ಮೂಲಭೂತ ಸೌಕರ್ಯಗಳಿಂದ ನರಳುತ್ತಿವೆ ಶಾಲೆಗಳು

ರಾಜ್ಯದಲ್ಲಿ ಶಾಲೆಗಳು ಆರಂಭವಾಗಿ ಮೂರು ವಾರಗಳೇ ಸಂದಿವೆ. ಶಾಲೆಗಳನ್ನು ತಳಿರು-ತೋರಣಗಳಿಂದ ಶೃಂಗರಿಸಿ, ಮಕ್ಕಳಿಗೆ ಸಿಹಿ ಹಂಚಿ ಹಬ್ಬದ ರೀತಿ ಶಾಲಾರಂಭಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ತರಗತಿಗೆ ಪ್ರವೇಶ ಪಡೆದ ಹುಮ್ಮಸ್ಸಿನಲ್ಲಿರುವ ಮಕ್ಕಳು ಹೊಸ ಪಠ್ಯಕ್ರಮವನ್ನು ಅಭ್ಯಸಿಸಲು ಮುಂದಾಗಿದ್ದಾರೆ. ಆದರೆ, ಯಥಾಪ್ರಕಾರ ಶಾಲೆಗೆ ತೆರಳುವ ಮಕ್ಕಳು ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆಯಿದೆ.
ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳಿಗೆ ಸರಕಾರವೇ ಪಠ್ಯಪುಸ್ತಕ ಮತ್ತು ಸಮವಸ್ತ್ರ ಪೂರೈಸುತ್ತಿದೆ. ರಾಜ್ಯದ ಬಹುತೇಕ ಶಾಲೆಗಳಿಗೆ ಸಮವಸ್ತ್ರ ಪೂರೈಕೆಯಾಗಿದೆಯಾದರೂ, ಕೆಲವೆಡೆ ಸರಬರಾಜಿನಲ್ಲಿ ವ್ಯತ್ಯಯ ಕಂಡು ಬರುತ್ತಿದೆ. ಹಾಸನ ಜಿಲ್ಲೆಯಲ್ಲಿ ಸಮವಸ್ತ್ರ ಇನ್ನೂ ಸರಬರಾಜಾಗಿಲ್ಲ ಎಂಬ ವರದಿ ಈ ಅಂಶವನ್ನು ಪುಷ್ಠೀಕರಿಸುತ್ತದೆ. ಕಳೆದ ವಾರ ಶಿರಸಿಯಲ್ಲಿ ಮಾತನಾಡಿದ ರಾಜ್ಯ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಪಠ್ಯ, ಪುಸ್ತಕ ಬಂದಿಲ್ಲವೆಂದಾದರೆ ನನಗೆ ಹೇಳಿ’ ಎಂದಿದ್ದರು. ಆದರೆ, ಹಲವು ಜಿಲ್ಲೆಗಳಲ್ಲಿ ಪುಸ್ತಕಗಳ ಕೊರತೆಯಿದೆ. ಕಾರವಾರ, ಶಿರಸಿ, ರಾಮನಗರ ಶೈಕ್ಷಣಿಕ ಜಿಲ್ಲೆಗಳಲ್ಲಿ ಐದನೇ ತರಗತಿಯ ಆಂಗ್ಲ ಮಾಧ್ಯಮದ ಭಾಷಾ ಮತ್ತು ವಿಜ್ಞಾನ ಪುಸ್ತಕಗಳ ಕೊರತೆಯಿದೆ. ಹೈಸ್ಕೂಲ್ ವಿಭಾಗದಲ್ಲಿ ಆಂಗ್ಲ ಭಾಷೆ ಭಾಗ-2 ಮತ್ತು ಹಿಂದಿ ಭಾಷೆಯ ಪುಸ್ತಕಗಳ ಕೊರತೆ ಕಂಡು ಬಂದಿದೆ. ಹಾಸನ ಜಿಲ್ಲೆಯಲ್ಲಿ ತಮಿಳು, ಉರ್ದು ಮತ್ತಿತರ ಭಾಷೆಗಳ ಪುಸ್ತಕಗಳ ಕೊರತೆಯಿದೆ. ರಾಮನಗರ ಜಿಲ್ಲೆಯಲ್ಲಿ 1ನೇ ತರಗತಿಯ ‘ಕನ್ನಡ ಕಲಿನಲಿ’ ಪುಸ್ತಕದ ಒಂದೇ ಒಂದು ಪ್ರತಿಯೂ ಬಂದಿಲ್ಲ ಎನ್ನುತ್ತದೆ ವರದಿ.
ಇನ್ನು ಶಿಕ್ಷಕರ ಕೊರತೆ ಇದ್ದದ್ದೆ. ಚಿಂಚೋಳಿ ತಾಲೂಕಿನ ಕೋಡ್ಲಿಯ ಹರಿಜನವಾಡಾದ ಶಾಲೆಯಲ್ಲಿ 85 ಮಂದಿ ಮಕ್ಕಳಿಗೆ ಒಬ್ಬನೇ ಶಿಕ್ಷಕ ಪಾಠ ಮಾಡಬೇಕಾದ ಪರಿಸ್ಥಿತಿಯಿದ್ದರೆ, ಮೈಸೂರಿನ ಮಂಡಿ ಮೊಹಲ್ಲಾದ ಸಿವಿ ರಸ್ತೆಯ ಈದ್ಗಾ ಸ್ಲಮ್ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಒಂದೇ ಕೊಠಡಿಯಲ್ಲಿ 1ರಿಂದ 5ನೇ ತರಗತಿವರೆಗಿನ 98 ಮಕ್ಕಳು ಕುಳಿತುಕೊಳ್ಳಬೇಕಿದೆ. ರಾಜ್ಯಾದ್ಯಂತ 8 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ. ಗ್ರಾಮೀಣ ಪ್ರದೇಶಗಳಿಗೆ ಅದರಲ್ಲೂ ವಿಶೇಷವಾಗಿ ಮಲೆನಾಡಿನ ಭಾಗಗಳಿಗೆ ಶಿಕ್ಷಕರು ಹೋಗಲು ಹಿಂದೇಟು ಹಾಕುತ್ತಿರುವುದು ಸಮಸ್ಯೆಯನ್ನು ಬಿಗಡಾಯಿಸಿದೆ.
ಶಾಲೆಯ ಪರಿಸರ, ಶಾಲೆಯಲ್ಲಿ ಮಕ್ಕಳಿಗೆ ಲಭ್ಯವಾಗುವ ಕಲಿಕೋಪಕರಣ ಸೇರಿದಂತೆ ಮೂಲಭೂತ ಸೌಕರ್ಯಗಳು ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸುವ ಮೂಲಕ ಮಕ್ಕಳಲ್ಲಿ ಓದಿನ ಬಗೆಗಿನ ಆಸಕ್ತಿಯನ್ನು ಹೆಚ್ಚಿಸಲು ಸಹಕರಿಸುತ್ತವೆ. ಆದರೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಲೂ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳು ಭಯದ ನೆರಳಿನಲ್ಲಿ ಪಾಠ-ಪ್ರವಚನ ಕೇಳಬೇಕಾಗಿರುವುದು ವಿಷಾದನೀಯ. ಬೀದರ್ ಜಿಲ್ಲೆಯೊಂದರಲ್ಲೇ 65 ಶಾಲೆಗಳ 210ಕ್ಕೂ ಹೆಚ್ಚು ಕೋಣೆಗಳು ಶಿಥಿಲಾವಸ್ಥೆಗೆ ತಲುಪಿರುವುದು ಪರಿಸ್ಥಿತಿಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಕಳೆದ ವರ್ಷ ಮಳೆಗಾಲದಲ್ಲಿ ಶಾಲಾ ಕಟ್ಟಡಗಳು ಕುಸಿದಿದ್ದು, ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ಶಾಲಾ ಕಟ್ಟಡಗಳ ಮೇಲ್ಛಾವಣಿ ಕುಸಿಯುವ ಆತಂಕ ಹೆಚ್ಚಿದೆ. ಉಳಿದ ಜಿಲ್ಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ. ಶಾಲೆಗಳು ಸಂಶೋಧನೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕಾದ ತಾಣಗಳು. ಆದರೆ, ರಾಜ್ಯದ ಹಲವು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳಿಲ್ಲ. ಆಟದ ಮೈದಾನಗಳಿಲ್ಲ. ಎಷ್ಟೋ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಜೊತೆಗೆ ನಗರ ಪ್ರದೇಶಗಳಲ್ಲಿ ಶಾಲಾ ಪ್ರದೇಶಗಳು ಒತ್ತುವರಿಯಾದ ಹಲವು ನಿದರ್ಶನಗಳಿವೆ.
ಇತ್ತೀಚಿನ ವರ್ಷಗಳಲ್ಲಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಮಧ್ಯಾಹ್ನದ ಬಿಸಿಯೂಟ, ಚಿಣ್ಣರ ಅಂಗಳ, ಮಕ್ಕಳ ದತ್ತು ಯೋಜನೆ, ನಲಿಕಲಿಯಂತಹ ಯೋಜನೆಗಳಿಂದಾಗಿ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಇವೆಲ್ಲದರ ಫಲವಾಗಿ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಶಾಲಾ ಹಾಜರಾತಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದರೂ, ಗ್ರಾಮೀಣ ಭಾಗದಲ್ಲಿ  ಇಳಿಮುಖವಾಗುತ್ತಿದೆ. ಇಂಗ್ಲೀಷ್ ಮಾಧ್ಯಮದ ಖಾಸಗಿ ಶಾಲೆಗಳ ಆಕರ್ಷಣೆ ಹೆಚ್ಚುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕೆಲವು ಶಾಲೆಗಳನ್ನು ಮುಚ್ಚುವ ಸ್ಥಿತಿ ಬಂದೊದಗಿದೆ. ಜುಲೈ 30ರವರೆಗೂ ಶಾಲಾ ದಾಖಲಾತಿಗೆ ಅವಕಾಶವಿದ್ದು, ನಂತರ ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿಗಳು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಶಾಲೆಗೆ ದಾಖಲಾತಿ ಮಾಡಿಕೊಳ್ಳದಿರುವ, ದಾಖಲಾಗಿಯೂ ಹಾಜರಾಗದ ವಿದ್ಯಾರ್ಥಿಗಳ ಸಮೀಕ್ಷೆ ನಡೆಸುತ್ತಾರೆ. ಶಾಲೆಗೆ ಬರದ ಮಕ್ಕಳಿದ್ದರೆ ಶಾಲಾ ಶಿಕ್ಷಕರು, ಆಯಾ ಭಾಗದ ಗುಚ್ಛ ಸಂಪನ್ಮೂಲ ವ್ಯಕ್ತಿಗಳ ಜೊತೆ ಮಕ್ಕಳ ಮನೆಗೆ ತೆರಳಿ, ಪಾಲಕರ ಮನವೊಲಿಸಿ ಶಾಲೆಗೆ ಸೇರಿಸಲು ಮುಂದಾಗುತ್ತಾರೆ. ಆನಂತರವಷ್ಟೆ ಶಾಲಾ ಹಾಜರಾತಿ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲು ಸಾಧ್ಯ.