ಪರಿಶುದ್ಧ ಪ್ರೀತಿ, ದಾಂಪತ್ಯ ಬೇಕಾ..? ಹಾಗಾದರೆ ಹಳ್ಳಿಗೆ ಹೋಗಿ!

ಪರಿಶುದ್ಧ ಪ್ರೀತಿ, ದಾಂಪತ್ಯ ಬೇಕಾ.. ಹಾಗಾದರೆ ಹಳ್ಳಿಗೆ ಹೋಗಿ.. ಹಾಗಂತ ವರ್ಷಾನುಗಟ್ಟಲೆ ಹುಡುಗಿ ಹುಡುಕುವ ಕಾರ್ಯಕ್ರಮ ನಡೆಸುವ ವಿವಾಹಪೇಕ್ಷಿ ಹುಡುಗರಿಗೆ ಸಮೀಕ್ಷೆಯೊಂದು ಕಿವಿಮಾತು ಹೇಳಿದೆ.
ಪರಿಶುದ್ಧ ಪ್ರೀತಿ, ದಾಂಪತ್ಯಕ್ಕೂ, ಹಳ್ಳಿಗೂ ಅದೇನೋ ಸಂಬಂಧವಿದೆ ಎಂದು ಈ ಸಮೀಕ್ಷೆ ಓದಿದವರು ತಲೆ ಅಲ್ಲಾಡಿಸಲೇ ಬೇಕು. ಅಷ್ಟರ ಮಟ್ಟಿಗೆ ಸಮೀಕ್ಷೆ ಹಳ್ಳಿ ಬದುಕಿನ ಪ್ಲಸ್ ಪಾಯಿಂಟ್ಗಳನ್ನು ಬಿಡಿಸಿಟ್ಟಿದೆ. ಆ ಪ್ರಕಾರ, ಪೇಟೆಯವರಿಗಿಂತಲೂ ಹಳ್ಳಿ ಹುಡುಗರು, ಬಹುಬೇಗ ತಮಗೆ ಸೂಕ್ತರಾದ ಸಂಗಾತಿಯನ್ನು ಹುಡುಕಿಕೊಳ್ಳುತ್ತಾರಂತೆ. ಅಲ್ಲದೇ ಹಳ್ಳಿ ಜೋಡಿಗಳ ದಾಂಪತ್ಯವೂ ದೀರ್ಘಾವಧಿಯದ್ದು ಎಂದು ಹೇಳಲಾಗಿದೆ. ಶೇ.61ರಷ್ಟು ಮಂದಿ ಹಳ್ಳಿಯವರು ಸುದೀರ್ಘ ದಾಂಪತ್ಯ ನಡೆಸಿದಿರೆ, ನಗರದಲ್ಲಿ ಈ ಪ್ರಮಾಣ ಕೇವಲ ಶೇ.21ರಷ್ಟಿದೆಯಂತೆ. ಇನ್ನು ಹಳ್ಳಿಗಳಲ್ಲಿ ಸಂಗಾತಿಗೆ ನಿತ್ಯವೂ "ಐ ಲವ್ ಯೂ" ಎಂದು ಹೇಳಿ ಸಂಗಾತಿಯನ್ನು ಪ್ರೀತಿಸುವ ಮಟ್ಟ ಅತಿ ಹೆಚ್ಚಿದೆಯಂತೆ. ಸಂಬಂಧಗಳು ಹಳ್ಳಿಗಳಲ್ಲೇ ಹೆಚ್ಚು ಗಟ್ಟಿಯಾಗಿರುತ್ತದೆ, ಕಾರಣ ದಂಪತಿಗಳ ನಡುವಿನ ನಿಷ್ಠೆ ನಂಬುಗೆ ಹೆಚ್ಚಿದೆ. ಇದಕ್ಕೆ ವಿರುದ್ಧವಾಗಿ ಸಂಗಾತಿಯನ್ನು ವಂಚಿಸುವ ಗುಣ ನಗರವಾಸಿಗಳಲ್ಲಿ ಹೆಚ್ಚು ಎಂದು ಹೇಳಲಾಗಿದೆ. ಸಮೀಕ್ಷೆ ಹಳ್ಳಿ ಬದುಕಿನ ಲಾಭಾಂಶವನ್ನೆಲ್ಲ ಬಿಚ್ಚಿಟ್ಟಿದ್ದು, ಸುಖ ಬದುಕಿಗೆ ಹಳ್ಳಿಯೇ ಒಳ್ಳೇದು ಎಂದು ಹೇಳಿದೆ. ದುಡ್ಡೇ ಮುಖ್ಯ ಎಂದು ನಗರದವರು ಹೇಳಿದರೆ, ಪ್ರೀತಿ, ವಿಶ್ವಾಸವೇ ಬದುಕಿಗೆ ಆಧಾರ ಎಂದು ಹಳ್ಳಿಯವರು ಹೇಳುತ್ತಾರೆ ಎಂದು ಸಮೀಕ್ಷೆ ಹೇಳಿದೆ.

ನಿಮಗಿದು ನೆನಪಿರಲಿ:
ಪರಿಶುದ್ಧ ಪ್ರೀತಿ, ದಾಂಪತ್ಯಕ್ಕೆ ಹಳ್ಳಿಯೇ ದಿ ಬೆಸ್ಟ್ .
ಸುಖಕರ, ದೀರ್ಘಾವಧಿ ದಾಂಪತ್ಯ ಹಳ್ಳಿಗಳಲ್ಲೇ ಹೆಚ್ಚು.
ಹಳ್ಳಿ ದಂಪತಿ ನಡುವೆ ನಂಬುಗೆಯ ಭದ್ರ ಬೆಸುಗೆ ಉಂಟು.
ಹಳ್ಳಿಯವರಿಗೆ ದುಡ್ಡಿಗಿಂತ ಪ್ರೀತಿ, ವಿಶ್ವಾಸ ಮುಖ್ಯ.