ಅಮೆರಿಕದಲ್ಲೂ ಬರವಿದೆ, ಜೊತೆಗೆ ೆವಿಮೆಯಿದೆ... ನಮ್ಮಲ್ಲಿ?.


ಅಮೆರಿಕದ ಮೂರನೇ ಎರಡು ಭಾಗದಷ್ಟು ಪ್ರದೇಶ ಬರಪೀಡಿತವೆಂದು ಘೋಷಿಸಲ್ಪಟ್ಟಿದೆ. ಆದರೆ, ಬೆಳೆವಿಮೆಯಿಂದಾಗಿ ಅಲ್ಲಿಯ ರೈತರು ನಿಶ್ಚಿಂತೆಯಿಂದಿದ್ದಾರೆ. 2012ನೇ ಸಾಲಿನ ಆರಂಭದಿಂದಲೂ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳ ಅನೇಕ ಭಾಗಗಳು ಬರಪೀಡಿತವಾಗಿವೆ. ಈ ವರ್ಷ ಜಾಗತಿಕ ಬರದ ವರ್ಷ ಎಂದು ಇತಿಹಾಸದಲ್ಲಿ ದಾಖಲಾಗಲಿದೆ. 1988ರ ನಂತರ ಈ ವರ್ಷ ಉತ್ತರ ಅಮೆರಿಕವನ್ನು ತೀವ್ರ ಬರಗಾಲ ಕಾಡಿದೆ. ಅಮೆರಿಕದ ಪ್ರಾಂತೀಯ ಸರಕಾರಗಳು ಬರ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಜುಲೈ 12ರಂದು ಈ ಸಂಬಂಧ ಪ್ರಕಟಣೆ ಹೊರಡಿಸಿವೆ. ಅಲ್ಲಿಯ ಪ್ರಮುಖ ವ್ಯಾಪಾರಿ ಸಂಘಟನೆಗಳು ಬೆಲೆ ಏರಿಕೆ ತಡೆಯಲು ಸ್ವಯಂ ಸೂರ್ತಿಯಿಂದ ತಮ್ಮ ದೇಶದ ಜನತೆಗೆ ಬೇಕಾದ ಆಹಾರ ಧಾನ್ಯ ಮತ್ತು ಜೀವನಾವಶ್ಯಕ ವಸ್ತುಗಳನ್ನು ಕಡಿಮೆ ಬೆಲೆಗೆ ದೊರೆಯುವ ದೇಶಗಳಿಂದ ತರಿಸಿ ಸಂಗ್ರಹಿಸುವ ಕೆಲಸ ನಡೆಸಿವೆ.
ಅಮೆರಿಕದ ಮುಖ್ಯ ಬೆಳೆಗಳಾದ ಜೋಳ, ಗೋ, ಸೋಯಾಬಿನ್ ಮೊದಲಾದವುಗಳನ್ನು ಸ್ಥಳೀಯ ಅಗತ್ಯ ಪೂರೈಸಿ ಹೆಚ್ಚಿದ್ದರೆ ಮಾತ್ರ ರಫ್ತು ಮಾಡಲಾಗುತ್ತಿದೆ. ಬರದಿಂದಾಗಿ ಬೆಲೆ ಹೆಚ್ಚಬಹುದಾದರೂ ಅದು 2013ರ ಸಾಲಿನ ಅಂತ್ಯದವರೆಗೆ ಶೇಕಡಾ 3ರಿಂದ 5ಕ್ಕೆ ಮೀರದಂತೆ ವ್ಯವಸ್ಥೆ ಮಾಡಿಕೊಂಡಿವೆ. ಅಲ್ಲಿಯ ಫುಡ್ ಸರ್ವಿಸಸ್ ಸಂಸ್ಥೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದೆ. ಬೆಳೆ ವಿಮೆ ಸರ್ವತ್ರವಾಗಿರುವುದರಿಂದ ರೈತರಿಗೆ ಬರಗಾಲದ ಬಿಸಿ ಸ್ವಲ್ಪವೂ ತಟ್ಟುವುದಿಲ್ಲ. ವಿಮೆ ಕಂಪನಿ ರೈತರನ್ನು ಸುರಕ್ಷಿತವಾಗಿ ಮತ್ತೆ ಕೃಷಿಗೆ ಇಳಿಸುತ್ತದೆ. ಬರಗಾಲ, ನೆರೆಹಾವಳಿ, ಯುದ್ಧ, ಸಮೃದ್ಧಿ ಇವು ಅತಿಯಾದರೆ ಪ್ರಜೆಗಳಿಗೆ ಕಷ್ಟ ಎಂದು ಅಲ್ಲಿಯ ಸರಕಾರಕ್ಕೆ ಗೊತ್ತಿದೆ. ಯಶಸ್ವಿಯಾಗಿ ಪರಿಸ್ಥಿತಿ ಎದುರಿಸಿ ದೇಶದ ಪ್ರಜೆಗಳನ್ನು ಸುಖವಾಗಿಡಲು ಯಶಸ್ವಿಯಾಗುತ್ತದೆ. ಅಲ್ಲಿ ಬರ ಸಮೀಕ್ಷೆ, ವರದಿಗೆ ರಾಜಕೀಯ ವ್ಯಕ್ತಿಗಳು ಬರುವುದಿಲ್ಲ. ಎಲ್ಲವನ್ನೂ ತಜ್ಞರು ನಿಭಾಯಿಸುತ್ತಾರೆ. ಯಾರೂ ದುರ್ಲಾಭ ಪಡೆದುಕೊಳ್ಳಲು ಮನಸ್ಸು ಮಾಡುವುದಿಲ್ಲ. ಅದು ಸಾಧ್ಯವೂ ಇಲ್ಲದಂತೆ ಆಡಳಿತ ವ್ಯವಸ್ಥೆಯಿದೆ.
ನಮ್ಮ ರಾಜ್ಯದಲ್ಲಿಯೂ ಕೆಲವು ಕಡೆ ತೀವ್ರ ಬರವಿದೆ. ಪ್ರಕೃತಿ ವಿಕೋಪ ನಿಭಾಯಿಸಲು ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಕಾಯಿದೆ ಕಾನೂನಿಗೆ, ಯೋಜನೆಗಳಿಗೆ ಬರವಿಲ್ಲ. ಹಾಗೆ ನೋಡಿದರೆ,  ಹಣವೂ ಸಮಸ್ಯೆಯಲ್ಲ. ನಂಜುಂಡಪ್ಪ ಸಮಿತಿಯ ವರದಿಯಂತಹ ನೂರಾರು ವರದಿಗಳು ಧೂಳು ಹಿಡಿದಿವೆ. ನಮ್ಮಲ್ಲಿ ಪ್ರತಿ ವರ್ಷ ಬರಗಾಲ ಕಾಡುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರಕೃತಿ ವಿಕೋಪ ಕಾಮಗಾರಿಗಳು ನಡೆಯುತ್ತವೆ. ಹಣ ವೆಚ್ಚವಾಗುತ್ತದೆ. ಪರಿಣಾಮ?. ಎಲ್ಲರಿಗೂ ಗೊತ್ತಿರುವಂತದ್ದೇ. ಇಲ್ಲಿ ಪ್ರಕೃತಿ ವಿಕೋಪ ತಡೆ ಕಾಮಗಾರಿ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿರತೆಗಾಗಿ ಪೈಪೋಟಿಯಿಂದ ನಡೆಯುತ್ತದೆ. ರಾಜಕೀಯ ನಾಯಕರು ಬರ ಪ್ರವಾಸ ಮಾಡುತ್ತಾರೆ. ಬಿಜೆಪಿಯನ್ನು ಕಾಂಗ್ರೆಸ್, ಸರಕಾರವನ್ನು ಜೆಡಿಎಸ್, ಕೇಂದ್ರ ಸರಕಾರವನ್ನು ರಾಜ್ಯ, ಕೇಂದ್ರ ಮಂತ್ರಿಗಳು ರಾಜ್ಯ ಸರಕಾರವನ್ನು ದೂರುತ್ತಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಹೋಗುತ್ತಾರೆ. ಅವಶ್ಯಕ ವಸ್ತುಗಳ ಬೆಲೆ ಏರುತ್ತಲೇ ಇರುತ್ತದೆ. ಜನಸಾಮಾನ್ಯರು, ಕಷ್ಟ ಪಟ್ಟು ದುಡಿದು, ಪ್ರಾಮಾಣಿಕವಾಗಿ ಬದುಕುವವರು ಕಷ್ಟ ಪಡುತ್ತಲೇ ಇರುತ್ತಾರೆ, ಪತ್ರಕರ್ತರು ಬೈ ಲೈನ್ ವರದಿಗಳನ್ನು ಪ್ರಕಟಿಸುತ್ತಲೇ ಇರುತ್ತಾರೆ. ವ್ಯಾಪಾರಿಗಳು ರೇಟು ಏರಿಸಿ ಗ್ರಾಹಕರ ಹಣ ವಸೂಲು ಮಾಡುವತ್ತಲೇ ಗಮನ ಹರಿಸುತ್ತಾರೆ. ರಾಜಕೀಯ ನಾಯಕರು ಶ್ರೀಮಂತರಾಗುತ್ತಲೇ ಹೋಗುತ್ತಾರೆ. ನ್ಯೂಸ್ ಚಾನೆಲ್ಗಳು ಅತಿರಂಜಿತ ಸುದ್ದಿಗಳನ್ನು ಪ್ರಕಟಿಸುತ್ತಲೇ ಇರುತ್ತಾರೆ... ಎಲ್ಲವೂ ಅವರವರ ಹಣೆಬರಹದಂತೆ!.