ಓದೋಣ ಬನ್ನಿ......,


ಓದುವಿಕೆ ಮತ್ತು ಬರೆಯುವಿಕೆ ಅಷ್ಟು ಸುಲಭದಲ್ಲಿ ಸಿದ್ಧಿಸಲಾರವು. ಅವಕ್ಕೆ ತಕ್ಕ ಪರಿಶ್ರಮ ಅಗತ್ಯ. ಓದುವಿಕೆ ಇಲ್ಲದೆ ಬರೆಯುವಿಕೆ ಅಸಾಧ್ಯ. ಒಬ್ಬ ವ್ಯಕ್ತಿಯಿಂದ ಉತ್ತಮ ಲೇಖನವೊಂದು ರಚನೆಯಾಗಬೇಕಾದರೆ ಆತ ಹಲವು ಆಕರ ಗ್ರಂಥಗಳನ್ನು ಓದಿ ಮಾಹಿತಿ ಸಂಗ್ರಹ ಮಾಡಲೇ ಬೇಕು. ಹಾಗಾಗಿ ಓದುವಿಕೆಗೆ ಬಹಳ ಮಹತ್ವವಿದೆ.
ವಿದ್ಯಾರ್ಥಿಗಳಲ್ಲಿ ಓದುವಿಕೆ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದು. ಅದಕ್ಕಾಗಿ ಆತನಲ್ಲಿ ತಾಳ್ಮೆ, ಸಹನೆ ಇರಬೇಕು. "ಸಹನೆ ವಜ್ರದ ಕವಚ' ಎಂಬ ಡಿ.ವಿ.ಜಿ.ಯವರ ಮಾತು ಬರಲೇ ಬಾರದು. ಕೋಪದ ನಟನೆ ಮಾತ್ರ ಆತ ಮಾಡಬಹುದು. ಉತ್ತಮ ಶಿಕ್ಷಕನ ಮಾರ್ಗದರ್ಶನದಿಂದ ಮಗು ಓದುವಿಕೆಯಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬಹುದು.
ತರಗತಿಯ ಪಾಠದ ವೇಳೆಯಲ್ಲಿ ಮಾತ್ರವಲ್ಲ, ಬಿಡುವಿನ ವೇಳೆಯಲ್ಲಿಯೂ ವಿದ್ಯಾರ್ಥಿಗಳನ್ನು ಗ್ರಂಥಾಲಯಕ್ಕೋ, ವಾಚನಾಲಯಕ್ಕೋ ಕರೆದೊಯ್ದು ಚಿಕ್ಕಪುಟ್ಟ ಪುಸ್ತಕಗಳನ್ನು ಕೊಟ್ಟು ಓದಿಸಬಹುದು. ಓದಿದ ವಿಷಯದ ಮೇಲೆ ಪ್ರಶ್ನೆಗಳನ್ನು ಕೇಳಬೇಕು. ಉತ್ತಮವಾದ ಉತ್ತರಕ್ಕೆ ಮೆಚ್ಚುಗೆ ಸೂಚಿಸಬೇಕು. ತಪ್ಪಿದರೆ ತಾಳ್ಮೆಯಿಂದ ತಿದ್ದಬೇಕು. ತರಗತಿಯ ಕೋಣೆಯೊಳಗಡೆಯೇ ವಿವಿಧ ಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು, ವಿಶೇಷಾಂಕಗಳನ್ನು ಇರಿಸಿ ಓದುವ ಮೂಲೆಯೊಂದನ್ನು ನಿರ್ಮಾಣ ಮಾಡಬಹುದು. ಅದನ್ನು ನಿಭಾಯಿಸುವ ಹೊಣೆಯನ್ನು ಮಕ್ಕಳಿಗೇ ನೀಡುವುದು ಸೂಕ್ತ. ಆಗ ಅವರಿಗೆ ಜವಾಬ್ದಾರಿಯೂ ಅಂಟಿಕೊಳ್ಳುತ್ತದೆ. ಓದಿದ ವಿಚಾರಗಳನ್ನು ಸ್ವತಂತ್ರವಾಗಿ ಬರೆಯಲು ಅಗತ್ಯವುಳ್ಳ ಸೂಚನೆಗಳನ್ನು ಶಿಕ್ಷಕರು ನೀಡಬೇಕು. ಓದು-ಬರಹಗಳ ಕುರಿತು ಚಿಕ್ಕಪುಟ್ಟ ವಿಮರ್ಶೆಗಳನ್ನೂ ಮಾಡಿಸಬೇಕು. ಮಾತ್ರವಲ್ಲ, ವಿಷಯಗಳನ್ನು ಮನದಟ್ಟಾಗುವಂತೆ ತಿಳಿಯ ಹೇಳಿ ಮಾರ್ಗದರ್ಶನ ಮಾಡಬೇಕು.
ಇಷ್ಟೆಲ್ಲ ಕೆಲಸಗಳನ್ನು ಮಾಡಬೇಕಾದರೆ ಶಿಕ್ಷಕನಾದವನು ಮೊದಲು ಓದಬೇಕು. ಓದಿ ಅರ್ಥೈಸಿಕೊಳ್ಳಬೇಕು. ತನ್ಮೂಲಕ ಜ್ಞಾನವಂತನಾಗಿರಬೇಕು. ನಂತರ ವಿದ್ಯಾರ್ಥಿಗಳನ್ನು ಓದಿಸಿ, ಸುಸಂಸ್ಕೃತರನ್ನಾಗಿಸಬೇಕು. ಆದರೆ ಇಂದು ಅದೆಷ್ಟೋ ಮಂದಿ ಶಿಕ್ಷಕರು ಗ್ರಂಥಗಳ ಅವಲೋಕನವನ್ನು ಮಾಡದೇ ಮಗುವಿಗೆ ಬೋಧಿಸುವ ಕೆಲಸ ಮಾಡುತ್ತಿರುವುದು ಕಂಡು ಬರುತ್ತಿದೆ. ಸೋಮಾರಿತನವೆಂಬುದು ಶಿಕ್ಷಕರ ಬಳಿ ಸುಳಿಯಲೂ ಬಾರದು. ಸದಾಕಾಲ ಕುರ್ಚಿಗಂಟಿಕೊಂಡೇ ಇದ್ದು ಮಕ್ಕಳನ್ನು ವೈರಿಗಳಂತೆ ಕಾಣುವ ಶಿಕ್ಷಕರಿಗೆ ಇಂಥ ವಿಚಾರಗಳು ಅಪಥ್ಯವಾಗುವುದರಲ್ಲಿ ಸಂದೇಹವಿಲ್ಲ. "ಓದಿ ಓದಿ ಓದಿಸಿದ ಓಜನಿಗೆ ಚಟ್ಟಗಟ್ಟಿಗನೆನೆ ಹೆಮ್ಮೆ" ನಾಡೋಜ ಕವಿ ಕಯ್ಯರರ ಈ ವಾಣಿ ಸಾರ್ಥಕವಾಗುವಲ್ಲಿ ಎಲ್ಲ ಶಿಕ್ಷಕರ ಪ್ರಯತ್ನವೂ ನಿರಂತವಾಗಿರಬೇಕಲ್ಲವೇ?
"ಓದದ ಬಾಯಿ ಬಿಲದ ಬಾಯಿ' ಎಂಬ ಕವಿವಾಣಿ ಓದುವಿಕೆ ಇಲ್ಲದವನ ಜೀವನವೇ ವ್ಯರ್ಥವೆಂಬುದನ್ನು ಸೂಚಿಸುವಂತಿದೆ. ಎಲ್ಲರೂ ಚೆನ್ನಾಗಿ ಓದಬೇಕು. ಉತ್ತಮ ಪುಸ್ತಕಗಳ ಓದುವಿಕೆಯಿಂದ ಉತ್ತಮ ಗುಣಗಳೂ ಸಿದ್ಧಿಸುತ್ತವೆ. ತನ್ಮೂಲಕ ವ್ಯಕ್ತಿ ದೈವತ್ವಕ್ಕೇರಬಲ್ಲನು. ಸಮಾಜಕ್ಕೆ ಉತ್ತಮ ಗುರುವೂ ಆಗಬಲ್ಲನು. ಉತ್ತಮ ಪುಸ್ತಕಗಳೇ ನಮ್ಮ ನಿಜವಾದ ಸ್ನೇಹಿತರು. ಅಂಥ ಪುಸ್ತಕಗಳನ್ನು ಓದಿದಷ್ಟೂ ವಿದ್ಯಾಬುದ್ಧಿಗಳ ಸಿದ್ದಿಯುಂಟಾಗುವುದರಲ್ಲಿ ಸಂದೇಹವಿಲ್ಲ. ಆಂತರಂಗಿಕ ಪ್ರಗತಿ ಅಥವಾ ಹೃದಯ ವೈಶಾಲ್ಯ ಹೊಂದುವುದೇ ಓದುವಿಕೆಯ ಪ್ರಯೋಜನವಾಗಿದೆ. ಓದುವಿಕೆ ಒಂದು ಸಾಧನೆ ಅಥವಾ ತಪಸ್ಸು. ಅಲ್ಲಿ ಏಕಾಗ್ರತೆ ಇರಬೇಕು. ಆ ಸಾಧನೆಯ ಹಾದಿಯಲ್ಲಿ ಸಾಗಿದರೆ ಬೆಳಗುವುದು ದಿವ್ಯಾತ್ಮ ಜ್ಯೋತಿ.
ಮಗುವಿಗೆ ಮನೆಯೇ ಮೊದಲ ಪಾಠಶಾಲೆ. ಜನನಿಯೇ ಮೊದಲ ಗುರು. ಆದುದರಿಂದ ಎಲ್ಲ ಮನೆಗಳಲ್ಲಿಯೂ ಓದುವಿಕೆಗೆ ಭದ್ರವಾದ ಪಂಚಾಂಗವನ್ನು ಹಾಕುವ ಪುಟ್ಟ ಗ್ರಂಥಾಲಯ ಇರಲೇ ಬೇಕು. ಅಲ್ಲಿ ಲಭ್ಯವಿರುವ ಪುಸ್ತಕಗಳನ್ನೆಲ್ಲ ವರ್ಗೀಕರಣ ಮಾಡಿ ಒಪ್ಪ ಓರಣವಾಗಿ ಜೋಡಿಸಿಡ ಬೇಕು. ಬೇಕಾದ ಪುಸ್ತಕಗಳು ಸುಲಭವಾಗಿ ಕೈಗೆ ದೊರಕುವಂತಿರಬೇಕು. ಹಾಗಿದ್ದರೆ ಮಾತ್ರ ಓದುವಿಕೆ ನಿರಾತಂಕವಾಗಿ ಸಾಗುತ್ತದೆ.
ಓದು ಸಂತಸಕ್ಕಾಗಿ, ಓದು ಜ್ಞಾನಕ್ಕಾಗಿ
ಓದು ಸಾಹಿತ್ಯ ಸಾಗರದ ಪರಿಚಯಕ್ಕಾಗಿ
ಓದುವಿಕೆ ಬೆಳಕಾಗಿ ದಾರಿಯನು ತೋರುವುದು
ಓದುವಿಕೆ ಸಂಕುಚಿತ ಭಾವನೆಯ ನೀಗುವುದು
ಓದುವೇ ನುಡಿಯೊಲವು, ಓದುವುದೆ ಹಗೆ ಗೆಲುವು
ಓದುವುದೆ ತಾಯ ಮಡಿಲ ಸುಖವು.
ಆದರಿಂದು ಮಕ್ಕಳು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರಲ್ಲೂ ಓದುವ ಹವ್ಯಾಸ ಕುಂಠಿತವಾಗುತ್ತಾ ಇದೆ. ಇದಕ್ಕೆ ಕಾರಣಗಳೂ ಹಲವಾರು. ಮುಖ್ಯವಾಗಿ ದೃಶ್ಯ ಮಾಧ್ಯಮ, ಶ್ರವ್ಯ ಮಾಧ್ಯಮ ಮೊದಲಾದವುಗಳು ಇಂದು ಮನುಷ್ಯನ ಓದುವಿಕೆಯನ್ನು ಕುಂಠಿತಗೊಳಿಸಿವೆ. ಅಂತರ್ಜಾಲ, ದೂರವಾಣಿಗಳೂ ಕೂಡಾ ಓದು, ಬರಹಗಳ ಮೇಲೆ ಗದಾ ಪ್ರಹಾರ ಮಾಡುತ್ತಲೇ ಇವೆ. ಬಹಳ ಹಿಂದೆ ಪ್ರಧಾನ ಸಂಪರ್ಕ ಸಾಧನವಾಗಿದ್ದ ಪತ್ರಲೇಖನ ಇಂದು ಸಂಪೂರ್ಣ ನಿಂತು ಹೋಗಿದೆ. ಇದರಿಂದಾಗಿ ಸಾಹಿತ್ಯದ ಒಂದು ಪ್ರಧಾನ ಪ್ರಕಾರವೇ ಸತ್ತು ಹೋದಂತಾಗಿದೆ. ಕ್ಷಣ, ಕ್ಷಣಕ್ಕೂ ಆಗುತ್ತಿರುವ ನವನವೀನ ಆವಿಷ್ಕಾರಗಳಿಂದಾಗಿ ಮನುಷ್ಯನ ಕೈ ಬರಹ ಸಂಪೂರ್ಣ ಮಾಯವಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಅಂತಾಗುವ ಮೊದಲೇ ನಾವೆಲ್ಲರೂ ಎಚ್ಚೆತ್ತುಕೊಳ್ಳೋಣ. ಎಲ್ಲರೂ ಓದಿ ಸಾಧಿಸೋಣ, ಓದಿ ಬೆಳೆಯೋಣ, ಓದುತ್ತಲೇ ಗಳಿಸೋಣ.