ಮಾಣಿಗಳಿಗೆ ದೆಹಲಿ ಕನ್ಯೆಯರ ಹುಡುಕಾಟ


ಬ್ರಾಹ್ಮಣ ಸಮುದಾಯದ ಗಂಡು ಮಕ್ಕಳು ಎದುರಿಸುತ್ತಿರುವ ಕನ್ಯಾಮಣಿಗಳ ಕೊರತೆಯ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ವೈವಾಹಿಕ ಸಂಬಂಧದಲ್ಲಿ ಬೆಸೆಯಲು ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ.
ಅ. 7ರಂದು ದೆಹಲಿಯಲ್ಲಿ ಮೊದಲ ಬಾರಿಗೆ ಉತ್ತರ ಮತ್ತು ದಕ್ಷಿಣ ಭಾರತದ ಬ್ರಾಹ್ಮಣ ಮುಖಂಡರ ಸಭೆಯು ಉಡುಪಿ ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ.
ಉತ್ತರ ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿಪ್ರ ಹೆಣ್ಣು ಮಕ್ಕಳು ಇದ್ದು, ಇವರನ್ನು ಇಲ್ಲಿನ ವಿಪ್ರ ಸಮಾಜದ ಯುವಕರಿಗೆ ಮದುವೆ ಮಾಡಿಕೊಡುವ ಸಂಬಂಧ ಮಾತುಕತೆಯ ಯತ್ನವೊಂದು ಆರಂಭಗೊಂಡಿದೆ. ಮುಖ್ಯವಾಗಿ ನಿರಾಶ್ರಿತರಾಗಿ ಕಾಲ ಕಳೆಯುತ್ತಿರುವ ಕಾಶ್ಮೀರಿ ಪಂಡಿತರ ಸಮುದಾಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ ಎನ್ನಲಾಗಿದ್ದು, ಅವರನ್ನು ಇಲ್ಲಿಗೆ ಕರೆತರುವ ಪ್ರಯತ್ನವೊಂದು ಸದ್ದಿಲ್ಲದೆ ಶುರುವಾಗಿದೆ. ಇದಕ್ಕೆ ಮಠಾಧೀಶರು ಕೈಜೋಡಿಸಿದ್ದಾರೆ.
ಮುಖ್ಯವಾಗಿ ಮಲೆನಾಡು ಮತ್ತು ಕರಾವಳಿ ತೀರ ಪ್ರದೇಶದ ವಿಪ್ರ ಸಮಾಜದಲ್ಲಿ ಯುವಕರಿಗೆ ಸಮುದಾಯದ ವಧುಗಳು ಸಿಗುತ್ತಿಲ್ಲ. ಹೆಣ್ಣು-ಗಂಡು ಅನುಪಾತದ ಕೊರತೆ ಒಂದೆಡೆಯಾದರೆ, ಬಹುತೇಕ ಎಲ್ಲ ಹೆಣ್ಣು ಮಕ್ಕಳು ಉನ್ನತ ವ್ಯಾಸಂಗ ಮಾಡುತ್ತಿದ್ದು, ಸಾಮಾನ್ಯ ಮಟ್ಟದ ಶಿಕ್ಷಣ ಪಡೆದ ಯುವಕರನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾರೆ. ಜೊತೆಗೆ ನಗರದ ವ್ಯಾಮೋಹದಿಂದಾಗಿ ಗ್ರಾಮೀಣ ಪ್ರದೇಶದ ಯುವಕರಿಗಂತೂ 40 ಕಳೆದರೂ ಕಂಕಣ ಭಾಗ್ಯವೇ ಇಲ್ಲವಾಗಿದೆ. ಹೀಗಾಗಿ ಯುವಕರು ಕೂಡ ಹಳ್ಳಿಯಲ್ಲಿ ಉಳಿಯಲು ಒಪ್ಪುತ್ತಿಲ್ಲ. ಆದರೆ ಸಮಾಜದ ಶೇ. 50ಕ್ಕಿಂತ ಹೆಚ್ಚು ಜನರು ಕೃಷಿ ಜೀವನ ನಡೆಸುತ್ತಿದ್ದು, ಈ ಬೆಳವಣಿಗೆಯಿಂದಾಗಿ ಹಳ್ಳಿಗಳು ವೃದ್ದಾಶ್ರಮಗಳಾಗುತ್ತಿವೆ.
ಇತ್ತೀಚೆಗೆ ಶಿವಮ್ಗದಲ್ಲಿ ನಡೆದ ವಿಪ್ರಜಾಗೃತಿ ಸಮಾವೇಶದಲ್ಲಿ ಕೂಡ ಸಮಾಜದ ಗಂಡು ಮಕ್ಕಳು ಎದುರಿಸುತ್ತಿರುವ ವೈವಾಹಿಕ ಜೀವನದ ಸಮಸ್ಯೆ ಕುರಿತು ಚರ್ಚಿಸಲಾಗಿತ್ತು. ಇದಕ್ಕೆ ಪರಿಹಾರ ಕಂಡು ಕೊಳ್ಳುವ ಬಗ್ಗೆ ಕೂಡ ಗಂಭೀರ ಚಿಂತನೆ ನಡೆಸಲಾಗಿತ್ತು. ಇದೀಗ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾ, ಜಿಲ್ಲಾ ವಿಪ್ರ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನಗರದ ಕೃಷ್ಣಮೂರ್ತಿ ಬಾಯರ್ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಯುವಕರ ತಂಡ ಇತ್ತೀಚೆಗೆ ಮೈಸೂರಿನಲ್ಲಿ ಚಾರ್ತುಮಾಸ ಕುಳಿತಿರುವ ಉಡುಪಿ ಪೇಜಾವರ ಅಧೋಕ್ಷ ಮಠದ ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರನ್ನು ಭೇಟಿ ಮಾಡಿ, ಸಮಸ್ಯೆ ಕುರಿತು ಚರ್ಚೆ ನಡೆಸಿ, ಶ್ರೀಗಳ ಸಹಕಾರವನ್ನು ಕೋರಿದ್ದರು.
ಈ ಸಂದರ್ಭದಲ್ಲಿ ಉತ್ತರ ಭಾರತದಲ್ಲಿರುವ ವಧುವಿನ ಪೋಷಕರು ಹಾಗೂ ಬ್ರಾಹ್ಮಣ ಸಮಾಜದ ಮುಖಂಡರ ಜೊತೆಗೆ ಚರ್ಚಿಸಿ ಉತ್ತರ ಹಾಗೂ ದಕ್ಷಿಣ ಭಾರತದ ನಡುವೆ ಸಂಬಂಧ ಬೆಸೆಯುವ ಕುರಿತು ಮಾತುಕತೆ ನಡೆಸಲಾಯಿತು. ಇದಕ್ಕೆ ಶ್ರೀಗಳು ಪೂರಕವಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಚರ್ಚೆಯ ಲವಾಗಿ ಅ. 7ರಂದು ನವದೆಹಲಿಯ ವಿದ್ಯಾಪೀಠದಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಬ್ರಾಹ್ಮಣ ಸಮಾಜದ ಮುಖಂಡರ ಸಭೆಗಳನ್ನು ಶ್ರೀಗಳ ಸಾನ್ನಿಧ್ಯದಲ್ಲಿ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಸಮಸ್ಯೆ ಬಗೆಹರಿಸುವ ಕುರಿತು ವಿವಿಧ ಸಮಾನ ಮನಸ್ಕ ಮಠಾಧೀಶರನ್ನು ಸಂಪರ್ಕಿಸುವ ಜವಾಬ್ದಾರಿಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಮಾ.ಸ. ನಂಜುಂಡಸ್ವಾಮಿ ಅವರಿಗೆ ವಹಿಸಲಾಗಿದೆ.
ಅ. 7ರಂದು ನಡೆಯುವ ಈ ಸಭೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವವರು ಮಾ.ಸ. ನಂಜುಂಡಸ್ವಾಮಿ (ಮೊ. 9448721572) ಸಾಗರ ಅಥವಾ ಕೃಷ್ಣಮೂರ್ತಿ ಬಾಯರ್ ನಗರ (ಮೊ. 9480566790) ಇವರನ್ನು ಸಂಪರ್ಕಿಸಬಹುದಾಗಿದೆ. ಕಳೆದ ಎರಡು ವರ್ಷಗಳಿಂದ ಶೃಂಗೇರಿ ಶ್ರೀಮಠದ ನೇತೃತ್ವದಲ್ಲಿ ಹೊರ ರಾಜ್ಯದಲ್ಲಿರುವ ಬ್ರಾಹ್ಮಣ ಕನ್ಯೆಯರನ್ನು ಸಂಬಂಧ ಮಾಡಿಕೊಳ್ಳುವ ಕುರಿತಂತೆ ಮುಂದಡಿ ಇಡಬೇಕು ಎಂಬ ಆಗ್ರಹ ಭಕ್ತರಿಂದ ಕೇಳಿ ಬಂದಿತ್ತು. ಇದರ ನೇತೃತ್ವ ವಹಿಸಲು ಮಠದ ಮುಖ್ಯಸ್ಥರು ಕೂಡ ಒಪ್ಪಿದ್ದರು.