ಅಸ್ಸಾಂ ಹಿಂಸಾಚಾರಕ್ಕೆ ಅಕ್ರಮ ವಲಸೆಯೇ ಕಾರಣ


ಕಳೆದ ಕೆಲ ದಿನಗಳಿಂದ ಅಸ್ಸಾಂನ ಬಕ್ಸರ್, ದುಬ್ರಿ, ವಂಗಾಯಿಗಾಂವ್, ಚಿರಾಂಗ್ ಮತ್ತು ಕೋಕ್ರಾಜಾರ್ ಜಿಲ್ಲೆಗಳಲ್ಲಿ ಅಕ್ರಮ ಬಾಂಗ್ಲಾದೇಶ ನುಸುಳುಕೋರರ ವ್ಯವಸ್ಥಿತ ಮತ್ತು ನಿರಂತರ ದಾಳಿಯಿಂದ ಒಂದು ಲಕ್ಷಕ್ಕೂ ಅಧಿಕ ಹಿಂದೂಗಳು ನಿರಾಶ್ರಿತರಾಗಿದ್ದಾರೆ. ನಿರಂತರವಾಗಿ ನಡೆದಿರುವ ದಾಳಿಯಲ್ಲಿ ಮಕ್ಕಳು, ಮಹಿಳೆಯರ ಸಹಿತ 52ಕ್ಕೂ ಅಧಿಕ ಹಿಂದೂಗಳ ಹತ್ಯೆಯಾಗಿದೆ. ಸುಮಾರು 4 ಲಕ್ಷ ಸ್ಥಳೀಯ ಬೋಡೋ ಹಿಂದೂಗಳು ತಮ್ಮ ಮನೆ, ಮಠ, ಹೊಲಗದ್ದೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. 8 ಸಾವಿರ ಚದರ ಕಿ.ಮೀ. ಪರಿಸರದಲ್ಲಿ ಹಬ್ಬಿರುವ ಗಲಭೆಯಿಂದ 500 ಗ್ರಾಮಗಳು ತತ್ತರಿಸಿವೆ. ಈಗಾಗಲೇ 40 ಸಾವಿರಕ್ಕೂ ಅಧಿಕ ಜನ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಅಸ್ಸಾಂನಲ್ಲಿನ ಜನಾಂಗೀಯ ಸಂಘರ್ಷಕ್ಕೆ  ಬಾಂಗ್ಲಾದೇಶದಿಂದ ದೇಶದೊಳಕ್ಕೆ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ವಲಸೆಯೇ ಕಾರಣ. ಈ ಅಕ್ರಮ ನುಸುಳುಕೋರರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ  ಸರಕಾರ ವಿಫಲವಾಗಿದ್ದು, ಈ ಕಾರಣದಿಂದಾಗಿಯೇ ಮೂಲ ಭಾರತೀಯರಲ್ಲಿ ಭೀತಿ ಮೂಡಿದೆ. ಅಸ್ಸಾಂನಲ್ಲಿ  ಜನಾಂಗೀಯ ಸಂಘರ್ಷ ನಡೆಯುವ ಬಗೆಗೆ ಪೂರ್ವಸೂಚನೆಗಳಿದ್ದಾಗ್ಯೂ ಸರಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದಿರುವುದೇ ಇಷ್ಟೊಂದು ದೊಡ್ಡ ಅನಾಹುತಕ್ಕೆ ಕಾರಣ. ಬಾಂಗ್ಲಾದೇಶದಿಂದ ಭಾರೀ ಪ್ರಮಾಣದಲ್ಲಿ  ವಲಸಿಗರು ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದಾರೆ. ಅದರಲ್ಲೂ ಅಸ್ಸಾಂ ಮೂಲಕ ನುಸುಳಿ ಬರುವವರ ಸಂಖ್ಯೆ ಅಧಿಕವಾಗುತ್ತಿದೆ. ಸುಪ್ರೀಂಕೋರ್ಟ್ ಸಹ ಈ ಹಿಂದೆ ಈ ಬಗ್ಗೆ ಎಚ್ಚರಿಕೆ ಕೊಟ್ಟಿತ್ತು. ಸುಪ್ರೀಂಕೋರ್ಟ್ನ  ಆದೇಶ ಹೊರಬಿದ್ದು  ಏಳು ವರ್ಷಗಳೇ ಕಳೆದಿವೆ. ಆದರೂ, ಅಕ್ರಮ ವಲಸಿಗರ ಬಗೆಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ  ಕೇಂದ್ರ ಹಾಗೂ ಅಸ್ಸಾಂ ಸರಕಾರಗಳು ವಿಫಲವಾಗಿವೆ. ರಾಜ್ಯ ಸರಕಾರ ಈ ಬಗ್ಗೆ  ಗಂಭೀರವಾಗಿ ಚಿಂತನೆ ನಡೆಸುತ್ತಿಲ್ಲ. ಕೇಂದ್ರ ಸರಕಾರ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನಿಸುತ್ತಿದೆ.
ಅಸ್ಸಾಂನ ಹಾಲಿ ಸ್ಥಿತಿ ನೋಡಿದರೆ ಜಮ್ಮು-ಕಾಶ್ಮೀರದ ಸ್ಥಿತಿ ನೆನಪಿಗೆ ಬರುತ್ತದೆ. ಪಾಕ್ ಮತ್ತಿತರ ಕಡೆಯಿಂದ ವಲಸೆ ಬಂದಿರುವ ಮುಸ್ಲಿಮರು ಮೂಲವಾಸಿಗಳಾದ ಕಾಶ್ಮೀರಿ ಪಂಡಿತರನ್ನು  ನಿರ್ವಸಿತರನ್ನಾಗಿಸಿದ್ದಾರೆ. ಬದುಕಿನ ಆಸರೆಗಾಗಿ ಪಂಡಿತರು ತಾಯ್ನೆಲ ಬಿಟ್ಟು, ಇತರೆಡೆ ನೆಲೆ ಕಂಡುಕೊಂಡಿದ್ದಾರೆ. ಇದೇ ಸ್ಥಿತಿ, ಇದೀಗ ಅಸ್ಸಾಂನ ಬುಡಕಟ್ಟು  ಸಮುದಾಯದ ಜನರದ್ದು. ಈ ಸಂಘರ್ಷವನ್ನು  ಕೇವಲ ಕೋಮು ಅಥವಾ ಜನಾಂಗೀಯ ಸಂಘರ್ಷ ಎಂದು ಲಘುವಾಗಿ ಪರಿಗಣಿಸುವುದು ತರವಲ್ಲ. ಮೂಲ ಭಾರತೀಯರಾದ ಬುಡಕಟ್ಟು  ಜನರ ಹಕ್ಕುಗಳನ್ನು ಅಕ್ರಮ ವಲಸಿಗರು ಕಸಿದುಕೊಂಡಿರುವುದು ಸಮಸ್ಯೆಯ ಮೂಲ.
ಅಕ್ರಮ ವಲಸಿಗರ ದಬ್ಬಾಳಿಕೆಯ ಫಲವಾಗಿ ಭಾರತೀಯ ಬುಡಕಟ್ಟು  ಸಮುದಾಯದ ಜನರು ತಮ್ಮ ಭೂಮಿಯ ಮೇಲಿನ ಹಕ್ಕನ್ನು  ಕಳೆದುಕೊಳ್ಳುತ್ತಿರುವ ಫಲವಾಗಿ ಈ ಸಂಘರ್ಷ ಏರ್ಪಟ್ಟಿದೆ. ವಲಸಿಗರ ಹೆಚ್ಚಳದಿಂದಾಗಿ ಬೋಡೋ ಪ್ರದೇಶ ಮಾತ್ರವಲ್ಲ, ಅಸ್ಸಾಂ ರಾಜ್ಯದ ಜನಸಂಖ್ಯೆಯಲ್ಲಿಯೂ ಬಹಳಷ್ಟು  ವ್ಯತ್ಯಾಸಗಳಾಗಿವೆ. ವಲಸಿಗರ ಕಾರಣದಿಂದಾಗಿ ಮೂಲ ಭಾರತೀಯರು ದುರ್ಬಲಗೊಳ್ಳುತ್ತಿದ್ದು, ಭೀತಿಯಲ್ಲಿ ಬದುಕುವಂತಾಗಿದೆ. ಇಂದು ಪೂರ್ವಾಂಚಲ ರಾಜ್ಯಗಳು ಬಾಂಗ್ಲಾ ವಲಸೆಗಾರರಿಂದ ತುಂಬಿ ಹೋಗಿವೆ. ಅಂಥ ಪ್ರದೇಶಗಳಲ್ಲಿ ಮೂಲ ನಿವಾಸಿಗಳಾದ ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ. ಬಾಂಗ್ಲಾ-ಭಾರತದ ಗಡಿಯಲ್ಲಿ ಸೇನೆ ನಿಯೋಜಿಸಿ ಅಕ್ರಮ ವಲಸಿಗರನ್ನು ನಿರ್ಬಂಧಿಸಬೇಕಾಗಿದೆ. ಅಸ್ಸಾಂ ಬೋಡೋ ಹಿಂದೂಗಳಿಗೆ ಅವರ ಮೂಲ ಸ್ಥಾನದಲ್ಲೇ ಪುನರ್ವಸತಿ ಕಲ್ಪಿಸಬೇಕಿದೆ. ಇದು ಮುಂದೊಂದು ದಿನ ದೇಶದ ಏಕತೆ, ಸಮಗ್ರತೆ ಹಾಗೂ ಭದ್ರತೆಗೆ ಭಾರೀ ಆತಂಕವನ್ನು  ಒಡ್ಡಬಲ್ಲುದು. ಈ ಬಗ್ಗೆ ಈಗಲೇ ಎಚ್ಚರ ಅಗತ್ಯ.