ಮಾನವ ಕಳ್ಳಸಾಗಣೆಗೆ ರಹದಾರಿ


ಉದ್ಯೋಗದ ನೆಪದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾ ದೇಶದ ನಿರಾಶ್ರಿತರಿಗೆ ಐರೋಪ್ಯ ಅಥವಾ ಆಸ್ಟ್ರೇಲಿಯಾ ದೇಶಕ್ಕೆ (ಜಿ- 7 ರಾಷ್ಟ್ರಗಳಿಗೆ ಮಾತ್ರ) ಅಕ್ರಮವಾಗಿ ತೆರಳಿ ಅಲ್ಲಿನ ವೀಸಾ ಬಳಿಕ ಗ್ರೀನ್ ಕಾರ್ಡ್ ಪಡೆದು, ಅಲ್ಲಿಯೇ ನೆಲೆಯೂರಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಅವಕಾಶ ಶ್ರೀಲಂಕಾ ಮತ್ತು ಬಾಂಗ್ಲಾ ನಿರಾಶ್ರಿತರ ಶಿಬಿರಗಳಲ್ಲಿ ಇದ್ದವರಿಗೆ ಮಾತ್ರ ಇದೆ. ಇದು ಮಾನವ ಕಳ್ಳಸಾಗಣೆಗೆ ದಾರಿ ಮಾಡಿಕೊಡುತ್ತಿದೆ. ಈ ಅವಕಾಶದ ದುರುಪಯೋಗಪಡಿಸಿಕೊಳ್ಳುವ ಏಜಂಟರೂ ಇದ್ದಾರೆ. ಈ ರೀತಿಯಲ್ಲಿ ಊರು ಬಿಟ್ಟು ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾಗಳಿಗೆ ಹೋಗಿ ನೆಲೆಯೂರಿದ ಮಂದಿ ರಾಜ್ಯದ ಹಲವೆಡೆ ಇದ್ದಾರೆ.
ಇದಕ್ಕೆ ಬೇಕಾಗಿರುವುದು 3ರಿಂದ 5 ಲಕ್ಷ ರೂ. ಹಣ ಮತ್ತು ಧೈರ್ಯ. ನಿಗದಿತ ಏಜಂಟರಿಗೆ ಹಣ ಪಾವತಿಸಿದರೆ ಅವರು ಬೋಟ್ ಮೂಲಕ ಸಮುದ್ರದಲ್ಲಿ ಕರೆದೊಯ್ದು ಆಸ್ಟ್ರೇಲಿಯಾ ಅಥವಾ ಇಂಗ್ಲಂಡ್ನ ಗಡಿ ಭಾಗಕ್ಕೆ ತಲುಪಿಸುತ್ತಾರೆ. ಅಲ್ಲಿನ ಪೊಲೀಸರು ಇವರನ್ನು ತಮ್ಮ ದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ ಕಾರಣಕ್ಕಾಗಿ ಬಂಸಿ ಜೈಲಿಗೆ ಕಳುಹಿಸುತ್ತಾರೆ. ಈ ನಿರಾಶ್ರಿತರಿಗಾಗಿಯೇ ಪ್ರತ್ಯೇಕವಾದ ಜೈಲು ಇದ್ದು, ಅಲ್ಲಿ ಅವರನ್ನು ಇರಿಸುತ್ತಾರೆ. 2 ವರ್ಷಗಳ ಸೆರೆಮನೆ ವಾಸದ ಬಳಿಕ ಅವರಿಗೆ ಆ ದೇಶದ ವೀಸಾ ಕೊಡಲಾಗುತ್ತದೆ. ಹಾಗೆ ಅವರು ಅಲ್ಲಿ ಉದ್ಯೋಗಕ್ಕೆ ಸೇರುತ್ತಾರೆ. ಕ್ರಮೇಣ ಆ ದೇಶದ ಗ್ರೀನ್ ಕಾರ್ಡ್ ಕೂಡಾ ಲಭಿಸಿ ಅಲ್ಲಿ ಖಾಯಂ ವಾಸಕ್ಕೆ ಅವಕಾಶ ಸಿಗುತ್ತದೆ.
ಈ ಎಲ್ಲಾ ಸೌಲಭ್ಯಗಳು ಶ್ರೀಲಂಕಾ ಮತ್ತು ಬಾಂಗ್ಲಾ ನಿರಾಶ್ರಿತರೆಂಬುದಾಗಿ ವೀಸಾ ಹೊಂದಿದವರಿಗೆ ಮಾತ್ರ ಇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇರಳದ ಕೆಲವರು ಶ್ರೀಲಂಕಾಕ್ಕೆ ಹೋಗಿ ಅಲ್ಲಿಂದ ತಾವು ಶ್ರೀಲಂಕಾ ನಿರಾಶ್ರಿತರು ಎಂಬ ವೀಸಾ ಪಡೆದು ಅದರ ಮೂಲಕ ಈ ರೀತಿಯಲ್ಲಿ ಐರೋಪ್ಯ ದೇಶಗಳಿಗೆ ಅಕ್ರಮವಾಗಿ ಹೋಗಿ ಅಲ್ಲಿ ನೆಲೆ ಕಂಡುಕೊಂಡವರಿದ್ದಾರೆ.