ಇಲಿ ಜ್ವರ ಹೇಗೆ ಬರುತ್ತದೆ?


ಇಲಿ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ. ಮುಖ್ಯವಾಗಿ ಈ ಜ್ವರ ಕಂಡು ಬರುವುದು ಇಲಿ, ಹೆಗ್ಗಣ ಹಾಗೂ ಕಾಡು ಪ್ರಾಣಿಗಳಲ್ಲಿ. ಅವುಗಳಿಂದ ನೀರಿನ ಮೂಲಕ ಹರಡುವ ರೋಗಾಣುಗಳು ಮಾನವನ ದೇಹದಲ್ಲಿರುವ ಗಾಯಗಳ ಮೂಲಕ ಅಥವಾ ಆ ಕಲುಷಿತ ನೀರಿನಲ್ಲಿ ಕಣ್ಣು ತೊಳೆದಾಗ ಮಾನವ ದೇಹವನ್ನು ಪ್ರವೇಶಿಸುತ್ತವೆ.

ಲೆಪ್ಟೊಸ್ಟೈರೋಸಿಸ್ ಎಂದು ಕರೆಯಲಾಗುವ ಈ ರೋಗ ಸೆರೋಕಿಟಾ ಎಂಬ ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗ. ರೋಗವನ್ನು ಹರಡಬಹುದಾದ ರೋಗಾಣುಗಳು ಪ್ರಾಣಿಗಳ ಮೂತ್ರದಲ್ಲಿದ್ದು, ಇಂತಹ ಸೋಂಕು ದೇಹವನ್ನು ಸೇರಿ ಮನುಷ್ಯರಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.
ಮನೆಯ ಪರಿಸರದಲ್ಲಿ ಇರುವ ಇಲಿ, ಹೆಗ್ಗಣ, ಬೆಕ್ಕು, ನಾಯಿ ಹಾಗೂ ಕೆಲವು ಕಾಡು ಪ್ರಾಣಿಗಳ ದೇಹದಲ್ಲಿ ರೋಗದ ಸೂಕ್ಷ್ಮಾಣುಗಳು ಇರುತ್ತವೆ. ಸೋಂಕು ಹೊಂದಿರುವ ಇಂತಹ ಪ್ರಾಣಿಗಳ ಮಲ, ಮೂತ್ರ ಮೂಲಕ ರೋಗಾಣುಗಳು(ಸ್ಟೈರೋಕಿಟಾ) ನೀರಿನಲ್ಲಿ ಸೇರಿಕೊಳ್ಳುತ್ತದೆ. ಇಂತಹ ಕಲುಷಿತ ನೀರನ್ನು ಮನುಷ್ಯ ಕುಡಿದಾಗ, ಇಲ್ಲವೇ ಇಂತಹ ನೀರು ದೇಹ ಸಂಪರ್ಕ ಹೊಂದಿದಾಗ ಶರೀರದಲ್ಲಿ ಇರಬಹುದಾದ ಗಾಯಗಳ ಮೂಲಕ ರೋಗಾಣುಗಳು ದೇಹವನ್ನು ಸೇರಿಕೊಳ್ಳುತ್ತವೆ. ಅಲ್ಲದೆ ಬಾಯಿ, ಮೂಗು, ಮತ್ತು ಕಣ್ಣುಗಳ ಒಳ ಭಾಗದ ಮೂಲಕವೂ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈ ರೋಗಾಣುಗಳು ದೇಹವನ್ನು ಸೇರಿದ 4-19 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರೋಗ ಲಕ್ಷಣಗಳು:
ಜ್ವರ, ಮಾಂಸ ಖಂಡಗಳ ನೋವು, ಮೈ ಕೈ ನೋವು ಹಾಗೂ ತಲೆನೋವು ಕಾಣಿಸಿಕೊಳ್ಳುವುದು ರೋಗದ ಲಕ್ಷಣಗಳಲ್ಲಿ ಒಂದು. ಕೆಲವರಲ್ಲಿ ಪಿತ್ತ ಕಾಮಾಲೆ(ಜಾಂಡೀಸ್)ಯ ಲಕ್ಷಣಗಳೂ ಕಂಡು ಬರುವ ಸಾಧ್ಯತೆ ಇದೆ. ಬಾಯಿ, ಮೂಗು, ಕದಲ್ಲಿ ರಕ್ತ ಸ್ರಾವವನ್ನು ಕಾಣಬಹುದು. ಮೂತ್ರ ಪಿಂಡ ಹಾಗೂ ಹೃದಯದ ಸೋಂಕು ಉಂಟಾಗಬಹುದು.
ಚಿಕಿತ್ಸಾ ಮಾಹಿತಿ:
ಕ್ರಮ ಬದ್ಧವಾದ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣ ಗುಣಪಡಿಸಬಹುದು. ಹೃದಯ, ಶ್ವಾಸಕೋಶ, ಮೂತ್ರಪಿಂಡ ಸೋಂಕು ಬಹಳ ವಿರಳವಾಗಿದ್ದರೂ ಅವುಗಳ ಸೋಂಕು ಕಾಣಿಸಿಕೊಂಡಲ್ಲಿ, ಚಿಕಿತ್ಸೆ ಸಕಾಲಕ್ಕೆ ದೊರಕದಿದ್ದಲ್ಲಿ ದುಷ್ಪರಿಣಾಮ ಉಂಟಾಗಬಹುದು. ಶೀಘ್ರ ರೋಗಪತ್ತೆ ಹಾಗೂ ಕ್ರಮಬದ್ಧ ಚಿಕಿತ್ಸೆಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ರೋಗಿಯನ್ನು ಇತರರಿಂದ ಪ್ರತ್ಯೇಕಿಸುವ ಅಗತ್ಯವಿಲ್ಲ. ಸೋಂಕು ರೋಗಿಯಿಂದ ಆರೋಗ್ಯವಂತ ವ್ಯಕ್ತಿಗಳಿಗೆ ರೋಗ ಹರಡುವುದಿಲ್ಲ.
ಮುಂಜಾಗ್ರತಾ ಕ್ರಮಗಳು:
* ನೀರಿನ ಸಂರಕ್ಷಣೆ ಅತೀ ಅಗತ್ಯವಾಗಿದ್ದು, ಸ್ನಾನ ಮತ್ತು ಕುಡಿಯಲು ಉಪಯೋಗಿಸುವ ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರದಂತೆ ನೀರಿನ ಶೇಖರಣಾ ತೊಟ್ಟಿಗಳಿಗೆ ಭದ್ರವಾಗಿ ಮುಚ್ಚಳವನ್ನು ಮುಚ್ಚಿರಬೇಕು.
* ಸಾಕು ಪ್ರಾಣಿ ಹಾಗೂ ಕಾಡು ಪ್ರಾಣಿಗಳಲ್ಲಿ ಈ ರೋಗ ಹರಡುವ ರೋಗಾಣುಗಳು ಇರುವ ಸಾಧ್ಯತೆ ಇರುವುದರಿಂದ ಕೊಳ, ಹೊಂಡ ಹಾಗೂ ನಿಂತ ನೀರಿನಲ್ಲಿ ಸ್ನಾನ ಮಾಡಬಾರದು ಹಾಗೂ ಈ ನೀರನ್ನು ಸೇವಿಸಬಾರದು.
* ಆಹಾರ ಪದಾರ್ಥಗಳು, ಹಣ್ಣು, ತರಕಾರಿ ಇತ್ಯಾದಿಗಳು ಇಲಿಗಳಿಗೆ ಸಿಗದಂತೆ ದಾಸ್ತಾನು ಮಾಡಬೇಕು. ಮನೆ, ಗೋದಾಮು, ಅಂಗಡಿ, ಚರಂಡಿ ಹಾಗೂ ಹೊಲ ಗದ್ದೆ ಪರಿಸರದಲ್ಲಿ ಇಲಿಗಳು ವಾಸ ಮಾಡದಂತೆ ಹಾಗೂ ಸಂತಾನ ವೃದ್ಧಿಯಾಗದಂತೆ ಬಿಲ, ಕಿಂಡಿಗಳನ್ನು ಮುಚ್ಚಬೇಕು. ಪರಿಸರ ನೈರ್ಮಲ್ಯದಿಂದ ರೋಗ ಹರಡುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
* ಇಂತಹ ಪ್ರಾಣಿಗಳು ಇರಬಹುದಾದ ವಾಸ ಸ್ಥಳಗಳಲ್ಲಿ ಬರಿಗಾಲಿನಲ್ಲಿ ಓಡಾಡದೆ ಚಪ್ಪಲಿ ಧರಿಸಿ ನಡೆಯುವುದು. ಹೆಚ್ಚಿನ ಮಾಹಿತಿ ಹಾಗೂ ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಸಲಹೆ ಪಡೆಯಬೇಕು.
* ಮುಖ್ಯವಾಗಿ ಇಲಿಗಳು ಓಡಾಡುವ ಪ್ರದೇಶಗಳಲ್ಲಿ ಕೆಲಸ ಮಾಡುವವರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು.
* ರೋಗ ಕಾಣಿಸಿಕೊಂಡ ಪ್ರದೇಶದ ಕೃಷಿಕರು ಹಾಗೂ ಕಾರ್ಮಿಕರು ಖಾಲಿ ಕಾಲಿನಲ್ಲಿ ಓಡಾಡಬಾರದು. ಚಪ್ಪಲಿ ಅಥವಾ ಗ್ಲೌಸ್ ಹಾಕಬೇಕು.
* ರೋಗ ಲಕ್ಷಣ ಕಂಡು ಬಂದಾಕ್ಷಣ ವ್ಯಕ್ತಿ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.
* ರೋಗ ಪತ್ತೆಗಾಗಿ ಸ್ಕ್ರೀನಿಂಗ್ ಟೆಸ್ಟ್ (ಪರೀಕ್ಷೆ) ಮಾಡಿಸಿ ಅನುಮಾನದ ಮಟ್ಟದಲ್ಲಿದ್ದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದಿ.
* ಇಲಿ ಜ್ವರಕ್ಕೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿದ್ದು, ಚಿಕಿತ್ಸೆ ಪಡೆಯ ಬಹುದಾಗಿದೆ ಎನ್ನುತ್ತಾರೆ ವೈದ್ಯರು. ರೋಗ ಉಲ್ಬಣಗೊಂಡರೆ ಚಿಕಿತ್ಸೆ ಕಷ್ಟವಾಗಿದ್ದು, ಜ್ವರದ ಲಕ್ಷಣಗಳು ಕಂಡು ಬಂದ ತತ್ಕ್ಷಣ ವೈದ್ಯರನ್ನು ಕಾಣಬೇಕು ನ್ನುವುದು ಆರೋಗ್ಯ ತಜ್ಞರ ಅಭಿಮತ.