ಮೇಟಿ ವಿದ್ಯೆಗಿಂತ ಕೋಟಿ ತರುವ ವಿದ್ಯೆಯೇ ಮೇಲು ಎನ್ನುತ್ತಿದ್ದಾರೆ ಇಂದಿನ ಯುವಕರು


ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ಗಾದೆ ಹಿಂದೆ ಜನಜನಿತವಾಗಿತ್ತು. ಈಗದು ಉಲ್ಟಾ ಹೊಡೆದಿದೆ. ಮೇಟಿ ವಿದ್ಯೆಗಿಂತ ಕೋಟಿ ತರುವ ವಿದ್ಯೆಯೇ ಮೇಲು ಎನ್ನುತ್ತಾ ಇಂದಿನ ಯುವ ಪೀಳಿಗೆ ಕೃಷಿ ತೊರೆದು ಐಟಿ.ಬಿ.ಟಿ. ಯತ್ತ ಮುಖ ಮಾಡುತ್ತಿದೆ. ಪರಿಣಾಮ ಕೃಷಿ ಕೆಲಸಗಳಿಂದ ವಿಮುಖರಾಗುತ್ತಿದ್ದಾರೆ ಯುವಕರು. ವರ್ಷವಿಡೀ ಕೈ ಕೆಸರು ಮಾಡಿಕೊಂಡು ಬರುವ ಉತ್ಪತ್ತಿಯನ್ನು ಅವರು ಒಂದು ತಿಂಗಳಲ್ಲಿ ಮಾಡಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ.
ಇಂದು ಕೃಷಿಕನಾದರೂ ಅಷ್ಟೇ, ಕೂಲಿ ಕಾರ್ಮಿಕನಾದರೂ ಅಷ್ಟೇ. ತಾನು ಕಷ್ಟಪಟ್ಟದ್ದು ಸಾಕು. ತನ್ನ ಮಗ ಆರಾಮದಲ್ಲಿ ಜೀವನ ನಡೆಸಲಿ ಎಂದು ದುಡ್ಡನ್ನು ಹೇಗಾದರೂ ಹೊಂದಿಸಿಕೊಂಡು ಮಕ್ಕಳಿಗೆ ನಾಲ್ಕಕ್ಷರ ಕಲಿಸುತ್ತಾನೆ. ಬ್ಯಾಂಕುಗಳು ಶಿಕ್ಷಣಕ್ಕಾಗಿ ಸಾಲ ನೀಡುತ್ತವೆ. ಇದರಿಂದಾಗಿ ಉನ್ನತ ವ್ಯಾಸಂಗಕ್ಕಾಗಿ ಪಟ್ಟಣ ಸೇರಿದ ಯುವಕರು ಅಲ್ಲಿಯೇ ಉದ್ಯೋಗ ಹುಡುಕಿ ಅಲ್ಲಿಯೇ ನೆಲೆ ನಿಂತು ಹಳ್ಳಿಯನ್ನು ಮರೆತು ಬಿಡುತ್ತಿದ್ದಾರೆ. ಹಳ್ಳಿಯ ದೊಡ್ಡ ದೊಡ್ಡ ಮನೆಗಳಲ್ಲಿ ಅಜ್ಜ, ಅಜ್ಜಿಯರು ಮಾತ್ರ ಇದ್ದು, ಮನೆ ತೋಟ ನೋಡಿಕೊಳ್ಳುವವರಿಲ್ಲದೆ ಪಾಳು ಬೀಳುತ್ತಿದೆ. ಯುವಕರು ಉದ್ಯೋಗಸ್ಥ ಯುವತಿಯರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡು ಸ್ವಂತ ನೆಲೆ ಮಾಡಿಕೊಂಡು ಮುಂದೆ ಮಕ್ಕಳ ವಿದ್ಯಾಭ್ಯಾಸವನ್ನೂ ಅಲ್ಲಿಯೇ ಮುಂದುವರಿಸುತ್ತಿದ್ದಾರೆ. ಹೀಗಾಗಿ ಊರಲ್ಲಿ ಮಕ್ಕಳ ಸಂಖ್ಯೆಯೂ ಕಡಿಮೆ. ಶಾಲೆಗಳು ಒಂದೊಂದೆ ಬಾಗಿಲು ಮುಚ್ಚುತ್ತಿವೆ.
ಕಾಲಕಾಲಕ್ಕೆ ಬೀಳದ ಮಳೆ, ಕೂಲಿಕಾರರ ಸಮಸ್ಯೆ. ಇತರ ಹಲವು ಸಮಸ್ಯೆಗಳ ನಡುವೆ ಬೇಸಾಯವನ್ನೇ ನಂಬಿಕೊಂಡ ಕೃಷಿಕರು ಇತರ ಉದ್ಯಮ, ಉದ್ಯೋಗದತ್ತ ವಾಲುತ್ತಿದ್ದಾರೆ. ಗದ್ದೆ ಇದ್ದವರು ವರ್ಷದಿಂದ ವರ್ಷಕ್ಕೆ ನಾಟಿ ಮಾಡುವುದನ್ನೇ ಕಡಿಮೆ ಮಾಡುತ್ತಿದ್ದಾರೆ.  ಒಂದೆರಡು ಗದ್ದೆಯನ್ನು ಮಾತ್ರ ಬೇಸಾಯ ಮಾಡುತ್ತಿದ್ದು, ಉಳಿದ ಗದ್ದೆಗಳು ಹುಲ್ಲು ಬೆಳೆದುಕೊಂಡು ಪಾಳು ಬೀಳುತ್ತಿವೆ. ಕೆಲವೆಡೆ ಗದ್ದೆಗಳಲ್ಲಿ ವಾಣಿಜ್ಯ ಬೆಳೆಗಳು ಆವರಿಸಿಕೊಂಡಿವೆ. ಅಡಿಕೆ, ರಬ್ಬರ್, ಕೊಕ್ಕೊ, ಬಾಳೆ, ಕಾಳು ಮೆಣಸುಗಳು ಗದ್ದೆಗೂ ಬಂದು ಬಿಟ್ಟಿವೆ. ರಸ್ತೆಗೆ ಹೊಂದಿಕೊಂಡ ಗದ್ದೆಗಳು ಕಾಂಪ್ಲೆಕ್ಸ್, ಮನೆ ನಿವೇಶನಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಭತ್ತದ ಸಂಸ್ಕೃತಿಯೇ ಬತ್ತಿ ಹೋಗುತ್ತಿದೆ. ಇದರೊಂದಿಗೆ ಕೃಷಿ ಸಂಬಂಧಿ ಜನಪದ ಹಬ್ಬ, ಹರಿದಿನಗಳ ಸಂಭ್ರಮಗಳು ಕಳಾಹೀನವಾಗುತ್ತಿದೆ.
ಅಡಿಕೆಗೆ ಕೊಳೆ ರೋಗ, ಹಳದಿ ರೋಗ ಬೆಲೆಯ ಏರಿಳಿತದಿಂದ ಕೃಷಿಕರು ಕುಗ್ಗಿ ಹೋಗಿದ್ದಾರೆ. ಕೆಲವರು ಜಮೀನು ಮಾರಾಟ ಮಾಡಿ ನಗರ ಸೇರಿಕೊಂಡಿದ್ದಾರೆ. ವಾಣಿಜ್ಯ ಬೆಳೆಗಳ ಉತ್ತಮ ಧಾರಣೆ ಕೂಡಾ ಭತ್ತದ ಕೃಷಿಗೆ ಹಿನ್ನಡೆ ಆಗಲು ಕಾರಣವಾಗಿದೆ. ಇತ್ತ ಭತ್ತಕ್ಕೆ ಉತ್ತಮ ಧಾರಣೆಯೂ ಇಲ್ಲ. ಸರಕಾರದ ಪ್ರೋತ್ಸಾಹವೂ ಸಾಕಷ್ಟು ದೊರೆಯುವುದಿಲ್ಲ. ಪಟ್ಟಣ ಸೇರಿದ ಯುವಕರಿಗೆ ಊರಿಗೆ ಬಂದು ಬೇಸಾಯ ಮಾಡಿಸಲು ಪುರುಸೊತ್ತು ಇಲ್ಲ.
ಹಿಂದೆ ಎಷ್ಟು ಮುಡಿ ಗದ್ದೆ ಎಂಬುದರ ಮೇಲೆ ಅವರ ಅಂತಸ್ತನ್ನು ಅಳೆಯಲಾಗುತ್ತಿತ್ತು. ಹಟ್ಟಿಯಲ್ಲಿರುವ ಜಾನುವಾರುಗಳ ಸಮೃದ್ಧಿಯಿಂದ ಆತನ ಜೀವನಮಟ್ಟ ಲೆಕ್ಕ ಹಾಕಲಾಗುತ್ತಿತ್ತು. ಹುಡುಗಿ ಕೊಡುವವರು ಹಟ್ಟಿ ನೋಡಿ ಬಂದು ತಮ್ಮ ಮಗಳಿಗೆ ಒಳ್ಳೆ ಬಾಳು ನೀಡಿಯಾನು ಎಂದು ಲೆಕ್ಕಾಚಾರ ಹಾಕಿ ಮದುವೆಗೆ ಒಪ್ಪಿಗೆ ನೀಡುತ್ತಿದ್ದರು. ವಿಪರ್ಯಾಸವೆಂದರೆ, ಇಂದು ಕೃಷಿಕ ಯುವಕನಿಗೆ ಹುಡುಗಿ ಕೊಡುವವರೇ ಇಲ್ಲ.