ಸಪ್ತಪದಿ ಹಾದಿಯಲ್ಲಿ ಆಶಾದಾಯಕ ಬೆಳವಣಿಗೆ


ಬ್ರಾಹ್ಮಣ ಯುವಕರಿಗೆ ಅದರಲ್ಲೂ ವಿಶೇಷವಾಗಿ ಪುರೋಹಿತ, ಕೃಷಿಕ, ಅಡುಗೆ ವೃತ್ತಿಯವರಿಗೆ ವಿವಾಹವಾಗಲು ಹುಡುಗಿ ಕೊಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಸುಳ್ಯದ ಕಶ್ಯಪ್ ಯುವ ಬ್ರಾಹ್ಮಣ ವೇದಿಕೆ ಸಪ್ತಪದಿ ಹಾದಿಯಲ್ಲಿ ಹೊಸ ಹೆಜ್ಜೆಯನ್ನಿರಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉತ್ತರ ಭಾರತದಿಂದ ಯುವತಿಯರನ್ನು ಕರೆತಂದು ವಿವಾಹ ಮಾಡಿಸುವ ಯೋಜನೆಗೆ ಸಂಚಾಲಕ ಎಂ.ಜಿ. ಸತ್ಯನಾರಾಯಣ ಅವರನ್ನೊಳಗೊಂಡ ನಿಯೋಗ ಹೊಸದಿಲ್ಲಿಗೆ ತೆರಳಿ, ಹಲವಾರು ಬ್ರಾಹ್ಮಣ ಸಂಘ, ಸಂಸ್ಥೆಗಳ ಪ್ರಮುಖರನ್ನು ಸಂದರ್ಶಿಸಿ ವೈವಾಹಿಕ ಸಂಬಂಧಗಳ ಸಾಧ್ಯತೆಗಳ ಬಗ್ಗೆ ಸಾಕಷ್ಟು ಚರ್ಚಿಸಿ ಬಂದಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಅಲ್ಲಿನ ನಿಯೋಗ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಕೆಲವೆಡೆ ಭೇಟಿ ನೀಡಿ ಅನಂತರ ವಿವಾಹ ಸಂಬಂಧದ ಬಗ್ಗೆ ಚಿಂತಿಸಲಿದೆ.
ಕನ್ನಡ ಕುವರಿಯರ ಸ್ಪಂದನ:
ಈ ನಡುವೆ ಕನ್ನಡ ಕುವರಿಯರು ರಾಜ್ಯದ ನಾನಾ ಕಡೆಗಳಿಂದ ವೇದಿಕೆ ಸಂಪರ್ಕಿಸಿ, ಈ ವಿವಾಹ ಸಂಬಂಧ ಬೆಳೆಸಲು ಆಸಕ್ತರಾಗಿದ್ದಾರೆ. ಅಷ್ಟೇ ಅಲ್ಲದೆ ಜಾತಿ, ಬೇಧದ ಕಟ್ಟು ಪಾಡುಗಳಿಲ್ಲದೆ ವಿಶಾಲ ಮನೋಭಾವದ ಕನ್ನಡದ ಯುವತಿಯರು ಬ್ರಾಹ್ಮಣ ಯುವಕರನ್ನು ವಿವಾಹವಾಗಲು ಮುಂದೆ ಬಂದಿದ್ದಾರೆ. ಯಾವುದೇ ವರದಕ್ಷಿಣೆ ಹಾಗೂ ಮಧ್ಯವರ್ತಿಗಳಿಲ್ಲದೆ ಮುಂದೆ ನಿಂತು ವಿವಾಹ ಕಲ್ಪಿಸಲು ವೇದಿಕೆ ಮುಂದಾಗಿದೆ. ಆಸಕ್ತ ವಿವಾಹಾಪೇಕ್ಷಿತ ಯುವತಿಯರು ವೇದಿಕೆ ಸಂಪರ್ಕಿಸಬಹುದು ಎಂದು ಅಧ್ಯಕ್ಷ ಆರ್.ಕೆ. ಭಟ್ (9980567416) ತಿಳಿಸಿದ್ದಾರೆ.