ಅಂತೂ ಇಂತೂ ಹೆಮ್ಮನಬೈಲಿಗೆ ಸೇತುವೆ ಮಂಜೂರಾಯ್ತು


ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಮ್ಮನಬೈಲ್ ಹೊಳೆಯ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ 1.40 ಕೋಟಿ ರೂ. ಮಂಜೂರು ಮಾಡಿದ್ದು, ಇದರಿಂದ ಈ ಭಾಗದ ಜನತೆಯ ಹಲವು ವರ್ಷಗಳ ಆಗ್ರಹ ಪೂರ್ವಕವಾದ ಬೇಡಿಕೆಗೆ ಫಲ ದೊರೆತಿದೆ.
ತಾಲೂಕು ಕೇಂದ್ರದಿಂದ ಸುಮಾರು 25-30 ಕಿ.ಮೀ. ದೂರದ, ಗ್ರಾಮೀಣ ಪ್ರದೇಶವಾದ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿಗೆ ಸಂಚಾರ ವ್ಯವಸ್ಥೆ ತುಂಬಾ ದುಸ್ತರ. ದಿನದಲ್ಲಿ ಒಂದೋ, ಎರಡೋ ಬಾರಿ ಇರುವ ಬಸ್ ಸಂಚಾರ ಮಳೆಗಾಲದಲ್ಲಿ ಸ್ಥಗಿತಗೊಳ್ಳುವುದೇ ಹೆಚ್ಚು. ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು, ದೈನಂದಿನ ಕೆಲಸ-ಕಾರ್ಯಗಳಿಗೆ ತಾಲೂಕು ಕೇಂದ್ರಕ್ಕೆ ಬರಲೇಬೇಕಾದ ಸಾರ್ವಜನಿಕರು ಇದರಿಂದ ವರ್ಷದ ಹಲವು ದಿನ ಸಿದ್ದಾಪುರ-ಕುಮಟಾ ರಸ್ತೆಯವರೆಗೆ ಸುಮಾರು 6-7 ಕಿ.ಮೀ.ದೂರದವರೆಗೆ ಕಾಲ್ನಡಿಗೆಯಲ್ಲಿ ಬಂದು ಬಸ್ ಹಿಡಿಯಬೇಕಾದ ಸಂದರ್ಭವೇ ಹೆಚ್ಚು. ವೈದ್ಯಕೀಯ ಸೌಲಭ್ಯ, ದಿನಸಿ ಮುಂತಾಗಿ ಅಗತ್ಯಗಳಿಗೆ ಬಿಳಗಿಗೆ ಬರಬೇಕಿದ್ದು ಹೊಳೆಯ ಕಾರಣದಿಂದ ಸುಮಾರು 10 ಕಿ.ಮೀ. ಸುತ್ತು ಬಳಸಿ ಬರಬೇಕು. ಬಿಳಗಿಯಿಂದ ಹೆಮ್ಮನಬೈಲ್ ಹೊಳೆಯವರೆಗೆ ಡಾಂಬರ್ ರಸ್ತೆಯಾಗಿದ್ದು ಹೊಳೆಗೆ ಸೇತುವೆಯಾದರೆ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ.
ಹೆಮ್ಮನಬೈಲ್ ಹೊಳೆಗೆ ಸೇತುವೆ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಈ ಭಾಗದ ಜನ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದ್ದರು. ಜನರ ಅಗತ್ಯವನ್ನು ಗಮನಿಸುವ, ತಾವಾಗಿಯೇ ಮುಂದಾಗಿ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವ ಮನೋಭಾವವಿಲ್ಲದ ಜನಪ್ರತಿನಿಗಳೆದುರು ಇದು ಅರಣ್ಯರೋದನವಾಗಿತ್ತು. ಆದರೂ ಛಲ ಬಿಡದ ಇಲ್ಲಿನ ಜನತೆ ತಮ್ಮ ಆಗ್ರಹವನ್ನು ಮುಂದುವರಿಸಿದ್ದಕ್ಕೆ ಈಗ ಪ್ರತಿಫಲ ದೊರಕಿದಂತಾಗಿದೆ. ತಾ.ಪಂ. ಉಪಾಧ್ಯಕ್ಷ ಪ್ರಸನ್ನ ಹೆಗಡೆ ಸೇರಿದಂತೆ ಈ ಭಾಗದ ಹಲವು ಜನಪ್ರತಿನಿಗಳ ನಿರಂತರ ಪ್ರಯತ್ನ ಫಲ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇತುವೆ ಮಂಜೂರಿ ಮಾಡಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಸಂಚಾರ ವ್ಯವಸ್ಥೆಗೆ ಅನುವು ಕಲ್ಪಿಸಿದಂತಾಗಿದೆ.

ಮನ ಮಿಡಿಯಿತು ಕೃಷಿಯತ್ತ, ವಿಮುಖವಾಯಿತು ನಗರದಿಂದ ಚಿತ್ತ


ಗಂಡನಿಗೆ ತಿಂಗಳಿಗೆ 75 ಸಾವಿರ ಸಂಬಳ, ಹೆಂಡತಿಗೆ 50 ಸಾವಿರ... ಕನಸಿನ ನಗರಿ ಬೆಂಗಳೂರಿನಲ್ಲಿ ಬದುಕು ಕಂಡುಕೊಳ್ಳಲು ಧಾರವಾಡದಿಂದ ಖುಷಿಯಿಂದ ಹೋಗಿದ್ದರು ಈ ದಂಪತಿ. ಆದರೆ ನಾಲ್ಕೆ ವರ್ಷ. ನಗರೀಕರಣದ ಯಾಂತ್ರಿಕ ಬದುಕು ಇವರನ್ನು ರಸ ಹೀರಿದ ಕಬ್ಬಿನಂತೆ ಮಾಡಿಬಿಟ್ಟಿತು. ಕೊನೆಗೆ ಆರೋಗ್ಯವೂ ಕೈ ಕೊಟ್ಟಿತು. ಆಗ ನೆನಪಾಗಿದ್ದು ಅಪ್ಪನ ಕೃಷಿ ಭೂಮಿ.
ನಿಜವಾದ ಬದುಕು ಅಂದ್ರೆ ಏನು ಎಂಬ ಅರಿವು ಈಗ ಆಗಿದೆ ಎಂದು ಶುಭಾ ರಾಜಶ್ರೀ ವಿಭೂತಿ ಹೇಳುವಾಗ ಅವರ ಕಣ್ಣಿನಲ್ಲಿ ಕೃಷಿ ಸಾಮ್ರಾಜ್ಯ ವಿಸ್ತರಿಸುವ ತವಕವಿತ್ತು. ಓದಿದ್ದು ಪದವಿ ವರೆಗೆ ಮಾತ್ರ. ಆದರೆ ಇಂಗ್ಲಿಷ್ ಭಾಷೆಯಿಂದಾಗಿ ವಿದೇಶಿ ಟೆಲಿಕಾಂ ಕಂಪನಿಯೊಂದರಲ್ಲಿ ಉತ್ತಮ ಹುದ್ದೆಯಲ್ಲಿ ಕೆಲಸ. ತಿಂಗಳ ಸಂಬಳ 50 ಸಾವಿರ ರೂ. ಆದರೆ ನೆಮ್ಮದಿ ಇರಲಿಲ್ಲ. ಮುಂಜಾವಿನ ಸೂರ್ಯೋದಯ, ಸಂಜೆಯ ಚಂದ್ರನುದಯ ಯಾವುದೂ ಇವರ ಜೀವನಕ್ಕೆ ಸಂಬಂಧಪಟ್ಟ ವಿಷಯವಾಗಿ ಉಳಿಯಲಿಲ್ಲ. ಅಲ್ಲೇನಿದ್ದರೂ ಬರೀ ದುಡಿತ, ದುಡಿತ, ದುಡಿತ..!
ವಿದೇಶಿ ಮೂಲದ ಖಾಸಗಿ ಟೆಲಿಕಾಂ ಕಂಪನಿಯೊಂದರಲ್ಲಿ ಗ್ರಾಹಕ ಸಂಬಂಧದ ವ್ಯವಸ್ಥಾಪಕಿಯಾಗಿದ್ದ ಶುಭಾ ಅವರ ದಿನಚರಿ ಅವರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಬೆಳಗ್ಗೆ ಎದ್ದು ಮನೆಕೆಲಸ ಮಾಡಿಕೊಂಡು ಎಂಟು ಗಂಟೆಗೆ ಆಫೀಸು ತಲುಪಬೇಕು. ರಾತ್ರಿ 10:00 ಗಂಟೆ ವರೆಗೆ ಬಿಟ್ಟೂ ಬಿಡದ ಕೆಲಸ. ಹಬ್ಬಗಳೋ ಕನಸಿನಲ್ಲಿಯೇ ಆಚರಣೆ, ನಮ್ಮ ತಿನಿಸು, ತಿಂಡಿಗಳನ್ನು ನೆನೆಪಿಸಿಕೊಳ್ಳುವುದಷ್ಟೆ. ವಾರದ ರಜೆಯಲ್ಲಿ ಸುಸ್ತು, ಅಡುಗೆ ಮಾಡಿ ತಿನ್ನುವುದಕ್ಕೂ ಮನಸ್ಸಿಲ್ಲದಂತೆ ಕಚೇರಿಯ ದೂರವಾಣಿ ಕರೆಗಳು, ಸಾಲದ್ದಕ್ಕೆ ಸಣ್ಣ ತಪ್ಪಿಗೆ ಬಾಸ್ಗಳ ಕಿರಿಕಿರಿ.
ಇವರ ಬದುಕು ಇಂತಿದ್ದರೆ ಪತಿ ರಾಜೇಶ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವ್ಯಕ್ತಿ. ತಿಂಗಳಿಗೆ 75 ಸಾವಿರ ರೂ., ಸಂಬಳ. ಬೆಂಗಳೂರಿನಲ್ಲಿ ಮನೆ, ಕಾರು ಆಳು-ಕಾಳು ಎಲ್ಲವೂ ಓಕೆ. ಆದರೆ ವೈಯಕ್ತಿಕ ಜೀವನ ಸಾಧನೆ ಮಾತ್ರ ಶೂನ್ಯ ಎನ್ನಿಸಿತು ಅವರಿಗೆ. ಅಷ್ಟೇ ಅಲ್ಲ, ಕೆಲಸದ ಒತ್ತಡದಿಂದಾಗಿ ಆರೋಗ್ಯ ಕೈ ಕೊಟ್ಟಿತು. ಒತ್ತಡದ ಬದುಕು ಮತ್ತು ಯಾಂತ್ರಿಕ ಜೀವನ ಶೈಲಿಯಿಂದಾಗಿ ಬದುಕು ದುಸ್ತರ ಎನಿಸಿತು. ಕೂಡಲೇ ದಂಪತಿ ಗಮನ ಹೊರಳಿದ್ದು ಕೃಷಿಯತ್ತ, ಅರ್ಥಾತ್ ಮರಳಿ ಮಣ್ಣಿನತ್ತ.
ಕೃಷಿಯಲ್ಲಿ ಏನಿದೇ ಎಂದು ಪ್ರಶ್ನಿಸುವವರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಲು ಬಿಡಬೇಕು. ನಂತರ ಅವರಿಗೆ ತಿಳಿಯುತ್ತೆ ಕೃಷಿಯೇ ಎಲ್ಲದಕ್ಕೂ ಮೂಲ ಎಂಬುದು. ಮಲ್ಟಿನ್ಯಾಷನಲ್ ಕಂಪನಿಗಳ ನೀಲಿ ಗಾಜಿನ ಕಟ್ಟಡದಲ್ಲಿ ಕುಳಿತು ಕಂಪ್ಯೂಟರ್ ಎಂಬ ಹುಚ್ಚನೊಂದಿಗೆ ವ್ಯವರಿಸಿ ಸುಸ್ತಾದವರಿಗೆ ಈ ದಂಪತಿ ಮಾತ್ರ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡುತ್ತಾರೆ.
ಶುಭಾ ವಿಭೂತಿ ದಂಪತಿಗೆ ಹಿರಿಯರ ಕಾಲದ ಕೃಷಿ ಭೂಮಿ ಇದೆ. ಧಾರವಾಡ-ಅಳ್ನಾವರ ರಸ್ತೆಯಲ್ಲಿರುವ ಹೊನ್ನಾಪುರ ಗ್ರಾಮದ ಸಮೀಪದಲ್ಲಿ ಈ ಜಮೀನಿದೆ. ಮಕ್ಕಳು ಉನ್ನತ ವ್ಯಾಸಂಗ ಮಾಡಿ ಬೆಂಗಳೂರು, ಮುಂಬೈ ಸೇರಿಕೊಂಡ ಬಳಿಕ ಇದನ್ನು ನೋಡಿಕೊಳ್ಳುವವರು ಇಲ್ಲದಾಗಿತ್ತು. ಉನ್ನತ ವ್ಯಾಸಂಗ ಮಾಡಿದ ಎಲ್ಲರಿಗೂ ಮೊದಮೊದಲು ಜಮೀನು, ತೋಟ ಇಷ್ಟವಾಗುವುದಿಲ್ಲ. ಆಗೇನಿದ್ದರೂ ಲಕ್ಷ ಸಂಬಳದ ಗುರಿ ಕಾಡುತ್ತಿರುತ್ತದೆ.
ಆದರೆ ಕೃಷಿ ಮಾಡುವುದಾಗಿ ನಿರ್ಧರಿಸಿದ ದಂಪತಿ ಕೃಷಿಗೆ ತೊಡಗಿಕೊಳ್ಳುವ ಮುನ್ನ ಮುಂದೇನು ಮಾಡಬೇಕು ಎಂಬುದರ ಪುಟ್ಟ ಸಿದ್ಧತೆ ಮಾಡಿಕೊಂಡೇ ಬಂದಿದ್ದರು. ಇದರ ಫಲವಾಗಿ ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ, ತೇಗದ ಮರಗಳ ಜೊತೆಗೆ ಮನೆಗೆ ಬೇಕಾಗುವ ಆಹಾರ ಧಾನ್ಯ, ಕಾಯಿಪಲ್ಲೆಗಳನ್ನು ಕೂಡ ಬೆಳೆಯುತ್ತಿದ್ದಾರೆ. ಏಳು ತಿಂಗಳಿನಿಂದ ಸಾವಯವ ಮತ್ತು ಎರೆಹುಳು ಗೊಬ್ಬರವನ್ನು ಕೂಡ ಉತ್ಪಾದಿಸುತ್ತಿದ್ದಾರೆ. ತಿಂಗಳಿಗೆ ಗೊಬ್ಬರದ ಉತ್ಪಾದನೆಯೇ 100 ಕ್ವಿಂಟಲ್. ಇದನ್ನು ಚಿತ್ರದುರ್ಗ, ದಾವಣಗೆರೆ, ಬೈಲಹೊಂಗಲ ಮತ್ತು ಧಾರವಾಡ ಸೇರಿದಂತೆ ಇತರೆಡೆಗಳಿಗೆ ಪೂರೈಕೆ ಮಾಡುತ್ತಾರೆ. ರಾಜ್ಯದಲ್ಲಿ ನಡೆಯುವ ದೊಡ್ಡ ಉತ್ಸವಗಳು, ಕೃಷಿ ಮೇಳಗಳಲ್ಲಿ ಶುದ್ಧ ಆರ್ಗ್ಯಾನಿಕ್ ಎಂಬ ಸಂಸ್ಥೆಯೊಂದನ್ನು ಕಟ್ಟಿಕೊಂಡು ಅಲ್ಲಿ ತಾವು ಉತ್ಪಾದಿಸಿದ ಎರೆಹುಳು ಗೊಬ್ಬರ ಮಾರಾಟ ಮಾಡುತ್ತಿದ್ದಾರೆ.
ಸಂಬಳ ಮತ್ತು ವೃತ್ತಿಕೌಶಲ್ಯದಿಂದ ಹಣ ಗಳಿಕೆ ಮಾಡುವವರಿಗೆ ಬೆಂಗಳೂರು ಖಂಡಿತವಾಗಿಯೂ ಬೃಹತ್ ಭಿತ್ತಿ. ಆದರೆ ಹಣದ ಬೆನ್ನು ಹತ್ತಿದರೆ ನಿಜವಾದ ಬದುಕು ನಡೆಸುವುದು ಸಾಧ್ಯವಿಲ್ಲ ಎಂಬುದು ಈ ದಂಪತಿ ಅನಿಸಿಕೆ. ಸಾಕಷ್ಟು ಓದಿದ ನಂತರ ಒಂದಿಷ್ಟು ಕೆಲಸ ಮಾಡಬೇಕು. ಇತರರಂತೆ ನಾವು ದೊಡ್ಡ ನಗರದಲ್ಲಿ ವಾಸಿಸಬೇಕು ಎಂಬ ಕನಸು ಸಹಜ. ಆದರೆ ಅಲ್ಲಿನ ಬದುಕು ನಮಗೆ ಪಾಠ ಕಲಿಸುತ್ತದೆ. ಅದರಲ್ಲೂ ವಿಶೇಷವಾಗಿ ಮೂಲತಃ ಕೃಷಿ ಕುಟುಂಬ ಮತ್ತು ಅವಿಭಕ್ತ ಕುಟುಂಬದ ಸದಸ್ಯರಿಗೆ ಅಲ್ಲಿನ ಬದುಕು ಹಿಂಸೆಯಾಗಿ ಪರಿವರ್ತನೆಗೊಳ್ಳುತ್ತದೆ ಎಂಬುದು ಇವರ ಸ್ಪಷ್ಟೋಕ್ತಿ.
ಇದೀಗ ರಾಜೇಶ ಅವರ ಆರೋಗ್ಯ ಸುಧಾರಣೆಯಾಗಿದೆ. ನಾವೀಗ ಕೃಷಿಕರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ. ನಮ್ಮ ಬದುಕಿಗೆ ಇದೀಗ ನಿಜವಾದ ಅರ್ಥ ಬಂದಿದೆ ಎನ್ನುತ್ತಾರೆ ಶುಭಾ ವಿಭೂತಿ. ಜೀವನ ನಡೆಸುವುದಕ್ಕೆ ಹಣಬೇಕು. ಆದರೆ ಹಣ ಗಳಿಸುವುದೇ ಜೀವನದ ಮುಖ್ಯ ಉದ್ದೇಶ ಆಗಬಾರದು. ಕೃಷಿಯಲ್ಲಿ ಬದುಕಿದೆ, ಹೊಲದಲ್ಲಿ ಚಿಗುರು ಬೆಳೆ, ಬೀಸುವ ತಂಗಾಳಿ, ಸುರಿಯುವ ಮಳೆ ಮತ್ತು ಹಕ್ಕಿಪಿಕ್ಕಿಗಳ ಕಲರವ ಮನುಷ್ಯನ ಜೀವನಕ್ಕೆ ಸಾರ್ಥಕತೆಯನ್ನು ತಂದು ಕೊಡಬಲ್ಲದು. ಇದು ದೈತ್ಯ ನಗರದ ಗಗನಚುಂಬಿ ಕಟ್ಟಡಗಳಲ್ಲಾಗಲಿ, ವಿದೇಶಿ ಕಂಪನಿಗಳು ವಿಸುವ ಗುರಿ ತಲುಪುವ ಆಟದಲ್ಲಿ ಸಿಕ್ಕಲಾರದು ಎಂಬುದಕ್ಕೆ ಈ ದಂಪತಿ ಸಾಕ್ಷಿಯಾಗಿದ್ದಾರೆ.

ಔಷ ದುಷ್ಪರಿಣಾಮ, ಖಾಲಿಯಾಗುತ್ತಿದೆ ಅಡಿಕೆ ತೋಟ


ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲದ ಪುಚ್ಚಪ್ಪಾಡಿಯ ವಿಶ್ವನಾಥ, ಕೊಳೆರೋಗ ನಿಯಂತ್ರಣಕ್ಕೆ ಇಕೋಮಿನ್ ಎಂಬ ಔಷಯನ್ನು ಸುಳ್ಯದ ಮಾರಾಟ ಪ್ರತಿನಿಯೊಬ್ಬರ ಮೂಲಕ ತಂದು ಸಿಂಪಡಿಸಿದ್ದರು. ಇದರ ಜೊತೆಗೆ ಕಂಪನಿಯ ಮಾರಾಟ ಪ್ರತಿನಿ ಹೇಳಿದ ಮಾದರಿಯಲ್ಲೇ ಅವರೇ ನೀಡಿದ ಅಂಟು ದ್ರಾವಣವನ್ನೂ ಬೆರೆಸಿ ಮೇ ಅಂತ್ಯದಲ್ಲಿ ತೋಟಕ್ಕೆ ಸಿಂಪಡಿಸಿದ್ದರು. ಆದರೆ ತಿಂಗಳು ಕಳೆದ ನಂತರ ಅಡಿಕೆ ಮರದ ಬುಡದಲ್ಲಿ ಕಾಯಿ ಅಡಿಕೆ ಬಿದ್ದಿತ್ತು. ಇದು ವಾತಾವರಣ ಸಹಜ ಪ್ರಕ್ರಿಯೆ ಎಂದು ಸುಮ್ಮನಾಗಿದ್ದರು. ಆದರೆ ಒಂದಷ್ಟು ದಿನ ಕಳೆದ ನಂತರ ಹಲವಾರು ಅಡಿಕೆ ಮರಗಳ ಬುಡದಲ್ಲಿ ಕಾಯಿ ಅಡಿಕೆ ಬಿದ್ದಿರುವುದು ಕಂಡು ಬಂತ್ತು. ಆದರೆ ಆಸುಪಾಸಿನ ಯಾವುದೇ ತೋಟದಲ್ಲಿ ಇಂತಹ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಇದು ವಾತಾವರಣದ ಪರಿಣಾಮ ಅಲ್ಲ ಎಂಬ ನಿರ್ಧಾರಕ್ಕೆ ವಿಶ್ವನಾಥ ಬಂದರು.
ಫಸಲು ನಷ್ಟವಾಗುತ್ತಿರುವುದನ್ನು ಕಂಡ ಇವರು ಔಷ ಮಾರಾಟ ಮಾಡಿದವರಿಗೆ ತಿಳಿಸಿದಾಗ, ಇದು ವಾತಾವರಣ ಪರಿಣಾಮ ಎಂದು ಉಡಾಫೆಯಿಂದ ಮಾತನಾಡಿದರು. ಔಷ ನೀಡಿದ ಕಂಪನಿಯಾಗಲಿ, ಪರಿಹಾರ ಸೂಚಿಸಲು ಮಾರಾಟ ಪ್ರತಿನಿಯಾಗಲಿ ಬರಲೇ ಇಲ್ಲ. ಈ ನಡುವೆ ಕೆಲವು ಮರಗಳಲ್ಲಿ ಕೊಳೆರೋಗವೂ ಕಾಣಿಸಿಕೊಂಡಿತು.
ಕಾರಣ ನಿಗೂಢ:
ಹೀಗೇ ಎಳೆ ಅಡಿಕೆ ಉದುರಲು ಆರಂಭವಾಗಿ ಎರಡು ತಿಂಗಳಾಗುವಷ್ಟರಲ್ಲಿ ಅಡಿಕೆ ಮರದಲ್ಲಿದ್ದ ಬಹುತೇಕ ಅಡಿಕೆಗಳು ಉದುರಿ, ಈಗ ಕೆಲವು ಅಡಿಕೆ ಮರದಲ್ಲಿ ಒಂದೇ ಒಂದು ಅಡಿಕೆಯೂ ಇಲ್ಲ. ಇನ್ನೂ ಕೆಲವು ಮರಗಳಲ್ಲಿ ಬೆರಳೆಣಿಕೆಯಷ್ಟಿವೆ. ಇದೇ ರೀತಿ ಪರಿಸ್ಥಿತಿ ಮುಂದುವರಿಯುತ್ತಿದ್ದು, ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಇದು ಯಾವುದರಿಂದ ಸಮಸ್ಯೆ ಆರಂಭವಾಗಿದೆ ಎಂಬುದು ಇನ್ನೂ ನಿಗೂಢವಾಗಿದೆ.
ಇಲಾಖೆಯಿಂದಲೂ ವೌನ:
ಕಳೆದ ವರ್ಷ ಅಡಿಕೆಗೆ ಕೊಳೆರೋಗದಿಂದ ವ್ಯಾಪಕ ಹಾನಿ ಸಂಭವಿಸಿತ್ತು. ಹೀಗಾಗಿ ಕೃಷಿಕರಿಗಾಗಿಯೇ ಇರುವ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಡಿಕೆ ಬೆಳೆಗಾರರಿಗೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕಾಗಿತ್ತು. ಆದರೆ ಎಂದಿನಂತೆ ಬೋರ್ಡೋ ದ್ರಾವಣಕ್ಕೆ ಕಾಪರ್ ಸಲೆಓಂೀಟ್ ಸಬ್ಸಿಡಿ ದರದಲ್ಲಿ ನೀಡುವುದು ಬಿಟ್ಟರೆ ಬೇರೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ ಎಂಬುದು ಅಡಿಕೆ ಬೆಳೆಗಾರರ ಆರೋಪ. ಈಗ ಹಲವು ಕಡೆಗಳಲ್ಲಿ ಅಡಿಕೆ ಉದುರಿ ಇಡೀ ಬೆಳೆಯೇ ನಷ್ಟವಾದ ಸಂದರ್ಭದಲ್ಲಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಕನಿಷ್ಟ ಭೇಟಿ ನೀಡಿ ಅಧ್ಯಯನ ಮಾಡುವುದಕ್ಕೂ ಕೂಡಾ ಮುಂದಾಗದೇ ಇರುವುದು ವಿಪರ್ಯಾಸವೇ ಆಗಿದೆ.

ಸಪ್ತಪದಿ ಹಾದಿಯಲ್ಲಿ ಆಶಾದಾಯಕ ಬೆಳವಣಿಗೆ


ಬ್ರಾಹ್ಮಣ ಯುವಕರಿಗೆ ಅದರಲ್ಲೂ ವಿಶೇಷವಾಗಿ ಪುರೋಹಿತ, ಕೃಷಿಕ, ಅಡುಗೆ ವೃತ್ತಿಯವರಿಗೆ ವಿವಾಹವಾಗಲು ಹುಡುಗಿ ಕೊಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸುಳ್ಯದ ಕಶ್ಯಪ್ ಯುವ ಬ್ರಾಹ್ಮಣ ವೇದಿಕೆ ಸಪ್ತಪದಿ ಹಾದಿಯಲ್ಲಿ ಹೊಸ ಹೆಜ್ಜೆಯನ್ನಿರಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉತ್ತರ ಭಾರತದಿಂದ ಯುವತಿಯರನ್ನು ಕರೆತಂದು ವಿವಾಹ ಮಾಡಿಸುವ ಯೋಜನೆಗೆ ಸಂಚಾಲಕ ಎಂ.ಜಿ. ಸತ್ಯನಾರಾಯಣ ಅವರನ್ನೊಳಗೊಂಡ ನಿಯೋಗ ಹೊಸದಿಲ್ಲಿಗೆ ತೆರಳಿ, ಹಲವಾರು ಬ್ರಾಹ್ಮಣ ಸಂಘ, ಸಂಸ್ಥೆಗಳ ಪ್ರಮುಖರನ್ನು ಸಂದರ್ಶಿಸಿ ವೈವಾಹಿಕ ಸಂಬಂಧಗಳ ಸಾಧ್ಯತೆಗಳ ಬಗ್ಗೆ ಸಾಕಷ್ಟು ಚರ್ಚಿಸಿ ಬಂದಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಅಲ್ಲಿನ ನಿಯೋಗ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಕೆಲವೆಡೆ ಭೇಟಿ ನೀಡಿ ಅನಂತರ ವಿವಾಹ ಸಂಬಂಧದ ಬಗ್ಗೆ ಚಿಂತಿಸಲಿದೆ.
ಕನ್ನಡ ಕುವರಿಯರ ಸ್ಪಂದನ:
ಈ ನಡುವೆ ಕನ್ನಡ ಕುವರಿಯರು ರಾಜ್ಯದ ನಾನಾ ಕಡೆಗಳಿಂದ ವೇದಿಕೆ ಸಂಪರ್ಕಿಸಿ, ಈ ವಿವಾಹ ಸಂಬಂಧ ಬೆಳೆಸಲು ಆಸಕ್ತರಾಗಿದ್ದಾರೆ. ಅಷ್ಟೇ ಅಲ್ಲದೆ ಜಾತಿ, ಬೇಧದ ಕಟ್ಟು ಪಾಡುಗಳಿಲ್ಲದೆ ವಿಶಾಲ ಮನೋಭಾವದ ಕನ್ನಡದ ಯುವತಿಯರು ಬ್ರಾಹ್ಮಣ ಯುವಕರನ್ನು ವಿವಾಹವಾಗಲು ಮುಂದೆ ಬಂದಿದ್ದಾರೆ. ಯಾವುದೇ ವರದಕ್ಷಿಣೆ ಹಾಗೂ ಮಧ್ಯವರ್ತಿಗಳಿಲ್ಲದೆ ಮುಂದೆ ನಿಂತು ವಿವಾಹ ಕಲ್ಪಿಸಲು ವೇದಿಕೆ ಮುಂದಾಗಿದೆ. ಆಸಕ್ತ ವಿವಾಹಾಪೇಕ್ಷಿತ ಯುವತಿಯರು ವೇದಿಕೆ ಸಂಪರ್ಕಿಸಬಹುದು ಎಂದು ಅಧ್ಯಕ್ಷ ಆರ್.ಕೆ. ಭಟ್ (9980567416) ತಿಳಿಸಿದ್ದಾರೆ.

‘ವ್ನಿೇಶ್ವರ'ನ ತಯಾರಿಕರಿಗೆ ನೂರೆಂಟು 'ವಿಘ್ನ'


ಗಣೇಶ, ಲಂಬೋದರ, ವಿನಾಯಕ, ಮೂಷಿಕ ವಾಹನ, ಗಜಾನನ... ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ವ್ನಿೇಶ್ವರನ ಮೂರ್ತಿ ತಯಾರಿಕರಿಗೆ ಈಗ ನೂರೆಂಟು ವಿಘ್ನಗಳು.
ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿರುವ ಜೇಡಿ ಮಣ್ಣು, ವಿವಿಧ ಬಣ್ಣಗಳ ಬೆಲೆ, ಮಾರುಕಟ್ಟೆಗೆ ದಾಂಗುಡಿಯಿಟ್ಟಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನ ಹಾವಳಿ, ಹೊರ ರಾಜ್ಯಗಳಿಂದ ಬರುವ ಮೂರ್ತಿ ತಯಾರಕರು, ಕಡಿಮೆ ಬೆಲೆಗೆ ಮಾರಾಟ ಮಾಡುವವರಿಂದ ಎದುರಾಗುವ ತೀವ್ರ ಪೈಪೋಟಿ, ಕ್ರಮೇಣವಾಗಿ ಜನರಲ್ಲಿ ಗಣೇಶನ ಪ್ರತಿಷ್ಠಾಪನೆ ಬಗ್ಗೆ ಕಡಿಮೆಯಾಗುತ್ತಿರುವ ಆಸಕ್ತಿ... ಹೀಗೆ ಹಲವಾರು ವಿಘ್ನಗಳು ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವವರಿಗೆ ಎದುರಾಗುತ್ತಿವೆ.
ಹಲವಾರು ದಶಕಗಳಿಂದ ಸಾಂಪ್ರದಾಯಕವಾಗಿ ಗಣೇಶನ ತಯಾರಿಕೆಯಲ್ಲಿ ತೊಡಗಿರುವ ನೂರಾರು ಕುಟುಂಬಗಳು ನಮ್ಮಲ್ಲಿವೆ. ಗಣೇಶನ ಮೂರ್ತಿ ತಯಾರಿಸುವುದೇ ಅವರಿಗೆ ಜೀವನ ಮೂಲಾಧಾರ. ಅನಾದಿ ಕಾಲದಿಂದಲೂ ಕುಲ ಕಸುಬನ್ನೇ ನಂಬಿಕೊಂಡು ಬಂದಿರುವ ಬಹುತೇಕ ಮಂದಿ ವರ್ಷದಿಂದ ವರ್ಷಕ್ಕೆ ತೀವ್ರ ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತಿದ್ದಾರೆ.
ಕೆಲವರು ಗಣೇಶ ಹಬ್ಬದ ಸಂದರ್ಭದಲ್ಲಿ ಇತರ ಕೆಲಸಗಳೊಂದಿಗೆ ಗಣೇಶನ ನಿರ್ಮಾಣ ಕಾರ್ಯದಲ್ಲಿ ತೊಡಗಿದರೆ, ಕೆಲವರು ವರ್ಷ ಪೂರ್ತಿ ಗಣೇಶನ ತಯಾರಿಕೆಯಲ್ಲಿ ತೊಡಗಿರುತ್ತಾರೆ. ಇಡೀ ಕುಟುಂಬದವರ ಸತತ 6 ತಿಂಗಳ ಕಾಲದ ದುಡಿಮೆಗೆ ಎಲ್ಲಾ ಖರ್ಚು ಕಳೆದು ಅಮ್ಮಮ್ಮ ಎಂದರೆ 10 ಸಾವಿರ ಕೈಗೆ ದೊರೆತರೆ ಅದೇ ಪುಣ್ಯ ಎನ್ನುವ ಪರಿಸ್ಥಿತಿ ಇದೆ. ಹಾಗಾಗಿಯೇ ಅನೇಕರು ಗಣೇಶನ ತಯಾರಿಕೆಯಿಂದ ವಿಮುಖವಾಗುತ್ತಿದ್ದಾರೆ.
'ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪ ಮಾರುಕಟ್ಟೆಗೆ ಬಂದಾಗಿನಿಂದ ಸಾಂಪ್ರದಾಯಿಕವಾಗಿ ಜೇಡಿ ಮಣ್ಣಿನಿಂದ ಗಣೇಶನನ್ನು ಮಾಡುವವರಿಗೆ ಬಹು ದೊಡ್ಡ ಹೊಡೆತ ಬೀಳುತ್ತಿದೆ. ನಾವು ಕಷ್ಟಪಟ್ಟು ಮೂರ್ತಿ ಮಾಡಿದರೆ, ಇನ್ನು ಕೆಲವರು ಕೆಲವೇ ಗಂಟೆಗಳಲ್ಲಿ ಗಣಪನ ಮಾಡುತ್ತಾರೆ. ಕಡಿಮೆ ಬೆಲೆಗೂ ಮಾರಾಟ ಮಾಡುತ್ತಾರೆ. ಇದರಿಂದ ಇದನ್ನೇ ನಂಬಿದವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಗಣೇಶನ ಮಾಡುವುದರಿಂದ ಏನೂ ಲಾಭ ಇಲ್ಲ ಎನ್ನುವ ಕಾರಣಕ್ಕೆ ಅನೇಕರು ಆ ಕಾರ್ಯ ಮಾಡುವುದನ್ನೇ ಕೈ ಬಿಟ್ಟಿದ್ದಾರೆ' ಎನ್ನುವುದು ಮೂರ್ತಿ ತಯಾರಕರ ಅಳಲು.
'ಸರ್ಕಾರದವರು ಗಣೇಶನ ಹಬ್ಬ ಬಂದ ತಕ್ಷಣವೇ ಪರಿಸರಕ್ಕೆ ಹಾನಿವುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಗಣೇಶನ ವಿಗ್ರಹ ಮಾರಾಟ ಮಾಡುವಂತಿಲ್ಲ, ಪ್ರತಿಷ್ಠಾಪನೆ ಮಾಡುವಂತಿಲ್ಲ. ನಿರ್ಬಂಸಲಾಗಿದೆ ಎಂಬುದಾಗಿ ಹೇಳ್ತುತಾರೆ. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾವಳಿ ಮಾತ್ರ ನಿಲ್ಲುವುದಿಲ್ಲ. ಈಗಲೂ ಮಾರಾಟ ನಡೆಯುತ್ತದೆ. ಪರಿಸರಕ್ಕೆ ಮಾತ್ರವಲ್ಲ, ಅನಾದಿ ಕಾಲದಿಂದಲೂ ಇದೇ ಕಸಬನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವರಿಗೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ವಿಗ್ರಹ ಮಾರಾಟ ತಡೆಯಬೇಕು' ಎನ್ನುವುದು ಅವರ ಆಗ್ರಹ.
ವಿಘ್ನ ನಿವಾರಕ ವಿನಾಯಕನ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವವರಿಗೆ ಕಾಡುತ್ತಿರುವ ಹಲವಾರು ವಿಘ್ನಗಳ ನಿವಾರಣೆಗೆ ಸಂಬಂತರು ಕ್ರಮ ತೆಗೆದುಕೊಳ್ಳುವರೇ, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನ ಹಾವಳಿ ತಡೆಯುವರೇ ಎಂಬುದಕ್ಕೆ ಆ ವಿನಾಯಕನೇ ಉತ್ತರಿಸಬೇಕು.
'ನಮ್ಮ ತಾತ-ಮುತ್ತಾತನ ಕಾಲದಿಂದಲೂ ಗಣಪನ ಮೂರ್ತಿ ಸಿದ್ಧಗೊಳಿಸುತ್ತಿದ್ದೇವೆ. ಈಗಂತೂ ಯಾವುದೇ ಲಾಭ ಇಲ್ಲ. ಕಳೆದ ವರ್ಷ 2,500 ರೂಪಾಯಿ ಇದ್ದ ಒಂದು ಟ್ರ್ಯಾಕ್ಟರ್ ಲೋಡ್ ಜೇಡಿ ಮಣ್ಣಿನ ಬೆಲೆ ಈ ವರ್ಷ 6,500 ರೂ. ಆಗಿದೆ. ಗಣೇಶನ ಕಿರೀಟ, ಇತರೆಡೆ ಬಳಸುವ ಮುತ್ತಿನ ಕಲರ್ ಬೆಲೆ ಲೀಟರ್ಗೆ 600 ರೂಪಾಯಿಯಿಂದ 2500 ರೂಪಾಯಿಗೆ ಏರಿದೆ. ಇನ್ನು ಬೇರೆ ಬೇರೆ ವಸ್ತುಗಳ ಬೆಲೆ ಕೂಡ ಜಾಸ್ತಿಯಾಗಿದೆ. ಒಂದು ಗಣಪನ ವಿಗ್ರಹ ತಯಾರಿಸಲು ಖರ್ಚು ಮತ್ತು ಮಾರಾಟ ದರ ಲೆಕ್ಕ ಹಾಕಿದರೆ ಲಾಭ ಏನೂ ಉಳಿಯದು. ನಾವು ಲಾಭದ ಆಸೆಗೆ ಮಾಡುತ್ತಿಲ್ಲ . ಇದನ್ನು ಬಿಟ್ಟರೆ ಕೆಟ್ಟದಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದರಂತೆ. ಆದಕ್ಕೆ ಲಾಭನೋ, ನಷ್ಟನೋ ನಮ್ಮ ಕೆಲಸ ಮಾಡ್ತುತಾ ಇದ್ದೀವಿ..'ಎನ್ನುವ ಮೂರ್ತಿ ತಯಾರಕರ ಅಳಲನ್ನು ಗಣೇಶ ಕೇಳಿಯಾನೇ?.

ಮಾನವ ಕಳ್ಳಸಾಗಣೆಗೆ ರಹದಾರಿ


ಉದ್ಯೋಗದ ನೆಪದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾ ದೇಶದ ನಿರಾಶ್ರಿತರಿಗೆ ಐರೋಪ್ಯ ಅಥವಾ ಆಸ್ಟ್ರೇಲಿಯಾ ದೇಶಕ್ಕೆ (ಜಿ- 7 ರಾಷ್ಟ್ರಗಳಿಗೆ ಮಾತ್ರ) ಅಕ್ರಮವಾಗಿ ತೆರಳಿ ಅಲ್ಲಿನ ವೀಸಾ ಬಳಿಕ ಗ್ರೀನ್ ಕಾರ್ಡ್ ಪಡೆದು, ಅಲ್ಲಿಯೇ ನೆಲೆಯೂರಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಅವಕಾಶ ಶ್ರೀಲಂಕಾ ಮತ್ತು ಬಾಂಗ್ಲಾ ನಿರಾಶ್ರಿತರ ಶಿಬಿರಗಳಲ್ಲಿ ಇದ್ದವರಿಗೆ ಮಾತ್ರ ಇದೆ. ಇದು ಮಾನವ ಕಳ್ಳಸಾಗಣೆಗೆ ದಾರಿ ಮಾಡಿಕೊಡುತ್ತಿದೆ. ಈ ಅವಕಾಶದ ದುರುಪಯೋಗಪಡಿಸಿಕೊಳ್ಳುವ ಏಜಂಟರೂ ಇದ್ದಾರೆ. ಈ ರೀತಿಯಲ್ಲಿ ಊರು ಬಿಟ್ಟು ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾಗಳಿಗೆ ಹೋಗಿ ನೆಲೆಯೂರಿದ ಮಂದಿ ರಾಜ್ಯದ ಹಲವೆಡೆ ಇದ್ದಾರೆ.
ಇದಕ್ಕೆ ಬೇಕಾಗಿರುವುದು 3ರಿಂದ 5 ಲಕ್ಷ ರೂ. ಹಣ ಮತ್ತು ಧೈರ್ಯ. ನಿಗದಿತ ಏಜಂಟರಿಗೆ ಹಣ ಪಾವತಿಸಿದರೆ ಅವರು ಬೋಟ್ ಮೂಲಕ ಸಮುದ್ರದಲ್ಲಿ ಕರೆದೊಯ್ದು ಆಸ್ಟ್ರೇಲಿಯಾ ಅಥವಾ ಇಂಗ್ಲಂಡ್ನ ಗಡಿ ಭಾಗಕ್ಕೆ ತಲುಪಿಸುತ್ತಾರೆ. ಅಲ್ಲಿನ ಪೊಲೀಸರು ಇವರನ್ನು ತಮ್ಮ ದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಕಾರಣಕ್ಕಾಗಿ ಬಂಸಿ ಜೈಲಿಗೆ ಕಳುಹಿಸುತ್ತಾರೆ. ಈ ನಿರಾಶ್ರಿತರಿಗಾಗಿಯೇ ಪ್ರತ್ಯೇಕವಾದ ಜೈಲು ಇದ್ದು, ಅಲ್ಲಿ ಅವರನ್ನು ಇರಿಸುತ್ತಾರೆ. 2 ವರ್ಷಗಳ ಸೆರೆಮನೆ ವಾಸದ ಬಳಿಕ ಅವರಿಗೆ ಆ ದೇಶದ ವೀಸಾ ಕೊಡಲಾಗುತ್ತದೆ. ಹಾಗೆ ಅವರು ಅಲ್ಲಿ ಉದ್ಯೋಗಕ್ಕೆ ಸೇರುತ್ತಾರೆ. ಕ್ರಮೇಣ ಆ ದೇಶದ ಗ್ರೀನ್ ಕಾರ್ಡ್ ಕೂಡಾ ಲಭಿಸಿ ಅಲ್ಲಿ ಖಾಯಂ ವಾಸಕ್ಕೆ ಅವಕಾಶ ಸಿಗುತ್ತದೆ.
ಈ ಎಲ್ಲಾ ಸೌಲಭ್ಯಗಳು ಶ್ರೀಲಂಕಾ ಮತ್ತು ಬಾಂಗ್ಲಾ ನಿರಾಶ್ರಿತರೆಂಬುದಾಗಿ ವೀಸಾ ಹೊಂದಿದವರಿಗೆ ಮಾತ್ರ ಇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇರಳದ ಕೆಲವರು ಶ್ರೀಲಂಕಾಕ್ಕೆ ಹೋಗಿ ಅಲ್ಲಿಂದ ತಾವು ಶ್ರೀಲಂಕಾ ನಿರಾಶ್ರಿತರು ಎಂಬ ವೀಸಾ ಪಡೆದು ಅದರ ಮೂಲಕ ಈ ರೀತಿಯಲ್ಲಿ ಐರೋಪ್ಯ ದೇಶಗಳಿಗೆ ಅಕ್ರಮವಾಗಿ ಹೋಗಿ ಅಲ್ಲಿ ನೆಲೆ ಕಂಡುಕೊಂಡವರಿದ್ದಾರೆ.

ಅಮೆರಿಕದಲ್ಲೂ ಬರವಿದೆ, ಜೊತೆಗೆ ೆವಿಮೆಯಿದೆ... ನಮ್ಮಲ್ಲಿ?.


ಅಮೆರಿಕದ ಮೂರನೇ ಎರಡು ಭಾಗದಷ್ಟು ಪ್ರದೇಶ ಬರಪೀಡಿತವೆಂದು ಘೋಷಿಸಲ್ಪಟ್ಟಿದೆ. ಆದರೆ, ಬೆಳೆವಿಮೆಯಿಂದಾಗಿ ಅಲ್ಲಿಯ ರೈತರು ನಿಶ್ಚಿಂತೆಯಿಂದಿದ್ದಾರೆ. 2012ನೇ ಸಾಲಿನ ಆರಂಭದಿಂದಲೂ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳ ಅನೇಕ ಭಾಗಗಳು ಬರಪೀಡಿತವಾಗಿವೆ. ಈ ವರ್ಷ ಜಾಗತಿಕ ಬರದ ವರ್ಷ ಎಂದು ಇತಿಹಾಸದಲ್ಲಿ ದಾಖಲಾಗಲಿದೆ. 1988ರ ನಂತರ ಈ ವರ್ಷ ಉತ್ತರ ಅಮೆರಿಕವನ್ನು ತೀವ್ರ ಬರಗಾಲ ಕಾಡಿದೆ. ಅಮೆರಿಕದ ಪ್ರಾಂತೀಯ ಸರಕಾರಗಳು ಬರ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಜುಲೈ 12ರಂದು ಈ ಸಂಬಂಧ ಪ್ರಕಟಣೆ ಹೊರಡಿಸಿವೆ. ಅಲ್ಲಿಯ ಪ್ರಮುಖ ವ್ಯಾಪಾರಿ ಸಂಘಟನೆಗಳು ಬೆಲೆ ಏರಿಕೆ ತಡೆಯಲು ಸ್ವಯಂ ಸೂರ್ತಿಯಿಂದ ತಮ್ಮ ದೇಶದ ಜನತೆಗೆ ಬೇಕಾದ ಆಹಾರ ಧಾನ್ಯ ಮತ್ತು ಜೀವನಾವಶ್ಯಕ ವಸ್ತುಗಳನ್ನು ಕಡಿಮೆ ಬೆಲೆಗೆ ದೊರೆಯುವ ದೇಶಗಳಿಂದ ತರಿಸಿ ಸಂಗ್ರಹಿಸುವ ಕೆಲಸ ನಡೆಸಿವೆ.
ಅಮೆರಿಕದ ಮುಖ್ಯ ಬೆಳೆಗಳಾದ ಜೋಳ, ಗೋ, ಸೋಯಾಬಿನ್ ಮೊದಲಾದವುಗಳನ್ನು ಸ್ಥಳೀಯ ಅಗತ್ಯ ಪೂರೈಸಿ ಹೆಚ್ಚಿದ್ದರೆ ಮಾತ್ರ ರಫ್ತು ಮಾಡಲಾಗುತ್ತಿದೆ. ಬರದಿಂದಾಗಿ ಬೆಲೆ ಹೆಚ್ಚಬಹುದಾದರೂ ಅದು 2013ರ ಸಾಲಿನ ಅಂತ್ಯದವರೆಗೆ ಶೇಕಡಾ 3ರಿಂದ 5ಕ್ಕೆ ಮೀರದಂತೆ ವ್ಯವಸ್ಥೆ ಮಾಡಿಕೊಂಡಿವೆ. ಅಲ್ಲಿಯ ಫುಡ್ ಸರ್ವಿಸಸ್ ಸಂಸ್ಥೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದೆ. ಬೆಳೆ ವಿಮೆ ಸರ್ವತ್ರವಾಗಿರುವುದರಿಂದ ರೈತರಿಗೆ ಬರಗಾಲದ ಬಿಸಿ ಸ್ವಲ್ಪವೂ ತಟ್ಟುವುದಿಲ್ಲ. ವಿಮೆ ಕಂಪನಿ ರೈತರನ್ನು ಸುರಕ್ಷಿತವಾಗಿ ಮತ್ತೆ ಕೃಷಿಗೆ ಇಳಿಸುತ್ತದೆ. ಬರಗಾಲ, ನೆರೆಹಾವಳಿ, ಯುದ್ಧ, ಸಮೃದ್ಧಿ ಇವು ಅತಿಯಾದರೆ ಪ್ರಜೆಗಳಿಗೆ ಕಷ್ಟ ಎಂದು ಅಲ್ಲಿಯ ಸರಕಾರಕ್ಕೆ ಗೊತ್ತಿದೆ. ಯಶಸ್ವಿಯಾಗಿ ಪರಿಸ್ಥಿತಿ ಎದುರಿಸಿ ದೇಶದ ಪ್ರಜೆಗಳನ್ನು ಸುಖವಾಗಿಡಲು ಯಶಸ್ವಿಯಾಗುತ್ತದೆ. ಅಲ್ಲಿ ಬರ ಸಮೀಕ್ಷೆ, ವರದಿಗೆ ರಾಜಕೀಯ ವ್ಯಕ್ತಿಗಳು ಬರುವುದಿಲ್ಲ. ಎಲ್ಲವನ್ನೂ ತಜ್ಞರು ನಿಭಾಯಿಸುತ್ತಾರೆ. ಯಾರೂ ದುರ್ಲಾಭ ಪಡೆದುಕೊಳ್ಳಲು ಮನಸ್ಸು ಮಾಡುವುದಿಲ್ಲ. ಅದು ಸಾಧ್ಯವೂ ಇಲ್ಲದಂತೆ ಆಡಳಿತ ವ್ಯವಸ್ಥೆಯಿದೆ.
ನಮ್ಮ ರಾಜ್ಯದಲ್ಲಿಯೂ ಕೆಲವು ಕಡೆ ತೀವ್ರ ಬರವಿದೆ. ಪ್ರಕೃತಿ ವಿಕೋಪ ನಿಭಾಯಿಸಲು ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಕಾಯಿದೆ ಕಾನೂನಿಗೆ, ಯೋಜನೆಗಳಿಗೆ ಬರವಿಲ್ಲ. ಹಾಗೆ ನೋಡಿದರೆ,  ಹಣವೂ ಸಮಸ್ಯೆಯಲ್ಲ. ನಂಜುಂಡಪ್ಪ ಸಮಿತಿಯ ವರದಿಯಂತಹ ನೂರಾರು ವರದಿಗಳು ಧೂಳು ಹಿಡಿದಿವೆ. ನಮ್ಮಲ್ಲಿ ಪ್ರತಿ ವರ್ಷ ಬರಗಾಲ ಕಾಡುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರಕೃತಿ ವಿಕೋಪ ಕಾಮಗಾರಿಗಳು ನಡೆಯುತ್ತವೆ. ಹಣ ವೆಚ್ಚವಾಗುತ್ತದೆ. ಪರಿಣಾಮ?. ಎಲ್ಲರಿಗೂ ಗೊತ್ತಿರುವಂತದ್ದೇ. ಇಲ್ಲಿ ಪ್ರಕೃತಿ ವಿಕೋಪ ತಡೆ ಕಾಮಗಾರಿ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿರತೆಗಾಗಿ ಪೈಪೋಟಿಯಿಂದ ನಡೆಯುತ್ತದೆ. ರಾಜಕೀಯ ನಾಯಕರು ಬರ ಪ್ರವಾಸ ಮಾಡುತ್ತಾರೆ. ಬಿಜೆಪಿಯನ್ನು ಕಾಂಗ್ರೆಸ್, ಸರಕಾರವನ್ನು ಜೆಡಿಎಸ್, ಕೇಂದ್ರ ಸರಕಾರವನ್ನು ರಾಜ್ಯ, ಕೇಂದ್ರ ಮಂತ್ರಿಗಳು ರಾಜ್ಯ ಸರಕಾರವನ್ನು ದೂರುತ್ತಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಹೋಗುತ್ತಾರೆ. ಅವಶ್ಯಕ ವಸ್ತುಗಳ ಬೆಲೆ ಏರುತ್ತಲೇ ಇರುತ್ತದೆ. ಜನಸಾಮಾನ್ಯರು, ಕಷ್ಟ ಪಟ್ಟು ದುಡಿದು, ಪ್ರಾಮಾಣಿಕವಾಗಿ ಬದುಕುವವರು ಕಷ್ಟ ಪಡುತ್ತಲೇ ಇರುತ್ತಾರೆ, ಪತ್ರಕರ್ತರು ಬೈ ಲೈನ್ ವರದಿಗಳನ್ನು ಪ್ರಕಟಿಸುತ್ತಲೇ ಇರುತ್ತಾರೆ. ವ್ಯಾಪಾರಿಗಳು ರೇಟು ಏರಿಸಿ ಗ್ರಾಹಕರ ಹಣ ವಸೂಲು ಮಾಡುವತ್ತಲೇ ಗಮನ ಹರಿಸುತ್ತಾರೆ. ರಾಜಕೀಯ ನಾಯಕರು ಶ್ರೀಮಂತರಾಗುತ್ತಲೇ ಹೋಗುತ್ತಾರೆ. ನ್ಯೂಸ್ ಚಾನೆಲ್ಗಳು ಅತಿರಂಜಿತ ಸುದ್ದಿಗಳನ್ನು ಪ್ರಕಟಿಸುತ್ತಲೇ ಇರುತ್ತಾರೆ... ಎಲ್ಲವೂ ಅವರವರ ಹಣೆಬರಹದಂತೆ!.

ಇದು ರಾಜ್ಯದ ಮೊದಲ ಮುಖ್ಯಮಂತ್ರಿಯ ಸ್ವಗ್ರಾಮದ ಪ್ರೌಢಶಾಲಾ ದುರ್ಗತಿ


ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಪ್ಗೆ ಸಮೀಪದ ಕ್ಯಾಸಂಬಳ್ಳಿ, ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಚಂಗಲ್ರಾಯರೆಡ್ಡಿಯವರ ಹುಟ್ಟೂರು.
ಇಲ್ಲೊಂದು ಸರ್ಕಾರಿ ಪ್ರಾಥಮಿಕ ಶಾಲೆಯಿತ್ತು. ಪ್ರೌಢಶಾಲೆಗಾಗಿ ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳು ಸುಮಾರು 40 ಕಿ.ಮೀ. ಕ್ರಮಿಸಬೇಕಾಗಿತ್ತು. ಹೀಗಾಗಿ ಶೇ.90ರಷ್ಟು ಮಕ್ಕಳು ಪ್ರಾಥಮಿಕ ಶಾಲೆಗೆ ತಮ್ಮ ವಿದ್ಯಾಭ್ಯಾಸ ಮುಗಿಸುತ್ತಿದ್ದರು. ಗ್ರಾಮಸ್ಥರ ಒತ್ತಾಯದ ಮೆಲೆ 1968ರಲ್ಲಿ ಗ್ರಾಮಕ್ಕೆ ಪ್ರೌಢಶಾಲೆ ಬಂತು. ಕಟ್ಟಡ ಇಲ್ಲದ ಕಾರಣ ಪ್ರಾಥಮಿಕ ಶಾಲಾಕಟ್ಟಡದಲ್ಲಿಯೇ ಪ್ರೌಢಶಾಲೆಯನ್ನು ಆರಂಭಿಸಲಾಯಿತು. ಕೆಲವೇ ಮಕ್ಕಳಿಂದ ಪ್ರಾರಂಭವಾದ ಈ ಶಾಲೆ, ಕ್ರಮೇಣ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲಾರಂಭಿಸಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಾ ಬಂತು. ಆದರೆ ಕೊಠಡಿಗಳ ಸಂಖ್ಯೆ ಮಾತ್ರ ಹೆಚ್ಚಾಗಲಿಲ್ಲ.
ಪ್ರೌಢಶಾಲೆಗೆ ಪ್ರತ್ಯೇಕ ಕಟ್ಟಡ ಮಂಜೂರಾಗಲಿಲ್ಲ. ಕಟ್ಟಡಕ್ಕೆ ಬೇಕಾದ ನಿವೇಶನ ಇಲ್ಲದ ಕಾರಣ ಪ್ರೌಢಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಿಸಲು ಸರ್ಕಾರ ಮುಂದೆ ಬರಲೇ ಇಲ್ಲ. 1990ರ ದಶಕದಲ್ಲಿ ಕ್ಯಾಸಂಬಳ್ಳಿ ಹೊರವಲಯದಲ್ಲಿ ಸುಮಾರು 2 ಎಕ್ರೆ ಭೂಮಿಯನ್ನು ಪ್ರೌಢಶಾಲೆಗೆಂದು ನಿಗದಿ ಮಾಡಲಾಯಿತು. ಆದರೆ, ಅಂದಿನ ರಾಜಕೀಯ ಮುಖಂಡರು ತಮಗೆ ಶಾಲೆಗಿಂತ ವಿದ್ಯುತ್ಶಕ್ತಿ ಸಬ್ಸ್ಟೇಷನ್ ಮುಖ್ಯ ಎಂದು ಹೇಳಿ ಆ ಸ್ಥಳವನ್ನು ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿಗೆ ಸ್ಥಳಾಂತರಿಸಿದರು. ಅಂದಿನಿಂದ ಇಂದಿನವರೆಗೆ ಪ್ರೌಢಶಾಲೆಗೆ ನಿವೇಶನ ಸಿಗಲೇ ಇಲ್ಲ. ಸ್ವಂತ ಕಟ್ಟಡ ನಿರ್ಮಾಣವಾಗಲೇ ಇಲ್ಲ.
ಈಗ ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು 800 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಪ್ರತಿ ತರಗತಿಯಲ್ಲೂ ನಾಲ್ಕು ವಿಭಾಗಗಳಾಗಿವೆ. ಆದರೆ ಮಕ್ಕಳಿಗೆ ಕುಳಿತುಕೊಳ್ಳಲು ಕೊಠಡಿಗಳೇ ಇಲ್ಲ. ಮರದ ಕೆಳಗೆ, ಚಾವಣಿ ಮೇಲೆ ಶಿಕ್ಷಕರು ತರಗತಿಗಳನ್ನು ನಡೆಸುವ ದೃಶ್ಯ ಈ ಶಾಲೆಯಲ್ಲಿ ಸರ್ವೆಸಾಮಾನ್ಯ. 2004ರಲ್ಲಿ ಮಳೆಗೆ ಶಾಲಾ ಕೊಠಡಿ ಶಿಥಿಲಗೊಂಡಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ವತಿಯಿಂದ ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಯಿತು. ಆದರೆ ಆ ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಗಾಳಿ ಮತ್ತು ಬೆಳಕು ಇಲ್ಲದಂತಹ ಕೊಠಡಿಗಳಲ್ಲಿ ಸೊಳ್ಳೆಗಳು ತುಂಬಿ ಕುಳಿತುಕೊಳ್ಳಲು ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಬೇರೆ ವಿಯಿಲ್ಲದೆ ತರಗತಿಗಳನ್ನು ಅಲ್ಲೆ ನಡೆಸಲಾಗುತ್ತಿದೆ. 800 ಮಂದಿ ಮಕ್ಕಳಿರುವ ಈ ಶಾಲೆಗೆ ಒಂದೇ ಒಂದು ಶೌಚಾಲಯವೂ ಇಲ್ಲ. ಹೀಗಾಗಿ, ಸುಮಾರು 300 ಹೆಣ್ಣು ಮಕ್ಕಳು ಬಯಲಿನಲ್ಲೆ ಶೌಚಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ. ರಾಜ್ಯದ ಪ್ರಥಮ ಮುಖ್ಯಮಂತ್ರಿಯ ತವರೂರಿನ ಶಾಲೆಯ ದುರ್ಗತಿಯಿದು.

ವಿಪ್ರರಿಗಾಗಿ ಬೆಂಗಳೂರಿನಲ್ಲಿ ಉದ್ಯೋಗಮೇಳ


ಬೆಂಗಳೂರಿನ ಶ್ರೀ ಸತ್ಯಾತ್ಮತೀರ್ಥ ಚಾರ್ತುಮಾಸ ಸಮಿತಿ ವತಿಯಿಂದ ಸೆ. 9ರಂದು ಬೆಳಗ್ಗೆ 10ರಿಂದ ವಿಪ್ರ ಯುವಕ-ಯುವತಿಯರಿಗಾಗಿ ಉದ್ಯೋಗಮೇಳವನ್ನು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ ಪ್ರತಿಷ್ಟಿತ ಕಂಪನಿಗಳಾದ ವಿಪ್ರೋ, ಇನ್ಫೋಸಿಸ್, ನೋಕಿಯಾ ಸೇರಿದಂತೆ ಹಲವು ಸಂಸ್ಥೆಗಳು ಭಾಗವಹಿಸಲಿದೆ. ಯಾವುದೇ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು www.placement.totalaccount.com ಲಾಗಿನ್ ಆಗಿ ಸಲ್ಲಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ : 9449599944ಗೆ ಸಂರ್ಪಕಿಸಬಹುದಾಗಿದೆ.

ಬದುಕು ಕಟ್ಟುವ ಉಪನ್ಯಾಸಕಿ ಬದುಕು ಕಳೆದುಕೊಂಡ ಕಥೆ


ಸರಿಯಾಗಿ ಎರಡು ವರ್ಷಗಳ ಹಿಂದೆ. ಜು.26ರಂದು. ಮೇಲಂತಬೆಟ್ಟಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಮುಗಿಸಿ ಬೆಳ್ತಂಗಡಿ ಬಸ್ ನಿಲ್ದಾಣದೆಡೆಗೆ ಬರುತ್ತಿದ್ದರು ಆಕೆ. ಅದೇನು ದುರಾದೃಷ್ಟವೋ, ಎದುರಿನಿಂದ ಬಂದ ಪಿಕ್ಅಪ್ ವಾಹನವೊಂದು ನೇರಾ ನೇರ ರಿಕ್ಷಾಗೆ ಢಿಕ್ಕಿ ಹೊಡೆದೇ ಬಿಟ್ಟಿತು. ರಿಕ್ಷಾ ರಸ್ತೆಗೆ ಬೋರಲಾಗಿ ಮಗುಚಿತು. ರಿಕ್ಷಾದಲ್ಲಿ ಸಹಪ್ರಯಾಣಿಕೆಯಾಗಿದ್ದ ನತದೃಷ್ಟ ಉಪನ್ಯಾಸಕಿ ಭಾರತಿ (27) ಅವರು ಜೀವಚ್ಛವವಾಗಿ ಇಂದಿಗೂ ನರಳುವಂತಾಯಿತು.
ಕನಸುಕಂಗಳ, ಸಾಧನೆಯ ಹಂಬಲದ, ಕಲಿಯುವ ತುಡಿತದ ಈಕೆ ತನ್ನ ಸ್ವಂತ ಸಂಪಾದನೆಯಿಂದ ಒಂದಷ್ಟು ಆದಾಯ ಬಂದರೆ ಚಂದದ ಸೂರು ಕಟ್ಟಬೇಕು. ಮನೆಯ ವ್ಯವಸ್ಥೆ ಸರಿ ಮಾಡಬೇಕು. ಕಲಿಯಲು ಅಮ್ಮ ಮಾಡಿಟ್ಟ ಅಷ್ಟೂ ಸಾಲ ತೀರಿಸಬೇಕು. ಮನೆಯವರ ಬದುಕಿಗೆ ಆಧಾರವಾಗಬೇಕು. ತಮ್ಮ, ತಂಗಿಯ ಓದಿಗೆ ನೆರವಾಗಬೇಕು... ಹೀಗೆಲ್ಲ ಆಶಾಗೋಪುರ ಕಟ್ಟಿದ್ದರು. ಆದರೆ ವಿಯ ಆಟವೇ ಬೇರೆ ಆಗಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಅರ್ಧ ದೇಹದ ಮೇಲಿನ ಸ್ವಾೀನ ಕಳೆದುಕೊಂಡ ಭಾರತಿ ಅವರು ಲಕ್ಷಾಂತರ ರೂ. ಖರ್ಚು ಮಾಡಿದರೂ ಇಂದಿಗೂ ಮಲಗಿದಲ್ಲಿಯೇ ಇದ್ದಾರೆ.
ಕುರುಂಬಿಲ ಲಕ್ಷ್ಮೆ ಅವರ ಏಳು ಮಕ್ಕಳ ಪೈಕಿ ಭಾರತಿ ಮೊದಲನೆಯವರು. ತಂದೆ ತೀರಿ 10 ವರ್ಷವಾಯಿತು. ಭಾರತಿ ಅವರು ಮನೆಯ ಕಷ್ಟದ ದಿನಗಳಲ್ಲಿಯೇ ಎಂಕಾಂ ಪದವಿ ಮಾಡಿದರು. ಉಜಿರೆ ಅನುಗ್ರಹ ಕಾಲೇಜಿಗೆ ಉಪನ್ಯಾಸಕಿಯಾಗಿ ಸೇರಿ ಬಳಿಕ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅರೆಕಾಲಿಕ ಅತಿಥಿ ಉಪನ್ಯಾಸಕಿಯಾಗಿ ಸೇರಿದರು. ವಾಮದಪದವು ಪದವಿ ಪೂರ್ವ ಕಾಲೇಜಿನಲ್ಲಿಯೂ ಅತಿಥಿ ಉಪನ್ಯಾಸಕಿಯಾಗಿ ಒಂದಷ್ಟು ಸಂಪಾದನೆ ಶುರು ಆಯಿತು ಎನ್ನುವಷ್ಟರಲ್ಲಿ ವಿ ಅಟಕಾಯಿಸಿಕೊಂಡಿತು.
‘ ಇನ್ನು ಮಾರಲು ಎಂದೇನೂ ಉಳಿದಿಲ್ಲ. ಬಹುಶಃ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಮಗಳು ಕಲಿತಳು, ಮನೆಗೆ ಆಧಾರವಾದಳು ಎಂದೇ ಭಾವಿಸಿದ್ದೆವು. ನಮ್ಮ ಕನಸಿನ ಸೌಧ ನುಚ್ಚುನೂರಾಯಿತು. ವಿ ವಾಹನದ ರೂಪದಲ್ಲಿ ನಮ್ಮನ್ನು ಅಟ್ಟಾಡಿಸಿಕೊಂಡು ಬಂತು. ಇಷ್ಟಕ್ಕೂ ನಮಗೆ ಇರುವುದು ತುಂಡು ಭೂಮಿ. ಉಳಿದುಕೊಂಡ ಮನೆ ಮಾಡಿಗೆ ಹಂಚು ಹಾಕಲು ಉಪಯೋಗಿಸಿದ್ದು ಬಿದಿರಿನ ಗಳ. ಅದೂ ಹಳತಾಗುತ್ತಿದೆ. ಮಣ್ಣಿನ ನೆಲ. ಸಿಮೆಂಟ್ ಕಂಡೇ ಇಲ್ಲ. ಮನೆ ದುರಸ್ತಿ ಮಾಡಿಸುವುದೋ, ಮಗಳ ಆರೋಗ್ಯಕ್ಕಾಗಿ ಖರ್ಚು ಮಾಡುವುದೋ ಎಂಬ ಒದ್ದಾಟದಲ್ಲಿರುವಾಗಲೇ ಬ್ಯಾಂಕಿನವರು ಕಲಿಯಲು ಮಾಡಿದ ಸಾಲ ತೀರಿಸಿ ಎಂದು ಬೆನ್ನತ್ತುತ್ತಾರೆ. ಮಗಳು ದೇಹದ ಸ್ವಾೀನ ಕಳೆದುಕೊಂಡು ಮಲಗಿದಲ್ಲಿಯೇ ಇದ್ದಾಳೆ. ದುಡಿಯುವ ತಾಕತ್ತನ್ನು ದೇವರು ತೆಗೆದು ಬಿಟ್ಟಿದ್ದಾನೆ. ಮಗಳಲ್ಲಿ ಒಂದಷ್ಟು ಚೈತನ್ಯ ತುಂಬಿದರೆ, ಹೇಗಾದರೂ ಮಾಡಿ ಆಕೆ ಕುಳಿತಲ್ಲಿಯೇ ಮಾಡುವ ಉದ್ಯೋಗಕ್ಕೆ ಹೋದರೆ ಆಗ ಖಂಡಿತ ನಿಮ್ಮ ಸಾಲ ತೀರಿಸುತ್ತೇನೆ. ದಯವಿಟ್ಟು ಸಮಯ ಕೊಡಿ ಎಂದರೆ ಬ್ಯಾಂಕಿನವರಿಗೆ ದಾಖಲೆ ಮಾತ್ರ ಬೇಕಾದುದು, ಮಿಡಿವ ಹೃದಯವಲ್ಲ. ಕರುಳು ಹಿಂಡುವ ಕಂಬನಿಯ ಧಾರೆಯಲ್ಲ’ ಎಂಬುದು ಆಕೆಯ ಅಮ್ಮನ ಗೋಳು.
ಮೂರು ಎಕರೆ ಗುಡ್ಡ ಎಂಬ ಜಾಗ ಇದೆ. ಅದರಲ್ಲಿ ನಾಲ್ಕಾರು ತೆಂಗಿನ ಮರಗಳು ಬಿಟ್ಟರೆ ಬೇರೇನೂ ಸಂಪಾದನೆಯಿಲ್ಲ. ತಂಗಿ ರೇವತಿ ಬೆಂಗಳೂರಿನಲ್ಲಿ ನರ್ಸ್ ಆಗಿದ್ದಾರೆ. ಇಬ್ಬರು ತಮ್ಮಂದಿರು , ಮೂವರು ತಂಗಿಯಂದಿರು ಕಲಿಯುತ್ತಿದ್ದಾರೆ. ಅಮ್ಮ ಬೀಡಿ ಕಟ್ಟಿ ಪುಡಿಕಾಸು ಸಂಪಾದಿಸುತ್ತಾರೆ. ಆದರೆ ಅದು ಯಾವುದಕ್ಕೂ ಸಾಲದು. ಸಾಲದ ಶೂಲೆ ಇರಿಯುತ್ತಿದೆ. ಆಕೆಯದೇನೂ ವಾಸಿಯಾಗದ ಕಾಯಿಲೆಯಲ್ಲ,. ಅಂತಹ ದೊಡ್ಡ ಸಮಸ್ಯೆಯೂ ಅಲ್ಲ. ಒಂದಷ್ಟು ಹೃದಯವಂತರು ಮನಸ್ಸು ಮಾಡಿದರೆ ಈಕೆಗೆ ಚಿಕಿತ್ಸೆ ಕೊಡಿಸಬಹುದು. ಹಾಗಾದಾಗ ಈಕೆ ಗಾಲಿಕುರ್ಚಿಯಲ್ಲಾದರೂ ಹೋದಾರು. ಹಾಗೆ ಹೋದರೆ ತನ್ನ ಬದುಕನ್ನು ತಾನು ನಡೆಸಿಯಾರು. ಕನಸುಗಳು ಕರಗಿ ಜಾರದಂತೆ ಈಕೆಯ ಆಸೆಯ ವೇದಿಕೆಗೆ ಮೆಟ್ಟಿಲಾಗಲು ಸಹಾಯ ಹಸ್ತ ಬೇಕಿದೆ.
ವಿಳಾಸ: ಭಾರತಿ. ಉಬರಡ್ಕ ಮನೆ. ಗೇರುಕಟ್ಟೆ ಅಂಚೆ. ಬೆಳ್ತಂಗಡಿ ತಾಲೂಕು. 02142200021971 ಗೇರುಕಟ್ಟೆ ಸಿಂಡಿಕೇಟ್ ಬ್ಯಾಂಕ್.

ಗುಡವಿಗೆ ಬನ್ನಿ, ಹಕ್ಕಿಗಳ ಕುಹೂ ಕುಹೂ ಕಲರವ ಕೇಳಲು


ರಾಜ್ಯದ ಪ್ರಮುಖ ಪಕ್ಷಿಧಾಮಗಳಲ್ಲಿ ಒಂದಾದ ಗುಡುವಿಯಲ್ಲಿ ಈಗ ಹಗಲೂ ರಾತ್ರಿ ಹಕ್ಕಿಗಳ ಕುಹೂ ಕುಹೂ ಕಲರವ. ಇದನ್ನು ಕೇಳಲು, ನೋಡಿ ಆನಂದಿಸಲು ನಿತ್ಯ ಜನ ಜಾತ್ರೆ. ಬಿಳಿಕೊಕ್ಕರೆ, ಕಪ್ಪುತಲೆ ಕೊಕ್ಕರೆ, ನೀರು ಕಾಗೆ, ಹೀಗೆ ಹತ್ತಾರು ಜಾತಿಯ
ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಜಮಾಯಿಸಿವೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬನವಾಸಿ ರಸ್ತೆಯಲ್ಲಿರುವ ಗುಡವಿ ಸುಂದರ ಪಕ್ಷಿಧಾಮ. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಆಗಮಿಸುವ ಹಕ್ಕಿಗಳು ನವೆಂಬರ್ ತಿಂಗಳಿನವರೆಗೆ ಇಲ್ಲಿ ಠಿಕಾಣಿ ಹೂಡುತ್ತವೆ. ನಂತರ ಅವು ತಮ್ಮ ಸ್ವಸ್ಥಾನಕ್ಕೆ ಹೊರಟು ಹೋಗುತ್ತವೆ. ಸಂತಾನ ವೃದ್ಧಿಗಾಗಿ ಅವು ಇಲ್ಲಿಗೆ ಬರುತ್ತವೆ. ಎರಡು ಕೆರೆಗಳು, ಅವುಗಳ ಮಧ್ಯೆ ಇರುವ ಮರ-ಗಿಡಗಳು, ನೀರಿನಲ್ಲಿ ಇರುವ ಜಲಚರಗಳು ಹಕ್ಕಿಗಳಿಗೆ ಆಶ್ರಯ ನೀಡುತ್ತಿವೆ. ಅಲ್ಲದೇ ಸಾವಿರಾರು ಎಕರೆ ಇರುವ ಭತ್ತದ ಗದ್ದೆಗಳು ಆಹಾರ ಪೂರೈಸುವ ಕೇಂದ್ರಗಳಾಗಿವೆ.
ಕದಂಬರ ರಾಜಧಾನಿ ಬನವಾಸಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರು ಸಮೀಪದಲ್ಲಿ ಇರುವ ಗುಡವಿಗೆ ಭೇಟಿ ನೀಡುತ್ತಾರೆ. ಇದರಿಂದ ಗುಡುವಿಯಲ್ಲಿ ಒಂದೆಡೆ ಹಕ್ಕಿಗಳ ಮೇಳ. ಇನ್ನೊಂದೆಡೆ ಜನರ ಜಾತ್ರೆ. ಅರಣ್ಯ ಇಲಾಖೆಯ ವಶದಲ್ಲಿರುವ ಪಕ್ಷಿಧಾಮವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದರೂ, ವೀಕ್ಷಣಾ ಗೋಪುರ, ಕುಡಿಯುವ ನೀರು, ಹಾಗೂ ಇನ್ನಿತರ ಸಮಸ್ಯೆಗಳು ಇನ್ನೂ ಪರಿಹಾರ ಕಂಡಿಲ್ಲ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕದ ಬಳಕೆ ಹೆಚ್ಚಾಗಿರುವುದರಿಂದ ಹಕ್ಕಿಗಳ ಮೊಟ್ಟೆಗಳು ಕೆಲವು ಮರಿಗಳಾಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆಧುನಿಕ ಮನರಂಜನಾ ಸಲಕರಣೆಗಳು ಹಕ್ಕಿಗಳ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬ ಮಾತುಗಳಿವೆ. ನಿಶ್ಯಬ್ಧವಾಗಿರಬೇಕಾದ ಸ್ಥಳದಲ್ಲಿ ಈಗ ಆಧುನಿಕ ಗದ್ದಲ!.