ಶಾಲಾ ಆರಂಭಕ್ಕೆ ಸಾಗಿದೆ ಸಿದ್ಧತೆ

 ಶಾಲಾ ಪ್ರಾರಂಭಕ್ಕೆ ಇನ್ನೂ ಕೆಲವೇ ದಿನಗಳು ಉಳಿದಿವೆ. ಶಾಲೆಗಳ ಆರಂಭಕ್ಕೆ ಸಿದ್ಧತೆಗಳು ಜೋರಾಗಿವೆ. ಪೋಷಕರು ಬ್ಯುಸಿಯಾಗುತ್ತಿದ್ದಾರೆ. ಸರಕಾರಿ ಹಾಗೂ ಅನುದಾನಿತ ಶಾಲೆಗಳು ಮೇ 29ಕ್ಕೆ, ಖಾಸಗಿ ಶಾಲೆಗಳು ಜೂ.1ಕ್ಕೆ ಆರಂಭಗೊಳ್ಳಲಿವೆ. ಶಾಲೆಗಳು ಮತ್ತು ಮಳೆಗಾಲ ಸಾಮಾನ್ಯವಾಗಿ ಹೊಂದಿಕೊಂಡೆ ಪ್ರಾರಂಭವಾಗುತ್ತವೆ. ಹಾಗಾಗಿ ಪೋಷಕರು ಇವರೆಡಕ್ಕೂ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.
ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಉಚಿತವಾಗಿ ದೊರೆಯುತ್ತವೆ. ಆದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳೇ ಇವುಗಳನ್ನು ಖರೀದಿಸಬೇಕಾಗುತ್ತದೆ. ಹೆಚ್ಚಿನ ಶಾಲೆಗಳಲ್ಲಿ ಪಠ್ಯ ಹಾಗೂ ಬರೆಯುವ ಪುಸ್ತಕಗಳನ್ನು ಶಾಲೆಗಳಲ್ಲೇ ಮಕ್ಕಳಿಗೆ ಸರಬರಾಜು ಮಾಡಲಾಗುತ್ತದೆ. ಕೆಲವು ಶಾಲೆಗಳಲ್ಲಿ ಪಠ್ಯ, ಪುಸ್ತಕಗಳನ್ನು ನೀಡಿ ನೋಟ್ಸ್ ಪುಸ್ತಕಗಳ ಪಟ್ಟಿಯನ್ನು ನೀಡುತ್ತಾರೆ. ಮಕ್ಕಳು ಪುಸ್ತಕ ಅಂಗಡಿಗಳಲ್ಲಿ ಇವುಗಳನ್ನು ಖರೀದಿಸಬೇಕಾಗುತ್ತದೆ. ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಮಳಿಗೆಗಳಲ್ಲಿ ನೋಟ್ಸ್ಪುಸ್ತಕಗಳ ಬೃಹತ್ ದಾಸ್ತಾನು ಮಾಡಲಾಗುತ್ತದೆ. ಇಷ್ಟು ಇದ್ದರೂ ಕೊನೆಗಳಿಗೆಯಲ್ಲಿ ನೋಟ್ಸ್ ಪುಸ್ತಕಗಳ ಕೊರತೆ ಕಾಡುತ್ತದೆ.
ಶಾಲಾ ಸಿದ್ಧತೆಯಲ್ಲಿ ಬರೇ ಪುಸ್ತಕಗಳು ಮಾತ್ರವಲ್ಲ. ಸಮವಸ್ತ್ರ, ಉಡುಪುಗಳು, ಸ್ಕೂಲ್ ಬ್ಯಾಗ್ಗಳು, ಟಿಫಿನ್ ಕ್ಯಾರಿಯರ್, ನೀರಿನ ಬಾಟಲ್, ಶೂ, ಕೊಡೆ, ರೈನ್ಕೋಟ್, ಚಪ್ಪಲಿಗಳು ಹೀಗೆ ಹತ್ತಾರು ಪರಿಕರಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಈಗಲೇ ಬ್ಯುಸಿಯಾಗಬೇಕು. ತಮ್ಮ ಬಜೆಟ್ಗಳಿಗೆ ಅನುಗುಣವಾಗಿ ಪರಿಕರಗಳನ್ನು ಖರೀದಿಸಬೇಕಾಗುತ್ತದೆ. ಸಾಲ ಮಾಡಿಯಾದರೂ ಇವುಗಳನ್ನು ಖರೀದಿಸಬೇಕಾದುದು ಅನಿವಾರ್ಯ.
ಉಚಿತ ನೋಟ್ ಪುಸ್ತಕಗಳ ವಿತರಣೆ
ಬಡಮಕ್ಕಳಿಗೆ ಉಚಿತ ಪುಸ್ತಕಗಳ ವಿತರಣೆ ಒಂದು ಮಹತ್ವದ ಕಾರ್ಯಕ್ರಮ. ಹಲವಾರು ಸಂಘಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಬಡ ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಕಾರ್ಯವನ್ನು ಆರಂಭಿಸುತ್ತವೆ. ಈ ಸಮಾಜಮುಖಿ ಕಾರ್ಯ ಬಡಪೋಷಕರ ಹೊರೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕುಗ್ಗಿಸುತ್ತದೆ. ಶಾಲೆಯ ಆರಂಭದ ಸಮಯದಲ್ಲೇ ಈ ಪುಸ್ತಕಗಳು ವಿತರಣೆಯಾದರೆ ಮಕ್ಕಳಿಗೆ ಹೆಚ್ಚು ಉಪಯುಕ್ತ. ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳು ಈಗಾಗಲೇ ಕಾರ್ಯಕ್ರಮಗಳನ್ನು ಆರಂಭಿಸಿಕೊಂಡಿವೆ. ಇನ್ನು ಕೆಲವು ಸಂಘಸಂಸ್ಥೆಗಳು ಸದಸ್ಯರ ದೇಣಿಗೆ, ದಾನಿಗಳ ನೆರವು ಹೊಂದಿಸಿಕೊಂಡು ಉಚಿತ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿವೆ.
ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿಗಳ ಪ್ರವೇಶಾತಿಗೆ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚಿನ ದಟ್ಟಣೆ ಇರುತ್ತದೆ. ಈ ತರಗತಿಗಳಿಗೆ ಪ್ರವೇಶಾತಿ ಪಡೆಯುವುದು ಇತ್ತೀಚಿನ ವರ್ಷಗಳಲ್ಲಿ ಸುಲಭದ ಮಾತಲ್ಲ. ಕೆಲವು ಶಾಲೆಗಳಲ್ಲಿ ಮಕ್ಕಳ ಜತೆಗೆ ತಂದೆ ತಾಯಿಗಳಿಗೆ ಬೇರೆ ಸಂದರ್ಶನವಿರುತ್ತದೆ. ಹೆಚ್ಚಿನ ವಿದ್ಯಾಸಂಸ್ಥೆಗಳಲ್ಲಿ ಈಗಾಗಲೇ ಪ್ರವೇಶಾತಿ ಪ್ರಕ್ರಿಯೆ ಬಹುತೇಕ ಮುಗಿದಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ವಾಹನಗಳಲ್ಲಿ ಸೀಟು ಕಾದಿರಿಸುವಿಕೆ ಪ್ರಕ್ರಿಯೆ ಜಾರಿಯಲ್ಲಿದೆ. ಶಾಲಾ ವಾಹನಗಳು, ರಿಕ್ಷಾಗಳು ವಾಹನಗಳನ್ನು ರಿಪೇರಿ ಮಾಡಿ ಸುಸಜ್ಜಿತಗೊಳಿಸುವ ಕಾರ್ಯ ಆರಂಭಿಸಿವೆ.
ಸರಕಾರಿ ಶಾಲೆಗಳಲ್ಲಿ ಮೇ 29ರಂದು ಶಾಲಾ ಪ್ರಾರಂಭೋತ್ಸವ ಸಮಾರಂಭ ಆಯೋಜಿಸಲಾಗುತ್ತಿದೆ. ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಅಂದು ಮಕ್ಕಳಿಗೆ ಉಚಿತ ಪಠ್ಯ, ಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಬ್ಬಂದಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.