ಸ್ಟಾರ್ ಆಸ್ಪತ್ರೆಗಳ ದಿನದ ಬೆಡ್ ಬಾಡಿಗೆಯೇ ಒಂದು ಲಕ್ಷ


ಐಷಾರಾಮಿ ಹೋಟೆಲ್ಗಳಲ್ಲಿ ಒಂದು ದಿನದ ರೂಮಿನ ಬಾಡಿಗೆ 75,000 ರೂ. ಆಸುಪಾಸು ಇರುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಹೈಟೆಕ್ 5 ಸ್ಟಾರ್ ಆಸ್ಪತ್ರೆಗಳ ಒಂದು ದಿನದ ಬೆಡ್ ಶುಲ್ಕವೂ ಹೆಚ್ಚು ಕಡಿಮೆ 1 ಲಕ್ಷ ರೂ.ವರೆಗೆ ತಲುಪಿ ನಿಂತಿದೆ. ದಿಲ್ಲಿಯಲ್ಲಿರುವ ಫೋರ್ಟಿಸ್ ಹಾರ್ಟ್ ಇನ್ಸಿಟಿಟ್ಯೂಟ್ನ ಪ್ರೆಸಿಡೆನ್ಷಿಯಲ್ ಸೂಟ್ಸ್ (ಕೊಠಡಿ)ನ ಒಂದು ದಿನದ ಬೆಡ್ ಶುಲ್ಕ 75,000 ರೂ., ಇನ್ನು ಗುಡಂಗಾವ್ನಲ್ಲಿ ಶೀಘ್ರವೇ ಆರಂಭವಾಗಲಿರುವ ಇದೇ ಫೋರ್ಟಿಸ ಸಂಸ್ಥೆಯ 7 ಸ್ಟಾರ್ ಆಸ್ಪತ್ರೆಯಲ್ಲಿ 1 ದಿನದ ಬೆಡ್ ಶುಲ್ಕ ಹೆಚ್ಚು ಕಡಿಮೆ 1 ಲಕ್ಷ ರೂ. ಆಸುಪಾಸಿನಲ್ಲಿದೆ. ಅಂದಹಾಗೆ ಈ ಶುಲ್ಕದಲ್ಲಿ ಯಾವುದೇ ವೈದ್ಯಕೀಯ ಸೇವೆಯ ಶುಲ್ಕ ಸೇರಿಲ್ಲ. ಇದೇನಿದ್ದರೂ ಐಷಾರಾಮಿ ಸೇವೆ, ಭದ್ರತೆ, ರಹಸ್ಯ ವಾತಾವರಣ ಕಾಪಾಡಿಕೊಳ್ಳುವುದಕ್ಕೇ ನೀಡಬೇಕಾದ ಹಣ.
ಇದರ ಜೊತೆಗೆ ವಿಶ್ವವಿಖ್ಯಾತ ಬಾಣಸಿಗರು ರೋಗಿಗಳಿಗೆ ಕೊಡಬಹುದಾದ ಬಾಯಿಯಲ್ಲಿ ನೀರೂರಿಸುವ ಔತಣ ತಯಾರಿಸಿ ಕೊಡುತ್ತಾರೆ. ಕೊಠಡಿಯಲ್ಲೇ ಎಲ್ಸಿಡಿ ಟೀವಿ, ವೈಫೈ ಸಂಪರ್ಕ, ರೆಫ್ರಿಜಿರೇಟರ್, ಭೇಟಿಗೆ ಬಂದವರಿಗೆ ವಿಶ್ರಾಂತಿಗೆ ಪ್ರತ್ಯೇಕ ಸ್ಥಳ, ರೂಫ್ಟಾಪ್ ಗಾರ್ಡನ್... ಹೀಗೆ ಹತ್ತು ಹಲವು ಸೌಕರ್ಯಗಳು ರೋಗಿಗಳಿಗೆ ಲಭ್ಯ.
ಹೀಗಾಗಿಯೇ ಹಣಕ್ಕೆ ಕೊರತೆ ಇಲ್ಲದವರು ಇತ್ತೀಚಿನ ದಿನಗಳಲ್ಲಿ ಇಂತಹ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮ ಇಂತಹ ದುಬಾರಿ ಸೇವೆ ನೀಡುವ ಆಸ್ಪತ್ರೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರ ಜೊತೆಗೆ ಈ ಆಸ್ಪತ್ರೆಗಳಲ್ಲಿ ಸಿಗುವ ನುರಿತ ವೈದ್ಯರ ಸೇವೆ ಕೂಡಾ ರೋಗಿಗಳನ್ನು ದುಬಾರಿ ವೆಚ್ಚದ ಹೊರತಾಗಿಯೂ ಈ ಆಸ್ಪತ್ರೆಗಳತ್ತ ಬರುವಂತೆ ಮಾಡುತ್ತಿದೆ.


ಇದಕ್ಕೆ ಉದಾಹರಣೆ ನಟ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ. ಅವರು ತಮ್ಮ ಎರಡನೇ ಹೆರಿಗೆಯನ್ನು ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದ್ದು. ಈ ಆಸ್ಪತ್ರೆ ಕೂಡಾ ಅತ್ಯಾಧುನಿಕ ಸೇವೆಯ ಜೊತೆಗೆ ದುಬಾರಿ ಶುಲ್ಕಕ್ಕೆ ಖ್ಯಾತಿ ಹೊಂದಿರುವಂತಹದ್ದು. ಜೇಬು ತುಂಬಿರುವ ಶ್ರೀಮಂತರಿಗೆ ಹಣಕ್ಕಿಂತ ಶುಚಿತ್ವ, ಐಷಾರಾಮಿ ಸೇವೆ, ಭದ್ರತೆ ಹೆಚ್ಚು ಆಪ್ತವಾಗಿರುವುದರಿಂದ ಫೈವ್ಸ್ಟಾರ್ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ವೈದ್ಯರ ಅಭಿಪ್ರಾಯ.
ಇನ್ನು ಐಶ್ವರ್ಯಾ ರೈ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆ ಅತ್ಯಂತ ಬಿಗಿ ಭದ್ರತೆ ಹೊಂದಿದೆ ಎಂಬ ಕಾರಣಕ್ಕಾಗಿಯೇ ಹೆರಿಗೆಗಾಗಿ ಅಲ್ಲಿಗೆ ದಾಖಲಾಗಿದ್ದರು. ಅಲ್ಲಿದ್ದಷ್ಟೂ ದಿನ ಅವರಿಗೆ ಅಲ್ಲಿ ಸಿಕ್ಕ ಸೇವೆಯಿಂದ ತೃಪ್ತಿ ಹೊಂದಿದ್ದ ನಟ ಅಮಿತಾಭ್ ಬಚ್ಚನ್, ಇತ್ತೀಚೆಗೆ ತಮ್ಮ ಹರ್ನಿಯಾ ಶಸ್ತ್ರಚಿಕಿತ್ಸೆಗೂ ಸೆವೆನ್ ಹಿಲ್ಸ್ಗೆ ದಾಖಲಾಗಿದ್ದರು.