ಗೇರು ಬೆಳೆಸಿ, ಹಣ ಗಳಿಸಿ

 ಗೇರು ಒಂದು ಪ್ರಮುಖವಾದ ಬೆಳೆ. ಅತ್ಯಂತ ಕಡಿಮೆ ಖರ್ಚು, ಉಪಚಾರಗಳಿಂದ ಅಕ್ಷಯ ನಿಧಿಯನ್ನೇ ಗಳಿಸಿ ಕೊಡುವ ವಿಶಿಷ್ಟ ಗುಣ ಗೇರು ಕೃಷಿಗಿದೆ. ವಿದೇಶಿ ವಿನಿಮಯ ಗಳಿಸುವ ರಾಜ್ಯದ ಮುಖ್ಯವಾದ ಬೆಳೆಯಿದು. ಇತರ ಕೃಷಿ ಬೆಳೆಗಳಿಗೆ ಬೇಕಾಗುವಷ್ಟು ಕಾರ್ಮಿಕರ ಅಗತ್ಯವಿಲ್ಲ. ಸಾಮಾನ್ಯವಾಗಿ ಬೇರಾವ ಬೆಳೆಯೂ ಬೆಳೆಯದಂಥ ಭೂಮಿಯಲ್ಲೂ ಗೇರು ಬೆಳೆಯಬಲ್ಲುದು. ತೀವ್ರ ನೀರಿನ ಅಭಾವವಿರುವ ಗುಡ್ಡ ಪ್ರದೇಶಗಳಲ್ಲೂ ಗೇರು ಚೆನ್ನಾಗಿ ಬೆಳೆಯುತ್ತದೆ.
ಜೂನ್-ಜುಲೈ ತಿಂಗಳು ಗೇರು ಸಸಿ ನಾಟಿ ಮಾಡಲು ಅತ್ಯುತ್ತಮವಾದ ಕಾಲ. ಕಸಿ ಕಟ್ಟಿದ ಗಿಡಗಳನ್ನು ನೆಡುವಾಗ ಅದರ ಬೇರುಗಳಿಗೆ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಅದರ ಬೇರಿನ ಸುತ್ತಲೂ ಮಣ್ಣನ್ನು ಸಡಿಲವಾಗಿ ತುಂಬಬೇಕು. ಈ ರೀತಿ ನಾಟಿ ಮಾಡಿದ ಸಸಿ, ಅಗಲವಾಗಿ ಹರಡಿ ಬೆಳೆಯಲು ಅವಕಾಶ ಕಲ್ಪಿಸಬೇಕು. ಉತ್ತಮ ತಳಿಗಳನ್ನು ಆಯ್ಕೆ ಮಾಡಿ ಸೂಕ್ತ ಕ್ರಮದಲ್ಲಿ ನಾಟಿ ಮಾಡಬೇಕು. ಅದಕ್ಕೆ ತಕ್ಕ ಪೋಷಣೆಯೂ ಅಗತ್ಯ. ರಸಗೊಬ್ಬರಗಳನ್ನು ಹಾಕುವುದರಿಂದ ಮರವೊಂದಕ್ಕೆ ಸುಮಾರು 4-5 ಕೆ.ಜಿಯಷ್ಟು ಇಳುವರಿಯನ್ನು ಹೆಚ್ಚು ಪಡೆಯಬಹುದು. ಗೇರಿಗೆ ವಿವಿಧ ಕೀಟ ಬಾಧೆಯೂ ಇದೆ. ಅವು ಹೂ ಬಿಡುವ ಕಾಲದಲ್ಲಿ ಹೆಚ್ಚಾಗಿ ಕೀಟಬಾಧೆ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಸಕಾಲದಲ್ಲಿ ಔಷಧ ಸಿಂಪಡನೆಯಿಂದ ನಿವಾರಿಸಬಹುದು.
ಗೇರು ಹಣ್ಣು ಇನ್ನೂ ಕಾಯಿಯಾಗಿರುವಾಗಲೇ ಅಥವಾ ಹಣ್ಣಾದ ನಂತರ ಕೋಲಿನಿಂದ ಬಡಿದು ಉದುರಿಸುವುದರಿಂದ ಬೆಳೆಯ ಪ್ರಮಾಣ ಕಡಿಮೆಯಾಗುವ ಸಂಭವವೇ ಹೆಚ್ಚು. ಏಕೆಂದರೆ ಹೀಗೆ ಉದುರಿಸುವಾಗ ಹಣ್ಣಿನ ಜೊತೆಗೆ ಕಾಯಿಯೂ ಬಿದ್ದು ನಷ್ಟ ಉಂಟಾಗುತ್ತದೆ. ಕಾಯಿ ಬೀಜ ಪೂರ್ತಿ ಬೆಳೆದ ಬೀಜಕ್ಕಿಂತಲೂ ತೂಕದಲ್ಲಿ ಹಗುರವಾಗಿರುತ್ತದೆ. ಗೇರು ಹಣ್ಣಿನ ಜೊತೆಗೆ ಎಳೇಕಾಯಿ, ಹೂಗಳು ಕೂಡಾ ಉದುರಿ ಬೀಳುವ ಸಾಧ್ಯತೆಗಳಿವೆ. ಗೇರು ಬೀಜಗಳು ಹಾಳಾಗುವುದನ್ನು ತಡೆಗಟ್ಟಲು ಅವುಗಳನ್ನು ಒಂದೆರಡು ದಿನ ಬಿಸಿಲಿಗೆ ಹಾಕಿ ಒಣಗಿಸಿ ತೆಗೆದಿಡುವುದು ಉತ್ತಮ. ಒಣಗಿಸುವುದರಿಂದ ಗೇರು ಬೀಜದ ತೂಕ ಸ್ವಲ್ಪ ಕಡಿಮೆಯಾದರೂ ಅಂಥ ಬೀಜಗಳಿಗೆ ಒಳ್ಳೆಯ ಬೆಲೆ ಸಿಗುವುದರಲ್ಲಿ ಅನುಮಾನವಿಲ್ಲ.
ಉಳಿದ ಹಣ್ಣುಗಳಂತೆ ಗೇರು ಹಣ್ಣು ಕೂಡ ರಸಭರಿತವಾಗಿ, ತಿನ್ನಲು ರುಚಿಕರವಾಗಿರುತ್ತವೆ. ಆದರೆ ನಮ್ಮಲ್ಲಿ ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವುದು ಕಂಡು ಬಂದಿಲ್ಲ. ಈ ಹಣ್ಣಿನಿಂದ ಅನೇಕ ಬಗೆಯ ಪಾನೀಯಗಳು, ಜಾಮ್, ಕ್ಯಾಂಡಿ, ಚಟ್ನಿ, ಉಪ್ಪಿನಕಾಯಿ ಮತ್ತು ಮಾದಕ ಪಾನೀಯಗಳನ್ನು ತಯಾರಿಸಬಹುದಾಗಿದೆ. ನರಗಳ ನೋವು ಮತ್ತು ಸಂಧಿವಾತ ರೋಗಗಳನ್ನು ಗುಣಪಡಿಸಲು ಇದರ ರಸವನ್ನು ಲೇಪಿಸಲಾಗುವುದು. ಇತರ ಎಲ್ಲಾ ಬೆಳೆಗಳಿಗಿಂತ ಸುಲಭ ಖರ್ಚಿನಲ್ಲಿ ಬೆಳೆಯುವ, ಅಧಿಕ ಆದಾಯ ತರುವ ಗೇರು ಬೆಳೆಯ ವ್ಯವಸಾಯದತ್ತ ರೈತರು ಕಾಳಜಿ ವಹಿಸಿದರೆ ರೈತನ ಉತ್ಪನ್ನ ವೃದ್ಧಿಸುವುದರಲ್ಲಿ ಸಂದೇಹವಿಲ್ಲ.