ಅಣಬೆ ಬಂದಿದೆ, ಒಂದಿನಿತು ನೋಡಾ


ಮಲೆನಾಡು ಪ್ರದೇಶದಲ್ಲಿ ಈಗ ಅಣಬೆಯ ಸುಗ್ಗಿ. ಮುಂಗಾರಿನ ಮಳೆಯ ಸಮಯದಲ್ಲಿ ಅಣಬೆಗಳು ನೆಲದಿಂದ ಮೇಲಕ್ಕೆ ಬರುತ್ತವೆ. ಇದು ಕೆಲವರಿಗೆ ಆಹಾರ ಕೂಡ. ಕೆಲವರಿಗೆ ಉದ್ಯೋಗ ನೀಡುತ್ತದೆ ಕೂಡ. ಮಾರುಕಟ್ಟೆಯಲ್ಲೀಗ ಪ್ರತಿ ಕೆ.ಜಿ.ಗೆ 100 ರೂ. ಗಳಿಗೂ ಹೆಚ್ಚು ದರವಿದೆ. ಕೆಲ ಅಣಬೆಗಳು ತಮ್ಮ ಸೌಂದರ್ಯವನ್ನು ಹೊರ ಜಗತ್ತಿಗೆ ತೋರಿಸಿ ಕೆಲ ಸಮಯದಲ್ಲಿ ಮರೆಯಾಗುತ್ತವೆ.
ಎಲ್ಲ ಅಣಬೆಗಳೂ ಆಹಾರಕ್ಕೆ ಬಳಕೆಯಾಗುವುದಿಲ್ಲ. ಕೆಲವು ಅತ್ಯಂತ ವಿಷಕಾರಿ. ಪಾರಂಪರಿಕ ಪರಿಣಿತರು ಮಾತ್ರ ಇದನ್ನು ಗುರುತಿಸುತ್ತಾರೆ. ಇವು ಪರಾವಲಂಬಿಗಳು. ಗೆದ್ದಲುಗಳು ಅಣಬೆಯನ್ನು ಸಾಕುತ್ತವೆ. ತಮ್ಮ ಮರಿಗಳಿಗೆ ಪ್ರೋಟಿನ್ ರೂಪದಲ್ಲಿ ಅಣಬೆಯನ್ನು ಆಹಾರವನ್ನಾಗಿ ನೀಡುತ್ತವೆ. ಕೀಟಗಳು ಇವುಗಳನ್ನು ಅವಲಂಬಿಸಿ ತಮ್ಮ ಸಂತಾನವನ್ನು ವೃದ್ಧಿಸಿಕೊಳ್ಳುತ್ತವೆ.
ಹೈಗಾ ಕಾಡುಗಳಲ್ಲಿ ವಿಶೇಷ ಜಾತಿಯ ಅಣಬೆಗಳಿವೆ. ಬಯಲು ಸೀಮೆಯಲ್ಲಿ ಕೂಡ ಎರಡು ಜಾತಿಯ ಅಣಬೆಗಳು ಗೋಚರಿಸುತ್ತವೆ. ದಟ್ಟ ಅಡವಿಯಲ್ಲಿ ಅಣಬೆಗಳನ್ನು ತೆಗೆದರೆ ಕಾಡಿನ ಪುನರ್ ಬಳಕೆಯಾಗುವುದಿಲ್ಲ ಎಂಬ ಮಾತಿದೆ. ಈ ದೇಶಕ್ಕೆ ಅಕೇಷಿಯಾ ಆಗಮಿಸಿದಾಗ ಅದರ ಜೊತೆ ಕೆಲ ಅಣಬೆಗಳು ಕೂಡಾ ಬಂದವು ಎಂಬ ಮಾತಿದೆ. ಈ ಭಾಗದಲ್ಲಿ ಸುಮಾರು 550 ಕ್ಕೂ ಹೆಚ್ಚು ಜಾತಿಯ ಅಣಬೆಗಳಿವೆ.
ಮಾರುಕಟ್ಟೆಯಲ್ಲಿ ಅಣಬೆಗೆ ಭಾರಿ ಬೇಡಿಕೆಯಿದೆ. ಆದರೆ ಮಾರುಕಟ್ಟೆಗೆ ಪೂರೈಸುವಷ್ಟು ಅಣಬೆ ಬರುತ್ತಿಲ್ಲ ಎಂಬ ಅನಿಸಿಕೆ ಗ್ರಾಹಕರದ್ದು. ಕಾಡಿನ ಅಣಬೆ ಹೆಚ್ಚು ರುಚಿಕರ ಎಂಬ ಕಾರಣಕ್ಕೆ ಬೇಡಿಕೆಯೂ ಹೆಚ್ಚು. ಕಾಡು ನಾಶವಾಗಿದ್ದರೂ ಅಣಬೆಗಳು ಅಳಿದುಳಿದ ಕಾಡಿನಲ್ಲಿ ಅಲ್ಲಲ್ಲಿ  ಈ ಸಮಯದಲ್ಲಿ ಕಂಡು ಬರುತ್ತವೆ. ಕೆಲವರಿಗೆ ಅಣಬೆ ಆದಾಯಕ್ಕೆ ಕಾರಣವಾದರೆ, ಇನ್ನೂ ಕೆಲವರಿಗೆ ಖುಷಿಯನ್ನು ನೀಡಿ ಮರೆಯಾಗುತ್ತವೆ.