ನೇಗಿಲು ಮರೆಯಾಗುತ್ತಿದೆ ನೋಡಣ್ಣ


ನೊಗ, ನೇಗಿಲು ಕೃಷಿ ಬದುಕಿನ ಪ್ರಧಾನ ಪರಿಕರ. ಅನ್ನದಾತನ ಅನ್ನದ ಬಟ್ಟಲಿನ ಆಧಾರ. ಆರಾಧನೆಯ ಆಯುಧ. ರೈತನಿಗೆ ನೇಗಿಲಯೋಗಿಯ ಪದವಿಯನ್ನು ಕರುಣಿಸಿದ ಸಾಧನ. ಕಾಲಚಕ್ರ ಉರುಳುತ್ತಿದೆ. ನೇಗಿಲು ಮರೆಯಾಗುತ್ತಿದೆ. ಟಿಲ್ಲರ್, ಟ್ರ್ಯಾಕ್ಟರ್ ಬಂದಿದೆ. ಎತ್ತು, ಕೋಣಗಳ ಹಟ್ಟಿಗಳು ಯಂತ್ರ ಪರಿಕರಗಳ ಶೆಡ್ಗಳಾಗಿವೆ.
ನೊಗ ಮತ್ತು ನೇಗಿಲು ಪರಸ್ಪರ ಹೊಂದಿಕೊಂಡಿರುವ ಸಾಧನಗಳು. ನೊಗ ಬಿಟ್ಟು ನೇಗಿಲು ಇಲ್ಲ. ನೇಗಿಲು ಇಲ್ಲದೆ ನೊಗದ ಉಪಯೋಗವಿಲ್ಲ. ನೊಗ ಎತ್ತುಗಳ ಹೆಗಲನ್ನು ಅಲಂಕರಿಸಿದರೆ ನೇಗಿಲು ಅದಕ್ಕೆ ಬಿಗಿದುಕೊಂಡು ಹಿಂಬಾಲಿಸಿಕೊಂಡು ಹೊಲಗದ್ದೆಗಳನ್ನು ಹಸನುಗೊಳಿಸುತ್ತದೆ. ಹಿಂದೆಲ್ಲಾ ಇವೆರಡು ಸಾಧನಗಳನ್ನು ಮರದಿಂದಲೇ ಮಾಡುತ್ತಿದ್ದರು. ಈಗ ಮರದ ಜಾಗವನ್ನು ಕಬ್ಬಿಣ ಆಕ್ರಮಿಸಿಕೊಂಡಿದೆ.
ಎತ್ತುಗಳಿಗೆ ನೊಗ ಮತ್ತು ನೇಗಿಲು ಬಿಗಿಯಲು ಪರಿಣತಿ ಬೇಕು. ಕ್ರಮಬದ್ದವಾಗಿ ಬಿಗಿಯದಿದ್ದರೆ ಉಳುಮೆಯ ಮಧ್ಯದಲ್ಲಿ ಇವೆರಡೂ ಕಳಚಿ ಬೀಳುತ್ತವೆ. ಅಲ್ಲದೆ, ಉಳುಮೆಯೂ ಕ್ರಮಬದ್ಧವಾಗಿರುವುದಿಲ್ಲ. ರೈತ ಉಳುಮೆ ಪ್ರಾರಂಭಿಸುವ ಮೊದಲು ಇವುಗಳಿಗೆ ನಮಸ್ಕರಿಸಿ ಬಳಿಕ ಎತ್ತುಗಳ ಹೆಗಲ ಮೇಲೆ ಇವುಗಳನ್ನು ಬಿಗಿಯುತ್ತಾನೆ. ನೊಗ ನೇಗಿಲು ಅನ್ನು ದಾಟಬಾರದು. ಮೆಟ್ಟಬಾರದು. ಮೆಟ್ಟಿದರೆ ಮುಟ್ಟಿ ನಮಸ್ಕರಿಸಬೇಕು ಎಂಬ ನಿಯಮಗಳಿವೆ. ದೀಪಾವಳಿ ಸಂದರ್ಭದಲ್ಲಿ ಇವುಗಳಿಗೂ ಪೂಜೆ ಸಲ್ಲುತ್ತದೆ.
ಆದರೆ, ಆಧುನೀಕತೆ ಎಲ್ಲಾ ಕ್ಷೇತ್ರಗಳಂತೆ ಕೃಷಿಯನ್ನೂ ಆವರಿಸಿದೆ. ಕಾಲದ ಅವಶ್ಯಕತೆಗೆ ತಕ್ಕಂತೆ ಹೆಜ್ಜೆ ಹಾಕುವ ಅನಿವಾರ್ಯತೆಯಲ್ಲಿ ರೈತನಿದ್ದಾನೆ. ಅವಿಭಕ್ತ ಕುಟುಂಬ ವ್ಯವಸ್ಥೆ ಶಿಥಿಲಗೊಂಡಿದೆ. ಕೆಲಸ ಮಾಡಲು ಮನೆಯಲ್ಲಿ ಜನರಿಲ್ಲ, ಕೆಲಸಕ್ಕೆ ಕೂಲಿಗಳು ಸಿಗುತ್ತಿಲ್ಲ. ದೊರೆತರೂ ಹಿಂದಿನಂತೆ ಭತ್ತ ಅಕ್ಕಿಯ ಕೂಲಿ ಇಲ್ಲ. ಏನಿದ್ದರೂ ರೂಪಾಯಿ ಲೆಕ್ಕದಲ್ಲಿ. ದಿನಕೂಲಿ ಸಹ ಹಿಂದಿನಂತೆ ಕಡಿಮೆಯಿಲ್ಲ. ವರ್ಷದಿಂದ, ವರ್ಷಕ್ಕೆ ಏರುತ್ತಲೇ ಇದೆ. ಹಿಂದಿನಂತೆ ಹಟ್ಟಿ ತುಂಬಾ ಕೋಣ, ಎತ್ತುಗಳನ್ನು ಸಾಕುವ ಸ್ಥಿತಿಯಲ್ಲಿ ಆತನಿಲ್ಲ. ಹಿಡುವಳಿ ಚಿಕ್ಕದಾಗುತ್ತಾ ಇದೆ. ಅವಶ್ಯಕತೆಗಳು, ವೆಚ್ಚಗಳು ಬೆಳೆಯುತ್ತಿವೆ. ಈ ಎಲ್ಲಾ ಅಂಶಗಳು ಕೃಷಿಯ ಮೇಲೆ ಪರಿಣಾಮ ಬೀರಿವೆ. ಪರಿಣಾಮ ಉಳುಮೆಗೆ ಎತ್ತುಗಳ ಬದಲಿಗೆ ಟಿಲ್ಲರ್, ಟ್ರ್ಯಾಕ್ಟರ್, ನಾಟಿ, ಕೊಯ್ಲಿಗೆ ಯಂತ್ರಗಳ ಮೊರೆ ಹೋಗುವುದು ಆತನ ಪಾಲಿಗೆ ಅನಿವಾರ್ಯವಾಗಿವೆ. ಇದರಿಂದಾಗಿ ಗದ್ದೆಗಳಿಂದ ನೊಗ, ನೇಗಿಲು ಮರೆಯಾಗುತ್ತಿವೆ. ಈ ಜಾಗವನ್ನು ಟಿಲ್ಲರ್ಗಳು ಆವರಿಸಿವೆ.
ಕೃಷಿ ಸಂಬಂಧಿತ ಕೆಲಸಗಳು ಬರೇ ಒಂದು ಕಾಯಕವಾಗಿರಲಿಲ್ಲ. ಅವುಗಳ ಹಿಂದೆ ಒಂದಷ್ಟು ಆಚಾರ ವಿಚಾರಗಳು, ಸಂಪ್ರದಾಯಗಳಿದ್ದವು. ಹಿಂದೆ ಗದ್ದೆಗಳಲ್ಲಿ ಬೇಸಾಯ ಕೆಲಸ ಪ್ರಾರಂಭವಾಯಿತೆಂದರೆ ಆ ಪ್ರದೇಶದ ತುಂಬಾ ಲವಲವಿಕೆ. ಉಳುಮೆ ಮಾಡುವ ಸಂದರ್ಭದಲ್ಲಿ ಉಳುವವ ತನ್ನ ಬೇಸರ ಕಳೆಯಲು ರಾಗಬದ್ದವಾಗಿ ಹಾಡುವ ಹಾಡು ಆ ಪ್ರದೇಶದಲ್ಲೆಲ್ಲಾ ಪ್ರತಿಧ್ವನಿಸುತ್ತಿತ್ತು . ಈ ಹಾಡಿಗೆ ರಾಗವು ಆತನದೇ. ಮನಸ್ಸಿಗೆ ಬಂದದ್ದೇ ಸಾಹಿತ್ಯ. ಎತ್ತು , ಕೋಣ, ನೇಗಿಲು ಮರೆಯಾಗುವಾಗ ಇನ್ನೆಲ್ಲಿಯ ಹಾಡು. ಅದೇ ರೀತಿ ನಾಟಿ ಮಾಡುವಾಗ ಹೆಂಗಸರು ಹಾಡುವ ಸಾಲು ಸಾಲು ಹಾಡು ಎಲ್ಲರ ಕಿವಿಯನ್ನು ಆ ಕಡೆಗೆ ಸೆಳೆಯುತಿತ್ತು. ಆದರಿಂದು ಅವುಗಳೆಲ್ಲಾ ನೇಪಥ್ಯಕ್ಕೆ ಸರಿಯುತ್ತಿವೆ.