್ರಿಯರಿಗೆ ಸಿಹಿ ಮಾವು ಕಹಿ ಅನುಭವ ನೀಡುತ್ತಿದೆ.
ಮಾವು ಬಲು ರುಚಿಕರ, ಎಲ್ಲರ ಬಾಯಲ್ಲೂ ನೀರೂರಿಸುತ್ತದೆ. ದಶೆರಿ, ಲಂಗಡಾ, ಬೇನಿಷಾ,, ಹಿಮಾಯತ್, ಕೆಸರ್, ತೋತಾಪೂರಿ, ಪೆದ್ದಾ ರಸಾಲ್, ಮಲ್ಲಿಕಾ, ರಸಪೂರಿ ಹೀಗೆ ವಿವಿಧ ತರಹೇವಾರಿ ತಳಿಯ ಮಾವುಗಳು ತಿನ್ನಲು ಬಲು ಸ್ವಾದಕರ.
ಹವಾಮಾನದ ವೈಪರೀತ್ಯ ಮತ್ತು ತೇವಾಂಶದ ಕೊರತೆಯಿಂದಾಗಿ ಹಿಂದಿನ ವರ್ಷಕ್ಕಿಂತ ಈ ಸಲ ಮಾವು ಉತ್ಪಾದನೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ ಉತ್ತಮ ಬೆಳೆ ಬಂದಿತ್ತು. ಈ ಸಾರಿ ಮಾವು ನಿರೀಕ್ಷಿತ ಮಟ್ಟದಲ್ಲಿ ಹೂವನ್ನೇ ಬಿಟ್ಟಿಲ್ಲ. ಚೆನ್ನಾಗಿ ಹೂವು ಬಿಟ್ಟರೂ ಹವಾಮಾನದ ವೈಪರೀತ್ಯ, ಉರಿ ಬಿಸಿಲಿನಿಂದ ಕಡಿಮೆ ಇಳುವರಿ ನೀಡಿದೆ. ಬಿರುಗಾಳಿ ಮತ್ತು ಅಕಾಲಿಕ ಮಳೆಯಿಂದಾಗಿ ಅಲ್ಪ, ಸ್ವಲ್ಪ ಸಲು ಕೈಗೆಟಕುವುದು ಕಷ್ಟವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು. ತತ್ಪರಿಣಾಮ ಹಣ್ಣಿನ ರಾಜನ ಬೆಲೆ ಗಗನಕ್ಕೇರಿದೆ.
ಪ್ರತಿ ವರ್ಷ ಮಾವಿನ ಸೀಜನ್ ಪ್ರಾರಂಭವಾಗುತ್ತಿದ್ದಂತೆ ಮಾವಿನ ದರ ಏರಿಕೆಯಲ್ಲಿದ್ದು, ಕ್ರಮೇಣ ಕಡಿಮೆಯಾಗುತ್ತಿತ್ತು. ಆದರೆ, ಈ ಬಾರಿ ಮಾವಿನ ಅರ್ಧ ಸೀಜನ್ ಮುಗಿದರೂ ದರ ಇಳಿಕೆಯಾಗಿಲ್ಲ. ಬದಲಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಗ್ರಾಹಕರು ದುಬಾರಿ ಹಣ ಕೊಟ್ಟು ಮಾವು ಖರೀದಿಸುವ ಸ್ಥಿತಿ ಇದೆ. ಈಗ ಮಾರುಕಟ್ಟೆಯಲ್ಲಿ ಕೆ.ಜಿ. ಗೆ ಆೂಸು 70ರಿಂದ 80 ರೂ, ಮಲ್ಲಿಕಾ 60ರಿಂದ 100, ೈರಿ 40ರಿಂದ 50 ರೂ., ರತ್ನಾಗಿರಿ ಆೂಸ್ 150ರಿಂದ190 ರೂ., ಕರಿಈಶಾಡ 90ರಿಂದ 150 ರೂ., ದಶೆರಿ 60-65ರೂ., ಹಿಮಾಯತ್ 55-60 ರೂ., ಲಂಗಡಾ 45-50 ರೂ., ಬೆನೀಷಾ 40-50ರೂ., ಕೆಸರ್ 35-40 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ದುಬಾರಿ ಅಂತ ಮಾವಿನ ಹಣ್ಣನ್ನು ತಿನ್ನದೇ ಇರುವುದಕ್ಕೆ ಸಾಧ್ಯವಿಲ್ಲವಲ್ಲ. ಹೀಗಾಗಿ ಸ್ವಲ್ಪವೇ ಹಣ್ಣುಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಹಾಗಾಗಿ, ಈ ಸಲ ಮಾವಿನ ಹಣ್ಣಿನ ವ್ಯಾಪಾರ ಫುಲ್ ಡಲ್.

ಶಾಲಾ ಆರಂಭಕ್ಕೆ ಸಾಗಿದೆ ಸಿದ್ಧತೆ

 ಶಾಲಾ ಪ್ರಾರಂಭಕ್ಕೆ ಇನ್ನೂ ಕೆಲವೇ ದಿನಗಳು ಉಳಿದಿವೆ. ಶಾಲೆಗಳ ಆರಂಭಕ್ಕೆ ಸಿದ್ಧತೆಗಳು ಜೋರಾಗಿವೆ. ಪೋಷಕರು ಬ್ಯುಸಿಯಾಗುತ್ತಿದ್ದಾರೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳು ಮೇ 29ಕ್ಕೆ, ಖಾಸಗಿ ಶಾಲೆಗಳು ಜೂ.1ಕ್ಕೆ ಆರಂಭಗೊಳ್ಳಲಿವೆ. ಶಾಲೆಗಳು ಮತ್ತು ಮಳೆಗಾಲ ಸಾಮಾನ್ಯವಾಗಿ ಹೊಂದಿಕೊಂಡೆ ಪ್ರಾರಂಭವಾಗುತ್ತವೆ. ಹಾಗಾಗಿ ಪೋಷಕರು ಇವರೆಡಕ್ಕೂ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.
ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಉಚಿತವಾಗಿ ದೊರೆಯುತ್ತವೆ. ಆದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳೇ ಇವುಗಳನ್ನು ಖರೀದಿಸಬೇಕಾಗುತ್ತದೆ. ಹೆಚ್ಚಿನ ಶಾಲೆಗಳಲ್ಲಿ ಪಠ್ಯ ಹಾಗೂ ಬರೆಯುವ ಪುಸ್ತಕಗಳನ್ನು ಶಾಲೆಗಳಲ್ಲೇ ಮಕ್ಕಳಿಗೆ ಸರಬರಾಜು ಮಾಡಲಾಗುತ್ತದೆ. ಕೆಲವು ಶಾಲೆಗಳಲ್ಲಿ ಪಠ್ಯ, ಪುಸ್ತಕಗಳನ್ನು ನೀಡಿ ನೋಟ್ಸ್ ಪುಸ್ತಕಗಳ ಪಟ್ಟಿಯನ್ನು ನೀಡುತ್ತಾರೆ. ಮಕ್ಕಳು ಪುಸ್ತಕ ಅಂಗಡಿಗಳಲ್ಲಿ ಇವುಗಳನ್ನು ಖರೀದಿಸಬೇಕಾಗುತ್ತದೆ. ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಮಳಿಗೆಗಳಲ್ಲಿ ನೋಟ್ಸ್ಪುಸ್ತಕಗಳ ಬೃಹತ್ ದಾಸ್ತಾನು ಮಾಡಲಾಗುತ್ತದೆ. ಇಷ್ಟು ಇದ್ದರೂ ಕೊನೆಗಳಿಗೆಯಲ್ಲಿ ನೋಟ್ಸ್ ಪುಸ್ತಕಗಳ ಕೊರತೆ ಕಾಡುತ್ತದೆ.
ಶಾಲಾ ಸಿದ್ಧತೆಯಲ್ಲಿ ಬರೇ ಪುಸ್ತಕಗಳು ಮಾತ್ರವಲ್ಲ. ಸಮವಸ್ತ್ರ, ಉಡುಪುಗಳು, ಸ್ಕೂಲ್ ಬ್ಯಾಗ್ಗಳು, ಟಿಫಿನ್ ಕ್ಯಾರಿಯರ್, ನೀರಿನ ಬಾಟಲ್, ಶೂ, ಕೊಡೆ, ರೈನ್ಕೋಟ್, ಚಪ್ಪಲಿಗಳು ಹೀಗೆ ಹತ್ತಾರು ಪರಿಕರಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಈಗಲೇ ಬ್ಯುಸಿಯಾಗಬೇಕು. ತಮ್ಮ ಬಜೆಟ್ಗಳಿಗೆ ಅನುಗುಣವಾಗಿ ಪರಿಕರಗಳನ್ನು ಖರೀದಿಸಬೇಕಾಗುತ್ತದೆ. ಸಾಲ ಮಾಡಿಯಾದರೂ ಇವುಗಳನ್ನು ಖರೀದಿಸಬೇಕಾದುದು ಅನಿವಾರ್ಯ.
ಉಚಿತ ನೋಟ್ ಪುಸ್ತಕಗಳ ವಿತರಣೆ
ಬಡಮಕ್ಕಳಿಗೆ ಉಚಿತ ಪುಸ್ತಕಗಳ ವಿತರಣೆ ಒಂದು ಮಹತ್ವದ ಕಾರ್ಯಕ್ರಮ. ಹಲವಾರು ಸಂಘಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಬಡ ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಕಾರ್ಯವನ್ನು ಆರಂಭಿಸುತ್ತವೆ. ಈ ಸಮಾಜಮುಖಿ ಕಾರ್ಯ ಬಡಪೋಷಕರ ಹೊರೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕುಗ್ಗಿಸುತ್ತದೆ. ಶಾಲೆಯ ಆರಂಭದ ಸಮಯದಲ್ಲೇ ಈ ಪುಸ್ತಕಗಳು ವಿತರಣೆಯಾದರೆ ಮಕ್ಕಳಿಗೆ ಹೆಚ್ಚು ಉಪಯುಕ್ತ. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಈಗಾಗಲೇ ಕಾರ್ಯಕ್ರಮಗಳನ್ನು ಆರಂಭಿಸಿಕೊಂಡಿವೆ. ಇನ್ನು ಕೆಲವು ಸಂಘಸಂಸ್ಥೆಗಳು ಸದಸ್ಯರ ದೇಣಿಗೆ, ದಾನಿಗಳ ನೆರವು ಹೊಂದಿಸಿಕೊಂಡು ಉಚಿತ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿವೆ.
ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗಳ ಪ್ರವೇಶಾತಿಗೆ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚಿನ ದಟ್ಟಣೆ ಇರುತ್ತದೆ. ಈ ತರಗತಿಗಳಿಗೆ ಪ್ರವೇಶಾತಿ ಪಡೆಯುವುದು ಇತ್ತೀಚಿನ ವರ್ಷಗಳಲ್ಲಿ ಸುಲಭದ ಮಾತಲ್ಲ. ಕೆಲವು ಶಾಲೆಗಳಲ್ಲಿ ಮಕ್ಕಳ ಜತೆಗೆ ತಂದೆ ತಾಯಿಗಳಿಗೆ ಬೇರೆ ಸಂದರ್ಶನವಿರುತ್ತದೆ. ಹೆಚ್ಚಿನ ವಿದ್ಯಾಸಂಸ್ಥೆಗಳಲ್ಲಿ ಈಗಾಗಲೇ ಪ್ರವೇಶಾತಿ ಪ್ರಕ್ರಿಯೆ ಬಹುತೇಕ ಮುಗಿದಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ವಾಹನಗಳಲ್ಲಿ ಸೀಟು ಕಾದಿರಿಸುವಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಶಾಲಾ ವಾಹನಗಳು, ರಿಕ್ಷಾಗಳು ವಾಹನಗಳನ್ನು ರಿಪೇರಿ ಮಾಡಿ ಸುಸಜ್ಜಿತಗೊಳಿಸುವ ಕಾರ್ಯ ಆರಂಭಿಸಿವೆ.
ಸರಕಾರಿ ಶಾಲೆಗಳಲ್ಲಿ ಮೇ 29ರಂದು ಶಾಲಾ ಪ್ರಾರಂಭೋತ್ಸವ ಸಮಾರಂಭ ಆಯೋಜಿಸಲಾಗುತ್ತಿದೆ. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಅಂದು ಮಕ್ಕಳಿಗೆ ಉಚಿತ ಪಠ್ಯ, ಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಬ್ಬಂದಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಸೇವಾ ಕ್ಷೇತ್ರದಿಂದ ವಿಮುಖ, ಶಿಕ್ಷಣ ಕ್ಷೇತ್ರ

ಭಾರತ ಸರ್ಕಾರ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ-2009ನ್ನು ಜಾರಿಗೊಳಿಸಿದೆ. ಆ ಮೂಲಕ ದೇಶದ ಯಾವುದೇ ರಾಜ್ಯಗಳಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹತ್ವಾಕಾಂಕ್ಷೆ ಮೆರೆದಿದೆ. ಈ ಸಂಬಂದ ಅಗಸ್ಟ್ 27, 2009ರಂದು ಹೊರಡಿಸಿರುವ ಗೆಜೆಟ್ ಸಂಖ್ಯೆ-39ರಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಕಾಯಿದೆ-2009ನ್ನು ಪ್ರಕಟಿಸಿದೆ. ಕಾಯಿದೆಯ ಅಧ್ಯಾಯ 7ರ ಶೆಡ್ಯೂಲಿನಲ್ಲಿ ಸೆಕ್ಷನ್ 19 ಹಾಗೂ 25ರಲ್ಲಿ ನಮ್ಮ ಶಾಲಾ ಮಕ್ಕಳಿಗೆ ಎಂತಹ ಕಟ್ಟಡಗಳನ್ನು ಒದಗಿಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ.
ಆದರೆ ಇಂದು ಶಿಕ್ಷಣ ರಂಗವೇ ವಾಣಿಜ್ಯೀಕರಣಗೊಂಡು, ಶಿಕ್ಷಣೋದ್ಯಮವಾಗುತ್ತಿದೆ. ಶಿಕ್ಷಣ ಈಗ ಸೇವಾ ಕ್ಷೇತ್ರದಿಂದ ವಿಮುಖಗೊಳ್ಳುತ್ತಿದ್ದು, ಬಹುತೇಕ ಉದ್ಯಮ ರಂಗದ ತೆಕ್ಕೆಗೊಳಪಟ್ಟಿದೆ. ಮಾತೃ ಭಾಷೆಯಲ್ಲಿ ವ್ಯಾಸಂಗ ಮಾಡಿದರೆ ಉತ್ತಮ ಉದ್ಯೋಗ ದೊರೆಯುವುದಿಲ್ಲ ಎಂಬ ಕಾರಣಕ್ಕಾಗಿ ಆಂಗ್ಲ ಭಾಷಾ ಮಾಧ್ಯಮದತ್ತ  ಮಕ್ಕಳು, ಪಾಲಕರು ಆಕರ್ಷಿತರಾಗುತ್ತಿರುವುದು ಶಿಕ್ಷಣವನ್ನು ಉದ್ಯಮವಾಗಿ ಪರಿವರ್ತಿಸುವವರ ಪಾಲಿಗೆ ಬಹುದೊಡ್ಡ ವರದಾನವಾಗಿದೆ. ಕ್ಯಾಪಿಟೇಷನ್, ಡೊನೇಷನ್ಗಳ ಸಂಗ್ರಹಕ್ಕಾಗಿಯೇ ಇಂದು ನಾಡಿನ ಹಳ್ಳಿ -ಹಳ್ಳಿಗಳಲ್ಲಿ ತಲೆ ಎತ್ತಿರುವ ಖಾಸಗಿ ಶಾಲೆಗಳು, ಸರ್ಕಾರ ರೂಪಿಸಿರುವ ಹಲವಾರು ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಪಾಲಕರಲ್ಲಿನ ಆಂಗ್ಲಭಾಷಾ ಪ್ರೀತಿಯನ್ನೇ ತಮ್ಮ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಶಾಲೆಗಳು ನಾನಾ ಹಂತಗಳಲ್ಲಿ ಮಕ್ಕಳ ಬೇಕು-ಬೇಡಗಳನ್ನು ನಿರ್ಲಕ್ಷಿಸುತ್ತಿವೆ. ಶಿಕ್ಷಣ ಕಾಯಿದೆಯ ಮಾರ್ಗಸೂಚಿಯ ಉಲ್ಲಂಘನೆ ನಿರಾತಂಕವಾಗಿ ನಡೆಯುತ್ತಲೇ ಇದೆ. 
ಕನಿಷ್ಠ ಅವಶ್ಯಕತೆಗಳಾದ ಸಮರ್ಪಕ ಗಾಳಿ-ಬೆಳಕು ಸುಳಿದಾಡುವಂತಹ ಸುಸಜ್ಜಿತ ಕಟ್ಟಡ, ಚಳಿ-ಮಳೆ-ಬಿಸಿಲಿನಿಂದ ರಕ್ಷಣೆ ಒದಗಿಸುವಂತಹ ಸರ್ವ ಋತು ಕಟ್ಟಡ, ಆಟದ ಬಯಲು, ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳಿರಬೇಕೆಂಬ ನಿಯಮಗಳನ್ನು ಬಹುತೇಕ ಶಾಲೆಗಳು ಗಾಳಿಗೆ ತೂರುತ್ತಿವೆ.
ಅತಿ ಹೆಚ್ಚು ಬಿಸಿಲಿನ ಪ್ರದೇಶಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅಲ್ಲಿನ ತಾಪಮಾನಕ್ಕೆ ಹೊಂದಿಕೆಯಾಗುವಂತಹ ಕಟ್ಟಡಗಳಿಗೆ ಆದ್ಯತೆ ನೀಡಬೇಕು, ಇಲ್ಲದಿದ್ದರೆ ಎಳೆಯ ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮಗಳುಂಟಾಗುತ್ತವೆ. ಆದರೆ ಈ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಓದುತ್ತಿರುವ ಮಕ್ಕಳು ತಮ್ಮ ಕನಸುಗಳನ್ನು ಕಟ್ಟಿಕೊಳ್ಳಲು, ಭವಿಷ್ಯ ರೂಪಿಸಿಕೊಳ್ಳಲು ಕಿಷ್ಕಂದದಂತಹ ಕಟ್ಟಡಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ.
ರಾಜ್ಯದ ಕೆಲವೆಡೆಯ ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ಕೆಲವು ಶಾಲೆಗಳು ಬಾಡಿಗೆಗೆ ಪಡೆದ ಇಕ್ಕಟ್ಟಾದ ಮನೆಗಳಲ್ಲಿ ನಡೆಯುತ್ತಿವೆ. ಬಿದಿರು, ಬೊಂಬುಗಳಿಂದ ನಿರ್ಮಿಸಿದ ಗೋಡೆಗಳ ಮೇಲೆ ತಗಡುಗಳನ್ನು ಹಾಕಿ ಸುರಿವ ಬಿಸಿಲು, ಝಳದ ನಡುವೆ ಮಕ್ಕಳು ಓದು ಮುಂದುವರಿಸಬೇಕಾಗುತ್ತದೆ. ಬಹಳಷ್ಟು ಖಾಸಗಿ ಶಾಲೆಗಳಿಗೆ ಆಟದ ಬಯಲಂತೂ ಇರುವುದೇ ಇಲ್ಲ. ಶೌಚಾಲಯಗಳು ಇದ್ದರೂ ಉಪಯೋಗಿಸಲು ಬಾರದಂತಿರುತ್ತವೆ. ನೀರಿನ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆಗಳೂ ಇರುವುದಿಲ್ಲ.


ಗೇರು ಬೆಳೆಸಿ, ಹಣ ಗಳಿಸಿ

 ಗೇರು ಒಂದು ಪ್ರಮುಖವಾದ ಬೆಳೆ. ಅತ್ಯಂತ ಕಡಿಮೆ ಖರ್ಚು, ಉಪಚಾರಗಳಿಂದ ಅಕ್ಷಯ ನಿಧಿಯನ್ನೇ ಗಳಿಸಿ ಕೊಡುವ ವಿಶಿಷ್ಟ ಗುಣ ಗೇರು ಕೃಷಿಗಿದೆ. ವಿದೇಶಿ ವಿನಿಮಯ ಗಳಿಸುವ ರಾಜ್ಯದ ಮುಖ್ಯವಾದ ಬೆಳೆಯಿದು. ಇತರ ಕೃಷಿ ಬೆಳೆಗಳಿಗೆ ಬೇಕಾಗುವಷ್ಟು ಕಾರ್ಮಿಕರ ಅಗತ್ಯವಿಲ್ಲ. ಸಾಮಾನ್ಯವಾಗಿ ಬೇರಾವ ಬೆಳೆಯೂ ಬೆಳೆಯದಂಥ ಭೂಮಿಯಲ್ಲೂ ಗೇರು ಬೆಳೆಯಬಲ್ಲುದು. ತೀವ್ರ ನೀರಿನ ಅಭಾವವಿರುವ ಗುಡ್ಡ ಪ್ರದೇಶಗಳಲ್ಲೂ ಗೇರು ಚೆನ್ನಾಗಿ ಬೆಳೆಯುತ್ತದೆ.
ಜೂನ್-ಜುಲೈ ತಿಂಗಳು ಗೇರು ಸಸಿ ನಾಟಿ ಮಾಡಲು ಅತ್ಯುತ್ತಮವಾದ ಕಾಲ. ಕಸಿ ಕಟ್ಟಿದ ಗಿಡಗಳನ್ನು ನೆಡುವಾಗ ಅದರ ಬೇರುಗಳಿಗೆ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಅದರ ಬೇರಿನ ಸುತ್ತಲೂ ಮಣ್ಣನ್ನು ಸಡಿಲವಾಗಿ ತುಂಬಬೇಕು. ಈ ರೀತಿ ನಾಟಿ ಮಾಡಿದ ಸಸಿ, ಅಗಲವಾಗಿ ಹರಡಿ ಬೆಳೆಯಲು ಅವಕಾಶ ಕಲ್ಪಿಸಬೇಕು. ಉತ್ತಮ ತಳಿಗಳನ್ನು ಆಯ್ಕೆ ಮಾಡಿ ಸೂಕ್ತ ಕ್ರಮದಲ್ಲಿ ನಾಟಿ ಮಾಡಬೇಕು. ಅದಕ್ಕೆ ತಕ್ಕ ಪೋಷಣೆಯೂ ಅಗತ್ಯ. ರಸಗೊಬ್ಬರಗಳನ್ನು ಹಾಕುವುದರಿಂದ ಮರವೊಂದಕ್ಕೆ ಸುಮಾರು 4-5 ಕೆ.ಜಿಯಷ್ಟು ಇಳುವರಿಯನ್ನು ಹೆಚ್ಚು ಪಡೆಯಬಹುದು. ಗೇರಿಗೆ ವಿವಿಧ ಕೀಟ ಬಾಧೆಯೂ ಇದೆ. ಅವು ಹೂ ಬಿಡುವ ಕಾಲದಲ್ಲಿ ಹೆಚ್ಚಾಗಿ ಕೀಟಬಾಧೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಸಕಾಲದಲ್ಲಿ ಔಷಧ ಸಿಂಪಡನೆಯಿಂದ ನಿವಾರಿಸಬಹುದು.
ಗೇರು ಹಣ್ಣು ಇನ್ನೂ ಕಾಯಿಯಾಗಿರುವಾಗಲೇ ಅಥವಾ ಹಣ್ಣಾದ ನಂತರ ಕೋಲಿನಿಂದ ಬಡಿದು ಉದುರಿಸುವುದರಿಂದ ಬೆಳೆಯ ಪ್ರಮಾಣ ಕಡಿಮೆಯಾಗುವ ಸಂಭವವೇ ಹೆಚ್ಚು. ಏಕೆಂದರೆ ಹೀಗೆ ಉದುರಿಸುವಾಗ ಹಣ್ಣಿನ ಜೊತೆಗೆ ಕಾಯಿಯೂ ಬಿದ್ದು ನಷ್ಟ ಉಂಟಾಗುತ್ತದೆ. ಕಾಯಿ ಬೀಜ ಪೂರ್ತಿ ಬೆಳೆದ ಬೀಜಕ್ಕಿಂತಲೂ ತೂಕದಲ್ಲಿ ಹಗುರವಾಗಿರುತ್ತದೆ. ಗೇರು ಹಣ್ಣಿನ ಜೊತೆಗೆ ಎಳೇಕಾಯಿ, ಹೂಗಳು ಕೂಡಾ ಉದುರಿ ಬೀಳುವ ಸಾಧ್ಯತೆಗಳಿವೆ. ಗೇರು ಬೀಜಗಳು ಹಾಳಾಗುವುದನ್ನು ತಡೆಗಟ್ಟಲು ಅವುಗಳನ್ನು ಒಂದೆರಡು ದಿನ ಬಿಸಿಲಿಗೆ ಹಾಕಿ ಒಣಗಿಸಿ ತೆಗೆದಿಡುವುದು ಉತ್ತಮ. ಒಣಗಿಸುವುದರಿಂದ ಗೇರು ಬೀಜದ ತೂಕ ಸ್ವಲ್ಪ ಕಡಿಮೆಯಾದರೂ ಅಂಥ ಬೀಜಗಳಿಗೆ ಒಳ್ಳೆಯ ಬೆಲೆ ಸಿಗುವುದರಲ್ಲಿ ಅನುಮಾನವಿಲ್ಲ.
ಉಳಿದ ಹಣ್ಣುಗಳಂತೆ ಗೇರು ಹಣ್ಣು ಕೂಡ ರಸಭರಿತವಾಗಿ, ತಿನ್ನಲು ರುಚಿಕರವಾಗಿರುತ್ತವೆ. ಆದರೆ ನಮ್ಮಲ್ಲಿ ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವುದು ಕಂಡು ಬಂದಿಲ್ಲ. ಈ ಹಣ್ಣಿನಿಂದ ಅನೇಕ ಬಗೆಯ ಪಾನೀಯಗಳು, ಜಾಮ್, ಕ್ಯಾಂಡಿ, ಚಟ್ನಿ, ಉಪ್ಪಿನಕಾಯಿ ಮತ್ತು ಮಾದಕ ಪಾನೀಯಗಳನ್ನು ತಯಾರಿಸಬಹುದಾಗಿದೆ. ನರಗಳ ನೋವು ಮತ್ತು ಸಂಧಿವಾತ ರೋಗಗಳನ್ನು ಗುಣಪಡಿಸಲು ಇದರ ರಸವನ್ನು ಲೇಪಿಸಲಾಗುವುದು. ಇತರ ಎಲ್ಲಾ ಬೆಳೆಗಳಿಗಿಂತ ಸುಲಭ ಖರ್ಚಿನಲ್ಲಿ ಬೆಳೆಯುವ, ಅಧಿಕ ಆದಾಯ ತರುವ ಗೇರು ಬೆಳೆಯ ವ್ಯವಸಾಯದತ್ತ ರೈತರು ಕಾಳಜಿ ವಹಿಸಿದರೆ ರೈತನ ಉತ್ಪನ್ನ ವೃದ್ಧಿಸುವುದರಲ್ಲಿ ಸಂದೇಹವಿಲ್ಲ.


ಪರಿಶುದ್ಧ ಪ್ರೀತಿ, ದಾಂಪತ್ಯ ಬೇಕಾ..? ಹಾಗಾದರೆ ಹಳ್ಳಿಗೆ ಹೋಗಿ!

ಪರಿಶುದ್ಧ ಪ್ರೀತಿ, ದಾಂಪತ್ಯ ಬೇಕಾ.. ಹಾಗಾದರೆ ಹಳ್ಳಿಗೆ ಹೋಗಿ.. ಹಾಗಂತ ವರ್ಷಾನುಗಟ್ಟಲೆ ಹುಡುಗಿ ಹುಡುಕುವ ಕಾರ್ಯಕ್ರಮ ನಡೆಸುವ ವಿವಾಹಪೇಕ್ಷಿ ಹುಡುಗರಿಗೆ ಸಮೀಕ್ಷೆಯೊಂದು ಕಿವಿಮಾತು ಹೇಳಿದೆ.
ಪರಿಶುದ್ಧ ಪ್ರೀತಿ, ದಾಂಪತ್ಯಕ್ಕೂ, ಹಳ್ಳಿಗೂ ಅದೇನೋ ಸಂಬಂಧವಿದೆ ಎಂದು ಈ ಸಮೀಕ್ಷೆ ಓದಿದವರು ತಲೆ ಅಲ್ಲಾಡಿಸಲೇ ಬೇಕು. ಅಷ್ಟರ ಮಟ್ಟಿಗೆ ಸಮೀಕ್ಷೆ ಹಳ್ಳಿ ಬದುಕಿನ ಪ್ಲಸ್ ಪಾಯಿಂಟ್ಗಳನ್ನು ಬಿಡಿಸಿಟ್ಟಿದೆ. ಆ ಪ್ರಕಾರ, ಪೇಟೆಯವರಿಗಿಂತಲೂ ಹಳ್ಳಿ ಹುಡುಗರು, ಬಹುಬೇಗ ತಮಗೆ ಸೂಕ್ತರಾದ ಸಂಗಾತಿಯನ್ನು ಹುಡುಕಿಕೊಳ್ಳುತ್ತಾರಂತೆ. ಅಲ್ಲದೇ ಹಳ್ಳಿ ಜೋಡಿಗಳ ದಾಂಪತ್ಯವೂ ದೀರ್ಘಾವಧಿಯದ್ದು ಎಂದು ಹೇಳಲಾಗಿದೆ. ಶೇ.61ರಷ್ಟು ಮಂದಿ ಹಳ್ಳಿಯವರು ಸುದೀರ್ಘ ದಾಂಪತ್ಯ ನಡೆಸಿದಿರೆ, ನಗರದಲ್ಲಿ ಈ ಪ್ರಮಾಣ ಕೇವಲ ಶೇ.21ರಷ್ಟಿದೆಯಂತೆ. ಇನ್ನು ಹಳ್ಳಿಗಳಲ್ಲಿ ಸಂಗಾತಿಗೆ ನಿತ್ಯವೂ "ಐ ಲವ್ ಯೂ" ಎಂದು ಹೇಳಿ ಸಂಗಾತಿಯನ್ನು ಪ್ರೀತಿಸುವ ಮಟ್ಟ ಅತಿ ಹೆಚ್ಚಿದೆಯಂತೆ. ಸಂಬಂಧಗಳು ಹಳ್ಳಿಗಳಲ್ಲೇ ಹೆಚ್ಚು ಗಟ್ಟಿಯಾಗಿರುತ್ತದೆ, ಕಾರಣ ದಂಪತಿಗಳ ನಡುವಿನ ನಿಷ್ಠೆ ನಂಬುಗೆ ಹೆಚ್ಚಿದೆ. ಇದಕ್ಕೆ ವಿರುದ್ಧವಾಗಿ ಸಂಗಾತಿಯನ್ನು ವಂಚಿಸುವ ಗುಣ ನಗರವಾಸಿಗಳಲ್ಲಿ ಹೆಚ್ಚು ಎಂದು ಹೇಳಲಾಗಿದೆ. ಸಮೀಕ್ಷೆ ಹಳ್ಳಿ ಬದುಕಿನ ಲಾಭಾಂಶವನ್ನೆಲ್ಲ ಬಿಚ್ಚಿಟ್ಟಿದ್ದು, ಸುಖ ಬದುಕಿಗೆ ಹಳ್ಳಿಯೇ ಒಳ್ಳೇದು ಎಂದು ಹೇಳಿದೆ. ದುಡ್ಡೇ ಮುಖ್ಯ ಎಂದು ನಗರದವರು ಹೇಳಿದರೆ, ಪ್ರೀತಿ, ವಿಶ್ವಾಸವೇ ಬದುಕಿಗೆ ಆಧಾರ ಎಂದು ಹಳ್ಳಿಯವರು ಹೇಳುತ್ತಾರೆ ಎಂದು ಸಮೀಕ್ಷೆ ಹೇಳಿದೆ.

ನಿಮಗಿದು ನೆನಪಿರಲಿ:
ಪರಿಶುದ್ಧ ಪ್ರೀತಿ, ದಾಂಪತ್ಯಕ್ಕೆ ಹಳ್ಳಿಯೇ ದಿ ಬೆಸ್ಟ್ .
ಸುಖಕರ, ದೀರ್ಘಾವಧಿ ದಾಂಪತ್ಯ ಹಳ್ಳಿಗಳಲ್ಲೇ ಹೆಚ್ಚು.
ಹಳ್ಳಿ ದಂಪತಿ ನಡುವೆ ನಂಬುಗೆಯ ಭದ್ರ ಬೆಸುಗೆ ಉಂಟು.
ಹಳ್ಳಿಯವರಿಗೆ ದುಡ್ಡಿಗಿಂತ ಪ್ರೀತಿ, ವಿಶ್ವಾಸ ಮುಖ್ಯ.