ಮಾತ್, ಮಾತಲಿ...


ಪ್ರಪಂಚದಲ್ಲಿ ಅದೆಷ್ಟೋ ಜೀವ ಕೋಟಿಗಳಿವೆ. ಅವುಗಳಲ್ಲಿ ಮಾನವನೂ ಒಬ್ಬ. ಆದರೆ ಉಳಿದ ಜೀವಿಗಳಿಗಿಂತ ಮಾನವ ಭಿನ್ನವಾಗಿದ್ದಾನೆ. ಆತನಲ್ಲಿ ಅಗಾಧವಾದ ಬುದ್ಧಿವಂತಿಕೆಯಿದೆ, ಆಳವಾದ ಚಿಂತನೆಯಿದೆ. ಭವಿಷ್ಯದ ಸುಂದರ ಕಲ್ಪನೆಯಿದೆ. ಆಸೆ-ಆಕಾಂಕ್ಷೆಗಳು, ಅಭಿಪ್ರಾಯಗಳು, ಸುಖ-ದು:ಖಗಳು ಮೊದಲಾದ ಸಹಜ ಗುಣಗಳನ್ನು ಪರಸ್ಪರ ಹಂಚಿಕೊಂಡು ವಿಚಾರ ವಿನಿಮಯ ಮಾಡುವುದಕ್ಕಾಗಿ ಭಾಷೆಯನ್ನು ಕಂಡು ಹಿಡಿದ.
ಮನುಷ್ಯ ಇದುವರೆಗೆ ಅದೆಷ್ಟೋ ಸಂಶೋಧನೆಗಳನ್ನು ಮಾಡಿದ್ದಾನೆ. ಚಂದ್ರಲೋಕ, ಮಂಗಳ ಮೊದಲಾದ ಗ್ರಹಗಳಿಗೆ ಪ್ರಯಾಣ ಬೆಳೆಸಿದ್ದಾನೆ. ದೂರವಾಣಿ, ದೂರದರ್ಶನ, ಕಂಪ್ಯೂಟರ್, ಇಂಟರ್ನೆಟ್, ತದ್ರೂಪ ಸೃಷ್ಟಿ... ಮೊದಲಾದ ಸಾಧನೆಗಳನ್ನು ಕಂಡು ಹಿಡಿದಿದ್ದಾನೆ. ಈ ಎಲ್ಲದಕ್ಕಿಂತಲೂ ಮಿಗಿಲಾದ ಮಹತ್ಸಾಧನೆಯೆಂದರೆ ಭಾಷೆಯನ್ನು ಸಂಶೋಧಿಸಿದುದು. ಭಾಷೆಗೆ ಸಮಾನವಾದ ಸಂಶೋಧನೆ ಇನ್ನೊಂದಿಲ್ಲ ಎನ್ನಬಹುದು. ಎಲ್ಲ ಆವಿಷ್ಕಾರಗಳಿಗೂ ಭಾಷೆಯೇ ಮೂಲ, ಅದುವೇ ತಾಯಿ.
ಭಾವನೆಗಳ ವಿನಿಮಯ ಮಾಧ್ಯಮವಾಗಿ ಜನ್ಮ ತಾಳಿದ ಭಾಷೆ ಮನುಕುಲದ ಮಹಾಸಂಪತ್ತು. ಇಂದು ಪ್ರಪಂಚದಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಭಾಷೆಗಳು ಚಲಾವಣೆಯಲ್ಲಿವೆ ಎಂಬುದು ವಿದ್ವಾಂಸರ ಅಭಿಪ್ರಾಯ. ಈ ಎಲ್ಲ ಭಾಷೆಗಳೂ ಒಂದೇ ಕಾಲದಲ್ಲಿ ಜನ್ಮ ತಾಳಿದವಲ್ಲ. ಬಹಳ ಹಿಂದೆ ಕೆಲವೇ ಭಾಷೆಗಳಿದ್ದವು, ಕಾಲಾನುಕ್ರಮದಲ್ಲಿ ಶಾಖೋಪಶಾಖೆಗಳಾಗಿ ಕವಲೊಡೆಯುವ ನಿರಂತರ ಪ್ರಕ್ರಿಯೆಗನುಗುಣವಾಗಿ ಆ ಭಾಷೆಗಳಿಂದ ಇಂದಿನ ಸಾವಿರಾರು ಭಾಷೆಗಳು ರೂಪು ತಾಳಿವೆ ಎಂದು ಅಭಿಪ್ರಾಯ ಪಡುತ್ತಾರೆ ಭಾಷಾ ವಿಜ್ಞಾನಿಗಳು.
"ಇದು ಮಂಧಂ ತಪಮ: ಕೃತ್ಸ್ನಂ ಜಾಯೇತ ಭುವನ್ತ್ರಯಮ್
ಯದಿ ಶಬ್ದಾಹ್ವಯಂ ಜ್ಯೋತಿ ಸಂಸಾರಾನ್ನ ದೀಪ್ಯತೆ"
ಎಂಬುದಾಗಿ ಭಾಷೆಯನ್ನು ಬೆಳಕಿಗೆ ಹೋಲಿಸಿ ಅದರ ಮಹತ್ವವನ್ನು ಲೋಕಕ್ಕೆ ಸಾರಿದ್ದಾನೆ ದಂಡಿ.
ಮಾತಿನ ಮಹತ್ವವನ್ನು ಬಲ್ಲ ಅನುಭವಿ ಅಲ್ಲಮ ಪ್ರಭು "ಮಾತೆಂಬುದು ಜ್ಯೋತಿರ್ಲಿಂಗ" ಎಂದು ಹೊಗಳಿದ್ದಾನೆ. "ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದು ಅಹುದು ಎನಬೇಕು" ಎನ್ನುವ ಮೂಲಕ ಬಸವಣ್ಣ ಮೊದಲಾದ ಶಿವಶರಣರು ಭಾಷೆಗೆ ನ್ನತ ಸ್ಥಾನ ಕೊಟ್ಟಿದ್ದಾರೆ. "ಮಾತೇ ಮಾಣಿಕ್ಯ" ಎಂದಿದ್ದಾನೆ ಸರ್ವಜ್ಞ. ಭಾಷೆಯಿಂದಲೇ ಮನುಜಕುಲದ ಮುನ್ನಡೆಯಾಯಿತು ಎಂಬುದು ಪರಮ ಸತ್ಯ.
ಭಾಷೆಗಳಲ್ಲಿ ಹಲವು ವರ್ಗಗಳಿವೆ. ಒಂದು ಮೂಲ ಭಾಷೆಯಿಂದ ಟಿಸಿಲೊಡೆದ ಭಾಷೆಗಳೆಲ್ಲ ಒಟ್ಟು ಸೇರಿ ಒಂದು ಭಾಷಾ ಕುಟುಂಬ ಎನಿಸಿಕೊಳ್ಳುತ್ತದೆ. ನಮ್ಮ ದ್ರಾವಿಡ ಭಾಷಾ ಪರಿವಾರವೂ ಇಂಥ ಭಾಷಾ ಕುಟುಂಬಗಳಲ್ಲಿ ಒಂದು. ಕನ್ನಡ ಭಾಷೆ, ತೆಲುಗು, ಮಲಯಾಳ, ತುಳು-ಪ್ರಧಾನವಾದ ದ್ರಾವಿಡ ಭಾಷೆಗಳು. ಭಾಷೆಗಳ ಕಲಿಕೆಯಲ್ಲಿ ಆಲಿಸುವಿಕೆ, ಮಾತನಾಡುವಿಕೆ, ಓದುವಿಕೆ ಮತ್ತು ಬರೆಯುವಿಕೆ ಎಂಬ ನಾಲ್ಕು ಪ್ರಧಾನ ಕೌಶಲಗಳಿವೆ. ಇವುಗಳಲ್ಲಿ ಆಲಿಸುವಿಕೆ ಮತ್ತು ಮಾತನಾಡುವಿಕೆ ಎಂಬ ಎರಡು ಕೌಶಲಗಳನ್ನು ಸುಲಭವಾಗಿ ಬೆಳೆಸಲು ಸಾಧ್ಯವಿದೆ. ಅವುಗಳಿಗೆ ವಿಶೇಷ ಪರಿಶ್ರಮ ಅತ್ಯವಿಲ್ಲ. ಅವು ತಾವಾಗಿ ಸಿದ್ಧಿಸುತ್ತವೆ. ಸುತ್ತುಮುತ್ತಲಿನ ಪರಿಸರ ಹಾಗೂ ಒಡನಾಟಗಳಿಂದ ಅವು ಕೈಗೂಡುತ್ತವೆ. ಆಲಿಸುವಿಕೆಯಲ್ಲಿ ತೊಡಕಿಲ್ಲದಿದ್ದರೆ ಮಾತ್ರ ಮಾತುಗಾರಿಕೆ ಸುಲಭವೆನಿಸುತ್ತದೆ.