ಸ್ವಾತಂತ್ರ್ಯವೆಂಬುದು ಹಲವರು ಮಾಡಿದ ಬಲಿದಾನದ ಫಲ


ನಮ್ಮ ಹೆಮ್ಮೆಯ ತಾಯ್ನಡಾದ ಭಾರತವು ಸುಮಾರು ಮೂರು ಶತಮಾನಗಳ ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಂಡು ಇಂದು ಅರುವ್ತೈದನೆಯ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂಭ್ರಮದ ಹಿಂದೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಅದೆಷ್ಟು ಧೀರ, ವೀರ, ತ್ಯಾಗಿಗಳ ಬಲಿದಾನಗಳಿವೆ ಎಂಬುದನ್ನು ಇಂದಿನ ಯುವಜನತೆ ಒಮ್ಮೆಯಾದರೂ ನೆನಪಿಸಿಕೊಂಡರೆ ಚೆನ್ನ. ನಮ್ಮ ಮೊಗದಲ್ಲರಳುವ ಹೂ ನಗುವಿನ ಹಿಂದೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಕಣ್ಣೀರ ಕಥೆಗಳಿವೆ ಎಂಬುದನ್ನು ಈ ಸಂದರ್ಭದಲ್ಲಿ ನಾವಿಲ್ಲಿ ಸ್ಮರಿಸಲೇಬೇಕು.
ನಮ್ಮ ನೆಲದಲ್ಲಿ ನಾವೇ ಗುಲಾಮರಾದೆವು:
ತನ್ನ ಅನನ್ಯ ಪರಂಪರೆಯಿಂದ, ಸಕಲ ಸಂಪದ್ಭರಿತ ರಾಷ್ಟ್ರವಾಗಿ ವಿಶ್ವದ ಗಮನ ಸೆಳೆಯುತ್ತಿದ್ದ ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಪರಕೀಯರು ಇಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿ ನಮ್ಮವರನ್ನೆಲ್ಲ ಗುಲಾಮರನ್ನಾಗಿಸಿದರು. ವಿದೇಶೀಯರ ದಾಳಿಗೆ ಸಿಲುಕಿ ತಾಯ್ನಡಿನಲ್ಲೇ ಪರಕೀಯರಾಗುವ ಸ್ಥಿತಿ ಭಾರತೀಯರದ್ದಾಗಿತ್ತು.
ಬ್ರಿಟಿಷ್ ಆಡಳಿತವು ಭಾರತದ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿತು. ಅವರ ಬಿಗು ಧೋರಣೆಗಳು ಜನರ ಬದುಕನ್ನೇ ಬುಡಮೇಲಾಗಿಸಿದವು. ವಿದೇಶೀಯರ ಆಡಳಿತ ನಿಯಮಗಳು ಸಾರ್ವತ್ರಿಕವಾಗಿ ಎಲ್ಲ ವರ್ಗದ ಜನರ ವಿರೋಧಗಳಿಸಿಕೊಳ್ಳುವುದರ ಜತೆಗೆ ದಾಸ್ಯದ ಬಂಧನದಿಂದ ವಿಮುಕ್ತಿ ಹೊಂದಲು ಭಾರತೀಯರನ್ನೆಲ್ಲ ಎಚ್ಚರಿಸುವಂತೆ ಮಾಡಿತು. ಅಂದು ಜಾತಿ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಒಕ್ಕೊರಲಿನಿಂದ ದನಿ ಎತ್ತಿದರು. ಸಾವಿರಾರು ಭಾರತೀಯರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ತಾಯ್ನಡ ರಕ್ಷಣೆಗಾಗಿ ನೂರಾರು ಮಂದಿ ಬ್ರಿಟಿಷರ ಗುಂಡಿಗೆ ಆಹುತಿಯಾದರು. ಭಗತ್ಸಿಂಗ್, ರಾಜಗುರು, ಸುಖ್ದೇವ್ರಂತಹ ತರುಣಯೋಧರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಹಾಗಿದ್ದರೂ ಭಾರತೀಯರು ಹಿಂತೆಗೆಯಲಿಲ್ಲ. ಮಹಾತ್ಮ ಗಾಂಧೀಜಿ, ಸುಭಾಶ್ಚಂದ್ರಭೋಸ್ ಮೊದಲಾದವರ ನೇತೃತ್ವದಲ್ಲಿ ನಡೆದ ಸಾತ್ವಿಕ, ಸ್ವಾಭಿಮಾನದ ಹೋರಾಟ ಹುಸಿಯಾಗಲಿಲ್ಲ. 1947 ಆಗಸ್ಟ್ 15ರಂದು ಭಾರತ ದೇಶವು ಸ್ವಾತಂತ್ರ್ಯಗಳಿಸಿಕೊಂಡಿತು. ನಮ್ಮ ಹೆಮ್ಮೆಯ ತ್ರಿವರ್ಣಧ್ವಜ ಬಾನಂಗಳದಲ್ಲಿ ನಲಿದಾಡಿತು. ನೂರಾರು ಯೋಧರ ತ್ಯಾಗ, ಬಲಿದಾನಗಳ ಪ್ರತೀಕವಾಗಿರುವ ಸ್ವಾತಂತ್ರ್ಯದ ಸವಿಯನ್ನು ನಾವಿಂದು ಅನುಭವಿಸುತ್ತಿದ್ದೇವೆ.
"ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ' ಎಂಬ ಸಾಲುಗಳು ಭಾರತದ ವಿಶಿಷ್ಟ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ, ಇಲ್ಲಿನ ಅನುಪಮ ಕೌಟುಂಬಿಕ ಅನುಬಂಧ, ಪ್ರೀತಿ, ವಾತ್ಸಲ್ಯಗಳ ಕುರಿತುತೆಂದೇ ಭಾವಿಸಿಕೊಳ್ಳಬಹುದು.
"ಹಿಂದೂ, ಕ್ರೈಸ್ತ, ಮುಸಲ್ಮಾನ ಾರಸಿಕ ಜೈನರುದ್ಯಾನ" ಎಂಬ ನುಡಿಯೂ ವಿವಿಧತೆಯಲ್ಲಿ ಏಕತೆಯಿದೆ ಎಂಬ ಸಂದೇಶ ಸಾರುತ್ತಾ ವಿಶ್ವಕ್ಕೆ ಮಾದರಿಯೆನಿಸಿರುವ ನಮ್ಮ ದೇಶದ ಹಿರಿಮೆಯನ್ನೇ ಸಾರುತ್ತಿದೆ ಎಂದು ಕೊಳ್ಳೋಣ.
ವೈಜ್ಞಾನಿಕ ಪ್ರಗತಿ, ತಾಂತ್ರಿಕ ಅಭಿವೃದ್ಧಿ, ಐಟಿ, ಬಿಟಿ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಸಂಗೀತ, ಸಾಹಿತ್ಯ, ಕಲೆ, ಕ್ರೀಡೆಗಳ ಖ್ಯಾತಿಯ ಮೂಲಕ ಜಗತ್ತಿನಲ್ಲಿ ಹೆಸರುಗಳಿಸುತ್ತಿರುವ ಭಾರತ ಇತ್ತೀಚೆಗಿನ ದಿನಗಳಲ್ಲಿ ಭ್ರಷ್ಟಾಚಾರ, ಹಿಂಸಾಚಾರಗಳಿಂದ ನಲುಗುತ್ತಿದೆ. ಮಹಿಳೆಯರನ್ನು ತಾಯಿಯಂತೆ, ಸೋದರಿಯರಂತೆ ಕಾಣುತ್ತಿದ್ದ ಸಂಸ್ಕೃತಿಗೆ ಎಲ್ಲೋ ಕುಂದುಂಟಾಗುತ್ತಿದೆ ಎನಿಸದಿರದು. ನಮ್ಮ ರಾಷ್ಟ್ರ, ರಾಷ್ಟ್ರಗೀತೆ, ರಾಷ್ಟ್ರೀಯ ಧ್ವಜಗಳನ್ನೆಲ್ಲ ಗೌರವದಿಂದ ಕಾಣಬೇಕಾದ ನಾವು ಕೇವಲ ಸ್ವಾರ್ಥ ಚಿಂತನೆಯತ್ತಲೇ ಹೆಚ್ಚು ಗಮನ ನೀಡುತ್ತಿದ್ದೇವೆ. ಅರುತ್ತಾರನೇ ಸ್ವಾತಂತ್ರ್ಯೋತ್ಸವವನ್ನಾಚರಿಸುತ್ತಿರುವ ಈ ಸುಸಂದರ್ಭದಲ್ಲಿ ನಾವೆಲ್ಲರೂ ಒಂದಿಷ್ಟು ಆತ್ಮಾವಲೋಕನ ಮಾಡಿಕೊಳ್ಳೋಣ.
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ:
ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ಈ ನೆಲದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕೆಂಬುದೇ ಪ್ರತಿಯೊಬ್ಬ ಭಾರತೀಯನ ಮನೋಭಿಲಾಷೆಯಾಗಿರಲಿ. "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಎಂಬಂತೆ ಸ್ವರ್ಗಕ್ಕಿಂತಲೂ ಮಿಗಿಲಾದ ತಾಯಿಯ ಮಡಿಲನ್ನೂ, ತಾಯ್ನೆಲದ ಒಡಲನ್ನೂ ರಕ್ಷಿಸುವ ಹೊಣೆ ನಮ್ಮೆಲ್ಲರದಾಗಿರಲಿ. ಹಿರಿಯರು ತ್ಯಾಗ, ಬಲಿದಾನಗಳ ಮೂಲಕ ಗಳಿಸಿಕೊಟ್ಟ ಈ ಸ್ವಾತಂತ್ರ್ಯವು ದುಷ್ಟಶಕ್ತಿಗಳಿಗೆ ಸಿಲುಕಿ ನರಳುವಂತಾಗದಿರಲಿ ಎಂಬುದೇ ಎಲ್ಲರ ಸದಾಶಯವಾಗಿರಲಿ. ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾವೆಲ್ಲರೂ ಭವ್ಯ ಭಾರತದ ಸತ್ರ್ಪಜೆಗಳಾಗುವ  ಪ್ರತಿಜ್ಞೆಯೊಂದಿಗೆ ಭಾರತಾಂಬೆಯ ರಕ್ಷಣೆಗಾಗಿ ಕೈ ಜೋಡಿಸೋಣ.