ನೇಗಿಲು ಮರೆಯಾಗುತ್ತಿದೆ ನೋಡಣ್ಣ


ನೊಗ, ನೇಗಿಲು ಕೃಷಿ ಬದುಕಿನ ಪ್ರಧಾನ ಪರಿಕರ. ಅನ್ನದಾತನ ಅನ್ನದ ಬಟ್ಟಲಿನ ಆಧಾರ. ಆರಾಧನೆಯ ಆಯುಧ. ರೈತನಿಗೆ ನೇಗಿಲಯೋಗಿಯ ಪದವಿಯನ್ನು ಕರುಣಿಸಿದ ಸಾಧನ. ಕಾಲಚಕ್ರ ಉರುಳುತ್ತಿದೆ. ನೇಗಿಲು ಮರೆಯಾಗುತ್ತಿದೆ. ಟಿಲ್ಲರ್, ಟ್ರ್ಯಾಕ್ಟರ್ ಬಂದಿದೆ. ಎತ್ತು, ಕೋಣಗಳ ಹಟ್ಟಿಗಳು ಯಂತ್ರ ಪರಿಕರಗಳ ಶೆಡ್ಗಳಾಗಿವೆ.
ನೊಗ ಮತ್ತು ನೇಗಿಲು ಪರಸ್ಪರ ಹೊಂದಿಕೊಂಡಿರುವ ಸಾಧನಗಳು. ನೊಗ ಬಿಟ್ಟು ನೇಗಿಲು ಇಲ್ಲ. ನೇಗಿಲು ಇಲ್ಲದೆ ನೊಗದ ಉಪಯೋಗವಿಲ್ಲ. ನೊಗ ಎತ್ತುಗಳ ಹೆಗಲನ್ನು ಅಲಂಕರಿಸಿದರೆ ನೇಗಿಲು ಅದಕ್ಕೆ ಬಿಗಿದುಕೊಂಡು ಹಿಂಬಾಲಿಸಿಕೊಂಡು ಹೊಲಗದ್ದೆಗಳನ್ನು ಹಸನುಗೊಳಿಸುತ್ತದೆ. ಹಿಂದೆಲ್ಲಾ ಇವೆರಡು ಸಾಧನಗಳನ್ನು ಮರದಿಂದಲೇ ಮಾಡುತ್ತಿದ್ದರು. ಈಗ ಮರದ ಜಾಗವನ್ನು ಕಬ್ಬಿಣ ಆಕ್ರಮಿಸಿಕೊಂಡಿದೆ.
ಎತ್ತುಗಳಿಗೆ ನೊಗ ಮತ್ತು ನೇಗಿಲು ಬಿಗಿಯಲು ಪರಿಣತಿ ಬೇಕು. ಕ್ರಮಬದ್ದವಾಗಿ ಬಿಗಿಯದಿದ್ದರೆ ಉಳುಮೆಯ ಮಧ್ಯದಲ್ಲಿ ಇವೆರಡೂ ಕಳಚಿ ಬೀಳುತ್ತವೆ. ಅಲ್ಲದೆ, ಉಳುಮೆಯೂ ಕ್ರಮಬದ್ಧವಾಗಿರುವುದಿಲ್ಲ. ರೈತ ಉಳುಮೆ ಪ್ರಾರಂಭಿಸುವ ಮೊದಲು ಇವುಗಳಿಗೆ ನಮಸ್ಕರಿಸಿ ಬಳಿಕ ಎತ್ತುಗಳ ಹೆಗಲ ಮೇಲೆ ಇವುಗಳನ್ನು ಬಿಗಿಯುತ್ತಾನೆ. ನೊಗ ನೇಗಿಲು ಅನ್ನು ದಾಟಬಾರದು. ಮೆಟ್ಟಬಾರದು. ಮೆಟ್ಟಿದರೆ ಮುಟ್ಟಿ ನಮಸ್ಕರಿಸಬೇಕು ಎಂಬ ನಿಯಮಗಳಿವೆ. ದೀಪಾವಳಿ ಸಂದರ್ಭದಲ್ಲಿ ಇವುಗಳಿಗೂ ಪೂಜೆ ಸಲ್ಲುತ್ತದೆ.
ಆದರೆ, ಆಧುನೀಕತೆ ಎಲ್ಲಾ ಕ್ಷೇತ್ರಗಳಂತೆ ಕೃಷಿಯನ್ನೂ ಆವರಿಸಿದೆ. ಕಾಲದ ಅವಶ್ಯಕತೆಗೆ ತಕ್ಕಂತೆ ಹೆಜ್ಜೆ ಹಾಕುವ ಅನಿವಾರ್ಯತೆಯಲ್ಲಿ ರೈತನಿದ್ದಾನೆ. ಅವಿಭಕ್ತ ಕುಟುಂಬ ವ್ಯವಸ್ಥೆ ಶಿಥಿಲಗೊಂಡಿದೆ. ಕೆಲಸ ಮಾಡಲು ಮನೆಯಲ್ಲಿ ಜನರಿಲ್ಲ, ಕೆಲಸಕ್ಕೆ ಕೂಲಿಗಳು ಸಿಗುತ್ತಿಲ್ಲ. ದೊರೆತರೂ ಹಿಂದಿನಂತೆ ಭತ್ತ ಅಕ್ಕಿಯ ಕೂಲಿ ಇಲ್ಲ. ಏನಿದ್ದರೂ ರೂಪಾಯಿ ಲೆಕ್ಕದಲ್ಲಿ. ದಿನಕೂಲಿ ಸಹ ಹಿಂದಿನಂತೆ ಕಡಿಮೆಯಿಲ್ಲ. ವರ್ಷದಿಂದ, ವರ್ಷಕ್ಕೆ ಏರುತ್ತಲೇ ಇದೆ. ಹಿಂದಿನಂತೆ ಹಟ್ಟಿ ತುಂಬಾ ಕೋಣ, ಎತ್ತುಗಳನ್ನು ಸಾಕುವ ಸ್ಥಿತಿಯಲ್ಲಿ ಆತನಿಲ್ಲ. ಹಿಡುವಳಿ ಚಿಕ್ಕದಾಗುತ್ತಾ ಇದೆ. ಅವಶ್ಯಕತೆಗಳು, ವೆಚ್ಚಗಳು ಬೆಳೆಯುತ್ತಿವೆ. ಈ ಎಲ್ಲಾ ಅಂಶಗಳು ಕೃಷಿಯ ಮೇಲೆ ಪರಿಣಾಮ ಬೀರಿವೆ. ಪರಿಣಾಮ ಉಳುಮೆಗೆ ಎತ್ತುಗಳ ಬದಲಿಗೆ ಟಿಲ್ಲರ್, ಟ್ರ್ಯಾಕ್ಟರ್, ನಾಟಿ, ಕೊಯ್ಲಿಗೆ ಯಂತ್ರಗಳ ಮೊರೆ ಹೋಗುವುದು ಆತನ ಪಾಲಿಗೆ ಅನಿವಾರ್ಯವಾಗಿವೆ. ಇದರಿಂದಾಗಿ ಗದ್ದೆಗಳಿಂದ ನೊಗ, ನೇಗಿಲು ಮರೆಯಾಗುತ್ತಿವೆ. ಈ ಜಾಗವನ್ನು ಟಿಲ್ಲರ್ಗಳು ಆವರಿಸಿವೆ.
ಕೃಷಿ ಸಂಬಂಧಿತ ಕೆಲಸಗಳು ಬರೇ ಒಂದು ಕಾಯಕವಾಗಿರಲಿಲ್ಲ. ಅವುಗಳ ಹಿಂದೆ ಒಂದಷ್ಟು ಆಚಾರ ವಿಚಾರಗಳು, ಸಂಪ್ರದಾಯಗಳಿದ್ದವು. ಹಿಂದೆ ಗದ್ದೆಗಳಲ್ಲಿ ಬೇಸಾಯ ಕೆಲಸ ಪ್ರಾರಂಭವಾಯಿತೆಂದರೆ ಆ ಪ್ರದೇಶದ ತುಂಬಾ ಲವಲವಿಕೆ. ಉಳುಮೆ ಮಾಡುವ ಸಂದರ್ಭದಲ್ಲಿ ಉಳುವವ ತನ್ನ ಬೇಸರ ಕಳೆಯಲು ರಾಗಬದ್ದವಾಗಿ ಹಾಡುವ ಹಾಡು ಆ ಪ್ರದೇಶದಲ್ಲೆಲ್ಲಾ ಪ್ರತಿಧ್ವನಿಸುತ್ತಿತ್ತು . ಈ ಹಾಡಿಗೆ ರಾಗವು ಆತನದೇ. ಮನಸ್ಸಿಗೆ ಬಂದದ್ದೇ ಸಾಹಿತ್ಯ. ಎತ್ತು , ಕೋಣ, ನೇಗಿಲು ಮರೆಯಾಗುವಾಗ ಇನ್ನೆಲ್ಲಿಯ ಹಾಡು. ಅದೇ ರೀತಿ ನಾಟಿ ಮಾಡುವಾಗ ಹೆಂಗಸರು ಹಾಡುವ ಸಾಲು ಸಾಲು ಹಾಡು ಎಲ್ಲರ ಕಿವಿಯನ್ನು ಆ ಕಡೆಗೆ ಸೆಳೆಯುತಿತ್ತು. ಆದರಿಂದು ಅವುಗಳೆಲ್ಲಾ ನೇಪಥ್ಯಕ್ಕೆ ಸರಿಯುತ್ತಿವೆ.

ರಸಗೊಬ್ಬರ ಬೆಲೆ ನೆಗೆತ .. ರೈತರ ಮೇಲೆ ಬಿದ್ದಿದೆ ಭಾರೀ ಹೊಡೆತ


ರಸಗೊಬ್ಬರಗಳ ಬೆಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು ಮೂರುಪಟ್ಟು ಏರಿಕೆಯಾಗಿದ್ದು ಈಗಾಗಲೇ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ರೈತರ ಪಾಲಿಗೆ ಬಹುದೊಡ್ಡ ಹೊಡೆತ ಬಿದ್ದಿದೆ.
ಎಂಓಪಿ (ಮ್ಯೂರಿಯೆಟ್ ಪೊಟಾಷ್) ಡಿಎಪಿ, 20:20 :0:13, 10 :26:26: 20 :20: 0 ಮುಂತಾದ ಬಹುಬೇಡಿಕೆಯ ರಸಗೊಬ್ಬಗಳ  ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು ರೈತಾಪಿ ವರ್ಗವನ್ನು ಕಂಗೆಡಿಸಿದೆ. ಎಂಓಪಿ ರಸಗೊಬ್ಬರದಲ್ಲಿ ಆರ್ಸಿಎ್ ಗೆ ( 50 ಕಿಲೋ) 750.75 ರೂ.ಮಾರಾಟ ಬೆಲೆ ( ಜೂ.14ರವರಿಗಿನ ಮಾಹಿತಿಯಂತೆ ) ನಿಗದಿಯಾಗಿದ್ದು ಮೇ 1ರಿಂದ ಜಾರಿಗೆ ಬಂದಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಇದರ ಬೆಲೆ 268.12 ರೂ. ಆಗಿದ್ದು ಸುಮಾರು 482 ರೂ.ವರೆಗೆ ಏರಿಕೆಯಾಗಿದೆ. ಐಪಿಎಲ್ - 882 ರೂ. (2011 ಮೇ-315 ರೂ. ). ಜುವಾರಿ -834.75 ರೂ. (2011 ಮೇ-315ರೂ.).
ಕೆಲವು ರಸಗೊಬ್ಬರಗಳ ಪ್ರಸ್ತುತ ದರ
ಕೆಲವು ರಸಗೊಬ್ಬರಗಳ ಪ್ರಸ್ತುತ ದರ ( ಜೂ.14 ರವರೆಗೆ )ಈ ಈ ರೀತಿ ಇದೆ ( ಕಳೆದ ವರ್ಷ ಇದ್ದ ದರವನ್ನು ಆವರಣದಲ್ಲಿ ನೀಡಲಾಗಿದೆ )ಡಿಎಪಿ- ಸಿಎ್ಎಲ್-955.50 ರೂ. (2011 ಜೂನ್ 630 ರೂ.). ಇಪ್ಕೊ- 1260 ರೂ. ( 2011 ಮೇ 630 ರೂ.). ಐಪಿಎಲ್-1061 ರೂ. ( 2011 ಮೇ 630 ರೂ.).ಎಂಸಿಎ್-1260.85 ( 2011 ಜು. 662.25 ರೂ.). ಜುವಾರಿ-964.80 (2011 ಆ.-725 ರೂ.).
20:20 :0:13: ಸಿಎ್ಎಲ್-866.25 ರೂ. ( 2011 ಜು. 560 ರೂ.). ಪ್ಯಾಕ್ಟ್ -564.57 ( 2011 ಜು. 530 ರೂ.). ಎಂಸಿಎ್-980.04 ರೂ. ( 2011 ಮೇ- 524.42 ರೂ.). ಐಪಿಎಲ್-829.50 ರೂ. ಎಂಎ್ಎಲ್- 777.12 ರೂ.
10: 26:26 :ಇಪ್ಕೊ-1165.50 ರೂ. (2011 ಮೇ-567 ರೂ.). ಸಿಎ್ಎಲ್-976.50 ರೂ. ( 2011 ಜು. 635 ರೂ.).ಜುವಾರಿ-869.85 ರೂ. ( 567.03 ರೂ.).ಎಂಸಿಎ್ (ಆಮದು)- 847.34 ರೂ.. ದೇಶಿಯ-1149.77 ರೂ.
20:20:0 :00 -ಆರ್ಸಿಎ್-777.05 ರೂ. (2011 ಜು. 454.63ರೂ.).ಸಿಎ್ಎಲ್. -735 ರೂ. ( 2011ಜು.545 ರೂ.).ಎಂಸಿಎ್-734.25 ರೂ. ( 2011 ಜು. 512.69 ರೂ.). ಯೂರಿಯಾ ( ನಿಯಂತ್ರಿತ)- 278.78 ರೂ.ನಿಂದ 281.67 ರೂ.
ರಸಗೊಬ್ಬರಗಳ ದರ ಏರಿಕೆಗೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಪೊಟಾಷ್, ಡಿಎಪಿ ಹೆಚ್ಚಿನ ಪ್ರಮಾಣದಲ್ಲಿ ಆಮದು ಮೂಲಕ ಸರಬರಾಜು ಆಗುತ್ತದೆ. ಕಾಂಪ್ಲೆಕ್ಸ್ ಗೊಬ್ಬರಗಳ ತಯಾರಿಗೂ ಪೊಟಾಷ್ ಬಳಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆಯಲ್ಲಾಗುವ ವ್ಯತ್ಯಾಸಗಳು ರಸಗೊಬ್ಬರದ ಮೇಲೆ ಪರಿಣಾಮ ಬೀರುತ್ತವೆ. ಸರಕಾರದ ಪ್ರಸ್ತುತ ನೀತಿಯ ಪ್ರಕಾರ ರಸಗೊಬ್ಬರದ ದರವನ್ನು ಆಯಾಯ ಕಂಪೆನಿಗಳೇ ನಿಗದಿ ಪಡಿಸುತ್ತವೆ. ಸರಕಾರ ನೀಡುವ ಸಹಾಯಧನ ಸ್ಥಿರವಾಗಿರುತ್ತದೆ. ದರ ಏರಿಕೆಯಾದರೂ ಸಬ್ಸಿಡಿ ಏರಿಕೆಯಾಗುವುದಿಲ್ಲ. ಈ ಎಲ್ಲಾ ಅಂಶಗಳು ಬೆಲೆ ಏರಿಕೆಯಲ್ಲಿ ಪರಿಣಾಮ ಬೀರುತ್ತವೆ.

ಅಣಬೆ ಬಂದಿದೆ, ಒಂದಿನಿತು ನೋಡಾ


ಮಲೆನಾಡು ಪ್ರದೇಶದಲ್ಲಿ ಈಗ ಅಣಬೆಯ ಸುಗ್ಗಿ. ಮುಂಗಾರಿನ ಮಳೆಯ ಸಮಯದಲ್ಲಿ ಅಣಬೆಗಳು ನೆಲದಿಂದ ಮೇಲಕ್ಕೆ ಬರುತ್ತವೆ. ಇದು ಕೆಲವರಿಗೆ ಆಹಾರ ಕೂಡ. ಕೆಲವರಿಗೆ ಉದ್ಯೋಗ ನೀಡುತ್ತದೆ ಕೂಡ. ಮಾರುಕಟ್ಟೆಯಲ್ಲೀಗ ಪ್ರತಿ ಕೆ.ಜಿ.ಗೆ 100 ರೂ. ಗಳಿಗೂ ಹೆಚ್ಚು ದರವಿದೆ. ಕೆಲ ಅಣಬೆಗಳು ತಮ್ಮ ಸೌಂದರ್ಯವನ್ನು ಹೊರ ಜಗತ್ತಿಗೆ ತೋರಿಸಿ ಕೆಲ ಸಮಯದಲ್ಲಿ ಮರೆಯಾಗುತ್ತವೆ.
ಎಲ್ಲ ಅಣಬೆಗಳೂ ಆಹಾರಕ್ಕೆ ಬಳಕೆಯಾಗುವುದಿಲ್ಲ. ಕೆಲವು ಅತ್ಯಂತ ವಿಷಕಾರಿ. ಪಾರಂಪರಿಕ ಪರಿಣಿತರು ಮಾತ್ರ ಇದನ್ನು ಗುರುತಿಸುತ್ತಾರೆ. ಇವು ಪರಾವಲಂಬಿಗಳು. ಗೆದ್ದಲುಗಳು ಅಣಬೆಯನ್ನು ಸಾಕುತ್ತವೆ. ತಮ್ಮ ಮರಿಗಳಿಗೆ ಪ್ರೋಟಿನ್ ರೂಪದಲ್ಲಿ ಅಣಬೆಯನ್ನು ಆಹಾರವನ್ನಾಗಿ ನೀಡುತ್ತವೆ. ಕೀಟಗಳು ಇವುಗಳನ್ನು ಅವಲಂಬಿಸಿ ತಮ್ಮ ಸಂತಾನವನ್ನು ವೃದ್ಧಿಸಿಕೊಳ್ಳುತ್ತವೆ.
ಹೈಗಾ ಕಾಡುಗಳಲ್ಲಿ ವಿಶೇಷ ಜಾತಿಯ ಅಣಬೆಗಳಿವೆ. ಬಯಲು ಸೀಮೆಯಲ್ಲಿ ಕೂಡ ಎರಡು ಜಾತಿಯ ಅಣಬೆಗಳು ಗೋಚರಿಸುತ್ತವೆ. ದಟ್ಟ ಅಡವಿಯಲ್ಲಿ ಅಣಬೆಗಳನ್ನು ತೆಗೆದರೆ ಕಾಡಿನ ಪುನರ್ ಬಳಕೆಯಾಗುವುದಿಲ್ಲ ಎಂಬ ಮಾತಿದೆ. ಈ ದೇಶಕ್ಕೆ ಅಕೇಷಿಯಾ ಆಗಮಿಸಿದಾಗ ಅದರ ಜೊತೆ ಕೆಲ ಅಣಬೆಗಳು ಕೂಡಾ ಬಂದವು ಎಂಬ ಮಾತಿದೆ. ಈ ಭಾಗದಲ್ಲಿ ಸುಮಾರು 550 ಕ್ಕೂ ಹೆಚ್ಚು ಜಾತಿಯ ಅಣಬೆಗಳಿವೆ.
ಮಾರುಕಟ್ಟೆಯಲ್ಲಿ ಅಣಬೆಗೆ ಭಾರಿ ಬೇಡಿಕೆಯಿದೆ. ಆದರೆ ಮಾರುಕಟ್ಟೆಗೆ ಪೂರೈಸುವಷ್ಟು ಅಣಬೆ ಬರುತ್ತಿಲ್ಲ ಎಂಬ ಅನಿಸಿಕೆ ಗ್ರಾಹಕರದ್ದು. ಕಾಡಿನ ಅಣಬೆ ಹೆಚ್ಚು ರುಚಿಕರ ಎಂಬ ಕಾರಣಕ್ಕೆ ಬೇಡಿಕೆಯೂ ಹೆಚ್ಚು. ಕಾಡು ನಾಶವಾಗಿದ್ದರೂ ಅಣಬೆಗಳು ಅಳಿದುಳಿದ ಕಾಡಿನಲ್ಲಿ ಅಲ್ಲಲ್ಲಿ  ಈ ಸಮಯದಲ್ಲಿ ಕಂಡು ಬರುತ್ತವೆ. ಕೆಲವರಿಗೆ ಅಣಬೆ ಆದಾಯಕ್ಕೆ ಕಾರಣವಾದರೆ, ಇನ್ನೂ ಕೆಲವರಿಗೆ ಖುಷಿಯನ್ನು ನೀಡಿ ಮರೆಯಾಗುತ್ತವೆ.

ಮೇಟಿ ವಿದ್ಯೆಗಿಂತ ಕೋಟಿ ತರುವ ವಿದ್ಯೆಯೇ ಮೇಲು ಎನ್ನುತ್ತಿದ್ದಾರೆ ಇಂದಿನ ಯುವಕರು


ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಗಾದೆ ಹಿಂದೆ ಜನಜನಿತವಾಗಿತ್ತು. ಈಗದು ಉಲ್ಟಾ ಹೊಡೆದಿದೆ. ಮೇಟಿ ವಿದ್ಯೆಗಿಂತ ಕೋಟಿ ತರುವ ವಿದ್ಯೆಯೇ ಮೇಲು ಎನ್ನುತ್ತಾ ಇಂದಿನ ಯುವ ಪೀಳಿಗೆ ಕೃಷಿ ತೊರೆದು ಐಟಿ.ಬಿ.ಟಿ. ಯತ್ತ ಮುಖ ಮಾಡುತ್ತಿದೆ. ಪರಿಣಾಮ ಕೃಷಿ ಕೆಲಸಗಳಿಂದ ವಿಮುಖರಾಗುತ್ತಿದ್ದಾರೆ ಯುವಕರು. ವರ್ಷವಿಡೀ ಕೈ ಕೆಸರು ಮಾಡಿಕೊಂಡು ಬರುವ ಉತ್ಪತ್ತಿಯನ್ನು ಅವರು ಒಂದು ತಿಂಗಳಲ್ಲಿ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ.
ಇಂದು ಕೃಷಿಕನಾದರೂ ಅಷ್ಟೇ, ಕೂಲಿ ಕಾರ್ಮಿಕನಾದರೂ ಅಷ್ಟೇ. ತಾನು ಕಷ್ಟಪಟ್ಟದ್ದು ಸಾಕು. ತನ್ನ ಮಗ ಆರಾಮದಲ್ಲಿ ಜೀವನ ನಡೆಸಲಿ ಎಂದು ದುಡ್ಡನ್ನು ಹೇಗಾದರೂ ಹೊಂದಿಸಿಕೊಂಡು ಮಕ್ಕಳಿಗೆ ನಾಲ್ಕಕ್ಷರ ಕಲಿಸುತ್ತಾನೆ. ಬ್ಯಾಂಕುಗಳು ಶಿಕ್ಷಣಕ್ಕಾಗಿ ಸಾಲ ನೀಡುತ್ತವೆ. ಇದರಿಂದಾಗಿ ಉನ್ನತ ವ್ಯಾಸಂಗಕ್ಕಾಗಿ ಪಟ್ಟಣ ಸೇರಿದ ಯುವಕರು ಅಲ್ಲಿಯೇ ಉದ್ಯೋಗ ಹುಡುಕಿ ಅಲ್ಲಿಯೇ ನೆಲೆ ನಿಂತು ಹಳ್ಳಿಯನ್ನು ಮರೆತು ಬಿಡುತ್ತಿದ್ದಾರೆ. ಹಳ್ಳಿಯ ದೊಡ್ಡ ದೊಡ್ಡ ಮನೆಗಳಲ್ಲಿ ಅಜ್ಜ, ಅಜ್ಜಿಯರು ಮಾತ್ರ ಇದ್ದು, ಮನೆ ತೋಟ ನೋಡಿಕೊಳ್ಳುವವರಿಲ್ಲದೆ ಪಾಳು ಬೀಳುತ್ತಿದೆ. ಯುವಕರು ಉದ್ಯೋಗಸ್ಥ ಯುವತಿಯರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡು ಸ್ವಂತ ನೆಲೆ ಮಾಡಿಕೊಂಡು ಮುಂದೆ ಮಕ್ಕಳ ವಿದ್ಯಾಭ್ಯಾಸವನ್ನೂ ಅಲ್ಲಿಯೇ ಮುಂದುವರಿಸುತ್ತಿದ್ದಾರೆ. ಹೀಗಾಗಿ ಊರಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆ. ಶಾಲೆಗಳು ಒಂದೊಂದೆ ಬಾಗಿಲು ಮುಚ್ಚುತ್ತಿವೆ.
ಕಾಲಕಾಲಕ್ಕೆ ಬೀಳದ ಮಳೆ, ಕೂಲಿಕಾರರ ಸಮಸ್ಯೆ. ಇತರ ಹಲವು ಸಮಸ್ಯೆಗಳ ನಡುವೆ ಬೇಸಾಯವನ್ನೇ ನಂಬಿಕೊಂಡ ಕೃಷಿಕರು ಇತರ ಉದ್ಯಮ, ಉದ್ಯೋಗದತ್ತ ವಾಲುತ್ತಿದ್ದಾರೆ. ಗದ್ದೆ ಇದ್ದವರು ವರ್ಷದಿಂದ ವರ್ಷಕ್ಕೆ ನಾಟಿ ಮಾಡುವುದನ್ನೇ ಕಡಿಮೆ ಮಾಡುತ್ತಿದ್ದಾರೆ.  ಒಂದೆರಡು ಗದ್ದೆಯನ್ನು ಮಾತ್ರ ಬೇಸಾಯ ಮಾಡುತ್ತಿದ್ದು, ಉಳಿದ ಗದ್ದೆಗಳು ಹುಲ್ಲು ಬೆಳೆದುಕೊಂಡು ಪಾಳು ಬೀಳುತ್ತಿವೆ. ಕೆಲವೆಡೆ ಗದ್ದೆಗಳಲ್ಲಿ ವಾಣಿಜ್ಯ ಬೆಳೆಗಳು ಆವರಿಸಿಕೊಂಡಿವೆ. ಅಡಿಕೆ, ರಬ್ಬರ್, ಕೊಕ್ಕೊ, ಬಾಳೆ, ಕಾಳು ಮೆಣಸುಗಳು ಗದ್ದೆಗೂ ಬಂದು ಬಿಟ್ಟಿವೆ. ರಸ್ತೆಗೆ ಹೊಂದಿಕೊಂಡ ಗದ್ದೆಗಳು ಕಾಂಪ್ಲೆಕ್ಸ್, ಮನೆ ನಿವೇಶನಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಭತ್ತದ ಸಂಸ್ಕೃತಿಯೇ ಬತ್ತಿ ಹೋಗುತ್ತಿದೆ. ಇದರೊಂದಿಗೆ ಕೃಷಿ ಸಂಬಂಧಿ ಜನಪದ ಹಬ್ಬ, ಹರಿದಿನಗಳ ಸಂಭ್ರಮಗಳು ಕಳಾಹೀನವಾಗುತ್ತಿದೆ.
ಅಡಿಕೆಗೆ ಕೊಳೆ ರೋಗ, ಹಳದಿ ರೋಗ ಬೆಲೆಯ ಏರಿಳಿತದಿಂದ ಕೃಷಿಕರು ಕುಗ್ಗಿ ಹೋಗಿದ್ದಾರೆ. ಕೆಲವರು ಜಮೀನು ಮಾರಾಟ ಮಾಡಿ ನಗರ ಸೇರಿಕೊಂಡಿದ್ದಾರೆ. ವಾಣಿಜ್ಯ ಬೆಳೆಗಳ ಉತ್ತಮ ಧಾರಣೆ ಕೂಡಾ ಭತ್ತದ ಕೃಷಿಗೆ ಹಿನ್ನಡೆ ಆಗಲು ಕಾರಣವಾಗಿದೆ. ಇತ್ತ ಭತ್ತಕ್ಕೆ ಉತ್ತಮ ಧಾರಣೆಯೂ ಇಲ್ಲ. ಸರಕಾರದ ಪ್ರೋತ್ಸಾಹವೂ ಸಾಕಷ್ಟು ದೊರೆಯುವುದಿಲ್ಲ. ಪಟ್ಟಣ ಸೇರಿದ ಯುವಕರಿಗೆ ಊರಿಗೆ ಬಂದು ಬೇಸಾಯ ಮಾಡಿಸಲು ಪುರುಸೊತ್ತು ಇಲ್ಲ.
ಹಿಂದೆ ಎಷ್ಟು ಮುಡಿ ಗದ್ದೆ ಎಂಬುದರ ಮೇಲೆ ಅವರ ಅಂತಸ್ತನ್ನು ಅಳೆಯಲಾಗುತ್ತಿತ್ತು. ಹಟ್ಟಿಯಲ್ಲಿರುವ ಜಾನುವಾರುಗಳ ಸಮೃದ್ಧಿಯಿಂದ ಆತನ ಜೀವನಮಟ್ಟ ಲೆಕ್ಕ ಹಾಕಲಾಗುತ್ತಿತ್ತು. ಹುಡುಗಿ ಕೊಡುವವರು ಹಟ್ಟಿ ನೋಡಿ ಬಂದು ತಮ್ಮ ಮಗಳಿಗೆ ಒಳ್ಳೆ ಬಾಳು ನೀಡಿಯಾನು ಎಂದು ಲೆಕ್ಕಾಚಾರ ಹಾಕಿ ಮದುವೆಗೆ ಒಪ್ಪಿಗೆ ನೀಡುತ್ತಿದ್ದರು. ವಿಪರ್ಯಾಸವೆಂದರೆ, ಇಂದು ಕೃಷಿಕ ಯುವಕನಿಗೆ ಹುಡುಗಿ ಕೊಡುವವರೇ ಇಲ್ಲ.

ಕಲಿಯುವ ಮಕ್ಕಳ ಕೈಗೆ ಮೊಬೈಲ್ ಬೇಕೆ?


ತಾಂತ್ರಿಕ ಮುನ್ನಡೆಯ ಯುಗದ ಅನುಪಮ ಆವಿಷ್ಕಾರ ಈ ಮೊಬೈಲ್. ಹಳ್ಳಿ ಪಟ್ಟಣಗಳ ಎಲ್ಲೆ ಮೀರಿ ಎಲ್ಲೆಂದರಲ್ಲಿ ಇದರ ಬಳಕೆಯಾಗುತ್ತಿದೆ. ಆದರೆ ಕಲಿಯುವ ಮಕ್ಕಳ ಕೈಗೆ ಮೊಬೈಲ್ ಬೇಕೆ ಎಂಬುವುದನ್ನು ಪಾಲಕ-ಪೋಷಕರು ಯೋಚಿಸಬೇಕಿದೆ.
ಹಿಂದೆ ಶ್ರೀಮಂತರ ಕೈಗೆ ಮಾತ್ರ ಮೀಸಲಾಗಿದ್ದ ಮೊಬೈಲ್ ಇಂದು ಎಲ್ಲರ ಕೈಯಲ್ಲೂ ಕಾಣ ಸಿಗುತ್ತಿದೆ. ಚಿಕ್ಕಮಕ್ಕಳಿಂದ ಹಿಡಿದು ಅಜ್ಜಂದಿರವರೆಗೆ ಅವಶ್ಯಕ ಸಾಧನವಾಗಿ ಪರಿಣಮಿಸಿದೆ. ಜಾಗತೀಕರಣ ಹಾಗೂ ಖಾಸಗೀಕರಣದ ಪರಿಣಾಮದಿಂದಾಗಿ ಕಡಿಮೆ ದರದಲ್ಲಿ ಮೊಬೈಲ್ ಸಂಪರ್ಕವೂ ದೊರೆಯುತ್ತದೆ.
ಆಟವಾಡುವ ಮುಗ್ಧ ಮನಸ್ಸಿನ ಪುಟ್ಟ ಮಗುವಿಗೆ ಹೊಸ ಆಟಿಕೆಗಳನ್ನು ತಂದುಕೊಟ್ಟಾಗ ಆಗುವ ಸಂತೋಷ ವರ್ಣಿಸಲು ಅಸಾಧ್ಯ. ತನ್ನ ಕೈಗೆ ಆಟಿಕೆ ಬಂದಾಗ ಅದನ್ನೆ ತನ್ನ ಸರ್ವಸ್ವ ಎಂದು ತಿಳಿಯುತ್ತದೆ. ತಾನಾಡುವ ಮಾತು, ಕೃತಿ ಎಲ್ಲವೂ ತನ್ನ ಆಟದ ಸಾಮಾನಿನ ಬಗ್ಗೆಯೇ ಇರುತ್ತದೆ. ಇದೇ ಅದರ ಪ್ರಪಂಚ. ತಾಯಿ ಕೈತುತ್ತು ತಿನ್ನಿಸಿದರೂ ತಿಳಿಯದಷ್ಟು ತನ್ಮಯತೆ. ಕೆಲವೊಮ್ಮೆ ನಿದ್ದೆಯಿಂದ ಎಚ್ಚೆತ್ತು ಹುಡುಕುವುದಿದೆ. ಒಟ್ಟಿನಲ್ಲಿ ಮಗುವಿನ ಭ್ರಮಾಲೋಕದ ಆಟ ಈ ಆಟಿಕೆಯೇ. ಪ್ರಸ್ತುತ ಕಲಿಯುವ ಮಕ್ಕಳ ಕೈಯಲ್ಲಿ ಕಾಟಕೊಡುವ ರೂಪದಲ್ಲಿ ಮೊಬೈಲ್ ಇರುವುದರಿಂದ ಇಬ್ಬರ ಮನಸ್ಥಿತಿಯೂ ಒಂದೇ ರೀತಿಯದ್ದಾಗಿದೆ.
ವಿದ್ಯೆ ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕಾದ ಈ ಹಂತದಲ್ಲಿ ಮೊಬೈಲ್ ಎನ್ನುವ ಭೂತದಿಂದಾಗಿ ಮಕ್ಕಳು ಅಡ್ಡದಾರಿ ಹಿಡಿಯುವ ಸಾಧ್ಯತೆಯಿದೆ. ಮೊಬೈಲ್ ಅನುಕೂಲಕರ ಸಂಪರ್ಕ ಸಾಧನ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ವಿದ್ಯಾರ್ಥಿಗಳ ಪಾಲಿಗೆ ಇದು ಒಂಥರ ದುರುಪಯೋಗದ ವಸ್ತುವೇ ಆಗಿದೆ. ಮಕ್ಕಳು ಮೊಬೈಲ್ನ್ನು ಅತ್ಯಾವಶ್ಯಕ ವಸ್ತುವನ್ನಾಗಿ ಮಾಡಿಕೊಂಡಿರುವುದರಿಂದ ತರಗತಿಯಲ್ಲಿ ಪಾಠದಲ್ಲಿ ತಲ್ಲೀನರಾಗುವ ಬದಲು ಮೊಬೈಲ್ನಲ್ಲಿ ಲೀನವಾಗಿ ಬಿಡುತ್ತಿದ್ದಾರೆ.
ಮನೆಮನೆಗಳಲ್ಲಿ ಓದುವ, ಬರೆಯುವ ನೆಪವೊಡ್ಡಿ ಬಾಗಿಲ ಚೀಲಕ ಹಾಕಿಕೊಂಡು ಗಂಟೆಗಟ್ಟಲೆ ಹರಟೆ ಹೊಡೆಯುವ ಮನಸ್ಸುಗಳೆಷ್ಟೆನ್ನುವುದು ಎಲ್ಲರಿಗೆ ತಿಳಿದ ವಿಷಯ. ಎಲ್ಲಿ ನೋಡಿದರು ಶಾಲಾ-ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್. ಇದೀಗ ಮೊಬೈಲ್ ಉಪಯೋಗವೊಂದು ್ಯಾಶನ್ ಆಗಿಬಿಟ್ಟಿದೆ. ತಮ್ಮ ಮಕ್ಕಳ ಅಗತ್ಯವನ್ನು ಪೂರೈಸುವುದು ಹೆತ್ತವರ ಆದ್ಯತೆ ಇರಬಹುದು. ಆದರೆ ಅದನ್ನು ಕೊಡಿಸುವ ಮೊದಲು ಮಕ್ಕಳಿಗೆ ಮೊಬೈಲ್ನ ಅವಶ್ಯಕತೆ ಇದೆಯೇ ಎನ್ನುವುದನ್ನು ಯೋಚಿಸಬೇಕು.
ಮೊಬೈಲ್ ಬಳಕೆಯಿಂದಾಗಿ ಜ್ಞಾಪಕ ಶಕ್ತಿ ನಷ್ಟ, ಏಕಾಗ್ರತೆ ಕುಸಿತ, ಅಜೀರ್ಣ, ನಿದ್ರಾಹೀನತೆ ಸೇರಿದಂತೆ ಹಲವು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳಾಗುತ್ತವೆ ಎಂದು ಮೊಬೈಲ್ ೆನ್ಗಳ ಅಪಾಯವನ್ನು ಅಧ್ಯಯನ ಮಾಡಲು ರಚಿಸಿದ ಸಮಿತಿಯೊಂದು ತಿಳಿಸಿದೆ. ಸತತವಾಗಿ ಮೊಬೈಲ್ ೆನ್ಗಳನ್ನು ಬಳಸುವವರು ತಲೆಯ ಚರ್ಮದ ಉರಿ, ಬಳಲಿಕೆ, ಏಕಾಗ್ರತೆಯ ಕೊರತೆ, ಕಿವಿಯಲ್ಲಿ ರಿಂಗಣ, ಜ್ಞಾಪಕ ಶಕ್ತಿ ನಷ್ಟ, ತಲೆನೋವು, ತಲೆ ಸುತ್ತು, ಹೃದಯದ ಬಡಿತದಲ್ಲಿ ಏರುಪೇರು ಮೊದಲಾದ ಅಪಾಯಗಳಿಗೆ ತುತ್ತಾಗುತ್ತಾರೆ. ಮಕ್ಕಳು, ಗರ್ಭಿಣಿಯರು, ರೋಗಿಗಳು, ವೈದ್ಯಕೀಯ ಉಪಕರಣಗಳನ್ನು ಅಳವಡಿಸಿಕೊಂಡಿರುವವರು ಮೊಬೈಲ್ ೆನುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು ಎನ್ನುತ್ತಾರೆ ವೈದ್ಯರು.
ಚಿಟ್ಟೆ, ಜೇನ್ನೊಣ, ಕೀಟ ಮತ್ತು ಗುಬ್ಬಚ್ಚಿಗಳು ನಾಪತ್ತೆಯಾಗಲು ಕೂಡ ಮೊಬೈಲ್ ೆನ್ನ ವಿಕಿರಣವೇ ಕಾರಣ ಎಂಬ ವರದಿಯಿದೆ. ಜನದಟ್ಟಣೆಯ ವಸತಿ ಪ್ರದೇಶಗಳು, ಶಾಲೆಗಳು, ಮೈದಾನ ಮತ್ತು ಆಸ್ಪತ್ರೆಗಳ ಬಳಿ ಮೊಬೈಲ್ ಟವರ್ಗಳನ್ನು ಸ್ಥಾಪಿಸಬಾರದೆಂಬ ಸಲಹೆಯೂ ಇದೆ. ಭಾರತಕ್ಕೆ ಸ್ಥಳೀಯವಾಗಿ ಪ್ರತಿ ಕಿ. ಗ್ರಾಂಗೆ 2 ವ್ಯಾಟ್ ಎಸ್ಎಆರ್ ನಿರ್ಧರಿಸಲಾಗಿದೆ. ಎಸ್ಎಆರ್ ಮೌಲ್ಯ ಅಧಿಕವಾದಂತೆ ಅದರಿಂದುಟಾಗುವ ಅಪಾಯವೂ ಹೆಚ್ಚಾಗುತ್ತದೆ. ಎಸ್ಎಆರ್ ಮಟ್ಟವನ್ನು 1.6 ವ್ಯಾಟ್ಗಿಳಿಸಬೇಕು ಎಂಬ ಶಿಫರಸ್ಸು ಕೂಡ ಇದೆ.
ಮೊಬೈಲ್ ಬಳಸುವ ವ್ಯಕ್ತಿಯ ತಲೆ ಹೆಚ್ಚು ಬಿಸಿಯಾಗುತ್ತದೆ. ಅಂದರೆ ತಲೆಯ ಮೇಲ್ಪದರಕ್ಕೆ ಹೆಚ್ಚಿನ ಉಷ್ಣತೆ ರವಾನೆಯಾಗುತ್ತದೆ. ಇದರಿಂದ ದೇಹದ ಉಷ್ಣತೆಯಲ್ಲಿ ಕೆಲವು ದಶಮಾಂಶ ಡಿಗ್ರಿಯಷ್ಟು ಹೆಚ್ಚಳವಾಗಿ ಈ ಉಷ್ಣತೆಯನ್ನು ಹೊರ ಹಾಕಲು ರಕ್ತದ ಪರಿಚಲನೆ ತೀವ್ರವಾಗುತ್ತದೆ ಎಂದು ಎಚ್ಚರಿಸಿದ್ದಾರೆ ವೈದ್ಯರು. ಮೊಬೈಲ್ ೆನುಗಳು ಬಿಡುಗಡೆ ಮಾಡುವ ಎಲೆಕ್ಟ್ರೊಮ್ಯಾಟಿಕ್ ತರಂಗಗಳು ದೇಹದ ಜೀವಕಣಗಳ ಮೇಲೆ ಬೀರುವ ಪರಿಣಾಮ ಹೆಚ್ಚು ಹಾನಿಕಾರಕ. ಹಾಗಾಗಿ, ರೋಗನಿರೋಧಕ ಸಾಮರ್ಥ್ಯವನ್ನು ಕಡಿಮೆ ಹೊಂದಿರುವ ಕಲಿಯುವ ಮಕ್ಕಳ ಕೈಗೆ ಮೊಬೈಲ್ ನೀಡಿದರೆ ಮಾರಕ ರೋಗಗಳಿಗೆ ಆಹ್ವಾನವಿದ್ದಂತೆ ಎಚ್ಚರ.