ಅಂದ ಚೆಂದದ ದಾಸವಾಳ


ವರ್ಷವಿಡಿ ಎಳೆಬಿಸಿಲಿನೊಂದಿಗೆ ಅರಳುವ, ಸೂರ್ಯಾಸ್ತವಾಗುತ್ತಿದ್ದಂತೆ ಮುಚ್ಚಿಕೊಳ್ಳುವ ದಾಸವಾಳವನ್ನು ಅರಿಯದವರಾರು? ಇದರ ವೈಜ್ಞಾನಿಕ ಹೆಸರು Hibiscus rosa. ಸಂಸ್ಕೃತದಲ್ಲಿ ಇದು ರುದ್ರ ಪುಷ್ಪ, ಜಪಾ ಪುಷ್ಪ, ಮಲಯಾಳದಲ್ಲಿ ಚಂಬರತ್ತಿ.
ದಾಸವಾಳ ಮೂಲತ: ಚೀನಾ ದೇಶದ್ದು. ವರ್ಷವಿಡಿ ಹೂ ಬಿಡುವಂತಹ ಗಿಡವಾಗಿದ್ದು ಅಲಂಕಾರಿಕವಾಗಿ, ಔಷಧೀಯ ಗಿಡವನ್ನಾಗಿ ಬಳಸಲಾಗುತ್ತದೆ. ಜುಸುನ್ ಎಂಬಾತ ದೇವಿಯ ಭಾವೋದ್ರಿಕ್ತ ಭಕ್ತ. ಒಮ್ಮೆ ದೇವರುಗಳೆಲ್ಲರೂ ಸೇರಿ ದೇವಿಯನ್ನು ದುಷ್ಟರ ಸದೆಬಡಿಯಲು ಕಾಳಿರೂಪವನ್ನು ತಾಳಲು ಕೋರಿದರು. ಆಗ ಜುಸುನ್ ಕೆಂಪು ಬಣ್ಣದ ಹೂವನ್ನು ದೇವಿಗೆ ನೀಡಿ, ತನ್ನ ಸಿಟ್ಟನ್ನು ತೋರ್ಪಡಿಸಿದ. ಆ ಕೆಂಪು ಬಣ್ಣ ಕಾಳಿಯ ಕಣ್ಣಾಗಿ ಅವಳ ಕೋಪವನ್ನು ತೋರಲು ಸಹಕಾರಿಯಾಯಿತು. ಇದರಿಂದ ಪ್ರಸನ್ನಳಾದ ಕಾಳಿ ದೇವಿಯು ಜುಸುನ್ನನ್ನು ಯಾವುದಾದರೂ ಒಂದು ವರ ಕೇಳು ಎಂದಳು. ನಾನು ಯಾವಾಗಲೂ ನಿನ್ನ ಸೇವೆಯನ್ನೇ ಮಾಡುತ್ತೇನೆ ಎಂದು ಜುಸುನ್ ಹೇಳಿದಾಗ ನೀನು ನನ್ನ ಹೂವಾಗು ಎಂದು ವರಕೊಟ್ಟಳು. ಇಂದಿನಿಂದ ನೀನು ದೇವಿ ೂಲ್, ಜಬಕುಸುಮ ಎಂದು ಕರೆಯಲ್ಪಡುವೆ. ನಿನ್ನ ಹೂವುಗಳನ್ನು ಯಾರು ನನಗೆ ಅರ್ಪಿಸುವರೋ ಅವರೆಲ್ಲರೂ ನನ್ನಿಂದ ವರ ಪಡೆಯುತ್ತಾರೆ ಎಂದಳು. ಆಂದಿನಿಂದ ದಾಸವಾಳದ ಹೂವನ್ನು ಭಕ್ತಾದಿಗಳು ಕಾಳಿದೇವಿಗೆ ಅರ್ಪಿಸುತ್ತಾರೆ ಎಂಬುದು ಇದು ದೇವಿ ಭಾಗವತದಲ್ಲಿ ಬರುವ ಕಥೆ.
ಔಷಧ ತಯಾರಿಕೆಯಲ್ಲಿ ದಾಸವಾಳ ಶ್ರೇಷ್ಠ:
ದಾಸವಾಳದ ಹೂಗಳಲ್ಲಿ ತೇವಾಂಶ, ನೈಟ್ರೋಜನ್, ಕೊಬ್ಬು, ಕಾಲ್ಸಿಯಂ, ರಂಜಕ, ಕಬ್ಭಿಣಾಂಶ ಇರುತ್ತದೆ. ಔಷಧಿ ತಯಾರಿಕೆಯಲ್ಲಿ ಬಿಳಿ ದಾಸವಾಳ ಶ್ರೇಷ್ಠ, ದಾಸವಾಳದಿಂದ ಸೌಂದರ್ಯ ವರ್ಧಕವನ್ನೂ ತಯಾರಿಸಲಾಗುತ್ತದೆ. ಹೂವಿನ ಎಣ್ಣೆಯ ಉಪಯೋಗದಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ತಲೆ ಹೊಟ್ಟನ್ನು ನಿಯಂತ್ರಿಸುವುದಲ್ಲದೆ ಕೂದಲಿಗೆ ಹೊಳಪನ್ನು ನೀಡುತ್ತದೆ. ದಾಸವಾಳದ ಮೊಗ್ಗನ್ನು ತಿನ್ನುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ. ಹೂವಿನ ಕಷಾಯ ತಲೆನೋವು ಶಮನಕಾರಿ. ಇದರ ಎಲೆಗಳನ್ನು ದೋಸೆ ಹಿಟ್ಟಿಗೆ ಬೆರೆಸಿ ರುಚಿಯಾದ, ಪೌಷ್ಠಿಕವಾದ ದೋಸೆ ಮಾಡಬಹುದು.
ಗಣಪನ ಪೂಜೆಗೆ ದಾಸವಾಳ ವಿಶೇಷ. ಎಸಳಿನ ಕೆಂಪು ದಾಸವಾಳ ಗಣಪನಿಗೆ ಪ್ರಿಯವಂತೆ. ಮಲೇಷ್ಯಾದ ರಾಷ್ಟ್ರೀಯ ಹೂ ದಾಸವಾಳ. ಇಲ್ಲಿ ಬೀದಿ ದೀಪಗಳ ಲ್ಯಾಂಪ್ ಶೆಡ್ಗಳನ್ನು ದಾಸವಾಳದ ಹೂವಿನಂತೆ ಮಾಡಿ ಅದೇ ರೀತಿ ಬಣ್ಣ ತುಂಬಿಸಿ ಹೂವಿನ ಮೇಲಿನ ಪ್ರೀತಿ ಮೆರೆಯುತ್ತಿದ್ದಾರೆ.