ಡೋಂಟ್ ವರಿ, ಸೆಪ್ಟಂಬರ್ನಲ್ಲಿ ಉತ್ತಮ ಮಳೆಯಾಗಲಿದೆ


ಮಳೆ ಮಾರುತಗಳಿಗೆ ತಡೆಯಾಗಿರುವ ಎಲ್ನಿನೋ ಹವಾಮಾನದ ಸಾಧ್ಯತೆಗಳು ಕ್ಷೀಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟಂಬರ್ ತಿಂಗಳಲ್ಲಿ ದೇಶದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಕೃಷಿ ಇಲಾಖೆ ಆಶಾವಾದ ವ್ಯಕ್ತಪಡಿಸಿದೆ. ದೇಶದಲ್ಲಿ ಮುಂಗಾರು ಮಳೆ ವ್ಯಾಪಕವಾಗಿ ಸುರಿಯದಿರುವುದರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಬರಗಾಲಕ್ಕೆ ಈಡಾಗಿದ್ದು, ಇದೀಗ ಈ ಹಿಂದಿನ ಎಲ್ಲ ಮುನ್ಸೂಚನೆಗೆ ವ್ಯತಿರಿಕ್ತವಾಗಿ ಮುಂದಿನ ತಿಂಗಳಲ್ಲಿ ಮಳೆ ಉತ್ತಮಗೊಳ್ಳುವ ನಿರೀಕ್ಷೆ ಇದೆ ಎಂಬ ಕೃಷಿ ಖಾತೆಯ ಮುನ್ಸೂಚನೆ, ದೇಶದ ರೈತರ ಮೊಗದಲ್ಲಿ  ಸಂತಸ ಮೂಡಿಸಿದೆ.
ಆಗಸ್ಟ್  ತಿಂಗಳಾರಂಭದಲ್ಲಿ ಭಾರತೀಯ ಹವಾಮಾನ ಇಲಾಖೆ ಶಾಂತ ಸಾಗರದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚುತ್ತಿರುವುದರಿಂದಾಗಿ ಎಲ್ನಿನೋ ಹವಾಗುಣದ ಪರಿಣಾಮವಾಗಿ ಸೆಪ್ಟಂಬರ್ನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಮುನ್ಸೂಚನೆ ನೀಡಿತ್ತು. ಆದರೆ ಇಲಾಖೆಯ ಹೊಸ ಮುನ್ಸೂಚನೆಯ ಪ್ರಕಾರ, ಶಾಂತ ಸಾಗರದಲ್ಲಿನ ಉಷ್ಣತೆಯ ಪ್ರಮಾಣ ಸಾಮಾನ್ಯವಾಗಿದ್ದು, ಎಲ್ನಿನೋ ಭೀತಿಯ ಛಾಯೆ ನಿವಾರಣೆಯಾಗಿದೆ. ಸೆಪ್ಟಂಬರ್ನಲ್ಲಿ  ಈ ಹಿಂದಿನ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದಿದ್ದಾರೆ ಕೃಷಿ ಖಾತೆಯ ಕಾರ್ಯದರ್ಶಿ ಆಶೀಷ್ ಬಹುಗುಣ.
ಪ್ರಸಕ್ತ ಮುಂಗಾರು ಋತುವಿನಲ್ಲಿ ಈ ವರೆಗೆ ದೇಶದಲ್ಲಿ  ಶೇ. 14ರಷ್ಟು  ಕಡಿಮೆ ಮಳೆ ಸುರಿದಿದೆ. ಮಳೆಯ ಕೊರತೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಗುಜರಾತ್ನಲ್ಲಿ ಬಿತ್ತನೆ ಕಾರ್ಯಕ್ಕೆ ಭಾರೀ ಅಡಚಣೆ ಎದುರಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದಲ್ಲಿ  34.2 ದಶಲಕ್ಷ  ಹೆಕ್ಟೇರ್ಗಳಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದ್ದರೆ, ಈ ಬಾರಿ 32.9 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಒಟ್ಟಾರೆಯಾಗಿ ಮಳೆಯ ಕೊರತೆಯಿಂದಾಗಿ ಬಿತ್ತನೆ ಪ್ರದೇಶದಲ್ಲಿ ಶೇ. 5ರಷ್ಟು ಇಳಿಕೆಯಾಗಿದೆ. ಮುಂದಿನ ತಿಂಗಳು ದೇಶದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇರುವುದರಿಂದ ಈ ಕೊರತೆ ಸಾಧ್ಯವಾದಷ್ಟು ಮಟ್ಟಿಗೆ ತುಂಬುವ ಆಶಾಭಾವವಿದೆ.
ಸದ್ಯ ದೇಶದಲ್ಲಿ ಮಳೆ ತನ್ನ ತೀವ್ರತೆಯನ್ನು ಕಂಡುಕೊಳ್ಳುತ್ತಿರುವುದರಿಂದಾಗಿ ದೇಶದ ಹಲವೆಡೆ ಕೃಷಿ ಕಾರ್ಯಗಳು ಚುರುಕುಗೊಂಡಿವೆ. ಕಳೆದ ವರ್ಷ ಜುಲೈ-ಜೂನ್ ಅವಧಿಯಲ್ಲಿ 257.44 ದಶಲಕ್ಷ ಟನ್ಗಳಷ್ಟು ಆಹಾರ ಉತ್ಪಾದನೆಯಾಗಿದ್ದು, ಈ ಬಾರಿ ಉತ್ಪಾದನೆಯ ಪ್ರಮಾಣದಲ್ಲಿ ಕೊಂಚ ಕುಸಿತ ಕಂಡು ಬರಲಿದೆ ಎಂಬುದು ಇಲಾಖೆಯ ಹೇಳಿಕೆ.