ಗುಡವಿಗೆ ಬನ್ನಿ, ಹಕ್ಕಿಗಳ ಕುಹೂ ಕುಹೂ ಕಲರವ ಕೇಳಲು


ರಾಜ್ಯದ ಪ್ರಮುಖ ಪಕ್ಷಿಧಾಮಗಳಲ್ಲಿ ಒಂದಾದ ಗುಡುವಿಯಲ್ಲಿ ಈಗ ಹಗಲೂ ರಾತ್ರಿ ಹಕ್ಕಿಗಳ ಕುಹೂ ಕುಹೂ ಕಲರವ. ಇದನ್ನು ಕೇಳಲು, ನೋಡಿ ಆನಂದಿಸಲು ನಿತ್ಯ ಜನ ಜಾತ್ರೆ. ಬಿಳಿಕೊಕ್ಕರೆ, ಕಪ್ಪುತಲೆ ಕೊಕ್ಕರೆ, ನೀರು ಕಾಗೆ, ಹೀಗೆ ಹತ್ತಾರು ಜಾತಿಯ
ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಜಮಾಯಿಸಿವೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬನವಾಸಿ ರಸ್ತೆಯಲ್ಲಿರುವ ಗುಡವಿ ಸುಂದರ ಪಕ್ಷಿಧಾಮ. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಆಗಮಿಸುವ ಹಕ್ಕಿಗಳು ನವೆಂಬರ್ ತಿಂಗಳಿನವರೆಗೆ ಇಲ್ಲಿ ಠಿಕಾಣಿ ಹೂಡುತ್ತವೆ. ನಂತರ ಅವು ತಮ್ಮ ಸ್ವಸ್ಥಾನಕ್ಕೆ ಹೊರಟು ಹೋಗುತ್ತವೆ. ಸಂತಾನ ವೃದ್ಧಿಗಾಗಿ ಅವು ಇಲ್ಲಿಗೆ ಬರುತ್ತವೆ. ಎರಡು ಕೆರೆಗಳು, ಅವುಗಳ ಮಧ್ಯೆ ಇರುವ ಮರ-ಗಿಡಗಳು, ನೀರಿನಲ್ಲಿ ಇರುವ ಜಲಚರಗಳು ಹಕ್ಕಿಗಳಿಗೆ ಆಶ್ರಯ ನೀಡುತ್ತಿವೆ. ಅಲ್ಲದೇ ಸಾವಿರಾರು ಎಕರೆ ಇರುವ ಭತ್ತದ ಗದ್ದೆಗಳು ಆಹಾರ ಪೂರೈಸುವ ಕೇಂದ್ರಗಳಾಗಿವೆ.
ಕದಂಬರ ರಾಜಧಾನಿ ಬನವಾಸಿಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರು ಸಮೀಪದಲ್ಲಿ ಇರುವ ಗುಡವಿಗೆ ಭೇಟಿ ನೀಡುತ್ತಾರೆ. ಇದರಿಂದ ಗುಡುವಿಯಲ್ಲಿ ಒಂದೆಡೆ ಹಕ್ಕಿಗಳ ಮೇಳ. ಇನ್ನೊಂದೆಡೆ ಜನರ ಜಾತ್ರೆ. ಅರಣ್ಯ ಇಲಾಖೆಯ ವಶದಲ್ಲಿರುವ ಪಕ್ಷಿಧಾಮವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ್ದರೂ, ವೀಕ್ಷಣಾ ಗೋಪುರ, ಕುಡಿಯುವ ನೀರು, ಹಾಗೂ ಇನ್ನಿತರ ಸಮಸ್ಯೆಗಳು ಇನ್ನೂ ಪರಿಹಾರ ಕಂಡಿಲ್ಲ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕದ ಬಳಕೆ ಹೆಚ್ಚಾಗಿರುವುದರಿಂದ ಹಕ್ಕಿಗಳ ಮೊಟ್ಟೆಗಳು ಕೆಲವು ಮರಿಗಳಾಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಆಧುನಿಕ ಮನರಂಜನಾ ಸಲಕರಣೆಗಳು ಹಕ್ಕಿಗಳ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬ ಮಾತುಗಳಿವೆ. ನಿಶ್ಯಬ್ಧವಾಗಿರಬೇಕಾದ ಸ್ಥಳದಲ್ಲಿ ಈಗ ಆಧುನಿಕ ಗದ್ದಲ!.