ಕಲ್ಲು, ಕಲ್ಲಿನಲಿ ಮೊಳಗುತಿದೆ ಕೊಳಲ ದನಿ...


ಕೊಳಲು ಭಾರತೀಯರಿಗೆ ಚಿರಪರಿಚಿತ. ಪುರಾತನ ಕಾಲದ ಸಂಗೀತ ಉಪಕರಣವಿದು. ಶ್ರೀಕೃಷ್ಣ ಪರಮಾತ್ಮ ತನ್ನನ್ನು ಗುರುತಿಸಿಕೊಳ್ಳುವುದು ಕೊಳಲ ನಿನಾದದಿಂದ. ಇದರಲ್ಲಿ ವಿಶೇಷವೇನಿಲ್ಲ. ಆದರೆ, ಕಲ್ಲಿನಲ್ಲಿ ಕೊಳಲು ತಯಾರಿಸಿ ನಾದ ಹೊರಡಿಸುವ ಕಲೆ ಬಗ್ಗೆ ಯಾರೂ ಕೇಳಿರಲಿಕ್ಕಿಲ್ಲ. ಕೊಪ್ಪಳ ಜಿಲ್ಲೆಯ ಉಪ್ಪಿನ ಬೆಟಗೇರಿಯ ಪ್ರಕಾಶ ಶಿಲ್ಪಿ ಎಂಬ ಯುವಕನ ಕೈಯಲ್ಲಿ ಕಲ್ಲಿನಲ್ಲೂ ಕೊಳಲು ಅರಳಿ ಸಂಗೀತದ ಸುಮಧುರ ನಾದ ಕೇಳಿ ಬರುತ್ತದೆ.
ಪ್ರಕಾಶ ಶಿಲ್ಪಿ ಮೂಲತಃ ಅಕ್ಕಸಾಲಿಗ ಕುಟುಂಬದಲ್ಲಿ ಅರಳಿದ ಪ್ರತಿಭೆ. ಓದಿದ್ದು 10 ನೇ ತರಗತಿ. ಆಂಜನೇಯನ ಪರಮ ಭಕ್ತನಾದ ಆತ ಕಲ್ಲಿನಲ್ಲಿ ಎಂಥ ಕಲೆಯನ್ನಾದರೂ ಅರಳಿಸಬಲ್ಲ ಸಾಮರ್ಥ್ಯವುಳ್ಳ ಯುವಕ. 1990ರಿಂದಲೂ ಈ ವೃತ್ತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಲ್ಲು ಕೆತ್ತನೆಯನ್ನು ಕರಗತ ಮಾಡಿಕೊಂಡು, ಬದುಕಿಗೊಂದು ದಾರಿ ಕಂಡುಕೊಂಡಿದ್ದಾನೆ.
1999ರ ಒಂದು ದಿನ ಆತ ಹಂಪಿಗೆ ತೆರಳಿದ್ದ. ಅಲ್ಲಿನ ವಿಜಯ ವಿಠ್ಠಲ ಮಂದಿರಕ್ಕೆ ಭೇಟಿ ನೀಡಿದ. ಕಲ್ಲಿನ ಕಂಬಗಳಿಂದ ಹೊಮ್ಮುವ ನಾದ ಕೇಳಿ ವಿಸ್ಮಯಗೊಂಡ. ತಾನು ಕಲ್ಲಿನಲ್ಲೇ ಸಂಗೀತದ ಪರಿಕರವೊಂದನ್ನು ತಯಾರಿಸಬೇಕು ಎಂದು ನಿರ್ಧರಿಸಿದ. ಸತತ ಪ್ರಯತ್ನದ ನಂತರ 2000ರಲ್ಲಿ ಕಲ್ಲಿನ ಕೊಳಲು ತಯಾರಿಸಿದ. ಸುಮಾರು 15 ಇಂಚು ಉದ್ದದ ಕಲ್ಲಿನ ಕೊಳಲನ್ನು ಕಂಡಾಗ ತನ್ನೊಳಗೆ ಕುಷಿಪಟ್ಟ. 15 ಇಂಚು ಉದ್ದ, 250 ಗ್ರಾಂ ತೂಕದ ಈ ಕೊಳಲಿನ ಮೇಲೆ ನಾಜೂಕಾಗಿ ಕೆತ್ತನೆ ಕೆತ್ತಿದ್ದಾನೆ. ಈ ಕೆತ್ತನೆಗಳಿಗಾಗಿ ಮಿಷನ್ ಬಳಸಿಲ್ಲ. ಸ್ವತಃ ಕೈಯಿಂದಲೇ ಈ ಸೂಕ್ಷ್ಮ ಕೆತ್ತನೆಯನ್ನು ರಚಿಸಿದ್ದಾರೆ. ಕಲ್ಲಿನ ಕೊಳಲಿನ ಮೇಲೆ ಪಂಡಿತ ಪಂಚಾಕ್ಷರ ಗವಾಯಿ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಚಿತ್ರ, ಜೊತೆಗೆ ಸಂಗೀತದ ವಿವಿಧ ಪರಿಕರಗಳಾದ ವೀಣೆ, ತಂಬೂರಿಗಳ ಚಿತ್ರಗಳಿವೆ. ನೋಡಲು ಬಲು ಸುಂದರವಾಗಿದೆ.
ಪರಿಚಿತ ಸಂಗೀತಗಾರರೊಬ್ಬರಲ್ಲಿ ಇದನ್ನು ತೋರಿಸಿದ. ಆ ಕಲ್ಲಿನ ಕೊಳಲನ್ನು ಅವರು ನುಡಿಸಿದಾಗ ಪರಮಾಶ್ಚರ್ಯ. ತಾನೂ ಅಭ್ಯಾಸ ಮಾಡಿಕೊಂಡು ಕಲ್ಲಿನ ಕೊಳಲ್ಲೇ ನಾದ ಹೊಮ್ಮಿಸುವುದನ್ನು ಕಲಿತುಕೊಂಡ. ಪ್ರಕಾಶರ ಸಾಧನೆ ಇತರರಿಗೆ ಮಾದರಿ. ಅವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರೋತ್ಸಾಹ ದೊರಕಲಿ. ಎಲೆ ಮರೆಯ ಕಾಯಿಯಂತಿರುವ ಈ ಕಲಾವಿದ ಎತ್ತರಕ್ಕೆ ಬೆಳೆಯಲಿ ಎಂಬುದು ನಮ್ಮ ಶುಭ ಹಾರೈಕೆ.