ವಿಶ್ವ ಪಾರಂಪರಿಕ ಪಟ್ಟಿಗೆ ಪಶ್ಚಿಮ ಘಟ್ಟ ಸೇರ್ಪಡೆಯೂ... ರಾಜ್ಯ ಸರಕಾರದ ವಿರೋಧವೂ...


ಅಪೂರ್ವ ಹಾಗೂ ಅಮೂಲ್ಯವಾದ ಸಸ್ಯ ಸಂಪತ್ತು ಹಾಗೂ ಜೀವ ವೈವಿಧ್ಯವಿರುವ ಪಶ್ಚಿಮ ಘಟ್ಟ ಶ್ರೇಣಿಯ 39 ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ರಷ್ಯಾದ ಪೀಟರ್ಸ್ಬರ್ಗ್ನಲ್ಲಿ ನಡೆದ ವಿಶ್ವ ಪಾರಂಪರಿಕ ಸಮಿತಿ (ಯುನೆಸ್ಕೊ) ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಲ್ಲಿ ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ ಸೇರಿದಂತೆ 5 ವನ್ಯಧಾಮಗಳು ಸೇರಿವೆ. ಭಾರತೀಯ ವನ್ಯಜೀವಿ ಸಂಸ್ಥೆಯ ಡೀನ್ ಡಾ॥ ವಿನೋದ್ ಬಿ. ಮಾಥುರ್, ಸಮ್ಮೇಳನದಲ್ಲಿ ಭಾಗವಹಿಸಿದ್ದ ಭಾರತದ ನಿಯೋಗದಲ್ಲಿದ್ದರು. 17 ರಾಷ್ಟ್ರಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಪಶ್ಚಿಮಘಟ್ಟ ಪ್ರದೇಶದಲ್ಲಿರುವ ನಿವಾಸಿಗಳ ವ್ಯಾಪಕ ವಿರೋಧದ ನಡುವೆಯೂ ವಿಶ್ವ ಪಾರಂಪರಿಕ ಸಮಿತಿ ಕರ್ನಾಟಕ ರಾಜ್ಯದ 10 ಪ್ರದೇಶಗಳು ಸೇರಿದಂತೆ ಭಾರತದ ಒಟ್ಟು 39 ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಿದೆ.
ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ ವನ್ಯಧಾಮ ಹಾಗೂ ಪಡಿನಾಲ್ಕುನಾಡು ಕ್ಲಸ್ಟರ್ ಮತ್ತು ಜಿಲ್ಲೆಗೆ ಒತ್ತಿಕೊಂಡಿರುವ ಕೇರಳದ ಕೆರಟ್ಟಿ ಅಭಯಾರಣ್ಯ ಸೇರಿದಂತೆ 652 ಚದರ ಕಿ.ಮೀ. ಅರಣ್ಯ ಪ್ರದೇಶ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಇದರೊಂದಿಗೆ ಕುದುರೆಮುಖ ವನ್ಯಧಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ಅಭಯಾರಣ್ಯ, ಸೋಮೇಶ್ವರ ಮೀಸಲು ಅರಣ್ಯ, ಆಗುಂಬೆ ಮತ್ತು ಬಾಲಹಳ್ಳಿಯ ಮೀಸಲು ಅರಣ್ಯದ 881 ಚದರ ಕಿ.ಮೀ. ಅರಣ್ಯ ಪ್ರದೇಶ ಕೂಡ ಈ ತಾಣಗಳ ಪಟ್ಟಿಗೆ ಸೇರಿಸಲ್ಪಟ್ಟಿದೆ.
2002ರಲ್ಲೇ ಪ್ರಸ್ತಾವನೆ: 
ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವಂತೆ ಅಂದಿನ ಕೇಂದ್ರ ಸರಕಾರ 2002ರಲ್ಲೇ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಿತ್ತು. ಪಶ್ಚಿಮಘಟ್ಟ ಪ್ರದೇಶದ ವೃಕ್ಷ ಸಂಪತ್ತು ಮತ್ತು ಅಮೂಲ್ಯ ಜೀವವೈವಿಧ್ಯತೆಯ ಸಿರಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೊಡಗಿನ 5 ಅರಣ್ಯ ಪ್ರದೇಶಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆಯೆಂದು ಹೇಳಲಾಗುತ್ತಿದೆ.
ವಿಶ್ವ ಪಾರಂಪರಿಕ ಸಮ್ಮೇಳನದ ಮಾರ್ಗಸೂಚಿ 9 ಮತ್ತು 10ರ ಅನ್ವಯ ಈ ನಿರ್ಧಾರ ಕೈಗೊಂಡಿದ್ದು, ಮಾರ್ಗಸೂಚಿ 9ರ ಅನ್ವಯ ಹಾಲಿ ಇರುವ ಪರಿಸರ ಮತ್ತು ಜೀವವೈವಿಧ್ಯಗಳ ಮೌಲ್ಯಮಾಪನ ಮತ್ತು ಭೌಗೋಳಿಕ ಪ್ರದೇಶದ ಶುದ್ಧಜಲ, ಕರಾವಳಿ ಮತ್ತು ಮತ್ಸ್ಯ ವೈವಿಧ್ಯತೆ, ಸಸ್ಯ ಮತ್ತು ಪ್ರಾಣಿ ಸಂಕುಲದ ಅಭಿವೃದ್ಧಿಯ ಉದ್ದೇಶಗಳನ್ನು ಹೊಂದಿದೆ. ಮಾರ್ಗಸೂಚಿ 10ರ ಅನ್ವಯ ಈ ಪ್ರದೇಶದಲ್ಲಿರುವ ಪ್ರಮುಖ ಆವಾಸ ಸ್ಥಾನಗಳಲ್ಲಿ ಜೀವ ವೈವಿಧ್ಯತೆ ಸಂರಕ್ಷಣೆ ಹಾಗೂ ಅಪಾಯದ ಅಂಚಿನಲ್ಲಿರುವ ಜಾಗತಿಕ ಮೌಲ್ಯ ಹೊಂದಿರುವ ತಳಿಗಳ ವೈಜ್ಞಾನಿಕ ಸಂರಕ್ಷಣೆಯ ಉದ್ದೇಶ ಹೊಂದಲಾಗಿದೆ.
ಭೀತಿಯ ಅಗತ್ಯವಿಲ್ಲ: 
ಆದರೆ, ಈ ಪ್ರಸ್ತಾವನೆಗೆ ರಾಜ್ಯ ಸರಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾರಣ ಅಭಿವೃದ್ಧಿಗೆ ತೊಂದರೆ ಎಂಬುದು. ಪರಿಸರ ಉಳಿವಿನಲ್ಲೂ ರಾಜಕೀಯ ನುಸುಳುತ್ತಿದೆ. ಅಭಿವೃದ್ಧಿಗೆ ಕುಂಠಿತ ಎಂಬ ಆರೋಪ ಭುಗಿಲೆದ್ದಿದೆ. ಕರ್ನಾಟಕ ರಾಜ್ಯ ವ್ಯಾಪ್ತಿಯ ಕಾವೇರಿ, ತುಂಗಾ, ಭದ್ರಾ, ನೇತ್ರಾವತಿ ಅಲ್ಲದೆ, ಅವುಗಳ ಉಪ ನದಿಗಳ ಜೀವಸೆಲೆಯಾಗಿರುವ ಪಶ್ಚಿಮಘಟ್ಟ ಪ್ರದೇಶವು ಲಕ್ಷಾಂತರ ಎಕರೆ ಭೂಮಿಗೆ ನೀರು ಒದಗಿಸುತ್ತಿದ್ದು, ಕೋಟ್ಯಂತರ ಜನರ ದಾಹವನ್ನು ತಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಪಶ್ಚಿಮಘಟ್ಟ ಪ್ರದೇಶದ ಸಸ್ಯ ಸಿರಿ ಹಾಗೂ ಸಮೃದ್ಧತೆಯನ್ನು ಗುರುತಿಸಿ ಈ ಪ್ರದೇಶಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಇವುಗಳೆಲ್ಲಾ ಇದುವರೆಗೆ ಸಂರಕ್ಷಿಸಿರುವ ಕ್ರಮಕ್ಕೆ ಸಿಕ್ಕ ಹೆಗ್ಗಳಿಕೆ ಎಂದು ತಿಳಿಯಬೇಕು.
ಉದ್ದೇಶಿತ ಯೋಜನೆಯಿಂದ ಜನ ಸಾಮಾನ್ಯರ ಯಾವುದೇ ಹಕ್ಕುಗಳು ಮೊಟಕಾಗುವುದಿಲ್ಲ. ಪಾರಂಪರಿಕ ತಾಣದ ಪಟ್ಟಿಗೆ ಅಭಯಾರಣ್ಯ, ಮೀಸಲು ಮತ್ತು ರಕ್ಷಿತಾರಣ್ಯಗಳನ್ನು ಮಾತ್ರ ಸೇರ್ಪಡೆಗೊಳಿಸಲಾಗಿದ್ದು, ಹೊಸದಾಗಿ ಯಾವುದೇ ಜಾಗ ಇಲ್ಲವೇ ಖಾಸಗಿ ಒಡೆತನದ ಜಮೀನುಗಳು ಇದರ ವ್ಯಾಪ್ತಿಗೆ ಒಳಪಡುವುದಿಲ್ಲ. ಪಶ್ಚಿಮ ಘಟ್ಟ ಪ್ರದೇಶ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರ್ಪಡೆಗೊಂಡಿರುವುದು ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದೆ. ವರ್ತಮಾನ ಮತ್ತು ಭವಿಷ್ಯತ್ನಲ್ಲಿ ಸಸ್ಯ ಹಾಗೂ ಅಮೂಲ್ಯ ಜೀವ ಸಂಕುಲವನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ನಾವು ಮರೆಯಬಾರದು.
ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಯೋಜನೆಗಳನ್ನು ಯುನೆಸ್ಕೋ ನೇರವಾಗಿ ಅನುಷ್ಠಾನಗೊಳಿಸುವುದಿಲ್ಲ, ಬದಲಾಗಿ ಆ ಯೋಜನೆಗಳಿಗೆ ಅಗತ್ಯವಿರುವ ನೆರವನ್ನು ಕೆಲವು ಷರತ್ತಿಗೊಳಪಟ್ಟು ಸರಕಾರಗಳಿಗೆ ನೀಡಲಿದೆ ಅಷ್ಟೇ.