ಸೇವಾ ಕ್ಷೇತ್ರದಿಂದ ವಿಮುಖ, ಶಿಕ್ಷಣ ಕ್ಷೇತ್ರ

ಭಾರತ ಸರ್ಕಾರ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ-2009ನ್ನು ಜಾರಿಗೊಳಿಸಿದೆ. ಆ ಮೂಲಕ ದೇಶದ ಯಾವುದೇ ರಾಜ್ಯಗಳಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹತ್ವಾಕಾಂಕ್ಷೆ ಮೆರೆದಿದೆ. ಈ ಸಂಬಂದ ಅಗಸ್ಟ್ 27, 2009ರಂದು ಹೊರಡಿಸಿರುವ ಗೆಜೆಟ್ ಸಂಖ್ಯೆ-39ರಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಕಾಯಿದೆ-2009ನ್ನು ಪ್ರಕಟಿಸಿದೆ. ಕಾಯಿದೆಯ ಅಧ್ಯಾಯ 7ರ ಶೆಡ್ಯೂಲಿನಲ್ಲಿ ಸೆಕ್ಷನ್ 19 ಹಾಗೂ 25ರಲ್ಲಿ ನಮ್ಮ ಶಾಲಾ ಮಕ್ಕಳಿಗೆ ಎಂತಹ ಕಟ್ಟಡಗಳನ್ನು ಒದಗಿಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ.
ಆದರೆ ಇಂದು ಶಿಕ್ಷಣ ರಂಗವೇ ವಾಣಿಜ್ಯೀಕರಣಗೊಂಡು, ಶಿಕ್ಷಣೋದ್ಯಮವಾಗುತ್ತಿದೆ. ಶಿಕ್ಷಣ ಈಗ ಸೇವಾ ಕ್ಷೇತ್ರದಿಂದ ವಿಮುಖಗೊಳ್ಳುತ್ತಿದ್ದು, ಬಹುತೇಕ ಉದ್ಯಮ ರಂಗದ ತೆಕ್ಕೆಗೊಳಪಟ್ಟಿದೆ. ಮಾತೃ ಭಾಷೆಯಲ್ಲಿ ವ್ಯಾಸಂಗ ಮಾಡಿದರೆ ಉತ್ತಮ ಉದ್ಯೋಗ ದೊರೆಯುವುದಿಲ್ಲ ಎಂಬ ಕಾರಣಕ್ಕಾಗಿ ಆಂಗ್ಲ ಭಾಷಾ ಮಾಧ್ಯಮದತ್ತ  ಮಕ್ಕಳು, ಪಾಲಕರು ಆಕರ್ಷಿತರಾಗುತ್ತಿರುವುದು ಶಿಕ್ಷಣವನ್ನು ಉದ್ಯಮವಾಗಿ ಪರಿವರ್ತಿಸುವವರ ಪಾಲಿಗೆ ಬಹುದೊಡ್ಡ ವರದಾನವಾಗಿದೆ. ಕ್ಯಾಪಿಟೇಷನ್, ಡೊನೇಷನ್ಗಳ ಸಂಗ್ರಹಕ್ಕಾಗಿಯೇ ಇಂದು ನಾಡಿನ ಹಳ್ಳಿ -ಹಳ್ಳಿಗಳಲ್ಲಿ ತಲೆ ಎತ್ತಿರುವ ಖಾಸಗಿ ಶಾಲೆಗಳು, ಸರ್ಕಾರ ರೂಪಿಸಿರುವ ಹಲವಾರು ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಪಾಲಕರಲ್ಲಿನ ಆಂಗ್ಲಭಾಷಾ ಪ್ರೀತಿಯನ್ನೇ ತಮ್ಮ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಶಾಲೆಗಳು ನಾನಾ ಹಂತಗಳಲ್ಲಿ ಮಕ್ಕಳ ಬೇಕು-ಬೇಡಗಳನ್ನು ನಿರ್ಲಕ್ಷಿಸುತ್ತಿವೆ. ಶಿಕ್ಷಣ ಕಾಯಿದೆಯ ಮಾರ್ಗಸೂಚಿಯ ಉಲ್ಲಂಘನೆ ನಿರಾತಂಕವಾಗಿ ನಡೆಯುತ್ತಲೇ ಇದೆ. 
ಕನಿಷ್ಠ ಅವಶ್ಯಕತೆಗಳಾದ ಸಮರ್ಪಕ ಗಾಳಿ-ಬೆಳಕು ಸುಳಿದಾಡುವಂತಹ ಸುಸಜ್ಜಿತ ಕಟ್ಟಡ, ಚಳಿ-ಮಳೆ-ಬಿಸಿಲಿನಿಂದ ರಕ್ಷಣೆ ಒದಗಿಸುವಂತಹ ಸರ್ವ ಋತು ಕಟ್ಟಡ, ಆಟದ ಬಯಲು, ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳಿರಬೇಕೆಂಬ ನಿಯಮಗಳನ್ನು ಬಹುತೇಕ ಶಾಲೆಗಳು ಗಾಳಿಗೆ ತೂರುತ್ತಿವೆ.
ಅತಿ ಹೆಚ್ಚು ಬಿಸಿಲಿನ ಪ್ರದೇಶಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅಲ್ಲಿನ ತಾಪಮಾನಕ್ಕೆ ಹೊಂದಿಕೆಯಾಗುವಂತಹ ಕಟ್ಟಡಗಳಿಗೆ ಆದ್ಯತೆ ನೀಡಬೇಕು, ಇಲ್ಲದಿದ್ದರೆ ಎಳೆಯ ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮಗಳುಂಟಾಗುತ್ತವೆ. ಆದರೆ ಈ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಓದುತ್ತಿರುವ ಮಕ್ಕಳು ತಮ್ಮ ಕನಸುಗಳನ್ನು ಕಟ್ಟಿಕೊಳ್ಳಲು, ಭವಿಷ್ಯ ರೂಪಿಸಿಕೊಳ್ಳಲು ಕಿಷ್ಕಂದದಂತಹ ಕಟ್ಟಡಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ.
ರಾಜ್ಯದ ಕೆಲವೆಡೆಯ ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ಕೆಲವು ಶಾಲೆಗಳು ಬಾಡಿಗೆಗೆ ಪಡೆದ ಇಕ್ಕಟ್ಟಾದ ಮನೆಗಳಲ್ಲಿ ನಡೆಯುತ್ತಿವೆ. ಬಿದಿರು, ಬೊಂಬುಗಳಿಂದ ನಿರ್ಮಿಸಿದ ಗೋಡೆಗಳ ಮೇಲೆ ತಗಡುಗಳನ್ನು ಹಾಕಿ ಸುರಿವ ಬಿಸಿಲು, ಝಳದ ನಡುವೆ ಮಕ್ಕಳು ಓದು ಮುಂದುವರಿಸಬೇಕಾಗುತ್ತದೆ. ಬಹಳಷ್ಟು ಖಾಸಗಿ ಶಾಲೆಗಳಿಗೆ ಆಟದ ಬಯಲಂತೂ ಇರುವುದೇ ಇಲ್ಲ. ಶೌಚಾಲಯಗಳು ಇದ್ದರೂ ಉಪಯೋಗಿಸಲು ಬಾರದಂತಿರುತ್ತವೆ. ನೀರಿನ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆಗಳೂ ಇರುವುದಿಲ್ಲ.