ಶಾಲೆಗಳು ಆರಂಭ, ಸಮಸ್ಯೆಗಳ ಪುನರಾರಂಭ


ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿ ಮೂರು ವಾರಗಳು ಕಳೆದಿವೆ. ಹೊಸ ತರಗತಿಗೆ ದಾಖಲಾದ ಸಂತಸದಲ್ಲಿ ಚಿಣ್ಣರು ನಲಿಯುತ್ತಿದ್ದಾರೆ. ಆದರೆ, ಕಲಿಕೆಗೆ ಅಗತ್ಯವಾದ ಪಠ್ಯಪುಸ್ತಕ, ಸಮವಸ್ತ್ರಗಳ ಪೂರೈಕೆ ಸಮರ್ಪಕವಾಗಿದೆಯೇ?. ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆಯೇ?. ಶಾಲೆಗಳು ಮೂಲಭೂತ ಸೌಕರ್ಯಗಳನ್ನು ಹೊಂದಿವೆಯೇ? ಎಂಬಿತ್ಯಾದಿ ವಿಷಯಗಳತ್ತ ಕಣ್ಣು ಹಾಯಿಸಿದಾಗ ಕಂಡು ಬಂದ ನೋಟ:

ಶಿಕ್ಷಕರ ಕೊರತೆಯಿದೆ, ನೇಮಕ ಆಗಬೇಕಿದೆ:
ಮಕ್ಕಳ ಪಾಠ ಪ್ರವಚನಕ್ಕೆ ಉತ್ತಮ ಶಿಕ್ಷಕರು ಅತ್ಯಗತ್ಯ ಎನ್ನುವುದು ನಿರ್ವಿವಾದ. ಆದರೆ, ರಾಜ್ಯದ ಬಹುತೇಕ ಜಿಲ್ಲೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಉದಾಹರಣೆಗೆ, ಚಿಂಚೋಳಿ ತಾಲೂಕಿನ ಕೋಡ್ಲಿಯ ಹರಿಜನವಾಡಾದ ಶಾಲೆಯಲ್ಲಿ 85 ಮಂದಿ ಮಕ್ಕಳಿದ್ದು, ಒಬ್ಬರೇ ಶಿಕ್ಷಕರಿದ್ದಾರೆ. ಒಬ್ಬರೇ ಶಿಕ್ಷಕರು ಎಲ್ಲಾ ತರಗತಿಯ ಮಕ್ಕಳಿಗೆ ಪಾಠ ಮಾಡಬೇಕು. ಅರಮನೆ ನಗರಿ ಮೈಸೂರಿನ ಮಂಡಿ ಮೊಹಲ್ಲಾದ ಸಿವಿ ರಸ್ತೆಯ ಈದ್ಗಾ ಸ್ಲಮ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿರುವುದು ಒಂದೇ ಕೊಠಡಿ. 1ರಿಂದ 5ನೇ ತರಗತಿವರೆಗಿನ 98 ಮಕ್ಕಳು ಒಂದೇ ಕೊಠಡಿಯಲ್ಲಿ ಕುಳಿತು ಓದುತ್ತಿದ್ದಾರೆ. ಮೂರು ಶಿಕ್ಷಕರಿದ್ದು, ಐದು ತರಗತಿಗಳಿಗೆ ಪಾಠ ಮಾಡಬೇಕಿದೆ. ಬೇರೆ, ಬೇರೆ ತರಗತಿಯ ಮಕ್ಕಳು ಒಂದೇ ಕಡೆ ಕುಳಿತು ಪಾಠ ಕೇಳುವುದರಿಂದ ಯಾರ ಪಾಠ ಯಾರಿಗೂ ಅರ್ಥವಾಗುವುದಿಲ್ಲ.
ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳ ಸರಕಾರಿ ಪ್ರೌಢಶಾಲಾ ವಿಭಾಗದಲ್ಲಿ 40, ಅನುದಾನಿತ ಹೈಸ್ಕೂಲ್ಗಳಲ್ಲಿ 202, ಅನುದಾನ ರಹಿತ ಹೈಸ್ಕೂಲ್ಗಳಲ್ಲಿ 41 ಸ್ಥಾನಗಳು ಖಾಲಿ ಇವೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ತಾಲೂಕಿನ ಕೆಲವು ಭಾಗಗಳಲ್ಲಿ  ಶಿಕ್ಷಕರ ಕೊರತೆ ನಿರಂತರವಾಗಿದೆ. ಕೋಲಾರ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ 347, ಪ್ರೌಢಶಾಲೆಗಳಲ್ಲಿ 233 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಧಾರವಾಡ ಜಿಲ್ಲೆಯ ಕೆಲವು ಶಾಲೆಗಳಲ್ಲಿ 50 ಮಕ್ಕಳಿಗೆ ಒಬ್ಬರೆ ಶಿಕ್ಷಕರಿದ್ದಾರೆ. ಯಾದಗಿರಿ ಜಿಲ್ಲೆಯ 8 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. 16 ಶಾಲೆಗಳಲ್ಲಿ ಒಬ್ಬರೆ ಶಿಕ್ಷಕರಿದ್ದರೆ, 534 ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಪ್ರೌಢಶಾಲಾ ವಿಭಾಗದಲ್ಲಿ  ಸುಮಾರು 217 ಶಿಕ್ಷಕರ ಕೊರತೆ ಇದೆ. ಬೀದರ್ ಜಿಲ್ಲೆಯಲ್ಲಿ 219, ಹಾವೇರಿ ಜಿಲ್ಲೆಯಲ್ಲಿ 131 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿಗೆ 30 ಸರಕಾರಿ ಪ್ರೌಢಶಾಲಾ ಶಿಕ್ಷಕರು ಮತ್ತು 120 ಪ್ರಾಥಮಿಕ ಶಿಕ್ಷಕರ ಅವಶ್ಯಕತೆ ಇದೆ.
ಶಾಲಾ ಕಟ್ಟಡ ಸೋರುತ್ತಿದೆ ನೋಡಿದಿರಾ?:
ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ಮಲೆನಾಡು ಪ್ರದೇಶಗಳಲ್ಲಿನ ಮಕ್ಕಳು ಸಮಸ್ಯೆ ಎದುರಿಸಬೇಕಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆ ಬಂದರೆ ಕುಸಿದು ಬೀಳುವ ಅಪಾಯವಿದೆ. ಬೀದರ್ ಜಿಲ್ಲೆಯ ಕೆಲವೆಡೆ ಕಳೆದ ವರ್ಷ ಮಳೆಗಾಲದಲ್ಲಿ ಶಾಲಾ ಕಟ್ಟಡಗಳು ಕುಸಿದು ಬಿದ್ದಿದ್ದವು. ಆದರೆ, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಬೀದರ್ ಜಿಲ್ಲೆಯಲ್ಲಿ  ಪ್ರಸ್ತುತ 65ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಕಟ್ಟಡಗಳು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದ್ದು, ‘ಮೇಜರ್ ಸರ್ಜರಿ’ ಅಗತ್ಯತೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಮಾರು ಮೂರೂವರೆ ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಕೆಲ ಕಟ್ಟಡಗಳು ಆಗಲೋ, ಈಗಲೋ ಬೀಳುವಂಥ ಸ್ಥಿತಿಯಲ್ಲಿವೆ. ಇದರಿಂದಾಗಿ ನಿತ್ಯ ಶಾಲೆಗೆ ಬರುವ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕಲಿಯಬೇಕಾಗಿದೆ. ಈ ಪೈಕಿ ಅತಿ ಹೆಚ್ಚು, ಅಂದರೆ 17 ಶಾಲೆಗಳು ಭಾಲ್ಕಿ ತಾಲೂಕಿನಲ್ಲಿವೆ. ಬೀದರ್ ತಾಲೂಕಿನಲ್ಲಿ 14, ಬಸವಕಲ್ಯಾಣದಲ್ಲಿ 13, ಹುಮನಾಬಾದ್ನಲ್ಲಿ 11 ಹಾಗೂ ಔರಾದ್ ತಾಲೂಕಿನಲ್ಲಿ 11 ಶಾಲಾ ಕಟ್ಟಡಗಳಿಗೆ ದುರಸ್ಥಿಯ ಅಗತ್ಯವಿದೆ.
ಇನ್ನು ಮೂಲಭೂತ ಸೌಕರ್ಯಗಳ ಕೊರತೆ ಇದ್ದದ್ದೆ. ಧಾರವಾಡ ಜಿಲ್ಲೆಯ ಬಹುತೇಕ ಎಲ್ಲಾ ಕಡೆಗಳಲ್ಲಿ ಶಾಲಾ ಕಟ್ಟಡಗಳ ಕೊರತೆಯಿದೆ. ಕೆಲವು ಕಡೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಕ್ಲಾಸ್ಗಳಿದ್ದರೂ ಕೇವಲ ಎರಡು ಅಥವಾ ಮೂರು ಕೊಠಡಿಗಳಿವೆ. ಯಾದಗಿರಿ ಜಿಲ್ಲೆಯ ಸುಮಾರು 361 ಶಾಲೆಗಳಲ್ಲಿ ಸಾಮಾನ್ಯ ಶೌಚಾಲಯಗಳೇ ಇಲ್ಲ. 546 ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಕ್ಕೆ ಜಾಗವಿಲ್ಲ. 523 ಶಾಲೆಗಳಿಗೆ ಆಟದ ಮೈದಾನಗಳ ಕೊರತೆಯಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ 40 ಕಡೆ ಶಾಲಾ ಕಟ್ಟಡಗಳು ಶಿಥಿಲಗೊಂಡಿವೆ. ಮೈಸೂರಿನ ಮಂಡಿ ಮೊಹಲ್ಲಾದ ಸಿವಿ ರಸ್ತೆಯ ಈದ್ಗಾ ಸ್ಲಮ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕೊಠಡಿಯ ಸುತ್ತಮುತ್ತಲ ಜಾಗವನ್ನೇ ಶೌಚಾಲಯಕ್ಕೆ ಉಪಯೋಗಿಸಬೇಕು. ಜೊತೆಗೆ ಪಕ್ಕದಲ್ಲೇ ಕೊಳಚೆ ನೀರು ಹರಿಯುತ್ತಿದೆ. ಇಷ್ಟೆ ಆಗಿದ್ದರೆ ಪರವಾಗಿಲ್ಲ. ಇಲ್ಲೇ ಪಕ್ಕದಲ್ಲೇ, ಬಯಲಿನಲ್ಲೇ ಮಕ್ಕಳಿಗೆ ಬಿಸಿಯೂಟ ತಯಾರಿಸಿ, ಉಣ ಬಡಿಸುತ್ತಾರೆ.
ಬೀದರ್ ಜಿಲ್ಲೆಯ ಶಾಲೆಗಳಲ್ಲಿ ಕುಡಿಯುವ ನೀರಿಗಾಗಿ ಜಲ ಮಣಿ ಯೋಜನೆಯಡಿ ಫಿಲ್ಟರ್ಗಳನ್ನು ಅಳವಡಿಸಲಾಗಿದ್ದು, ಹಲವು ಶಾಲೆಗಳಲ್ಲಿ ಹಲವು ದಿನಗಳಿಂದ ಇವು ಕೆಟ್ಟು ಉಪಯೋಗಕ್ಕೆ ಬಾರದಂತಾಗಿವೆ. ರಾಜ್ಯದ ಅನೇಕ ಶಾಲೆಗಳಲ್ಲಿ ಪೀಠೋಪಕರಣಗಳ ಹಾಗೂ ವಿಜ್ಞಾನ ಪ್ರಯೋಗಾಲಯಗಳ ಕೊರತೆಯಿದೆ. ದರ ಜೊತೆ ಕೆಲವೆಡೆ ಶಾಲಾ ಒತ್ತುವರಿ ಪ್ರಕರಣಗಳು ವರದಿಯಾಗುತ್ತಿವೆ. ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಇದು ಹೆಚ್ಚು. ರಾಮನಗರ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಸರ್ಕಾರಿ ಭೂ ಒತ್ತುವರಿ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವುದು ಇದಕ್ಕೊಂದು ನಿದರ್ಶನ. ಹಲವು ಶಾಲೆಗಳಿಗೆ ಕಾಂಪೌಂಡ್ ಗೋಡೆ ಇಲ್ಲದಿರುವುದೇ ಒತ್ತುವರಿಗೆ ಪ್ರಮುಖ ಕಾರಣ.
ಮಳೆಗಾಲದ ದಿನಗಳಲ್ಲಿ ಮಲೆನಾಡು ಪ್ರದೇಶಗಳಲ್ಲಿನ ಮಕ್ಕಳಿಗೆ ನೆರೆಯ ಸಮಸ್ಯೆ ಇದ್ದದ್ದೆ. ಶಾಲೆಗೆ ತಲುಪಲು ಹಳ್ಳ-ಕೊಳ್ಳ ದಾಟಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಜೋರಾಗಿ ಮಳೆ ಬಂದು, ನೆರೆ ಬಂದಾಗ ಮಕ್ಕಳ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆಯಿರುತ್ತದೆ. ಮಳೆಗಾಲದ ವೇಳೆ ಹಲವು ಪ್ರದೇಶಗಳಿಗೆ ಬಸ್ ಸಂಚಾರ ಸ್ಥಗಿತಗೊಳ್ಳುವುದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗುತ್ತದೆ. ಉದಾಹರಣೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೊಸಂಗಡಿ ಗ್ರಾ. ಪಂ. ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶಗಳಾದ ಎಡಮೊಗೆ, ಕೊಲಾಳಿ, ಕುಳ್ಳುಬೈಲು, ಬೀರನಬೈಲು ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳು ಹದಗೆಟ್ಟಿರುವುದರಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ದೂರದ ಶಾಲಾ ಕಾಲೇಜುಗಳಿಗೆ ಹೋಗಬೇಕಾಗಿದ್ದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಾಲ್ನಡಿಗೆಯಲ್ಲಿಯೇ ತೆರಳಬೇಕಾದ ಸಂದಿಗ್ದ ಪರಿಸ್ಥಿತಿ ಎದುರಾಗಿದೆ.
ನರಗುಂದ ತಾಲೂಕು ಭೈರನಹಟ್ಟಿ ಸಮೀಪದ ಉಡಚಮ್ಮನಗರದ 10ಬಾಲಕಿಯರು, 6ಬಾಲಕರು ಸೇರಿ ಒಟ್ಟೂ 16ಮಕ್ಕಳು ನಿತ್ಯ 2.5 ಕಿ.ಮೀ. ಕಾಲ್ನಡಿಗೆಯಲ್ಲೇ ಸಂಚರಿಸಿ ಭೈರನಹಟ್ಟಿ ಸರ್ಕಾರಿ ಪ್ರೌಢಶಾಲೆಗೆ ಹೋಗಬೇಕು. ಬಸ್ ಭೈರನಹಟ್ಟಿವರೆಗೆ ಮಾತ್ರ ಬರುವುದರಿಂದ ಮಕ್ಕಳಿಗೆ ಈ ಸಮಸ್ಯೆ.

ಸಮವಸ್ತ್ರ ಓ.ಕೆ., ಪುಸ್ತಕಗಳು ಬಂದಿಲ್ಲ ಯಾಕೆ?:
ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಈಗ ಸರಕಾರವೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ನೀಡುತ್ತ ಬಂದಿದೆ. ರಾಜ್ಯದ ಬಹುತೇಕ ಶಾಲೆಗಳಿಗೆ ಸಮವಸ್ತ್ರ ಪೂರೈಕೆಯಾಗಿದೆಯಾದರೂ, ಕೆಲವೆಡೆ ಸರಬರಾಜಿನಲ್ಲಿ ವ್ಯತ್ಯಯ ಕಂಡು ಬರುತ್ತಿದೆ. ಆದರೆ, ಶಾಲಾ ದಾಖಲಾತಿ ಜೂನ್ ಅಂತ್ಯದವರೆಗೂ ಮುಂದುವರಿಯಲಿರುವುದರಿಂದ ಆ ವೇಳೆಗೆ ಎಲ್ಲಾ ಮಕ್ಕಳಿಗೂ ಶಾಲಾ ಸಮವಸ್ತ್ರ ಹಾಗೂ ಪುಸ್ತಕಗಳು ಸಿಗುವ ಅಶಯವಿದೆ.
ಹಾಸನ ಜಿಲ್ಲೆಯಲ್ಲಿ ಸಮವಸ್ತ್ರ ಪೂರೈಕೆ ಸಮರ್ಪಕವಾಗಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಿಗೆ ಸಮವಸ ಇನ್ನೂ ಲಭ್ಯವಾಗಿಲ್ಲ. ಧಾರವಾಡ ಸಮೀಪದ ತೇಗೂರು, ನಿಗದಿ, ಕಲಕೇರಿ, ಕುರುಬಗಟ್ಟಿ, ನೀರಲಕಟ್ಟಿ , ಹುಬ್ಬಳ್ಳಿ ತಾಲೂಕಿನ ಶೂರಶೆಟ್ಟಿಕೊಪ್ಪ, ಅಂಚಟಗೇರಿ, ಕಲಘಟಗಿ ತಾಲೂಕಿನ ದೇವಿಕೊಪ್ಪ, ಹಿರೇಹೊನ್ನಳ್ಳಿ, ನವಲಗುಂದ ತಾಲೂಕಿನ ಅಳಗವಾಡಿ, ಗೊಬ್ಬರಗುಂಪಿ ಶಾಲೆಗಳಿಗೆ ಸಮವಸ್ತ್ರ ಇನ್ನೂ ತಲುಪಿಲ್ಲ. ಯಾದಗಿರಿ ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿ ಮಕ್ಕಳಿಗಾಗಿ 5,27,858 ಸಮವಸಗಳ ಬೇಡಿಕೆಯಿದ್ದು, ಈವರೆಗೆ 3,36,632 ಸಮವಸ ಪೂರೈಕೆಯಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಟಿ. ನರಸೀಪುರ ತಾಲೂಕುಗಳಲ್ಲಿ ಶೇ. 60ರಷ್ಟು ಸಮವಸ್ತ್ರಗಳು ಮಾತ್ರ ಪೂರೈಕೆಯಾಗಿವೆ.
ಆದರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪುಸ್ತಕಗಳ ಕೊರತೆ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಐದನೇ ತರಗತಿಯ ಆಂಗ್ಲ ಮಾಧ್ಯಮದ ಭಾಷೆ ಮತ್ತು ವಿಜ್ಞಾನ ಪುಸ್ತಕಗಳು ಕಡಿಮೆ ಪ್ರಮಾಣದಲ್ಲಿ ಬಂದಿವೆ. ಹೈಸ್ಕೂಲ್ ವಿಭಾಗದಲ್ಲಿ ಆಂಗ್ಲ ಭಾಷೆ ಭಾಗ-2 ಮತ್ತು ಹಿಂದಿ ಭಾಷೆಯ ಪುಸ್ತಕಗಳು ಸುಮಾರು 400ರಷ್ಟು ಕಡಿಮೆ ಬಿದ್ದಿವೆ. ಹಾಸನ ಜಿಲ್ಲೆಯಲ್ಲಿ ತಮಿಳು, ಉರ್ದು ಮತ್ತಿತರ ಭಾಷೆಗಳ ಕೆಲ ಪಠ್ಯಪುಸ್ತಕಗಳ ಕೊರತೆಯಿದೆ.
ರಾಮನಗರ ಜಿಲ್ಲೆಯ ಶಾಲೆಗಳಿಗೆ 1ನೇ ತರಗತಿಯ ‘ಕನ್ನಡ ಕಲಿನಲಿ’ ಪುಸ್ತಕದ ಒಂದೇ ಒಂದು ಪ್ರತಿಯೂ ಬಂದಿಲ್ಲ. 5ನೇ ತರಗತಿಯ ಕನ್ನಡ ಮಾಧ್ಯಮದ ಕೋರ್ ವಿಷಯದ 1ನೇ ಸೆಮಿಸ್ಟರ್ನ ಪುಸ್ತಕ, 7ನೇ ತರಗತಿಯ ಕನ್ನಡ ಮಾಧ್ಯಮದ ಕೋರ್ ವಿಷಯದ 1ನೇ ಸೆಮಿಸ್ಟರ್ನ ಪಠ್ಯ ಪುಸ್ತಕ, 8ನೇ ತರಗತಿಯ ಕನ್ನಡ ಮಾಧ್ಯಮ ಗಣಿತ ಪಠ್ಯ ಪುಸ್ತಕಗಳ ಕೊರತೆಯೂ ಕೇಳಿ ಬರುತ್ತಿದೆ.
ನವಲಗುಂದ, ಕುಂದಗೋಳ ಮತ್ತು ಕಲಘಟಗಿ ತಾಲೂಕುಗಳು ಸೇರಿದಂತೆ ಧಾರವಾಡ ಜಿಲ್ಲೆಯ ಬಹುತೇಕ ಶಾಲೆಗಳಿಗೆ 5 ಮತ್ತು 8 ನೇ ತರಗತಿಯ ಗಣಿತ, ವಿಜ್ಞಾನ ಮತ್ತು ಸಮಾಜ ಪರಿಚಯ ವಿಷಯಗಳ ಪಠ್ಯಪುಸ್ತಕಗಳು ಇನ್ನೂ ಲಭ್ಯವಾಗಿಲ್ಲ. ಕೆಲವು ಕಡೆಗಳಲ್ಲಿ ಮೊದಲ ಸೆಮಿಸ್ಟರ್ನ ಪುಸ್ತಕಗಳ ಬದಲಾಗಿ 2ನೇ ಸೆಮಿಸ್ಟರ್ನ ಪುಸ್ತಕಗಳು ಬಂದಿವೆ. ಜಿಲ್ಲೆಯಲ್ಲಿ ಇನ್ನೂ 1,48,581 ಪುಸ್ತಕಗಳ ಕೊರತೆಯಿದೆ. ಯಾದಗಿರಿ ಜಿಲ್ಲೆಯಲ್ಲಿ 7,38,922 ಪಠ್ಯ ಪುಸ್ತಕಗಳಿಗೆ ಬೇಡಿಕೆಯಿದ್ದು, ಈತನಕ 6,02,248 ಪುಸ್ತಕಗಳು ಮಾತ್ರ ಸರಬರಾಜಾಗಿವೆ. ಬೀದರ್ ಜಿಲ್ಲೆಯಲ್ಲಿ ಬೇಡಿಕೆಯ ಶೇ. 97ರಷ್ಟು ಪುಸ್ತಕಗಳು ಪೂರೈಕೆಯಾಗಿವೆ. 5ನೇ ತರಗತಿಯ ಕನ್ನಡ ವಿಷಯ ಪುಸ್ತಕ ಇನ್ನೂ ಪೂರೈಕೆಯಾಗಬೇಕಾಗಿದೆ. ಹಾವೇರಿ ಜಿಲ್ಲೆಯಲ್ಲಿ 12.06 ಲಕ್ಷ ಪುಸ್ತಕಗಳ ಪೈಕಿ ಎಂಟು ಲಕ್ಷ ಪುಸ್ತಕಗಳು ಮಾತ್ರ ಪೂರೈಕೆಯಾಗಿವೆ. ಐದನೇ ತರಗತಿಯ ಎರಡನೇ ಸೆಮಿಸ್ಟರ್ಗೆ ಸಂಬಂಧಿಸಿದ ಎರಡು ಲಕ್ಷ ಪುಸ್ತಕಗಳು ಬರುವುದು ಬಾಕಿ ಇದೆ.

ದಟ್ಟ ಕಾಡಲ್ಲಿ ಸೈಕಲ್ ಮೇಲೆ ಬರುವುದು ಹೇಗೆ?
ಇದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಕಥೆ. ಹಿಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಾಗಿದೆ. ಇಲ್ಲಿಗೆ ಧಾರವಾಡ ತಾಲೂಕಿನ ಮಕ್ಕಳೇ ಹೆಚ್ಚಾಗಿ ಬರುತ್ತಾರೆ. ವಿದ್ಯಾರ್ಥಿಗಳು ಶಾಲೆಗೆ ಬರಲು ರಿಯಾಯಿತಿ ದರದ ಬಸ್ ಪಾಸ್ ಅವಲಂಬಿಸಿದ್ದಾರೆ. ಆದರೆ, ಸರಕಾರ ಮಕ್ಕಳಿಗೆ ಉಚಿತ ಸೈಕಲ್ ನೀಡುವುದರಿಂದ ಸೈಕಲ್ ಮೂಲಕವೇ ಬರಬೇಕು, ಬಸ್ ಪಾಸ್ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ ಶಾಲಾ ಮುಖ್ಯಸ್ಥರು. ಸರ್ಕಾರ ನೀಡಿರುವ ಸೈಕಲ್, ವಸತಿ ನಿಲಯ ಅಥವಾ ರಿಯಾಯಿತಿ ದರದ ಬಸ್ ಪಾಸ್ಗಳ ಪೈಕಿ ಮಕ್ಕಳು ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು ಎಂಬ ನಿಯಮ ಇದಕ್ಕೆ ಕಾರಣ.
ಆದರಿದು ಮಲೆನಾಡು ಪ್ರದೇಶ, ದಟ್ಟವಾದ ಅರಣ್ಯ ಹೊಂದಿರುವ ಪ್ರದೇಶ. ಮಳೆಗಾಲದಲ್ಲಿ, ದಟ್ಟ ಕಾನನದಲ್ಲಿ ಸೈಕಲ್ ಮೇಲೆ ಬರುವುದು ವಿದ್ಯಾರ್ಥಿನಿಯರಿಗಂತೂ ಆಗದ ಮಾತು. ಸರ್ಕಾರ ವಿತರಿಸಿರುವ ಸೈಕಲ್ಗಳ ಪೈಕಿ ಕೆಲವು ಈಗಾಗಲೇ ಮುರಿದು ಹಾಳಾಗಿವೆ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಪುನಃ ಹೊಸ ಸೈಕಲ್ ಖರೀದಿಸುವುದು ಹೊರೆಯಾಗುತ್ತಿದೆ. ಪ್ರತಿದಿನ ಬಸ್ ಟಿಕೆಟ್ ಖರೀದಿಸಿ ಬರುವಷ್ಟು ಆರ್ಥಿಕ ಸಾಮರ್ಥ್ಯ ಈ ಮಕ್ಕಳಿಗಿಲ್ಲ. ಇದರಿಂದಾಗಿ ಬಹುದೂರದ ಶಾಲೆಗೆ ಮಕ್ಕಳು ನಡೆದುಕೊಂಡೇ ಬರಬೇಕಾದ ಅನಿವಾರ್ಯತೆಯಿದೆ. ಹೀಗಾಗಿ, ಕೆಲವು ಪಾಲಕರು ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಲು ಯೋಚಿಸುತ್ತಿದ್ದರೆ, ಇನ್ನುಳಿದವರು ಬಾಲಕಿಯರನ್ನು ಶಾಲೆಯಿಂದ ಬಿಡಿಸುವುದಾಗಿ ಹೇಳುತ್ತಿದ್ದಾರೆ.

ಸ್ವಾವಲಂಬಿ ಬದುಕಿನ ಪಾಠ:
ಹಾವೇರಿ ತಾಲೂಕು ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ಸ್ವಾಲವಂಬಿ ಬದುಕಿನ ಶಿಕ್ಷಣದ ಬಗ್ಗೆ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಇಲ್ಲಿ ಮಕ್ಕಳು ತಾವೇ ಸ್ವತ: ಹತ್ತಿ ಹಿಂಚಿ, ನೂಲು ತೆಗೆದು ತಯಾರಿಸಿದ ಬಟ್ಟೆ ಧರಿಸುತ್ತಾರೆ. ತೋಟಗಾರಿಕೆ, ನೇಯ್ಗೆ, ರೇಷ್ಮೆ, ವ್ಯವಸಾಯ, ಹೈನುಗಾರಿಕೆ, ಕಂಪ್ಯೂಟರ್ ಸೇರಿದಂತೆ ಔದ್ಯೋಗಿಕ ವಲಯದಲ್ಲಿ ಶಿಕ್ಷಣ ನೀಡಲಾಗುತ್ತದೆ. 32 ಎಕ್ರೆ ಭೂಮಿಯಲ್ಲಿ ಸಾವಯವ ಮಾದರಿಯಲ್ಲಿ ತೆಂಗು, ತರಕಾರಿ, ಚಿಕ್ಕು ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತದೆ. ಇದರಿಂದಾಗಿ ಮಕ್ಕಳು ಭವಿಷ್ಯದಲ್ಲಿ ಸ್ವಾವಲಂಬಿ ಬದುಕನ್ನು ಸಾಗಿಸಲು ಸಹಾಯವಾಗುತ್ತದೆ. 240 ಮಕ್ಕಳಿಗೆ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಸೀಮಿತ ಸೀಟಿಗೆ ಬೇಡಿಕೆ ಸಾಕಷ್ಟಿದೆ.

ಮಕ್ಕಳ ಮನೆ ಎಂಬ ಸರ್ಕಾರಿ ಕಾನ್ವೆಂಟ್:
ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಾಸನ ಜಿಲ್ಲೆಯಲ್ಲಿ  ಮಕ್ಕಳ ಮನೆ ಎಂಬ ಸರ್ಕಾರಿ ಕಾನ್ವೆಂಟ್ಗಳನ್ನು ಆರಂಭಿಸಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ಕೊರತೆ ಎದುರಾಗದಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ  ಖಾಸಗಿ ಕಾನ್ವೆಂಟ್ ಹಾವಳಿ ತಡೆಯುವ ನಿಟ್ಟಿನಲ್ಲಿ ಈ ಯೋಜನೆ ಜಾರಿಯಾಗಿದೆ. ಪ್ರಾಥಮಿಕ ಶಾಲೆಗೆ ಮುನ್ನ ಖಾಸಗಿ ಶಾಲೆಗಳ ಎಲ್.ಕೆ.ಜಿ., ಯು.ಕೆ.ಜಿ.ಗೆ ಸೇರುತ್ತಿದ್ದ ಮಕ್ಕಳು ಈ ವರ್ಷದಿಂದ ಮಕ್ಕಳ ಮನೆ ಸೇರುತ್ತಿದ್ದಾರೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಾಯೋಗಿಕವಾಗಿ 10 ಕಡೆ ಆರಂಭಿಸಲಾಗಿತ್ತು. 242 ಮಕ್ಕಳು ಮಕ್ಕಳ ಮನೆಗೆ ದಾಖಲಾಗಿದ್ದರು. ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದರಿಂದ ಈ ವರ್ಷ 86 ಮಕ್ಕಳ ಮನೆ ಆರಂಭಿಸಲಾಗಿದೆ. ಈ ವರ್ಷ 86 ಮಕ್ಕಳ ಮನೆಗೆ 3,260 ಮಕ್ಕಳು ದಾಖಲಾಗಿದ್ದಾರೆ.
ಮಕ್ಕಳ ಮನೆಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆಗಳಿರುವ ಗ್ರಾಮಗಳಲ್ಲಿ ಅಲ್ಲಿನ ಹಳೆ ವಿದ್ಯಾರ್ಥಿಗಳು, ದಾನಿಗಳು ಮತ್ತು ಪೋಷಕರಿಂದ ಹಣ ಸಂಗ್ರಹಿಸಿ ಮಕ್ಕಳ ಮನೆ ನಡೆಸಲಾಗುತ್ತಿದೆ. ಈ ಹಣದಿಂದಲೇ ಶಿಕ್ಷಕರು, ಸಹಾಯಕಿಯರಿಗೆ ಗೌರವಧನ ನೀಡಲಾಗುತ್ತದೆ. ಜೊತೆಗೆ ಇಲ್ಲಿಗೆ ಬರುವ ಮಕ್ಕಳ ಪೋಷಕರಿಂದ ಮಾಸಿಕ 50 ರಿಂದ 100 ರೂ. ಸಂಗ್ರಹಿಸಲಾಗುತ್ತದೆ. ಮಕ್ಕಳ ಮನೆಗಳು  ರಜಾ ದಿನ ಹೊರತುಪಡಿಸಿ ಉಳಿದ ದಿನ ಬೆಳಗ್ಗೆ 9.15 ರಿಂದ ಸಂಜೆ 4.40 ರವರೆಗೆ ನಡೆಯುತ್ತವೆ.

ರಾಜ್ಯದಲ್ಲಿರುವ ಪ್ರಾಥಮಿಕ ಶಾಲೆಗಳ ವಿವರ:
ಸರ್ಕಾರಿ ಪ್ರಾಥಮಿಕ: 45,677
ಅನುದಾನಿತ: 2,657
ಅನುದಾನರಹಿತ: 10,252
ಕೇಂದ್ರೀಯ ಮತ್ತು ಇತರೆ: 119
ಸ್ವಯಂ ಸೇವಾ ಸಂಸ್ಥೆ ಶಾಲೆಗಳು: 723
ಒಟ್ಟು 59,428

1ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳ ದಾಖಲಾತಿ:
ಸರ್ಕಾರಿ ಪ್ರಾಥಮಿಕ: 43.92 ಲಕ್ಷ
ಅನುದಾನಿತ: 6.95  ಲಕ್ಷ
ಅನುದಾನರಹಿತ: 22.36 ಲಕ್ಷ
ಕೇಂದ್ರೀಯ ಮತ್ತು ಇತರೆ: 00,39 ಲಕ್ಷ
ಸ್ವಯಂ ಸೇವಾ ಸಂಸ್ಥೆ ಶಾಲೆಗಳು: 00,63 ಲಕ್ಷ
ಒಟ್ಟು 74.25 ಲಕ್ಷ

ರಾಜ್ಯದಲ್ಲಿರುವ ಪ್ರೌಢ ಶಾಲೆಗಳ ವಿವರ:
ಸರ್ಕಾರಿ ಪ್ರೌಢಶಾಲೆ: 4,278
ಅನುದಾನಿತ: 3,367
ಅನುದಾನರಹಿತ: 5,259
ಕೇಂದ್ರೀಯ ಮತ್ತು ಇತರೆ: 0,095
ಸ್ವಯಂ ಸೇವಾ ಸಂಸ್ಥೆ ಶಾಲೆಗಳು: 0,448
ಒಟ್ಟು 13,447

8ರಿಂದ 10 ತರಗತಿವರೆಗಿನ ವಿದ್ಯಾರ್ಥಿಗಳ ದಾಖಲಾತಿ:
ಸರ್ಕಾರಿ ಪ್ರೌಢಶಾಲೆ: 10 ಲಕ್ಷ
ಅನುದಾನಿತ: 8.34 ಲಕ್ಷ
ಅನುದಾನರಹಿತ: 6.40 ಲಕ್ಷ
ಕೇಂದ್ರೀಯ ಮತ್ತು ಇತರೆ: 0.18 ಲಕ್ಷ
ಸ್ವಯಂ ಸೇವಾ ಸಂಸ್ಥೆ ಶಾಲೆಗಳು: 0.50 ಲಕ್ಷ
ಒಟ್ಟು 26.04 ಲಕ್ಷ